ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗಾಂಧಿಯೂ.. ನಮ್ಮಪ್ಪನೂ…

ಕೇಶವ ರೆಡ್ಡಿ ಹಂದ್ರಾಳ 

ನಾನು ಪ್ರೈಮರಿ ಸ್ಕೂಲ್ನಲ್ಲಿ ಓದುತ್ತಿದ್ದೆ .ನಮ್ಮೂರ ಸ್ಕೂಲೆಂದರೆ ಸ್ಕೂಲು . ಸ್ಕೂಲಿಗೆ ಅಂಟಿಕೊಂಡಂತೆ ಎಡಕ್ಕೆ ಐದಾರು ಕುರಿರೊಪ್ಪಗಳಿದ್ದರೆ ಬಲಕ್ಕೆ ಊರ ದೇವರಾದ ರಂಗನಾಥಸ್ವಾಮಿ ದೇವಸ್ಥಾನ . ಸ್ಕೂಲಿನ ಮುಂದೆ ದೊಡ್ಡ ಕಣ . ಒಂದು ದಿನ ಮೇಷ್ಟ್ರು ಗಾಂಧಿ ಪಾಠವನ್ನು ಮಾಡಿ ಮುಗಿಸಿದ್ದರು.ಅವೊತ್ತು ಸ್ಕೂಲ್ ಬಿಟ್ಟ ನಂತರ ಅಲ್ಲೆ ಆಟವಾಡುತ್ತಿದ್ದ ನನಗೆ ಸೀಮೆ ಸುಣ್ಣವೊಂದು ಸಿಕ್ಕಿತ್ತು . ತಗೆದುಕೊಂಡವನೇ ದೇವಸ್ಥಾನದ ಬಾಗಿಲಿನ ಪಕ್ಕದ ಗೋಡೆಯ ಮೇಲೆ ‘ ಹರಿಜನರಿಗೆ ಪ್ರವೇಶವುಂಟು ‘ ಎಂದು ಬರೆದಿದ್ದೆ.

ಸಂಜೆ ಏಳುಗಂಟೆ ಟೈಮಿಗೆ ಗುಡಿಯ ಪೂಜಾರಪ್ಪನವರಾದ ಭೀಮಪ್ಪನವರು ಬಂದಿದ್ದರು . “ಮಕ್ಕಳಿಗೆ ಏನು ಗೊತ್ತಾಗ್ತೈತೆ ಬಿಡಿ ಸ್ವಾಮೇರೇ ” ಎಂದು ಪೂಜಾರಪ್ಪನವರ ಹತ್ತಿರ ನಮ್ಮಮ್ಮ ಒಂದು ರೀತಿ ಬೇಡಿಕೊಳ್ಳುವವಳಂತೆ ಹೇಳುತ್ತಿದ್ದದ್ದು ನಾನು ದೇವಸ್ಥಾನದ ಗೋಡೆಯ ಮೇಲೆ ಬರೆದಿದ್ದ ಬರಹದ ವಿಚಾರವಾಗಿಯೇ ಎಂದು ತಿಳಿದು ಹೋಗಿತ್ತು. ಭೀಮಪ್ಪನವರು ನಮ್ಮಮ್ಮನ ರಿಕ್ವೆಸ್ಟಿಗೂ ಸಮಾಧಾನಗೊಳ್ಳದೆ ಬಾರ್ಗೋಲು ಪಾರ್ಟಿಯಾದ ನಮ್ಮಪ್ಪ ಬರುವವರೆಗೂ ಕಾದು ನನ್ನ ಪರಾಕ್ರಮವನ್ನು ವಿವರಿಸಿದ್ದರು.

ಮಾಮೂಲಿಯಂತೆ ನಮ್ಮಪ್ಪನು ಅಟ್ಟಕ್ಕೆ ಸಿಗಿಸಿದ್ದ ಬಾರುಗೋಲನ್ನು ಎಳೆದು ನಮ್ಮಮ್ಮ ಅಡ್ಡ ಬಂದರೂ ಬಿಡದೆ ಬಾರಿಸತೊಡಗಿದ. ಆಗ ನಮ್ಮ ದೊಡ್ಡಪ್ಪ ಬಂದು “ಬಲು ಘನಂದಾರಿ ಮನುಷ್ಯನಲೇ ನೀನು. ಇವೊತ್ತೇಳ್ತೀನಿ ಕೇಳು ಮೇಷ್ಟ್ರು ಪಾಠನ ಅರ್ಥ ಮಾಡ್ಕಂಡಿರೋನು ಇಡೀ ಸ್ಕೂಲ್ಗೆ ನಮ್ಮ ಕೇಶ್ವುನೆ ತಿಳ್ಕ..” ಎಂದು ನಮ್ಮಪ್ಪನಿಗೆ ಉಗಿದು ಬಿಡಿಸ್ಕಂಡಿದ್ದ .

 

ಗಾಂಧಿ ಸವಾಸ ಮಾಡಿ ಬಾರ್ಗೋಲೇಟು ತಿನ್ಬೇಕಾಯ್ತಲ್ಲ ಎಂದು ಕ್ಷಣ ಬೇಸರಗೊಂಡ ನನಗೆ ಮುಂದೆ ಗಾಂಧಿ ಈ ದೇಶದ ದೊಡ್ಡ ಪೈಲ್ವಾನಂತೆ ತೆರೆದುಕೊಂಡಿದ್ದ. ನಮ್ಮಪ್ಪ ಅಷ್ಟೊತ್ತಿನಲ್ಲಿ ಮತ್ತೆ ಬ್ಯಾಲ್ಯಕ್ಕೆ ಹೋಗಿ ಉಪ್ಪು ಕಡಲೆ, ಶುಂಠಿ ಪೆಪ್ಪರ್ ಮೆಂಟು, ಗ್ಲೂಕೋಸ್ ಬಿಸ್ಕತ್ತು ತಂದುಕೊಟ್ಟಿದ್ದ!

ಮುಂದೆ ನಾನು ಹೈಸ್ಕೂಲು ಓದಲು ಬೆಂಗಳೂರಿಗೆ ಹೊರಟಾಗ “ಕೇಶ್ವ ವಾರದಿಂದೆ ಸರಸ್ವತಿ ನಿನ್ನ ಜಾತ್ಕ ನೋಡಿದ್ಲು. ತುಂಬಾ ಚನ್ನಾಗೈತೆ. ಊರ್ಗೆ ಹೆಸರು ತರ್ತೀಯ. ಬೆಂಗಳೂರಿನಾಗೆ ಚನ್ನಾಗಿ ಓದ್ಕ..” ಎಂದು ಪೂಜಾರಿ ಭೀಮಪ್ಪನವರೂ ಕಣ್ಣು ತೇವಗೊಳಿಸಿಕೊಂಡಿದ್ದರು! ಅಲ್ಲೆ ಇದ್ದ ನಮ್ಮ ದೊಡ್ಡಪ್ಪ ನನ್ನ ಕಡೆ ಕಣ್ಸನ್ನೆಯ ಮೂಲಕ ನಕ್ಕಿದ್ದರು !!

ಬಾರುಗೋಲಿನಲ್ಲಿ ಬಾರಿಸುತ್ತಾ, ಹೆಗಲ ಮೇಲೆ ಹೊತ್ತು ತಿರುಗುತ್ತಾ ಹಳ್ಳಿಗಾಡಿನ ಅನಕ್ಷರಸ್ಥ ಅಪ್ಪಂದಿರ ಸಂವೇದನೆಗಳು ಹೇಗಿರುತ್ತವೆಂಬುದನ್ನು ನಮ್ಮಪ್ಪ ತೋರಿಸಿಕೊಟ್ಟಿದ್ದ. (ಎಲ್ಲಾ ಹಳ್ಳಿಗಾಡಿನ ಅಪ್ಪಂದಿರೂ ಸಹ ನನ್ನಪ್ಫನಂತೆ ಎಂಬುದು ನನಗೆ ಗೊತ್ತು )

ನಾನು ಏಳನೆಯ ಕ್ಲಾಸಿನಲ್ಲಿ ಜಿಲ್ಲೆಗೆ ಹತ್ತನೇ Rank ಬಂದಾಗ ಬ್ಯಾಲ್ಯದ ಭದ್ರಣ್ಣನ ಹೋಟೆಲ್ ನಲ್ಲಿ ಮಸಾಲೆ ದೋಸೆ ತಿನ್ನಿಸಿ ಭುಜದ ಮೇಲೆ ಕೂರಿಸಿಕೊಂಡು ಶಂಕರಶೆಟ್ಟಿಯ ಅಂಗಡಿಯಲ್ಲಿ ಜೇಬಿಗೆ ಉಪ್ಪು ಕಡಲೆ ತುಂಬಿಸುತ್ತಾ “ಶೆಟ್ಟಿ ನನ್ಮಗ ಡೆಪ್ಟಿಕಮಿಷನರ್ ಆಗ್ತಾನೆ ನೋಡ್ತಿರು ..” ಎಂದು ಹಿಗ್ಗಿದ್ದ ನಮ್ಮಪ್ಪ ನಾನು ಅಸಿಸ್ಟೆಂಟ್ ಕಮಿಷನರ್ ಆಗಿದ್ದಾಗಲೇ ಬೆಂಗಳೂರಿನ ಮಾರ್ಥಾಸ್ ಆಸ್ಪತ್ರೆಯಲ್ಲಿ ಲಂಗ್ಸ್ ಕಾಯಿಲೆಯಿಂದಾಗಿ ಅಸುನೀಗಿದ್ದ .

ಅಪ್ಪಂದಿರ ದಿನವೇ ಅಲ್ಲದೆ ಪ್ರತಿದಿನವೂ ನಮ್ಮಪ್ಪ ಒಂದಲ್ಲಾ ಒಂದು ಕಾರಣಕ್ಕೆ ನೆನಪಾಗುತ್ತಲೇ ಇರುತ್ತಾನೆ . ಯಾವುದೇ ಒಬ್ಬ ಲೇಖಕ ನೂರಾರು ಪುಟಗಳಷ್ಟು ಬರೆಯಬಹುದಾದರೆ ಅದು ತನ್ನ ಬಾಲ್ಯ ಮತ್ತು ತಂದೆ ತಾಯಿಗಳನ್ನು ಕುರಿತದ್ದೆ ಆಗಿರುತ್ತದೆ ಎಂಬುದು ನನ್ನ ಅಭಿಮತ.

ನನಗೆ ಇಂದಿಗೂ ಅತ್ಯಂತವಾಗಿ ಕಾಡುವುದು ಗಾಂಧಿ ಮತ್ತು ಹಳ್ಳಿಗಾಡಿನ ಎಲ್ಲಾ ಅನಕ್ಷರಸ್ಥ ತಂದೆ ತಾಯಿಗಳು.‌‌ ನಾನು ಅತ್ಯಂತವಾಗಿ ಪ್ರೀತಿಸುವುದು ಕೂಡಾ ಅವರನ್ನೆ.. ಇಂಥ ನೆನಪುಗಳನ್ನು ಲೆಕ್ಕವಿಲ್ಲದಷ್ಟು ಸಾರಿ ನಾನು ದಾಖಲಿಸಿದ್ದೇನೆ ..

‍ಲೇಖಕರು avadhi

21 June, 2018

2 Comments

  1. prathibha nandakumar

    very good

  2. Dr . Karunakara nidinji

    ಮಾನ್ಯ ಹಂದ್ರಾಳರೇ. ತಂದೆಯಂದಿರ ಬಗ್ಗೆ ನೀವು ಹೇಳಿದ ಸಂಗತಿ ಹಾಗೂ ನಿಮ್ಮ ಬಾಲ್ಯದ ನೆನಪು ಬಹಳ ಆಪ್ತವಾದ ಸುದ್ದಿ, ಬರಹಕ್ಕಾಗಿ ವಂದನೆಗಳು.- ಡಾ. ಕರುಣಾಕರ ನಿಡಿಂಜಿ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading