ರಜನಿ ಗರುಡ

ಗದಗದಲ್ಲಿ ನಮ್ಮ ಮನೆಯ ಪಕ್ಕದಲ್ಲಿಯೆ ಇತ್ತೀಚೆಗೆ ತೀರಿಕೊಂಡ ದಿಗಂಬರ(ಯೋಗೇಶ)ನ ಮನೆ ಇತ್ತು. ಒಂದು ಸಂಜೆಯ ಹೊತ್ತು ಅವನ ತಾಯಿ ಗಂಗಾಕಾಕು “ಸೊಕ್ಕೇನು ಮೈಯಾಗ… ಏನೂ ಹೇಳರ್ಬೇದೇನು ನಿಂಗ…ಒಂದೀಟ್ ಹೇಳಿದ್ರ ಎಷ್ಟ ಸಿಟ್ಟ ಮಾಡಾಕತ್ತೀಯಲ್ಲಾ… ಯಾಕೋ…” ಎಂದು ಮನೆ ಒಳ-ಹೊರಗೆ ಓಡಾಡುತ್ತ ಜೋರು ಗಂಟಲಿನಲ್ಲಿ ಬೈಯ್ಯುತ್ತಿದ್ದರು. ಎಷ್ಟು ಹೊತ್ತಾದರೂ ಈ ಬೈಗುಳ ನಿಲ್ಲದಿದ್ದಾಗ ಕಾಕು ಯಾಕಿಷ್ಟು ಬೈಯ್ಯುತ್ತಿದ್ದಾರೆಂದು ಕೇಳಲು ನಾನು ಹೋದೆ, “ ನಿನ್ನ ಮೈದ್ನಾ ಏನ್ ಮಾಡ್ಯಾನ ನೋಡು… ಅಷ್ಟೆಲ್ಲಾ ಚಿತ್ರಗೋಳ ಮಾಡಮಾಡಿ ಇಡಬ್ಯಾಡಾ ಅಂದ್ರ ವಷ್ಟೂ ತಗೊಂಡೋಗಿ ಭಾಂವ್ಯಾಗ ಒಕ್ಕೊಟ್ಟಾನ…” ಅಷ್ಟೇ ಏರುದನಿಯಲ್ಲಿಯೇ ನನಗೂ ಹೇಳಿದ್ದರು.
ಪಕ್ಕದಲ್ಲಿಯೆ ಇದ್ದ ಬಾವಿಯನ್ನು ಬಾಗಿ ನೋಡಿದೆ. ಒಣಗಿದ ಬಾವಿಯ ತಳದಲ್ಲಿ ರಟ್ಟು, ಫೋಮ್ ನಿಂದ ಮಾಡಿದ ಮನೆ, ಗಿಟಾರ್, ನಾಯಿ-ಜಿಂಕೆ ಮೊದಲಾದ ಮೊಡೆಲ್ ಗಳು, ಮೈಕೆಲ್ ಜಾಕ್ಸನ್ ಚಿತ್ರ, ತನ್ನದೇ ಹಲಾವಾರು ಭಾವ-ಭಂಗಿಯ ಚಿತ್ರಗಳು, ಎಲ್ಲವೂ ಕೈ-ಕಾಲು ಮುರಿದುಕೊಂಡು ಬಿದ್ದಿದ್ದವು. “ಹೀಂಗ ಮಾಡ್ಕೋತ ಇಡಬ್ಯಾಡಾ…ಮನಿ ಸಣ್ಣದು, ಜಾಗಾ ಸಾಲಾಂಗಿಲ್ಲಾ …ಅಷ್ಟೇ ಅಂದೇನವ್ವಾ…” ಎನ್ನುತ್ತ, ಹಳಹಳಿಸುತ್ತ, ಓಡಾಡುತ್ತ, ಬೈಯ್ಯುತ್ತ ಚಡಪಡಿಸುತ್ತಿದ್ದರು. ನನ್ನ ಮೈದುನ ಮಾತ್ರ ಅಲ್ಲಿರಲಿಲ್ಲ. ಆಮೇಲೆ ಅವರು ಯಾರನ್ನೋ ಹಿಡಿದು ಅವುಗಳಲ್ಲಿ ಸರಿ ಇರುವುದನ್ನು ಆರಿಸಿ ತೆಗೆಸಿ ಮೊದಲಿನಂತೆ ಇರಿಸಿದ್ದರು ಎಂದು ನೆನಪು. ಆದರೆ ಮುಂದೆ ಅಂತಹ ಮಾಡೆಲ್ ಗಳು- ಪೇಂಟಿಂಗ್ ಗಳು ಯಾವುದನ್ನೂ ದಿಗಂಬರ ಮತ್ತೆ ಮಾಡಲಿಲ್ಲ!
‘ದಿಂಬ್ರಾ’ ಎಂದು ಕರೆದರೆ ಆ ಮನೆಯಿಂದ ಈ ಮನೆಗೆ ಓಡಿಬರುವ ಮುದ್ದಾದ ಹುಡುಗ, ನಾನು ಆ ಮನೆ ಸೇರಿದಾಗ ಪಿಯುಸಿ ಓದುತ್ತಿದ್ದ. ಮನೆಯಲ್ಲಿ ಯಾವುದೇ ಕಾರ್ಯಕ್ರಮವಿದ್ದರೂ ಸಾಮಾನು ತರುವುದರಿಂದ ಹಿಡಿದು ಅದರ ಸಿದ್ಧತೆಯೆಲ್ಲ ಅವನದೇ ಇರುತ್ತಿತ್ತು. ಗರುಡರ ಮನೆಯಲ್ಲಿ ಹಬ್ಬ ಮತ್ತು ಶ್ರಾದ್ಧದ ಜೊತೆಗೆ ನಾಟಕಗಳೂ ಜೊತೆಜೊತೆಯಾಗಿ ನಡೆಯುತ್ತಿರುತ್ತಿತ್ತು. ದೊಡ್ಡಪ್ಪ – ದೊಡ್ಡಮ್ಮನ ಕೆಲಸಗಳು ದಿನವೂ ಇದ್ದರೆ ನಮ್ಮ ನಾಟಕದಲ್ಲೊಂದು ಪಾತ್ರ, ಬ್ಯಾಕ್ ಸ್ಟೇಜ್ ವರ್ಕ್ ಎಲ್ಲ ಅವನದೇ ಇರುತ್ತಿತ್ತು.
ಅಕ್ಕರೆಯ ‘ದಿಂಬ್ರಾ’ನಿಗೆ ನನ್ನತ್ತೆ ತಮ್ಮ ಮಡಿಯನ್ನು ಮರೆತು ಇಡ್ಲಿ, ದೋಸೆ, ಪಡ್ಡು, ಸಿಹಿತಿಂಡಿಗಳನ್ನು ಅಡುಗೆ ಮನೆಯಲ್ಲಿ ಕೂರಿಸಿ ತಿನ್ನಲು ಕೊಡುತ್ತಿದ್ದರು. ಇದೆಲ್ಲದರ ಜೊತೆಯಲ್ಲಿ ಕಾಲೇಜಿನ ಕಾಂಪಿಟೇಶನ್ ಗಳಲ್ಲಿ ನಾಟಕ, ಡಾನ್ಸ್, ಭಾಷಣ, ಏಕಪಾತ್ರಾಭಿನಯ, ಸ್ಪೋರ್ಟ್ಸ್ ಒಂದಲ್ಲ ಒಂದರಲ್ಲಿ ಸದಾ ತೊಡಗಿಕೊಂಡಿರುತ್ತಿದ್ದ ಮತ್ತು ಎಲ್ಲದರಲ್ಲಿಯೂ ಪ್ರಶಸ್ತಿ ಪಡೆದೇ ಮರಳುತ್ತಿದ್ದ. ಗರುಡ ಸದಾಶಿವರಾಯರ ಮಗ ವಲ್ಲಭರಾಯರು ಮತ್ತು ಗಂಗಾಬಾಯಿಯ ಕೊನೆಯ ಮಗ ದಿಂಬ್ರಾ, ಅಣ್ಣ ಮತ್ತು ಮೂವರು ಅಕ್ಕಂದಿರ ಮುದ್ದಿನ ತಮ್ಮನಾಗಿದ್ದ. ಬಾಲಗೋಪಾಲನಂತೆ ಗರುಡರ ಮನೆಯ ಕಣ್ಮಣಿಯಾಗಿದ್ದ!
ನಾನು-ನನ್ನ ಗಂಡ ಧಾರವಾಡದಲ್ಲಿ ಮನೆಮಾಡಿದಾಗ ‘ದಿಂಬ್ರಾ’ ಜರ್ನಲಿಸಂ ಎಮ್. ಎ. ಮಾಡಲು ಬಂದ. ಇಲ್ಲಿಯೂ ನಮ್ಮ ನಾಟಕಗಳ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿದ. ನಮ್ಮ ಸಣ್ಣ ಮನೆಯಲ್ಲಿ ಕಲಾವಿದರು, ಸ್ನೇಹಿತರು ತುಂಬಿರುತ್ತಿದ್ದರು. ಅವರೆಲ್ಲರ ಜೊತೆ ದಿಂಬ್ರಾನೂ ನಮ್ಮ ಜೊತೆಯಾಗಿದ್ದ. ಹಲವಾರು ಚಟುವಟಿಕೆಗಳ ಮಾಡುತ್ತ, ಕರ್ನಾಟಕ ಯುನಿವರ್ಸಿಟಿಯ ಬ್ಲ್ಯೂ ಕೂಡ ಆಗಿದ್ದ. ಸ್ವಲ್ಪದರಲ್ಲಿ ಫಸ್ಟ್ ರ್ಯಾಂಕ್ ತಪ್ಪಿಸಿಕೊಂಡ. ಮುಂದೆ ಪ್ರಜಾವಾಣಿ ಪತ್ರಿಕೆಯ ಕ್ರೀಡಾ ವಿಭಾಗಕ್ಕೆ ರಿಪೋರ್ಟರ್ ಎಂದು ಸೇರಿಕೊಂಡ. ಡಿ. ಗರುಡ ಎನ್ನುವ ಹೆಸರಿನಲ್ಲಿ ಬರೆಯುತ್ತಿದ್ದ. ಬೆಂಗಳೂರು ಸೇರಿ ಅಲ್ಲಿ ಬೆರೆತು ಹೋಗುತ್ತಿದ್ದಂತೆ ನಮ್ಮನ್ನೆಲ್ಲ ಮರೆತೂ ಬಿಟ್ಟ. ಅಪರೂಪಕ್ಕೊಮ್ಮೆ ರಾಣಿ ಚೆನ್ನಮ್ಮಾ ಟ್ರೈನ್ ಹತ್ತತೊಡಗಿದ.
ಮುಂದೆ ವಿಜಯಕರ್ನಾಟಕದ ಕ್ರೀಡಾ ಸುದ್ದಿ ಸಂಪಾದಕನಾಗಿ ಸೇರಿದ, ಸಿಡ್ನಿ ರೇಡಿಯೋಕ್ಕೆ ಅರೆಕಾಲಿಕ ವರದಿಗಾರನಾದ, ಟಿ ವಿ ವಾಹಿನಿಗಳಲ್ಲಿ ಕ್ರೀಡಾ ಚರ್ಚೆಗೆ ಬರುತ್ತಿದ್ದ, ವಿದೇಶಗಳನ್ನು ಸುತ್ತಾಡುತ್ತಿದ್ದ, ಫ್ರೀಲಾನ್ಸರ್ ಆಗಿ ಕೆಲಸ ಮಾಡುತ್ತಿದ್ದ, ಫೊಟೊಗ್ರಫಿ ಮಾಡಿದ, ಡಾನ್ಸ್ ಕ್ಲಾಸ್ ಪ್ರಾರಂಭಿಸಿದ, ಹತ್ತು-ಹಲವಾರು ಪ್ರಶಸ್ತಿ ಪಡೆದ, ದಾರಾವಾಹಿ ನಟಿ ಶೋಭಾ ಲೊಲನಾಥಳನ್ನು ಮದುವೆಯಾದ, ಪುಟ್ಟ ಕಂದ ತಪಸ್ಯಾಳ ಅಪ್ಪನಾದ, ತೋಟ ಮಾಡಿದ…..ಹೀಗೆ ಬದುಕು ಏರುಗತಿಯಲ್ಲಿರುವಾಗಲೇ ಕಾಲಕೆಳಗಿನ ನೆಲ ಕಳೆದುಕೊಂಡು ಬಿಟ್ಟ…. ಮುಂದೆ ನಾವು ಕೇಳಿದ್ದು ‘ದಿಂಬ್ರಾನಿಗೆ ಹುಶಾರಿಲ್ಲಾ…” ಎಂಬ ಸುದ್ದಿಯನ್ನು!
ಗದುಗಿನಲ್ಲಿದ್ದಾಗ ಮಕ್ಕಳ ಶಿಬಿರವಿರಲಿ, ನಾಟಕವಿರಲಿ, ಹೊಟೆಲ್, ಸಿನೇಮಾ ಎಲ್ಲದಕ್ಕೂ ದಿಂಬ್ರಾ ನಮ್ಮ ಜೊತೆಯಲ್ಲಿರುತ್ತಿದ್ದ. ಧಾರವಾಡಕ್ಕೆ ಬಂದ ಹೊಸದರಲ್ಲಿಯೂ ನಮ್ಮೊಡನಿದ್ದ. ಅಡುಗೆ ಮನೆಯಲ್ಲಿಯೇ ಕೂತು ನನ್ನೊಡನೆ ಹರಟುತ್ತಿದ್ದ. ಏನೇ ಮಾತಾಡಲಿ ನಾವು ಹೇಳಿದ ಎರಡು ನಿಮಿಷಗಳ ನಂತರ ನಿಧಾನವಾಗಿ ಪ್ರತಿಕ್ರಿಯಿಸುತ್ತಿದ್ದ. ‘ನಾನು ಹೇಳಿದ್ದು ಕೇಳ್ತಾ?’ ಎಂದು ಕೇಳಿದರೆ ತಣ್ಣಗೆ ನಕ್ಕು ಬಿಡುತ್ತಿದ್ದ.
ಯುನಿವರ್ಸಿಟಿಯ ಬ್ಲ್ಯೂ ಆಗಿ ಆಯ್ಕೆಯಾದಾಗ ನೀಲಿ ಉಲ್ಲನ್ ಬಟ್ಟೆ ಹಿಡಿದು ಕೋಟ್ ಹೊಲಿಸಲು ಇಬ್ಬರೂ ಧಾರವಾಡದ ಗಲ್ಲಿ ಗಲ್ಲಿ ಟೇಲರ್ ಹುಡುಕುತ್ತ ಓಡಾಡಿದ್ದೆವು. ಅದನ್ನು ಒಂದು ದಿನದಲ್ಲಿ ಹೊಲಿದು ಕೊಡಬೇಕಿತ್ತು! ಯಾರೂ ಹೊಲಿದು ಕೊಡಲು ಸಿಕ್ಕದಿದ್ದಾಗ ಸೀನಿಯರ್ ಯಾರದ್ದೊ ಕೋಟ್ ತೊಟ್ಟು ಸ್ಪೋರ್ಟ್ ಗೆ ಹೋಗಿದ್ದ. ಅವನ ಮುದ್ದು ಮುಖದಲ್ಲಿ ತುಟಿಯ ಮೇಲೊಂದು ಸಣ್ಣ ನಗು ಯಾವತ್ತೂ ಮಾಸುತ್ತಿರಲಿಲ್ಲ. ಮಿತಭಾಷಿ, ಮನದಲ್ಲಿ ದ್ವೇಷ-ಕಪಟ-ಅಸೂಯೆ ಏನೊಂದನ್ನೂ ಇರಿಸಿಕೊಳ್ಳದ ಮಂದಹಾಸದ ಸುಂದರ ಮಗುವಿನಂತಿದ್ದ. ಮುಂದೆ ಫೇಸ್ಬುಕ್ ನಿಂದಲೇ ನನಗೆ ಅವನ ವಿಷಯಗಳು ತಿಳಿಯುತ್ತಿತ್ತು. ಲೇಖನಗಳು, ಕವನಗಳು, ಅವನು ತೆಗೆದ ಆಕರ್ಷಕ ಫೋಟೊಗಳನ್ನು ನೋಡುತ್ತಿದ್ದೆ. ಬರಬರುತ್ತ ಭ್ರಮನಿರಸನವಾದಂತೆನಿಸುತ್ತಿತ್ತು. ಕವನಗಳೂ, ಬರೆಹಗಳೂ ಸೋತ ಹೆಜ್ಜೆಯಿಡಲಾರಂಭಿಸಿದವು….ಕೊನೆಗೆ ದಿಂಬ್ರನ ಸಾವಿನ ಸುದ್ದಿಯೇ ಬಂದು ನಮಗಪ್ಪಳಿಸಿತು!

ಪು. ತಿ. ನ.ರ ಗೋಕುಲ ನಿರ್ಗಮನ ನಾಟಕ ದಿಗಂಬರನ ಸಂದರ್ಭದಲ್ಲಿಯೂ ಮತ್ತೆ ಮತ್ತೆ ನೆನಪಾಗುತ್ತದೆ. ಗೋಕುಲದಲ್ಲಿ ದನ ಕಾಯುತ್ತ, ಗೋಲಿ-ಗಜ್ಜುಗ ಆಡುತ್ತ, ಕಾಡು-ಬೆಟ್ಟ ತಿರುಗುತ್ತ, ಬಲರಾಮ-ಗೋಪಾಲರು- ಗೋಪಿಕೆಯರನ್ನು ಒಡಗೂಡಿಕೊಂಡಿದ್ದ ಶ್ರೀಕೃಷ್ಣನನ್ನು ಅಕ್ರೂರ ಬಿಲ್ಲಹಬ್ಬಕೆ ಮಧುರೆಗೆ ಬರಲು ಆಹ್ವಾನಿಸುತ್ತಾನೆ! ಬಿಲ್ಲ ಹಬ್ಬವನ್ನು ತರತರದಲ್ಲಿ ವರ್ಣಿಸುತ್ತಾನೆ. ಈ ಊರಿನಲ್ಲೇನಿದೆ? ಮಧುರೆಯ ನೋಡಲು ಬಾ ಎಂದು ಬಲವಂತ ಮಾಡುತ್ತಾನೆ. ಎಲ್ಲವನ್ನೂ ತೊರೆದು ಬಲರಾಮನೊಡನೆ ಕೃಷ್ಣ ರಾಜಧಾನಿ ಮಧುರೆಗೆ ಹೊರಟು ಬಿಡುತ್ತಾನೆ. ಹಾಗೆ ಹೋದಾತ ಮತ್ತೆ ಗೋಕುಲಕ್ಕೆ ಬರುವುದೇ ಇಲ್ಲ! ಅದರಂತೆ 90ರ ದಶಕದಲ್ಲಿ ಸಣ್ಣ ಊರುಗಳಿಂದ ಯುವಗೋಪಾಲರ ದೊಡ್ಡ ದಂಡೇ ರಾಜಧಾನಿಯ ಕಡೆ ಉದ್ಯೋಗ ಅರಸುತ್ತ ಧಾವಿಸಿತು. ಮೈಮರೆತು ತೆರಪಿಲ್ಲದಂತೆ ದುಡಿದರು.
ಕೆಲವೇ ದಿನಗಳಲ್ಲಿ ಹಲವರು ಮಹಾನಗರದಲ್ಲಿ ಬದುಕುವ ವಿವೇಕವನ್ನು ಕಲಿತರೆ, ಯಶಸ್ಸಿನಲ್ಲಿಯೆ ಕೆಲವರು ದಣಿದೂಬಿಟ್ಟರು. ಮೆಟ್ರೋಪಾಲಿಟನ್ ಸಿಟಿಯ ನಿಯಾನ್ ಲೈಟ್ಸ್, ಗ್ಲಿಟರಿಂಗ್ ಕಲರ್ಸ್ ದಣಿದವರ ಕಾಲುದಾರಿಯನ್ನೆಲ್ಲ ಮಸುಕಾಗಿಸಿತು. ಆ ದಿನಗಳಲ್ಲಿ ಭ್ರಮನಿರಸನ ದಿಗಂಬರನನ್ನು ಒಂಟಿಯಾಗಿಸಿತು. ಅವನ ಕ್ರಿಯಾಶೀಲತೆ, ನೈತಿಕತೆ, ಕನಸು ಎಲ್ಲವನ್ನೂ ಹಿಂದಕ್ಕೆ ತಳ್ಳಲ್ಪಟ್ಟು, ರಸತೆಗೆದ ಒಣ ಕಬ್ಬಿನ ಸಿಪ್ಪೆಯಂತಹ ಬಾಳುವೆಯಾಯಿತು. ಗದುಗಿನ ಮನೆಯ ಬಾವಿಯಲ್ಲಿ ಅವ್ವನ ಮೇಲೆ ಸಿಟ್ಟಾಗಿ ತಾನೇ ಮಾಡಿದ ಚಿತ್ರಗಳನ್ನು ಎಸೆದು ಹೋದಂತೆ, ಈಗ ತನ್ನ ಬದುಕನ್ನೇ ಮಹಾನಗರದ ಕಂದರದಲ್ಲಿ ಎಸೆದು ತನ್ನ ಮುದ್ದಿನ ಮಗಳನ್ನು ಬಿಟ್ಟು ನಡೆದ. ಮನೆ ತುಂಬಿರುವ ಪ್ರಶಸ್ತಿ, ಸನ್ಮಾನ, ಸರ್ಟಿಫಿಕೇಟ್ ಗಳ ಹೊಳಪು ಅವನ ಕುಟುಂಬಕ್ಕೆ ಮಸುಕಾಗಿದೆ. ಏರಿದಷ್ಟೇ ವೇಗವಾಗಿ ಕೆಳಮುಖವಾಗಿ ಧಾವಿಸಿ ಬಂದ ದಿಂಬ್ರಾ ನಮ್ಮ ಕೈಗೆಲ್ಲೂ ಸಿಗದೆ ಮರೆಯಾಗಿಬಿಟ್ಟ!
ಗರುಡರ ಮನೆಯ 'ಬಾಲ ಗೋಪಾಲ'
ನಿಮಗೆ ಇವೂ ಇಷ್ಟವಾಗಬಹುದು…





ಕಾಡಿತು ನಿಮ್ಮ ಬರೆಹ
ರಜನಿ ಗರುಡರ ಲೇಖನ ಕಣ್ಣಲ್ಲಿ ನೀರು ತರಿಸಿತು.ದಿಗಂಬರ (ಯೋಗೇಶ) ಗರುಡರ ಅಗಲುವಿಕೆ ನಿಜವಾಗಿಯೂ ತುಂಬಿ ಬಾರದ ನಷ್ಟ.
ಹ ವೆಂ ಕಾಖಂಡಿಕಿ.
ಪ್ರಜಾವಾಣಿಯ ಕ್ರೀಡಾಪುರವಣಿಯಲ್ಲಿ ಆಸಕ್ತಿ ತರುವ ಬರವಣಿ ಓದಿದ್ದೆನೆಂದರೆ ಅದು ಡಿ ಗರುಡ ಎಂಬುವವರದ್ದೇ ಆಗಿರುತ್ತಿತ್ತು. ಅವರ ಅಕಾಲಿಕ ಸಾವಿನ ಸುದ್ದಿ ಓದಿ ಬೇಜಾರಾಗಿತ್ತು. ಈ ಲೇಖನ ಅನನ್ಯ ಕ್ರಿಯಾಶೀಲ ವ್ಯಕ್ತಿತ್ವದ ಅನಾವರಣ ಮಾಡಿದೆ. ಡಿ ಗರುಡರಿಗೊಂದು ಭಾವಪೂರ್ಣ ಶ್ರದ್ಧಾಂಜಲಿ…
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಲೇಖನ . ಅಷ್ಟೇ ನೋವು ಕೂಡ. ಅವರ ಅನೇಕ ಕ್ರೀಡಾ ಲೇಖನಗಳನ್ನು ಓದಿದ್ದೆ . ಶೋಭಾ
ಪರಿಚಯವಾದಾಗಿನಿಂದ ಗರುಡ ಅವರು ಲೇಖನಗಳ ಮೂಲಕ ಪರಿಚಯವಾಗಿದ್ದರು. ಸಂಸಾರಕ್ಕಾಗಿ ತಮ್ಮ .ಆರೋಗ್ಯಕ್ಕಾಗಿ ಗರುಡ ಅವರು ಕಾಳಜಿ ವಹಿಸ ಬೇಕಿತ್ತು.
ಅಂತಃಕರಣದ ಬರಹ
great soul ….disappeared so early …cruel fate