ಗಿರೀಶ್ ಕಾರ್ನಾಡ್ – ಗಿರಿಗಳ ಈಶ
ಕವಿತಾ ಕಾರ್ನಾಡ್ ಸಾಮ್ಯುಯೆಲ್
ಕವಿತಾ ಕಾರ್ನಾಡ್ ಮುಂಬೈಯಿಂದ ಬಂದು, ಸಧ್ಯ ಧಾರವಾಡದಲ್ಲಿ ತಮ್ಮ ತಾಯಿ ಸುನಂದಾ ಕಾರ್ನಾಡ್ ಜೊತೆ ನೆಲೆಸಿದ್ದಾರೆ. ಗಿರೀಶ್ ಕಾರ್ನಾಡ್ ಅವರ ಅಣ್ಣ ವಸಂತ ಕಾರ್ನಾಡ್ ಮಗಳು. ಅವರು ಅಡ್ವೋಕೇಟ್.
ಕನ್ನಡಕ್ಕೆ: ಪ್ರಸಾದ್ ನಾಯ್ಕ್
ಕೃಷ್ಣಾಬಾಯಿಯವರ ಹೆರಿಗೆಯು ಬಲು ದೀರ್ಘವೂ, ಕಷ್ಟದ್ದೂ ಆಗಿತ್ತು. ಗಾತ್ರದಲ್ಲಿ ಒಂದಿಷ್ಟು ದುಂಡಗೆ ಇದ್ದ ಮಗುವೊಂದು ಇನ್ನೂ ಆಕೆಯ ಗರ್ಭದಲ್ಲಿ ಸಿಲುಕಿಕೊಂಡೇ ಇತ್ತು. ಸ್ವತಃ ದಾದಿಯಾಗಿದ್ದ ಧೈರ್ಯವಂತೆ ಕೃಷ್ಣಾಬಾಯಿಯವರು ಅದೆಷ್ಟೋ ತಾಯಂದಿರ ಹೆರಿಗೆಯನ್ನು ಸುಸೂತ್ರವಾಗಿ ನಡೆಸಿಕೊಟ್ಟವರು. ಈ ಬಾರಿ ಮಾತ್ರ ಆಕೆಗೆ ತನ್ನದೇ ಹೆರಿಗೆಯಲ್ಲಿ ರಾಕ್ಷಸ ಸುಸ್ತು.
ಆದರೆ ಕೃಷ್ಣಾಬಾಯಿಯವರಿಗೆ ಆ ಕಾಲದ ಖ್ಯಾತ ವೈದ್ಯರಲ್ಲೊಬ್ಬರೂ, ತನ್ನ ಪತಿಯೂ ಆಗಿದ್ದ ವ್ಯಕ್ತಿಯ ಮೇಲೆ ಸಂಪೂರ್ಣ ಭರವಸೆಯಿತ್ತು. ಮಧ್ಯರಾತ್ರಿಯ ನಂತರ ಪತ್ನಿಗೆ ಚುಚ್ಚುಮದ್ದೊಂದನ್ನು ನೀಡಿ, ಆಕೆಯ ತಲೆಯನ್ನು ನೇವರಿಸುತ್ತಾ ಇನ್ನೇನು ಬರಲಿರುವ ಶಿಶುವಿನ ಬಗ್ಗೆ ಅವರು ಸೂಚನೆಯನ್ನು ನೀಡಿದ್ದರು. ಈ ಭರವಸೆಯ ಮಾತುಗಳು ಆಕೆಗೆ ಒಂದಷ್ಟು ನಿರಾಳತೆಯನ್ನು ನೀಡಿದ್ದಂತೂ ಸತ್ಯ.
ಮರುದಿನವೇ, ಅಂದರೆ 1938 ರ ಮೇ ತಿಂಗಳ 19 ರಂದು ದಟ್ಟ ಪೂರ್ವ ಮುಂಗಾರು ಮೋಡಗಳು ಆವರಿಸಿಕೊಂಡಿದ್ದ ಮಾಥೇರನ್ ಪರ್ವತ ಶ್ರೇಣಿಗಳಲ್ಲಿದ್ದ ಕೋಣೆಯೊಂದರಲ್ಲಿ ಕೃಷ್ಣಾಬಾಯಿ ದೊಡ್ಡ ತಲೆಯ ಶಿಶುವೊಂದಕ್ಕೆ ಜನ್ಮ ನೀಡಿದ್ದರು.
ಪರ್ವತಗಳ ಮಡಿಲಿನಲ್ಲಿ ಜನಿಸಿದ್ದ ಮಗುವಿಗೆ ‘ಗಿರೀಶ’ನೆಂಬ ಹೆಸರಿಡಲಾಯಿತು – ಗಿರೀಶನೆಂದರೆ ಗಿರಿಗಳ ಈಶ. ಎಲ್ಲರೂ ಗಮನಿಸಿದಂತೆ ಶಿಶುವಿನ ತಲೆಯು ತನ್ನ ದೇಹದ ಗಾತ್ರಕ್ಕೆ ಹೋಲಿಸಿದರೆ ವಿಚಿತ್ರವೆಂಬಷ್ಟು ದೊಡ್ಡದಿತ್ತು. ಮುಂದಿನ ಬಾಲ್ಯದ ದಿನಗಳಲ್ಲೂ ಇದನ್ನು ಗುರುತಿಸಬಹುದಿತ್ತು. ಇದರಿಂದಾಗಿಯೇ ಮಗುವನ್ನು ‘ಹೊಡ್ಡ ಬೋಡಾ ಶಾಬ್ದು’ (ದೊಡ್ಡ ತಲೆಯ ದಡ್ಡ) ಎಂದು ಕರೆಯುವ ಅಭ್ಯಾಸಗಳೂ ಹುಟ್ಟಿಕೊಂಡಿದ್ದವು. ಆದರೆ ಈ ‘ಹೊಡ್ಡ ಬೋಡಾ ಶಾಬ್ದು’ ಮುಂದೊಂದು ದಿನ ಬೌದ್ಧಿಕ, ಚಿಂತಕರ ಲೋಕವನ್ನೇ ಆಳುವವನೆಂದು ಅಂದು ಯಾರಿಗಾದರೂ ಏನು ತಾನೇ ತಿಳಿದಿತ್ತು!
ಇಂದು ನನ್ನ ಚಿಕ್ಕಪ್ಪ ಶ್ರೀ ಗಿರೀಶ ಕಾರ್ನಾಡರ ಜೀವನದ ವಿವರಗಳನ್ನು ಹುಡುಕಹೊರಟರೆ ಒಂದು ಕ್ಲಿಕ್ ಮಾತ್ರದಲ್ಲಿ ಕೈದಕ್ಕುತ್ತದೆ. ಆದರೆ ಈ ಖ್ಯಾತಿಯ, ಮಹಾನ್ ಚೇತನದ ಹಿಂದಿದ್ದ ಖಾಸಗಿ ವ್ಯಕ್ತಿಯ ಬಗ್ಗೆ ಇರುವ ವಿವರಗಳು ಇಲ್ಲವೇ ಇಲ್ಲವೆನ್ನುವಷ್ಟು ಕಮ್ಮಿಯೆಂದರೆ ತಪ್ಪಾಗಲಿಕ್ಕಿಲ್ಲ. ಅವರ ಬಗೆಗಿರುವ ನನ್ನ ಕೆಲವು ನೆನಪುಗಳಿಂದಾಗಿ ಓರ್ವ ವ್ಯಕ್ತಿಯಾಗಿ ಕಾರ್ನಾಡರು ಹೇಗಿದ್ದರು ಎಂಬುದನ್ನು ಆಸಕ್ತರು ಒಂದಿಷ್ಟು ತಿಳಿದುಕೊಳ್ಳಬಹುದೆಂದು ಭಾವಿಸುತ್ತೇನೆ.
ಕಾರ್ನಾಡರನ್ನು ನಾನು ‘ಬಾಪ್ಪಾ’ (ಅಪ್ಪ) ಎಂದೇ ಕರೆಯುತ್ತಾ ಬೆಳೆದವಳು. ಏಕೆಂದರೆ ಬದುಕಿನಲ್ಲಿ ನನಗೆ ಗೊತ್ತಿದ್ದ ನೈಜ ತಂದೆ ಎಂದರೆ ಅವರೊಬ್ಬರೇ. ನನಗೆ ಜನ್ಮನೀಡಿದ್ದ ತಂದೆಯು ತನ್ನ ಸಂಗೀತ ಲೋಕದಲ್ಲಿ ಅದೆಷ್ಟು ಕಳೆದುಹೋಗಿದ್ದನೆಂದರೆ ಆತನಿಗೆ ತನ್ನ ಕರುಳಕುಡಿಯು ಮರೆತೇಹೋದಂತಿತ್ತು. ಹೀಗಾಗಿ ನನ್ನ ಅಸ್ತಿತ್ವದ ಬಗ್ಗೆ ನನಗೆ ತಿಳಿದಾಗಿನಿಂದಲೂ ಬಾಪ್ಪಾನೇ ಉದ್ದಕ್ಕೂ ನನ್ನ ಜೊತೆಯಲ್ಲಿದ್ದವರು.
ಆ ದಿನಗಳಲ್ಲಿ ನಾವೆಲ್ಲಾ ಪುಟ್ಟದೊಂದು ಮನೆಯಲ್ಲಿ ಜೊತೆಯಾಗಿದ್ದೆವು. ಇದ್ದ ಒಂದೇ ಒಂದು ಚಿಕ್ಕ ಕೋಣೆಯನ್ನು ಸ್ನಾನಗೃಹ ಮತ್ತು ಶೌಚಾಲಯವನ್ನು ಸೇರಿದಂತೆ ನಾವೆಲ್ಲರೂ ಹಂಚಿಕೊಳ್ಳಬೇಕಿತ್ತು. ‘ಎಲ್ಬೋ ರೂಮ್’ ಗಳ ಕಲ್ಪನೆಯಾಗಲಿ, ಕೋಣೆಗಳನ್ನು ನಮ್ಮದೇ ಖಾಸಗಿ ಜಾಗಗಳೆಂದು ಗುರುತು ಹಾಕಿಡುವ ರೂಢಿಗಳಾಗಲಿ ಅಂದು ಇರಲಿಲ್ಲ. ಬಾಪ್ಪಾ ಮತ್ತು ನಾನು ಮನೆಯ ಹಾಲಿನ ನೆಲದಲ್ಲಿ ಚಾಪೆ ಹಾಸಿ ಮಲಗುತ್ತಿದ್ದೆವು. ಬಾಪ್ಪಾ ಬೆಳಗಿನ ಜಾವದವರೆಗೂ ಪುಸ್ತಕಗಳನ್ನು ಓದುತ್ತಿದ್ದರಿಂದ ನನಗೆ ದೀಪಗಳು ಬೆಳಗಿರುವಂತೆಯೇ ನಿದ್ದೆ ಹೋಗುವುದು ಅಭ್ಯಾಸವಾಗಿತ್ತು. ನಡುರಾತ್ರಿಯಲ್ಲಿ ಬರಲಿದ್ದ ಭೂತಗಳನ್ನು ಹೊಡೆದೋಡಿಸಲು ಬಾಪ್ಪಾ ಹೇಗೂ ಪಕ್ಕದಲ್ಲೇ ಇದ್ದರಲ್ಲಾ!
ಇನ್ನು ಬೆಳೆದಂತೆಲ್ಲಾ ಜಗತ್ತಿನ ಎಲ್ಲಾ ದೇಶಗಳ ಗೊಂಬೆಗಳೂ ನನಗೆ ದೊರಕುತ್ತಾ ಹೋಗಿ ನನ್ನ ಜೊತೆಗಿದ್ದ ಮಕ್ಕಳಿಗೆಲ್ಲಾ ಹೊಟ್ಟೆಕಿಚ್ಚಿಗೆ ಕಾರಣವಾಗಿತ್ತು. ಬಾಪ್ಪಾ ಪ್ರತೀಬಾರಿ ವಿದೇಶಕ್ಕೆ ಹೋದಾಗಲೆಲ್ಲಾ ಆಯಾ ದೇಶಗಳಿಂದ ನನಗಾಗಿ ಬೊಂಬೆಯನ್ನು ಖರೀದಿಸಿ ತರುತ್ತಿದ್ದರೆಂಬುದು ನನಗೆ ಬಹುಬೇಗನೇ ಮನದಟ್ಟಾಗಿತ್ತು. ನನ್ನಲ್ಲಿದ್ದ ರಷ್ಯನ್ ಗೊಂಬೆಯೊಂದಕ್ಕೆ ತುಪ್ಪಳದ ಟೋಪಿ ಮತ್ತು ಕೋಟ್ ಇದ್ದರೆ ಜಪಾನೀಸ್ ಗೊಂಬೆಯೊಂದು ಪಿಂಗಾಣಿಯಿಂದ ಮಾಡಲ್ಪಟ್ಟಿತ್ತು. ಅಮೆರಿಕಾದ ಗೊಂಬೆಯಂತೂ ನನ್ನಷ್ಟೇ ಎತ್ತರಕ್ಕಿದ್ದು ನನ್ನೊಂದಿಗೆ ಮಾತಾಡುತ್ತಿತ್ತು ಕೂಡ.

ಕಾರ್ನಾಡ್ ಅವರ 80 ನೆಯ ಹುಟುಹಬ್ಬವನ್ನು ಅವರ ಕುಟುಂಬ ಕೂರ್ಗ್ ನಲ್ಲಿ ಮಾಡಿ ಸಂಭಮಿಸಿದರು…(ಕವಿತಾ ಮತ್ತು ಸುನಂದಾ ಕಾರ್ನಾಡ್)
ಇನ್ನು ಇವೆಲ್ಲಾ ಗೊಂಬೆಗಳನ್ನು ವ್ಯವಸ್ಥಿತವಾಗಿ ಇರಿಸಲು ಪ್ರತ್ಯೇಕವಾಗಿ ಕಪಾಟೊಂದನ್ನು ಮೀಸಲಿಡಬೇಕಾದ ಅನಿವಾರ್ಯತೆಯು ಬಂದೊದಗಿದ್ದು ಅಮ್ಮನಿಗೆ. ಇದೇ ಕಾರಣಕ್ಕಾಗಿ ಗೊಂಬೆಗಳನ್ನು ಇನ್ನು ಮುಂದೆ ಖರೀದಿಸಬಾರದೆಂದು ಅಮ್ಮ ಬಾಪ್ಪಾನಿಗೆ ಹೇಳಿದ್ದೂ ಆಯಿತು.
ನನ್ನ ಬಗ್ಗೆ ಅಮ್ಮನಿಗಿದ್ದ ಬಹಳ ದೊಡ್ಡ ಚಿಂತೆಯೆಂದರೆ ಸಂಖ್ಯೆಗಳನ್ನು ನಿಭಾಯಿಸಲಾಗದ ನನ್ನ ಅಸಮರ್ಥತೆ. ಅಂದಿಗೂ ಇಂದಿಗೂ ಗಣಿತವೆಂಬುದು ನನ್ನ ಮಟ್ಟಿಗೆ ಕಬ್ಬಿಣದ ಕಡಲೆಯೇ. ಈ ಬಗ್ಗೆ ಅಮ್ಮ ಸಹಾಯಕ್ಕಾಗಿ ಬಾಪ್ಪಾರನ್ನು ಕೋರಿದ್ದರು. ಇದರಿಂದಾಗಿ ಗಣಿತದಲ್ಲಿ ಉನ್ನತ ಪದವಿಯನ್ನು ಪಡೆದಿದ್ದ ಬಾಪ್ಪಾ ನನ್ನೊಳಗಿನ ಐನ್ಸ್ಟೈನ್ ನನ್ನು ಹೊರತೆಗೆಯಲು ಹೆಣಗಬೇಕಾಯಿತು.
ಇನ್ನು ಕಲಿಸುವ ಗುರು ಮನೆಯಲ್ಲೇ ಇದ್ದಿದ್ದರಿಂದಾಗಿ ನಾನು ಮನೆಪಾಠಕ್ಕಾಗಿ ಹೋಗಬೇಕಾದ ಅನಿವಾರ್ಯತೆಗಳಾಗಲಿ, ಗಣಿತಕ್ಕಾಗಿ ಹೆಚ್ಚುವರಿ ತರಗತಿಗಳನ್ನು ತೆಗೆದುಕೊಳ್ಳಬೇಕಾದ ಕಷ್ಟಗಳಾಗಲಿ ಇರಲಿಲ್ಲ. ಸಿನೆಮಾ ಚಿತ್ರೀಕರಣಗಳು ಮತ್ತು ನಾಟಕ ರಿಹರ್ಸಲ್ ಗಳನ್ನು ಮುಗಿಸಿ ಬಂದು ಅದೆಷ್ಟು ಸುಸ್ತಾಗಿದ್ದರೂ ಮುಂಜಾನೆ ಬೇಗನೇ ಎದ್ದು ಅಥವಾ ನಡುರಾತ್ರಿಯ ಚಿಮಣಿ ದೀಪದ ಬೆಳಕಿನಲ್ಲಿ ಬಾಪ್ಪಾ ನನ್ನ ಗೊಡ್ಡುತಲೆಯೊಳಗೆ ಬೀಜಗಣಿತದ ಸೂತ್ರಗಳನ್ನೂ, ಸಮೀಕರಣಗಳನ್ನೂ ಹೊಕ್ಕಿಸಲು ಪಟ್ಟ ಕಷ್ಟಗಳು ಅಷ್ಟಿಷ್ಟಲ್ಲ.
ನಾನು ನನ್ನ ಶಾಲಾದಿನಗಳನ್ನು ಅನಾಯಾಸವಾಗಿ ತೇರ್ಗಡೆಯಾದ ಶ್ರೇಯಸ್ಸೇನಾದರೂ ಇದ್ದಲ್ಲಿ ಅದು ಬಾಪ್ಪಾನಿಗೆ ಮತ್ತು ಮುಗಿಯದ ಕಸರತ್ತುಗಳಂತೆ ಕಾಣುತ್ತಿದ್ದ ಗಣಿತದ ಪಟ್ಟುಗಳು ನನಗೆ ಅರ್ಥವಾಗುವಷ್ಟು ಕಾದು ನನ್ನನ್ನು ದಡಸೇರಿಸುತ್ತಿದ್ದ ಅವರ ಅಗಾಧ ತಾಳ್ಮೆಗಷ್ಟೇ ಸೇರಬೇಕು.
ಪುಣೆಯ ಫಿಲ್ಮ್ ಮತ್ತು ಟೆಲಿವಿಷನ್ ಇನ್ಸ್ಟಿಟ್ಯೂಟ್ ನಲ್ಲಿ ಬಾಪ್ಪಾ ನಿರ್ದೇಶಕರಾಗಿದ್ದ ದಿನಗಳು ನನ್ನ ನೆನಪಿನ ಲೋಕದಲ್ಲಿ ಗಾಢವಾಗಿ ಉಳಿದಂಥವುಗಳು. ಪ್ರತೀ ವಾರಾಂತ್ಯದಲ್ಲೂ ಇಲ್ಲಿಯ ವಿದ್ಯಾರ್ಥಿಗಳಿಗಾಗಿ ಪ್ರದರ್ಶಿಸಲಾಗುತ್ತಿದ್ದ ಅಂತಾರಾಷ್ಟ್ರೀಯ ಚಲನಚಿತ್ರಗಳನ್ನು ವೀಕ್ಷಿಸುವ ಸೌಭಾಗ್ಯವು ನಮ್ಮದಾಗುತ್ತಿತ್ತು. ಆದರೆ ಚಿತ್ರಪ್ರದರ್ಶನದ ನಂತರ ಚಲನಚಿತ್ರಗಳನ್ನು ವಿಶ್ಲೇಷಿಸುವ ಬಗ್ಗೆ ವಿದ್ಯಾರ್ಥಿಗಳ ನಡುವೆ ನಡೆಯುತ್ತಿದ್ದ ಚರ್ಚೆಗಳು ಮಾತ್ರ ನನಗೆ ಅಷ್ಟಾಗಿ ಅರ್ಥವಾಗುತ್ತಿರಲಿಲ್ಲ. ಆದರೆ ಆ ದಿನಗಳಲ್ಲಿ ನನಗಿದ್ದ ಸೀಮಿತ ಅರ್ಥೈಸುವಿಕೆಯ ಸಾಮರ್ಥ್ಯದಲ್ಲಿ ಅಷ್ಟು ದೊಡ್ಡವರಿಗೆಲ್ಲಾ ಬಾಪ್ಪಾ ಪಾಠ ಹೇಳುತ್ತಿದ್ದಿದ್ದೇ ನನ್ನ ಮಟ್ಟಿಗೆ ಒಂದು ಬಹುದೊಡ್ಡ ಖುಷಿಯ ಸಂಗತಿಯಾಗಿತ್ತು.
1978 ರ ಸುಮಾರಿನಲ್ಲಿ ಬಾಪ್ಪಾ ‘ಒಂದಾನೊಂದು ಕಾಲದಲ್ಲಿ’ ಎಂಬ ಬಹುನಿರೀಕ್ಷಿತ ಚಿತ್ರವೊಂದರ ನಿರ್ದೇಶನಕ್ಕಿಳಿದಿದ್ದರು. ಚಿತ್ರೀಕರಣಕ್ಕೆಂದು ಉತ್ತರಕನ್ನಡ ಮತ್ತು ದಾಂಡೇಲಿಯ ಅರಣ್ಯಪ್ರದೇಶಗಳ ಕೆಲ ಸ್ಥಳಗಳನ್ನು ಆಯ್ದುಕೊಂಡಿದ್ದೂ ಆಗಿತ್ತು. ಇತ್ತ ನಾನು ಶಾಲಾದಿನಗಳಿಗೆ ಕೊಂಚ ಬಿಡುವಾದಾಗಲೆಲ್ಲಾ ಚಿತ್ರೀಕರಣಕ್ಕೆ ನನ್ನನ್ನೂ ಕರೆದೊಯ್ಯಬೇಕೆಂದು ಅಮ್ಮನನ್ನು ಗೋಳಾಡಿಸುತ್ತಿದ್ದೆ.
ಚಿತ್ರೀಕರಣವು ಅದೆಲ್ಲಿ ನಡೆಯುತ್ತಿದ್ದರೂ ಅಲ್ಲಿ ಹೋಗಬೇಕೆಂಬುದು ನನ್ನ ಹಟವಾಗಿತ್ತು. ದಿನದ ವೇಳೆಯಲ್ಲಿ ಶೂಟಿಂಗ್ ಮುಗಿಸಿ ಪ್ಯಾಕಪ್ ಆದ ನಂತರ ಬಾಪ್ಪಾ ಅಕ್ಷರಶಃ ಓರ್ವ ವಾಹನ ಚಾಲಕನಂತೆ, ನಾನು ಎಂದೆಂದಿಗೂ ಕಂಡಿದ್ದ ಪ್ರೀತಿಯ ಪ್ರತಿರೂಪದಂತೆ ರೂಪಾಂತರಗೊಳ್ಳುತ್ತಿದ್ದರು. ನಾನೂ ಕೂಡ ಚಿತ್ರೀಕರಣದ ವೇಳೆಯಲ್ಲಿ ಅವರಿಂದ ದೂರ ಇರಲು ಏನೇನೋ ವಿಧಾನಗಳನ್ನು ಪ್ರಯತ್ನಿಸುತ್ತಿದ್ದರೆ ಪ್ಯಾಕಪ್ ಆದ ನಂತರ ಅನುಕ್ಷಣವೂ ಅವರ ಜೊತೆಗೇ ಅಂಟಿಕೊಂಡಿರುತ್ತಿದ್ದೆ.
ಚಿತ್ರೀಕರಣದ ಬಹುತೇಕ ಅವಧಿಯಲ್ಲಿ ನಾವೆಲ್ಲಾ ಟೆಂಟುಗಳಲ್ಲಿ ವಾಸಿಸುತ್ತಿದ್ದೆವು. ರಾತ್ರಿಯ ಊಟ ಮುಗಿದ ನಂತರ ಬಾಪ್ಪಾ ನಮ್ಮ ಜೊತೆ ಕುಳಿತುಕೊಂಡು ಆಕಾಶವನ್ನು ದಿಟ್ಟಿಸುತ್ತಾ ನಕ್ಷತ್ರಪುಂಜಗಳತ್ತ ಬೊಟ್ಟುಮಾಡಿ ನಮಗೆ ತೋರಿಸುತ್ತಿದ್ದರು. ಈ ಬಗ್ಗೆ ಅವರಿಗಿದ್ದ ಜ್ಞಾನವು ನಿಜಕ್ಕೂ ಅಗಾಧವಾಗಿತ್ತು. ಬಿಲ್ಲು ಹಿಡಿದು ನಿಂತ ಭಂಗಿಯಲ್ಲಿರುವ ಬೇಟೆಗಾರನ ಆಕಾರದಲ್ಲಿದ್ದ ಓರಿಯನ್ ಸರಣಿ ನಕ್ಷತ್ರ ಪುಂಜಗಳನ್ನು ಅಂದು ಅವರು ನಮಗೆ ತೋರಿಸಿದ್ದರು.
ಬಾನ್-ಫೈರ್ ನ ಆ ಬೆಳಕಿನಲ್ಲಿ ಕಾಲ್ಪನಿಕ ಬಿಲ್ಲುಬಾಣಗಳನ್ನು ಹಿಡಿದು, ತನ್ನ ಬಲಿಷ್ಠ ತೋಳುಗಳಿಂದ ಬಾಣಹೂಡಲು ಸನ್ನದ್ಧನಾಗಿ ನಿಂತ, ಯಾರಿಗೂ ಹೊಟ್ಟೆಕಿಚ್ಚಾಗಿಸುವಷ್ಟು ಸದೃಢ ಮೈಕಟ್ಟನ್ನು ಹೊಂದಿದ್ದ ಅವರ ದೃಶ್ಯಗಳು ಬಾಪ್ಪಾನ ಬಗ್ಗೆ ನನ್ನ ಮನದಲ್ಲಿ ಅಚ್ಚೊತ್ತಿರುವ ಬಲು ಆಪ್ತ ಮತ್ತು ಸಂತಸದ ನೆನಪುಗಳಲ್ಲೊಂದು.
1983 ರಲ್ಲಿ ನಾನು ಎಸ್.ಎಸ್.ಸಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುತ್ತಲಿದ್ದೆ. ಆದರೆ ನನ್ನ ಮನಸ್ಸು ಮಾತ್ರ `ಉತ್ಸವ್’ ಚಿತ್ರವನ್ನು ನಿರ್ದೇಶಿಸುತ್ತಿದ್ದ ಬಾಪ್ಪಾ ಇದ್ದ ಚಿಕ್ಕಮಗಳೂರಿನಲ್ಲಿ ಸಿಕ್ಕಿಹಾಕಿಕೊಂಡಿತ್ತು. ಈ ನಡುವೆ ಅವರೊಮ್ಮೆ ಮುಂಬೈಗೆ ಬಂದಾಗ ಮುಂದಿನ ಶೆಡ್ಯೂಲಿಗೆ ನನ್ನನ್ನೂ ಅವರ ಜೊತೆ ಕರೆದೊಯ್ಯುವಂತೆ ದುಂಬಾಲು ಬಿದ್ದಿದ್ದೆ. ಅಧ್ಯಯನಕ್ಕೆ ಅಗತ್ಯವಾಗಿದ್ದ ಏಕಾಗ್ರತೆಯನ್ನು ನಾನು ಕಳೆದುಕೊಳ್ಳುತ್ತಿದ್ದೇನೆಂಬ ಭಯವು ಅಮ್ಮನಿಗಿದ್ದರಿಂದ ನಾನು ಬಾಪ್ಪಾರೊಂದಿಗೆ ಹೋಗುವುದು ಅಮ್ಮನಿಗೆ ಇಷ್ಟವಿರಲಿಲ್ಲ.
ಶಶಿ ಕಪೂರ್ ಮತ್ತು ರೇಖಾರಂತಹ ತಾರಾಗಣಗಳ ಗ್ಯಾಲಕ್ಸಿಯೇ ಅಲ್ಲಿದ್ದಾಗ ಅದು ನಿಜವೂ ಆಗಿತ್ತೆನ್ನಿ. ಒಂದೆಡೆ ನನ್ನನ್ನು ನಿರಾಶಗೊಳಿಸಲು ಬಾಪ್ಪಾನಿಗೆ ಇಷ್ಟವಿರಲಿಲ್ಲವಾದರೆ ಇನ್ನೊಂದೆಡೆ ಸೋಲನ್ನೊಪ್ಪಿಕೊಳ್ಳುವುದೂ ಅವರ ಜಾಯಮಾನವಾಗಿರಲಿಲ್ಲ. ಅಂತೂ ಜೊತೆಯಲ್ಲಿ ನನ್ನನ್ನು ಕರೆದೊಯ್ಯಲು ಬಾಪ್ಪಾ ನಮ್ಮಮ್ಮನನ್ನು ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದರು. ಇನ್ನು ಪ್ರತೀದಿನ ಸಂಜೆ ತಾನು ಸ್ವತಃ ಕುಳಿತುಕೊಂಡು ಪಾಠ ಹೇಳುವೆನೆಂದು ಬಾಪ್ಪಾ ಅಮ್ಮನಿಗೆ ಮಾತು ಕೊಟ್ಟಿದ್ದೂ ಆಯಿತು.
ಬಾಪ್ಪಾ ಕೊಟ್ಟ ಮಾತಿಗೆ ತಪ್ಪಲಿಲ್ಲ. ಪ್ರತೀಸಂಜೆಯೂ ‘ಲೈಟ್ಸ್-ಕ್ಯಾಮೆರಾ-ಆಕ್ಷನ್; ಕಟ್; ಪ್ಯಾಕಪ್’ ಗಳ ನಂತರ ಹಿಂದಿನ ಸಂಜೆ ನನಗೆ ಅಭ್ಯಾಸಕ್ಕೆಂದು ನೀಡಲಾಗಿದ್ದ ಗಣಿತದ ಸಮಸ್ಯೆಗಳನ್ನು ಸ್ವತಃ ನನ್ನ ಜೊತೆ ಕುಳಿತು ಪರಿಹರಿಸುತ್ತಿದ್ದರು. ಕೊನೆಗೂ ನಾನು ಒಳ್ಳೆಯ ಅಂಕಗಳೊಂದಿಗೆ ಎಸ್.ಎಸ್.ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದೆ. ಆದರೆ ಇಲ್ಲಿ ನಿಜಕ್ಕೂ ಗೆದ್ದಿದ್ದು ಮಾತ್ರ ಬಾಪ್ಪಾ.
ಖ್ಯಾತ ಚಿಂತಕರಾದ ಶ್ಯಾಮ್ ಬೆನೆಗಲ್, ಗೋವಿಂದ ನಿಹಲಾನಿ, ಬಿ. ವಿ. ಕಾರಂತ್ ಮೊದಲಾದವರು ನನ್ನ ಬಾಲ್ಯದ ನೆನಪಿನ ಚಿತ್ರಗಳಿಗೆ ಬಣ್ಣ ತುಂಬಿದವರು. ಆದರೆ ಇಂಥಾ ಮಹಾನ್ ಪ್ರತಿಭೆಗಳು ಬಾಪ್ಪಾರೊಂದಿಗೆ ನಡೆಸುತ್ತಿದ್ದ ಅದೆಷ್ಟೋ ಸಂಭಾಷಣೆಗಳನ್ನು ಅರ್ಥೈಸಿಕೊಳ್ಳುವಷ್ಟು ವಯಸ್ಸೂ, ಬುದ್ಧಿಮತ್ತೆಯೂ ಆ ದಿನಗಳಲ್ಲಿ ನನಗಿರಲಿಲ್ಲವಲ್ಲಾ ಎಂದು ಕೆಲವೊಮ್ಮೆ ಬೇಜಾರಾಗುವುದುಂಟು.
ಅಷ್ಟಕ್ಕೂ ಗಮನಾರ್ಹ ಸಂಗತಿಯೆಂದರೆ ಬಾಪ್ಪಾ ನನಗೋರ್ವ ಅದ್ಭುತ, ಪ್ರಿಯ ತಂದೆಯಾಗಿದ್ದರೇ ಹೊರತು ಯಾವತ್ತಿಗೂ ಮುಗಿಯದ ನಖರಾಗಳನ್ನು ಮಾಡುತ್ತಿದ್ದ ಸೆಲೆಬ್ರಿಟಿಯಾಗಿರಲಿಲ್ಲ. ಅವರು ಧರಿಸುತ್ತಿದ್ದ ಸರಳ ಕಾಟನ್ ಕುರ್ತಾ-ಪೈಜಾಮಾಗಳು ಎಂದಿಗೂ ಅವರಿಗಿದ್ದ ಖ್ಯಾತಿಯ ಅಬ್ಬರದ ಚಿಹ್ನೆಗಳನ್ನು ಹೊಂದಿರಲಿಲ್ಲ.
ಲೆಕ್ಕವಿಲ್ಲದಷ್ಟು ಚಿನ್ನದ ಪದಕಗಳು, ರಾಷ್ಟ್ರೀಯ ಪುರಸ್ಕಾರಗಳು, ಜ್ಞಾನಪೀಠ ಪ್ರಶಸ್ತಿ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ರಾಷ್ಟ್ರಪತಿಯಿಂದ ನೀಡಲ್ಪಟ್ಟ ಪದಕಗಳು, ಪದ್ಮ ಪುರಸ್ಕಾರಗಳು, ಅಸಂಖ್ಯಾತ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಪ್ರಶಂಸಾ ಪ್ರಮಾಣಪತ್ರಗಳು, ಗೌರವಗಳೆಲ್ಲವನ್ನೂ ಮೌನವಾಗಿ ಘನತೆಯಿಂದ ಸ್ವೀಕರಿಸಿದ್ದ ಬಾಪ್ಪಾ ಇವೆಲ್ಲವನ್ನೂ ಸುಮ್ಮನೆ ಮನೆಯ ಕಪಾಟಿನೊಳಗಿಟ್ಟು ಮರೆತುಬಿಟ್ಟರು.
ಅಸಲಿಗೆ ಧಾರವಾಡದ ಇಂಟ್ಯಾಕ್ (ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಆಂಡ್ ಕಲ್ಚರಲ್ ಹೆರಿಟೇಜ್) ವಸ್ತುಸಂಗ್ರಹಾಲಯವು ಈ ಪ್ರಶಸ್ತಿ-ಪುರಸ್ಕಾರಗಳೆಲ್ಲವನ್ನೂ ಸಾರ್ವಜನಿಕರ ವೀಕ್ಷಣೆಗಾಗಿ ಪ್ರದರ್ಶನಕ್ಕಿಡಬೇಕೆಂದು ಬಾಪ್ಪಾನಲ್ಲಿ ವಿನಂತಿಸಿಕೊಳ್ಳುವವರೆಗೂ ಇವುಗಳು ಮುಚ್ಚಿದ ಕಪಾಟಿನ ಮರೆಯಲ್ಲೇ ತಣ್ಣಗಿದ್ದವು. ಪ್ರಾಯಶಃ ಈ ಕಾರಣದಿಂದಾಗಿಯೇ ಶ್ರೇಷ್ಠತೆಯ ಸಾಂಗತ್ಯದಲ್ಲಿ ಬದುಕನ್ನು ಕಳೆದ ನಾನು ಅದೆಷ್ಟು ಅದೃಷ್ಟವಂತೆ ಎಂಬುದು ನನಗೆ ತಿಳಿಯಲೇ ಇಲ್ಲ. ಸರಳತೆಯು ಅವರ ಶಕ್ತಿಯೂ, ಶ್ರೇಷ್ಠತೆಯೂ ಆಗಿತ್ತು.
ತನ್ನ ವಿವಾಹದ ತರುವಾಯ ಬಾಪ್ಪಾ ಬೆಂಗಳೂರಿನಲ್ಲಿ ನೆಲೆಸಲಾರಂಭಿಸಿದ ನಂತರ ನಮ್ಮ ನಡುವಿನ ಅಂತರ ಕೊಂಚ ಹೆಚ್ಚಾದವು. ಆದರೆ ನನ್ನ ವಿವಾಹದ ದಿನದಲ್ಲಂತೂ ನನ್ನಿಷ್ಟದ ಬಾಪ್ಪಾ ಅವರೇ ಎಂಬುದು ನನಗೆ ಮನವರಿಕೆಯಾಗಿತ್ತು. 1990 ರ ಅಕ್ಟೋಬರ್ 1 ರಂದು ಬಾಪ್ಪಾರ ಶಿಷ್ಯ ಮತ್ತು ಮೆಚ್ಚಿನ ನಟನಾಗಿದ್ದ ಶಂಕರ್ ನಾಗ್ ಭೀಕರ ರಸ್ತೆ ಅಪಘಾತವೊಂದರಲ್ಲಿ ಮೃತಪಟ್ಟರೆಂಬ ಸುದ್ದಿಯು ಅವರನ್ನು ತಲುಪಿತ್ತು. ಸ್ವತಃ ಶೋಕಸಾಗರದಲ್ಲಿ ಮುಳುಗಿದ ಸ್ಥಿತಿಯಲ್ಲಿದ್ದರೂ ಬಾಪ್ಪಾ ನನ್ನ ಮದುವೆಯುದ್ದಕ್ಕೂ ಇದ್ದು ಮದುವೆಯ ಎಲ್ಲಾ ಕಾರ್ಯಕ್ರಮಗಳನ್ನು ಖುದ್ದಾಗಿ ನಡೆಸಿಕೊಟ್ಟರು. ನನ್ನ ವಿವಾಹ ಪ್ರಮಾಣಪತ್ರದ ಮೇಲೆ ಸಾಕ್ಷಿಯಾಗಿ ಅವರು ನೀಡಿರುವ ಹಸ್ತಾಕ್ಷರವು ನನ್ನ ಮೇಲೆ ಅವರಿಗಿದ್ದ ಅಪಾರ ಪ್ರೀತಿ ಮತ್ತು ಜವಾಬ್ದಾರಿಯ ಭಾವಕ್ಕೆ ಸಾಕ್ಷಿ.
ಎರಡು ವರ್ಷಗಳ ಹಿಂದೆ ಬಾಪ್ಪಾನಿಗೆ ಇಂಟೆಸ್ರ್ಟಿಷಿಯಲ್ ಲಂಗ್ ಡಿಸೀಸ್ (ಐ.ಎಲ್.ಡಿ) ತಗುಲಿತ್ತು. ಮೂರು ವರ್ಷಗಳ ಹಿಂದೆ ನನ್ನ ತಂದೆಯನ್ನು ಬಲಿತೆಗೆದುಕೊಂಡಿದ್ದ ಖಾಯಿಲೆಯೂ ಇದೇ. ಇದಾದ ನಂತರ ದಿನದ ಇಪ್ಪತ್ತನಾಲ್ಕು ತಾಸೂ ಆಕ್ಸಿಜನ್ ಕಾನ್ಸಂಟ್ರೇಟರ್ ಜೊತೆ ಬಾಪ್ಪಾ ಇರಬೇಕಾಗಿರುವುದು ಅನಿವಾರ್ಯವಾಯಿತು.
ಇಂಥಾ ಪರಿಸ್ಥಿತಿಯಲ್ಲೂ ಬಾಪ್ಪಾ ಕರೆ ಮಾಡಿ ಅಮ್ಮನ ಆರೋಗ್ಯ-ಆಗುಹೋಗುಗಳ ಬಗ್ಗೆ ವಿಚಾರಿಸುವುದನ್ನೂ, ಹುಟ್ಟುಹಬ್ಬದ ದಿನಗಳಂದು ಮರೆಯದೆ ಹಾರೈಸುವುದನ್ನೂ ಮರೆಯುತ್ತಿರಲಿಲ್ಲ. ಒಂದು ಕುಟುಂಬವಾಗಿ ಅವರ ಎಂಬತ್ತನೇ ಹುಟ್ಟುಹಬ್ಬವನ್ನು ನಾವೆಲ್ಲರೂ ಬಲು ಉತ್ಸಾಹದಿಂದ ಕೂರ್ಗ್ನ ಮಡಿಕೇರಿಯಲ್ಲಿ ಆಚರಿಸಿದೆವು. ತಾನು ಈ ಲೌಕಿಕ ಕವಚವನ್ನು ಕಳಚಿ ಹೊರಡಲು ಸಿದ್ಧವಾಗಿರುವೆನೆಂದು ಆ ಹೊತ್ತಿಗಾಗಲೇ ಅವರು ನಮಗೆ ವಿದಾಯ ಕೋರುವ ಧಾಟಿಯಲ್ಲಿ ಹೇಳಿದ್ದರು. ಆದರೆ ಅವರ ಕೊನೆಯ ನಾಟಕವಾದ ‘ರಾಕ್ಷಸ ತಂಗಡಿ’ಯು ಪೂರ್ಣವಾಗಿ, ಪ್ರಕಟಣೆಯಾಗುವವರೆಗೂ ಅವರ ಹತ್ತಿರ ಸುಳಿಯಲು ಆ ಸಾವಿಗೂ ಧೈರ್ಯ ಬಂದಿರಲಿಲ್ಲವೇನೋ!
2019 ಜೂನ್ 9 ರ ರಾತ್ರಿ ಬಾಪ್ಪಾ ಮಲಗುವ ಮುನ್ನ ಜೊತೆಗಿದ್ದ ಪತ್ನಿ, ಮಕ್ಕಳು ಮತ್ತು ಮೊಮ್ಮಕ್ಕಳಿಗೆ ಕೊನೆಯ ಗುಡ್-ಬೈ ಹೇಳಿದ್ದರು. ಮರುದಿನ ಮುಂಜಾನೆಯಷ್ಟೇ ಅವರ ಪ್ರಾಣಪಕ್ಷಿ ಹಾರಿಹೋಗಿದ್ದು ಮಕ್ಕಳ ಗಮನಕ್ಕೆ ಬಂದಿತ್ತು.
ಬಾಪ್ಪಾನಂತಹ ವ್ಯಕ್ತಿಯನ್ನು ಸಾವೆಂಬ ಸಾವೂ ಅಪಹರಿಸಲಾರದು. ತಮ್ಮ ಪ್ರೀತಿಪಾತ್ರರ ಚಿಂತನೆಗಳಲ್ಲಿ, ನೆನಪುಗಳಲ್ಲಿ ಮತ್ತು ಬದುಕಿನಲ್ಲಿ ಅವರು ಎಂದೆಂದಿಗೂ ಇದ್ದೇ ಇರುತ್ತಾರೆ. ಚಿಂತನೆ, ಕ್ರಿಯಾತ್ಮಕತೆ ಮತ್ತು ಸೃಜನಾತ್ಮಕ ಸ್ಫೂರ್ತಿಯ ಸೀಮೆಗಳನ್ನು ಮೀರಿದ ಬಾಪ್ಪಾರ ಬದುಕು ಮಾನವಚೇತನಕ್ಕೊಂದು ಅಪೂರ್ವ ಕೊಡುಗೆಯಿದ್ದಂತಿತ್ತು. ಇಂಥಾ ಮಹನೀಯರೊಬ್ಬರ ಕುಟುಂಬದಲ್ಲಿ ನನ್ನನ್ನು ಹುಟ್ಟಿಸಿದ ಆ ಭಗವಂತನಿಗೆ ನಾನು ಚಿರಋಣಿ. ಬಾಪ್ಪಾ ಎಂದೆಂದಿಗೂ ನನ್ನ ಹೃದಯದಲ್ಲಿ, ಆತ್ಮದಲ್ಲಿ, ಚಿಂತನೆ ಮತ್ತು ಕರ್ಮಗಳಲ್ಲಿ ಇದ್ದೇ ಇರುತ್ತಾರೆ.
ನಾನು ಅವರ ಸಾರ್ಥಕ ಬದುಕನ್ನಷ್ಟೇ ಆಚರಿಸುತ್ತೇನೆ; ಮರಣದ ಶೋಕಾಚರಣೆಯೆಂದೆಲ್ಲಾ ಹೇಳಿದರೆ ಅದು ಅವರಿಗೆ ಮಾಡುವ ಅವಮಾನವಾಗುತ್ತದಷ್ಟೇ!






ನೆನಪುಗಳನ್ನು ಅತ್ಯಂತ ಅಪ್ತವಾಗಿ ಹಿಡಿದಿಟ್ಟ ಬರಹ. ಕಾರ್ನಾಡರು ಮನೋಹರ ಗ್ರಂಥಮಾಲೆ ಕಚೇರಿ (ಧಾರವಾಡ)ಯ ಅಟ್ಟದ ಗ್ರಂಥಾಲಯದಲ್ಲಿ ಕುಳಿತು ಪಾನ್ ಜಗಿಯುತ್ತಾ ನನ್ನೊಡನೆ ಮಾತಾಡಿದ್ದು ಸುಳಿದು ಹೋಯಿತು. ಕವಿತಾ ಕಾರ್ನಾಡ ಅವರಿಗೆ ಥ್ಯಾಂಕ್ಸ ಹೇಳಲೇಬೇಕು..
ಆತ್ಮೀಯವಾದ, ಆಪ್ತವಾದ ಬರಹ. ತುಂಬಾ ಚೆನ್ನಾಗಿದೆ
Thanks for sharing this write-up here… very much touching.
ಕಾರ್ನಾಡ್ ಕಾಡುವ ಕವಿತೆ
ಕಡಲ ಕವಿತೆ ಥರ
ಮಂಜುನಾಥ ಆರ್.ಗೌಡರ
ಧಾರವಾಡ
ಕಾರ್ನಾಡ್ ರ ಬದುಕಿನ ಇನ್ನೊಂದು ಮಗ್ಗುಲ ಪರಿಚಯ ಮಾಡಿಕೊಡುವ ಮೂಲಕ ಮತ್ತೆ ಅವರ ಸರಳ ಸಜ್ಜನಿಕೆಯನ್ನು ನೆನಪಿಸಿದ್ದಕ್ಕೆ ಧನ್ಯವಾದಗಳು.
ಮನೆಯೊಡೆಯನಾಗಿ ಮಗಳ ಕುರಿತ ಕಾರ್ನಾಡ್ ರ ಕಕ್ಕುಲಾತಿ ಓದಿ ಅಚ್ಚರಿ ಯಾಯಿತು,
ದಿಗ್ಗಜರಾಗಿ ಕೂಡ ಜನಸಾಮಾನ್ಯರಂತೆ ಬದುಕಿದ ಅವರ ಜೀವನ ಎಲ್ಲರಿಗೂ ಮಾದರಿಯಾಗಿತ್ತು.
ಡಿ.ಎಮ್ ನದಾಫ್
ಅಫಜಲಪುರ
ಕವಿತಾ ಕಾರ್ನಡ್ ಅವರು ತಮ್ಮ ಬಾಪ್ಪಾ ಡಾ.ಗಿರೀಶ್ ಕಾರ್ನಡ್ ಅವರ ಜೊತೆ ಒಡನಾಟದ , ಕಳೆದ ಕ್ಷಣಗಳ ಸವಿನೆನಪುಗಳನ್ನು ಓದಲು ಹೃದಯಸ್ಪರ್ಶಿಯಾಗಿತ್ತು. ಒಂದು ಒಳ್ಲೆಯ ಲೇಖನವನ್ನು ಕನ್ನಡಕ್ಕೆ ಅನುವಾದಿಸಿ ನಮಗೆ ನೀಡಿರುವುದಕ್ಕೆ ಪ್ರಸಾದ್ ನಾಯ್ಕ್ ಅವರಿಗೆ ಅಭಿನಂದನೆಗಳು.