ಗವೀಶ್ ಸರ್, ಹೋಗಿಬನ್ನಿ…

ಸಂಧ್ಯಾ  ಹೊನಗುಂಟಿಕರ್

ಮಧ್ಯಾಹ್ನ ಎರಡರ ಸಮಯ. ‘ಸಂಗಮ ಟಾಕೀಸ್’ ದಾಟಿ ಹಿಂದೆ ಹಿಂದೆ ಹೋದರೆ ತಕ್ಷಣಕೆ ಸಣ್ಣ ಬಯಲು. ಅದರ ಆವರಣದಲ್ಲಿ ಚಪ್ಪರದ ತಡೆಗೋಡೆ ಮತ್ತು ತಲೆ ಎತ್ತಿ ನೋಡಿದರೆ  ‘ಶ್ರೀ  ಕುಮಾರೇಶ್ವರ ನಾಟ್ಯ ಸಂಘ  ಹಾನಗಲ್’ ಎಂಬ ಬೋರ್ಡು. ಆದರೆ ಪ್ರವೇಶಿಸುವುದು ಸಾಧ್ಯವಿರದ ಕಾರಣ ಹೇಗೆ ಹೋಗಬೇಕು ಯಾರಿಗೆ ಕೇಳಬೇಕು ಎಂದು ಅನುಮಾನಿಸುತ್ತ ಬದಿಯ ತಡೆಗೋಡೆಗುಂಟ ಹೊರಟೆ.

ಅದ್ಯಾರೋ ಬಾಯಿಯಲ್ಲಿ ಬ್ರಶ್ಯು ಪೇಸ್ಟಿನ ನೊರೆ ತುಂಬಿಕೊಂಡು ಎದುರಾದ ತರುಣನೊಬ್ಬನನ್ನು ಕೇಳಿ ಒಳ ಹೋದೆ. ಎರಡು ಮೂರು ಪರದೆಯ ನಡುವೆ ಬೆಳಗು  ಅದೇ ಆಗ ಬಂದು ಕುಳಿತಂತಿತ್ತು. ಮಧ್ಯಾನ್ಹವಾದರೂ ಇನ್ನೂ ಹಾಸಿಗೆಯಲ್ಲಿ ಹೊರಳಾಡುತಿದ್ದರು ಕೆಲವರು ಸ್ನಾನ ಮುಗಿಸಿ ವಿಭೂತಿ ಧರಿಸಿ ಅಗರ ಬತ್ತಿ ಹಿಡಿದು ದೇವರ ಪಟದತ್ತ ಸಾಗುತ್ತಿದ್ದರು. ನಾನು ಶ್ವೇತಾ ನರಗುಂದ್ ಅವರನ್ನು ಹುಡುಕಿದೆ. ನೈಟಿಯಲ್ಲಿರುವ  ಬೆಳ್ಳಗಿನ, ಗುಂಗುರು ಕೂದಲ ಚೆಲುವೆ. ಪರಿಚಯ ಹೇಳಿಕೊಂಡು ಗವೀಶ್ ಹಿರೆಮಠ್ ಅವರು ಸಂದರ್ಶನಕ್ಕಾಗಿ ಕಳಿಸಿದ್ದಾರೆ ಎಂದೆ. ಹೌದಾ ಎಂದು ಕಣ್ಣರಳಿಸಿ ಖುಷಿಯಾದಳು.

ಚಿಕ್ಕವಳಿದ್ದಾಗ  ಮನೆಯ ಮುಂದೆಯೆ ಯಾದಗಿರಿಯಲ್ಲಿ ಪ್ರತಿದಿನ  ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆಯುವ ನಾಟಕದ ಡೈಲಾಗ್ ಕೇಳಿಯೇ, ನಾಟಕ ನೋಡಿಯೇ ಬೆಳೆದವಳು. ಗ್ರೀನ್ ರೂಮಿನ ಕಿಟಕಿಯಿಂದ ಅವರು ಬಣ್ಣ ಹಚ್ಚಿಕೊಂಡದನ್ನು ಕಂಡು ಬೆರಗಾದವಳು. ಮಧ್ಯಾಹ್ನ ಅವರ ಪ್ರ್ಯಾಕ್ಟೀಸನ್ನೂ ಅವಲೋಕಿಸುತಿದ್ದೆ.ಇದಕ್ಕೆಲ್ಲ ಕಾರಣ ನಾಟಕದ ಒಂದು ಕುಟುಂಬ ನಮ್ಮ ಮನೆಯಲ್ಲಿ ಬಾಡಿಗೆಯಿದ್ದು ಅವರ ಮಗಳು ನನ್ನ ಓರಿಗೆಯವಳು. ಅವಳ ಗೆಳೆತನದಿಂದ ನಾನೂ ಆ ಕುಟುಂಬದವಳಾಗಿದ್ದು ಪ್ರತಿದಿನ ನಾಟಕದ ಪ್ರೇಕ್ಷಕಳು. ಬ್ರಾಮ್ಹಣರ ಮನೆಯಲ್ಲಿ ಆಗ ನಾಟಕದವರಿಗೆ ಬಾಡಿಗೆ ಕೊಡುತ್ತಿದ್ದರು ಎಂದರೆ ಎಂತಹ ವಿಶ್ವಾಸದ ಪ್ರೀತಿಯ  ಕಾಲವಿತ್ತು. ಈಗ…?

ಅಂತಹ ಸ್ವಚ್ಛ  ಭಾವನೆಯಿಲ್ಲ ಸಮಾಜದಲ್ಲಿ ವೃತ್ತಿ ರಂಗಭೂಮಿ ಕಲಾವಿದರ ಬಗ್ಗೆ ಇಂತಹ ಸ್ಥಳಕ್ಕೆ ಹೋಗಿ ಅಲ್ಲಿಯ ಬದುಕನ್ನು ಕಣ್ಣಲ್ಲೇ ಕಟ್ಟಿಕೊಳ್ಳುವ ಸಂದರ್ಭ ಕಲ್ಪಿಸಿದವರು ಗವೀಶ್ ಸರ್. ಈಗ ನನ್ನ ಪಾಲಿಗೆ  ಅದೊಂದು  ಸಾಧನೆಯೇ ಆಗಿತ್ತು .ಇಂತಹ ಕಲಾವಿದರ  ಬದುಕನ್ನು ಅತಿ ಹತ್ತಿರದಿಂದ ಕಂಡು ಅದಕ್ಕಾಗಿ ಮಿಡಿದ, ದುಡಿದ,  ಗೌರವದಿಂದ ಒಡನಾಡಿದ ವ್ಯಕ್ತಿ ಅವರು ನನಗೆ  ಮತ್ತೆ ನನ್ನ ಬಾಲ್ಯದ ನೆನಪು ದೊರಕಿಸಿದ್ದರು.

‘ಪ್ರಣಯ ಮುಕ್ತಕ’ ವೆಂಬ ಕೃತಿಯ ಮೂಲಕ ಹರೆಯದ ಮನಸ್ಸುಗಳಿಗೆ  ಕಾವ್ಯದ ಗುಂಗು ತೊಡಿಸಿ ಪ್ರಣಯಕವಿ ಎಂದೆ ಮನೆಮಾತಾದವರು.

ಗವೀಶ್ ಅವರಿಗೆ ಅಭಿನಂದನಾ ಗ್ರಂಥಗಳನ್ನು ಸಂಪಾದಿಸುವ ಬಹು ಇಷ್ಟದ  ಹವ್ಯಾಸ. ಇಂದು ಅವರ ಅವ್ಯಾಹತ ಶ್ರಮದಿಂದ ಅನೇಕ ಸಾಧಕರ ಬದುಕು ದಾಖಲೆಯಾಗಿ ಉಳಿದಿದೆ. ಅಭಿನಂದನಾ ಲೇಖನಗಳನ್ನು ಸಂಗ್ರಹಿಸುವಾಗ ಅವರು ನಿರ್ವಹಿಸುತ್ತಿರುವ ಪದ್ಧತಿ ಬಹಳ ಅಚ್ಚುಕಟ್ಟಾಗಿದ್ದು ನನ್ನಂತಹ ಸೋಂಬೇರಿಗಳಿಗೆ ಪತ್ರ, ಫೋನ್ ಕರೆ, ಮೆಸೇಜ್, ಮತ್ತೊಂದು ಪತ್ರ ಹೀಗೆ ಅನೇಕ ರೀತಿಯಿಂದ ಬೆಂಬಿಡದೇ ನೆನಪಿಸಿ ಲೇಖನಗಳನ್ನು ಪಡೆಯುತ್ತಿದ್ದರು.

ಎಷ್ಟೋ ಬಾರಿ ಬರೆಯುವ  ಅನುಭವ ಇರದ ಮಹನೀಯರಲ್ಲಿ ತಾವೇ ಸ್ವತಃ ಟಿಪ್ಪಣಿ ಮಾಡಿಕೊಂಡು ಲೇಖನ ರೂಪಕ್ಕೆ ತರುತ್ತಿದ್ದರು. ಅಷ್ಟೇ ಅಲ್ಲ, ನನ್ನಿಂದಲೆ ಒಬ್ಬ ವ್ಯಕ್ತಿಯ ಬಗ್ಗೆ ಇನ್ನೊಬ್ಬರ ಹೆಸರು ಕೊಟ್ಟೂ ಬರೆಸಿದ್ದಾರೆ. ಹೀಗಾಗಿ ನನಗೆ  ಅಭಿನಂದನಾ ಗ್ರಂಥಗಳು ಎಂದರೆ ಗವೀಶ್ ಹಿರೇಮಠ್ ಎಂಬುವಂತೆ ಆಗಿತ್ತು.

ಎಲ್ಲರಿಗೂ ತಿಳಿದಂತೆ ಅವರ ಇನ್ನೊಂದು ಮುಖ್ಯವಾದ ಕ್ಷೇತ್ರ ವೃತ್ತಿ ರಂಗಭೂಮಿಯ ಅಂಗಳ. ಗುಲ್ಬರ್ಗಾ ವಿಶ್ವವಿದ್ಯಾಲಯದ ಗ್ರಂಥಾಲಯ ವಿಭಾಗದಿಂದ ನಿವೃತ್ತಿ ಹೊಂದಿದ ಮೇಲೆ ಅವರು ಬಹುತೇಕ ದಿನಗಳನ್ನು ಕಳೆದದ್ದು ವೃತ್ತಿ ರಂಗಭೂಮಿಯ ಕಲಾವಿದರ ಬದುಕಿನ ಅಧ್ಯಯನ ಮತ್ತು ಅನುಭವಗಳನ್ನು ಕ್ರೋಢೀಕರಿಸುವ ಬಗ್ಗೆ.

‘ರಂಗ ಕನಸುಗಳು’ ಎಂಬ ಅಂಕಣವನ್ನು ‘ಸಂಯುಕ್ತ ಕರ್ನಾಟಕ’ದಲ್ಲಿಯೂ ‘ರಂಗಾಂತರಂಗ’ ಎಂಬ ಅಂಕಣವನ್ನು ‘ವಿಜಯ ಕರ್ನಾಟಕ’ದಲ್ಲೂ ಬರೆಯುತ್ತಿದ್ದರು. ಗುಲ್ಬರ್ಗಾ ಆಕಾಶವಾಣಿಯು ಗವೀಶ ಅವರ ಬಹು ಮುಖ್ಯವಾದ ‘ರಂಗ ದೀವಟಿಗೆಗಳು’ ಎಂಬ  13 ಕಂತಿನ ಸರಣಿಯನ್ನು ಪ್ರಸಾರ ಮಾಡಿತು. ಅದಕ್ಕೆ ರಾಜ್ಯಮಟ್ಟದ  ಸರಣಿ ಪ್ರಶಸ್ತಿ  ಕೂಡ ದೊರಕಿತು.

ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯರಾಗಿ ಮತ್ತು ಚಲನಚಿತ್ರ ಆಯ್ಕೆ ಸಮಿತಿಯ ಸದಸ್ಯರಾಗಿಯೂ ಕೂಡಾ ಸೇವೆ ಸಲ್ಲಿಸಿದ್ದಾರೆ. ‘ಕಲಾವಿದರು ನಡೆದು ಬಂದ ದಾರಿ’ ಕೃತಿಗೆ ಕರ್ನಾಟಕ ರಾಜ್ಯ ಲಲಿತ ಅಕಾಡೆಮಿ ವತಿಯಿಂದ ಪ್ರಶಸ್ತಿ ಹಾಗೂ ‘ಹೊತ್ತು ಮುಳುಗುವ ಮುನ್ನ’ ಎಂಬ ಹೊತ್ತಿಗೆಗೆ ಗುಲ್ಬರ್ಗ ವಿಶ್ವವಿದ್ಯಾಲಯದ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಅತ್ತಿಮಬ್ಬೆ ಪ್ರಶಸ್ತಿ ದೊರಕಿದೆ. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಯು ಕೂಡ ಇವರ ವೃತ್ತಿರಂಗಭೂಮಿಯ ಅನನ್ಯ ಸೇವೆಗೆ ದೊರೆತ  ಗೌರವವಾಗಿದೆ.

ಕಥೆ ,ಕಾದಂಬರಿ, ಕಾವ್ಯ, ವ್ಯಕ್ತಿ ಪರಿಚಯ, ಜೀವನಚರಿತ್ರೆ ಹೀಗೆ ಐವತ್ತು ಕೃತಿಗಳನ್ನು ರಚಿಸಿದಂತಹ ಗವೀಶ್ ಹಿರೇಮಠ ಅವರು ಇಂದು ನಮ್ಮನ್ನೆಲ್ಲಾ ಅಗಲಿದ್ದು ಬಹಳ ಸಂಕಟದ ಸಂಗತಿ. ವೃತ್ತಿ ರಂಗಭೂಮಿಯ ಮತ್ತು ಸಮಾಜದ ನಡುವೆ ಬಹುಮುಖ್ಯ ಕೊಂಡಿ ಕಳಚಿದಂತಾಗಿದೆ. ನಮ್ಮ ಸಂಗಮೇಶ್ವರ ಮಹಿಳಾ ಮಂಡಳದಂತಹ ಅನೇಕ ಸಂಸ್ಥೆಗಳನ್ನು ಸೇರಿಕೊಂಡು ರಂಗ ಕಲಾವಿದರಿಗೆ ಸಹಾಯ ಕೊಡಿಸುವ ಮತ್ತು ಸನ್ಮಾನ ಮಾಡಿಸುವಂತಹ ಜವಾಬ್ದಾರಿಯನ್ನು ಹೊತ್ತವರಾಗಿದ್ದರು. ಕಳೆದ ವರುಷ ಪುಟ್ಟರಾಜ ಗವಾಯಿ ನಾಟ್ಯಸಂಘ ಗದಗ ಅವರಿಂದ ‘ಹೇಮರಡ್ಡಿ ಮಲ್ಲಮ್ಮ’ ನಾಟಕ ವೀಕ್ಷಣೆಗೆ ನಮ್ಮ  ಮಂಡಳದ ಸದಸ್ಯೆಯರನ್ನು ಕರೆದೊಯ್ದು ಅವರನ್ನು ಗೌರವಿಸುವ ಅವಕಾಶ ಕಲ್ಪಿಸಿಕೊಟ್ಟಿದ್ದರು.

ಸರ್ ಅವರ ಮತ್ತು ನಮ್ಮ ಸಂಗಮೇಶ್ವರ ಮಹಿಳಾ ಮಂಡಳದ ನಡುವೆ ತುಂಬ ಅವಿನಾಭಾವ ಸಂಬಂಧ. ಮಹಿಳಾ ಮಂಡಳದಲ್ಲಿ ಹಲವರು ಹೆಂಗರುಳಿನ  ಪುರುಷರು  ಅನಧಿಕೃತವಾಗಿ ಸದಸ್ಯರಾಗಿದ್ದಾರೆ ಎಂದು ನಾನು ಆಗಾಗ್ಗೆ ಹೇಳುತ್ತಿರುತ್ತೇನೆ. ಗವೀಶ್ ಸರ್ ಕೂಡ ಅಂತಹವರಲ್ಲಿ ಪ್ರಮುಖರು. ನಮ್ಮ  ಮಹಿಳಾಮಂಡಳದ ಬಗ್ಗೆ ಅಪಾರ ಅಭಿಮಾನ, ಪ್ರೀತಿ, ವಿಶ್ವಾಸ ಮತ್ತು ಆಪ್ತತೆಯನ್ನುಳ್ಳವರಾಗಿದ್ದರು. ನಮ್ಮ ಮಂಡಳದ ವತಿಯಿಂದ ಆಯೋಜಿಸಿದ ಎಸ್. ಮಾಲತಿಯವರ ನಿರ್ದೇಶನದಲ್ಲಿ ಒಂದು ತಿಂಗಳ ನಾಟಕ ಶಿಬಿರವನ್ನು ಮತ್ತು ‘ಕಾಡುಕುದುರೆ’ ನಾಟಕ ಪ್ರದರ್ಶನ  ಯಶಸ್ವಿಯಾಗುವಲ್ಲಿ ಗವೀಶ ಅವರ ಪಾತ್ರ ಬಹು ದೊಡ್ಡದು.

‘ವಿಶ್ವ ನಾಟಕ ರಂಗ ದಿನಾಚರಣೆ’ಯಂದು ನಾಟಕ ಅಕಾಡೆಮಿಯ ಸಹಯೋಗದಲ್ಲಿ ಒಂದು ದಿನದ ವಿಚಾರ ಸಂಕಿರಣವನ್ನು ನಮ್ಮ  ಮಂಡಳದಲ್ಲಿ ಆಯೋಜಿಸಲು ಸಹಕರಿಸಿದರು. ಇಂದಿರಾ ಮಾನ್ವಿಕರ್ ಅವರ  ‘ಸಂಪ್ರೀತಿ ‘ಅಭಿನಂದನಾ ಗ್ರಂಥವನ್ನು ಪ್ರಕಟಿಸುವುದಕ್ಕೆ  ಒತ್ತಾಸೆಯನ್ನು ತಂದು ಅವರ ಸಮಾಜಮುಖಿ ಬದುಕನ್ನು ಪ್ರೇರಣಾದಾಯಕವಾಗಿ ಜನಮಾನಸದಲ್ಲಿ ಚಿರಕಾಲ ಉಳಿಯುವಂತೆ ಮಾಡಿದರು.

ಬೆಂಗಳೂರು  ದೂರದರ್ಶನದ ನಿರ್ದೇಶಕರಾದ ಜಿ ಎಂ ಶಿರಹಟ್ಟಿಯವರನ್ನು ಮಂಡಳಕ್ಕೆ ಕರೆಸಿ ‘ಬಹುಭಾಷಾ  ಕವಿಗೋಷ್ಠಿ ‘ ಆಯೋಜಿಸಿದ್ದು ಈ ಮೂಲಕ ಬೆಂಗಳೂರು ದೂರದರ್ಶನದಲ್ಲಿ ನಮ್ಮ  ಮಂಡಳದ ವತಿಯಿಂದ ”ಸ್ತ್ರೀ ಲೋಕ” ವೆಂಬ ಸರಣಿ ಚಿತ್ರಿಕರಣಗೊಂಡು ೧೩ ವಾರ ನಾಡಿನಾದ್ಯಂತ ಪ್ರಸಾರಗೊಂಡಿತು. ನಮ್ಮ  ಪ್ರಕಾಶನದ ಪುಸ್ತಕ ಮಾರಾಟದ ಹೊಣೆಯನ್ನು ಹೊತ್ತು ಅನೇಕ ಮಾರ್ಗವನ್ನು ಸೂಚಿಸಿದ್ದಲ್ಲದೆ ಕೆಲವು ಸಲ ತಾವೇ ಸ್ವತಃ  ಹೊತ್ತುಕೊಂಡೊಯ್ದು ಸಹಾಯ ಮಾಡಿದ್ದಾರೆ.

ವೃತ್ತಿರಂಗಭೂಮಿ ಕಲಾವಿದರ ಬದುಕಿನೊಂದಿಗೆ ತಳುಕು ಹಾಕಿಕೊಂಡ ಅವರ ಸಾಹಿತ್ಯ ಅತ್ಯಂತ  ಪ್ರಮುಖವಾದದು. ರಂಗಭೂಮಿ ಕಲಾವಿದೆ ಅನ್ನಪೂರ್ಣ ಸಾಗರ್ ಅವರ  ಆತ್ಮ ಕಥೆಯನ್ನು ನಮ್ಮ  ಮಂಡಳಿಯಿಂದಲೆ ಪ್ರಕಟಿಸಿ ನಮ್ಮ ಮಂಡಳದ ಪ್ರಕಾಶನಕ್ಕೆ ಚಾಲನೆ ನೀಡಿದಂತಾಯಿತು.

ಟೀವಿ ಕಲಾವಿದೆ ಮಾಲತಿಶ್ರೀ ಅವರ ಆತ್ಮಕಥೆಯನ್ನು ನಮ್ಮ ಮಂಡಳಿಯಿಂದ ಬಿಡುಗಡೆಗೊಳಿಸಿದರು. ಅನೇಕ ರಂಗ ಕಲಾವಿದೆಯರನ್ನು ನಮ್ಮ ಮಂಡಳದಿಂದ ಸನ್ಮಾನ ಕಾರ್ಯ ಮಾಡುವ ಅವಕಾಶ ಕಲ್ಪಿಸಿದ್ದು  ಅಲ್ಲದೆ ಉತ್ತಮ ಹಾಸ್ಯ ನಾಟಕಗಳನ್ನು (ಕಿವುಡ ಮಾಡಿದ ಕಿತಾಪತಿ, ಕುಂಟ ಕೋಣ ಮೂಕ ಜಾಣ)  ಪ್ರತ್ಯೇಕವಾಗಿ ನಮ್ಮ ಸದಸ್ಯರು ವೀಕ್ಷಿಸಲು ಅವಕಾಶ ಕಲ್ಪಿಸಿದ್ದರು. ನಮ್ಮ ಮಂಡಳದ ವತಿಯಿಂದ ಗುಲ್ಬರ್ಗ  ದೂರದರ್ಶನಕ್ಕಾಗಿ  ‘ಅಮೀನಪುರದ ಸಂತೆ ‘ ಎಂಬ ನಾಟಕವನ್ನು ನಿರ್ಮಿಸಿ  ಪ್ರಸಾರಗೊಳಿಸಿದರು.

ನಮ್ಮ ಮಂಡಳದ ೪೦ ನೇ ವಾರ್ಷಿಕೋತ್ಸವಕ್ಕೆ  ಮಂಡಳದ  ಸಮಾಜಮುಖಿ ಮಹಿಳಾಪರವಾದ ಒಟ್ಟೂ ಕಾರ್ಯಕ್ರಮ ಹಾಗು  ಸಾಧನೆಯನ್ನು ದಾಖಲೆಯಾಗುವಂತಹ  ಪುಸ್ತಕ ತರಲೇಬೇಕು ಎಂದು ಅದರ ಪ್ರಾಮುಖ್ಯತೆಯನ್ನು ಅಂದಿನ ಅಧ್ಯಕ್ಷರಾದ ಇಂದಿರಾ ಮಾನ್ವಿಕರ್ ಅವರಿಗೆ ಮನವರಿಕೆ ಮಾಡಿದರು. ಕೆಲವೇ ದಿನಗಳಲ್ಲಿ  ಕಾರ್ಯಕ್ರಮವಿರುವಾಗ ಹೇಗೆ ಪುಸ್ತಕ  ತರಲು ಸಾಧ್ಯವೆಂದು ಚಿಂತಿಸುವಾಗ ಸೋಮಾರಿಯಾದ  ನನ್ನಲ್ಲಿ  ಹುಮ್ಮಸ್ಸು ತುಂಬಿ 10 ದಿನದಲ್ಲಿ ಕೃತಿ ಬರೆದುಕೊಟ್ಟರೆ ನಿಮಗೆ ರಂಗಮಂದಿರ ಬುಕ್ ಮಾಡಿ ಸನ್ಮಾನ ಕಾರ್ಯಕ್ರಮ  ಆಯೋಜಿಸುವೆ ಎಂದು ಶರತ್ತೂ ಹಾಕಿದ್ದರು.

ಅಂತೂ ಆ ಶರತ್ತಿನಲ್ಲಿ ನಾನೇ ಗೆದ್ದೆ. ತಾವು ಸ್ವತಃ  ‘ಇಳಾ ಮುದ್ರಣಾಲಯ’ದಲ್ಲಿ ಕುಳಿತು ಗುರು ಸರ್ ಜೊತೆಗೂಡಿ ಸಮಯಕ್ಕೆ ಸರಿಯಾಗಿ ಪುಸ್ತಕ  ಮಾಡಿಸಿ ಕೊಟ್ಟಿದ್ದು ನಾನು ಹೇಗೆ ಮರೆಯಲಿ. ಅಂತಹ ಅಪೂರ್ವ ಕಾರ್ಯ ಮಾಡಿಸಿದ ಗವೀಶ್ ಸರ್ ಅವರಿಗೆ ನಮ್ಮ  ಮಂಡಳವು ಹಾಗು ನಾನು ಎಷ್ಟು  ಧನ್ಯವಾದ ಹೇಳಿದರೂ ಸಾಲದು. ಸದಾ ಲವಲವಿಕೆಯಿಂದ ನಮ್ಮ ಮಂಡಳದ ಕೆಲವು ಸದಸ್ಯರೊಂದಿಗೆ ಬೆರೆಯುತಿದ್ದು ಸೋದರತ್ವ ಭಾವ ತುಂಬುತಿದ್ದರು.

ಅವರ ಸ್ನೇಹಪರತೆ ಎಷ್ಟು  ಗಾಢವಾಗಿತ್ತೆಂದರೆ ನಮ್ಮಿಂದ ಏನೇ ತಪ್ಪುಗಳಾದರೆ ಅವರ ಮನಸ್ಸಿಗೆ ನೋವಾದರೆ ಮುಚ್ಚಿಟ್ಟುಕೊಳ್ಳದೆ ಹಿಂದೆಮುಂದೆ ಆಡಿಕೊಳ್ಳದೆ ನಮ್ಮೆದುರಿಗೆ ಬಂದು ವ್ಯಕ್ತಪಡಿಸಿ ಜಗಳವಾಡುತ್ತಿದ್ದರು. ನಾವು ತಪ್ಪಿನ ಅರಿವಾಗಿ ಅಲವತ್ತುಕೊಂಡರೆ ಅವರೆ ಆಮೇಲೆ “ಇರಲಿ ಬಿಡರಿ , ಅದನ್ನ ನಾನೂ ಮರಿತೀನಿ, ನೀವೂ ಮರೆತುಬಿಡರಿ” ಎಂದು ಸಮಾಧಾನ ಪಡಿಸುತ್ತಿದ್ದರು. ಅವರ ಸ್ನೇಹದ ಒಡನಾಟದಂತೆ ಜಗಳಗಳು ಕೂಡ ನಮ್ಮೊಳಗಿನ ವಿಶ್ವಾಸದ ಸಾಂದ್ರತೆ  ಹೆಚ್ಚಾಗಲು ಕಾರಣವಾಗಿವೆ.

ಅವರ ರಂಗಕಲಾವಿದರ ನಿವೃತ್ತಿ ಜೀವನದ ಸಂಕಟ ಸಮಯವನ್ನು ದಾಖಲಿಸಿದ ಎರಡನೆ ಮುದ್ರಣ ಕಂಡ  ‘ಹೊತ್ತು ಮುಳುಗುವ ಮುನ್ನ’ ಪುಸ್ತಕ ಕೆಲವೇ ತಿಂಗಳ ಹಿಂದೆ ಕಲಬುರ್ಗಿ ‘ರಂಗಾಯಣ’ದಲ್ಲಿ  ಬಿಡುಗಡೆ ಸಂದರ್ಭದಲ್ಲಿ ನಮ್ಮ ಅಧ್ಯಕ್ಷ ರಾದ ವೈಶಾಲಿ ಮೇಡಂ ಅವರು ನಮ್ಮ ಮಂಡಳದ ವಾರ್ಷಿಕೋತ್ಸವಕ್ಕೆ ಬರಲೇಬೇಕೆಂದು ಆಮಂತ್ರಿಸಿದಾಗ  ಅವರು ಬೆಂಗಳೂರಿಗೆ  ಹೋಗಲು ಮಾಡಿಸಿದ ರಿಸರ್ವೇಶನ್ ರದ್ದುಗೊಳಿಸಿ ಇಡೀ ದಿನ ನಮ್ಮೊಂದಿಗೆ ಕಾರ್ಯಕ್ರಮದಲ್ಲಿದ್ದು ಅತಿ ಸಂತೋಷ, ಹೆಮ್ಮೆಯಿಂದ ನಮ್ಮನ್ನು ಅಭಿನಂದಿಸಿದರು.

ಮೊನ್ನೆ ತಾನೆ ಅವರ ಅಭಿನಂದನಾ ಗ್ರಂಥಕ್ಕೆ ಲೇಖನ ಬರೆದು ಮುಗಿಸಿದ್ದೆ. ಸರ್ ನಿಮ್ಮ ಅಭಿನಂದನಾ ಗ್ರಂಥವಾಗಬೇಕಿದ್ದ ಕೃತಿ ಸ್ಮರಣಾರ್ಥವಾಗುತ್ತಿರುವುದು ಬಹಳ ಸಂಕಟದ ಸಂಗತಿ.

ಸರ್ ಹೋಗಿಬನ್ನಿ. ನಿಮಗೆ ನಮ್ಮ  ಮಂಡಳದ ವತಿಯಿಂದ ಅನಂತ ಕೃತಜ್ಞತೆಗಳು. ನಿಮ್ಮ ಸ್ನೇಹವನ್ನು ನಮ್ಮ  ಮಂಡಳವು ತನ್ನ  ಮನದಂಗಳದಲ್ಲಿ ಸದಾ ಹಸಿರಾಗಿಸಿಕೊಂಡಿರುತ್ತದೆ.
ಆದರೆ ಸರ್ ನೀವು ನನ್ನ  ಒಂದು ಕೆಲಸ ಮಾತ್ರ ಉಳಿಸಿಬಿಟ್ರಿ. ನನ್ನ  ಸನ್ಮಾನಕ್ಕೆ ರಂಗಮಂದಿರ ಬುಕ್ಕ್ ಮಾಡದೇ ಹೋಗಿಬಿಟ್ಟಿರಿ. ರಂಗಮಂದಿರಕ್ಕೆ ಹೋದಾಗೆಲ್ಲ ನಿಮ್ಮ ನೆನಪು ಖಂಡಿತ ಕಾಡುತ್ತದೆ.

‍ಲೇಖಕರು avadhi

August 14, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Mahesh Kulkarni

    ಸುಧಾ ಮತ್ತು ಮಯೂರದಂತಹ ಕೈಗೂಸಿನಂದದ, ಚಂದದ, ಅಗದಿ-ನಿಗದಿತಗಳ ಬಳಿಕ ನಾ ಕಂಡ ದರ್ಪಣ ಸುಂದರಿ ಈ ಅವಧಿ. ಖುಷಿಯಾಯಿತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: