ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗಾಂಧಿ ನಮ್ಮೊಳಗಿನ ಒಳಗಿನ ತಿಳಿ…

ಎಲ್ ಎನ್ ಮುಕುಂದರಾಜ್

*ಗಾಂಧಿ* ಎನ್ನುವ ಒಳಗಿನ ತಿಳಿಯನು ಕಲಕದೆಯಿದ್ದರೆ ಭಾರತ ದೇಶಕ್ಕೆ ಬಹುದೊಡ್ಡ ಭವಿಷ್ಯವಿದೆ, ಇಲ್ಲವಾದರೆ ಭವಿಷ್ಯವೇ ಕತ್ತಲಾಗುತ್ತದೆ ಎಂಬ ನಂಬಿಕೆ ನನ್ನದು. ಕಗ್ಗಾಡಿನ ನಡುವೆ ನಡೆಯುವ ಎಷ್ಟೋ ಅಮಾಯಕ ಜನಕ್ಕೆ ಹೊಂಡದ ಆ ತಿಳಿ ನೀರು ಕುಡಿಯುವ ಜೀವ ಜಲವಾಗಿರುತ್ತದೆ. ಅದನ್ನು ಕಲಕಿದಷ್ಟು ಬಗ್ಗಡವಾಗುತ್ತದೆ. ತಿಳಿ ಎಂದರೆ ಅರಿವು ಎನ್ನುವ ಅರ್ಥವೂ ಒದಗುತ್ತದೆ.

ಪುಟ್ಟ ಬಾಲಕನಾಗಿದ್ದಾಗ ಮಹಾತ್ಮ ಗಾಂಧಿಯವರನ್ನು ಫೋಟೋಗಳಲ್ಲಿ ಮಾತ್ರ ನೋಡುತ್ತಿದ್ದೆ. ಶಾಲೆಗಳಲ್ಲಿ ನಡೆಯುತ್ತಿದ್ದ  ಸ್ವಾತಂತ್ರ‍್ಯ ದಿನಾಚರಣೆಗಳಂತಹ ರಾಷ್ಟ್ರೀಯ ಹಬ್ಬಗಳಲ್ಲಿ ಇಡುತ್ತಿದ್ದ ಗಾಂಧಿ ಫೋಟೋ ಎದುರು ನಿಂತು ‘ಮಹಾತ್ಮ ಗಾಂಧೀಕಿ ಜೈ’ ಎಂದು ಎಲ್ಲ ಬಾಲಕರ ಹಾಗೆ ನಾನು ಕೂಗುತ್ತಿದ್ದೆ. ಆ ಸಂದರ್ಭದಲ್ಲಿ ನಮ್ಮ ಹೆಬ್ಬೂರಿನ ರಸ್ತೆಗಳಲ್ಲಿ ವಿನೋಬಾ ಭಾವೆ ನಡೆದು ಹೋಗಿದ್ದರು. ಅವರನ್ನು ನೋಡಿ ಬಹುಷಃ ಇವರು ಗಾಂಧಿಯ ತಮ್ಮನೋ, ಮಗನೋ ಇರಬೇಕೆಂದು ಕಲ್ಪಿಸಿಕೊಂಡಿದ್ದೆ.

ಗುಬ್ಬಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಾನಾಗ ನಾಲ್ಕನೇ ತರಗತಿಯ ವಿದ್ಯಾರ್ಥಿ. ಆ ಶಾಲೆಯ ಮುಖ್ಯೋಪಾಧ್ಯಾಯರಾಗಿ ಇದ್ದವರು ಕಗ್ಗೆರೆಯಪ್ಪ. ಅವರು ಅಪ್ಪಟ ಗಾಂಧಿವಾದಿಗಳಾಗಿದ್ದರು. ಖಾದಿ ಜುಬ್ಬಾ, ಪಂಚೆ ಹಾಗೂ ಟೋಪಿ ಧರಿಸುತ್ತಿದ್ದರು. ಕೃಷ್ಣಸ್ವಾಮಿ ಎನ್ನುವ ಮತ್ತೊಬ್ಬ ಗಾಂಧಿವಾದಿ ಮೇಷ್ಟ್ರು ಇದ್ದರು. ಒಂದು ದಿನ ಅವರು ತರಗತಿಗೆ ಬಂದವರೇ “ಮಕ್ಕಳೇ ನಾಳೆ ಶಾಲೆಗೆ ಬರುವಾಗ ಹಳೆಯ ಹಾಳೆಗಳನ್ನು ಜೋಡಿಸಿಕೊಂಡು ಪುಟ್ಟ ಬರೆಯುವ ಪುಸ್ತಕ ಹೊಲೆದುಕೊಂಡು ಬನ್ನಿ, ಜೊತೆಗೆ ಪೆನ್ಸಿಲ್ ತನ್ನಿ” ಎಂದರು ನಮಗೆ ಆಶ್ಚರ್ಯ ಖುಷಿ ಎಲ್ಲಾ ಆಯಿತು. ಅಲ್ಲಿಯವರೆಗೆ ಕೇವಲ ಸ್ಲೇಟು ಬಳಪಗಳನ್ನು ಮಾತ್ರ ನಾವು ಬರೆಯಲು ಬಳಸುತ್ತಿದ್ದೆವು. ಮನೆಗೆ ಬಂದವನೇ ನಮ್ಮ ಅಕ್ಕ ಲೋಲಾಕ್ಷಮ್ಮನ ಅಳಿದುಳಿದ ನೋಟ್ ಪುಸ್ತಕಗಳಿಂದ ಹಾಳೆಗಳನ್ನು ಕಿತ್ತು, ಪಾಕೆಟ್ ಪುಸ್ತಕವೊಂದನ್ನು ಹೊಲೆದುಕೊಂಡೆ. ಕೃಷ್ಣಸ್ವಾಮಿ ಮೇಷ್ಟ್ರು ಹುಡುಗರನ್ನೆಲ್ಲ ಒಟ್ಟಿಗೆ ಕೂರಿಸಿಕೊಂಡು ದಿನವೂ ಎರಡು ಮೂರು ಪುಟಗಳಷ್ಟು ಗಾಂಧಿಯ ಜೀವನ ಕುರಿತು ಉಕ್ತಲೇಖನ ಅಂದರೆ ಡಿಕ್ಟೇಷನ್ ಬರೆಸತೊಡಗಿದರು. ಅದರಿಂದ ನಮಗೆ ಎರಡೊಂದು ಲಾಭವಾಗತೊಡಗಿತು. ಕನ್ನಡ ಭಾಷೆಯನ್ನು ಓದಲು ಬರೆಯಲು ಕಲಿಯುವುದು, ಜೊತೆಗೆ ಗಾಂಧಿಯ ಜೀವನ ಚರಿತ್ರೆಯನ್ನು ತಿಳಿಯುವುದು.

ನಂತರ ತುರುವೇಕೆರೆಯಲ್ಲಿ ಪಿಯುಸಿ ಓದುವ ಪ್ರಾಯದ ಹುಡುಗನಾಗಿದ್ದೆ. 1977ನೇ ಇಸವಿ. ಆಗತಾನೆ ಎಮರ್ಜೆನ್ಸಿ ಮುಗಿದಿತ್ತು. ನನ್ನ ಗೆಳೆಯ ನಟರಾಜ್ ಪಂಡಿತ ನನ್ನನ್ನು ಆರ್.ಎಸ್.ಎಸ್  ಶಾಖೆಗೆ ಕರೆದುಕೊಂಡು ಹೋದ. ಅಲ್ಲಿ ಆರ್.ಎಸ್.ಎಸ್ ನವರು ಗಾಂಧಿಯ ವಿರುದ್ಧ ಹೀನಾಮಾನ ಮಾತುಗಳನ್ನು ಆಡುತ್ತಿದ್ದರು. “ಗಾಂಧಿಯಿಂದಲೇ ಈ ದೇಶ ತುಂಡಾಯಿತು.  ಪಾಕಿಸ್ತಾನ ಆಗಲು ಗಾಂಧಿಯೆ ಕಾರಣ.  ಮುಸ್ಲಿಮರಿಗೆ ಗಾಂಧಿ ಸಾಕಷ್ಟು ಸಹಾಯ ಮಾಡುವ ಮೂಲಕ ಹಿಂದುಗಳಿಗೆ ಪರಮ ಅನ್ಯಾಯ ಮಾಡಿದ. ಅದಕ್ಕಾಗಿ ನಾಥೂರಾಮ್ ಗೋಡ್ಸೆ ಎನ್ನುವ ದೇಶಭಕ್ತ ಮಹಾತ್ಮ ಗಾಂಧಿಯನ್ನು ಗುಂಡಿಟ್ಟು ಕೊಂದು, ಸಂಹಾರ ಮಾಡಿಬಿಟ್ಟ” ಎನ್ನುತ್ತಿದ್ದರು. ನನ್ನದು ಮೊದಲೇ ಹುಡುಗುಬುದ್ದಿ. ಗಂಭೀರ ಅಧ್ಯಯನದ ಹಿನ್ನೆಲೆಯೂ ಇರಲಿಲ್ಲ. ಅವರು ಹೇಳುತ್ತಿದ್ದ ಸುಳ್ಳುಗಳನ್ನೇ ಸತ್ಯವೆಂದು ನಂಬಿಬಿಟ್ಟಿದ್ದೆ.

“ಗಾಂಧಿಯಿಂದಲೇ ಈ ದೇಶ ತುಂಡಾಯಿತು.  ಪಾಕಿಸ್ತಾನ ಆಗಲು ಈ ಗಾಂಧಿಯೆ ಕಾರಣ.  ಮುಸ್ಲಿಮರಿಗೆ ಗಾಂಧಿ ಸಾಕಷ್ಟು ಸಹಾಯ ಮಾಡುವ ಮೂಲಕ ಹಿಂದುಗಳಿಗೆ ಪರಮ ಅನ್ಯಾಯ ಮಾಡಿದ.” ಇಂತಹ ಸುಳ್ಳುಗಳನ್ನು ಕೇಳಿದರೆ ನಮ್ಮಂತಹ ವಕ್ಕಲಿಗ ಜನಾಂಗದಲ್ಲಿ ಹುಟ್ಟಿದ ಹುಂಬರಿಗೆ ಇದು ಸತ್ಯವೇ ಇರಬೇಕೆಂಬ ನಂಬಿಕೆ ಬರುತ್ತದೆ. ಜೊತೆಗೆ ಖಚಿತವಾದ ಒಂದು ತೀರ್ಮಾನ ಹುಟ್ಟಿಕೊಳ್ಳುತ್ತದೆ.

ಮಹಾತ್ಮ ಗಾಂಧಿಗೂ ಭಾರತ ದೇಶದ ವಿಭಜನೆಗೂ ಯಾವುದೇ ಸಂಬಂಧವಿಲ್ಲ ಎಂಬುದನ್ನು ಚರಿತ್ರೆಯ ಪುಟಗಳು ಸಾರಿ ಸಾರಿ ಹೇಳುತ್ತವೆ. ನಮ್ಮ ತಾತ ಮುತ್ತಾತಂದಿರ ಕಾಲದಿಂದಲೂ ಅಕ್ಷರಗಳನ್ನು ಕಲಿಯದ, ಪುಸ್ತಕಗಳನ್ನು ಓದುವ  ಅಭ್ಯಾಸವಿಲ್ಲದ ನಮ್ಮಂತಹ ದುಡಿಯುವ ವರ್ಗಕ್ಕೆ ಸೇರಿದ ಶ್ರಮಿಕರಿಗೆ ಯಾರೋ ಜಾತ್ಯಾಂಧ ಸ್ವಾರ್ಥಿಗಳು ಹೇಳುವ ಮಾತುಗಳೇ ಗಟ್ಟಿಯಾಗಿ ನಿಂತುಬಿಡುತ್ತವೆ. ಅದು ಸುಳ್ಳೇ ಆಗಲಿ, ನಿಜವೇ ಆಗಲಿ ಅದನ್ನು ನಂಬಿ ಬಿಡುತ್ತೇವೆ. ಎಷ್ಟೇ ಆಗಲಿ ನಮ್ಮ ಜನ, ಚರಿತ್ರೆಯನ್ನು ಪುರಾಣವನ್ನಾಗಿ ಕಲ್ಪಿಸಿಕೊಂಡು, ಅದನ್ನೇ ಸತ್ಯವೆಂದು ನಂಬಿದ ಮಹಾನುಭಾವರಲ್ಲವೇ. ಸಂಘದ ಶಾಖೆಯಲ್ಲಿ ಗಾಂಧಿಯ ಬಗ್ಗೆ ಯಾರೋ ಪುಣ್ಯಾತ್ಮ ಹೇಳಿದ ಒಂದು ಮಾತು ಈಗಲೂ ನೆನಪಿದೆ. ಪಾಕಿಸ್ತಾನದ ಪಿತಾಮಹ ಮಹಮ್ಮದಾಲಿ ಜಿನ್ನಾ ಗಾಂಧಿಯ ಬಗ್ಗೆ ಬಹಳ ಹೀನಾಯವಾಗಿ ಮಾತನಾಡುತ್ತಿದ್ದನಂತೆ! “ಪಾಕಿಸ್ತಾನದ ಒಬ್ಬ ವ್ಯಭಿಚಾರಿ ಮುಸ್ಲಿಮನಿಗಿಂತಲೂ ಗಾಂಧಿ ನೀಚ” ಎನ್ನುವ ಮಾತುಗಳನ್ನು ಹೇಳುತ್ತಿದ್ದನಂತೆ! ಇದು ಸತ್ಯವೋ ಸುಳ್ಳೋ ಎಂಬುದಂತೂ ನನಗೆ ಗೊತ್ತಿಲ್ಲ. ಗಾಂಧಿಯ ಬಗೆಗೆ ಈ ಜನ ಯಾವ ರೀತಿಯ ಚಿತ್ರವನ್ನು ನನ್ನಂತಹ ಮುಗ್ಧ ಹುಡುಗರಿಗೆ ಕಟ್ಟಿಕೊಡುತ್ತಿದ್ದರು ಎಂಬುದಕ್ಕೆ ಇವೆಲ್ಲ ಸಾಕ್ಷಿ. ಸಂಘ ಪರಿವಾರದ ಸಂಘಟನೆಗಳಲ್ಲಿ ಇರುವಷ್ಟು ದಿನವೂ ನಾನು ಈ ಮಾತುಗಳನ್ನು ಸತ್ಯವೆಂದೇ ಭಾವಿಸಿದ್ದೆ.

ಹೆಸರಾಂತ ರಂಗ ನಿರ್ದೇಶಕ ಪ್ರೊಫೆಸರ್ ಸಿ.ಜಿ. ಕೃಷ್ಣಸ್ವಾಮಿ ಅವರು ನನ್ನಿಂದ ಎರಡು ನಾಟಕಗಳನ್ನು ಬರೆಸಿದ್ದರು. ಒಂದು ವೈಶಂಪಾಯನ ತೀರ ಮತ್ತೊಂದು ಇಗೋ ಪಂಜರ ಅಗೋ ಮುಗಿಲು. ಇಗೋ ಪಂಜರ ಅಗೋ ಮುಗಿಲು ನಾಟಕದಲ್ಲಿ ಗಾಂಧಿ ಅನುಭವಿಸಿದ ತಳಮಳಗಳನ್ನು, ಸಂಕಟಗಳನ್ನು ಕುರಿತು ಬರೆಯುವಂತೆ ನನಗೆ ಸೂಚಿಸಿದರು. ದೇಶಕ್ಕೆ ತಂದೆಯಾದ, ಜಗತ್ತಿಗೆ ಮಹಾತ್ಮನಾದ ಈ ಗಾಂಧಿ ಯಾವ ತಳಮಳ ಹಾಗೂ ಸಂಕಟ ಅನುಭವಿಸಲು ಸಾಧ್ಯ ಎಂಬ ಗೊಂದಲಕ್ಕೆ ನಾನು ಬಿದ್ದಿದ್ದೆ. ಗೋಡ್ಸೆಯ ಗುಂಡು ತಿಂದು ಪ್ರಾಣ ಬಿಟ್ಟ ಗಾಂಧಿಯ ಸಂಕಟ ಅಂತಿರಲಿ, ನಾಟಕ ಬರೆಯಲು ಕುಳಿತ ನನ್ನ ಸಂಕಟ ಗಾಂಧಿಯ ಸಂಕಟಕ್ಕಿಂತ ಬಹಳ ಅಗಾಧವಾಗಿತ್ತು. ಇದನ್ನೆಲ್ಲಾ ಅರ್ಥ ಮಾಡಿಕೊಂಡ ಸಿಜಿಕೆ ನನಗೆ ಗಾಂಧಿಯ ಬಗೆಗೆ ಓದಿ ತಿಳಿದುಕೊಳ್ಳಲು ಹಲವಾರು ಪುಸ್ತಕಗಳನ್ನು ತರಿಸಿಕೊಟ್ಟರು. ಜೊತೆಗೆ ಗಾಂಧಿಯವರನ್ನು ಹತ್ತಿರದಿಂದ ಬಲ್ಲ ಸತ್ಯವ್ರತ ಅವರನ್ನು ಸಂದರ್ಶಿಸುವ ಸಲಹೆ ಕೊಟ್ಟರು. 

ಆಗ ಸತ್ಯವೃತ ಅಥವ ಸತ್ಯವ್ರತ ಬೆಂಗಳೂರಿನ ಶಿವಾನಂದ ವೃತ್ತದ ಬಳಿ ಇರುವ ವಲ್ಲಭನಿಕೇತನದಲ್ಲಿ ವಾಸಿಸುತ್ತಿದ್ದರು. ಮೂರು ನಾಲ್ಕು ದಿನಗಳ ಕಾಲ ಅವರು ಗಾಂಧಿಯ ಬಗೆಗಿನ ಸಾಕ್ಷಾತ್ ಚಿತ್ರಗಳನ್ನು ನನ್ನ ಮನಸ್ಸು ಮುಟ್ಟುವಂತೆ ಕಟ್ಟಿಕೊಟ್ಟಿದ್ದರು. ಅದನ್ನೆಲ್ಲ ಬಳಸಿಕೊಂಡು ನಾನು ಗಾಂಧಿಯ ತಳಮಳಗಳನ್ನು ನನ್ನ ನಾಟಕದಲ್ಲಿ ಬರೆದೆ. ಸಿಜಿಕೆ ಬಹಳ ಸಂತೋಷದಿಂದ ಅದನ್ನು ಸ್ವೀಕರಿಸಿ ದೃಶ್ಯ ರೂಪಕ್ಕಿಳಿಸಿದರು.

ಸದ್ಯದ ಸಂದರ್ಭದಲ್ಲಿ ನಮ್ಮ ಅನೇಕ ದಲಿತ ಬಂಧುಗಳು ಮಹಾತ್ಮ ಗಾಂಧಿಯ ಬಗ್ಗೆ ಹಲವಾರು ವಿರೋಧದ ಮಾತುಗಳನ್ನು ಆಡುತ್ತಿದ್ದಾರೆ. ಅದಕ್ಕೆ ಕಾರಣ ಪೂನಾ ಫ್ಯಾಕ್ಟರ್. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಮಣಿಸಲು ಗಾಂಧಿ ಉಪವಾಸ ಸತ್ಯಾಗ್ರಹ ಮಾಡಿದ್ದನ್ನು ಬಹು ದೊಡ್ಡ ಚಾರಿತ್ರಿಕ ಅನ್ಯಾಯವೆಂದು ನಮ್ಮ ದಲಿತ ಬಂಧುಗಳು ಭಾವಿಸಿದ್ದಾರೆ. ಅವರ ಮಾತುಗಳನ್ನು ಕೇಳುತ್ತಿದ್ದರೆ ನನಗೂ ಗಾಂಧಿಯ ಬಗ್ಗೆ ಸಂದೇಹ ಹುಟ್ಟಿಕೊಳ್ಳುತ್ತಿತ್ತು. ಎಷ್ಟೇ ಆಗಲಿ ನನ್ನದು ಸಂಘ ಪರಿವಾರದ ಹಿನ್ನೆಲೆಯಲ್ಲವೆ! ಗಾಂಧಿಯ ನಿಂದಕರ ಬಗೆಗೆ ನನಗೆ ಬಹುದೊಡ್ಡ ಅಭಿಮಾನ ಹುಟ್ಟಿಬಿಡುತ್ತಿತ್ತು. 

ಸ್ವಾತಂತ್ರೋತ್ತರ ಭಾರತದಲ್ಲಿ, 60-70ರ ದಶಕಗಳವರೆಗೆ ಯಾವ ದಲಿತರೂ ಗಾಂಧಿಯನ್ನು ವಿರೋಧಿಸಿ ಮಾತನಾಡಿದ್ದು ನನ್ನ ಗಮನಕ್ಕೆ ಬಂದಿರಲಿಲ್ಲ. ಆ ಕಾಲದ ದಲಿತರು ತಾವು ವಾಸಿಸುವ ಕೇರಿಗಳಿಗೆ ಗಾಂಧಿಯ ಹೆಸರನ್ನು ಅಭಿಮಾನದಿಂದ ಇಟ್ಟುಕೊಳ್ಳುತ್ತಿದ್ದರು. 80ರ ದಶಕದಿಂದ ಈಚೆಗೆ ಉತ್ತರ ಪ್ರದೇಶದಲ್ಲಿ ಕಾನ್ಷಿರಾಮ್ ಹಾಗೂ ಮಾಯಾವತಿ ಅವರ ನೇತೃತ್ವದಲ್ಲಿ ಬಹುಜನ ಸಮಾಜವಾದಿ ಪಕ್ಷ ಅಸ್ತಿತ್ವಕ್ಕೆ ಬಂತು. ಆ ಪಕ್ಷದ ಪ್ರಭಾವವೋ ಅಥವಾ ಮತ್ಯಾವ ಕಾರಣವೋ ಗೊತ್ತಿಲ್ಲ. ಅಲ್ಲಿಂದ ಆಚೆಗೆ ಅನೇಕ ದಲಿತ ಹೋರಾಟಗಾರರು ಹಾಗೂ ಚಿಂತಕರು ಮಹಾತ್ಮ ಗಾಂಧಿಯನ್ನು ತಮ್ಮ ವಿರೋಧಿ ಎಂದೇ ಭಾವಿಸಿದ್ದಾರೆ. ವಿಚಿತ್ರವೆಂದರೆ, ನಾನು ಗಂಭೀರವಾಗಿ ಓದಿಕೊಂಡು ಗೌರವಿಸುವ ದಲಿತ ಸಾಹಿತಿಗಳಾದ ದೇವನೂರು ಮಹಾದೇವ ಹಾಗೂ ಸಿದ್ದಲಿಂಗಯ್ಯನವರ ಬರಹಗಳಲ್ಲಿ ಇಂತಹ ಗಾಂಧಿ ವಿರೋಧದ ಪ್ರಸ್ತಾಪಗಳಿಲ್ಲ. ಮಹಾದೇವ ಅನೇಕ ಸಂದರ್ಭಗಳಲ್ಲಿ ಗಾಂಧಿಯನ್ನು ಈ ದೇಶದ ತಂದೆಯೆಂದು, ಬಾಬಾ ಸಾಹೇಬರನ್ನು ತಾಯಿ ಎಂದೂ ಗುರುತಿಸಿದ್ದಾರೆ. ಕುವೆಂಪು, ಗೊರೂರು ರಾಮಸ್ವಾಮಿ ಅಯ್ಯಂಗಾರ್,  ಸಿದ್ಧವನಹಳ್ಳಿ ಕೃಷ್ಣಶರ್ಮ, ಲಂಕೇಶ್, ಬೆಸಗರಹಳ್ಳಿ ರಾಮಣ್ಣ ಸೇರಿದಂತೆ ನಮ್ಮ ಕಾಲದ ಬಹುತೇಕ ಲೇಖಕರು ಮಹಾತ್ಮ ಗಾಂಧಿಯನ್ನು ಕುರಿತು ಅತ್ಯದ್ಭುತವಾಗಿ ಬರೆದಿದ್ದಾರೆ.

ಲಂಕೇಶರ ‘ಮೋಕ್ಷ ಹುಡುಕುತ್ತಾ ಪ್ರೀತಿಯ ಬಂಧನದಲ್ಲಿ’ ಎನ್ನುವ ಪ್ರಬಂಧದಲ್ಲಿ ಬುದ್ಧನ ಜೊತೆಗೆ ಗಾಂಧಿಯನ್ನು ಹೋಲಿಸಿ ಬರೆಯುತ್ತಾರೆ. “ರಕ್ತ ಮಾಂಸಗಳಿಂದ ಮೈ ಪಡೆದ ಮನುಷ್ಯನೊಬ್ಬ ನಮ್ಮೆಲ್ಲರ ಹಾಗೆ ಈ ನೆಲದ ಮೇಲೆ ಓಡಾಡುತ್ತಿದ್ದ ಎಂದರೆ ಮುಂದಿನ ಪೀಳಿಗೆ ನಂಬಲಾರದು” ಎನ್ನುವ ಐನ್‌ಸ್ಟೈನ್ ಅವರ ಮಾತುಗಳನ್ನು ಅವರ ಪ್ರಬಂಧದಲ್ಲಿ ಕೋಟ್ ಮಾಡುತ್ತಾರೆ. ಅಂಬೇಡ್ಕರ್ ಅವರನ್ನು ಕುರಿತು ಕಳೆದ ಎರಡು ಮೂರು ದಶಕಗಳಿಂದಷ್ಟೇ ನಾವೆಲ್ಲ ಬರೆಯುತ್ತಿದ್ದೇವೆ. ಸಿದ್ದಲಿಂಗಯ್ಯನವರ ‘ನಾಡ ನಡುವಿನಿಂದ ಸಿಡಿದ ನೋವಿನ ಕೂಗೆ’ ಎನ್ನುವ ಕವಿತೆ ಹಾಗೂ ದೇವನೂರರ ‘ಕುಸುಮ ಬಾಲೆ’ ಕಾದಂಬರಿಯಲ್ಲಿ ಅಂಬೇಡ್ಕರ್ ಅವರ ಪ್ರಸ್ತಾಪ ಇದೆ. ಆಧುನಿಕ ಕನ್ನಡ ಲೇಖಕರನ್ನು ಗಾಂಧಿ ಪ್ರಭಾವಿಸಿದಷ್ಟರ ಮಟ್ಟಿಗೆ ಬೇರೆ ಯಾವ ನಾಯಕನೂ ಪ್ರಭಾವಿಸಿಲ್ಲ ಎಂಬದು ಇದರಿಂದ ಸ್ಪಷ್ಟವಾಗುತ್ತದೆ. ಇದಕ್ಕೆ ಅರಿವಿನ ಕೊರತೆಯು ಕಾರಣ ಇರಬಹುದು.

ಪಕ್ಕ ಎಡಪಂಥೀಯರಾಗಿದ್ದ ಸಿಜಿಕೆ ಬೆಂಗಳೂರು ವಿಶ್ವವಿದ್ಯಾಲಯದ ಗಾಂಧಿ ಭವನದ ನಿರ್ದೇಶಕರಾಗುತ್ತಾರೆ. ಆ ಹೊತ್ತಿಗಾಗಲೇ ಗಾಂಧಿಯ ವಿರುದ್ಧ ಅಂಬೇಡ್ಕರ್ ವಾದಿಗಳು ಬಹುದೊಡ್ಡ ಚರ್ಚೆಗಳನ್ನು ಆರಂಭಿಸಿರುತ್ತಾರೆ. ಇದು ಮುಂದಿನ ದಿನಗಳಲ್ಲಿ ದೇಶದ ಭವಿಷ್ಯಕ್ಕೆ ಮಾರಕವೆಂಬುದನ್ನು ಅರ್ಥ ಮಾಡಿಕೊಂಡ ಸಿಜಿಕೆ, ಗಾಂಧಿ ಮತ್ತು ಅಂಬೇಡ್ಕರ್ ಅವರನ್ನು ಬೆಸೆಯುವ ಹಲವಾರು ಕಾರ್ಯಕ್ರಮಗಳನ್ನು ರೂಪಿಸುತ್ತಾರೆ.

ನನ್ನ ಕಟ್ಟ ಕಡೆಯ ಪ್ರಶ್ನೆ ಏನೆಂದರೆ ನಾಥುರಾಮ ಗೋಡ್ಸೆ ಎಂಬ ಚಿತ್ಪಾವನ ಬ್ರಾಹ್ಮಣ ಮಹಾತ್ಮ ಗಾಂಧಿಯ ಎದೆಗೆ ನೇರವಾಗಿ ಗುಂಡಿಟ್ಟು ಕೊಂದದ್ದು ಏಕೆ? ಭಾರತ ದೇಶದ ಇಬ್ಬಾಗ, ಪಾಕಿಸ್ತಾನದ ನಿರ್ಮಾಣ, ಮುಸ್ಲಿಮರ ತುಷ್ಟೀಕರಣಕ್ಕೆ ಗಾಂಧಿಯೆ ಕಾರಣವೆಂಬ ತಪ್ಪು ಕಲ್ಪನೆ ಅವನಲ್ಲಿತ್ತು. 1947ರಲ್ಲಿ ಭಾರತ ಪಾಕಿಸ್ತಾನದ ವಿಭಜನೆ ಆಯಿತು. ಅತ್ತ ಆರು ತಿಂಗಳಿಗೆ ಗೋಡ್ಸೆ ಗಾಂಧಿಯನ್ನು ಕೊಂದಿದ್ದ. ಅದಕ್ಕೂ ಹಿಂದೆ ಆತ ಆರೇಳು ಸಲ ಗಾಂಧಿಯನ್ನು ಕೊಲ್ಲುವ ಪ್ರಯತ್ನ ಮಾಡಿದ್ದ. ಆಗಿನ್ನು ಪಾಕಿಸ್ತಾನ ಎನ್ನುವ ದೇಶವೆ ಹುಟ್ಟಿಕೊಂಡಿರಲಿಲ್ಲ. ಅಂದ ಮೇಲೆ ಆತನಿಗೆ ಗಾಂಧಿಯನ್ನು ಕೊಲ್ಲಲು ಪಾಕಿಸ್ತಾನ ವಿಭಜನೆ ಕಾರಣವಾಗಿರಲಿಲ್ಲ ಎಂಬ ಸತ್ಯ ಸ್ಪಷ್ಟವಾಗುತ್ತದೆ.

ಭಾರತೀಯ ಸಾಮಾಜಿಕ ಸ್ತರದ 97% ತಳ ಸಮುದಾಯಗಳಿಗೆ ಸೇರಿದ ನಾವೆಲ್ಲರೂ ಒಂದು ವಿಚಾರವನ್ನು ಅರ್ಥಮಾಡಿಕೊಳ್ಳಬೇಕು. ಸಾವಿರಾರು ವರ್ಷಗಳ ನಮ್ಮ ದೇಶದ ಚರಿತ್ರೆ ಹಾಗೂ ಪುರಾಣಗಳನ್ನು ಗಂಭೀರವಾಗಿ ಗಮನಿಸಿದಾಗ ವಾಸ್ತವ ವಿಷಯವೊಂದು ಕಣ್ಣೆದುರು ಧುತ್ತನೆ ನಿಲ್ಲುತ್ತದೆ. ನಮ್ಮ ದೇಶದ ದಲಿತರು, ಶೂದ್ರರು ಹಾಗೂ ಮಹಿಳೆಯರ ಪರವಾಗಿ ಯಾರು ದ್ವನಿಯೆತ್ತುತ್ತಾರೋ ಅವರನ್ನು ಇಲ್ಲಿಯವರೆಗೂ ವೈದಿಕಶಾಹಿ ಜನ ಜೀವಂತ ಉಳಿಸಿಲ್ಲ. ಮೊಟ್ಟ ಮೊದಲ ಬಾರಿಗೆ ಎರಡೂವರೆ ಸಾವಿರ ವರ್ಷಗಳ ಹಿಂದೆ ಮಹಾತ್ಮ ಬುದ್ಧ ಈ ದೇಶದ ತಳ ಸಮುದಾಯಗಳ ಸಮಾನತೆಗಾಗಿ ಮಾತನಾಡಿದ. ಆತನನ್ನು, ಆತನ ಧರ್ಮವನ್ನು ದೇಶದಿಂದಲೇ ಓಡಿಸಲಾಯಿತು. 12ನೇ ಶತಮಾನದಲ್ಲಿ ಬಸವಾದಿ ಶರಣರು ಇದೇ ಪ್ರಕಾರದ ಚಳುವಳಿಯನ್ನು ರೂಪಿಸಿದರು. ಅವರನ್ನು ಕಲ್ಯಾಣದ ಬೀದಿ ಬೀದಿಗಳಲ್ಲಿ ಕತ್ತರಿಸಿ ಕತ್ತರಿಸಿ ಕೊಂದು ಹಾಕಿದರು. ನಮ್ಮ ಕಾಲದಲ್ಲಿ ಮಹಾತ್ಮ ಗಾಂಧಿ ಇದೇ ತಪ್ಪನ್ನು ಪುನರಾವರ್ತನೆ ಮಾಡಿದರು. ಗಾಂಧಿಯನ್ನು ಕೊಲ್ಲಲು ಬ್ರಾಹ್ಮಣ ಗೋಡ್ಸೆಗೆ ಇಷ್ಟು ನೆಪ ಸಾಕಾಗಿತ್ತು. ಗೋಡ್ಸೆಯಂತಹ ಸನಾತನಿ ಸಂತಾನಕ್ಕೆ ಮುಸ್ಲಿಮರ ಮೇಲಿನ ದ್ವೇಷಕ್ಕಿಂತ, ಭಾರತದ ದಲಿತ ಹಾಗೂ ಶೂದ್ರರ ಮೇಲಿನ ದ್ವೇಷ ಬಹಳ ದೊಡ್ಡದು. ಗಾಂಧಿ ದಲಿತ, ಶೂದ್ರ ಹಾಗೂ ಮಹಿಳಾ ಸಮುದಾಯದ ಏಳಿಗೆಗಾಗಿ ಕೆಲಸ ಮಾಡುತ್ತಿದ್ದರು. ಹಾಗಾಗಿ ಆತ ಗಾಂಧಿಯನ್ನು ಕೊಂದ ಎಂಬ ಸತ್ಯ ಸೂಕ್ಷ್ಮವಾಗಿ ಯೋಚಿಸಿದಾಗ ಹೊಳೆಯುತ್ತದೆ.

ಗಾಂಧಿ ಮತ್ತು ಅಂಬೇಡ್ಕರ್ ಅವರಿಗೆ ಸಂಬಂಧಿಸಿದಂತೆ ಸತ್ಯವೃತ ಮತ್ತೊಂದು ಕೌತುಕ ಘಟನೆಯನ್ನು ಹೇಳಿದ್ದರು. 1947ರ ಸ್ವಾತಂತ್ರ್ಯದ ತರುವಾಯ ಭಾರತ ದೇಶಕ್ಕೆ ಸಂವಿಧಾನವನ್ನು ಬರೆಸಬೇಕೆಂಬ ಉದ್ದೇಶದಿಂದ ಪ್ರಧಾನಿ ಜವಹರಲಾಲ ನೆಹರು ಅವರು ವಿದೇಶಿ ಕಾನೂನು ತಜ್ಞರನ್ನು ನಿಯೋಜಿಸಲು ತೀರ್ಮಾನಿಸಿದ್ದರು. ಶಿವರಾಮ ಬೆನಗಲ್ ಎನ್ನುವ ಪತ್ರಕರ್ತನಿಗೆ ಈ ಸುದ್ದಿ ತಿಳಿಯುತ್ತದೆ. ಆತ ತಕ್ಷಣ ಮಹಾತ್ಮ ಗಾಂಧಿಯ ಬಳಿಗೆ ಬಂದು “ಮಹಾತ್ಮಾಜಿ, ನೀವು ಯಾವ ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿರೋ, ಅದೇ ಬ್ರಿಟಿಷರಿಂದ ನಿಮ್ಮ ಶಿಷ್ಯ ನೆಹರೂ ಸಂವಿಧಾನ ಬರೆಸಲು ಹೊರಟಿದ್ದಾರೆ. ಏನಾದರೂ ಮಾಡಿ ಅದನ್ನು ತಪ್ಪಿಸಿ, ನಮ್ಮ ದೇಶದಲ್ಲೇ ಸಾಕಷ್ಟು ಕಾನೂನು ಪಂಡಿತರಿದ್ದಾರೆ. ಅವರಿಂದಲೇ ಸಂವಿಧಾನ ಬರೆಸುವಂತೆ ನೆಹರೂ ಅವರಿಗೆ ಸೂಚಿಸಿ” ಎನ್ನುತ್ತಾನೆ. ಆಗ ಗಾಂಧೀಜಿ ಭಾರತದ ಕಾನೂನು ಪಂಡಿತರ ಹೆಸರುಗಳನ್ನು ಪಟ್ಟಿ ಮಾಡುವಂತೆ ಶಿವರಾಮ ಬೆನಗಲ್ ಅವರಿಗೆ ಸೂಚಿಸುತ್ತಾರೆ. 

ಈ ಮಾತಿಗಾಗಿ ಕಾಯುತ್ತಿದ್ದ ಆತ ತನ್ನ ಸಹೋದರರಾದ ರಾಮರಾವ್ ಬೆನಗಲ್, ನರಸಿಂಗರಾವ್ ಬೆನಗಲ್ ಜೊತೆಗೆ ನಾಲ್ಕಾರು ತನ್ನದೇ ಜಾತಿಯ ಕಾನೂನು ಪಂಡಿತರ ಹೆಸರುಗಳ ಪಟ್ಟಿ ಮಾಡಿ “ಮಹಾತ್ಮಾಜಿ, ಈ ಹೆಸರುಗಳ ಪಟ್ಟಿಯನ್ನು ನೆಹರೂಜಿಗೆ ಕೊಡಲೆ” ಎನ್ನುತ್ತಾನೆ. ಆ ಪಟ್ಟಿಯನ್ನು ನೋಡಿ ಕಸಿವಿಸಿಗೊಂಡ ಗಾಂಧೀಜಿ “ಇವರೆಲ್ಲರಿಗಿಂತಲೂ ಶ್ರೇಷ್ಠ ಕಾನೂನು ಪಂಡಿತನೊಬ್ಬ ನಮ್ಮ ದೇಶದಲ್ಲಿ ಇದ್ದಾರೆ. ಅವರೇ ಡಾ. ಬಿ.ಆರ್. ಅಂಬೇಡ್ಕರ್, ಅವರ ಹೆಸರನ್ನು ಮೊದಲು ಸೇರಿಸಿ, ನಾನು ಹೇಳಿದೆ ಎಂದು ನೆಹರೂ ಅವರಿಗೆ ಕೊಡು” ಎಂದು ಸೂಚಿಸುತ್ತಾರೆ. ಆ ಪತ್ರಕರ್ತ ಬಾಬಾ ಸಾಹೇಬರ ಹೆಸರನ್ನು ಬರೆದುಕೊಂಡು ನೆಹರೂ ಅವರಿಗೆ ಗಾಂಧೀಜಿ ಕೊಟ್ಟ ಪಟ್ಟಿಯೆಂದು ಕೊಡುತ್ತಾನೆ. ಗಾಂಧಿಯವರ ಮಾತನ್ನು ಮೀರಲಾರದ ನೆಹರು, ಅಂಬೇಡ್ಕರ್ ಅವರನ್ನು ಸಂವಿಧಾನ ಸಮಿತಿಗೆ ನೇಮಕ ಮಾಡುತ್ತಾರೆ. ಗಾಂಧಿ ಮಾಡಿದ ಈ ಮಹಾನ್ ಉಪಕಾರದಿಂದ ನಮ್ಮ ದೇಶದ ಜನರಿಗೆ ಎಂತಹ ಲಾಭವಾಗಿದೆಯೆಂಬುದನ್ನು ವಿವರಿಸಿ ಹೇಳಬೇಕಾಗಿಲ್ಲ.

ಗಾಂಧಿಯನ್ನು ಗೋಡ್ಸೆ ಒಮ್ಮೆ ಮಾತ್ರ ಕೊಂದು ಹಾಕಿದ. ನಾವೆಲ್ಲ ನಿತ್ಯವೂ ಗಾಂಧಿಯನ್ನು ಕೊಲ್ಲುತ್ತಿದ್ದೇವೆ. ಇದರರ್ಥ ಸನಾತನಿಗಳ ಕ್ರೌರ್ಯದೊಂದಿಗೆ ನಾವು ಇದ್ದೇವೆ  ಎಂದಲ್ಲವೇ! ಗಾಂಧಿಯನ್ನು ಹೊರತುಪಡಿಸಿದರೆ ನಮ್ಮ ದೇಶದ ಸ್ಪ್ರಶ್ಯ ಶೂದ್ರರಿಗೆ ಅಂಬೇಡ್ಕರ್ ಸಹ ಶೂನ್ಯವಾಗಿ ಬಿಡುತ್ತಾರೆ. ಸಂಪ್ರದಾಯವಾದಿಗಳ ವಿರುದ್ಧದ ಹೋರಾಟಕ್ಕೆ ಅಂಬೇಡ್ಕರ್ ಎಷ್ಟು ಮುಖ್ಯವೋ, ಗಾಂಧಿಯೂ ಅಷ್ಟೇ ಮುಖ್ಯ. ಇದನ್ನು ಅಂಬೇಡ್ಕರ್ ವಾದಿಗಳು ಅರ್ಥ ಮಾಡಿಕೊಳ್ಳಬೇಕು. ಪ್ರಜಾಪ್ರಭುತ್ವ, ಸಂವಿಧಾನಗಳ ರಕ್ಷಣೆಗಾಗಿ ಹೋರಾಟ ಮಾಡುತ್ತಿರುವ ಎಲ್ಲ ಬಂಧುಗಳು ಗಾಂಧಿಯಿಂದ  ಆಗಿರಬಹುದಾದ ಚಾರಿತ್ರಿಕ ತಪ್ಪೊಂದನ್ನು ಮನ್ನಿಸಬೇಕು. ಗಾಂಧಿಯನ್ನು ಕೊಲ್ಲಲು ಗೋಡ್ಸೆಗೆ ಸಕಾರಣವೊಂದು ಇತ್ತು. ಆದರೆ ಗಾಂಧಿಯನ್ನು ವಿರೋಧಿಸುತ್ತಿರುವವರಿಗೆ ಯಾವ ಕಾರಣವಿದೆ. ಗಾಂಧಿಯನ್ನು ಕಳೆದುಕೊಂಡರೆ ನಮ್ಮ ಪ್ರಜಾಪ್ರಭುತ್ವ, ಸಂವಿಧಾನ, ಸ್ವಾತಂತ್ರ್ಯ ಎಲ್ಲವನ್ನೂ ಕೆಳ ಜಾತಿಯವರಾದ ನಾವು ಕಳೆದುಕೋಡಂತೆಯೇ ಎಂಬುದು ನನ್ನ ಒಳಗಿನ ತಿಳಿ ಅಥವಾ ಅರಿವು. 

 “ಎಷ್ಟು ಕಷ್ಟವೋ ಹೊಂದಿಕೆ ಎಂಬುದು

ನಾಲ್ಕು ದಿನದ ಈ ಬದುಕಿನಲ್ಲಿ 

ಒಳಗಿನ ತಿಳಿಯನು ಕಲಕದೆ ಇದ್ದರೆ

ಅಮೃತದ ಸವಿಯಿದೆ ನಾಲಗೆಗೆ” ಜಿ.ಎಸ್. ಶಿವರುದ್ರಪ್ಪ ಅವರ  ಮಾತುಗಳೊಂದಿಗೆ ನನ್ನ ಮಾತುಗಳನ್ನು ಬೆಸೆಯುಸುತ್ತೇನೆ.

‍ಲೇಖಕರು Admin

2 October, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading