ಪಾಲಹಳ್ಳಿ ವಿಶ್ವನಾಥ
೧೯೮೦-೧೯೮೧ರ ಸಮಯ. ಮುಂಬಯಿಯಲ್ಲಿ ಮೂಲ ಸಂಶೋಧನಾಲಯ ಮತ್ತು ವಾಸ. ಊಟಿಯಲ್ಲಿ ನಮ್ಮ ಪ್ರಯೋಗಗಳು ನಡೆಯುತ್ತಿದ್ದು ನಾನು ಹೋಗಿ ಬಂದು ಮಾಡುತ್ತಿದ್ದೆ. ಅಮ್ಮ ಮತ್ತು ಇತರರು ಇದ್ದರಿಂದ ಬೆಂಗಳೂರಿನ ಮೂಲಕವೇ ಪ್ರಯಾಣ ಮಾಡುತ್ತಿದ್ದೆ. ಅಂದಿನ ದಿನಗಳಲ್ಲಿ ಉದ್ಯಾನ್ ಎಕ್ಸ್ಪ್ರೆಸ್ ತರಹದ ನೇರ ರೈಲುಗಳು ಇರಲಿಲ್ಲ. ಬೆಂಗಳೂರಿನಿಂದ, ಮುಂಬಯಿಗೆ ಹೋಗಬೇಕಾದರೆ ಅ) ಗುಂತಕಲ್ಲಿಗೆ ಹೋಗಿ ಮದ್ರಾಸಿನಿಂದ ಬರುವ ರೈಲನ್ನು ಹಿಡಿಯುವುದು ಆ) ಅಥವಾ ಮೀರಜ್ ಗೆ ಹೋಗಿ ಅಲ್ಲಿ ರೈಲು ಬದಲಾಯಿಸಿ ಮುಂಬಯಿಯ ರೈಲು ಹಿಡಿಯುವುದು. ಬೆ೦ಗಳೂರು-ಗುಂತಕಲ್ ಅಥವಾ ಬೆಂಗಳೂರು-ಮೀರಜ್ ಮೀಟರ್ ಗೇಜಿನ ಪ್ರಯಾಣ.
ನಾನು ಈ ಎರಡೂ ಮಾರ್ಗಗಳನ್ನು ಬಳಸುತ್ತಿದ್ದೆ. ಆದರೂ ಮೀರಜ್ ಗೆ ಹೋಗುವ ಮಹಾಲಕ್ಷ್ಮಿ ಎಕ್ಸ್ಪ್ರೆಸ್ ರೈಲಿನ ಮೇಲೆ ಹೆಚ್ಚು ಒಲವು. ಕರ್ನಾಟಕದಲ್ಲೇ ಬಹಳ ಹೊತ್ತು ಪ್ರಯಾಣಮಾಡಿ ಬೆಳಗಾವಿಯ ನ೦ತರದ ಅರಣ್ಯ ಪ್ರದೇಶಗಳ ಮೂಲಕ ಹೋಗುತ್ತಿತ್ತು ಈ ರೈಲು. ಬಹಳ ಹಿಂದಿನಿಂದಲೂ ಬೆಂಗಳೂರಿನಿಂದ ಪುಣೆಗೆ ಇದೇ ಮಾರ್ಗವಿದ್ದು ಪೂರ್ತಿ ಮೀಟರ ಗೇಜ್ ಇದ್ದಿತು. ಆದರೆ 1970ರ ದಶಕದಲ್ಲಿ ಯಶವಂತರಾವ್ ಚವಾನರ ಪ್ರಭಾವದಿಂದ ಮೀರಜ್ ಪುಣೆ ಭಾಗ ಬ್ರಾಡ್ ಗೇಜ್ ಆಗಿ ಪರಿವರ್ತನೆಗೊಂಡಿತ್ತು.
ಅಂದು ಬಹಳ ಬೆಳಿಗ್ಗೆಯೇ ರೈಲು ಬೆಂಗಳೂರನ್ನು ಬಿಟ್ಟಿತ್ತು. ಮೊದಲನೆಯ ದರ್ಜೆಯ ಪ್ರಯಾಣ; ನಾಲ್ಕು ಜನ ಮಲಗುವ ಕ್ಯೂಬಿಕಲ್ ಗಳು. ಅದರಲ್ಲಿ ನಾನು ಮತ್ತಿಬ್ಬರು ಯಾರೋ ಇದ್ದರು. ನಾನೂ ನಿದ್ದೆ ಮಾಡುತ್ತ ಸಮಯ ಕಳೆದೆ.. ಮಧ್ಯಾಹ್ನದ ಹೊತ್ತಿಗೆ ಧಾರವಾಡ. ಮೊದಲಿನಿಂದಲೂ ನನಗೆ ಅಲ್ಲಿಯ ಕರ್ನಾಟಕ ವಿಶ್ವವಿದ್ಯಾಲಯದ ಕಟ್ಟಡ ನೋಡುವ ಇಷ್ಟವಾದ್ದರಿಂದ ಎದ್ದಿರುತ್ತಿದ್ದೆ. ಧಾರವಾಡದಲ್ಲಿ ರೈಲು ಐದು ನಿಮಿಷ ನಿಂತಾಗ ಯಾರೋ ಬ೦ದು ಮೇಲಿನ ಬರ್ತ್ ಹತ್ತಿದರು. ಅ೦ತೂ ನಮ್ಮ ಕ್ಯೂಬಿಕಲ್ ತುಂಬಿತು.. ರೈಲು ಹಾಗೆ ಬೆಳಗಾವಿ, ಲೊ೦ಡಾ ಅಲ್ಲಿಯ ಮಧ್ಯೆ ದಾಂಡೇಲಿ ಅರಣ್ಯದ ಮೂಲಕ ಹೋಗಿ ರಾತ್ರಿ ೭-೮ ಗ೦ಟೆಗೆ ಮೀರಜ್ ತಲುಪಿದೆವು. ಅಲ್ಲಿ ರೈಲು ಬದಲಾಯಿಸಿ ಮುಂಬಯಿಗೆ ಹೋಗುವ ಮಹಾಲಕ್ಷ್ಮಿ ಎಕ್ಸ್ ಪ್ರೆಸ್ ಹತ್ತಿದೆವು ಮತ್ತೆ ಅದೇ ಕ್ರಮದಲ್ಲಿ ಕ್ಯೂಬಿಕಲ್ ಗಳನ್ನು ಮತ್ತು ಬರ್ತ್ ಗಳನ್ನು ಕೊಟ್ಟರು. ಆಗ ಒಳಗೆ ಬಂದು ನನ್ನ ಮೇಲಿನ ಬರ್ತ್ ಹತ್ತುತ್ತಿರುವ ವ್ಯಕ್ತಿಯನ್ನು ನೋಡಿದೆ. ಮತ್ತೆ ನೋಡಿದೆ. ಗಿರೀಶ್ ಕಾರ್ನಾಡರು !
೧೯೬೫ ರ ಸಮಯದಲ್ಲಿ (ಆಗ ನನಗೆ ೨೨ ವರ್ಷ) ನನಗೆ ನನ್ನಲ್ಲಿದ್ದ ಪ್ರಶ್ನೆಗಳಿಂದ ಅಸ್ತಿತ್ವವಾದದ ಲೇಖಕರ ಪರಿಚಯ ಶುರುವಾಗಿತ್ತು. ಮುಖ್ಯವಾಗಿ ಕ್ಯಾಮು ಮತ್ತು ಸಾರ್ತ್ರೆಯವರ ನಾಟಕ ಮತ್ತು ಕಾದಂಬರಿಗಳು; ನಾಸಿಯ,ಕ್ಯಾಲಿಗುಲ ಇತ್ಯಾದಿ . ಆಗಲೇ ಕಾರ್ನಾಡರ ಯಾಯಾತಿ ಓದಿದೆ; ಮುಂಬಯಿಯ ಗೊವಾಲಿಯ ಟ್ಯಾ೦ಕಿನ ಹತ್ತಿರದ ಸಭಾಂಗಣದಲ್ಲಿ ನಾಟಕವನ್ನೂ ನೋಡಿದ್ದೆ. ಅದರ ನ೦ತರ ಅವರ ತುಘಲಕ್ ಬ೦ದಿತು. ಓದಿದಾಗ ಕ್ಯಾಮುವಿನ ಕ್ಯಾಲಿಗುಲ ಜ್ಞಾಪಕ ಬ೦ದಿತ್ತು. ಆಗ ವೈ.ಎನ್.ಕೆ ಯವರನನ್ನು ಕೇಳಿದಾಗ ಅವರೂ ಒಪ್ಪಿದ್ದರು. ಒ೦ದೆರಡು ವರ್ಷಗಳ ಹಿ೦ದೆ ತಾನೇ ಬ೦ದಿದ್ದ ‘ ಹಯವದನ ‘ ಬಹಳ ಇಷ್ಟವಾಗಿತ್ತು . ಅವರು ನಟಿಸಿದ್ದ ಸಂಸ್ಕಾರ, ವಂಶವೃಕ್ಷ, ಇತ್ಯಾದಿ ನೋಡಿದ್ದೆ,. ಅದರೆ ಹಿಂದಿ ಸಿನೆಮಾಗಳನ್ನು ಹೆಚ್ಚು ನೋಡಿರಲಿಲ್ಲ.
ಇದೆಲ್ಲಾ ಮೆಲುಕು ಹಾಕುತ್ತಿದ್ದಾಗ ಗಿರೀಶ್ ಕಾರ್ನಾಡರು ಮೇಲಿನ ಬರ್ತಿನಲ್ಲಿ ಪುಟ್ಟ ದೀಪ ಹಾಕಿಕೊಂಡು ಏನೋ ಓದುತ್ತಿದ್ದರು. ಸ್ಟೇಶನ್ನುಗಳು ಬಂದರೆ ನನ್ನಂತಹವರು ಇಳಿದು ಠಳಾಯಿಸುವ ಅಭ್ಯಾಸ. ಆದರೆ ಅವರು ಬರ್ತ್ ನಿ೦ದ ಇಳಿಯಲೆ ಇಲ್ಲ. ತಮಾಷೆ ಏನೆಂದರೆ ನಾನು ಅಗ ಯಾವುದೋ ನಾಟಕ ಬರೆಯಲು ಪ್ರಯತ್ನಿಸುತ್ತಿದ್ದೆ. 11ವರ್ಷಗಳು ಅಮೆರಿಕದಲ್ಲಿದ್ದು ಆಗ ತಾನೇ ಭಾರತಕ್ಕೆ ವಾಪಸ್ಸು ಬಂದಿದ್ದೆ. ಏಕೆ ಬಂದೆ, ಏಕೆ ಬಂದೆ ಎಂದು ಅವರಿವರು ಕೇಳುತ್ತಿದ್ದರು . ಅದಕ್ಕೆ ಉತ್ತರವಾಗಿಯೋ ಏನೋ ಮಹಾಭಾರತದ ಅಜ್ಞಾತವಾಸವನ್ನು ಮೂಲವಾಗಿಟ್ಟುಕೊಂಢು ನಾಟಕ ಬರೆಯಲು ಶುರುಮಾಡಿದ್ದೆ. ಕಾರ್ನಾಡರನ್ನು ನೋಡಿದ ಮೇಲೆ ಏನೋ ಸ್ಪೂರ್ತಿ ಬ೦ತು. ಬೇರೆಲ್ಲರೂ ಮಲಗಿದ್ದರು. ಚಿಕ್ಕ ದೀಪ ಹಾಕಿಕೊಂಡು ಮತ್ತೆ ಒ೦ದು ಪುಟ ಸಂಭಾಷಣೆ ಸೇರಿಸಿದೆ. ರೈಲು ನೆಟ್ಟಗೆ ಮುಂಬಯಿಗೆ ಹೋಗಿದ್ದರೆ ಈ ಕಥಾನಕ ಇಲ್ಲಿಯೇ ಮುಗಿಯುತ್ತಿತ್ತು.
ಬೆಳಿಗ್ಗೆ ಆಯಿತು. ಕಾರ್ನಾಡರು ಕೆಳಗೆ ಇಳಿದು ಬ೦ದರು. ಉಳಿದ ಇಬ್ಬರು ಪ್ರಯಾಣಿಕರು ಅವರ ಮುಖವನ್ನು ಎರಡು ಮೂರು ಬಾರಿ ನೋಡಿ ಸುಮ್ಮನಾದರು. ನನ್ನ ಪಕ್ಕವೆ ಅವರು ಕುಳಿದುಕೊಳ್ಳಬೇಕಾದ್ದರಿ೦ದ ಮಾತನಾಡಬೇಕಾಯಿತೋ ಏನೋ ! ಮತ್ತೆ ಮೇಲಿನ ಬರ್ತ್ ಗೆ ಹೋಗಿ ಮುಂಬಯಿಯಲ್ಲೇ ಕೆಳಗೆ ಬರುತ್ತಿದ್ದರೋ ಏನೋ ! ಹಲೋ ಎಂದರು. ನನ್ನ ಪ್ರವರ ಹೇಳಿಕೊ೦ಡೆ ಹಾಗೂ ನಿಮ್ಮ ನಾಟಕಗಳ ಅಭಿಮಾನಿ ಎ೦ದೆ. ನಕ್ಕರು. ಹಾಗೇ ಮಾತಾಡುತ್ತ ಹೋದೆವು. ಚಹ ಕುಡಿದೆವು. ಆಗ ರೈಲು ಕಲ್ಯಾಣ ಸ್ಟೇಷನ್ನಲ್ಲಿಯೇ ಕೊನೆಯಾಗುತ್ತದೆ ಎ೦ದು ಟಿಕೆಟ್ ಕಲೆಕ್ಟರ್ ಹೇಳಿ ಹೋದರು. “ಇಳಿದು, ಲೋಕಲ್ ಹಿಡಿಯೋಣ , ಬನ್ನಿ” ಎ೦ದರು ಕಾರ್ನಾಡರು. .
ಸೇತುವೆ ಹತ್ತಿ ಬೇರೆ ಪ್ಲಾಟಫಾರಂ ಗೆ ಹೋಗಬೇಕಾಗಿತ್ತು. ಆಗ ಅವರ ಸುತ್ತ ಜನ ಸೇರಲು ಶುರುಮಾಡಿದರು; ಹಿ೦ದಿ ಸಿನಿಮಾಗಳನ್ನು ನೋಡಿದ ಜನರಿರಬೇಕು. ಹಸ್ತಾಕ್ಷರಕ್ಕೆ ದು೦ಬಾಲು ಬಿದ್ದರು. ಗಿರೀಶರೂ ಸಹಿಮಾಡುತ್ತ ಹೋದರು. . ಅಭಿಮಾನಿಗಳಲ್ಲಿ ಕೆಲವರು ನನ್ನ ಮು೦ದೆಯೂ ಸಹಿ ಮಾಡಲು ಪುಸ್ತಕವನ್ನಿಟ್ಟರು.” ನಾನು ಆಮ್ ಆದ್ಮಿ” ಎ೦ದು ಹೇಳಿದೆ. ಆದರೆ ಅದನ್ನು ನ೦ಬಲು ತಯಾರಿರಲಿಲ್ಲ. ಒಬ್ಬ ಯಾವುದೋ ಸಿನೆಮಾದಲ್ಲಿ ನಿಮ್ಮನ್ನು ನೋಡಿದ್ದೇನೆ ಎ೦ದು ಸಿನೆಮಾ ಹೆಸರು ಕೂಡ ಹೇಳಿದ. ನಾನು ನಕ್ಕೆ. ಅದನ್ನು ಕೇಳಿಸಿಕೊ೦ಡ ಗಿರೀಶರೂ ನಕ್ಕರು.
ಕೆಳಗೆ ಇಳಿದು, ಅ೦ಬರನಾಥ ಕಡೆಯಿ೦ದ ಬ೦ದ ಗಾಡಿಯೊಂದನ್ನು ಹತ್ತಿದೆವು. ಮೊದಲನೆಯ ದರ್ಜೆಯ ಪ್ರಯಾಣವಾದರೂ ನಿಂತುಕೊಂಡೇ ಹೋದೆವು. ನಾವು ಮಾತಾಡುತ್ತಲೆ ಇದ್ದೆವು. ವಿಜ್ಞಾನ, ನಾಟಕ, ಮು೦ಬಯಿ ಇತ್ಯಾದಿ ವಿಷಯಗಳು. ಕೆಲವರು ನೋಡುತ್ತಲೆ ಇದ್ದರು. ಮೊದಲನೆಯ ದರ್ಜೆಯ ಪ್ರಯಾಣಿಕರಲ್ಲವೇ ? ಇಲ್ಲದಿದ್ದಲ್ಲಿ ಆಟೊಗ್ರಾಫ್ ಎಂದು ಮೇಲೆ ಬೀಳುತ್ತಿದ್ದರೋ ಏನೋ ! ಕಡೆಗೆ ದಾದರ್ ಬ೦ದಿತು.ಇಬ್ಬರೂ ಇಳಿದೆವು. ಅವರು ಮಾಹಿಮ್ ಗೆ ಹೋಗಬೇಕಿತ್ತು. ನಾನು ವಿಲೆಪಾರ್ಲೆಗೆ ಟ್ಯಾಕ್ಸಿ ತೆಗೆದುಕೊ೦ಡು “ ಬನ್ನಿ, ನಿಮ್ಮನ್ನು ಬಿಟ್ಟುಬಿಡುತ್ತೀನಿ “ ಎ೦ದೆ, ಮಾತನಾಡುತ್ತ ‘ನಿಮಗೆ ಮುಂಬಯಿ ಚೆನ್ನಾಗಿ ಗೊತ್ತಿದೆ ‘ ಎಂದರು. ಕಡೆಗೆ ಮಾಹಿಮನಲ್ಲಿ ಅವರ ಸ೦ಬ೦ಧೀಕರ ಮನೆಯ ಮು೦ದೆ ಅವರನ್ನು ಬಿಟ್ಟು ನಾನು ವಿಲೆಪಾರ್ಲೆ ಗೆ ಹೋದೆ. ಅವರು ವಿದಾಯ ಹೇಳಿದಾಗ ಧ್ವನಿಯಲ್ಲಿ ಆತ್ಮೀಯತೆ ಇತ್ತು
ನನಗೂ ಹಿ೦ದಿನ ಕಥೆ, ಪುರಾಣ, ಚರಿತ್ರೆಗಳಲ್ಲಿ ಬಹಳ ಆಸಕ್ತಿ. ಇಂದನ್ನು ಮತ್ತು ನನ್ನನ್ನೇ ಹಿಂದಿನಿಂದ ಅರ್ಥ ಮಾಡಿಕೊಳ್ಳುವ ಆಶಯ. ನನ್ನ ನಾಟಕ ‘ಅಜ್ಞಾತವಾಸ’ ಮುಗಿದ ನ೦ತರ ಮು೦ಬಯಿಯಿ೦ದ ಅವರಿಗೆ ಕಳಿಸಿದೆ. ಜೆ.ಪಿ.ನಗರ ಎ೦ದು ಮಾತ್ರ ವಿಳಾಸ ಹಾಕಿದ್ದೆ. ತಲಪಿತೊ ಇಲ್ಲವೋ ತಿಳಿಯದು.. ವಿಚಾರಿಸಲು ಹಿಂದೇಟು ಹಾಕಿದೆ. ಮುಂದಿನ ವರ್ಷಗಳಲ್ಲಿ ‘ಹಯವದನ’ದ ನಾಯಕಿ ಪದ್ಮಿನಿಯೇ ನನ್ನ ಪೂರೈಸದ ‘ವಿಕ್ರಮ ಮತ್ತು ಭೇತಾಳಗಳು’ ನಾಟಕದ ನಾಯಕಿಯಾಗಿದ್ದಳು.
ಅಂತೂ ಪೂರೈಸದ / ಮುದ್ರಣವಾಗದ/ ತೆರೆಯ ಮೇಲೆ ಬರದ ನಾಟಕಗಳಲ್ಲದೆ ಕೆಲವು ಕಥೆಗಳೂ ಕಾರ್ನಾಡರ ಪರಿಕಲ್ಪನೆಗಳಿಂದ ಸ್ಫೂರ್ತಿ ಪಡೆದವು. ಇ೦ದಾಗಿದ್ದರೆ ಆವರ ಜೊತೆ ಇದ್ದ ಕ್ಷಣಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಸೆಲ್ಫಿ ತೆಗೆದು ಇಟ್ಟುಕೊಳ್ಳುತ್ತಿದ್ದೆನೋ ಏನೋ . ಆದರೆ ಈಗ , ಸುಮಾರು 40 ವರ್ಷಗಳ ನಂತರ ಇರುವುದು ಇಷ್ಟು ಮಾತ್ರ .
ಗಿರೀಶ್ ಕಾರ್ನಾಡರ ಜೊತೆ ಒಂದು ಪುಟ್ಟ ಪಯಣ
ನಿಮಗೆ ಇವೂ ಇಷ್ಟವಾಗಬಹುದು…





0 Comments