
ರಾಜಾರಾಂ ತಲ್ಲೂರು
ರಾಜ್ಯಪಾಲರು De Jure ರಾಜ್ಯದ ಮುಖ್ಯಸ್ಥರಾದರೆ, ಮುಖ್ಯಮಂತ್ರಿಗಳು De facto ರಾಜ್ಯದ ಮುಖ್ಯಾಧಿಕಾರಿ ಎಂಬುದು ನಾವು ಓದಿರುವ ಸಂವಿಧಾನ. ಮುಖ್ಯಮಂತ್ರಿಗಳು ತಮ್ಮ ವಿವೇಚನೆ ಬಳಸಿ, ಪರಮಾಧಿಕಾರವನ್ನು ಚಲಾಯಿಸಿ ತನ್ನ ಸಚಿವ ಸಂಪುಟವನ್ನು ಆರಿಸಿಕೊಳ್ಳಬೇಕು ಮತ್ತು ಮುಖ್ಯಮಂತ್ರಿಗಳ ಶಿಫಾರಸಿನಂತೆ ರಾಜ್ಯಪಾಲರು ಸಚಿವ ಸಂಪುಟವನ್ನು ನೇಮಿಸಬೇಕು – ಇದು ಕ್ರಮ. ಆದರೆ, ಈಗೀಗ “ಹೈಕಮಾಂಡು” “ಪ್ರಾದೇಶಿಕ ಸಮತೋಲನ” “ಜಾತಿ ಪ್ರಾತಿನಿಧ್ಯ” “ಕಾಸಿನ ಪ್ರಭಾವ” “ವಂಶ ಪಾರಂಪರ್ಯ” ಮೊದಲಾದ ಶಬ್ದಗಳು ಪ್ರತಿಯೊಂದೂ ಸಂಪುಟ ರಚನೆ ಆಗುವಾಗ ಸಂವಿಧಾನದತ್ತ ಶಬ್ಧಗಳೋ ಎಂಬಂತೆ ಪ್ರಯೋಗದಲ್ಲಿರುತ್ತವೆ.
ವ್ಯಕ್ತಿಯ ಸರಾಸರಿ ಜೀವನಾವಧಿ ಹೆಚ್ಚಳವಾಗುವುದು ಒಂದು ದೇಶದ ಅಭಿವೃದ್ಧಿಯ ಸೂಚ್ಯಂಕ ಎನ್ನಲಾಗುತ್ತದೆ. ರಾಜಕೀಯದಲ್ಲಿ ಮಾತ್ರ ಇದು ರಿವರ್ಸ್ ಗೇರಿನಲ್ಲಿದೆ. “ಹಿರಿಯ” ನಾಯಕರು ಇನ್ನೂ ಸಕ್ರಿಯವಾಗಿರುವಾಗಲೇ, ತಮ್ಮ ಬದುಕು ಬರೇ ಚಾಕರಿಯಲ್ಲೇ ಮುಗಿದುಹೋಗುತ್ತದಲ್ಲಾ ಎಂಬ “ವೃತ್ತಿ” ರಾಜಕೀಯದ ಆತಂಕಗಳೇ ಈವತ್ತು ಸಂಪುಟ ಸಂಕಟಗಳಿಗೆ ಮೂಲ ಕಾರಣ.
2003ರ ತನಕದ ಮುಖ್ಯಮಂತ್ರಿಗಳಲ್ಲಿ ಇದಕ್ಕೊಂದು ರೆಡಿಮೇಡ್ ಪರಿಹಾರ ಇತ್ತು. ಆಗ ಮಂತ್ರಿಮಂಡಲದ ಗಾತ್ರಕ್ಕೆ ಮಿತಿ ಇರಲಿಲ್ಲ. ಅಸಮಾಧಾನವೇ ಮಂತ್ರಿ ಪದವಿಗೆ ಮೂಲವಾಗಿತ್ತು. ಹೀಗೆ ಆರಂಭವಾದ “ಗಜಗಾತ್ರಕ್ಕೆ” 2003ರಲ್ಲಿ ಸಂವಿಧಾನದ ತಿದ್ದುಪಡಿ (91ನೇ ತಿದ್ದುಪಡಿ) ಮಾಡುವ ಮೂಲಕ ಸಚಿವ ಸಂಪುಟದ ಗಾತ್ರ ವಿಧಾನಸಭೆಯ ಒಟ್ಟು ಗಾತ್ರದ 15% ಮೀರುವಂತಿಲ್ಲ ಎಂದು ಮಿತಿ ಹೇರಲಾಯಿತು.
ಅಲ್ಲಿಂದೀಚೆಗೆ ಬಹುತೇಕ ಎಲ್ಲ ರಾಜ್ಯಗಳಲ್ಲೂ ಆರಂಭವಾಗಿರುವ ಹೊಸ ರೋಗ “ಸಂಪುಟ ರಚನೆಯ ಬಗ್ಗೆ ಅಸಮಾಧಾನ!”. ಎಂತಹ ಘನಂಧಾರಿ ಮುಖ್ಯಮಂತ್ರಿಗೂ ಈ ರೋಗವನ್ನು ಗುಣಮಾಡುವುದು ಸಾಧ್ಯವಿಲ್ಲ. ಹಾಗಾಗಿ, ಇಕ್ಕಳದಲ್ಲಿ ಸಿಕ್ಕಿಕೊಂಡೇ ಇರುವ ಮುಖ್ಯಮಂತ್ರಿಗೆ ತನ್ನ ಸಚಿವ ಸಂಪುಟ ಆಯ್ಕೆಗೆ ಮಾನದಂಡಗಳನ್ನು ಸಾಂವಿಧಾನಿಕವಾಗಿ ಒದಗಿಸಿಕೊಡುವುದೊಂದೇ ಈ ರೋಗಕ್ಕೆ ಏಕೈಕ ಮದ್ದು.
ಶಾಸಕರ ಪರ್ಫಾರ್ಮೆನ್ಸ್ ಕುರಿತು ಮಾಧ್ಯಮಗಳಲ್ಲಿ, ವಿಶ್ಲೇಷಣಾ ಸಂಸ್ಥೆಗಳಲ್ಲಿ ವರದಿಗಳು ಬಂದದ್ದನ್ನು ನಾವು ಕಂಡಿದ್ದೇವೆ. ಇಂತಹ ಸಮೀಕ್ಷೆಗಳಿಗೆ ಸಮಗ್ರವಾದ, ಸಂತುಲಿತವಾದ ಸಾಂವಿಧಾನಿಕ ರೂಪ ಕೊಡುವುದು ಸಾಧ್ಯವಿದೆ. ಅದರಲ್ಲಿ ಅಗತ್ಯಬಿದ್ದರೆ ಸೀನಿಯಾರಿಟಿ, ಜಾತಿ, ಲಿಂಗ, ಪ್ರಾದೇಶಿಕ ಸಮತೋಲನ, ಆರ್ಥಿಕ ವರ್ಗಗಳನ್ನೂ ಒಳಗೊಳ್ಳಬಹುದು.
ಹೀಗೆ ಪಾರದರ್ಶಕವಾದ ವ್ಯವಸ್ಥೆಯೊಂದರಲ್ಲಿ ಪರ್ಫಾರ್ಮೆನ್ಸ್ ರಾಂಕಿಂಗ್ ಸಾಧ್ಯವಾದರೆ, ರಾಂಕಿಂಗ್ ಆಧಾರದಲ್ಲಿ ಮೇಲಿನ ಸ್ಥಾನಗಳಲ್ಲಿರುವ 15% ಮಂದಿ ಮಂತ್ರಿಗಳಾಗಿಬಿಡುತ್ತಾರೆ. ಬೇಕಿದ್ದರೆ ಪ್ರತೀ ವರ್ಷಕ್ಕೋ-ಎರಡು ವರ್ಷಕ್ಕೋ ಸಂಪುಟ ಪುನರ್ರಚನೆ-ಕೆಲಸ ಮಾಡದ ಸಚಿವರ ತೆಗೆದುಹಾಕುವಿಕೆ ಎಲ್ಲವೂ ಮುಖ್ಯಮಂತ್ರಿಗಳಿಗೆ ಚಿಟಿಕೆ ಹಾರಿಸಿದಷ್ಟು ಸುಲಭವಾಗಿಬಿಡುತ್ತದೆ; ಎಲ್ಲವೂ ಪಾರದರ್ಶಕವಾಗಿಯೂ ಉಳಿಯುತ್ತದೆ.
ಈ ವ್ಯವಸ್ಥೆ ಜಾರಿಗೆ ಬಂದರೆ, ಪ್ರತಿಯೊಬ್ಬ ಶಾಸಕ ಕೂಡ ಮೊದಲ 15% ಕಟಾಫ್ ಪಾಯಿಂಟಿನ ಒಳಗೇ ಬರಲು ತಮ್ಮ ಕ್ಷೇತ್ರಗಳಲ್ಲಿ ಶಕ್ತಿ ಮೀರಿ ಶ್ರಮಿಸಬೇಕಾಗುತ್ತದೆ. ಅಭಿವದ್ಧಿಗೆ ಕಾಂಪಿಟಿಷನ್ ಶುರುವಾಗುತ್ತದಾದರೆ – ಯಾರಿಗೆ ಬೇಡ ಹೇಳಿ?




0 Comments