ಲಿಬ್ಯಾದ ಬಗ್ಗೆ, ಗಡಾಫಿ ಬಗ್ಗೆ ಉದಯ್ ಇಟಗಿ ಬರೆದ ಲೇಖನದ ಕಡೆಯ ಭಾಗ ಇಲ್ಲಿದೆ.
***
ಉದಯ್ ಇಟಗಿ
ಗಡಾಫಿ ಕೊಟ್ಟ ಸೌಲತ್ತುಗಳ ಬಗ್ಗೆ ಇಲ್ಲಿನ ಬಹಳಷ್ಟು ಜನ ಈಗಲೂ ಹಾಡಿ ಹೊಗಳುತ್ತಾರೆ. ಆತ ಪ್ರತಿಯೊಬ್ಬ ಲಿಬಿಯನ್ ಒಂದು ಸ್ವಂತ ಮನೆ ಮತ್ತು ಸ್ವಂತ ಕಾರನ್ನು ಹೊಂದಿರಬೇಕೆಂದು ಕನಸು ಕಂಡಿದ್ದ ಮತ್ತದನ್ನು ಯಶಸ್ವಿಗೊಳಿಸಿದ್ದ ಕೂಡಾ. ಇದರ ಜೊತೆಗೆ ಅವರ ಶಿಕ್ಷಣ, ವೈದ್ಯಕೀಯ, ವಿದ್ಯುಚ್ಛಕ್ತಿ ಇನ್ನೂ ಮುಂತಾದ ಸೌಲತ್ತುಗಳನ್ನು ಉಚಿತವಾಗಿ ಕೊಟ್ಟಿದ್ದ. ಆದರೆ ಅವರ ಸಂಬಳವನ್ನು ಒಂದು ಕುಟುಂಬಕ್ಕೆ ಎಷ್ಟು ಬೇಕಾಗುತ್ತಿತ್ತೋ ಅಷ್ಟನ್ನು ಮಾತ್ರ ಕೊಡುತ್ತಿದ್ದ. ಇದರ ಬಗ್ಗೆ ಕೆಲವರಲ್ಲಿ ಅಸಮಾಧಾನವಿತ್ತು. ಲಿಬಿಯಾದ ಜನಸಂಖ್ಯೆ ಕೇವಲ ಐದು ಮಿಲಿಯನ್ ಆಗಿತ್ತು. ಆದರೆ ಅವ ಮಾತ್ರ ತೈಲ ಮಾರಾಟದಿಂದ ಬಂದ ಬಿಲಿಯನ್ ಡಾಲರ್ಗಳಷ್ಟು ಲಾಭವನ್ನು ಉದಾರವಾಗಿ ಸಂಬಳದ ರೂಪದಲ್ಲಿ ನಮಗೇ ಕೊಡುವದನ್ನು ಬಿಟ್ಟು ಇತರೆ ಆಫ್ರಿಕಾ ರಾಷ್ಟ್ರಗಳಾದ ಉಗಾಂಡ, ಪ್ಯಾಲೈಸ್ತೀನಾ, ಲೆಬನಾನ್, ಚಾದ್, ನೈಜೀರಿಯಾ, ನೈಜರ್, ಮಾಲಿ ಹಾಗೂ ಕ್ಯೂಬಾ ರಾಷ್ಟ್ರಗಳಿಗೆ ಸಹಾಯ ಮಾಡುವ ಅವಶ್ಯಕತೆ ಏನಿತ್ತು ಎಂದು ವಾದಿಸುತ್ತಾರೆ. (ನಿಮಗೆ ಗೊತ್ತಿರಲಿ ಗಡಾಫಿ ತನ್ನ ದೇಶದ ಹಣದಲ್ಲಿ ಈ ಎಲ್ಲ ರಾಷ್ಟ್ರಗಳಲ್ಲಿ ಒಳ್ಳೊಳ್ಳೆ ಸ್ಕೂಲು ಮತ್ತು ಆಸ್ಪತ್ರೆಗಳನ್ನು ಕಟ್ಟಿಸಿಕೊಟ್ಟಿದ್ದ.)

ಗಡಾಫಿ ಬೇರೆಯವರಿಗೆ ಸಹಾಯ ಮಾಡುತ್ತಿದ್ದನಾದರೂ ಲಿಬಿಯನ್ರಿಗೆ ಮಾತ್ರ ಯಾವುದೇ ಕೊರತೆಯಾಗದಂತೆ ನೋಡಿಕೊಂಡಿದ್ದ. ವಿಷಾದದ ಸಂಗತಿ ಏನೆಂದರೆ ಹಾಗೆ ಮಾತನಾಡುವ ಜನ ಅವರಿಗೆ ಮನೆ ಕಟ್ಟಿಸಿಕೊಟ್ಟಿದ್ದನ್ನು ಮತ್ತು ಅವರ ವಿದ್ಯಾಭ್ಯಾಸಕ್ಕಾಗಿ ಸುರಿದಿದ್ದನ್ನು ಮರೆಯುತ್ತಾರೆ. ಹಾಗೆ ನೋಡಿದರೆ ಲಿಬಿಯಾದ ಜನತೆಗೆ ಸಿಕ್ಕಷ್ಟು ಸೌಲತ್ತುಗಳು ಇತರೆ ಅರಬ್ ರಾಷ್ಟ್ರಗಳ ಜನತೆಗೆ ಖಂಡಿತ ಸಿಕ್ಕಿರಲಿಲ್ಲ. ಕೆಲವು ಯುವಕರಂತೂ ತೈಲ ಮಾರಾಟದಿಂದ ಬಂದ ಲಾಭದಲ್ಲಿ ಖತಾರ್, ಜೋರ್ಡಾನ್, ಮತ್ತು ದುಬೈಗಳಲ್ಲಿರುವಂತೆ ಕ್ಲಬ್ಬುಗಳನ್ನು, ದೊಡ್ಡ ದೊಡ್ಡ ಶಾಪಿಂಗ್ ಮಾಲ್ಗಳನ್ನು ಸ್ಥಾಪಿಸಬಹುದಿತ್ತೆಂದು ಹೇಳುತ್ತಾರೆ. ಆದರೆ ಗಡಾಫಿಗೆ ಇವೆಲ್ಲಕಿಂತ ಹೆಚ್ಚಾಗಿ ಅವರ ಮೂಲಭೂತ ಅವಶ್ಯಕತೆಗಳನ್ನು ಪೂರೈಸುವದು ಮುಖ್ಯವಾಗಿತ್ತು. ಹಾಗೆಂದೇ ಇಲ್ಲಿ ಮಧ್ಯ ಮಾರಾಟ ಸಂಪೂರ್ಣವಾಗಿ ನಿಷೇಧವಾಗಿತ್ತು. ಮನಸ್ಸು ಮಾಡಿದ್ದರೆ ಗಡಾಫಿ ಇದರ ಜೊತೆ ಜೊತೆಗೆ ಇತರೆ ಅಭಿವೃದ್ಧಿ ವಿಷಯಗಳತ್ತ ಗಮನ ಹರಿಸಬಹುದಿತ್ತೆಂದು ನನಗನಿಸುತ್ತದೆ. ಲಿಬಿಯಾದಲ್ಲಿ ಅಪಾರ ಹಣವಿತ್ತು. ಜನಸಂಖ್ಯೆ ಕಡಿಮೆ ಇತ್ತು. ಆ ಹಣದಿಂದ ಆತ ಉನ್ನತ ದರ್ಜೆಯ ಒಳ್ಳೊಳ್ಳೆ ಸ್ಕೂಲು, ಕಾಲೇಜು, ವಿಶ್ವವಿದ್ಯಾನಿಲಯ, ಆಸ್ಪತ್ರೆ, ಮೆಟ್ರೋ ರೈಲು, ವಿಮಾನನಿಲ್ದಾಣಗಳನ್ನು ಯಾವತ್ತೋ ಕಟ್ಟಿಸಿ ಇಡಿ ಅರಬ್ ರಾಷ್ಟ್ರಗಳಲ್ಲಿಯೇ ಮೊದಲ ಸ್ಥಾನದಲ್ಲಿರುವಂತೆ ನೊಡಿಕೊಳ್ಳಬಹುದಿತ್ತು. ಆದರೆ ಹಾಗೆ ಮಾಡದೇ ಬರೀ ಹೊರಗಿನವರಿಗೆ ಅಪಾರ ಹಣವನ್ನು ಪುಕ್ಕಟೆಯಾಗಿ ಕೊಟ್ಟುಬಿಟ್ಟ. ಅದಲ್ಲದೇ ಶೇಕ್ಷಪೀಯರ್ನ ಮ್ಯಾಕ್ಬೆತ್ನಂತೆ ಆತ ಅತೀವ ಮಹತ್ವಾಕಾಂಕ್ಷಿಯಾಗಿಬಿಟ್ಟ. ಹಗಲೂ ರಾತ್ರಿ ಇಡಿ ಆಫ್ರಿಕಾ ಖಂಡವನ್ನು ಒಗ್ಗೂಡಿಸುವದು ಹೇಗೆ, ಅದಕ್ಕೆ ತಾನು ರಾಜನಾಗುವದು ಹೇಗೆ ಎನ್ನುವದರಲ್ಲಿಯೇ ಆತ ಬಹಳಷ್ಟು ಸಮಯ ಮತ್ತು ಹಣವನ್ನು ವ್ಯಯಿಸಿಬಿಟ್ಟ.
ಇದೆಲ್ಲದರ ನಡುವೆ 1988ರಲ್ಲಿ ಸ್ಕಾಟ್ಲೆಂಡ್ನಯ ಪಾನ್ ಅಮ್ ವಿಮಾನದಲ್ಲಿ ಬಾಂಬಿಟ್ಟ ಅರೋಪ ಲಿಬಿಯಾದ ಮೇಲೆ ಬರುತ್ತದೆ. ಆ ಘಟನೆಯಲ್ಲಿ ಸುಮಾರು 250 ಜನ ಅಮೆರಿಕನ್ನರು ಸತ್ತಿದ್ದರಿಂದ ಸಿಟ್ಟೆಗೆದ್ದ ಅಮೆರಿಕಾ ಸರಕಾರ ಲಿಬಿಯಾದ ಮೇಲೆ ಹನ್ನೆರೆಡು ವರ್ಷಗಳ ಕಾಲ ದಿಗ್ಬಂಧನ ಹೇರಿತು. ಆಗ ಲಿಬಿಯಾ ಆರ್ಥಿಕವಾಗಿ ಹನ್ನೆರೆಡು ವರ್ಷಗಳ ಕಾಲ ಸಂಕಷ್ಟದಲ್ಲಿ ಸಿಲುಕಿತು. ಆ ಸಮಯದಲ್ಲಿ ಗಡಾಫಿ ಅಕ್ಕಪಕ್ಕದ ರಾಷ್ಟ್ರಗಳಿಂದ ದಿನನಿತ್ಯದ ವಸ್ತುಗಳನ್ನು ಒಂದಕ್ಕೆ ಮೂರರಷ್ಟನ್ನು ಕೊಟ್ಟು ಕೊಂಡುಕೊಂಡು ಅದ್ಹೇಗೋ ದೇಶವನ್ನು ನಡೆಸಿದ ಮತ್ತು ಹೀಗಿದ್ದೂ ಆತ ತನ್ನ ದೇಶವನ್ನು ಒಂದೇ ಒಂದು ಪೈಸೆಯಷ್ಟು ಸಾಲದ ಋಣದಲ್ಲಿ ಮುಳುಗಿಸಲಿಲ್ಲ ಎಂದು ಇಲ್ಲಿನವರು ಹೇಳುತ್ತಾರೆ. ಆದರೆ ಆತನ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುವ ಜನ ಇದ್ಯಾವುದನ್ನು ಪರಿಗಣಿಸುವದೇ ಇಲ್ಲ.
ಗಡಾಫಿ ಮಾಡಿದ ಇನ್ನೆರಡು ಅತಿ ದೊಡ್ಡ ತಪ್ಪುಗಳೆಂದರೆ ಅಮೆರಿಕನ್ರ ಮೇಲಿನ ಕೋಪಕ್ಕಾಗಿ ಇಂಗ್ಲೀಷ್ ಭಾಷೆಯ ಕಲಿಕೆಯನ್ನು ಹತ್ತು ವರ್ಷಗಳ ಕಾಲ ತನ್ನ ದೇಶದಿಂದ ನಿಷೇಧಿಸಿ ಒಂದು ತಲೆಮಾರನ್ನು ವಂಚಿಸಿಬಿಟ್ಟ. ಇದರಿಂದಾಗಿ ಅವರು ಇಂಗ್ಲೀಷ್ ಭಾಷೆಯ ಮುಖವನ್ನೇ ಕಾಣದಂತಾಯಿತು. ಅಲ್ಲದೇ ಇವತ್ತಿಗೂ ಆ ತಲೆಮಾರಿನ ಜನರಲ್ಲಿ ಇಂಗ್ಲೀಷ್ ಭಾಷೆಯ ಬಗೆಗೆ ಒಂದು ತೆರದ ಫೋಬಿಯಾ ಇದೆ ಮತ್ತು ಅದರ ಬಗ್ಗೆ ಈಗಲೂ ಅವನ ಮೇಲೆ ಅವರಿಗೆ ಕೋಪ ಇದೆ. (ಇದರ ಬಗ್ಗೆ ನಾನು ನಿಮಗೆ ಈ ಹಿಂದೆ ಹೇಳಿದ್ದೇನೆ.) ಹಾಗೂ ಮುಸ್ಲಿಂ ಬಾತೃತ್ವದ ಆಧಾರದ ಮೇಲೆ ಇತರೆ ಮುಸ್ಲಿಂ ರಾಷ್ಟ್ರಗಳಾದ ಚಾದ್, ನೈಜರ್, ಸಿರಿಯಾ, ಈಜಿಪ್ಟ್, ಮಾಲಿ ಮುಂತದ ರಾಷ್ಟ್ರಗಳ ಜನರನ್ನು ತನ್ನ ದೇಶದಲ್ಲಿ ಬಂದು ನೆಲೆಯೂರುವಂತೆ ಆಹ್ವಾನಿಸಿದ್ದು. ಇವರೆಲ್ಲಾ ವೀಸಾ ಇಲ್ಲದೇ ಲಿಬಿಯಾಕ್ಕೆ ಬಂದು ಹೋಗಬಹುದಿತ್ತು. ಹಾಗೆ ಬಂದವರು ಇಲ್ಲೇ ಏನಾದರೊಂದು ಕೆಲಸ ಮಾಡುತ್ತಾ ಕ್ರಮೇಣ ಲಿಬಿಯಾದ ನಾಗರಿಕತ್ವವನ್ನು ಪಡೆದುಕೊಂಡು ಇಲ್ಲಿಯ ಸೌಲತ್ತುಗಳನ್ನು ಪಡೆದುಕೊಂಡರು. ದುರಂತವೆಂದರೆ ಗಡಾಫಿ ಇರುವವರೆಗೂ ಕಮಕ್ ಕಿಮಕ್ ಎನ್ನದ ಈ ಜನ ಇದೀಗ ಎದ್ದು ಕುಳಿತಿದ್ದಾರೆ. ತಮಗೂ ದೇಶದ ರಾಜಕಾರಣದಲ್ಲಿ ಪಾಲು ಬೇಕು ಎಂದು ಕೇಳುತ್ತಿದ್ದಾರಲ್ಲದೇ ಅಲ್ಲಲ್ಲಿ ದೇಶದ ಶಾಂತಿಗೆ ಭಂಗ ತರುವಂಥ ಕೆಲಸ ಮಾಡುತ್ತಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿನ ಲೋಪ ದೋಷಗಳು: ಹಾಗೆ ನೋಡಿದರೆ ಗಡಾಪಿಗಿಂತ ಮುಂಚೆ ಲಿಬಿಯಾದಲ್ಲಿ ಬರೀ ಶೇಕಡಾ 25 ನಾಗರಿಕರು ಮಾತ್ರ ಅಕ್ಷರಸ್ಥರಾಗಿದ್ದರು. ಆದರೆ ಅವನು ಅಧಿಕಾರಕ್ಕೆ ಬಂದ ಮೇಲೆ ಆ ಸಂಖ್ಯೆ ಶೇಕಡಾ 83ಕ್ಕೆ ಏರಿತ್ತು. ಲಿಬಿಯಾದ ಶಾಲಾ ಕಾಲೇಜುಗಳಲ್ಲಿ ಇಂಗ್ಲೀಷ್ ಭಾಷೆಯೂ ಸೇರಿದಂತೆ ಅನೇಕ ವಿಷಯಗಳಿಗೆ ಸಂಬಂಧಪಟ್ಟಂತೆ ಬ್ರಿಟಿಷ್ ಕರಿಕಲಮ್ನ್ನು ಅನುಸರಿಸಲಾಗುತ್ತಿತ್ತು. ಇಲ್ಲಿನ ಶಾಲಾ ಹಂತದಲ್ಲಿನ ಇಂಗ್ಲೀಷ್ ಪಠ್ಯಪುಸ್ತಕಗಳು ಅತ್ಯಂತ ಉತ್ಕೃಷ್ಟ ಮಟ್ಟದಲ್ಲಿದ್ದವು. ಆದರೆ ಅವನ್ನು ಸರಿಯಾಗಿ ಬೋಧಿಸಲು ನುರಿತ ಅಧ್ಯಾಪಕರ ಕೊರತೆ ಎದ್ದು ಕಾಣುತ್ತಿತ್ತು. ಮೇಲಾಗಿ ನಾವು ಭಾರತದಲ್ಲಿ ಯಾವುದೇ ವಿಷಯವನ್ನು ವಾರಕ್ಕೆ ನಾಲ್ಕರಿಂದ ಆರು ಘಂಟೆ ಪಾಠ ಮಾಡಿದರೆ ಇಲ್ಲಿ ಬರೀ ಎರಡು ಘಂಟೆಗಳ ಕಾಲ ಪಾಠ ಮಾಡಲಾಗುತ್ತಿತ್ತು. ಇದು ಏನೇನೂ ಸಾಕಾಗುತ್ತಿರಲಿಲ್ಲ. ಅಲ್ಲದೆ ಇಲ್ಲಿನ ಪರೀಕ್ಷಾ ಪದ್ದತಿ ಕೂಡಾ ಬಹಳಷ್ಟು ಲೋಪ ದೋಷಗಳಿಂದ ಕೂಡಿತ್ತು. ನೂರು ಅಂಕಗಳಲ್ಲಿ ನಲವತ್ತು ಅಂಕಗಳು ಆಂತರಿಕ ಅಂಕಗಳಾಗಿದ್ದರೆ ಇನ್ನುಳಿದ ಅರವತ್ತು ಅಂಕಗಳಿಗೆ ಪರೀಕ್ಷೆ ಬರೆಯಬೇಕಾಗಿತ್ತು. ಹೀಗಾಗಿ ಎಲ್ಲರೂ ಸುಲಭವಾಗಿ ಪಾಸಾಗಿಬಿಡುತ್ತಿದ್ದರು. ಪರೀಕ್ಷೆಗಳಿಗೆ ನಿರ್ಧಿಷ್ಟವಾದ question paper pattern ಅಂತಾ ಇರುತ್ತಿರಲಿಲ್ಲ. ಶಿಕ್ಷಕರು ತಮಗೆ ಹೇಗೋ ಬೇಕೋ ಹಾಗೆ ಪ್ರಶ್ನೆ ಪತ್ರಿಕೆಯನ್ನು ರೂಪಿಸಿ ತಂತಮ್ಮ ಕಾಲೇಜುಗಳಲ್ಲಿಯೇ ಪರೀಕ್ಷೆ ನಡೆಸಿ ಅವರೇ ಮೌಲ್ಯಮಾಪನ ಮಾಡಬಹುದಿತ್ತು. ಹೀಗಾಗಿ ವಿದ್ಯಾರ್ಥಿಗಳು ಸುಲಭವಾಗಿ ಹೆಚ್ಚು ಅಂಕಗಳನ್ನು ಪಡೆಯುವ ಎಲ್ಲ ಸಾಧ್ಯತೆಗಳಿದ್ದವು. ಇಲ್ಲಿನ ಶಾಲಾ ಕಾಲೇಜುಗಳ ಗುಣಮಟ್ಟವನ್ನು ಪರೀಕ್ಷಿಸಲು ಸರಿಯಾದ ಮೇಲ್ವಿಚಾರಕರು ಇರಲೇ ಇಲ್ಲ.

ಮೇಲಾಗಿ ಗಡಾಫಿ ಬಹಳಷ್ಟು ಯುವಕರನ್ನು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಹೊರದೇಶಗಳಿಗೆ ಸ್ಕಾಲರ್ಶಿಪ್ ಕೊಟ್ಟು ಕಳಿಸುತ್ತಿದ್ದ. ಆದರೆ ವಿದ್ಯಾಭ್ಯಾಸ ಮುಗಿದ ಮೇಲೆ ಅವರು ವಾಪಾಸು ತಮ್ಮ ದೇಶಕ್ಕೆ ಬಂದು ಸೇವೆ ಸಲ್ಲಿಸಬೇಕು, ಇಲ್ಲವಾದರೆ ಅವರ ವಿದ್ಯಾಭ್ಯಾಸಕ್ಕೆ ಖರ್ಚು ಮಾಡಿದ ಅಷ್ಟೂ ಹಣವನ್ನು ಕಟ್ಟಿಕೊಡಬೇಕೆಂಬ ನಿಯಮವನ್ನು ವಿಧಿಸಿದ್ದನಾದರೂ ಅದನ್ನು ಕಟ್ಟುನಿಟ್ಟಾಗಿ ಪಾಲಿಸಲೇ ಇಲ್ಲ. ಹೀಗಾಗಿ ಬಹಳಷ್ಟು ಲಿಬಿಯನ್ರು ಬ್ರಿಟನ್, ಅಮೆರಿಕಾ, ಯೂರೋಪ್ ರಾಷ್ಟ್ರಗಳಿಗೆ ಹೋದವರು ಅಲ್ಲಿನ ಹುಡುಗಿಯರನ್ನು ಮದುವೆಯಾಗಿ ಅಲ್ಲಿಯೇ ಒಂದು ಕೆಲಸವನ್ನು ಗಿಟ್ಟಿಸಿಕೊಂಡು ತಳವೂರಿಬಿಟ್ಟರು. ಹೀಗಾಗಿ ಲಿಬಿಯಾದ ಮಾನವ ಸಂಪನ್ಮೂಲ ಹೊರದೇಶಗಳಲ್ಲೇ ಉಳಿದುಬಿಟ್ಟಿತು. ಪರಿಣಾಮವಾಗಿ ಲಿಬಿಯಾದ ತಾಂತ್ರಿಕ ಅಭಿವೃದ್ಧಿ ಕುಂಟಿತಗೊಂಡಿತು. ಒಂದು ವೇಳೆ ಆತ ತನ್ನ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದರೆ ಲಿಬಿಯಾ ಯಾವತ್ತೋ ದುಬೈ, ಖತಾರ್, ಟರ್ಕಿ ದೇಶಗಳನ್ನು ಹಿಂದೆಯಿಕ್ಕಿರುತ್ತಿತ್ತು.
ಅಮೆರಿಕನ್ರೆಡೆಗೆ ತೀವ್ರ ದ್ವೇಷ ಹಾಗೂ ಕಮ್ಯೂನಿಷ್ಟ ರಾಷ್ಟ್ರಗಳತ್ತ ಅತೀವ ಒಲವು: ಗಡಾಫಿ ಮುಂಚಿನಿಂದಲೂ ಅಮೆರಿಕನ್ನರ ಬದ್ಧ ವೈರಿಯಾಗಿದ್ದ ಆತ ಅವಕಾಶ ಸಿಕ್ಕಾಗಲೆಲ್ಲಾ ಅವರನ್ನು ಯಾವುದೇ ಮುಲಾಜಿಲ್ಲದೆ, ಹಿಂಜರಿಕೆಯಿಲ್ಲದೆ ಬಹಿರಂಗವಾಗಿ ಟೀಕಿಸಿ ಅವರ ಕೆಂಗಣ್ಣಿಗೆ ಗುರಿಯಾಗುತ್ತಿದ್ದ. ಈ ವಿಷಯದಲ್ಲಿ ಇತರೆ ಮುಸ್ಲಿಂ ರಾಷ್ಟ್ರಗಳ ನಾಯಕರು ಗಡಾಫಿಯನ್ನು ‘ಹಾಗೆಲ್ಲಾ ಅಮೆರಿಕನ್ನರನ್ನು ಬಹಿರಂಗವಾಗಿ ಟೀಕಿಸಬೇಡ’ ಎಂದು ಎಚ್ಚರಿಸಿದ್ದರೂ ಅವ ಅದನ್ನು ಲೆಕ್ಕಿಸದೆ ಪುಂಖಾನುಪುಂಖವಾಗಿ ಸಂದರ್ಭ ಸಿಕ್ಕಾಗಲೆಲ್ಲಾ ಅವರನ್ನು ತರಾಟೆಗೆ ತೆಗೆದುಕೊಂಡು ಅವರ ವಿರೋಧ ಕಟ್ಟಿಕೊಳ್ಳುತ್ತಿದ್ದನಲ್ಲದೇ ಇದೇ ಕಾರಣಕ್ಕಾಗಿ ಇನ್ನಿಲ್ಲದಂತೆ ನಾಶವಾಗಿ ಹೋದ.
ಜಗತ್ತಿನ ಬಹುತೇಕ ರಾಷ್ಟ್ರಗಳು ಅಮೆರಿಕಾವನ್ನು ಒಲಿಸಿಕೊಳ್ಳಲು ನೋಡಿದರೆ ಇವನು ಮಾತ್ರ ಮೇಲಿಂದ ಮೇಲೆ ಅವರ ವಿರೋಧ ಕಟ್ಟಿಕೊಳ್ಳುತ್ತಲೇ ಇದ್ದ. ಅಷ್ಟಕ್ಕೂ ಗಡಾಫಿಗೆ ಅಮೆರಿಕನ್ರನ್ನು ಕಂಡರೆ ಯಾಕೆ ಅಷ್ಟೊಂದು ದ್ವೇಷವಿತ್ತು ಎಂದು ಇಲ್ಲಿನವರು ಕೇಳಿದರೆ ಅವರು ಹೀಗೆ ಹೇಳುತ್ತಾರೆ. ಗಡಾಫಿಯು ಅಮೇರಿಕನ್ರ ಸಾಮ್ರಾಜ್ಯ ಶಾಹಿ ಧೋರಣೆಯನ್ನು ಹಾಗೂ ವಿಶ್ವದಲ್ಲಿ ಸದಾಕಾಲ ತಾವೇ ಅಗ್ರಸ್ಥಾನದಲ್ಲಿರಬೇಕೆಂದು ಬಯಸುವ ಅವರ ದುರಾಸೆಯನ್ನು ಮತ್ತು ಲಿಬಿಯಾ ಸೇರಿದಂತೆ ಆಫ್ರಿಕಾ ಖಂಡ ಮತ್ತು ಮಧ್ಯಪ್ರಾಚ್ಯ ರಾಷ್ತ್ರಗಳ ವಿಷಯದಲ್ಲಿ ವಿನಾಕಾರಣ ಅವರು ಆಗಾಗ ಮೂಗು ತೂರಿಸುತ್ತಿದ್ದುದನ್ನು ಆತ ತೀವ್ರವಾಗಿ ಖಂಡಿಸುತ್ತಿದ್ದ.
ಒಂದು ಸಾರಿ ಗಡಾಫಿ ತನ್ನ ಭಾಷಣದಲ್ಲಿ ಅಮೆರಿಕನ್ನರನ್ನು ಕುರಿತಂತೆ ಹೀಗೆ ಆಪಾದಿಸಿದ್ದ, “ಜಮ್ಹಾರಿಯಾ (ಲಿಬಿಯಾದ ಸಮಾಜವಾದ) ದ ಸ್ವಾಂತ್ರ್ಯಕ್ಕೆ ಧಕ್ಕೆ ತರುವ ಸಾಮ್ರಾಜ್ಯಶಾಹಿ ರಾಷ್ಟ್ರವಾದ ಅಮೆರಿಕಾವನ್ನು ಮತ್ತದರ ಧೋರಣೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಆ ನಿಟ್ಟಿನಲ್ಲಿ ನಾವೆಲ್ಲಾ ಅಮೆರಿಕನ್ನರ ಹುಟ್ಟು ದ್ವೇಷಿಗಳು. ಅಮೆರಿಕನ್ನರೆಡಗಿನ ನಮ್ಮ ಈ ದ್ವೇಷ ಇತಿಹಾಸದಲ್ಲಿ ದಾಖಲಾಗಲಿ.” ಅಮೆರಿಕನ್ನರೆಡೆಗಿನ ಈತನ ಈ ಭಯಂಕರ ದ್ವೇಷ ಲಿಬಿಯಾದ ಜನರ ಮೇಲೆಯೂ ಗಾಢವಾದ ಪರಿಣಾಮ ಬೀರಿತು. ಅವನಂತೆ ಅವರು ಕೂಡಾ ಅಮೆರಿಕನ್ನರ ಹುಟ್ಟು ದ್ವೇಷಿಗಳಾದರು.
ಗಡಾಫಿಗೆ ಅಮೆರಿಕಾವು ಇರಾಕಿನ ವಿಷಯದಲ್ಲಿ ಮೂಗು ತೂರಿಸಿ ತನ್ನ ಪರಮಾಪ್ತ ಸ್ನೇಹಿತ ಸದ್ದಾಂ ಹುಸೇನ್ನನ್ನು ಮುಗಿಸಿದ್ದಿದುರ ಬಗ್ಗೆ ತೀವ್ರ ಅಸಮಾಧನವಿತ್ತು ಮತ್ತು ಅವರ ಈ ಕೃತ್ಯವನ್ನು ಆತ ಅಮೆರಿಕಾದ ಕೇಡಿನ ಪರಮಾವಧಿ ಎಂದು ಕರೆದಿದ್ದ. ಸದ್ದಾಂ ಹುಸೇನ್ನನ್ನು ಗಲ್ಲಿಗೇರಿಸಿದ್ದುದರ ಹಿಂದಿನ ರಹಸ್ಯವನ್ನು ಬೇಧಿಸಬೇಕೆಂದು ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟಿನ ಮೇಲೆ ಆತ ಮೇಲಿಂದ ಮೆಲೆ ಒತ್ತಡ ಹೇರುತ್ತಲಿದ್ದ. ಜೊತೆಗೆ ಆತ ಕಮ್ಯೂನಿಸ್ಟ್ ರಾಷ್ಟ್ರಗಳಾದ ಕ್ಯೂಬಾ, ಚೀನಾ, ರಷಿಯಾದೊಂದಿಗೆ ತನ್ನ ಸಂಬಂಧವನ್ನು ಚನ್ನಾಗಿ ಇರಿಸಿಕೊಂಡಿದ್ದ. ಲಿಬಿಯಾದ ಮಾರುಕಟ್ಟೆ ಚೀನಾದ ಉತ್ಪನ್ನಗಳಿಂದ ತುಂಬಿ ಹೋಗಿತ್ತು. ದೇಶದ ಬೇಹುಗಾರಿಕೆ ಮತ್ತು ಗೂಢಚಾರಿಕೆಯ ವಿಭಾಗವನ್ನು ರಷಿಯನ್ರ್ ಸುಪರ್ದಿಗೆ ಬಿಟ್ಟಿದ್ದ. ಒಂದು ಸಾರಿ ಪಾನ್ ಆಮ್ ವಿಮಾನಕ್ಕೆ ಬಾಂಬಿಟ್ಟ ಆರೋಪದ ಮೇಲೆ ಅವನನ್ನು ಮುಗಿಸಲೇಬೇಕೆಂದು ಪಣತೊಟ್ಟ ಅಮೆರಿಕಾ ಅವನ ಟ್ರಿಪೋಲಿ ಮನೆಯ ಮೇಲೆ ಬಾಂಬ್ ದಾಳಿ ಮಾಡುತ್ತದೆ. ಆದರೆ ಅದಕ್ಕೂ ಮೊದಲೇ ರಷಿಯನ್ ಬೇಹುಗಾರಿಕೆ ವಿಭಾಗದಿಂದ ಅವನಿಗೆ ಮಾಹಿತಿ ಸಿಕ್ಕಿದ್ದರಿಂದ ಅವನು ಅಲ್ಲಿಂದ ಪಾರಾಗಿದ್ದನು.
ಇಲ್ಲಿ ಸೂಕ್ಷ್ಮವಾಗಿ ಗಮನಿಸಿದರೆ ನಮಗೆ ಒಂದು ವಿಷಯ ಸ್ಪಷ್ಟವಾಗುತ್ತದೆ. ಪ್ರಜಾಪ್ರಭುತ್ವವನ್ನು ಹೊಂದಿದ್ದ ಯೂರೋಪ್, ಬ್ರಿಟನ್, ಮತ್ತು ಅಮೆರಿಕಾ ರಾಷ್ಟ್ರಗಳು ಸಹಜವಾಗಿ ಕಮ್ಯೂನಿಸ್ಟ್ ರಾಷ್ಟ್ರಗಳಾದ ರಷಿಯಾ, ಚೀನಾ, ಕ್ಯೂಬಾಗಳೆಡೆಗೆ ಒಂದು ತಿರಸ್ಕಾರವನ್ನು ಬೆಳೆಸಿಕೊಂಡಿದ್ದವು. ಹೇಗಾದರು ಮಾಡಿ ಈ ಭದ್ರ ಕೋಟೆಗಳನ್ನು ಒಡೆದು ಹಾಕಿದರೆ ಇಡಿ ಜಗತ್ತಿಗೆ ತಾವೇ ವರಿಷ್ಠರಾಗಬಹುದೆಂಬುದು ಅವರ ಹುನ್ನಾರವಾಗಿತ್ತು. ಹಾಗೆಂದೇ ಹೆಚ್ಚು ಕಮ್ಮಿ ಕಮ್ಯೂನಿಸ್ಟ್ ರಾಷ್ಟ್ರಗಳಂತಿದ್ದ ಕೆಲವು ಮುಸ್ಲಿಂ (ತಮಗೆ ಬಾಗದ) ರಾಷ್ಟ್ರಗಳನ್ನು ಅವರು ಯಾವತ್ತೂ ಒಂದಾಗಲು ಬಿಡುತ್ತಿರಲಿಲ್ಲ. ಕಾಲ ಸರಿದಂತೆ ಅಮೆರಿಕಾ USSR ನ್ನು ಒಡೆದು ಹಾಕಿತು ಮತ್ತು ಚೆಗುವಾರನ ನಂತರ ಕ್ಯೂಬಾವನ್ನು ತನ್ನತ್ತ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ಇದನ್ನೇ ಗಡಾಫಿ ವಿಶ್ವಸಂಸ್ಥೆಯಲ್ಲಿ ತಾನು ಮಾಡಿದ ಮೊಟ್ಟ ಮೊದಲನೆಯ ಭಾಷಣದಲ್ಲಿ “ಈ ಹಿಂದೆ ಚೀನಿಯರೊಂದಿಗೆ ಮತ್ತು ರಶಿಯನ್ರೊಂದಿಗೆ ಚನ್ನಾಗಿದ್ದ ಅನೇಕ ಅನೇಕ ಅರಬ್ ರಾಷ್ಟ್ರಗಳ ನಾಯಕರನ್ನು ನೀವು ಗಲ್ಲಿಗೇರಿಸಿದ್ದೀರಿ. ನಾಳೆ ಇದೇ ಪರಿಸ್ಥಿತಿ ನನಗೂ ಬಂದರೆ ಆಶ್ಚರ್ಯವಿಲ್ಲ.” ಎಂದು ನೇರವಾಗಿ ಹೇಳಿದ್ದ. ದುರಂತವೆಂದರೆ ಅದೇ ಅವನ ಕೊನೆಯ ಭಾಷಣವಾಯಿತು ಕೂಡಾ.
ಚಾದ್ ಜೊತೆಗಿನ ಸಂಘರ್ಷ: ಲಿಬಿಯಾ ಮತ್ತದರ ನೆರೆ ರಾಷ್ಟ್ರವಾದ ಚಾದ್ ಜೊತೆಗಿನ ಸಂಘರ್ಷ 1978 ರಲ್ಲಿ ಶುರುವಾಗುತ್ತದೆ. 1965 ರಲ್ಲಿ ಚಾದ್ನವಲ್ಲಿ ಅಲ್ಲಿಯ ಚಕ್ರವರ್ತಿಯ ವಿರುದ್ಧ ಅಲ್ಲಿನ ಜನ ದಂಗೆ ಎದ್ದಾಗ ಲಿಬಿಯಾದ ಮೊದಲ ಅರಸ ಇದ್ರಿಸ್ ಬಂಡುಕೊರರಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸುವದರ ಮೂಲಕ ಅವರ ಸಹಾಯಕ್ಕೆ ನಿಲ್ಲುತ್ತಾನೆ. ಆದರೆ ಚಕ್ರವರ್ತಿಯ ಸಹಾಯಕ್ಕೆ ಫ್ರಾನ್ಸ್ ನಿಲ್ಲುತ್ತದೆ. ಈ ತಿಕ್ಕಾಟ ನಾಲ್ಕು ವರ್ಷಗಳವೆರೆಗೆ ನಡೆಯುತ್ತಲೇ ಇರುತ್ತದೆ. ಇತ್ತ ಲಿಬಿಯಾದಲ್ಲಿ 1969 ರಲ್ಲಿ ಇದ್ರಿಸ್ನೆನ್ನು ಕಿತ್ತೆಸೆದು ಮೌಮರ್ ಗಡಾಫಿ ಅಧಿಕಾರಕ್ಕೆ ಬರುತ್ತಾನೆ. ಬಂದವನೇ ಚಾದ್ನಇ ಉತ್ತರ ಭಾಗವನ್ನು ರಷಿಯಾದ ಸಹಾಯದಿಂದ ಆಕ್ರಮಿಸಿಕೊಂಡು ಅಲ್ಲಿ ಲಿಬಿಯಾದ ಮಿಲ್ಟ್ರಿ ಬೇಸ್ನ್ನು ಸ್ಥಾಪಿಸುತ್ತಾನೆ. ಇದಲ್ಲದೆ ಅಲ್ಲಿನ ಬಂಡುಕೋರರಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಾ ಹೋಗುತ್ತಾನೆ.
ಇದೇ ಸಂದರ್ಭದಲ್ಲಿ ಫ್ರಾನ್ಸ್ನ್ ಸಹಾಯದಿಂದ ಹೊಸ ಚಕ್ರವರ್ತಿ ಅಧಿಕಾರಕ್ಕೆ ಬರುತ್ತಾನೆ. ಆಗ ಸಿಟ್ಟಿಗೆದ್ದ ಗಡಾಫಿ 1979 ರಲ್ಲಿ ಚಾದ್ನು ಉತ್ತರ ಭಾಗದ ಒಂದು ಪಟ್ಟಣವನ್ನು ಸೆರೆಹಿಡಿಯುತ್ತಾನೆ. ಇದನ್ನು ಸಹಿಸಿಕೊಳ್ಳದ ಫ್ರಾನ್ಸ್ ಲಿಬಿಯಾವನ್ನು 1983 ರಲ್ಲಿ ಹೀನಾಯವಾಗಿ ಸೋಲಿಸುತ್ತದೆ. ಇಲ್ಲಿಂದಾಚೆ ಗಡಾಫಿಗೆ ಫ್ರಾನ್ಸ್, ಚಾದ್ ಮೂಲಕ ಲಿಬಿಯಾದ ಒಳಗೆ ನುಗ್ಗಬಹುದು ಎಂಬ ಭಯ ಕಾಡತೊಡಗುತ್ತದೆ. ಹಾಗಾಗಿ ಆತ ರಶಿಯಾದ ಜೊತೆ ತನ್ನ ಸಂಬಂಧವನ್ನು ಭದ್ರಗೊಳಿಸಿಕೊಂಡು ಚಾದ್ನಾಲ್ಲಿದ್ದ ಲಿಬಿಯಾದ ಮಿಲ್ಟ್ರಿ ಬೇಸ್ಗೆ ಫ್ರೆಂಚರನ್ನು ಎಚ್ಚರದಿಂದ ಕಾಯಲು ಹೇಳುತ್ತಾನೆ ಮತ್ತು ಅವರು ಲಿಬಿಯಾದ ಒಳಗೆ ನುಗ್ಗದಂತೆ ಫ್ರೆಂಚರಿಗೆ ಆಗಾಗ ಬಿಸಿ ಮುಟ್ಟಿಸುತ್ತಲೇ ಇರುತ್ತಾನೆ. ಈ ಸಂಘರ್ಷ ಅವನಿರುವವರೆಗೂ ನಡೆಯುತ್ತಲೇ ಇತ್ತು. ಏನೇ ಆಗಲಿ ಈ ಸಂಘರ್ಷವನ್ನು ದೊರೆ ಇದ್ರೀಸ್ ಶುರುಮಾಡಿದ್ದರೂ ಇವನು ಅದನ್ನು ಮುಂದುವರಿಸಬಾರದಿತ್ತು. ಇದು ಅನವಶ್ಯಕವಾಗಿತ್ತು. ಇದಕ್ಕಾಗಿ ಸಾಕಷ್ಟು ಹಣ ಮತ್ತು ಸಮಯವನ್ನು ಹಾಳು ಮಾಡಿದನೆಂದು ಇಲ್ಲಿನವರು ಹೇಳುತ್ತಾರೆ.
ಈ ಎಲ್ಲ ಅಂಶಗಳು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಗಡಾಫಿಯ ಅವನತಿಗೆ ಕಾರಣವಾದವು. ಈ ತಪ್ಪುಗಳಲ್ಲಿ ಕೆಲವು ತಪ್ಪುಗಳು ಜಗತ್ತಿನ ಕಣ್ಣಿನಲ್ಲಿ ತಪ್ಪಾಗಿ ಕಂಡರೆ ಇನ್ನು ಕೆಲವು ಲಿಬಿಯನ್ರಳ ದೃಷ್ಟಿಯಲ್ಲಿ ತಪ್ಪುಗಳಾಗಿ ಕಾಣಿಸಿದವು. ಈ ಎಲ್ಲ ಕಾರಣಗಳಿಂದಾಗಿ ಗಡಾಫಿ ನನಗೆ ಶೇಕ್ಷಪೀಯರ್ನಣ ಒಬ್ಬ ದುರಂತನಾಯಕನಂತೆ ಕಾಣಿಸುತ್ತಾನೆ.






A well balanced article. No doubt, Gaddafi had his own faults, but none can deny how he cared & provided for his people and others. A benevolent dictator indeed. No wonder, other foreign powers hated him. After all, they don’t desire to see a power apart from themselves in the world. Thanks for a new personal insight.
Thanks for your comment sir. If you want to know more about Gaddafi, please go through my articles published in the same Avadhi previously. On your right side if you click on Uday Itagi column, you will get my articles.
ನಿಮ್ಮ ಲೇಖನ ಬಹಳ ಆಸಕ್ತಿಯುತವಾಗಿದ್ದಿತು. ಅಮೆರಿಕದ ಸರ್ವಾಧಿಕಾರತ್ವ ಧೋರಣೆಯಿ೦ದ ಅನೇಕ ದೇಶಗಳಿಗೆ ಅನ್ಯಯವಾಗಿದೆ. ಅದನ್ನು ಯಾರೂ ಅಲ್ಲಗಳೆಯುವಹಾಗಿಲ್ಲ. ವಿಯಟ್ನಾ೦ ಸಮಯದಲ್ಲಿ
ಅಮೆರಿಕದಲ್ಲಿ ಇದ್ದು ಅಲ್ಲಿಯ ಸರ್ಕಾರದ ಮನೋಭಾವ ನನಗೆ ಪರಿಚಯವಿದೆ. ಜೂಲಿಯಸ್ ನೆಯೆರೆ, ಜೊಮೊ ಕೆನ್ಯಾಟಾ, ನಕ್ರೂಮಾ, ಇತ್ಯಾದಿ ಆಫ್ರಿಕದ ನಾಯಕರ ಜೊತೆ ಗೆಡ್ಡಫಿಯ ಹೆಸರೂ ಸೇರುತ್ತದೆ. ಆದರೆ ಅಮೆರಿಕವನ್ನು ಎದುರಿಸಿದವರೂ ಸರ್ವಧಿಕಾರಿಗಳಾಗಿ ಬಿಡುತ್ತಾರೆ. ಮಧ್ಯದಲ್ಲಿ ಅಲ್ಲಿಯ ಜನತೆ ಸಿಕ್ಕಿಹಾಕಿಕೊಳ್ಳುತ್ತಾರೆ.( ಆಫಾಗಾನಿಸ್ತಾನ ಒ೦ದು ಉದಾಹರಣೆ. )ಅದು ನಿಜ ದುರ೦ತೆ
“ಅಮೆರಿಕದ ಸರ್ವಾಧಿಕಾರತ್ವ ಧೋರಣೆಯಿ೦ದ ಅನೇಕ ದೇಶಗಳಿಗೆ ಅನ್ಯಯವಾಗಿದೆ. ಅದನ್ನು ಯಾರೂ ಅಲ್ಲಗಳೆಯುವಹಾಗಿಲ್ಲ.”ನಿಮ್ಮ ಮಾತು ನಿಜ ಸರ್. Thanks for your comment Sir.