ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗಾಂಧೀಜಿಯ ಪ್ರಭಾವ ಹಾಗೂ ಜೈಲು ವಾಸ…

ಎಚ್ ಎಸ್ ದೊರೆಸ್ವಾಮಿ

೧೯೩೬-೩೮ರ ಅವಧಿಯಲ್ಲಿ ನಾನು ಇಂಟರ್ ಮಿಡಿಯೆಟ್ ಓದುತ್ತಿದ್ದಾಗ ಮೊದಲಸಾರಿಗೆ ಗಾಂಧಿಯವರನ್ನು ಹತ್ತಿರದಿಂದ ಕಾಣುವ ಸುಯೋಗ ದೊರೆಯಿತು. ಗಾಂಧೀಜಿ ಖಾಯಿಲೆಯಿಂದ ಚೇತರಿಸಿಕೊಂಡು ವಿಶ್ರಾಂತಿ ಪಡೆಯುವುದಕ್ಕಾಗಿ ಮೈಸೂರು ಸಂಸ್ಥಾನಕ್ಕೆ ೧೯೩೬ ರಲ್ಲಿ ಬಂದಿದ್ದರು. ಮೈಸೂರು ಮಹಾರಾಜರ ಸರ್ಕಾರ ಅವರು ಉಳಿದುಕೊಳ್ಳಲು ಎಲ್ಲ ಸೌಕರ್ಯ ಒದಗಿಸಿಕೊಟ್ಟು, ನಂದಿಬೆಟ್ಟದಲ್ಲಿ ಅವರಿಗೆ ವಸತಿ ಒದಗಿಸಿತ್ತು. ಪ್ರತಿನಿತ್ಯ ಬೆಳಗ್ಗೆ, ಸಂಜೆ ಪ್ರಾರ್ಥನಾ ಸಭೆ ನಡೆಯುತ್ತಿತ್ತು. ನಾನು ಬೇಸಗೆಯ ರಜೆ ಇದ್ದುದರಿಂದ ಚಿಕ್ಕಬಳ್ಳಾಪುರದಲ್ಲಿ ನಮ್ಮ ಬಂಧುಗಳೊಬ್ಬರ ಮನೆಯಲ್ಲಿದ್ದುಕೊಂಡು ಪ್ರತಿ ಸಂಜೆ ಪ್ರಾರ್ಥನಾಸಭೆಗೆ ಹೋಗಿ ಬರುತ್ತಿದ್ದೆ. ಗಾಂಧಿಜಿಗೆ ಜಾಕಾಯಿ ಪೆಟ್ಟಿಗೆಯಲ್ಲಿ ಪ್ಯಾಕ್ ಮಾಡಿದ ಹಣ್ಣುಗಳು ವಿಶ್ವದ ಎಲ್ಲೆಲ್ಲಿಂದಲೋ ಬರುತ್ತಿತ್ತು. ಒಂದು ಪೆಟ್ಟಿಗೆಯ ಮೇಲೆ “ಮಹಾತ್ಮಾ ಗಾಂಧಿ, ಇಂಡಿಯಾ” ಎಂದು ಬರೆದಿದ್ದನ್ನು ನೋಡಿದ ನೆನಪು. ಗಾಂಧಿಜಿಗೆ ವಿಶ್ವದ ಎಲ್ಲ ಕಡೆಗಳಿಂದ ಅನೇಕ ಪತ್ರಗಳೂ ಪ್ರತಿದಿನ ಬರುತ್ತಿತ್ತು. ಹಾಗೆ ಬರೆಯಲಾದ ವಿದೇಶದಿಂದ ಬಂದ ಕೆಲವು ಕಾಗದಗಳ ಮೇಲೆ “ಎಂ. ಕೆ. ಗಾಂಧಿ, ಇಂಡಿಯಾ” ಎಂದು ವಿಳಾಸ ಬರೆಯಲಾಗಿತ್ತೆಂದೂ ಕೇಳಿದ್ದೆ. ಗಾಂಧೀಜಿ ಭಾರತದಲ್ಲಿ ಎಷ್ಟು ಪ್ರಸಿದ್ಧಿಗೆ ಬಂದಿದ್ದರು ಎಂದರೆ, ಹೀಗೆ ಅಪೂರ್ಣವಾಗಿ ವಿಳಾಸ ಬರೆದ ಪತ್ರಗಳೂ ಅವರಿಗೆ ದೇಶದ ಯಾವ ಮೂಲೆಯಲ್ಲೇ ಇರಲಿ ತಲುಪುತ್ತಿದ್ದವು.

ಗಾಂಧೀಜಿ ನಂದಿಬೆಟ್ಟದಲ್ಲಿದ್ದಾಗ ಒಂದು ಪ್ರಕರಣ ನಡೆಯಿತು. ಗಾಂಧಿಜಿಯ ಮೊದಲನೆಯ ಮಗ ಹೀರಾಲಾಲ್, ಮಹಮದೀಯ ಮತಕ್ಕೆ ಸೇರುವನೆಂಬ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಯಿತು. ಈ ಸುದ್ದಿ, ಕಸ್ತೂರಿಬಾ ಅವರನ್ನು ಚಿಂತಾಕ್ರಾಂತರನ್ನಾಗಿ ಮಾಡಿತು. ಆದರೆ ಗಾಂಧಿಜಿ ಸ್ವಲ್ಪವೂ ಧೃತಿಗೆಡದೆ ‘ಹರಿಜನ’ ಪತ್ರಿಕೆಯಲ್ಲಿ ಮಗನ ಮತಾಂತರ ಕುರಿತು ದೀರ್ಘ ಲೇಖನ ಬರೆದರು. “ನನ್ನ ಮಗ ಇಸ್ಲಾಂ ಮತಕ್ಕೆ ಸೇರುವನೆಂಬ ಸುದ್ದಿ ಬಂದಿದೆ. ಇಸ್ಲಾಂ ಮತದ ತತ್ವಗಳನ್ನು ತಿಳಿದುಕೊಂಡು, ಅದು ಹಿಂದೂಮತಕ್ಕಿಂತ ಉತ್ತಮವಾದುದು ಎಂದು ಮನಗಂಡು ಅವನು ಮತಾಂತರಗೊಂಡಿದ್ದರೆ, ನಾನು ಬಹಳ ಸಂತೋಷಪಡುತ್ತಿದ್ದೆ. ಆದರೆ ನನ್ನ ಮಗ ಹೀರಾಲಾಲ್ ಋಣಬಾಧೆಯಿಂದ ತಪ್ಪಿಸಿಕೊಳ್ಳಲು, ಮುಸ್ಲಿಮರ ಒತ್ತಾಯಕ್ಕೆ ಬಲಿಯಾಗಿ ಮತಾಂತರಗೊಳ್ಳುತ್ತಿದ್ದಾನೆ. ಈ ಬಗೆಯ ಜನರ ಮತಾಂತರದಿಂದ ಇಸ್ಲಾಂ ಧರ್ಮಕ್ಕೆ ಯಾವ ಲಾಭವೂ ಇಲ್ಲ. “ಮತಾಂತರ” ಒಂದು ಬಟ್ಟೆಯನ್ನು ಕಳಚಿಹಾಕಿ ಮತ್ತೊಂದನ್ನು ತೊಟ್ಟಷ್ಟು ಅಗ್ಗವಾಗಬಾರದು. ಹೃದಯ ಪರಿವರ್ತನೆಯಿಂದ, ವಿಚಾರ ಪರಿವರ್ತನೆಯಿಂದ ಮತಾಂತರಗೊಳ್ಳುವುದಾದರೆ ಅದು ಬೇರೆ ಮಾತು” ಎಂದು ಸ್ಪಷ್ಟವಾಗಿ ಬರೆದರು. ತಮ್ಮ ಮಗನ ಬಗ್ಗೆ ಬರೆಯುತ್ತಿದ್ದೇನೆಂಬ ಮಮಕಾರ ಎಳ್ಳಷ್ಟೂ ಈ ಲೇಖನದಲ್ಲಿ ಸುಳಿಯಲಿಲ್ಲ.

ಗಾಂಧಿಜಿ ಅದೇ ಸಮಯದಲ್ಲಿ ಮೈಸೂರು ಸಂಸ್ಥಾನದಲ್ಲಿ ಹರಿಜನ ನಿಧಿಗಾಗಿ ಹಣ ಸಂಗ್ರಹಿಸಲು ಒಂದು ಪ್ರವಾಸಕಾರ್ಯಕ್ರಮ ಹಾಕಿಕೊಂಡಿದ್ದರು. ಕೋಲಾರ ಜಿಲ್ಲಾ ಬೋರ್ಡ್ ಅಧ್ಯಕ್ಷರಾಗಿದ್ದ ಕ್ಯಾಸಂಬಳ್ಳಿ ಚಂಗಲರಾಯರೆಡ್ಡಿಯವರು ಗಾಂಧಿಯವರನ್ನು ಕೋಲಾರಕ್ಕೆ ಆಹ್ವಾನಿಸಿದ್ದರು. ೧೦೦೦ ರೂ. ಹರಿಜನ ನಿಧಿಗೆ ನೀಡುವುದಾಗಿ ರೆಡ್ಡಿಯವರು ಗಾಂಧಿ ಅವರಿಗೆ ಆಶ್ವಾಸನೆ ನೀಡಿದ್ದರು. ಗಾಂಧೀಜಿ ಕೋಲಾರ ತಲಪಿ ಸಭೆ ನಡೆದೊಡನೆ “ನಿಧಿ ಎಲ್ಲಿ?’ ಎಂದರು. ನಿಧಿಯನ್ನು ರೆಡ್ಡಿಯವರು ಕೊಟ್ಟರು. ಗಾಂಧೀಜಿ ‘ಕಿತ್ನಾ ಹೈ?’ ಎಂದರು. ರೆಡ್ಡಿಯವರು ೩೦೦ ಎಂದರು. ಗಾಂಧೀಜಿ ಭಾಷಣ ಶುರು ಮಾಡಿದ್ದು ಹೀಗೆ: ‘Shame shame thrice shame’ ೧೦೦೦ ರೂ. ಕೊಡುತ್ತೇನೆಂದು ಹೇಳಿ ೩೦೦ ಕೊಟ್ಟಿದ್ದೀರಿ. ಇದು ಸರಿಯಲ್ಲ” ಎಂದು ಹೇಳಿ ಭಾಷಣ ಮುಗಿಸಿ ಮುಂದಕ್ಕೆ ಹೋದರು!

೧೯೪೨: ಸೆರೆಮನೆ ವಾಸ

೧೯೪೨ರ ಡಿಸೆಂಬರ್‌ನಲ್ಲಿ ಬೆಂಗಳೂರು ಸೆಂಟ್ರಲ್ ಜೈಲಿಗೆ ಹೋಗುವ ಹೊತ್ತಿಗೆ ಆಗಲೇ ಸ್ಥಾನಬದ್ಧತೆಯಲ್ಲಿ ೫೦೦ಕ್ಕೂ ಹೆಚ್ಚು ಮಂದಿ ಇದ್ದರು. ಹೊಸಬರು ಜೈಲಿಗೆ ಬಂದರೆಂದರೆ ಅದೊಂದು ಸುದ್ದಿಯಾಗುತ್ತಿತ್ತು, ಎಲ್ಲರೂ ಸಂಭ್ರಮದಿಂದ ನನ್ನ ಕುಲಗೋತ್ರಗಳನ್ನೂ, ನನ್ನ ದಸ್ತಗಿರಿಗೆ ಕಾರಣವನ್ನೂ ಕೇಳಿ ತಿಳಿದುಕೊಂಡರು. ಹೊರಗಡೆ ಚಳುವಳಿಯ ವಾತಾವರಣ ಹೇಗಿದೆಯೆಂದು ಪ್ರಶ್ನಿಸಿದರು. ನನ್ನನ್ನು ‘ಐ’ ಬ್ಯಾರಕ್‌ಗೆ ಕರೆದುಕೊಂಡುಹೋಗಿ ಬಿಟ್ಟರು. ‘ಐ’ ಬ್ಯಾರಕ್‌ನ್ನು “ಶಾಂತಿಕುಟೀರ” ಎಂದು ಕರೆಯಲಾಗುತ್ತಿತ್ತು. ಅಲ್ಲಿದ್ದವರಲ್ಲಿ ಮುಕ್ಕಾಲುಪಾಲು ಜನ ನನ್ನ ತಾಲ್ಲೂಕಿನವರು. ಸೋರೇಕಾಯಿ ದೊಡ್ಡಿ ಕರಿಯಪ್ಪನವರು, ಕ್ಲೋಸ್‌ಪೇಟೆ ಸುಬ್ಬರಾಯರು, ಗುರಿಕಾರ್ ರಂಗೇಗೌಡರು, ವೆಂಕಟಾಚಲಪತಿ ಶೆಟ್ಟರು, ಸೈಕಲ್ ಶಾಪ್ ಮುದ್ದಪ್ಪ, ಹೊಟೇಲ್ ಸುಬ್ರಹ್ಮಣ್ಯ ಅಯ್ಯರ್ ಎಲ್ಲರೂ ನನ್ನ ಪರಿಚಿತರು. ಇವರಲ್ಲದೆ ಬೆಂಗಳೂರು ನಗರಸಭೆಯ ಅಧ್ಯಕ್ಷ ಎಚ್. ಸಿ. ಸೂರ್ಯನಾರಾಯಣರಾಯರು, ಇನ್ನೂ ಹದಿನೆಂಟು ವಯಸ್ಸು ದಾಟದ ಮೈಸೂರಿನ ಸತ್ಯನಾರಾಯಣರಾವ್, ಕನಕಪುರದ ಚಂದ್ರು, ಮೇಲುಕೋಟೆಯ ನರಸಿಂಹಮೂರ್ತಿ ಇವರೆಲ್ಲ ಅದೇ ಬ್ಯಾರಕ್ಕಿನಲ್ಲಿದ್ದರು. ನನಗಾಗ ೨೩ ವರ್ಷ ವಯಸ್ಸು.

ನನಗೆ ಹಾಸಲು ಒಂದು ಕಂಬಳಿ, ಹೊದೆಯಲು ಒಂದು ಬೆಡ್ ಷೀಟ್, ಉಣ್ಣಲು ಒಂದು ಅಲ್ಯುಮಿನಿಯಂ ತಟ್ಟೆ, ಒಂದು ಅಲ್ಯುಮಿನಿಯಂ ಟಂಬರ್, ಒಂದು ತಂಬಿಗೆ ಕೊಡಲಾಯಿತು. ಮಲಗುವುದಕ್ಕೆ ಒಂದು ಎತ್ತರದ ಖಾಲಿ ಜಗಲಿ ಇತ್ತು. ಇದನ್ನು ನಾವು ಸಮಾಧಿ ಎಂದು ಕರೆಯುತ್ತಿದ್ದೆವು.

ಬೆಳಗ್ಗೆ ೯ ಗಂಟೆಗೆ ಎರಡು ಇಡ್ಲಿ, ಕಾಫಿ; ಮಧ್ಯಾಹ್ನ ಒಂದು ಘಂಟೆಗೆ, ಮತ್ತೆ ಸಂಜೆ ೬ ಘಂಟೆಗೆ ಊಟ ಕೊಡಲಾಗುತ್ತಿತ್ತು. ಬಿ. ಟಿ. ರಾಮಯ್ಯನವರು ನಮಗೆ ಊಟ ಒದಗಿಸುವ ಜವಾಬ್ದಾರಿ ವಹಿಸಿಕೊಂಡಿದ್ದರು. ಅನ್ನದಲ್ಲಿ ಕಲ್ಲು ಹಾಗೂ ಹುಳುಗಳು ಯಥೇಚ್ಛವಾಗಿರುತ್ತಿತ್ತು. ಅನೇಕ ದಿವಸ ನಾವು ಆ ಅನ್ನ ತಿನ್ನಲಾಗದೆ, ಉಪವಾಸ ಬಿದ್ದದ್ದೂ ಉಂಟು. ನಮ್ಮನ್ನು ಹೀಗೆ ಗೋಳಾಡಿಸಿದ್ದಕ್ಕೋ ಎಂಬಂತೆ ಬಿ. ಟಿ. ರಾಮಯ್ಯನವರಿಗೆ ಇದಾದ ಮೇಲೆ ಹತ್ತಾರು ವರ್ಷ ತಿಂದದ್ದು ಏನೂ ದಕ್ಕುತ್ತಿರಲಿಲ್ಲ. ಉದರ ರೋಗದಿಂದ ಅವರು ಅಸುನೀಗಿದರು.

ಸೆರೆಮನೆ – ಋಷ್ಯಾಶ್ರಮ:

ನಾವು ಶಿಕ್ಷೆಗೊಳಗಾದ ಖೈದಿಗಳಲ್ಲವಾದ್ದರಿಂದ ನಮಗೆ ಜೈಲಿನಲ್ಲಿ ಕೆಲಸ ಮಾಡಿಸುತ್ತಿರಲಿಲ್ಲ. ಬಿಡುವೋ ಬಿಡುವು! ನಾವು ಬೆಳಗ್ಗೆ, ಸಂಜೆ ತಪ್ಪದೆ ವಾಲೀಬಾಲ್ ಆಡುತ್ತಿದ್ದೆವು. ನಾನು ಸೆಂಟ್ರಲ್ ಕಾಲೇಜ್ ಟೀಮಿಗೆ ಹಿಟ್ಟ‌ರ್ ಆಗಿದ್ದವನು. ನಮ್ಮ ಆಟ ನೋಡಲು ಜೈಲಿನ ಜನರೆಲ್ಲಾ ಬರುತ್ತಿದ್ದರು.

ಮಧ್ಯಾಹ್ನ ಹಿಂದಿ, ತಮಿಳು ಕಲಿಯುತ್ತಿದ್ದೆ. ತಂಗವೇಲನ್ ತಮಿಳು ಮೇಷ್ಟರು. ಅವರು ಈಗ ರಿಯಾಸತ್ ಹಿಂದಿ ಸಮಿತಿಯ ಕಾರ್ಯದರ್ಶಿಗಳು, ಅವರಣ್ಣ ಡಿ. ವೆಂಕಟೇಶ್ ದೊಡ್ಡ ಕಾರ್ಮಿಕ ಮುಖಂಡರು. ಅವರೀಗಿಲ್ಲ. ಇದಲ್ಲದೆ ಕೈಲಾಸಂ ಅವರ ನಾಟಕಗಳನ್ನು ಅಭ್ಯಾಸ ಮಾಡಿಕೊಂಡು ಪ್ರದರ್ಶನ ನೀಡುತ್ತಿದ್ದವು. ಕೆ. ಟಿ. ಭಾಷ್ಯಂ, ಎಂ. ವಿ. ರಾಮರಾವ್, ಟಿ. ಸುಬ್ರಹ್ಮಣ್ಯ ಇವರು ಬೌದ್ಧಿಕ ತರಗತಿಗಳನ್ನು ನಡೆಸಿಕೊಡುತ್ತಿದ್ದರು. ನಾವು ಸೆರೆಮನೆಯನ್ನು ಋಷ್ಯಾಶ್ರಮವಾಗಿ ಪರಿವರ್ತನೆ ಮಾಡಿಕೊಂಡಿದ್ದೆವು.

[ಎಚ್.ಎಸ್. ದೊರೆಸ್ವಾಮಿ ಅವರ “ನೆನಪಿನ ಸುರಳಿ ತೆರೆದಾಗ” ಕೃತಿಯ ಆಯ್ದ ಭಾಗ.  ಪರಿಷ್ಕೃತ ಮುದ್ರಣ: ೨೦೦೩]

‍ಲೇಖಕರು Admin

2 October, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading