ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗಾಯಕಿ – ಕವಿ ಬಾಂಧವ್ಯ..

  • ಗಾನ ಕೋಗಿಲೆ ಎಚ್ ಆರ್ ಲೀಲಾವತಿ ಅವರ ಕೃತಿ ‘ಗಾನ ಯಾನ ಕಾವ್ಯ ಮಿಲನ’

 ಕವಿಗಳ ಜೊತೆಗಿನ ಒಡನಾಟದ ಕುರಿತ ಈ ಕೃತಿಯನ್ನು ‘ಬಹುರೂಪಿ’ ಪ್ರಕಾಶನ ಪ್ರಕಟಿಸಿದೆ.

ಈ ಕೃತಿಯ ಕುರಿತು ಬಿ ಕೆ ಮೀನಾಕ್ಷಿ ಅನಿಸಿಕೆ ಇಲ್ಲಿದೆ.

ಕೃತಿ: ಗಾನಯಾನ ಕಾವ್ಯ ಮಿಲನ

ಲೇಖಕರು: ಎಚ್ ಆರ್ ಲೀಲಾವತಿ

ಪ್ರಕಾಶಕರು: ಬಹುರೂಪಿ

ಬೆಲೆ : 250₹

ವಾಟ್ಸ್ ಅಪ್ ನಲ್ಲಿ ಕೊಳ್ಳಲು : 70191 82729 ಗೆ ಸಂಪರ್ಕಿಸಿ

ಆನ್ ಲೈನ್ ನಲ್ಲಿ ಕೊಳ್ಳಲು ಇಲ್ಲಿ ಕ್ಲಿಕ್ಕಿಸಿ : BAHUROOPI.IN

ನೆನಪಿನ ಕನ್ನಡಿಯಲ್ಲಿ ಕಂಡ ಮುಖಗಳು ಎಂಬ ಟ್ಯಾಗ್ ಲೈನ್ ಹೊತ್ತು ಹೊರಬಂದಿರುವ ಈ ಪುಸ್ತಕದ ವಿನ್ಯಾಸ, ಅಧ್ಯಾಯದ ಶೀರ್ಷಿಕೆಗಳು ಮತ್ತು ಇದರಲ್ಲಿನ ವ್ಯಕ್ತಿಚಿತ್ರಣಗಳು ಮನಮೋಹಕವಾಗಿವೆ. ಒಮ್ಮೆ ಪುಸ್ತಕ ಹಿಡಿದರೆ ಮುಗಿಸುವವರೆಗೂ ಕೆಳಗಿಡಲಾಗದಂತೆ ಓದಲು ಒತ್ತಾಯಿಸುತ್ತದೆ. ಅಂತೆಯೇ ಓದಿಯಾಯಿತು. ಓದಿದ ನಂತರ ಇದರ ಬಗ್ಗೆ ಬರೆಯಲೇ ಬೇಕೆಂಬ ತುಯ್ತ ಉಂಟಾಯಿತು.

ನಾಡಿನ ಪ್ರಸಿದ್ಧ ಗಾಯಕಿ ಶ್ರೀಮತಿ ಎಚ್.ಆರ್.ಲೀಲಾವತಿಯವರ ಸ್ನೇಹ-ಆತ್ಮೀಯತೆಗೆ ಮಿಡಿದವರ ಹದಿನೆಂಟು ವ್ಯಕ್ತಿಚಿತ್ರಣಗಳಿವೆ. ರಾಷ್ಟ್ರಕವಿ ಕುವೆಂಪು ಅವರಿಂದ ರಾಘವೇಂದ್ರ ಇಟಗಿಯವರವರೆಗೆ ಒಂದು ಸ್ಥೂಲವಾದ ಚಿತ್ರಣವನ್ನು ತಮ್ಮ ಲೇಖನಗಳಲ್ಲಿ ಮನದಲ್ಲಿ ಅಚ್ಚೊತ್ತುವಂತೆ ನೀಡಿದ್ದಾರೆ. ತಮ್ಮ ಕವನಗಳಿಗೆ ದನಿಯಾಗಿ ಮಿಡಿದ, ಜನ ಮಾನಸಕ್ಕೆ ತಮ್ಮನ್ನು ತಲುಪಿಸಿದ ಲೀಲಾವತಿಯವರ ಬಗೆಗೆ ಕವಿಗಳಿಗೆ ಧನ್ಯತಾ ಭಾವವಿದೆ. ಅಂತೆಯೇ ಕವಿಗಳ ಬಗೆಗೂ ವಿಶೇಷವಾದ ಗೌರವವುಳ್ಳ ಲೇಖಕರು ಅವರನ್ನು ಅತ್ಯಂತ ಪ್ರೀತಿಯಿಂದ ಬರವಣಿಗೆಗಿಳಿಸಿದ್ದಾರೆ.

ನಾನು ಪುಸ್ತಕ ತಿರುವಿ ಹಾಕುತ್ತಾ ಮೇಡಂ ಅವರನ್ನು ಕೇಳಿದೆ, `ಇಲ್ಲಿಯ ಶೀರ್ಷಿಕೆಗಳನ್ನು ತುಂಬ ಅರ್ಥವತ್ತಾಗಿ ನೀಡಿದ್ದೀರಿ. ಓದಲಿಕ್ಕೇ ಖುಷಿಯಾಗುತ್ತದೆ’ ಅಂದದ್ದಕ್ಕೆ, `ನಾನಲ್ಲ, ಮೋಹನ್ ಕೊಟ್ಟಿರೋದು.’ ಎಂಬ ಪ್ರಾಮಾಣಿಕ ಉತ್ತರ ಅವರಿಂದ ಬಂದಿತು. ಕವಿಗೆ ಸಂಬಂಧಪಟ್ಟ, ಕವಿತೆಗಳ ಅರ್ಥಗರ್ಭಿತ ಶೀರ್ಷಿಕೆಗಳು! ಉದಾಹರಣೆಗೆ, ಮಲ್ಲಿಗೆಯೊಡನೆ ನಡೆದು ಬಂದರು ಕೆ.ಎಸ್. ನರಸಿಂಹಸ್ವಾಮಿ, ಬೆಂಕಿ ಬಿದ್ದಿದೆ ಎಂದು ತಳಮಳಿಸಿದರು ಕಯ್ಯಾರ ಕಿಞ್ಞಣ್ಣ ರೈ, ಅವರು ದಿವ್ಯಾಂಬರ ಸಂಚಾರಿ…..ಜಿ.ಎಸ್.ಎಸ್.! ಹೀಗೆ ಎಲ್ಲವೂ ಸುಂದರ ಶೀರ್ಷಿಕೆಗಳು!

ಈ ಪುಸ್ತಕವನ್ನು ಓದುತ್ತಾ ಹೋದಂತೆ ಕವಿ-ಲೇಖಕರಿಬ್ಬರ ನಡುವಿನ ಆಪ್ತತೆ ನಮಗೂ ಅರಿವಿಗೆ ಬರುತ್ತದೆ. `ಲೀಲಾವತಿ, ನೀವು ನನ್ನ ಕವನಗಳನ್ನು ಹಾಡದಿದ್ದಿದ್ದರೆ, ನನ್ನ ಕವನ ಸಂಕಲನಗಳು ಕಪಾಟಿನಲ್ಲೇ ಇರುತ್ತಿದ್ದವು’ ಸುಮಾರು ನೂರಾಮೂವತ್ತು ಕವನಗಳನ್ನು ಲೀಲಾವತಿಯವರು ತಮ್ಮ ಸಿರಿಕಂಠದಲ್ಲಿ ಸಹೃದಯರಿಗೆ ತಲುಪಿಸಿರುವ ಬಗ್ಗೆ ಕುವೆಂಪು ಅವರ ಮೆಚ್ಚು ನುಡಿಗಳಿವು!!

ಹಾಗೇ ಜಿ.ಎಸ್ ಎಸ್.ಅವರು ತರೀಕೆರೆಯ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದು, ಊಟಕ್ಕೆ ನಿಲ್ಲಿಸಿದ ಹೋಟೆಲಿನ ರೇಡಿಯೋದಿಂದ ಉಡುಗಣ ವೇಷ್ಠಿತ ತೇಲಿ ಬಂದಿದ್ದನ್ನು ಕೇಳಿ ರೋಮಾಂಚಿತರಾದ ಶಿವರುದ್ರಪ್ಪನವರು, `ನಾನು ಒಬ್ಬ ಕವಿಯೇ ನಿಜ!’ ಎಂದು ತಮ್ಮ ಬಗ್ಗೆ ತಾವೇ ಹೆಮ್ಮೆ ಪಟ್ಟರಂತೆ. ಅಡಿಗರ ಬಗ್ಗೆ, ಅವರ ಜೀವನದ ಏಳುಬೀಳುಗಳನ್ನೂ ಚಿತ್ರಿಸಿರುವ ಲೇಖಕರು ಅವರ ಕಡೆಗಾಲದ ಚಿತ್ರಣವನ್ನೂ ನೀಡಿದ್ದಾರೆ. ಲೇಖಕರಿಗೆ ಅತ್ಯಂತ ಆಪ್ತವಾಗಿದ್ದ, ಕಷ್ಟಸುಖಗಳಲ್ಲಿ ಸಲಹೆ ಸೂಚನೆಗಳನ್ನು ನೀಡುತ್ತಿದ್ದ ಶಿವರಾಮ ಕಾರಂತರ ನೆನಪು ಲೇಖಕರ ಮನಸ್ಸಿನಲ್ಲಿ ವಜ್ರದಂತೆ ನಿಂತಿದೆ. ಲೀಲಾವತಿಯವರ ಸ್ಮರಣಶಕ್ತಿ ಅಗಾಧವಾದುದು.

ಈ ತೊಂಭತ್ತರ ಹರೆಯದಲ್ಲೂ ತಮ್ಮ ನೆನಪಿನ ಬುತ್ತಿಯನ್ನು ಬಿಚ್ಚಿಕೊಂಡು ಎಲ್ಲರ ಬಗ್ಗೆಯೂ ಸಿಹಿಯನ್ನೇ ಬರೆದು, ಸವಿಯೂಟವನ್ನು ಉಣಬಡಿಸಿದ್ದಾರೆ. ತಮ್ಮ ಸಂಪರ್ಕಕ್ಕೆ ಬಂದ ಕವಿಗಳೆಲ್ಲರ ಹುಟ್ಟು, ಸಾಹಿತ್ಯಪ್ರೀತಿ, ತಮಗೆ ಪರಿಚಯವಾದ ಸಂದರ್ಭ, ಅವರ ವಿಶೇಷ ಗುಣಗಳನ್ನೆಲ್ಲ ಅತ್ಯಂತ ಪ್ರೀತಿಯಿಂದ ದಾಖಲಿಸಿದ್ದಾರೆ. ಕವಿಗೆ, ಕವಿತೆ ಬರೆದದ್ದು ಗೊತ್ತು. ಕವಿತೆಯನ್ನು ಹಾಡಾಗಿ ಕೇಳಿದ್ದು ಗೊತ್ತು. ಆದರೆ ಅದರ ಹಿಂದಿನ ಇತಿಹಾಸವನ್ನು, ಘಟನೆಗಳನ್ನು ಲೀಲಾವತಿ ಮೇಡಂ ಮನಸ್ಸಿಗೆ ಆಹ್ಲಾದವೆನಿಸುವಂತೆ ಕಟ್ಟಿಕೊಟ್ಟಿದ್ದಾರೆ. ಅದಕ್ಕೊಂದು ಮುದ್ದಾದ ಉದಾಹರಣೆಯಿದೆ. ವಿ. ಸೀತಾರಾಮಯ್ಯನವರು ಆಕಾಶವಾಣಿಯಲ್ಲಿ ಭಾಷಣ ವಿಭಾಗದ ಮುಖ್ಯಸ್ಥರ ಹುದ್ದೆಯನ್ನ ಅಲಂಕರಿಸಿದಾಗ, ಹಾಡಲು ಸಿದ್ಧವಾಗಿ ಬಂದಿದ್ದ ಲೇಖಕರನ್ನು ಹಾಡಿಸಿದ್ದು.

ಪು.ತಿ.ನ.ರ ಕವನವನ್ನು `ಕೆಟ್ಟೆನೆಲಾ ಕೆಟ್ಟೆನೆಲಾ ಒಲವೇ…’ ಕವನವನ್ನು ಹಾಡಿದಾಗ, ಹೀಗಲ್ಲ ಹಾಡುವುದು ಹೀಗೆ ಎಂದು ಹಾಡಿ ತೋರಿಸುತ್ತಿದ್ದರು. ಹಾಡಿ ತೋರಿಸಿದ್ದು ಸರಿಯೇ. ಆದರೆ ಪ್ರತಿಬಾರಿ ತೋರಿಸಿದಾಗಲೂ ಅವರದ್ದು ವೈವಿಧ್ಯಮಯ ರಾಗಗಳು!! ಸಾಹಿತ್ಯೋತ್ತಮರಾಗಿದ್ದವರಿಗೆ ಸಂಗೀತ ಬರಲೇ ಬೇಕೆಂದಿಲ್ಲವಲ್ಲ! ಕಡೆಗೆ ಯಾವ ರಾಗವನ್ನೂ ಒಪ್ಪದೆ ಹೇಗಾದರೂ ಹಾಡಿಕೊಳ್ಳಿ ಎಂದು ಬೇಸತ್ತು ಹೊರನಡೆದರಂತೆ. ದೊಡ್ಡ ವಿದ್ವಾಂಸರು ವಿ.ಸೀ.ಯವರು, ಸಂಗೀತವನ್ನು ರಕ್ತಗತವಾಗಿಸಿಕೊಂಡವರ ಮುಂದೆ ಹೀಗೆ ಆಡಿದ್ದು ಓದುತ್ತಿದ್ದರೆ ತುಟಿಯಂಚಿನಲ್ಲಿ ನಗು ಚಿಮ್ಮುವುದಂತೂ ಖಂಡಿತ. ಹಾಗೇ ಇನ್ನೊಂದು ಪ್ರಸಂಗ ಹೇಳುತ್ತಾರೆ, ಕವನಗಳಿರುವುದು ಹಾಡುವುದಕ್ಕಲ್ಲ, ಓದಿಕೊಳ್ಳುವುದಕ್ಕೆ ಎಂದ ಬಿ.ಸಿ. ರಾಮಚಂದ್ರ ಶರ್ಮರ ಕವನವೇ, ಅವರು ಈ ಹೇಳಿಕೆ ಕೊಟ್ಟ ಒಂದೆರಡು ತಿಂಗಳಲ್ಲೇ “ತಿಂಗಳ ಹೊಸ ಹಾಡು” ಆಗಿ `ನವಸುಮ` ಕಾರ್ಯಕ್ರಮದಲ್ಲಿ ಶರ್ಮರದೇ ಕವನ ಅನುರಣಿಸಿತು!

ನಂತರ ಮೈಸೂರಿನ ಕಲಾಮಂದಿರದಲ್ಲಿ ಲೇಖಕರನ್ನು ಭೇಟಿಯಾದ ಬಿ.ಸಿ.ಆರ್. ಅವರು, ಲೀಲಾವತಿ ಮೇಡಂಗೆ ಹೇಳಿದರಂತೆ, `ನೋಡಿ, ನನ್ನ ಹೊಸ ಕವನಸಂಕಲನದಲ್ಲಿ ನೀವು ಹಾಡಬಹುದಾದಂತಹ ಕವನಗಳಿವೆ.’ ಎಂದರಂತೆ. ಇಂತಹ ರಸಪ್ರಸಂಗಗಳನ್ನು ಮೇಡಂ ಬಹಳ ಸ್ಫುಟವಾಗಿ ದಾಖಲಿಸಿದ್ದಾರೆ. ಆಕಾಶವಾಣಿಗೆ ಲೀಲಾವತಿಯನ್ನು ಏಕೆ ಆಯ್ಕೆ ಮಾಡಿದಿರಿ ಎಂದು ಬುಸುಗುಟ್ಟಿದ ಪು.ತಿ.ನ. ಅವರ ಅಹಲ್ಯೆಗೆ ಸಂಗೀತ ನಿರ್ದೇಶನ ಲೀಲಾವತಿಯವರದ್ದೇ! `”ಮನಸು ಮಾತ ಪಡೆಯುತಿದೆ’ ಕವನಕ್ಕೆ ರಾಗ ಸಂಯೋಜನೆ ಲೀಲಾವತಿಯವರದ್ದೇ.

ಕಹಿ ಪ್ರಸಂಗವೊಂದರ ಹಿನ್ನೆಲೆಯ ಸತ್ಯವನ್ನರಿಯದ ಪುತಿನ ಅವರು ಲೀಲಾವತಿಯವರ ಮೇಲೆ ಹರಿಹಾಯ್ದದ್ದು ಎಷ್ಟು ನಿಜವೋ ಅಷ್ಟೇ ನಿಜ, ಲೀಲಾವತಿಯವರ ಮುದ್ದುಕೃಷ್ಣನ ಕವನಗಳಿಗೆ ಮುನ್ನುಡಿ ಬರೆದು, ಅದಕ್ಕೆ `ಶ್ರೀಹರಿಗೀತ’ವೆಂದು ನಾಮಕರಣ ಮಾಡಿದ್ದು ಕೂಡಾ!!ಪು.ತಿ.ನ. ಅವರ ಆಸೆಯೊಂದನ್ನು ತೀರಿಸಲಾಗದ ಬಗ್ಗೆ ಬಹುಶಃ ಲೇಖಕರ ಮನಸ್ಸಿನಲ್ಲಿ ಇನ್ನೂ ವಿಷಾದ ಭಾವವಿರಬಹುದೇ ಅನಿಸುತ್ತದೆ. ತನ್ನನ್ನು ಕೇವಲ ನಿತ್ಯೋತ್ಸವ ಕವಿ ಎಂದರಲ್ಲ ಎಂಬ ನಿಸಾರರ ಬೇಸರ, ಖಡಕ್ ಮಾತಿನ ಎನ್. ಎಸ್. ಎಲ್., ಹೀಗೆ ಅನೇಕಾನೇಕ ಪ್ರಸಂಗಗಳು ಇಲ್ಲಿ ಓದಲು ಸಿಗುತ್ತವೆ. ಮನಸ್ಸಿಗೆ ಮುದ ನೀಡುತ್ತವೆ.

ಲೀಲಾವತಿಯವರ ಬರವಣಿಗೆಯಲ್ಲಿ ಯಾವುದೇ ಅಬ್ಬರವಿಲ್ಲ, ರಭಸವಿಲ್ಲ, ಅವಸರವಿಲ್ಲ. ಇವರ ಬರಹ ಹೇಗಿದೆಯೆಂದರೆ ಶಾಂತವಾಗಿ ಸದ್ದಿಲ್ಲದೆ ಮೆಲ್ಲಗೆ ಸಣ್ಣ ಅಲೆಗಳನ್ನು ಸೃಷ್ಟಿಸಿ ಸಾಗುತ್ತಾ ಹೋಗುವ ನದಿಯಂತಿದೆ. ಎಲ್ಲಿಯೂ ಉತ್ಪ್ರೇಕ್ಷೆಯಿಲ್ಲ. ಇವರ ಬರವಣಿಗೆಯಲ್ಲಿ ಭಾವನೆಗಳ ಓಘ, ಮನಸ್ಸಿನ ಸಮಸ್ಥಿತಿಯ ನಿರ್ಲಿಪ್ತತೆ, ಚಿತ್ರಣಗಳನ್ನು ಕಟ್ಟಿಕೊಡುವ ತಾದಾತ್ಮ್ಯತೆ ಓದುಗರ ಮನಸ್ಸನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುತ್ತವೆ. ಇದೊಂದು ಸಂಗ್ರಹಯೋಗ್ಯ ಪುಸ್ತಕ.

ದೊಡ್ಡವರ ಬಗೆಗಿನ ಘಟನೆಗಳನ್ನು ಓದುವುದೇ ಒಂಥರಾ ಅವರ ಕಾಲಘಟ್ಟದಲ್ಲಿದ್ದಂತೆ ಭಾಸವಾಗುತ್ತದೆ. ನನಗೆ ಇವರ ಕೃತಿಗಳನ್ನು ಓದಿ, ಕಣ್ಣಾಡಿಸಿ, ಕೆಲವನ್ನು ಮನದಟ್ಟು ಮಾಡಿಕೊಂಡ ಮೇಲೂ ತನ್ನ ಒಡನಾಟಕ್ಕೆ ಬಂದ ವ್ಯಕ್ತಿಗಳನ್ನು ಇಷ್ಟೊಂದು ನಿಷ್ಠರಾಗಿ ಸ್ಮರಿಸುವ ಹಿರಿಯಗುಣ ಲೀಲಾವತಿಯವರಂತಹ ಹಿರಿಯರಲ್ಲಿ ಮಾತ್ರ ಕಾಣಲು ಸಾಧ್ಯ ಅನಿಸಿದ್ದು ಸುಳ್ಳಲ್ಲ. ಇಂತಹ ಉತ್ತಮ ಹೊತ್ತಗೆಯನ್ನು ಓದಿನಲ್ಲಿ ಅಭಿರುಚಿಯಿರುವ ಓದುಗರಿಗೆ ನೀಡಿದ ಬಹುರೂಪಿಗೆ ವಂದನೆಗಳು.

‍ಲೇಖಕರು Admin

20 September, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading