ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗಿರಿಜಾ ಶಾಸ್ತ್ರಿ ಅಂಕಣ- ಮೇರಿ ಎಂಬ ಕರುಣೆಯ ಕಡಲು

ಗಿರಿಜಾಶಾಸ್ತ್ರಿ

ಸೋಫಾ ಒಂದರಲ್ಲಿ ಕುಳಿತು ನಾನು ಮತ್ತು ಮೇರಿ ಲೋಬೊ ಚಹಾ ಬಿಸ್ಕತ್ತು ಸೇವಿಸುತ್ತಿದ್ದೆವು. ಪಕ್ಕದಲ್ಲೇ ಇದ್ದ ಅವರ ಪಗ್ ತಳಿಯ ನಾಯಿ ೪ ವರುಷದ ಚೆಲ್ಸಿ ಯಾಕೋ ಗುರ್ ಎಂದಿತು. ‘ಬಿಸ್ಕತ್ ತಿಂತೀಯಾ ಮಗಳೇ’ ಎಂದು ತಾವು ತಿನ್ನುತ್ತಿದ್ದ ಬಿಸ್ಕತ್ತನ್ನು ಅದರ ಬಾಯಿಗೆ ಇಟ್ಟರು ಅದು ತಿನ್ನಲಿಲ್ಲ.

ಆ ನಾಯಿಯ ಎಂಜಲನ್ನು ತಾವೇ ಬಾಯಿಗೆ ಎಸೆದುಕೊಂಡರು. ನನಗೆ ಅಸಹ್ಯ ಎನ್ನೋದು ಹೊರಟು ಹೋಗಿದೆ ಮೇಡಂ, ನಿಜವಾಗಿ ನಾನು ಅಸಹ್ಯವನ್ನು ಬಿಟ್ಟಿದ್ದೇ  ಇವಳಿಂದ. ನಾನು ನರ್ಸ್ ಆಗಿ ಕೆಲಸ ಮಾಡುತ್ತಿದ್ದಾಗ ನನಗೆ ರೋಗಿಗಳ ಬಗ್ಗೆ ತುಂಬಾ ಕಳಕಳಿ, ಅನುರಕ್ತಿ (passion) ಇತ್ತು.

ಆನಂತರ ಒಂದು ಎನ್.ಜಿ.ಓ. ನಲ್ಲಿ ಕೆಲಸ ಮಾಡುವಾಗ ನಾನು ಎಲ್ಲಿ ರೋಗಿಗಳಿಂದ ದೂರವಾಗಿ ಬಿಡುತ್ತೇನೋ ಅವರನ್ನು ಮುಟ್ಟಲು ಸಾಧ್ಯವಾಗುವುದಿಲ್ಲವೋ ಎಂಬ ಭಯ ಹುಟ್ಟಿತು. ಆದರೆ ಆ ಭಯವನ್ನು ಬಿಡಿಸಿದವಳೇ ಈ ಚೆಲ್ಸಿ. ಆ ಮೇಲೆ ನಾನು ಮರಳಿ ದಾದಿಯ ಕೆಲಸಕ್ಕೆ ಹೋದೆ. ಸಮಾಧಾನವಾಯಿತು ಎಂದರು ಮೇರಿ.

ನಮ್ಮ ಅಸ್ಪೃಶ್ಯತೆಯಂತಹ ಪೀಡೆಗೆ, ಸಾಮಾಜಿಕ ಶ್ರೇಣೀಕರಣಕ್ಕೆ, ಇನ್ನೊಬ್ಬ ಮನುಷ್ಯ ಜೀವಿಯ ಬಗ್ಗೆ ಇರುವ ಈ ಅಸಹ್ಯವೇ ಕಾರಣ. ಈ ಅಸಹ್ಯವನ್ನು ಬಿಡೋದು ಎಷ್ಟು ಕಷ್ಟ? ಎಂದು ನಾನು ಹೇಳಿದಾಗ “ಇಲ್ಲ ಮೇಡಂ ತುಂಬಾ ಜನ (ಹಾಗೆ ಬಿಟ್ಟವರು) ಇದ್ದಾರೆ” ಎಂದರು. ಮೇರಿ ಕೇವಲ ಮನುಷ್ಯರ ಬಗೆಗೆ ಮಾತ್ರವಲ್ಲ, ಪ್ರಾಣಿಗಳ ಬಗೆಗೂ ಅಸಹ್ಯವನ್ನು ಮೀರಿದವರು. ಎಲ್ಲವನ್ನೂ ಒಳಗೊಳ್ಳುವುದು ಎಂದರೆ ಇದೇ ಅಲ್ಲವೇ? ‘ಬ್ರಹ್ಮ’ವನ್ನು ಅರಿಯುವುದು ಎಂದರೂ ಇದೇ ಏನೋ.

ನಾನು ಅವರ “ಸ್ನೇಹಬಂಧು” ಸ್ವಗೃಹ-ಮತ್ತು-ಸೇವಾಲಯಕ್ಕೆ ಹೋದಾಗ ಅವರು ಚಿಕಿತ್ಸೆ ಮಾಡಿದ ರೋಗಿಗಳ ಆಲ್ಬಮ್ ತೆಗೆದು ಒಂದೊಂದೇ ಪುಟ ತಿರುಗಿಸಿ ಕಥೆ ಹೇಳತೊಡಗಿದರು. ಅದೊಂದು ಆಲ್ಬಮ್ ಅಲ್ಲ ರೌರವ ನರಕದ ಪ್ರತಿಬಿಂಬ ಎನಿಸಿತು.

ಒಬ್ಬ ಮನುಷ್ಯನ ಫೋಟೋ ತೋರಿಸಿದರು. ಪೃಷ್ಠ ಭಾಗವೆಲ್ಲಾ ಸೆಲೆತು ಹುಣ್ಣಾಗಿತ್ತು. “ಮುಂದುಗಡೆಯೂ ಹಾಗೆ ಆಗಿದೆ ಮೇಡಂ” ಎಂದರು. ಕಾರಣ ಹಾಸಿಗೆ ಹಿಡಿದ ಆ ವ್ಯಕ್ತಿ ಸಾಯುತ್ತಾನೆ ಎಂದು ಗೊತ್ತಿದ್ದರೂ ಮನೆಯವರು ಅವನ ಡೈಪರ್ ಬದಲಿಸಿರಲಿಲ್ಲ. ಶೌಚದ ಕಡೆ ಗಮನಿಸಿದೆ, ರೊಟ್ಟಿಯ ಹಾಗೆ ಕಕ್ಕಸ್ಸು ಕಟ್ಟಿಕೊಂಡಿತ್ತು. ಮಗ ಸೊಸೆ ಸಂಬಂಧ ಹೇಳಿಕೊಳ್ಳದೇ ಬಂದು ಬಿಟ್ಟು ಹೋದರು. ಅವನನ್ನು ಬಿಸಿ ನೀರಿನಿಂದ ಚೆನ್ನಾಗಿ ತೊಳೆದು ಶುಭ್ರಗೊಳಿಸಿ. ಔಷಧಿ ಹಚ್ಚಿದೆ. ಒಂದು ವಾರ ಮುಂಚೆ ಕರೆದುಕೊಂಡು ಬಂದಿದ್ದರೂ ಅವನನ್ನು ಉಳಿಸಿಕೊಳ್ಳಬಹುದಿತ್ತು.

ಇವನು ನೋಡಿ, ಇವನಿಗೆ ಲಿವರ್ ಹಾಳಾಗಿತ್ತು. ಕೆ. ಆರ್. ಆಸ್ಪತ್ರೆಯಿಂದ ಕಳಿಸಿಬಿಟ್ಟರು. ನಾನು ಕರೆದುಕೊಂಡು ಬಂದು ಶುಶ್ರೂಷೆ ಮಾಡಿದೆ ಚೆನ್ನಾಗಿದ್ದ ಮೇಡಂ. ಆದ್ರೆ ಪುನಃ ಕುಡಿಯಲು ಶುರುಮಾಡಿದ. ಸತ್ತುಹೋದ.

ಇನ್ನೊಬ್ಬಳು, ಕಣ್ಣಿನ ಕ್ಯಾನ್ಸರ್ ನಿಂದ ನರಳುತ್ತಿದ್ದ ಹೆಂಗಸು. ಮಾಂಸಖಂಡಗಳೆಲ್ಲಾ ಕಣ್ಣಿನ ಹೊರಗೆ ಬಂದು ವಿಕಾರವಾಗಿ ಕಾಣುತ್ತಿದ್ದಳು. ಅವರು ಸ್ನೇಹ ಬಂಧು ಸೇವಾಲಯವನ್ನು ಪ್ರಾರಂಭಿಸುವುದಕ್ಕೂ ಮುಂಚೆ ಅವಳನ್ನು ತಮ್ಮ ಮನೆಯಲ್ಲಿಯೇ ಆ ರೋಗಿಯನ್ನು ಕೊನೆಯವರೆಗೂ ಇಟ್ಟುಕೊಂಡು ಚಿಕಿತ್ಸೆ ಮಾಡಿದರು.

ಇವನನ್ನು ನೋಡಿ ಮೇಡಂ, ಮಳವಳ್ಳಿ ಬಳಿಯವನು. ಫಿಲೇರಿಯಾಸಿಸ್ ಎನ್ನುವ ಖಾಯಿಲೆಯಿಂದ ನರಳುತ್ತಿದ್ದವನು. ಆಟೋದಲ್ಲಿ ಅವರ ಮನೆಗೆ ಕರೆದುಕೊಂಡು ಹೋದ. ಪೇಷೆಂಟ್ ಎಲ್ಲಿ ಎಂದು ಕೇಳಿದೆ. ನಾನೇ ಎಂದು ತನ್ನ ಮುಖದ ಮೇಲಿನ ಟವಲ್ ತೆಗೆದ ಮೇಡಂ! ಹುಳಗಳು ಬುಳು ಬುಳು (maggots) ಉದುರತೊಡಗಿದವು. ಅಸಾಧ್ಯ ವಾಸನೆ. ಏಡ್ಸ್ ರೋಗ ಕೂಡ ಇತ್ತು. ಎಲ್ಲವನ್ನೂ ಸ್ವಚ್ಛ ಗೊಳಿಸಿದೆ. ಸ್ವಲ್ಪ ದಿನ ಮನೆಗೆ ಬಂದು ಚಿಕಿತ್ಸೆ ತೆಗೆದುಕೊಂಡ, ಆಮೇಲೆ ಹೃದಯಾಘಾತದಿಂದ ತೀರಿಕೊಂಡ.

ಮೇರಿಯವರು ಮೂಲತಃ ಶಿಕಾರಿಪುರದವರು. ಅವರು ಜೀವಿತ ಫೌಂಡೇಷನ್ ನಿಂದ ಹೊರಬಂದ ಮೇಲೆ, ಮೈಸೂರಿನ ವಿಜಯನಗರದ ಬಳಿಯ ಮೇಟಗಳ್ಳಿಯಲ್ಲಿ ತಮ್ಮ ಮನೆಯಲ್ಲೇ ಸ್ನೇಹಬಂಧು ಚಾರಿಟೆಬಲ್ ಟ್ರಸ್ಟ್ ಎನ್ನುವ ತಮ್ಮದೇ ಸಂಸ್ಥೆಯನ್ನು ಹುಟ್ಟು ಹಾಕಿದರು. ತಾವು ವಾಸಕ್ಕಿದ್ದ ಕೆಳಗಿನ ಎರಡು ಮನೆಯನ್ನೇ ತಮ್ಮ ಸೇವಾಕ್ಷೇತ್ರವನ್ನಾಗಿ ಪರಿವರ್ತಿಸಿದರು. ೨೨ ವರುಷದಿಂದ ಕ್ಯಾನ್ಸರ್, ಏಡ್ಸ್ ಮುಂತಾದ ಮಾರಾಣಾಂತಿಕ ರೋಗದಿಂದ ನರಳುತ್ತಿರುವವರ ಮನೆಮನೆಗೆ ಭೇಟಿ ಕೊಟ್ಟು ಉಪಶಮನ ಚಿಕಿತ್ಸೆ (palliative) ನೀಡುತ್ತಾ ಬಂದಿದ್ದಾರೆ.

ಜೊತೆಗೆ ಈಗ ತಮ್ಮದೇ ಸೇವಾಶಾಲೆಯಲ್ಲ್ಲಿ ಕೆಲವು ಒಳ ರೋಗಿಗಳ ಶುಶ್ರೂಷೆ ಮಾಡುತ್ತಿದ್ದಾರೆ. ಇಲ್ಲಿಗೆ ಬರುವವರು ನಿರ್ಗತಿಕರು, ಬೀದಿಯಲ್ಲಿ ಬಿದ್ದವರು, ಹಾಸಿಗೆ ಹುಣ್ಣಾಗಿ ಮನೆಯವರ ಆರೈಕೆಯಿಂದ ಕಡೆಗಣಿಸಲ್ಪಟ್ಟವರು, ಇವರಿಗೆಲ್ಲ ಉಚಿತವಾಗಿ ತಮ್ಮ ಸ್ವಂತ ಹಣದಿಂದ ಚಿಕಿತ್ಸೆ ಕೊಡುತ್ತಾರೆ. ಗುಣವಾದ ನಂತರ ಕೆಲವರು ಮನೆಗೆ ತೆರಳುವುದೂ ಉಂಟು, ಪ್ರೀತಿಯಿಂದ ನೋಡಿಕೊಳ್ಳುತ್ತೇವೆ ಎಂದು ಮನೆಯವರು ಆಶ್ವಾಸನೆ ಕೊಟ್ಟರೆ ಮಾತ್ರ ವಾಪಸ್ಸು ಕಳುಹಿಸುತ್ತಾರೆ.

ಉಳಿದವರು ಇವರ ಆಶ್ರಯದಲ್ಲಿಯೇ ಕೊನೆಯುಸಿರೆಳೆಯುತ್ತಾರೆ. ಯಾರಾದರೂ ಬೀದಿ ಬದಿಯಲ್ಲಿ ಬಿದ್ದಿರುವ ಸುದ್ದಿ ತಿಳಿದರೆ ನೇರವಾಗಿ ಅವರ ಸಹಾಯಕ್ಕೆ ಧಾವಿಸುತ್ತಾರೆ. ಪೊಲೀಸ್ ಪರವಾನಗಿಯನ್ನು ಪಡೆದುಕೊಂಡು ಮನೆಗೆ ಕರೆತರುತ್ತಾರೆ. ಈ ನಾಲ್ಕಾರು ವರುಷಗಳಲ್ಲಿ ಹೀಗೆ ಅಕ್ಷರಶಃ ಹುಳಹತ್ತಿ ಕೊಳೆತು ನಾರುವವರನ್ನು, ಕ್ಯಾನ್ಸರ್ ರೋಗದ ಕೊನೆಯ ಹಂತದಲ್ಲಿರುವವರನ್ನು, ಏಡ್ಸ್ ರೋಗಿಗಳನ್ನು, ದಾರಿ ತಪ್ಪಿದವರನ್ನು ಕರೆದುಕೊಂಡು ಬಂದು ಆಶ್ರಯ ಕೊಟ್ಟು ಚಿಕಿತ್ಸೆ ನೀಡಿದ ಸಂಖ್ಯೆ ಮುನ್ನೂರಕ್ಕೂ ಹೆಚ್ಚು.

ಬೀದೀಲಿ ಹೋಗೋ ಮಾರೀನ ಮನೆಗೆ ಕರೆದುಕೊಂಡು ಬಂದರು ಎನ್ನುವ ಗಾದೆ ಇದೆ. ಮಾರಿ ಎಂದರೆ ಭಯಂಕರ ಖಾಯಿಲೆ ಎಂಬ ಅರ್ಥದಲ್ಲಿ, ಮೇರಿ ಅಕ್ಷರಶಃ ಮಾಡುತ್ತಿರುವುದು ಅದನ್ನೇ. ಬೀದಿಯಲ್ಲಿ ಬಿದ್ದವರನ್ನು ಮನೆಗೆ ಕರೆದುಕೊಂಡು ಚಿಕಿತ್ಸೆ ನೀಡಿ ಶುಶ್ರೂಷೆ ಮಾಡಿ ಅವರನ್ನು ಅವರವರ ಮನೆಗೆ ಕಳುಹಿಸುತ್ತಿದ್ದಾರೆ. ಮನೆಗೆ ಬೇಡವಾದವರನ್ನು ತಮ್ಮಲ್ಲೇ ಇಟ್ಟುಕೊಂಡು ಸಲಹುತ್ತಿದ್ದಾರೆ.

೫೬ ವರುಷದ ಮೇರಿಯವರು ಸಧೃಡಕಾಯದ ಆರೋಗ್ಯವಂತ ಹೆಣ್ಣು ಮಗಳೇನಲ್ಲ. ಅವರು ಸ್ವತಃ ಸತ್ತು-ಸತ್ತು ಬದುಕಿದ ಮಹಿಳೆ. ಬಾಲ್ಯದಿಂದಲೇ ಆಸ್ಟಿಯೋಮಯಲೈಟಿಸ್ ಎನ್ನುವ ಮೂಳೆಯ ಸೋಂಕಿನ ಖಾಯಿಲೆ. ಶಾಲೆಗೆ ಹೋದದ್ದಕ್ಕಿಂತ ಆಸ್ಪತ್ರೆಯಲ್ಲಿ ಕಾಲಕಳೆದದ್ದೇ ಹೆಚ್ಚು ಎನ್ನುತ್ತಾರೆ ಮೇರಿ.  ಜೊತೆಗೆ ರೋಗ ಉಲ್ಬಣಿಸಿ ಫಿಟ್ಸ್ ಬಂದು ಬದುಕುವ ಭರವಸೆಯೇ ಇರಲಿಲ್ಲ, ಎನ್ನುವ ಮೇರಿಗೆ ಬಾಲ್ಯದಲ್ಲಿ ತಾವು ಉಂಡ ನೋವೇ ಇತರರ ನೋವನ್ನು ಅರ್ಥಮಾಡಿಕೊಳ್ಳಲು ಸಹಕಾರಿಯಾಯಿತು, ಆದುದರಿಂದಲೇ ದಾದಿಯ ಕೆಲಸಕ್ಕೆ ಸೇರಿಕೊಂಡೆ ಎನ್ನುತ್ತಾರೆ.

ರೋಗಿಗಳ ಜೊತೆ ಒಡನಾಟವೆಂದರೆ ಅಪಾಯ ಕಟ್ಟಿಟ್ಟ ಬುತ್ತಿಯೇ. ರೋಗಿಗಳಿಗೆ ಚುಚ್ಚುಮದ್ದು ಕೊಡುವಾಗ ಎಷ್ಟೋ ಸಲ ತಾವೂ ಚುಚ್ಚಿಕೊಂಡದ್ದು ಇದೆ. ಅವರಿಗೆ ಹೆಪಟೈಟಿಸ್ ಬಂದದ್ದು ಹೀಗೆ ರೋಗಿಯೊಬ್ಬಳಿಗೆ ಚುಚ್ಚುವಾಗ ಆದ ಸೋಂಕಿನಿಂದ. ಸತ್ತೇ ಹೋಗುವೆನೆಂದು ಡಾಕ್ಟರುಗಳೆಲ್ಲಾ ಕೈ ಬಿಟ್ಟಿದ್ದರು, ಮೇಡಂ ಆದರೆ ನಾನು ಸಾಯಲಿಲ್ಲ ನೋಡಿ ಎಂದು ಮುಗುಳ್ನಗುತ್ತಾರೆ.

ಇಲ್ಲ, ಇಂತಹದೊಂದು ಮಹತ್ವದ ಸೇವೆಗಾಗಿಯೇ ದೇವರು ನಿಮ್ಮನ್ನು ಉಳಿಸಿದ ಎಂದು ನಾನು ಹೇಳಿದಾಗ ಹೌದು ಮೇಡಂ ದೇವರು ದೊಡ್ಡವನು ಎಂದರು. ಈಗಲೂ ಮೈಯೆಲ್ಲಾ ಸೆಳೆತ, ಸಯಾಟಿಕ್ ನರ ಡ್ಯಾಮೇಜಾಗಿದೆ, ಆದರೆ ರೋಗಿಗಳ ಶುಶ್ರೂಷೆಗೆ ಇಳಿದೆನೆಂದರೆ ಎಲ್ಲವೂ ಮರೆತು ಹೋಗುತ್ತದೆ ಎನ್ನುವ ಮೇರಿಯವರ ಅದಮ್ಯ ಉತ್ಸಾಹ ಬೆರಗುಗೊಳಿಸುತ್ತದೆ.

ಬೆಳಗಿನ ನಾಲ್ಕು ಗಂಟೆಗೆ ಏಳುತ್ತಾರೆ. ಮನೆಯ ಸ್ವಚ್ಛತೆ, ಒಳ ರೋಗಿಗಳಿಗೆ ಚಹ ಕಾಫಿ, ಅನಂತರ ನಾಷ್ಟಾ, ಅವರ ಡೈಪರ್ ಬದಲಿಸುವುದು, ಮುಖ ಕ್ಷೌರ ಮಾಡುವುದು, ಸ್ನಾನ ಮಾಡಿಸುವುದು. ಹಾಸಿಗೆಯಿಂದ ಏಳಲಾರದವರಿಗೆ ಅಲ್ಲೇ ಉಪಚಾರ, ಕೆಲವರಿಗೆ ಮಲಗಿದಲ್ಲೇ ಶ್ಯಾಂಪೂ ಹಾಕಿ ತಲೆಸ್ನಾನ. ಅಡುಗೆಯಾದ ನಂತರ ರೋಗಿಗಳಿಗೆ ಉಣಿಸುವುದು, ಅವರ ಬಟ್ಟೆ ಒಗೆಯುವುದು, ಸಂಜೆಯ ಚಹಾ ಅನಂತರ ಮಾರ್ಕೆಟ್ಟಿಗೆ ಹೋಗಿ ಸಾಮಾನು ಸರಂಜಾಮು, ರೋಗಿಗಳಿಗೆ ಬೇಕಾದ ಔಷಧ ತರುವುದು, ಮತ್ತೆ ರಾತ್ರಿ ಅಡುಗೆ, ಉಣಿಸುವುದು ಎಲ್ಲವನ್ನೂ ಏಕಾಂಗಿಯಾಗಿ ಮಾಡುತ್ತಾರೆ.

ಕೆಲಸದವರು ಬಂದರೂ, ರೋಗಿಗಳ ಬಟ್ಟೆ ಮುಟ್ಟಲು, ಅವರ ಡೈಪರ್ ಬದಲಿಸಲು ಹೇಸಿ, ಹೇಳದೇ ಕೇಳದೇ ಬಿಟ್ಟು ಹೋಗುವುದೂ ಉಂಟು.  ದಾನಿಗಳು ಕೊಡುವ ಹಣದಿಂದ ಮತ್ತು ಅಮೆರಿಕೆಯಲ್ಲಿ ಇರುವ ಮಗಳು ಕಳುಹಿಸುವ ಹಣದಿಂದ ಎಲ್ಲವನ್ನೂ ನಿಭಾಯಿಸುತ್ತಿದ್ದಾರೆ.

ಮದುವೆಯಾದ ೧೫ ವರುಷಕ್ಕೇ ಅನಾರೋಗ್ಯದಿಂದ ಗಂಡ ತೀರಿಕೊಂಡು ಇರುವ ಒಬ್ಬ ಮಗಳೂ ಮದುವೆಯಾಗಿ ಅಮೆರಿಕಾಕ್ಕೆ ತೆರಳಿದ ಮೇಲೆ ಏಕಾಂಗಿ ಪಯಣ ಇವರದು. ಇದನ್ನು ಇವರು ಹೋರಾಟ ಎನ್ನುವುದಿಲ್ಲ. ನನಗೆ ಇದು ಖುಷಿ ಕೊಡುವ ಕೆಲಸ ಎನ್ನುತ್ತಾರೆ. ನಮಗೆ ಇದು ಹುಚ್ಚೆಂಬಂತೆ ಕಾಣುತ್ತದೆ.

ಹೌದು, ಮೇರಿಯವರಿಗೆ ರೋಗಿಗಳ, ಅನಾಥರ, ನಿರ್ಗತಿಕರ ಹುಚ್ಚು. ರಸ್ತೆಯಲ್ಲಿ ಯಾವುದೇ ಬೇವಾರ್ಸಿಗಳು ಬಿದ್ದಿದ್ದರೂ ಫೋನು ಬರುವುದು ಇವರ ಸಂಸ್ಥೆಗೇ. ಹೋಗಿ ಕರೆದುಕೊಂಡು ಬರುತ್ತಾರೆ. ಹಾಗೆ ಮರೆಗುಳಿತನದಿಂದ ರಾಜಸ್ಥಾನದಿಂದ ತಪ್ಪಿಸಿಕೊಂಡು ಬಂದಿದ್ದ ಒಬ್ಬ ವ್ಯಕ್ತಿಯನ್ನು ಗುಣಪಡಿಸಿ ಅವನ ಊರಿಗೆ ಕಳುಹಿಸಿದ ಸಂಗತಿಯನ್ನು ಹೇಳುತ್ತಾರೆ. ಮನೆಯಲ್ಲಿ ಇಟ್ಟುಕೊಳ್ಳಲಾರದೇ ತಳ್ಳಲ್ಪಟ್ಟ ವೃದ್ಧರಿಗೂ ಇವರ ಮನೆಯೇ ಆಶ್ರಯ.

ಈಗಲೂ ಮೈಸೂರಿನ ಆಸುಪಾಸಿನ ಹಳ್ಳಿಗಳ ಮನೆ-ಮನೆಗೆ ಹೋಗಿ ಉಪಶಮನ ಚಿಕಿತ್ಸೆಯನ್ನು ಕೊಡುತ್ತಾರೆ. ಮನೆಯಿಂದ ಬಿಡಿಸಬಾರದು ಮನೆಯನ್ನು ರೋಗಿಗಳು ಬಹಳ ಹಚ್ಚಿಕೊಂಡಿರುತ್ತಾರೆ ಎನ್ನುವ ಮೇರಿ, ಅಲ್ಲದೇ ಮನೆಯವರಿಗೆ ಇಲ್ಲಿಗೆ ಕಳುಹಿಸುವುದಕ್ಕೆ ಪ್ರತಿಷ್ಠೆಯ ಪ್ರಶ್ನೆ. ಶ್ರೀಮಂತರ ಮನೆಯಲ್ಲಂತೂ ಯಾವುದೋ ಒಂದು ಮೂಲೆಯ ಕೋಣೆಯಲ್ಲಿ ಹಾಕಿರ್ತಾರೆ.

ಕೆಲವರಂತೂ ರೋಸಿ ಹೋಗಿ ತಾಯಿ-ತಂದೆಯರನ್ನೋ, ಅತ್ತೆ-ಮಾವಂದಿರನ್ನೋ ಕಳುಹಿಸುವಾಗ, ಕರೆದುಕೊಂಡು ಹೋಗಿ, ಆದರೆ ಜೀವಂತವಾಗಿ ಮಾತ್ರ ಕಳುಹಿಸಬೇಡಿ ಎನ್ನುತ್ತಾರೆ. ಇನ್ನೂ ಕೆಲವರು ಸಂಬಂಧಪಟ್ಟವರ ಮಕ್ಕಳು ತಾವು ಎಂಬುದನ್ನೂ ಮರೆಮಾಚಿ ಕರೆದುಕೊಂಡು ಬಂದು ಸೇರಿಸುತ್ತಾರೆ ಎಂದು ಹೇಳುವ ಮೇರಿಯವರು ಮಲಗುವುದು ರೋಗಿಗಳು ಮಲಗುವ ಕೋಣೆಯಲ್ಲೇ. ಆ ಕೋಣೆಯ ಮೇಲೆ ಅವರಿಗೆಂದೇ ಸುಸಜ್ಜಿತವಾದ ಮನೆಯಿದ್ದರೂ ಚೆಲ್ಸಿಯನ್ನು ಮಲಗಿಸಿಕೊಂಡು ರೋಗಿಗಳ ನಡುವೆಯೇ ಮಲಗಿ ಅವರ ಕಾವಲು ಕಾಯುತ್ತಾರೆ. ಅವರ ನರಳಾಟವೇ ಜೋಗುಳ ಅವರಿಗೆ.

ಸಮಸ್ಯೆಗಳು ಯಾವಾಗಲೂ ಇರುವುದಿಲ್ಲ ಮೇಡಂ, ಸುಖಾನೂ ಹಾಗೇ ಅಲ್ಲವಾ ಎಂದು ಸಂತಳ ಹಾಗೆ ನುಡಿಯುತ್ತಾರೆ. ರೋಗಿಗಳನ್ನು ಕಟ್ಟಿಕೊಂಡು ಅನೇಕ ಆರ್ಥಿಕ ಸಮಸ್ಯೆಗಳಿಂದ ಬಳಲುತ್ತಿರುವ ಮೇರಿಯವರು ಮನಸ್ಸು ಮಾಡಿದ್ದರೆ ತಮಗೆಂದು ಒಂದು ಮನೆಯನ್ನು ಇಟ್ಟುಕೊಂಡು ಉಳಿದ ಎರಡು ಮನೆಗಳನ್ನು ಬಾಡಿಗೆಗೆ ಕೊಟ್ಟು, ಅಮೆರಿಕೆಯ ಮಗಳ ಮನೆಗೆ ಹೋಗಿ ಬಂದು ಮಾಡುತ್ತಾ ಆರಾಮವಾಗಿ ತಮ್ಮ ಜೀವನ ಕಳೆಯಬಹುದಿತ್ತು.

ಆದರೆ, ಅಮೆರಿಕಾಗೆ ಹೋಗಿ ನಾನು ಏನು ಮಾಡಲಿ ಮೇಡಂ, ನನ್ನ ಕುಟುಂಬ ಇಲ್ಲಿದೆಯಲ್ಲಾ? ನಾನು ನನ್ನ ಚೆಲ್ಸಿಯನ್ನೇ ಬಿಡಲಾರೆ, ಇನ್ನು ಇವರನ್ನೆಲ್ಲಾ ಬಿಡುತ್ತೇನಾ? ಎಂದು ರೋಗಿಗಳ ಕಡೆಗೆ ಕೈಮಾಡಿ ತೋರಿಸುತ್ತಾರೆ.

ನಿಮ್ಮ ಕನಸೇನು ಎಂದು ಕೇಳಿದರೆ, ಈ ಸೇವಾಲಯ ಊರ್ಜಿತವಾಗಬೇಕು, ಸಮಾಜದ ಅಲಕ್ಷಿತ ವ್ಯಕ್ತಿಗಳ ವಿರುದ್ಧ ಹೋರಾಡುವುದಕ್ಕೆ ಒಂದು ಟೀಮ್ ಬೇಕು.

ಇಡೀ ಪ್ರಪಂಚದಲ್ಲಿರುವವರ ಮನಸ್ಸನ್ನು ಬದಲಿಸಲು ಸಾಧ್ಯವಿಲ್ಲ. ನಮಗಾದಷ್ಟು ಮಾಡಿದರೂ ಬಹಳ ಒಳ್ಳೆಯದೇ ಅಲ್ಲವೇ? ನಮ್ಮನ್ನು ನೋಡಿ ಇನ್ನೂ ಹತ್ತು ಜನ ಮುಂದೆ ಬರಬಹುದು ಎನ್ನುವ ಮೇರಿಯವರ ಧನಾತ್ಮಕ ದೃಷ್ಟಿಕೋನ ಯಾರಿಗಾದರೂ ಅಚ್ಚರಿ ತರಿಸುತ್ತದೆ.

ಕಾಲೆಳೆಯುವವರು, ಹೆಸರು ಕೆಡಿಸುವವರು ಅನೇಕರು ಇರುವಾಗ ಮೇರಿಯವರು ಇಂತಹ ಒಂದು ಸಂಸ್ಥೆ ನಡೆಸುತ್ತಿರುವುದು ಸುಲಭದ ಕೆಲಸವೇನಲ್ಲಾ ! ನಾನು ಶ್ರೀಮಂತಳಲ್ಲ, ಹೆಸರಿನ ಆಸೆ ನನಗಿಲ್ಲ.

ಏನೋ ಸ್ವಲ್ಪ ಕೌಶಲವಿದೆ ಅದನ್ನು ಬಳಸಿಕೊಳ್ಳುತ್ತಿದ್ದೇನೆ ಅಷ್ಟೇ ಎನ್ನುವ ಮೇರಿಯವರು, ಎಂತಹ ಸಮಸ್ಯೆಗಳು ಬಂದರೂ ತಮ್ಮ ಕೆಲಸದಿಂದ ವಿಮುಖರಾಗದಿರುವುದು, ಅವರು ತಮ್ಮ ಸೇವೆಯನ್ನು ಎಷ್ಟು ಹಚ್ಚಿಕೊಂಡಿದ್ದಾರೆ ಎಂಬುದನ್ನೇ ತಿಳಿಸುತ್ತದೆ. ನನ್ನ ಬದುಕಿಗೊಂದು ಉದ್ದೇಶ ಸಿಕ್ಕಿದೆ. ನಾನು ಬಹಳ ಖುಷಿಯಾಗಿದ್ದೇನೆ ಎನ್ನುತ್ತಾರೆ.

ತಮ್ಮ ಎಲ್ಲಾ ಕೆಲಸಗಳಿಂದ ಬಿಡುವಾದಾಗ ವಾರಕ್ಕೆ ಒಮ್ಮೆ ಆಹಾರದ ಪೊಟ್ಟಣಗಳನ್ನು ತಮ್ಮ ಚೀಲದಲ್ಲಿ ತುಂಬಿಕೊಂಡು ಹೊರಡುತ್ತಾರೆ. ಬೀದಿ ಬದಿಯಲ್ಲಿ ಹಸಿದು ಕಂಗಾಲಾದವರಿಗೆ ಹಂಚುತ್ತಾರೆ.

ಮೇರಿಯವರು ಔಷಧೋಪಚಾರಗಳನ್ನು ಮಾಡಿ ಮಾನಸಿಕವಾಗಿ ಧೈರ್ಯ ತುಂಬುತ್ತಿರುವುದರ ಜೊತೆಗೆ, ರೋಗಿಗಳನ್ನು ನೋಡಿಕೊಳ್ಳುವವರಿಗೆ (ಕೇರ್ ಟೇಕರ್ಸ್) ತರಬೇತಿ ಕೊಡುತ್ತಾರೆ. ರೋಗಿಗಳ ಮನೆಯವರಿಗೆ ಮತ್ತು ಅವರ ಸುತ್ತಮುತ್ತಲಿನ ಜನಕ್ಕೆ ಆರೋಗ್ಯ ತಿಳುವಳಿಕೆಯನ್ನು ನೀಡುತ್ತಾರೆ.

ಮೈಸೂರಿನ ಭಾರತ್ ಕ್ಯಾನ್ಸರ್ ಹಾಸ್ಪಿಟಲ್ನಲ್ಲಿ ಮೇಟ್ರನ್, ಹೆಗ್ಗಡದೇವನ ಕೋಟೆ ಹ್ಯಾಂಡ್-ಪೋಸ್ಟ್ ಬಳಿಯ ಮೈರಾಡಾ ಸಂಸ್ಥೆಗೆ ಸಂಬಂಧಪಟ್ಟ ನರ್ಸಿಂಗ್ ತರಬೇತಿ ಕಾರ್ಯಕ್ರಮಗಳಲ್ಲಿ ಹಿರಿಯ ಆರೋಗ್ಯ ತರಬೇತಿ ತಜ್ಞರಾಗಿ ಕೆಲಸ ನಿರ್ವಹಿಸಿರುವ ಮೇರಿಯವರು, ಮೈಸೂರಿನ ಯಾದವಗಿರಿಯ ಸಾರ್ವಜನಿಕ ಆರೋಗ್ಯ ಸಂಶೋಧನಾ ಸಂಸ್ಥೆಯಲ್ಲಿ ಕೌನ್ಸಲರ್ ಹಾಗೂ ಟ್ರೈನಿಂಗ್ ಕೋ-ಆರ್ಡಿನೇಟರ್ ಆಗಿ ಆಶಾ ಕೆಲಸಗಾರ್ತಿಯರಿಗೆ ತರಬೇತಿ ಕೊಡುವುದಲ್ಲದೇ, ಅನೇಕ ಮಹಿಳಾ ಸಂಘ ಸಂಸ್ಥೆಗಳು ಮತ್ತು ಇತರ ಸಂಸ್ಥೆಗಳ ಕಾರ್ಯಕ್ರಮಗಳಿಗೆ ಅತಿಥಿಯಾಗಿ ಭೇಟಿಕೊಟ್ಟು ರೋಗಿಗಳ, ವಯೋವೃದ್ಧರ ಸೇವಾಕಾರ್ಯಗಳ ಬಗ್ಗೆ ಹೊಸ ಬೆಳಕನ್ನು ಚೆಲ್ಲುತ್ತಿದ್ದಾರೆ.

ನನ್ನದು ಮನುಷ್ಯ ಧರ್ಮ ಎನ್ನುವ ಮೇರಿ ಆಯಾ ಧರ್ಮದ ರೋಗಿಗಳು ಬಯಸುವ ಹಾಗೆ ಧಾರ್ಮಿಕ ಗುರುಗಳನ್ನು ಕರೆಸಿ ಉಪದೇಶಗಳನ್ನೂ ಕೊಡಿಸುತ್ತಾರೆ. (ಸ್ಪಿರಿಚುಯಲ್ ಕೇರ್)

ಇವರ ಸೇವಾಕಾರ್ಯಗಳನ್ನು ಗುರುತಿಸಿ, ಸಾರ್ಥಕ ಸಾಧಕರು, ಬೆಸ್ಟ್ ಸೋಷಿಯಲ್ ವರ್ಕರ್ ಎಂಬ ಬಿರುದುಗಳೂ, ಜೆ.ಕೆ. ಟಯರ್ಸ್ ಕಂಪನಿಯ ಕ್ರೆಡಿಟ್ ಐ ಪುರಸ್ಕಾರ, ಶರಣು ವಿಶ್ವವಚನ ಫೌಂಡೇಷನ್ ಅವರ ಕಾಯಕಯೋಗಿಗೆ ಶರಣು ಪ್ರಶಸ್ತಿ ಮುಂತಾದ ಅನೇಕ ಸನ್ಮಾನ, ಪುರಸ್ಕಾರಗಳು ದೊರೆತಿವೆ.  ಮೇರಿಯವರ ಕಾರ್ಯವನ್ನು ಜನ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಬೆಂಬಲಿಸುವುದರ ಮೂಲಕ ಅವರ ಕನಸನ್ನು ನನಸಾಗಿಸಬೇಕಾಗಿದೆ.

ಶ್ರೀಧರ ಸ್ವಾಮಿಗಳು ಸಿಹಿಯ ಮೇಲಿನ ಮೋಹವನ್ನು ಮೀರಬೇಕು ಎಂದು ಸಗಣಿಯ ಜೊತೆಗೆ ಪೇಢೆಯನ್ನೋ ಬೆಲ್ಲವನ್ನೋ ಕಲಸಿ ತಿಂದರಂತೆ. ಮರುಳ ಶಂಕರದೇವ ಪ್ರಸಾದದ ಕುಳಿಯಲ್ಲಿ (ಎಂಜಲೆಲೆಯ ತೊಟ್ಟಿ) ಅಡಗಿ ಕುಳಿತ. ಇವರೆಲ್ಲ ಮಾಡಿದ್ದು ತಮ್ಮ ತಮ್ಮ ವೈಯಕ್ತಿಕ ವಿಕಾಸಕ್ಕಾಗಿ. ಆದರೆ ಮೇರಿಯವರು ಸಮಾಜ ಕಲ್ಯಾಣಕ್ಕಾಗಿ ಹೊಲಸನ್ನು ಹೊದ್ದುಕೊಂಡರು ಅದನ್ನೇ ಅಮೃತವೆಂಬಂತೆ ಕುಡಿದರು. ಅದ್ವೈತದ ಪರಮಸೀಮೆಯನ್ನು ಮುಟ್ಟುವುದೆಂದರೆ ಇನ್ನೇನು?

ಮೇರಿ ಲೋಬೋ : 8073827085, 9902612110

‍ಲೇಖಕರು avadhi

26 November, 2019

ನಿಮಗೆ ಇವೂ ಇಷ್ಟವಾಗಬಹುದು…

7 Comments

  1. Vasundhara k m

    ಅಪರೂಪದ ವ್ಯಕ್ತಿಯನ್ನು ಪರಿಚಯಿಸಿದ್ದೀರಿ.. ಇವರಿಗಲ್ಲವೇ ಭಾರತ ರತ್ನ ಕೊಡಬೇಕಾದುದು..?

  2. T S SHRAVANA KUMARI

    ಇನ್ನೇನೂ ಹೇಳಲಾರೆ, ಮನುಷ್ಯರೂಪಿ ದೇವರಿಗೆ ನಮಸ್ಕಾರ ಎನ್ನುವುದೊಂದನ್ನು ಬಿಟ್ಟು.

  3. Shivaswamy NG

    ನಾನು ಮೇರಿಯವರನ್ನು ಹತ್ತಿರದಿಂದ ನೋಡಿದ್ದೇನೆ,ಸಮಾಲೋಚಕನಾಗಿ ಸಂಸ್ಥೆಗೆ ಭೇಟಿ ನೀಡಿದ್ದೇನೆ,ಇವರೊಬ್ಬ ಅಪರೂಪದ ವ್ಯಕ್ತಿ, ಸ್ವಾಭಿಮಾನಿ,ಅವರು ಧನಾತ್ಮಕ ಚಿಂತನೆ ಅನುಕರಣೀಯ.ಹೇಳುವದಕ್ಕಿಂತ ಅವರನ್ನು ಅವರ ಸಂಸ್ಥೆಯಲ್ಲೇ ಭೇಟಿ ಮಾಡಿ ಅರಿಯಬೇಕು, ಮೇರಿಗೆ ಮೇರಿಯೇ ಸಾಟಿ ಅಂದರೂ ತಪ್ಪಾಗಲಾರದು.ಅವರಿಗೆ ನನ್ನದೊಂದು ಸಲಾಂ.

  4. Ahalya Ballal

    ಇಂಥವರೂ ಇರ್ತಾರಾ ಈ ಕಾಲದಲ್ಲಿ ಅನ್ನಿಸ್ತು! ಪರಿಚಯಿಸಿದ್ದಕ್ಕೆ ವಂದನೆ, ಗಿರಿಜಾ.

  5. mahima sanjeev Puthran

    ಗಿರಿಜಾ ಮೇಡಂ
    ಸಂತರು ಸೂಫಿಗಳು ಅನುಭಾವಿಗಳ ಬಗ್ಗೆ ಕೇಳಿದ್ದೆ, ಮೇರಿಯಮ್ಮ ಇವರೆಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ, ಅಸಹ್ಯಗಳನ್ನು ಮೀರಿದ್ದಾರೆ, ಅವರು ಅದಕ್ಕಿಂತಲೂ ಅಸಹ್ಯಕರವಾದ ಜಾತಿ ಧರ್ಮಗಳ ಹೊಲಸನ್ನು ಮೀರಿದ್ದಾರೆ
    ಅವರು ಮೀರಿದ್ದಾರೆ, ಹಾಗೆಂದೇ ಮೇರಿ…
    ನನ್ನ ಕೈ ತಾನೇ ತಾನಾಗಿ ಜೋಡಿಸಿದೆ, ಕಣ್ಣಲ್ಲಿ ಸದ್ದಿಲ್ಲದೆ ಹನಿಯೊಂದು ಓದಿದಾಕ್ಷಣ ಇಳಿದು ಹೋಗಿದೆ. ಪ್ರೇಮವೊಂದು,ಹಾರೈಕೆಯೊಂದು ಎದೆಯಲ್ಲಿದೆ, ಇಂದಲ್ಲ ನಾಳೆ ನಾನೂ ಈ ಮಾನಸಿಕ ಔನ್ಯತ್ಯ ಪಡೆಯಬಹುದೇ, ಮೀರಬಹುದೇ ಮೇರಿಯಮ್ಮ ಮೀರಿದ ಕಟ್ಟುಪಾಡುಗಳ? ಪ್ರಯತ್ನ ಜಾರಿಯಲ್ಲಿದೆ
    ನಿಮಗೆ ನನ್ನ ಬಿಗಿಯಪ್ಪುಗೆ….

  6. Girija

    ಎಲ್ಲರಿಗೂ ಧನ್ಯವಾದಗಳು

  7. Manohar Nayak

    ಈಗ ಓದಿದೆ.. ಮದರ್ ಮೇರಿಯಂತಹ ಮದರ್ ಥೇರೆಸಾರು ಇರುವ ವರೆಗೆ ಮನುಷ್ಯತ್ವ ಸಾಯದು..

    ದಯವಿಟ್ಟು ಈ ಕರುಣೆಯ ಕಡಲ ವಿಳಾಸ ಕಳುಹಿಸಿ. ನನ್ನ ಕಿರುತೊರೆಯನ್ನು ಆ ಕಡಲು ಮುಟ್ಟಿಸಬೇಕಿದೆ..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading