ಎತ್ತಣಿಂದೆತ್ತಣ ಸಂಬಂಧವಯ್ಯ!
ಪ್ರೊ ಸಿ ಎನ್ ಆರ್ ರವರು ‘ಅವಧಿ’ಯ ಮೇಲಿನ ಪ್ರೀತಿಯಿಂದ ಕಳಿಸಿಕೊಟ್ಟ ಲೇಖನ.
ಪ್ರೊ ಸಿ ಎನ್ ರಾಮಚಂದ್ರನ್
Music of the Spinning Wheel
(Mahatma Gandhi’s Manifesto for the Internet Age)
Sudheendra Kulakarni
New Delhi: Amaryllis, 2012; pp. 725
ಹೊಸ ಶತಮಾನದ ಮೊದಲ ದಶಕವನ್ನು ತಾತ್ವಿಕ ನೆಲೆಯಲ್ಲಿ ಭಾರತೀಯ ಜನತಾ ಪಕ್ಷದ ಆತ್ಮಪರೀಕ್ಷೆಯ ಹಾಗೂ ಪುನರವಲೋಕನದ ಕಾಲ ಎಂದು ಕರೆಯಬಹುದು. ಮೊದಲಿಗೆ, ಪಕ್ಷದ ಹಿರಿಯ ನಾಯಕರಾದ ಲಾಲಕೃಷ್ಣ ಆದ್ವಾನಿಯವರು ಪಾಕೀಸ್ತಾನಕ್ಕೆ ಹೋಗಿ ಅಲ್ಲಿ ಜಿನ್ನಾ ಅವರನ್ನು ಕುರಿತ ಪಕ್ಷದ ನಿಲುವನ್ನು ಸಂಪೂರ್ಣವಾಗಿ ಬದಲಾಯಿಸಿ, ಅವರನ್ನು ‘ಮಹಾನ್ ಮತಾತೀತ ನಾಯಕ’ ಎಂದು ಗುರುತಿಸಿದರು. ಇದೀಗ, ಆ ಪಕ್ಷದ ಉದ್ದಾಮ ಬುದ್ಧಿಜೀವಿಗಳಲ್ಲಿ ಒಬ್ಬರು ಎಂದು ಗುರುತಿಸಲ್ಪಟ್ಟಿರುವ ಮತ್ತು 1998-2004ರ ಅವಧಿಯಲ್ಲಿ ಪ್ರಧಾನ ಮಂತ್ರಿಗಳಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರ ಪ್ರಮುಖ ಸಲಹೆಗಾರರೂ ಆಗಿದ್ದ ಶ್ರೀ ಸುಧೀಂದ್ರ ಕುಲಕರ್ಣಿಯವರು ಆದ್ವಾನಿಯವರ ಮಾರ್ಗದಲ್ಲೇ ನಡೆಯುತ್ತಾ ತಮ್ಮ ಪಕ್ಷವು ಇಲ್ಲಿಯವರೆಗೂ ಕಡೆಗಣಿಸಿದ್ದ ಗಾಂಧೀಜಿಯವರನ್ನು ಹಾಗೂ ಗಾಂಧೀ ವೈಚಾರಿಕತೆಯನ್ನು ಪುನರ್ವಿಮರ್ಶಿಸುವ ‘ಮ್ಯೂಸಿಕ್ ಆಫ್ ದ ಸ್ಪಿನಿಂಗ್ ವ್ಹೀಲ್’ (‘ಚರಖಾ ನಾದ’) ಎಂಬ ಬೃಹತ್ ಗಾತ್ರದ ಕೃತಿಯನ್ನು ರಚಿಸಿದ್ದಾರೆ.
ಅಗಾಧ ಪಾಂಡಿತ್ಯ, ಆಪ್ತ ಲಲಿತ ಶೈಲಿ, ಹಾಗೂ ಗಾಂಧೀಜಿಯವರನ್ನು ಕುರಿತ ಅಪಾರ ಗೌರವಾದರಗಳು ಹದವಾಗಿ ಮಿಳಿತಗೊಂಡಿರುವ ಈ ಕೃತಿಯ ಅನೇಕ ವಿಶಿಷ್ಟ ಅಂಶಗಳಲ್ಲಿ ಒಂದೆಂದರೆ, ನೊಬೆಲ್ ಪ್ರಶಸ್ತಿ ವಿಜೇತರು, ಅಂತಾರಾಷ್ಟ್ರೀಯ ಖ್ಯಾತಿಯ ಲೇಖಕರು ಹಾಗೂ ರಾಜಕೀಯ ತಜ್ಞರು ಇತ್ಯಾದಿ ಹನ್ನೆರಡು ಪ್ರತಿಷ್ಠಿತ ವ್ಯಕ್ತಿಗಳು ಈ ಕೃತಿಯನ್ನು ಕುರಿತು ವ್ಯಕ್ತಪಡಿಸಿರುವ ಮೆಚ್ಚುಗೆಯ ಹೇಳಿಕೆಗಳು ಕೃತಿಯ ಮೊದಲಿಗೇ ಕೊಡಲ್ಪಟ್ಟಿವೆ. ( ಈ ಉದ್ಧರಣಗಳು ‘ಈ ಕೃತಿಯನ್ನು ಕುರಿತು ಟೀಕೆ-ಟಿಪ್ಪಣಿ ಮಾಡುವವರು -ಜೋಕೆ’ ಎಂಬ ಎಚ್ಚರಿಕೆಯಿರಬಹುದೆ?)
ಐದು ಭಾಗಗಳಲ್ಲಿ 36 ಅಧ್ಯಾಯಗಳಿರುವ, ಕೊನೆಯಲ್ಲಿ ಉಪಸಂಹಾರ ಮತ್ತು ಐದು ಅನುಬಂಧಗಳನ್ನೊಳಗೊಂಡು 725 ಪುಟಗಳಷ್ಟು ದೀರ್ಘವಾಗಿರುವ, ಈ ಗ್ರಂಥದ ಮುಖ್ಯ ಉದ್ದೇಶವನ್ನು ಲೇಖಕರು ತಮ್ಮ 38 ಪುಟಗಳ ಪ್ರಸ್ತಾವನೆಯಲ್ಲಿ, ಹೀಗೆ ಮಂಡಿಸುತ್ತಾರೆ: ನೂತನ, ಶಾಂತಿಯುತ, ಪರಸ್ಪರಾವಲಂಬನೆ ಹಾಗೂ ಸಹಕಾರಗಳಿಂದ ಕೂಡಿದ, ದೀರ್ಘಕಾಲೀನ, ಮತ್ತು ನೈತಿಕ ಮಾರ್ಗದರ್ಶನದಿಂದ ರೂಪಿಸಲ್ಪಟ್ಟ ವಿಶ್ವಾತ್ಮಕ ವ್ಯವಸ್ಥೆಯೊಂದನ್ನು ತಮ್ಮ ‘ನೂಲುವ ಚಕ್ರ’ದ ಮೂಲಕ ಸ್ಥಾಪಿಸುವ ದರ್ಶನ ಗಾಂಧೀಜಿಯವರದಾಗಿತ್ತು; ಆ ದರ್ಶನದ ತಿರುಳನ್ನು ವಾಸ್ತವದಲ್ಲಿ ಸಾಧ್ಯವಾಗಿಸುವ ಶಕ್ತಿ ಅಂತರ್ಜಾಲದಲ್ಲಿ ಹಾಗೂ ಡಿಜಿಟಲ್ ಯುಗದ ಇತರ ಆಧುನಿಕ ತಂತ್ರಜ್ಞಾನಗಳಲ್ಲಿ ಅಂತಸ್ಥವಾಗಿದೆ -ಎಂಬುದನ್ನು ದರ್ಶಿಸುಸುವುದು ಈ ಕೃತಿಯ ಉದ್ದೇಶ (ಪು. ಥಥ).
ಒಂದು ರೀತಿಯಲ್ಲಿ, ಈ ಪ್ರಸ್ತಾವನೆ ಸೀಮಿತ ಪರಿಪ್ರೇಕ್ಷ್ಯವನ್ನು ಓದುಗರಿಗೆ ಕಟ್ಟಿಕೊಡುವ ಮೂಲಕ ಕೃತಿಗೇ ಅನ್ಯಾಯ ಮಾಡುತ್ತದೆ. ವಾಸ್ತವದಲ್ಲಿ ಈ ಕೃತಿಯಲ್ಲಿ ಎರಡು ಭಾಗಗಳಿವೆ: ಮೊದಲ 24 ಅಧ್ಯಾಯಗಳು (ಪು. 1-360) ಗಾಂಧೀಜಿಯವರ ವೈಯಕ್ತಿಕ ಬದುಕು-ವೈಚಾರಿಕತೆ-ಹೋರಾಟ-ಸಾಧನೆ ಇವುಗಳನ್ನು ಆಳವಾಗಿ ಹಾಗೂ ಆಪ್ತವಾಗಿ ಚರ್ಚಿಸುತ್ತವೆ; ಉಳಿದ 12 ಅಧ್ಯಾಯಗಳು (ಪು. 361-611) ‘ಸ್ವದೇಶಿ, ಶಾಂತಿ, ಹಾಗೂ ವಿಶ್ವಬಾಂಧವ್ಯ ಇತ್ಯಾದಿಗಳ ರೂಪಕವಾದ ಚರಖಾ ಮತ್ತು ಅತ್ಯಾಧುನಿಕ ಆವಿಷ್ಕಾರವಾದ ಅಂತರ್ಜಾಲ’ ಇವೆರಡರ ನಡುವಿನ ಸಂಬಂಧವನ್ನು ಚರ್ಚಿಸುತ್ತದೆ. ಮೊದಲ ಭಾಗ ಲೇಖಕರಿಗಿರುವ ಗಾಂಧಿ-ವಾಙ್ಮಯವನು ಕುರಿತ ಅಗಾಧ ಪಾಂಡಿತ್ಯ ಹಾಗೂ ಅಭಿಮಾನಗಳನ್ನು ಮನೋಜ್ಞವಾಗಿ ದರ್ಶಿಸಿದರೆ, ಎರಡನೆಯ ಭಾಗ ಕುತೂಹಲಕರವಾಗಿದ್ದರೂ ಅತ್ಯಂತ ಚರ್ಚಾಸ್ಪದ ಅಂಶಗಳನ್ನು ದಾಖಲಿಸುತ್ತದೆ.
1) ಗಾಂಧಿ ವೈಚಾರಿಕತೆ : ‘ಗಾಂಧಿಜಿಯವರು ವಿಜ್ಞಾನ, ತಂತ್ರಜ್ಞಾನ, ಯಂತ್ರ, ಹಾಗೂ ಆಧುನಿಕತೆ ಇವುಗಳ ವಿರೋಧಿ; ಆದುದರಿಂದ ಇಂದು ಅವರ ವೈಚಾರಿಕತೆ ನಮಗೆ ಅಪ್ರಸ್ತುತ’ – ಎಂಬ ನಿಲುವನ್ನು ಪೂರ್ವಪಕ್ಷವನ್ನಾಗಿ ಇಟ್ಟುಕೊಂಡು, ಲೇಖಕರು ಇಂದೂ ಮತ್ತು ಎಂದೆಂದಿಗೂ ಗಾಂಧಿ ಅತಿ ಪ್ರಸ್ತುತ ಎಂದು ದಾಖಲಿಸಿ, ಅನಂತರ ಗಾಂಧಿಜಿಯವರ ವೈಯಕ್ತಿಕ ಬದುಕನ್ನು ಹಾಗೂ ಅವರ ಪ್ರಮುಖ ವಿಚಾರಗಳನ್ನು ಈ ಕೃತಿಯ ಮೊದಲ ಭಾಗದಲ್ಲಿ ವ್ಯಾಖ್ಯಾನಿಸುತ್ತಾರೆ. ಈ ಸಂದರ್ಭದಲ್ಲಿ ಈ ಭಾಗದ ಒಂದೆರಡು ಮುಖ್ಯ ಅಂಶಗಳನ್ನು ಮಾತ್ರ ಇಲ್ಲಿ ಗಮನಿಸ ಬಹುದು.
ಸತ್ಯಾಗ್ರಹ ಮತ್ತು ಜಿಹಾದ್: ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿಯವರು ತಮ್ಮ ಅಸಹಕಾರ ಚಳುವಳಿಯನ್ನು ರೂಪಿಸುತ್ತಿದ್ದ ಕಾಲಘಟ್ಟದಲ್ಲಿ, 11/9/1906ರಲ್ಲಿ ನಡೆದ ನಟಾಲ್ ಇಂಡಿಯನ್ ಕಾಂಗ್ರೆಸ್ ಅಧಿವೇಶನದಲ್ಲಿ ಅಲ್ಲಿಯೇ ನೆಲೆಸಿದ್ದ ಶೇಟ್ ಹಾಜಿ ಹಬೀಬ್ ಅವರು ತಮ್ಮ ಪರಿಣಾಮಕಾರಿ ಭಾಷಣದಲ್ಲಿ ‘ದೇವರನ್ನು ಸಾಕ್ಷಿಯಾಗಿಟ್ಟುಕೊಂಡು ನಮ್ಮಕ್ ಹೋರಾಟ ನಡೆಯಬೇಕು’ ಎಂದು ಘೋಷಿಸಿದರಂತೆ. ಅನೇಕ ಸಂದರ್ಭಗಳಲ್ಲಿ ಗಾಂಧೀಜಿ ತಮ್ಮ ಸತ್ಯಾಗ್ರಹವನ್ನು ‘ಧರ್ಮಯುದ್ಧ’ ಎಂದು ಮತ್ತು ಈ ಯುದ್ಧವನ್ನು ‘ದೇವರ ಹೆಸರಿನಲ್ಲಿ ಮಾತ್ರ ಮಾಡಲು ಸಾಧ್ಯ’ ಎಂದು ವಿವರಿಸುತ್ತಾರೆ; ಈ ‘ಧರ್ಮಯುದ್ಧ’ ಮತ್ತು ಇಸ್ಲಾಂ ಬೋಧಿಸುವ ‘ಜಿಹಾದ್’ ಪರಿಕಲ್ಪನೆಗಳು ಸಮಾನವಾಗಿವೆ -ಎಂದು ಲೇಖಕರು ವಾದಿಸುತ್ತಾರೆ: ಇಸ್ಲಾಂ ನಲ್ಲಿ ಜಿಹಾದ್ ಎಂದರೆ ‘ಧರ್ಮ-ಯುದ್ಧ. ಅದರಲ್ಲಿ ಎರಡು ಬಗೆಗಳು: ಜಿಹಾದ್-ಎ-ಅಕ್ಬರ್ ಮತ್ತು ಜಿಹಾದ್-ಎ-ಅಸ್ಘರ್; ಮೊದಲನೆಯದು ವ್ಯಕ್ತಿಯೊಬ್ಬನು ತನ್ನೊಳಗೇ ಇರುವ ಸ್ವಾರ್ಥ, ದುರಾಸೆ, ಅಹಂ, ಇತ್ಯಾದಿ ಕಲ್ಮಷಗಳ ವಿರುದ್ಧ ಹೋರಾಡುವುದು; ಎರಡನೆಯದಾದರೋ ಅನ್ಯ ಧರ್ಮೀಯರ ವಿರುದ್ಧ ಕತ್ತಿ ಎತ್ತುವುದು. ಈ ಎರಡನೆಯ ಜಿಹಾದ್ಗೆ ಕೊರಾನ್ ಅಷ್ಟೇನೂ ಮಹತ್ವ ಕೊಡುವುದಿಲ್ಲ ಮತ್ತು ಕ್ವಚಿತ್ತಾಗಿಯೇ ಅದಕ್ಕೆ ಅನುಮತಿ ಕೊಡುತ್ತದೆ. ಇಸ್ಲಾಂ ಮೂಲಭೂತವಾದಿಗಳು ಹಾಗೂ ಭಯೋತ್ಪಾದಕರು ಮಾತ್ರ ಈ ಎರಡನೆಯ ಬಗೆಯ ಜಿಹಾದ್ ಪರಿಕಲ್ಪನೆಯನ್ನು ದುರುಪಯೋಗ ಮಾಡಿಕೊಳ್ಳುತ್ತಾರೆ (ಪು. 53). ಹೀಗೆ ವಾದಿಸುತ್ತಾ, 11/9/1906 ಮತ್ತು 11/9/ 2001 ಈ ಎರಡು ದಿನಾಂಕಗಳಲ್ಲಿ ಅದೆಷ್ಟು ಭಿನ್ನತೆಯಿದೆ ಎಂಬುದನ್ನು ಲೇಖಕರು ದಾಖಲಿಸುತ್ತಾರೆ.
ಚರಖ ಮತ್ತು ಖಾದಿ: ಗಾಂಧೀಜಿಯವರ ಚಿಂತನೆಯಲ್ಲಿ ‘ಚರಖ’ ಒಂದು ‘ರೂಪಕ’ ಹಾಗೂ ಅದನ್ನು ರೂಪಕಾರ್ಥದಲ್ಲಿಯೇ ನಾವು ಗ್ರಹಿಸಬೇಕು ಎಂದು ಆಗ್ರಹಿಸುತ್ತಾ, ಕುಲಕರ್ಣಿಯವರು ಗಾಂಧೀಜಿಗೆ ಹೇಗೆ ಈ ನೂಲುವ ಚಕ್ರ ಒಂದು ಬಗೆಯಲ್ಲಿ ‘ಇಷ್ಟದೇವತೆ’ಯೇ ಆಗಿತ್ತು; ಮತ್ತು ಇದರೊಡನೆ ಗಾಂಧೀಜಿ ಒಂದು ಬಗೆಯ ಅನುಭಾವೀ ಪ್ರೇಮ ಸಂಬಂಧವನ್ನು ಬೆಳೆಸಿಕೊಂಡಿದ್ದರು ಎಂಬ ಅಂಶವನ್ನು ವಿವರಿಸುತ್ತಾರೆ. ನೂಲುವ ಕ್ರಿಯೆ ಗಾಂಧೀಜಿಗೆ ಈ ದೇಶದ ಬಡವರ ಹತ್ತಿರ ಬರುವುದಕ್ಕೆ, ಆತ್ಮಶುದ್ಧಿಗೆ, ಮತ್ತು ವಿಶ್ವಶಾಂತಿಗೆ ಮಾರ್ಗವಾಗಿತ್ತು ಎಂಬ ಅಂಶವನ್ನು ಕುಲಕರ್ಣಿ ಅನೇಕ ಗಾಂಧೀಜಿಯವರ ಲೇಖನಗಳ ಉದ್ಧರಣಗಳ ಮೂಲಕ ಸಮರ್ಥಿಸುತ್ತಾರೆ (ಪು. 172-73). ಆದರೆ, ಇಂದು ನಾವು ಚರಕ ಮತ್ತು ಖಾದಿ ಇವುಗಳನ್ನು ನೇರವಾಗಿ ಸ್ವೀಕರಿಸಲು ಸಾಧ್ಯವಿಲ್ಲ; ಬದಲಿಗೆ ಅವುಗಳು ಸಂಕೇತಿಸುವ ‘ತತ್ವ’ವನ್ನು ಅಥವಾ ‘ಸತ್ವ’ವನ್ನು ಮಾತ್ರ ಸ್ವಿಕರಿಸಬೇಕು (ಪು. 365); ಮತ್ತು ಈ ಸತ್ಯ ಗಾಂಧೀಜಿಯವರಿಗೂ ಗೊತ್ತಿತ್ತು-ಎಂದು ಹೇಳುತ್ತಾರೆ. ಚಾರ್ಲಿ ಚಾಪ್ಲಿನ್-ಗಾಂಧೀಜಿ ನಡುವೆ ನಡೆದ ಒಂದು ಸಂವಾದವನ್ನು ಕುಲಕರ್ಣಿಯವರು ಈ ಸಂದರ್ಭದಲ್ಲಿ ಉದ್ಧರಿಸಿ, ‘ಚರಖಕ್ಕೆ ಅದಕ್ಕಿಂತ ಹೆಚ್ಚು ಉಪಯುಕ್ತ ಪರ್ಯಾಯವೊಂದು ಕಂಡು ಬಂದರೆ ಅದನ್ನು ಸ್ವೀಕರಿಸುವಂತಹ ತೆರೆದ ಮನಸ್ಸು ಗಾಂಧೀಜಿಯವರಿಗಿತ್ತು’ ಎಂದು ತೀಮರ್ಾನಿಸುತ್ತಾರೆ (ಪು.366-67). ಕುಲಕರ್ಣಿಯವರ ದೃಷ್ಟಿಯಲ್ಲಿ, ಇಂದು ಚರಖಕ್ಕೆ ಇರುವ ಮಹತ್ವದ ಪರ್ಯಾಯವೆಂದರೆ ಅಂತರ್ಜಾಲ.
ಬ್ರಹ್ಮಚರ್ಯವೆಂಬ ವೈಜ್ಞಾನಿಕ ಸಿದ್ಧಾಂತ: 84 ಪುಟಗಳಷ್ಟು ದೀರ್ಘವಾಗಿರುವ ಈ ಅಧ್ಯಾಯದಲ್ಲಿ ಲೇಖಕರು ಗಾಂಧೀಜಿಯವರು ಬ್ರಹ್ಮಚರ್ಯವನ್ನು ಗ್ರಹಿಸಿದ ರೀತಿ, ಭಾರತೀಯ ಆಧ್ಯಾತ್ಮಿಕ ಹಾಗೂ ಅನುಭಾವೀ ಪರಂಪರೆಯಲ್ಲಿ ಬ್ರಹ್ಮಚರ್ಯಕ್ಕಿರುವ ಸ್ಥಾನ, ಡಾಸ್ಟಾವಸ್ಕಿಯ ‘ಇಡಿಯಟ್’ ಕಾದಂಬರಿಯ ವ್ಯಾಖ್ಯಾನ, ಮತೀಯ ಹಿಂಸೆಯಿಂದ ಜರ್ಝರಿತವಾಗಿದ್ದ ನೌಖಾಲಿ-ಕೋಲ್ಕತ್ತಾಗಳಲ್ಲಿ ‘ಏಕ-ಸೈನಿಕ-ಸೇನೆ’ಯಂತೆ ಗಾಂಧೀಜಿಯವರು ತಮ್ಮ ಉಪವಾಸ-ಆತ್ಮಶಕ್ತಿಗಳಿಂದ ಶಾಂತಿ ನೆಲೆಸುವಂತೆ ಮಾಡಿದುದು, ಇತ್ಯಾದಿ ಅನೇಕ ಸಂಗತಿಗಳನ್ನು ಮನೋಜ್ಞವಾಗಿ ಹಾಗೂ ಭಾವಪೂರ್ಣವಾಗಿ ಚರ್ಚಿಸುತ್ತಾರೆ. ಈ ಸಂದರ್ಭದಲ್ಲಿ ಅವರು ಹೇಳುವ ಮುಖ್ಯ ಅಂಶವೆಂದರೆ ಗಾಂಧೀಜಿಯವರಿಗೆ ‘ಬ್ರಹ್ಮಚರ್ಯೆ’ ಎಂದರೆ ಕೇವಲ ಲೈಂಗಿಕ ಸುಖವನ್ನು ತ್ಯಜಿಸುವುದಾಗಿರಲಿಲ್ಲ. ಮುಂದುವರೆದು ಅವರು ಮಂಡಿಸುವುದೇನೆಂದರೆ, ಗಾಂಧೀಜಿ ಲೈಂಗಿಕತೆಯನ್ನು ಎರಡು ಭಿನ್ನ ರೂಪಗಳಲ್ಲಿ ಕಾಣುತ್ತಿದ್ದರು: ಒಂದು, ಸ್ತ್ರೀಯರನ್ನು ಕೀಳಾಗಿಸುವ ಮತ್ತು ಪುರುಷನನ್ನು ಕಾಮದ ದಾಸನಾಗಿಸುವ ಲೈಂಗಿಕತೆ; ಎರಡನೆಯದು, ತನ್ನ ವಾಂಛೆಯನ್ನು ಉನ್ನತ ಉದ್ದೇಶಗಳಿಗಾಗಿ ಪರಿವರ್ತಿಸುವ, ಅದಕ್ಕೆ ಅಧ್ಯಾತ್ಮಿಕ ರೂಪವನ್ನು ಕೊಡುವ, ತಾನೂ ಬೆಳೆದು ತನ್ನ ಸಮಾಜವನ್ನೂ ಬೆಳೆಸುವ ಶಕ್ತಿಯನ್ನು ವ್ಯಕ್ತಿಗೆ ಕೊಡುವ, ಮತ್ತು ಸ್ತ್ರೀಯರನ್ನು ಅತ್ಯಂತ ಗೌರವದಿಂದ ಕಾಣುವಂತೆ ಮಾಡುವ ಲೈಂಗಿಕತೆ. ಗಾಂಧೀಜಿಯವರು ಎರಡನೆಯ ಬಗೆಯ ಲೈಂಗಿಕತೆಯನ್ನು ಅನುಸರಿಸುತ್ತಿದ್ದರು (ಪು. 288). ಆ ಕಾರಣದಿಂದಲೇ ಅವರು ಸ್ತ್ರೀಸಂಪರ್ಕದಿಂದ ದೂರವಾಗುವುದಲ್ಲದೆ ತನ್ನಲ್ಲಿಯೇ ಉಳಿದಿರಬಹುದಾದ ಕಾಮಾಪೇಕ್ಷೆಯನ್ನು ಮತ್ತೆ ಮತ್ತೆ ಪರೀಕ್ಷೆಗೆ ಒಡ್ಡುತ್ತಿದ್ದರು. ಗಾಂಧೀಜಿಯವರಿಗೆ ಬ್ರಹ್ಮಚರ್ಯವು ಮಾನವಸೇವೆಯ ಮೂಲಕ ದೇವರನ್ನು ಹುಡುಕುವುದಕ್ಕೆ ತನ್ನ ದೇಹವನ್ನು ಒಂದು ಸಮರ್ಥ ಸಾಧನವನ್ನಾಗಿ ಮಾಡಿಕೊಳ್ಳುವ ಮಾರ್ಗವಾಗಿತ್ತು (ಪು. 314) ಎಂದು ಈ ಸಂದರ್ಭದಲ್ಲಿ ಲೇಖಕರು ವ್ಯಾಖ್ಯಾನಿಸುತ್ತಾರೆ.
2) ಚರಖಾ ಮತ್ತು ಅಂತರ್ಜಾಲ: ಉತ್ತಮ ಬ್ರೋಶುಅರ್ ರೀತಿಯಲ್ಲಿರುವ ಈ ಭಾಗದಲ್ಲಿ (ಪು.363-630) ಲೇಖಕರು ಮಂಡಿಸುವ ವಾದವೆಂದರೆ ‘ಅಂತರ್ಜಾಲವೆಂಬುದು ಚರಖಾದ ಆಧುನಿಕ ಅವತಾರ.’ ಈ ಅವತಾರವನ್ನು ಗಾಂಧೀಜಿಯವರೂ ಏಕೆ ಒಪ್ಪಿಕೊಳ್ಳಬಹುದಾಗಿತ್ತು ಎಂಬುದನ್ನು ಸಮರ್ಥಿಸಲು ಒಂದು ಅಧ್ಯಾಯವನ್ನೇ ಮೀಸಲಾಗಿಡುತ್ತಾರಲ್ಲದೆ, ‘ಇಂಟರ್ನೆಟ್ ಸತ್ಯಾಗ್ರಹಿ’ ಎಂಬ ಹೆಸರನ್ನೂ ಟಂಕಿಸುತ್ತಾರೆ. ಅಂತರ್ಜಾಲದ ಗುಣಗಳನ್ನು ಹಾಗೂ ಸಾಧ್ಯತೆಗಳನ್ನು ಲೇಖಕರು ಅತ್ಯುತ್ಸಾಹದಿಂದ ಹಾಗೂ ಆರಾಧನಾಭಾವದಿಂದ ಹೀಗೆ ಪಟ್ಟೀ ಮಾಡುತ್ತಾರೆ: ಸಹಕಾರ-ಸಂಪರ್ಕ ಸಾಧ್ಯತೆ, ಸತ್ಯದರ್ಶನ, ವಿಶ್ವಶಾಂತಿ, ಪ್ರಜಾಸತ್ತಾತ್ಮಕ ಮೌಲ್ಯಗಳು, ಶ್ರೀಸಾಮಾನ್ಯನ ಸಬಲೀಕರಣ, ಪರಿಸರನಾಶದ ತಡೆ, ಇತ್ಯಾದಿ 15 ಮೌಲ್ಯಗಳನ್ನು ಪಟ್ಟೀ ಮಾಡುತ್ತಾರೆ. ಹಾಗೆಯೇ ಕಂಪ್ಯೂಟರ್-ಇಂಟರ್ನೆಟ್-ನ್ಯಾನೋ ತಂತ್ರಜ್ಞಾನಗಳನ್ನು ಆವಿಶ್ಕರಿಸಿದ ವಿಜ್ಞಾನಿ-ಉದ್ಯಮಪತಿಗಳನ್ನು ಮನಸಾರೆ ಕೊಂಡಾಡುತ್ತಾರೆ.
ಅಂತರ್ಜಾಲ ಹಾಗೂ ಅದಕ್ಕೆ ಸಂಬಂಧಿಸಿದ ಡಿಜಿಟಲ್ ಆವಿಶ್ಕಾರಗಳು ಅದ್ಭುತ ಸಂಪರ್ಕ ಹಾಗೂ ಮಾಹಿತಿ ವಿನಿಮಯ ಸಾಧನಗಳು ಎಂಬುದರಲ್ಲಿ ಎರಡು ಮಾತಿಲ್ಲ; ಈ ನೆಲೆಯಲ್ಲಿ ಲೇಖಕರು ಹೇಳುವ ‘ಅಂತರ್ಜಾಲವು ದೂರವನ್ನು ಇಲ್ಲವಾಗಿಸಿದೆ’ (Internet has killed distance) ಎಂಬುದು ವಾಸ್ತವ ಸತ್ಯ. ಹಾಗೆಯೇ ವಾಣಿಜ್ಯ ಕ್ಷೇತ್ರದಲ್ಲಿಯೂ ಅಸಾಧಾರಣ ಚಲನೆಯನ್ನು ಈ ತಂತ್ರಜ್ಞಾನ ಉಂಟುಮಾಡಿದೆ; ಇಂದು, ಹೆಚ್ಚಿನ ಬಂಡವಾಳ ಮತ್ತು ನೂರಾರು ಎಕರೆಗಳಷ್ಟು ಸ್ಥಳದ ಅವಶ್ಯಕತೆಯಿಲ್ಲದೆ ಒಬ್ಬನು ಸರಕುಗಳನ್ನು ಮಾರಬಹುದು, ಸ್ಥಳದಿಂದ ಸ್ಥಳಕ್ಕೆ ಕಳುಹಿಸಬಹುದು, ಮತ್ತು ಕೊಳ್ಳಬಹುದು. ಅಲ್ಲದೆ, ಒಂದು ಮಟ್ಟದ ವರೆಗೆ ಜ್ಞಾನವೆಂಬುದು ಬಡವ-ಬಲ್ಲಿದರೆನ್ನದೆ, ಸ್ತ್ರೀ-ಪುರುಷರೆನ್ನದೆ ಎಲ್ಲರಿಗೂ ದೊರಕುವ ಸಾಧ್ಯತೆಯಿದೆ. ಈ ನೆಲೆಯಲ್ಲಿ, ಮ್ಯಕ್ಲೂಹನ್ ಹೇಳುವಂತೆ ಇಂದು ವಿಶ್ವವು ಆಧುನಿಕ ತಂತ್ರಜ್ಞಾನದ ಕಾರಣದಿಂದ ಒಂದು ‘ವಿಶ್ವಾತ್ಮಕ ಗ್ರಾಮ’ವಾಗಿದೆ.
ಆದರೆ, ಕುಲಕರ್ಣಿಯವರು ಅಂತರ್ಜಾಲಕ್ಕೆ ಆರೋಪಿಸುವ ಇತರ ಮೌಲ್ಯಗಳನ್ನು ಅಥವಾ ಸಾಧನೆಗಳನ್ನು ಒಪ್ಪುವುದು ಅಸಾಧ್ಯ. ವಿಶ್ವಶಾಂತಿ, ಸಹಬಾಳ್ವೆ, ಇತ್ಯಾದಿ ಮೌಲ್ಯಗಳು ಇಂದು ಅಂತರ್ಜಾಲದಲ್ಲಿ ಧಂಡಿಯಾಗಿ ದೊರಕುವ ದ್ವೇಷಪೂರ್ಣ ಹಾಗೂ ಪ್ರಚೋದನಕಾರಿ ಭಾಷಣ- ಲೇಖನ-ಚಿತ್ರಗಳ ಹಿನ್ನೆಲೆಯಲ್ಲಿ ಅರ್ಥಹೀನವಾಗುತ್ತವೆ. (ಉದಾ.: ಅಮೆರಿಕಾದಲ್ಲಿ ವ್ಯಕ್ತಿಯೊಬ್ಬನು ಯು-ಟ್ಯೂಬ್ಗೆ ಹಾಕಿದ ಕಿರುಚಿತ್ರದಿಂದ ದೂರದ ಇತರ ದೇಶಗಳಲ್ಲಿ ಆದ ಹಾಗೂ ಆಗುತ್ತಿರುವ ರಕ್ತಪಾತ.) ‘ಸತ್ಯವೆಂಬುದು ಸಾಫ್ಟ್ ವೇರ್ ಹಾಗೂ ಅಂತರ್ಜಾಲದಲ್ಲಿ ಕೊರೆಯಲ್ಪಟ್ಟಿದೆ’ (‘Truth
is written into Software & Internet’) ಎಂಬ ಹೇಳಿಕೆಯಂತೂ ಹಾಸ್ಯಾಸ್ಪದ. ಅಂತರ್ಜಾಲದಲ್ಲಿ ಸಿಗುವ ಮಾಹಿತಿಯ ಸತ್ಯಾಸತ್ಯತೆಗಳನ್ನು ಪರೀಕ್ಷಿಸುವ ಹಾಗೂ ನಿರ್ಣಯಿಸುವ ಯಾವ ನಿಯಂತ್ರಣವೂ ಇಲ್ಲ; ಯಾರು ಯಾವ ಬಗೆಯ ಸತ್ಯದೂರವಾದ ಅಂಕಿಸಂಖ್ಯೆಗಳನ್ನು ಹಾಗೂ ಮಾಹಿತಿಯನ್ನು ಅಂತರ್ಜಾಲಕ್ಕೆ ಏರಿಸಬಹುದು. ಇನ್ನು ಕಿಶೋರಾವಸ್ಥೆಯ ತರುಣ-ತರುಣಿಯರೆಲ್ಲರಿಗೂ ಅಂತರ್ಜಾಲದಲ್ಲಿ ಸಿಗುವ ಅಶ್ಲೀಲ ವಿಡಿಯೋ ಮತ್ತು ಕಿರು ಚಿತ್ರಗಳಂತೂ ಅಸಂಖ್ಯಾತ.
ಶ್ರೀಸಾಮಾನ್ಯನ ಸಬಲೀಕರಣದ ಬಗ್ಗೆ ಉತ್ಸಾಹದಿಂದ ಮಾತನಾಡುವ ಲೇಖಕರು ಮರೆಯುವ ಒಂದು ಅಂಶವೆಂದರೆ, ಕಂಪ್ಯೂಟರ್ ಹಾಗೂ ಅಂತರ್ಜಾಲ ಸೌಲಭ್ಯ ಉಚಿತವಾಗೇನೂ ದೊರೆಯುವುದಿಲ್ಲ: ಕಂಪ್ಯೂಟರಿಗೆ 20000-25000 ಕೊಟ್ಟು, ಅಂತರ್ಜಾಲ ಸೌಲಭ್ಯಕ್ಕೆ ಕನಿಷ್ಠಪಕ್ಷ ತಿಂಗಳಿಗೆ 700-1000 ರೂಗಳನ್ನು ಕೊಡಬಲ್ಲವರು ಭಾರತದ ಲಕ್ಷಾಂತರ ಹಳ್ಳಿಗಳಲ್ಲಿ ಎಷ್ಟು ಜನರಿದ್ದಾರೆ? ವಾಸ್ತವದಲ್ಲಿ, ಅಂತರ್ಜಾಲವೂ ‘ಉಳ್ಳವರು-ಇತರರು’ ಎಂಬ ಹೊಸ ವರ್ಗಭೇದವನು ನಿರ್ಮಿಸಿದೆ. ಇನ್ನು, ಟ್ಯೂನಿಸಿಯಾ, ಈಜಿಪ್ಟ್, ಮುಂತಾದೆಡೆಗಳಲ್ಲಿ ನಡೆದ ‘ಯುವ ಕ್ರಾಂತಿ’ಗಳು ಅಂತರ್ಜಾಲದಿಂದ ಸಾಧ್ಯವಾದುವು ಎಂಬುದು ಸರಳೀಕರಣದ ಅತ್ಯುತ್ತಮ ನಿದರ್ಶನ; ಅನೇಕ ದಶಕಗಳಿಂದ ಒಳಗೊಳಗೇ ಕುದಿಯುತ್ತಿದ್ದ ಅಸಹನೆ ಮತ್ತು ಪ್ರತಿಭಟನೆ ಕೊನೆಗೆ ಸ್ಫೋಟಿಸಿತು ಮತ್ತು ಅಂತರ್ಜಾಲವು ಆ ಸ್ಪೋಟಕ್ಕೆ ಸ್ವಲ್ಪ ಅನುವಾಯಿತು, ಅಷ್ಟೇ.
ಪರಿಸರ ನೈರ್ಮಲ್ಯವನ್ನು ಕಾಪಾಡುವ ವಿಷಯದಲ್ಲಿ, ‘ಇ-ವೇಸ್ಟ್’ ವಿಚಾರವನ್ನು ಲೇಖಕರು (ಪ್ರಜ್ಞಾಪೂರ್ವಕವಾಗಿ?) ಮರೆಯುತ್ತಾರೆ; ಕಂಪ್ಯೂಟರಿನಲ್ಲಿರುವ ‘ಸರ್ಕೀಟ್ ಬೋರ್ಡ್’ ಮತ್ತು ಇತರ ಎಲೆಕ್ಟ್ರಾನಿಕ್ ಭಾಗಗಳನ್ನು ಉತ್ಪಾದಿಸುವಾಗ ಉಪಯೋಗಿಸಲ್ಪಡುವ ರಾಸಾಯನಿಕಗಳು ಪ್ಲಾಸ್ಟಿಕ್ನಂತೆ ಎಂದೂ ನಾಶವಾಗದೆ (undegradable) ಉಳಿಯುತ್ತವೆ; ಡೇಟಾ-ಸೆಂಟರುಗಳನ್ನು 24 ಘಂಟೆಗಳೂ ತಂಪಾಗಿ ಇಡಬೇಕಾದ ಕಾರಣದಿಂದ ಅವುಗಳು ಅಪಾರ ವಿದ್ಯುತ್ಚ್ಛಕ್ತಿಯನ್ನು ಬೇಡುತ್ತವೆ. ಈ ಪಟ್ಟಿಯನ್ನು ಹೀಗೇ ಮುಂದುವರೆಸಬಹುದು.
ಖಂಡಿತವಾಗಿಯೂ ಗಾಂಧೀಜಿಯವರು ಇಂದು ಹಾಗೂ ಮುಂದು ಅತಿ ಪ್ರಸ್ತುತ; ಆದರೆ ಅಂತರ್ಜಾಲದ ಪೂಜಾರಿಗಳಾಗಿ ಅಲ್ಲ.







ಅಂತರ್ಜಾಲವು ಈಗಾಗಲೇ ಸಾಮಾನ್ಯ ಬೆಲೆಯ ಮೊಬೈಲುಗಳಲ್ಲಿಯೂ ಲಭ್ಯವಾಗುತ್ತಿದೆ ಮತ್ತು ಹಳ್ಳಿಗಳಲ್ಲಿಯೂ ಲಭ್ಯವಿದೆ. ಮೊಬೈಲಿನಲ್ಲಿ ದೊರೆಯುವ ಅಂತರ್ಜಾಲ ಪ್ಯಾಕೇಜುಗಳು ಜನಸಾಮಾನ್ಯರಿಗೆ ಎಟುಕದ ದರದಲ್ಲೇನೂ ಇಲ್ಲ. ಸಾಮಾನ್ಯ ಬೆಲೆಯ ಮೊಬೈಲುಗಳಲ್ಲಿ ಅಂತರ್ಜಾಲದ ಮೂಲಕ ಇ-ಮೇಲ್ ನೋಡಲು ಮತ್ತು ಬರೆದು ಕಳುಹಿಸಲು ಸಾಧ್ಯವಿದೆ ಆದರೆ ಬರೆಯಲು ಕಷ್ಟ ಮತ್ತು ವೆಬ್ಸೈಟುಗಳು ಇಡಿಯಾಗಿ ಬರುವುದಿಲ್ಲ, ತುಣುಕು ತುಣುಕಾಗಿ ನೋಡಬೇಕಾಗುತ್ತದೆ. ಇತ್ತೀಚೆಗೆ ಕಡಿಮೆ ಬೆಲೆಯ ಟ್ಯಾಬ್ಲೆಟ್ಗಳು (3,000-5,000 ರೂಪಾಯಿ ಅಂದಾಜು ಬೆಲೆಗೆ) ಲಭ್ಯವಾಗುತ್ತಿದ್ದು ಇದು ಜನಸಾಮಾನ್ಯರಿಗೆ ಅಂತರ್ಜಾಲವನ್ನು ಬಳಸಲು ಅನುವು ಮಾಡಿಕೊಡಲಿದೆ. ಬಿಎಸ್ಸೆನ್ನೆಲ್ ಬ್ರಾಡ್ ಬ್ಯಾಂಡ್ ಅಂತರ್ಜಾಲವು ಹಳ್ಳಿಗಳಲ್ಲಿಯೂ ಇಂದು ಲಭ್ಯವಾಗುತ್ತಿದ್ದು ಕನಿಷ್ಠ ತಿಂಗಳ ದರ 150 ರೂಪಾಯಿಗಳಿಗೆ (150 ಎಂಬಿ ಡೌನ್ಲೋಡ್ ಲಿಮಿಟ್ ತಿಂಗಳಿಗೆ) ಹಾಗೂ 250 ರೂಪಾಯಿಗಳಿಗೆ (1 ಜಿಬಿ ಡೌನ್ಲೋಡ್ ಲಿಮಿಟ್ ತಿಂಗಳಿಗೆ) ಲಭ್ಯವಿದೆ ಮತ್ತು 500 ರೂಪಾಯಿ ತಿಂಗಳಿಗೆ ಅನ್ಲಿಮಿಟೆಡ್ ಡೌನ್ಲೋಡ್ ದರದಲ್ಲಿ ಲಭ್ಯವಿದೆ. ಅಂದರೆ ಒಂದು ಮೊಬೈಲಿನ ದರದಲ್ಲಿಯೇ ಟ್ಯಾಬ್ಲೆಟ್ ಇಂದು ಲಭ್ಯವಿದೆ ಮತ್ತು ಟ್ಯಾಬ್ಲೆಟ್ನಲ್ಲಿ ಅಂತರ್ಜಾಲವನ್ನು ಬಳಸುವುದು ಮೊಬೈಲಿನಲ್ಲಿ ಬಳಸುವುದಕ್ಕಿಂತ ಸುಲಭವಾಗಲಿದೆ. ಈ ಬಗ್ಗೆ ಇನ್ನೂ ಜನರಲ್ಲಿ ಅರಿವು ಮೂಡಿಲ್ಲ. ಅಂತರ್ಜಾಲ ಹಾಗೂ ಟ್ಯಾಬ್ಲೆಟ್ಗಳು ಇಂದು ಜನರ ಎಟುಕಿಗೆ ಲಭ್ಯವಾಗುವಂತಿವೆ ಆದರೆ ಇವುಗಳ ಬಳಕೆಯ ಬಗ್ಗೆ ಜನರಿಗೆ ಅರಿವು ಇಲ್ಲದೆ ಇರಬಹುದು ಅಂದರೆ ಕಂಪ್ಯೂಟರ್ ಸಾಕ್ಷರತೆ ಇಲ್ಲದೆ ಇರುವುದರಿಂದ ಅದರ ಬಳಕೆ ಕಡಿಮೆ ಇದೆ ಹೊರತು ಅದು ಜನರಿಗೆ ಲಭ್ಯವಾಗದಷ್ಟು ದುಬಾರಿ ಆಗಿವೆ ಎಂದಲ್ಲ.
ಖಾದಿಯ ಬಗ್ಗೆ ಸಾಕಷ್ಟು ನಾನು ಓದಿದ್ದೇನೆ. ಟೆಕ್ಸ್ ಟೈಲ್ಸ್ ಇಂಜಿನಿಯರ್ ಆದ ನನಗೆ ಇದರ ಬಗ್ಗೆ ತಿಳುವಳಿಕೆ ಇದೆ. ಗಾಂಧಿಯವರು, ಚರಖಾ ಚಲಾಯಿಸಲು ತಿಳಿದಿರಲಿಲ್ಲ. ಮೇಲಾಗಿ ಅದರ ಬಗ್ಗೆ ಏನು ಗೊತ್ತಿರಲಿಲ್ಲ.ವಿದೇಶೀ ಮಾರುಕಟ್ಟೆಯನ್ನು ಧ್ವಂಸಮಾಡಿ ನಮ್ಮ ಸ್ವದೇಶಿವಸ್ತುಗಳ ಪ್ರಾಮುಖ್ಯತೆಗಳನ್ನು ನಮ್ಮ ಜನರಲ್ಲಿ ತರುವುದು ಮತ್ತು ನಮ್ಮ ಗೃಹ ಉದ್ಯೋಗಕ್ಕೆ ಪ್ರಾಶಸ್ತ್ಯತೆ ಕೊಡುವುದು ಅವರ ಉದ್ಧಿಷ್ಯವಾಗಿತ್ತು. ಚರಖಾದಿಮ್ದ ಏನೇನು ಮಾಡಬಹುದು ಎನ್ನುವ ಕನಿಷ್ಠ ಕಲ್ಪನೆಯು ಇರಲಿಲ್ಲ. ಆದರೆ ಒಮ್ಮೆ ಯಾವುದಾದರು ಕೆಲಸಕ್ಕೆ ಕೈ ಹಾಕಿದರೆ ಗಾಮ್ಧಿಯವರಷ್ಟು ಕಾರ್ಯ ತತ್ಪರತೆ ಬಹಳ ಜನರಿಗೆ ಇರದೇ ಇರುವುದನ್ನು ನಾವು ಗಮನಿಸಬಹುದು. ಖಾದಿ ಉತ್ಪಾದನೆ ಮತ್ತು ಪ್ರಚಾರದ ಬಗ್ಗೆ ಅವರು ಮಾಡಿದ ಕೆಲಸಕ್ಕೆ ಒಂದು ಪಿ.ಎಚ್.ಡಿ.ಕೊಟ್ಟರೂ ಅದು ಕಡಿಮೆಯೇ !ಅಹಮದಾಬಾದಿನ ಮಿಲ್ ಕೆಲಸಗಾರರಿಗೆ ಸಹಾಯ ಹಸ್ತ ನೀಡಲು ಮುಂದೆ ಬಂದರು. ಮಾಲಿಕರ ನೀತಿಗಳನ್ನು ಖಂಡಿಸಿ ಕಾರ್ಮಿಕರಿಗೆ ನ್ಯಾಯ ಒದಗಿಸಿಕೊಟ್ಟರು. ಇಷ್ಟೇ ಅಲ್ಲ ಅವರು ಇಂಗ್ಲೆಂಡ್ ಗೆ ಹೋದಾಗ ಅವರ ನೆಲೆಯನ್ನು ಕಂಡು ಅಲ್ಲಿನ ಹತ್ತಿ ಗಿರಣಿ ಕಾರ್ಮಿಕರು ಅವರನ್ನು ಮುಕ್ತವಾಗಿ ಅಭಿನಂದಿಸಿದರು. ಇವು ಮಹಾತ್ಮರ ನಿಲವನ್ನು ನಮಗೆ ಪರಿಚಯಿಸುತ್ತವೆ.ಗಾಮ್ಧಿಯವರಮ್ತಹ ಸಂಘಟಕರು ವಿರಳ. ಈಗಿನಂತೆ ಯಾವ ಪ್ರಚಾರ ಮಾಧ್ಯಮಗಳು (ರೇಡಿಯೋ, ಟೆಲೆವಿಶನ್, ಕರಪತ್ರಗಳು, ಟೆಲೆಫೋನ್, ಮೊಬೈಲ್) ಇಲ್ಲದ ಕಾಲದಲ್ಲಿ ಲಕ್ಷಾಂತರ ಜನರನ್ನು ಕಲೆಹಾಕಿ ಅವರ ನೆರವನ್ನೂ ಪಡೆಯುಲು ಪ್ರಚೋದಿಸುತ್ತಿದ್ದ ಅವರ ದಿಟ್ಟ ನಿಲವು ಅತ್ಯಂತ ಶ್ಲಾಘನೀಯ ! ಇನ್ನೊಂದು ನಮ್ಮನ್ನು ಹುಚ್ಚರನ್ನಾಗಿ ಮಾಡುವ ಅವರ ಬೊಚ್ಚು ಬಾಯಿನ ಕ್ಷೀಣ ಸ್ವರದ ಭಾಷಣ ! ಹಲ್ಲು ಬಿದ್ದು ಅಸ್ಪಷ್ಟ ಸ್ವರದ ಮೃದು ಸ್ವರದ ಅವರ ಮಾತುಗಳು ಹೇಗೆ ಅಂದಿನ ನಿಷ್ಠ ಭಾರತಿಯರನ್ನು ಮೋಡಿ ಮಾಡಿದವೋ ಆ ಭಗವಂತನೇ ಬಲ್ಲ !
ಮುಖ್ಯವಾಗಿ ನುಡಿದಿದ್ದನ್ನು ನಡೆಯಲ್ಲೂ ಪರಿಪಾಲಿಸುತ್ತಿದ್ದ ಅವರ ನಿಯತ್ತಿನ ಜೀವನ, ಬಹುಶಃ ರಾಷ್ಟ್ರದ ಜನರ ಜೀವನಾಡಿಯನ್ನು ಹಿಡಿದು ಅಲ್ಲಾಡಿಸಿರಬಹುದು !?