ಧಾರವಾಡದ ಆಲೂರು ವೆಂಕಟರಾವ ಸ್ಮಾರಕ ಭವನದಲ್ಲಿ ಶುಕ್ರವಾರ ಸಂಜೆ ಮನೋಹರ ಗ್ರಂಥಮಾಲೆ ಪ್ರಕಟಿಸಿದ ಗರುಡ ಸದಾಶಿವರಾಯರ ಸಮಗ್ರ ಸಂಪುಟ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಇಂದಿನ ದಿನಮಾನದಲ್ಲಿ ಬರೆಯೋದು ಜಾಸ್ತಿ, ಓದುವುದು ಕಡಿಮೆ ಎಂಬಂತಾಗಿದೆ. ಪುಸ್ತಕ ಕೊಂಡು ಓದುವ ಪರಿಪಾಠ ರೂಢಿಸಿಕೊಳ್ಳಬೇಕೇ ಹೊರತು ಮೂರ್‍ನಾಲ್ಕು ಸಲ ಕಾಶಿ ಯಾತ್ರೆ ಮಾಡಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವುದು ಸಲ್ಲದು. ಸಿನಿಮಾ ನೋಡಲು, ಸೀರೆ ಕೊಳ್ಳಲು ಆಸಕ್ತಿ ವಹಿಸುತ್ತೇವೆ. ಆದರೆ ಪುಸ್ತಕ ಕೊಳ್ಳಲು ಮಾತ್ರ ಐವತ್ತು ಬಾರಿ ಯೋಚಿಸುತ್ತೇವೆ. ಈ ಪ್ರವೃತ್ತಿಯಿಂದಾಗಿ ಕನ್ನಡದ ಸಾಹಿತಿಗಳು ಇಂದಿಗೂ ಬಡತನದಲ್ಲೇ ಜೀವಿಸುತ್ತಿದ್ದಾರೆ. ಆದ್ದರಿಂದ ಕೃತಿಗಳನ್ನು ಖರೀದಿಸಿ ಓದಿ ಪ್ರೋತ್ಸಾಹಿಸಬೇಕು ಎಂದು ಸುಧಾ ಮೂರ್ತಿ ಮನವಿ ಮಾಡಿದರು.
ವಿದೇಶಗಳಿಗೆ ಸಾಕಷ್ಟು ಸಲ ಭೇಟಿ ನೀಡಿದ್ದೇನೆ. ಅಲ್ಲಿನ ಕಲೆ, ಸಂಸ್ಕೃತಿ ಅಧ್ಯಯನಕ್ಕೆ ಕನಿಷ್ಠ ಎರಡು ದಿನವಾದರೂ ಮೀಸಲಿಡುತ್ತೇನೆ. ಸಾಹಿತಿಗಳಿಗೆ ಅಪಾರ ಗೌರವ ನೀಡುವ ಇಂಗ್ಲೆಂಡ್ ನನಗೆ ಹಿಡಿಸಿದ ದೇಶ. ಅಲ್ಲಿನವರು ಶೇಕ್ಸ್‌ಪಿಯರ್ ಬಗ್ಗೆ ಅಭಿಮಾನದಿಂದ ಹೇಳಿಕೊಳ್ಳುತ್ತಾರೆ. ಆದರೆ ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಯ ಸಾಹಿತಿಗಳಿಗೆ ಯಾವುದೇ ಗೌರವ ದೊರೆಯುತ್ತಿಲ್ಲ. ಕನ್ನಡದ ಸಾಹಿತಿಗಳು ಬಡತನದ ಬೇಗೆಯಲ್ಲಿ ಬೇಯುತ್ತಿರುವುದು ನಿಜಕ್ಕೂ ನಾಚಿಕೆ ಪಡುವ ವಿಚಾರ ಎಂದು ವಿಷಾದಿಸಿದರು.
ಮುಂಚೆ ದುಡ್ಡು ಕೊಡಿ ಎನ್ನುವ ಪ್ರಕಾಶಕರೇ ಜಾಸ್ತಿ. ಮನೋಹರ ಗ್ರಂಥಮಾಲೆ ಇದಕ್ಕೆ ಅಪವಾದ. ಉತ್ತರ ಕರ್ನಾಟಕದ ಲೇಖಕರನ್ನು ಗುರುತಿಸಿ ಅವರ ಸಮಗ್ರ ಸಂಪುಟ ಪ್ರಕಟಣೆಗೆ ಮುಂದಾಗಿರುವುದು ಸ್ತುತ್ಯಾರ್ಹ. ಮನೋಹರ ಗ್ರಂಥಮಾಲೆ ನನ್ನ ಮೊದಲ ಪುಸ್ತಕ ಪ್ರಕಟಿಸಿತ್ತು. ನನ್ನ ಕೃತಿಯನ್ನು ಓದುಗರು ಹೇಗೆ ಸ್ವೀಕರಿಸುತ್ತಾರೋ ಎಂದು ಹೆದರಿದ್ದೆ. ಜಿ.ಬಿ. ಜೋಶಿಯವರು ಯಾರು ಓದದಿದ್ರೂ ನಾನಂತೂ ಓದುತ್ತೇನೆ ಎನ್ನುವ ಮೂಲಕ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದರು ಎಂದು ಸುಧಾ ಮೂರ್ತಿ ಸ್ಮರಿಸಿದರು.
ಅಧ್ಯಕ್ಷತೆ ವಹಿಸಿದ್ದ ವಿಮರ್ಶಕ ಡಾ. ಗಿರಡ್ಡಿ ಗೋವಿಂದರಾಜ ಮಾತನಾಡಿ “ಗರುಡ ಸದಾಶಿವ ರಾಯರು ಮರಾಠಿ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿ ಮರಾಠಿ ಭಾಷೆಯ ಪ್ರಭಾವ ತಗ್ಗಿಸಿ ಕನ್ನಡಕ್ಕೆ ಪ್ರಾಧಾನ್ಯ ದೊರೆಯುವಂತೆ ಮಾಡಿದರು. ಉತ್ತರ ಕರ್ನಾಟಕದ ಲೇಖಕರ ಅಲಭ್ಯ ಲೇಖನಗಳು ಪ್ರಕಟಗೊಳ್ಳುವಂತಾಗಬೇಕು” ಎಂದು ಆಶಿಸಿದರು.







0 Comments