ಮುರಳಿ ಮೋಹನ್ ಕಾಟಿ
{ಮಹಾನ್ ದೇಶ ಭಾರತಕ್ಕೆ ತಂದೆ ಎನಿಸಿಕೊಂಡ ಗಾಂಧೀಜಿಯೇ ನಿನಗೆ ಬಹಳಷ್ಟು ಹೆಸರು ನಾನು ಯಾವ ಹೆಸರಿನಿಂದ ನಿಮ್ಮನ್ನು ಕರೆಯಲ್ಲಿ ಎಂದು ಗೊಂದಲವಾಗಿದೆ.ಆ ಗೊಂದಲದ ನಡುವೆಯೇ ರಾಜಿಯಾಗಿ ಸತ್ಯವಂತ ಮಹಾತ್ಮ ಗಾಂಧೀ ಎಂದು ಸಂಭೋಧಿಸುತ್ತೆನೆ.}
ಗೌರವಾನ್ವಿತ ಸತ್ಯವಂತ ಮಹಾತ್ಮ ಗಾಂಧೀಜೀಯೇ ನೀವು ಸತ್ತು ಬಹಳಷ್ಟು ವರ್ಷಗಳಾಯಿತು ಆದರೂ ನಿಮ್ಮನ್ನು ಸಾಯಿಸಿದ ಬಂದೂಕಿನ ನಳಿಕೆಯಿಂದ ಇನ್ನೂ ಹೊಗೆ ಬರುತ್ತಲೆ ಇದೆ. ನೀವು ಸತ್ಯವೇ ದೇವರು, ತಾಯಿ-ತಂದೆ, ಬಂದು-ಬಳಗ ಎಂದು ಹೇಳಿ ‘ಧರ್ಮ’ ಮಾತನಾಡುವ ಜನರಿಂದ ಕೊಲೆಯಾದಿರಿ. ನೀವು ಹುಟ್ಟಿದ ಭೂಮಿಯಿಂದಲೇ ಅವರು ದೇಶವನ್ನು ಮುನ್ನೇಡಿಸುತ್ತೇವೆಂದು ಮಾತಿಗಿಳಿದ್ದಿದ್ದಾರೆ. ನೀವು ಕಂಡುಕೊಂಡ ಸತ್ಯದ ಮಾರ್ಗ ‘ಖಾದಿ’ ಮಾರಾಟದ ವಸ್ತುವಾಗಿ ಸ್ವಂತ ಹೆಲಿಕಾಪ್ಟರ್ಗಳಲ್ಲಿ ಓಡಾಡುವ ಜನರ ಸ್ವತ್ತಾಗಬಹುದೆಂದು ನೀವು ಗ್ರಹಿಸಿರಲ್ಲಿಲ್ಲವೆಂದೆನಿಸುತ್ತದೆ.
ಇರಲಿ ನಾನು ನಿಮಗೆ ಈ ಪತ್ರ ಬರೆಯುವ ಹೊತ್ತಿನಲ್ಲಿ ಬೆಂಗಳೂರು ಮಹಾನಗರ ರಸ್ತೆಗಳಲ್ಲಿ ಉದುರಿ ಬಿದ್ದ ಮರದ ಎಲೆಗಳು ಕೊನೆಯ ಬಾರಿಗೆ ಜೊರಾಗಿ ಗಾಳಿ ಬೀಸಿದಾಗ ತಮಗೆ ಇನ್ನು ಇಲ್ಲಿ ಅಸ್ತಿತ್ವ ಇಲ್ಲ ಎಂಬುದು ಖಚಿತವಾಗಿ ಆಕಾಶದೆತ್ತರ ಹಾರಿ ಮೋಡಗಳಲ್ಲಿ ತೂರಿ ಹೋಗುತ್ತಿವೆ. ಸಿಗ್ನಲ್ ಫ್ರೀ ಬೆಂಗಳೂರಿಗೆ ದಾರಿ ಮಾಡುತ್ತಿರುವುದನ್ನು ನೋಡಿ ಬೀದಿ ನಾಯಿಗಳು ಅಳುತ್ತಿವೆ. ಏಕೆಂದರೆ ಅವಕ್ಕೆ ಅಂಡರ್ಪಾಸ್ನಲ್ಲಿ ಓಡಾಡಲು ಅನುಮತಿ ಇಲ್ಲವಂತೆ ! ಮರಗಳನ್ನು ಕೊಂದಿರುವುದಕ್ಕೆ ಪ್ರತಿಭಟನೆಯಾಗಿ ಕಾಗೆ ಪಾರಿವಾಳಗಳು ಇಂದೆಂದಿಗಿಂತಲೂ ಹೆಚ್ಚು ವಿಧಾನಸೌದದ ಮೇಲೆ ಕಕ್ಕಸು ಉದುರಿಸಿ ಪ್ರತಿಭಟನೆ ಸೂಚಿಸಿದವು. ಇದನ್ನು ಗಮನಿಸಿದ ಸಮಾಜಸೇವೆಯಲ್ಲಿ ತೊಡಗಿಸಿಕೊಂಡ ಜೋತಿಷಿಯೊಬ್ಬರು ಮಂತ್ರಿ ಮಹೋದಯರಿಗೆ ತಮ್ಮ ಕಛೇರಿಗಳ ವಾಸ್ತು ಬದಲಾಯಿಸಿಕೊಳ್ಳಲು ಹೇಳಿದಾಗ ಜನಸೇವೆಯೇ ಜನಾರ್ದನ ಸೇವೆ ಎಂದು ನಂಬಿದ ಮಂತ್ರಿಗಳು ಚಾಚು ತಪ್ಪದೆ ಅದನ್ನು ನೆರವೆರಿಸಿದರು ಇದನ್ನು ಉತ್ತಮ ಸಮಾಜಕ್ಕಾಗಿ ಕೆಲಸ ಮಾಡುವ ಟಿ.ವಿ ಛಾನೆಲ್ಗಳು ಇದನ್ನು ವಿಶೇಷ ಕಾರ್ಯಕ್ರಮವನ್ನಾಗಿ ಪ್ರಸಾರ ಮಾಡಿ ತಮ್ಮ ಸಾಮಾಜಿಕ ಕಾಳಜಿಗಾಗಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದು ಈಗ ತಾನೇ ಹೊರಬಿದ್ದ ಬ್ರೇಕ್ಂಗ್ ನ್ಯೂಸ್. ನ್ಯೂಸ್ ಎಂದ ತಕ್ಷಣ ನೆನಾಪಾಯ್ತು ನಿಮ್ಮ ಹತ್ತಿರ ಹಂಚಿಕೊಳ್ಳಬೇಕಾದ ಸುದ್ದಿಗಳು ತುಂಬಾ ಇದೆ. ಆದರೆ ತಾವು ಮಹಾತ್ಮರಾಗಿರುವುದರಿಂದ ನಾನು ನೀವಿರುವಲ್ಲಿಗೆ ಬಂದರೂ ನಿಮ್ಮನ್ನು ಮುಖತ ಬೇಟಿಯಾಗಿ ಮಾತಾಡುವುದು ಅಸಾಧ್ಯವೆನ್ನಿಸುತ್ತದೆ. ಆ ಲೋಕದಲ್ಲಿ ನಿಮ್ಮನ್ನು ರಕ್ಷಿಸಲು ಅದೆಷ್ಟು ಬಾಗಿಲುಗಳ ಕೋಟೆ ಇದೆಯೊ ನನಗೆ ಗೊತ್ತಿಲ್ಲ.

ನಿಮ್ಮ ಮೈಮೇಲಿದ್ದ, ಶುಭ್ರ ಬಿಳಿಖಾದಿಯನ್ನು ನೀವು ತೆಗೆದು ಎಸೆದ ಬಳಿಕ ಅದನ್ನು ಕೇಸರಿ ಸ್ವಾಮೀಜಿಯೊಬ್ಬರು ಯೂನಿಫಾರಂನಂತೆ ಹಾಕಿಕೊಂಡು ವಿಶ್ವಶಾಂತಿಗಾಗಿ ಬೆಂಗಳೂರಿನ ಸುತ್ತಲೂ ಜನರಿಂದ, ಸರ್ಕಾರದಿಂದ ನೂರಾರು ಎಕರೆ ಜಮೀನು ಪಡೆದು ಜಪ-ತಪ, ಧ್ಯಾನ-ಯೋಗಗಳ ಬಿಸ್ನೆಸ್ ಅನ್ನು ಅಂತಾರಾಷ್ಟೀಯ ಮಟ್ಟದಲ್ಲಿ ಯಶಸ್ವಿಯಾಗಿ ನಡೆಸುತ್ತಿರುವುದು ಇತ್ತೀಚೆಗೆ ನಿಮ್ಮ ಕರ್ಮ ಭೂಮಿಯಲ್ಲಿ ಸಂಬಂಧಿಸಿದ ಮಹತ್ವದ ಸಾಧನೆ ಇದನ್ನು ಇತಿಹಾಸಜ್ಞರು ಇತಿಹಾಸದ ಮೈಲಿಲ್ಲೆಂದು ಕಂಪ್ಯೂಟರ್ನಲ್ಲಿ ಕೆತ್ತಿ ಪ್ರಪಂಚದ ಮೂಲೆಮೂಲೆಗಳಲ್ಲಿ ಪ್ರತಿಷ್ಠಾಪಿಸಿದ್ದಾರೆ. ನಿಮ್ಮ ಫೋಟೋ ಬಿಟ್ಟರೆ ಈ ಸ್ವಾಮೀಜಿ ಫೋಟೋಗಳೇ ತನ್ನ ಅಂಗಡಿಯಲ್ಲಿ ಹೆಚ್ಚು ಮಾರಾಟವಾಗುವುದು ಎಂದು ಕೊತ್ವಾಲ್ ಮಾಕರ್ೆಟ್ನ ರವಿಸಾಹೆಬ್ರು ಪತ್ರಿಕಾ ಹೇಳಿಕೆ ನೀಡಿದ್ದು ಮೊನ್ನೆ ತಾನೆ ಪ್ರಕಟವಾಗಿತ್ತು. ಇದನ್ನು ಗಮನಿಸಿದ ಜಗತ್ತಿನ ದೊಡ್ಡ ಕಂಪನಿಗಳಾದ ವಾಲ್ ಮಾರ್ಟ, ರಿಲೆಯನ್ಸ್, ಮೈಕ್ರೋಸಾಪ್ಟ್, ಪೆಪ್ಸಿ, ಮುಂತಾದ ಗಣ್ಯ ಕಂಪನಿಗಳು ಈ ಬಿಸ್ ನೆಸ್ ಅನ್ನು ಮಾಡಲು ಯೋಜಿಸುತ್ತಿರುವುದು ವಾಣಿಜ್ಯ ಪತ್ರಿಕೆಗಳಲ್ಲಿ ವಿಶೇಷ ಸುದ್ದಿಯಾಗಿ ಪ್ರಕಟವಾಗಿತ್ತು.
ನಮ್ಮ ಭಾರತ ಎಷ್ಟು ಮಹಾನ್ ರಾಷ್ಟ ಎಂದು ನನಗೆ ಅರ್ಥವಾಗಿದ್ದು ಇತ್ತೀಚೆಗೆ ಅಷ್ಟೇ. ನನ್ನ ಈ ಮಹಾನ್ ದೇಶದ ಸುತ್ತಲಿನ ದೇಶಗಳಾದ ಪಾಕಿಸ್ತಾನ,ನೇಪಾಳ, ಬಾಂಗ್ಲಾದೇಶ, ಶ್ರೀಲಂಕ,ದೇಶಗಳಲ್ಲಿ ಯುದ್ಧಗಳು ನಡೆಯತ್ತಿವೆ. ಪ್ರತಿದಿನ ಬಾಂಬುಗಳ ದಾಳಿ,ಬಂದೂಕಿನ ಬುಲೆಟ್ಟುಗಳಿಂದ ಸಾವಿರಾರು ಜನ ಕೊಲೆಯಾಗುತ್ತಿದ್ದಾರೆ. ಆದರೆ ಇಲ್ಲಿ ಯುದ್ಧದ ಮಾತೇ ಇಲ್ಲ. ನಮ್ಮದು ಶಾಂತಿಯ ನೆಲವಿದು. ಸುಭಿಕ್ಷೆಯ ತವರೂರು. ಇಲ್ಲಿ ಕೇವಲ ರೈತರು, ಕಾಮರ್ಿಕರು, ಹಸಿವಿನಿಂದ ಆಂತರಿಕ ಗಲಭೆಗಳಿಂದ ಪ್ರತಿದಿನ ಕೆಲವು ನೂರು ಜನಗಳು ಸಾಯುತ್ತಿದ್ದಾರೆ. ಇಷ್ಟನ್ನು ಬಿಟ್ಟರೆ ದೇಶ ಸಮೃದ್ಧವಾಗಿದೆ.
ನೂರಾರು ಜನ ಕೊಟ್ಯಾಧೀಶರುಗಳು ಲೋಕಸಭೆಯಲ್ಲಿ ಅಧಿಕಾರ ಹಿಡಿದು ಜನ ಸೇವೆಗೆ ಟೊಂಕಕಟ್ಟಿ ನಿಂತಿದ್ದಾರೆ. ಇಲ್ಲಿ ಸತ್ಯದ ಪರಿಪಾಲನೆ ಇತ್ತೀಚೆಗೆ ಹೆಚ್ಚಾಗಿದೆ. ಹಾಗಾಗಿ ಪ್ರಾಯೋಜಿತ ಗಲ್ಲು ಶಿಕ್ಷೆ ,ಜೈಲುವಾಸಗಳು ಹೆಚ್ಚಾಗಿ ಜನ ಶಾಂತಿಯಿಂದ ಬದುಕಲು ಯೋಗ್ಯವಾದ ಸ್ಥಳವಾಗಿ ಬದಲಾಗುತ್ತಿದೆ.
ನಿಮ್ಮ ಬಾಲ್ಯದಲ್ಲಿ ನೀವು ನಿಮ್ಮ ತಂದೆಗೆ ಬರೆದ ಪತ್ರದಂತೆ ನಾನು ನಿಮಗೆ ನನ್ನೋಳಗಿನ ಸತ್ಯಗಳನ್ನು ಬರೆಯಲು ಇಷ್ಟ ಆದರೆ ಸತ್ಯವನ್ನು ನೇರವಾಗಿ ಹೇಳುವವರಿಗೆ ಅತ್ಯಂತ ವಿಶೇಷವಾದ ಪ್ಯಾಕೇಜ್ ಅನ್ನು ಸಕರ್ಾರದ ರಕ್ಷಾಣ ಇಲಾಖೆ ವ್ಯವಸ್ಥೆ ಮಾಡಿರುವುದರಿಂದ ಸದ್ಯಕ್ಕೆ ನನ್ನ ಸತ್ಯಗಳ ಪತ್ರವನ್ನು ಬರೆಯದೆ ನಾನು ಮತ್ತಷ್ಟು ನಾಗರೀಕನಾಗಿ ವತರ್ಿಸಲು ಪ್ರಾರಂಭಿಸುವ ಸಾಧ್ಯತೆಗಳ ಕಡೆ ಗಮನ ಕೊಡುತ್ತಿದ್ದೇನೆ. ಹಾಗಾಗಿ ಮುಂದೆ ಸಾಧ್ಯವಾದರೆ ಏಂದಾದರು ನಿಮ್ಮಂತೆಯೇ ನನಗೆ ತಿಳಿದ ಹೆಚ್ಚು ಸತ್ಯಗಳ ಪತ್ರಗಳನ್ನು ಬರೆಯಲು ಪ್ರಯತ್ನಿಸುತ್ತೇನೆ. ಹಾಗೆಯೇ ನಿಮ್ಮ ಲೋಕದಲ್ಲಿ ಎಲ್ಲಿಯೋ ಇರುವ ಅಂಬೇಡ್ಕರ್, ಭಗತ್ ಸಿಂಗ್, ಮತ್ತಿತರರಿಗೂ ಪತ್ರ ಬರೆಯುವ ಆಸೆ ಆದರೆ ನನ್ನ ಹತ್ತಿರ ಅವರ ವಿಳಾಸವಿಲ್ಲ. ಹಾಗೆ ನನ್ನ ಸ್ನೇಹಿತೆ ಹೇಳಿದಂತೆ ಅವರಿಗೆ ಪತ್ರ ತಲುಪುವ ವ್ಯವಸ್ಥೆ, ದಾರಿ ಯಾವುದು ಇಲ್ಲವಂತೆ ಹೌದ? ಇರಲಿ ಸಾಧ್ಯವಾದರೆ ಈ ಪತ್ರದ ವಿಚಾರಗಳನ್ನು ಅವರಿಗೂ ತಿಳಿಸಿ. ನಿಮ್ಮ ಉತ್ತರಕ್ಕೆ ನಾನೇನು ಕಾಯುವುದಿಲ್ಲ ನಾನೇ ಮುಂದಿನ ಪತ್ರವನ್ನು ಬರೆಯುತ್ತೇನೆ.
ಇಂತಿ
ಮುರಳಿ ಮೋಹನ್ ಕಾಟಿ




ವ್ಯಂಗ್ಯವನ್ನು ಹೀಗೆ ಹೇಳಬೇಕು…ಬರಹ ಶೈಲಿ ಸೊಗಸಾಗಿದೆ.