ಗಜಲ್ ಯಾನ…

ಅಸ್ಮಿತೆಯಿಂದ ಅನೂಹ್ಯದೆಡೆಗೆ..

ಜಬೀವುಲ್ಲಾ ಎಮ್ ಅಸದ್

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು. ಆರೋಗ್ಯ ಇಲಾಖೆಯಲ್ಲಿ ಉದ್ಯೋಗಿ. ಕಾವ್ಯದಲ್ಲಿ ಕೃತಿಯೋಂದು ಪ್ರಕಟವಾಗಿದೆ. ಗಜಲ್‌ ಅಧ್ಯಯನದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.

ಗಜಲ್ ಎಂದರೆ…ಮೇಘ ಮಳೆಯ ಹನಿಸುವ ಮುನ್ನ ಮಣ್ಣಿನಿಂದ ಹೊಮ್ಮಿದ ಘಮ!

ಗಜಲ್ ಎಂದರೆ… ಮೊಲೆ ಉಂಡು ಆಕಳಿಸಿ ಅಮ್ಮನ ಮಡಿಲಲ್ಲಿ ಮಲಗಿದ ಮಗುವಿನ ಕಿರು ನಗು!

ಗಜಲ್ ಎಂದರೆ… ಕುಣಿಯುವ ಹೆಜ್ಜೆಗಳ ಗೆಜ್ಜೆಯಿಂದ ಅಗಲಿದ ‘ಘಲ್’ ಎಂಬ ಒಂಟಿ ಸದ್ದು!

ಗಜಲ್ ಎಂದರೆ… ಆಕಾಶ ಬಳಸಿ ಹಾರಿದ ಹಕ್ಕಿಯ ರೆಕ್ಕೆಯಿಂದ ಕಳಚಿ ಗಾಳಿಗಾನದಿ ತೇಲುವ ಹಗುರ ಗರಿಯ ಪರವಶತೆ!

ಗಜಲ್ ಎಂದರೆ…ಕಡಲ ಅಲೆಗಳೆಲ್ಲ ಒಂದೊಂದಾಗಿ ಸರತಿಲಿ ಓಡಿಬಂದು ತೀರಕ್ಕೆ ಮುತ್ತಿಟ್ಟು ಕಳೆದುಹೋಗುವ ಸಂಭ್ರಮ!

ಗಜಲ್ ಎಂದರೆ… ಫಕೀರನೊಬ್ಬನ ಬಿಳಿಗಡ್ಡದ ಮೇಲೆ ಮೈಮರೆತು ಕೂತ ಚಿಟ್ಟೆಯ ಧ್ಯಾನ!

ಗಜಲ್ ಎಂದರೆ… ದೀಪದ ಬೆಳಕಿನ ವ್ಯಾಮೋಹಕೆ ಮನಸೋತು ಸುಟ್ಟು ಸತ್ತು ಸ್ವರ್ಗ ಸೇರಿದ ಪತಂಗದ ವಿಷಾದ ಕನಸು!

ಗಜಲ್ ಎಂದರೆ… ಆಗತಾನೆ ಅರಳಿದ ಹೂವಿನ ಮೇಲೆ ಸುರ್ಮ ಹಚ್ಚಿದ ಕಣ್ಣಿಂದ ಜಾರಿಬಿದ್ದ ಕಪ್ಪು ಕಂಬನಿ!

ಗಜಲ್ ಎಂದರೆ… ಅಂತರಾಳದ ನೋವ್ವು ತಾಕಿ ಚದುರಿದ ಸುಂದರ ಹೂದಾನಿಯ ಒಡಪು!

ಗಜಲ್ ಎಂದರೆ…ಮಾಯೆಯ ನೋಟದಿಂದ ಛಿದ್ರವಾದ ಕನ್ನಡಿಯ ಚೂರು 

ಗಜಲ್ ಎಂದರೆ… ಎಲ್ಲವೂ ಹೌದು, ಅಸದ್-  ಏನೆಂದರೆ ಏನೂ ಅಲ್ಲ!

ಅದೊಂದು ಭಾವಯಾನ, ಮನಸುಗಳ ಮಿಲನ, ಕಡಲ ಅಲೆಗಳ ಗಾನ, ಮನದ ಏಕಾಂತದ ಮೌನ, ಮುಗಿಲ ಧ್ಯಾನ, ಆತ್ಮ ಪರಮಾತ್ಮನ ಅನುಸಂಧಾನ.

‘ಗಜಲ್ ಕಾವ್ಯದ ಮೂಲ ದ್ರವ್ಯ ಪ್ರೇಮ.’ ಈ ಪ್ರೇಮವೆಂಬುದು ಧ್ಯಾನವಾಗುವುದು ಸಂಕಲ್ಪದಿಂದ, ಕೈವಲ್ಯದಿಂದ, ನಿಷ್ಕಾಮ ಕರ್ಮವಾಗಿಸಿ ಬಯಕೆಯನ್ನು ಗೆದ್ದ ಬುದ್ಧನಂತಾದಾಗ ಮಾತ್ರ ಸಾಧ್ಯವಾಗುವಂಥದ್ದು. ಪ್ರೇಮದ ಪರಾಕಾಷ್ಠೆಯ ನಿಮಿತ್ತ ಅದುವೆ. ಅನುರಾಗ ಆರಾಧನೆಯಾಗುವ ಅವಿನಾಭಾವ ದೈವತ್ವವನ್ನು ಮೈಗೂಡಿಸಿಕೊಳ್ಳುವ ಸಿದ್ಧಿಯಂಥದ್ದು. ಪದಗಳ ವರ್ಣನೆಗೆ ದಕ್ಕದ, ಅರ್ಥಕ್ಕೆ ತೆರೆದುಕೊಳ್ಳದ, ಅನುಭವವನ್ನು ಹಂಚಿಕೊಳ್ಳಲಾಗದ, ಆಸ್ವಾದಿಸಿಯೇ ತೃಪ್ತರಾಗುವಂತಹ ಅಂತರ್ಮುಖಿ ಸಂವಾದ. ಮೌನದಿ ಅರಳುವ ಮುಗುಳ್ನಗೆ ಎಂದಷ್ಟೇ ವ್ಯಾಖ್ಯಾನಿಸಬಹುದು. ಅದಕ್ಕೆ ಸಂಬಂಧಿಸಿದ…. ಮೃದು – ಮಧುರ ಅನುಭೂತಿ, ಲಾಲಿತ್ಯ, ವಿರಹ ವೇದನೆ, ತುಡಿತ ತುಹಿನ ಗಾನ, ಅಪಾರ ಹಂಬಲ, ಸಂಭ್ರಮಗಳನ್ನು ಸಾಕ್ಷಾತ್ಕರಿಸಿದಂತೆ ಜೀವನಾನುಭವದ ಮೂಲಕ, ಅನುಭಾವಿಕ ಗಝಲ್ಗಳನ್ನು ರಚಿಸುವ ಅನನ್ಯ ಕ್ರಮ ಜಾರಿಯಲ್ಲಿಡಬೇಕಾದ ಅನಿವಾರ್ಯತೆ ಇದೆ. 

ಗಜಲ್ ಕವಿ ಪ್ರೇಮದ ಅನುರಕ್ತತೆಯಲ್ಲಿ ತಲ್ಲಣಿಸುತ್ತ, ಪರಿತಪಿಸುತ್ತ, ಮಣಿಸುತ್ತ, ಖುದ್ದು ತಾನೇ ಮಣಿಯುತ್ತ ಏಕತಾನತೆಯಲ್ಲಿ ಅನುರಣಿಸುತ್ತ, ವಿಕಲ್ಪ ವಾಸ್ತವಕ್ಕೆ ಮುಖಾಮುಖಿಯಾಗಿ ಒಮ್ಮೆ ತೆರೆದುಕೊಳ್ಳುತ್ತ, ಮತ್ತೊಮ್ಮೆ ಕಪ್ಪೆಚಿಪ್ಪಿನೊಳಗಿನ ಜೀವಿಯಾಗಿ ಅಂತರ್ಗತವಾಗುತ್ತ ಮನದ ಭಿತ್ತಿಯ ಮೇಲೆ ಗೀಚಲ್ಪಟ್ಟ ಮಧುರ ಮತ್ತು ಯಾತನದಾಯಕ ಪ್ರೇಮದ ಪರಮಾವಧಿಯ ಅಭಿವ್ಯಕ್ತಿಯಾಗಿ ಗಜಲ್ ಗಳು ಕಾಲದಿಂದ ಕಾಲಕ್ಕೆ ರೂಪಾಂತವಾಗುತ್ತಿರುವುದನ್ನು ಕಾಣುತ್ತಿದ್ದೇವೆ.

ಗಜಲ್ ಎಂಬುದು ಆತ್ಮ ಸಾಂಗತ್ಯದೊಲವಿನ, ಮಧುರ ಭಾವದ ಮಿಳಿತದ, ತನಹ ಪ್ರೇಮ ತುಡಿತದ, ಮನದ ಮೋಹ ಮಿಡಿತದ,  ನೋವಿನ ನಿವೇದನೆಯ, ಅನುಭೂತಿಯ ಅನುಮೋದನೆಯ, ಆಧ್ಯಾತ್ಮಿಕ ಸ್ಪರ್ಶದ, ಪಾರಮಾರ್ಥಿಕ ಆಕರ್ಷಣೆಯ, ಧ್ಯಾನ ಪರವಶತೆಯ, ಮ್ಲಾನ ಮದಿರೆಯ ನಶೆಯ, ಇಹ – ಪರಗಳ ನಂಟನ್ನು ಬೆಸೆಯುವ, ಮನುಷ್ಯ ಮತ್ತು ದೈವದ ಸಾಕ್ಷಾತ್ಕಾರಕ್ಕೆ ಪ್ರೇರೇಪಿಸುವ ಕಾವ್ಯ ಪ್ರಕಾರವಾಗಿದೆ.

ಕನ್ನಡ ಭಾಷೆಯ ಭಾವಗಳನ್ನು ಮೀಟಿ,  ಹೃದಯಗಳಿಗೆ ಸೀಟಿ ಹೊಡೆದು, ಕಣ್ಣು ಮಿಟುಕಿಸಿ, ಕಂಬನಿ ಹರಿಸಿ, ಮನಸುಗಳ ರಮಿಸಿ, ಬರಸೆಳೆದು ತಬ್ಬಿ, ಮುತ್ತನಿಕ್ಕಿ ಕನ್ನಡ ಕವಿಗಳ ಮತ್ತು ಕಾವ್ಯಸಕ್ತರ ಬೆಂಬಿಡದ  ಮನದನ್ನೆಯಾಗಿ, ಆತ್ಮಸಖಿಯಾಗಿ, ಅಮಲೇರಿಸುವ ಸಾಕಿಯಾಗಿ ಇಂದು ಗಜಲ್ ಎಲ್ಲರನ್ನು ನಶೆಗೀಡು ಮಾಡುತ್ತಿದೆ.

ಗಜಲ್‌ ಗಳ ಆಳಕ್ಕೆ ಇಳಿದಂತೆಲ್ಲ – ಓದುಗನ ಮನದಲ್ಲಿ ಕವಿದ ಕತ್ತಲು ಮೆಲ್ಲನಡಿಯಿಟ್ಟು ಸದ್ದಿಲ್ಲದೆ ಜಾರಿಕೊಳ್ಳುವ ಭಾವ ತೀವ್ರತೆ ಮೊದಲಾಗಬೇಕು. ಬೆಳಕಿನ ಪ್ರಖಂಡ, ಅನರ್ಘ್ಯ ಪ್ರಭೆಯ ಆವರಿಸುವಿಕೆ ಆಪ್ತವಾಗುತ್ತ ಹೋಗಬೇಕು. ಹೀಗೆ… ರಚಿಸಲ್ಪಡುವ  ಗಜಲ್‌ ಗಳ ಬೆಳಕಿನ ಪ್ರಭೆ ಬೆಚ್ಚಗಿರಬೇಕು, ಅಚ್ಚ ಹಸಿರಾಗಿ, ಆಗತಾನೆ ಅರಳಿದ ಸುಮಗಳ ಸೌಂದರ್ಯದಿಂದ,  ಬಳಸಿದ ಭಾವ ಪುಷ್ಪಗಳ ಗಂಧ ನಶೆಗೀಡು ಮಾಡುವಂತಿರಬೇಕು! ಜೊತೆ ಜೊತೆಗೆ ಪ್ರೇಯಸಿ/ಪ್ರೇಮಿಯಾಗಿ ಪ್ರೇಮದ ಮಧುವಿಗಾಗಿ ಕಾತರಿಸುವ, ಕನವರಿಸುವ, ಕನಸುವ ಮತ್ತು ಪ್ರಯಾಸಪಡುವ  ಅದ್ವಿತೀಯ, ಅಭೂತಪೂರ್ಣ ಭಾವ ಉದ್ವಿಗ್ನತೆಯನ್ನು ಸಹ ಕಾಣಿಸಬೇಕು.

ಗಜಲ್‌ ಕಾವ್ಯ ಅದರದೆ ಆದ ವಿಶಿಷ್ಟವಾದ ದಿವ್ಯ ಚೇತನಶಕ್ತಿ ಓದುಗನನ್ನು ಭವ್ಯ ರಸಾನುಭವಕ್ಕಿಡುಮಾಡುತ್ತದೆ. ಚಿಂತನೆಯ ಗರಿಯ ರೆಕ್ಕೆಗೆ ಸುಲಭಕ್ಕೆ ಸಿಗದ ಆಗಸವಾಗುವ, ಆಶಯವಾಗಿಯೆ ಉಳಿದುಬಿಡುವ, ಆಂತರ್ಯದಲ್ಲಿ ಅಡಗಿದ ಸೂಕ್ಷ್ಮವಾದ ತಾತ್ವಿಕತೆ ನವಿಲುಗರಿಯ ಸ್ಪರ್ಶದ ಸುಖಾನುಭೂತಿಯನ್ನು ಪ್ರಸಾದಿಸುತ್ತದೆ. ನಿಸರ್ಗದ ಮಡಿಲಲ್ಲಿ ಅವಿರತವಾಗಿ ಅಡಗಿದ ಪುಟ್ಟ ಪುಟ್ಟ ವಿಸ್ಮಯಗಳನ್ನು ಕಾವ್ಯದ ಬೆರಗುಗಣ್ಣಿನ ಮೂಲಕ ತದಾತ್ಮಕತೆಯಿಂದ, ತುಂಬು ಶ್ರದ್ಧೆಯಿಂದ, ಕಾಳಜಿಯಿಂದ ಗಜಲ್ ನ ಬಯಲಲ್ಲಿ ಹರವಿದ, ಲೋಕದ ಕುರುಡು ಕಣ್ಣಿಗೂ ಕಾಣಿಸುವ ಅಂತರ್ ಪ್ರಜ್ಞೆ ಗಜಲಗಳಲ್ಲಿ ಮಿಳಿತವಾಗಬೇಕಿದೆ.

ಗಜಲಗಳ ಭಾವ ವಿಶೇಷಗಳ ಒಳಹೊಕ್ಕು ಕವಿ ಹೇಳುವ ಹೊಳಹುಗಳನ್ನು ಊಹಿಸಿಕೊಳ್ಳುತ್ತಾ, ಕಾಣಿಸುವ ಕಾಣ್ಕೆಗಳನ್ನು ಕಾಣುತ್ತಾ, ಕನಸುತ್ತಾ ಬೆರಗಾಗಬೇಕಾಗುತ್ತದೆ! ಆಗ ಗಜಲಗಳ ಆತ್ಮವನ್ನು ಸ್ಪರ್ಶಿಸಲು ಮತ್ತು ಹೃದಯದ ನೀನಾದವನ್ನು ಕೇಳಿಸಿಕೊಳ್ಳಲು ಸಾಧ್ಯವಾಗುತ್ತದೆ.

ಪ್ರತಿಯೊಂದು ಗಜಲ್ ನ, ಒಂದೊಂದು ಮಿಸ್ರವು, ಒಂದೊಂದು ಗಹನವಾದ ಅನುರಕ್ತತೆ ಹೊಂದಬೇಕು, ಓದುಗನ ಮನಸ್ಸಿನೊಂದಿಗೆ ಅನುಸಂಧಾನ ಬಯಸಬೇಕು. ಗಜಲಗಳಲ್ಲಿ ಬಳಕೆಯಾದ ವಿಭಿನ್ನ ಕಲ್ಪನೆಗಳು, ಬರೆಯಲ್ಪಟ್ಟ ವಿಶೇಷ ಅಲಂಕಾರಗಳು, ಬೆರಗು ಹುಟ್ಟಿಸುವ ರೂಪಕಗಳು, ಪರವಶಗೊಳಿಸುವ ಪ್ರತಿಮೆಗಳು ದಿವ್ಯ ಪ್ರಭೆಯ ಮೂಲಕ ಮೈ-ಮನಸುಗಳನ್ನು ಆವರಿಸಿ, ದೈವಿಕ ಸಾಕ್ಷಾತ್ಕಾರವನ್ನು ಪ್ರಸಾದಿಸಬೇಕು.

ಗಜಲ್ ಕಾವ್ಯದಲ್ಲಿ ಸರ್ವೆ ಸಾಮಾನ್ಯವಾಗಿ ಬಳಕೆಯಾಗುವ, ಈಗಾಗಲೇ ಸವಕಲಾಗಿರುವ, ಕ್ಲಿಷೆಯ ಹಣೆಪಟ್ಟಿ ಅಂಟಿಕೊಂಡಿರುವ ಪ್ರೇಮ, ಶರಾಬ್, ಮಧುಬಟ್ಟಲು, ಮೈಖಾನೆ, ಸಖಿ, ಸಾಕಿ, ಗಾಲಿಬ್ ಇತ್ಯಾದಿ ಇಂತಹ ಪದಗಳನ್ನು ಅವಶ್ಯಕತೆಗನುಸಾರವಾಗಿ ಸೂಕ್ತವಾಗಿ ಬಳಸಿ, ಎಲ್ಲಿಯೂ ಜಿಜ್ಞಾಸೆ ಮೂಡಿಸದ ಹಾಗೆ ಬಳಸುವ ಕ್ರಮದಿಂದ ಗಜಲ್ ಗಳಿಗೆ ಹೆಚ್ಚು ಮೆರಗು ತರಬಹುದಾಗಿದೆಯಾದರೂ, ಗಜಲ್ ಎಂದರೆ ಇಷ್ಟೇ ಪದಗಳ ಬಳಕೆಯಷ್ಟೇ ಎಂದು ದಿಕ್ಕು ತಪ್ಪುತ್ತಿರುವ ಅನವಶ್ಯಕವಾಗಿ ಈ ತೆರನಾದ ಪದಗಳ ಅವಿರತ ಬಳಕೆಯನ್ನು ಕಾಣುತ್ತಿದ್ದೇವೆ

ಗಜಲ್‌ ಗಳು ಮೇಲ್ನೋಟಕ್ಕೆ ಶಾಂತವಾದ ಕಡಲಿನೋಪಾದಿಯಲ್ಲಿ ಕಂಡರೂ ಸಹ, ಅಂತರಾಳದಲ್ಲಿ ಭೋರ್ಗರೆಯುತ್ತಿರುವ ಸೂಚನೆ ದಕ್ಕುತ್ತದೆ. ಹಾಗೆ, ಧ್ಯಾನಿಸಿದಂತೆ ಬರೆದಿರುವ ಗಜಲ್ ಗಳಿಗೆ… ಮೋಹಿಸುವ ಶಕ್ತಿಯಿದೆ, ಭಾವಪರವಶಗೊಳಿಸುವ ಯುಕ್ತಿಯಿದೆ, ಆಧ್ಯಾತ್ಮಿಕ ಒಲವಿನ ಮಾರ್ಗದ ಮುಕ್ತಿಯಿದೆ ಹಾಗೂ ವೈರಾಗ್ಯಭಾಗ್ಯ ಸುಖದ ಅನುರಕ್ತಿಯಿದೆ. ಯಾರೂ ಕಾಣದ್ದನ್ನು ಕಾಣಿಸುವ, ಕೇಳದ್ದನ್ನು ಕೇಳಿಸುವ, ಗಜಲ್ ಎಂದರೆ ಹೀಗಿರಬೇಕು ಎಂಬ ಭಾಷ್ಯ ಬರೆಸಿಕೊಳ್ಳುವ ಬೌದ್ಧಿಕ ಪಕ್ವತೆಯ ಜೊತೆಗೆ… ನಶೆಯ ಕಾವ್ಯ ಎಂದು ಹೆಸರಾಗಿರುವ  ಗಜಲ್ ಗಳಲ್ಲಿ ಒಂದು ತೆರನಾದ  ಉನ್ಮಾದತೆ, ಉದ್ರಿಕ್ತತೆಯನ್ನು ತರಬೇಕಾಗುತ್ತದೆ. ಗಜಲ್ ಗಳಲ್ಲಿ ಒಂದು ರೀತಿಯ ನಶೆಗೀಡು ಮಾಡಬಲ್ಲ ಮಾದಕತೆ ಇದೆ! ಇಲ್ಲದಿದ್ದರೆ ಎಲ್ಲಾ ಗಜಲ್ ಗಳಿಗೆ ಓದುಗನಿಗೆ  ಅಮಲೇರಿಸಿ, ನಶೆಗೀಡುಮಾಡಬಲ್ಲ ಶಕ್ತಿ ಎಲ್ಲಿಂದ ಬರಬೇಕು? ಸುಜ್ಞಾನಭರಿತವಾದ ಮಾದಕತೆ ಗಜಲ್‌ ಗಳ ರಸಗಂಧಸಿದ್ಧಿಯಿಂದ ಸವಿಯಲು ಮಾತ್ರ ಸಾಧ್ಯವಾಗುವಂಥದ್ದು.

ಗಜಲ್ ಕವಿಯಾದವನು ತನ್ನ ಮನಸ್ಸಿನ  ಮೂಸೆಯಲ್ಲಿ ಕಂಡುಕೊಂಡದ್ದನ್ನು ಯಥಾವತ್ತಾಗಿ ಅಕ್ಷರರೂಪ ಕೊಡುವುದು ಸಾಧ್ಯವಿದೆಯಾದರೂ, ವಸ್ತುಸ್ಥಿತಿಯನ್ನು ಇರುವಂತೆಯೆ ಆದರೆ ಕುತೂಹಲ ಮೂಡಿಸುವಂತೆ, ಚಕಿತಗೊಳಿಸುವಂತೆ, ಓದುಗನನ್ನು ಹಿಡಿದಿಡುವ ರೀತಿಯಲ್ಲಿ ಕಾವ್ಯವನ್ನು  ಕಟ್ಟಿಕೊಡುವುದಿದೆಯಲ್ಲ ಬಹುಶಃ ಅದು ಎಲ್ಲರಿಂದ ಸಾಧ್ಯವಾಗದಂತಹುದು. ಅದಕ್ಕೆ ಪರಿಶ್ರಮ ಬೇಕು. ಅಗಾಧ ಕಲ್ಪನಾಶಕ್ತಿ ಬೇಕು. ಕಲ್ಪನೆಯನ್ನು ವಾಸ್ತವದ ನೆಲೆಗಟ್ಟಿನ ಭಿತ್ತಿಯ ಮೇಲೆ ಚಿತ್ರಿಸುವ ಕಲೆಗಾರಿಕೆ ಬೇಕು. ಅಮೂರ್ತತೆಯಿಂದ ಮೂರ್ತ ಸಂವೇದನೆ ಪರಿಪಕ್ವಗೊಂಡು ಹೊರಹೊಮ್ಮಬೇಕು. ಈ ಎಲ್ಲದಕ್ಕೂ ಸೃಜನಶೀಲ ಮನಸ್ಥಿತಿ ಬೇಕು. ಈ ತೆರನಾಗಿ ಕವಿಯಾದವನು ತನ್ನ ಮನದ ಇಂಗಿತವನ್ನು ನೇರವಾಗಿ ವ್ಯಕ್ತಪಡಿಸದೆ, ಭಾವನೆಗಳಿಗೆ ಕನ್ನಡಿ ಹಿಡಿದು ವಿಶಿಷ್ಟ ರೂಪಕಗಳು ಹಾಗೂ ಪ್ರತಿಮೆಗಳ ಮುಖೇನ ಪ್ರತಿಫಲಿಸುವಂತೆ ಮಾಡಬೇಕು.

ಗಜಲ್ ಗಳ ಮದಿರೆಯ ಗುಟುಕುಗಳನ್ನು ಒಂದೊಂದಾಗಿ ಹೀರುತ್ತಾ ಹೋದಂತೆ… ಅವುಗಳ ಆಳ, ವಿಸ್ತಾರ ಸುಲಭಕ್ಕೆ ಎಟುಕುವುದಿಲ್ಲ. ವಿಷಯದಿಂದ ವಿಷಯಕ್ಕೆ ಪದಗಳ ಮುಖೇನ ಅವಿಚ್ಛಿನ್ನ ನಂಟು ಬೆಸೆಯುತ್ತ ಆರಂಭ ಮತ್ತು ಅಂತ್ಯದ ಸುಳಿವನ್ನು ಬಿಟ್ಟುಕೊಡದಂತೆ, ಹೆಜ್ಜೆಗುರುತು ಬಿಡದೆ ಹಕ್ಕಿ ಆಗಸಕ್ಕೆ ಹಾರಿದಂತೆ ಭಾಸವಾಗಬೇಕು. ಕಾವ್ಯ ಇರಬೇಕಾದದ್ದೆ ಹೀಗೆ! ‘ಇತಿಯಲ್ಲಿ ಸಮಷ್ಟಿಯನ್ನು ಕಾಣಿಸುವ ಹಾಗೇ, ತನ್ನ ಮಿತಿಗಳನ್ನು ಮೀರಿ ಅಪರಿಮಿತ ಅನುಭವಕ್ಕೆ ತೆರೆದುಕೊಳ್ಳುವ ಹಾಗೇ, ಶೂನ್ಯದಲ್ಲಿ ಭವಿಷ್ಯವನ್ನು ಸಾಕ್ಷಾತ್ಕರಿಸುವಂತೆ, ಅಮಲಿನಲ್ಲೂ ಅಂತಃಪ್ರಜ್ಞೆಯನ್ನು ಜಾಗೃತವಾಗಿಸುವಂತೆ.’

ಇರುಳಿಲ್ಲದೆ ಬೆಳಕಿಗೆ ಮಹತ್ವವಿಲ್ಲ ಎಂಬ ಸತ್ಯದ ದೀಪದೊಂದಿಗೆ, ಇರುಳ ಬೆರಳ ಪಿಡಿದು ಗಜಲ್ ಮೌನ ವೀಧಿಯಲ್ಲಿ ಮಾತಾಗುತ ಸಾಗುತ, ಸತ್ಯದ ಹುಡಕಾಟದಲ್ಲಿ ತೊಡಗಿರುವ ವೈರಾಗಿಯಂತೆ, ಅನ್ಯಾಯದ ವಿರುದ್ಧ ಸಿಡಿದೇಳುವ, ಸತ್ಯದ ಪರನಿಂತು ಭಾವದೀಪ್ತಿಯಾಗಿ ಗಜಲ್ ಸಾಹಿತ್ಯ ಬೆಳಗಬೇಕಿದೆ. ಭಾವಾರ್ಥಗಳೊಂದಿಗೆ ಪದಗಳ ಬೆಸೆದು ಅನುಸಂಧಾನಗೈದು ಗಜಲ್ ಕಟ್ಟುವ ಕೌಶಲ್ಯತೆ.. ಪ್ರೇಮ, ವಿರಹ, ಸಾವು, ಬದುಕು, ವೈರಾಗ್ಯ, ವ್ಯಾಕುಲತೆ, ಕೋಪ, ದ್ವೇಷ, ವಿರೋಧ ಹೀಗೆ  ಎಲ್ಲದರೊಂದಿಗೆ  ಕಾಯುವ, ಪ್ರೀತಿಸುವ, ಪರಿತಪಿಸುವ, ಮೋಹಿಸುವ ಹಾಗು ಮಥಿಸುವ ಮನುಷ್ಯ ಬದುಕಿನಲ್ಲಿ ಮರಿಚಿಕೆಯಾಗಿರುವ ಸಾಮಾನ್ಯ ಸಂಗತಿಗಳನ್ನು, ಅಪ್ರತಿಮ ಪ್ರತಿಮೆಗಳ ಮೂಲಕ, ಅಪರೂಪದ ರೂಪಕಗಳ ಜೊತೆಗೂಡಿ ಸಂವೇದಿಸುವ, ಕಲ್ಪನೆಯ ಕಣ್ಣಿಗೆ ಚಿಂತನೆಯ ಮಸೂರ ಹಾಕಿ ಕಾಣಿಸುವ, ಸುಲಭಕ್ಕೆ ಅರ್ಥಕ್ಕೆ ನಿಲುಕದ ಆಯಾಮದ , ವಾಸ್ತವದ ವಿಚಾರಗಳೊಂದಿಗೆ ಅಸ್ಮಿತೆಯಿಂದ ಅನೂಹ್ಯದೆಡೆಗೆ ಹೆಜ್ಜೆ ಇಡುವ ಸಪ್ಪಳ ಗಜಲ್ ಹೃದಯದ ಮಿಡಿತವಾಗಬೇಕು. 

ಪ್ರೇಮದ ವಿಷಾದ ಆಕಾಶದಗಲ ಹಬ್ಬಿ ಮೊಡಗಟ್ಟಿ ಮಳೆಯಾಗದೆ ಹೆಪ್ಪುಗಟ್ಟುವ ಆರ್ದತೆ, ಒಂದೊಂದು ಮಿಸ್ರವೂ ಒಂದು ಪ್ರತ್ಯೇಕ, ಸ್ವಾತಂತ್ರ ಕಾವ್ಯವಾಗಿ ನಿಲ್ಲುವ ಪಕ್ವತೆ, ಚಿಂತನೆಗೆ ಹಚ್ಚುವ ವಿಶೇಷತೆ, ಕೆಲವೊಮ್ಮೆ ಗಜಲ್ ಗಳಲ್ಲಿ ತುಂಬು  ಜೀವಂತಿಕೆಯಿಂದ ಚಲಿಸುವ ಭಾವದ ಹರಿವು ಭಾವುಕ ಮನಸ್ಸುಗಳನ್ನು ಹಸಿಯಾಗಿಸುವುದರಲ್ಲಿ ಸಂಶಯವಿಲ್ಲ! ಸ್ಥಳೀಯ ಭಾಷೆಯ ಸೊಗಡನ್ನು ಸಾಹಿತ್ಯದ ಮೂಲಕ ಪಸರಿಸುವ, ಮಾನವೀಯತೆಯ ನೆಲೆಯ ಮೇಲೆ ಮೈದಳೆದ, ಕೇವಲ ಒಂದು ಸಂಸ್ಕೃತಿಗೆ ಒಳಪಡದ, ದೇಶದ ಭಾವೈಕ್ಯತೆಯನ್ನು ಸಾರುವ ಗಜಲ್ಗಳಿಗೂ ಬರವಿಲ್ಲ.

ಗಜಲ್ ಕಲಿಕೆಗೆಗುರುವಿನ ಮಾರ್ಗದರ್ಶನ ಅತೀ ಮುಕ್ತವಾದದ್ದಾಗಿದೆ. ಅದು ಕಾವ್ಯವನ್ನು ಲೌಕಿಕತೆಯಿಂದ ಪಾರಮಾರ್ಥಿಕತೆಯೆಡೆಗೆ, ಮೂರ್ತತೆಯಿಂದ ಅಮೂರ್ತದೆಡೆಗೆ, ಕತ್ತಲೆಯಿಂದ ಬೆಳಕಿನೆಡೆಗಿನ ನಡಿಗೆ, ಆಧ್ಯಾತ್ಮಿಕ ಒಲವಿನ ಹೊಳಹುಗಳನ್ನು ಕಾಣುವಂತೆ ಮಾಡುತ್ತದೆ. ಈ ನಿಟ್ಟಿನಲ್ಲಿ ಕಲಿಕಾರ್ಥಿಯೊಬ್ಬ ಸಮರ್ಥ  ಗುರುವನ್ನು ಹುಡುಕಿಕೊಳ್ಳುವ ಅಗತ್ಯವಿರುವಂತೆ, ಅದೇ ರೀತಿಯಲ್ಲಿ  ಗುರುವು ಸಹ ತನ್ನ ಜ್ಞಾನವನ್ನು ಧಾರೆ ಎರೆಯಲು ಸೂಕ್ತ ಶಿಷ್ಯನೊಬ್ಬನನ್ನು ಆಯ್ದುಕೊಳ್ಳುವ ಅವಶ್ಯಕತೆಯು ಇದೆ. ಹೀಗೆ ಗುರುವೊಬ್ಬ ಎಷ್ಟು ಮಂದಿ ಶಿಷ್ಯರನ್ನಾದರು ಆಯ್ದುಕೊಳ್ಳುವ ಸಾಮರ್ಥ್ಯ ಒಬ್ಬ ಗುರುವಿಗಿರುತ್ತದೆ. ಈ  ಪರಂಪರೆಯನ್ನು ಕನ್ನಡದ ಗಜಲ್ ಕಾರರು ಅಷ್ಟಾಗಿ ಸ್ವಾಗತಿಸಿದಂತೆ ಕಾಣುವುದಿಲ್ಲ.

ಗಜಲ್ ಎಂಬುದು ಮೋಹಕ ಕಾವ್ಯ, ಪ್ರೇಮ ಎಂಬ ಮದಿರೆಯ ದ್ರವ್ಯ, ಹೆಂಗೆಳೆಯರ ಪಿಸುನುಡಿ, ಮೋಹನ ಮುರಲಿಯ ಮಧುರ ಗಾನ, ನೊಂದ ಮನದ ವೇದನೆಯ ಭಾವ ತರಂಗ, ಅದರ ಲಾಲಿತ್ಯಕ್ಕೆ, ವೈಯಾರಕ್ಕೆ, ಮೈಮಾಟಕ್ಕೆ, ಸೌಂದರ್ಯಕ್ಕೆ ವಾಲದವರಿಲ್ಲ… ಮಾರುಹೋಗದವರಿಲ್ಲ, ವಾಹ್… ವಾಹ್… ಅನ್ನದವರಿಲ್ಲ. ಗಜಲ್ ಎಂದರೇನೆ ಪ್ರೇಮದ ಪಾರಮಾರ್ಥಿಕತೆ, ಕವಿಯ ಆತ್ಮ ಸಾಂಗತ್ಯತೆ, ಧ್ಯಾನಸ್ಥ ಮನಸ್ಸಿನ ಸದೃಶ್ಯಾ, ಸುಂದರ ಕಣ್ಣಿನ ಹೊಳಪಿನ ಬೆಳಗು, ಗಾಯಗೊಂಡ ಜಿಂಕೆಯ ಆರ್ತನಾದ…. ಗಜಲ್ ಎಂದರೆ ಎಲ್ಲವೂ ಹೌದು, ಏನೆಂದರೆ ಏನೂ ಅಲ್ಲ ಅಹುದಹುದು; ಋತ.

ಗಜಲ್ ಎಂದಾಗ, ಅದೊಂದು ಪ್ರಾಚೀನ ಕಾವ್ಯ ಪ್ರಕಾರ ಎಂದಷ್ಟೇ ಹೇಳುವರೆ ವಿನಃ, ಪದಶಃ ಅರ್ಥೈಸುವ ಪ್ರಯತ್ನವನ್ನು ನಾವು ಕಾಣುವುದಿಲ್ಲ. ಹೀಗೆ ಈ ನಿಟ್ಟಿನಲ್ಲಿ ಗಜಲ್ನ ರಚನಾ ಕ್ರಮದಲ್ಲಿ ಎದುರಾಗುವ, ಜನಪ್ರಿಯತೆಗೆ, ಕಾವ್ಯದ ಗೆಯತೆಗೆ ಕಾರಣವಾದ, ಕಟಿಬದ್ಧ ನಿಯಮಗಳಾದ ಮತ್ಲಾ, ಮಕ್ತಾ, ಕಾಫಿಯಾ, ರದಿಫ್ಗಳೇ ಗಜಲ್ ಕಾವ್ಯದ ಜೀವಾಳ, ಗಜಲ್ ನ ಮೆರುಗಿಗೆ ನೈಜವಾದ ಆಭರಣಗಳು. ಅವುಗಳನ್ನು ಬಿಟ್ಟರೆ ಅದು ಕೇವಲ ಕವಿತೆ ಅಷ್ಟೇ.

ಮೂಲ ಅರಬ್ಬಿ ಕಾವ್ಯ ಪ್ರಕಾರವಾದ ಗಜಲ್ ಕನ್ನಡಕ್ಕೆ ಬಂದು ಈಗಾಗಲೇ ಹಲವು ವರುಷಗಳೇ ಕಳೆದಿದ್ದರೂ ಸಹ ಇತ್ತೀಚಿನ ದಿನಗಳಲ್ಲಿ ಮಾತ್ರ ಕನ್ನಡದಲ್ಲಿ ಗಜಲ್ ಕಾವ್ಯ ಮೊದಲಿಗಿಂತ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿರುವುದನ್ನು ಕಾಣುತ್ತಿದ್ದೇವೆ. ಅದಕ್ಕೆ ಮುಖ್ಯ ಕಾರಣವೆಂದರೆ ಗಜಲ್ ಕಾವ್ಯದ ಆಕರ್ಷಣೆ ಮತ್ತು ಒಲವು ಎನ್ನಬಹುದು. ಇಂದು ಇಷ್ಟರ ಮಟ್ಟಿಗೆ ಕನ್ನಡ ಗಜಲ್ ಸಾಹಿತ್ಯ ವಿಸ್ತಾರವಾಗಿದೆ ಎಂದರೆ, ‘ಶ್ರೀ. ಶಾಂತರಸ’ರಿಂದ ಹಿಡಿದು, ಇಂದಿನವರೆಗೂ ಗಜಲ್ ಅಧ್ಯಯನ ಮತ್ತು ಕಾವ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಎಲ್ಲಾ ಗಜಲ್ಕಾರರಿಗೂ ಅದರ ಶ್ರೇಯಸ್ಸು ಲಭಿಸುತ್ತದೆ.

ಏಳನೇಯ ಶತಮಾನದ ಗಜಲ್ ಎಂಬ ಕಾವ್ಯ ಪ್ರಕಾರವೊಂದು ದೇಶದಿಂದ ಒಂದು ದೇಶಕ್ಕೆ, ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ, ಒಂದು ಸಂಸ್ಕೃತಿಯಿಂದ ಭಿನ್ನ ಸಂಸ್ಕೃತಿಗಳೊಡಗೂಡಿ, ಕವಿಗಳಿಂದ ಕವಿಗಳಿಗೆ…  ಹಲವು ಶತಮಾನಗಳನ್ನು ದಾಟಿ, ಇತ್ತೀಚಿನ ವರ್ಷಗಳಲ್ಲಿ ಕನ್ನಡ ಭಾಷೆಯಲ್ಲಿ ಗಜಲ್ ಪ್ರಕಾರ ಹೆಚ್ಚು ಜನಪ್ರಿಯತೆ ಒಅಡೆದುಕೊಳ್ಳುತ್ತಿದ್ದು, ಇಪ್ಪತ್ತೊಂದನೆ ಶತಮಾನದಲ್ಲೂ ಪ್ರಕಾಶಮಾನವಾಗಿ ಬೆಳಗುತ್ತಿದೆ. ಪ್ರಾಚೀನ ಕಾವ್ಯ ಪ್ರಕಾರವೊಂದು ಇಂದಿಗೂ ತನ್ನಅಸ್ಥಿತ್ವವನ್ನು ಕಾಯ್ದುಕೊಂಡಿದೆ ಎಂದರೆ, ಅದಕ್ಕೆ ಮುಖ್ಯ ಕಾರಣ ಅದರ ನಿಯಮ ಬದ್ಧತೆ, ಗಜಲ್ಕಾರರು ಹಾಗೂ ಓದುಗರು. 

ಗಜಲ್‌ ಗಳಲ್ಲಿ ಅನವಶ್ಯಕವಾಗಿ, ಅಲಂಕಾರಿಕವಾಗಿ ಏತೇಚ್ಛವಾಗಿ ಉರ್ದು, ಹಿಂದಿ ಪದಗಳ ಬಳಕೆ  ಹೆಚ್ಚುತ್ತಿರುವ ಸಮಯದಲ್ಲಿ ಇತರೆ ಭಾಷೆಯ ಪದಗಳ ಬಳಕೆ ಕನ್ನಡ ಭಾಷೆಯ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತಿದೆ. ಗಜಲ್ ಶಾಂತರಸರಾದಿಯಾಗಿ ಕನ್ನಡ ಸ್ವಾರಸ್ವತ ಲೋಕಕ್ಕೆ ಬಂದಿದೆಯಾದರೂ ಸಹ, ಇನ್ನೂ ಪೂರ್ಣ ಪ್ರಮಾಣದಲ್ಲಿ ಕನ್ನಡ ಭಾಷೆಯ ವರ್ಚಸ್ಸಿಗೆ ಒಲಿದಿಲ್ಲ! ಉರ್ದು ಹಾಗೂ ಹಿಂದಿ ಭಾಷೆಯ ದಟ್ಟವಾದ ಪ್ರಭಾವ ಕನ್ನಡದ ಗಜಲ್ ಕಾರರ ಮೇಲಿರುವುದನ್ನು ಕಾಣಬಹುದಾಗಿದೆ. ಅನೇಕರುರು ಉರ್ದು ಭಾಷೆಯ ಮೋಹಕ್ಕೆ ಒಳಗಾಗಿ, ಅದರ ನೆರಳಲ್ಲಿ, ಅವರದೆ ಭಾಷೆಯಲ್ಲಿ ಹೇಳಬೇಕೆಂದರೆ ‘ಬೇಷುಮಾರ್’ ಆಗಿ ಉರ್ದು ಪದಗಳನ್ನು ಬಳಸಿರುವುದನ್ನು ಕಾಣುತ್ತೇವೆ. ಅದು ಕವಿಯ ಸ್ವಾತಂತ್ರವೆಂದು ಭಾವಿಸಿದರೂ ಸಹ, ಬಳಕೆ ಒಂದು ಮಿತಿಯಲ್ಲಿರಬೇಕಾದ ಅವಶ್ಯಕತೆ ಇದೆ.

ಗಜಲ್ ಕಾವ್ಯ ರಚನೆಗೆ ಸಂಬಂಧಿಸಿದಂತೆ ಹಲವಾರು ದ್ವಂದ್ವ ಮತ್ತು ವಿರೋಧಭಾಸಗಳು ಮನೆಮಾಡಿದ್ದು, ಬಗೆಹರಿಯದ ಗೊಂದಲಗಳಾಗಿ ಪರಿಣಮಿಸಿರುವುದು, ಕನ್ನಡ ಗಜಲ್ ಸಾಹಿತ್ಯದ ಬೆಳವಣಿಗೆಗೆ ಮಾರಕವಾಗಿದೆ ಎನ್ನಬಹುದು. ಗಜಲ್ ಗಳ ರಚನ ಕ್ರಮಗಳನ್ನು ಗಮನಿಸಿದಾಗ… ‘ಮತ್ಲಾ ಮತ್ತು ಮಕ್ತಾ’ಗಳಿಗೆ ಅದರದೆಯಾದ ಪ್ರಾಮುಖ್ಯತೆ ಇದೆ. ಒಂದು ಗಜಲ್ನ ಅಡಿಪಾಯವಾದರೆ ಮತ್ತೊಂದು ಛಾವಣಿ. ‘ಕಾಫಿಯಾಗಳು’ ಆಧಾರ ಸ್ತoಭಗಳೆಂದು ಹೇಳಬಹುದು. ಮತ್ಲಾಗಳನ್ನು ಸಶಕ್ತವಾಗಿ ಕಟ್ಟಲ್ಪಡದೆ ತೀರ ಕಳಪೆಯಾಗಿ ರಚಿಸಲ್ಪಡುತ್ತಿರುವುದು ಹಾಗೂ ಮಕ್ತಾದಲ್ಲಿ ಹಿಡಿದಿಡಬೇಕಾದ ಒಟ್ಟು ಸಾರಾಂಶ ಮಾಯವಾಗುತ್ತಿರುವುದು, ಗಜಲ್ಗಳ ಜೀವಾಳವಾದ ಕಾಫಿಯಾಗಳನ್ನು ತರದೇ ಇರುವುದು ಅನಾರೋಗ್ಯಕಾರಿ ಬೆಳವಣಿಗೆಗೆ ಸಾಕ್ಷಿಯಾಗಿವೆ.

ಗಜಲ್ ನಲ್ಲಿ ʼರದೀಫ್ʼ ಎಂಬುದು ತೂಕದ ಬೊಟ್ಟಿದ್ದಂತೆ. ಗಜಲಿನ ಸೌಂದರ ಹೆಚ್ಚಿಸುವ, ಲಯ ತಂದು ಕೊಡುವ, ಗೇಯತೆಯಾಗಿಸುವಲ್ಲಿ ಸಹಕಾರಿಯಾಗುವ ಗಜಲಿಗೆ ಒಂದು ಮೆರಗು ಪ್ರಸಾದಿಸುವ ಆಭರಣ ಎಂದು ಹೇಳಬಹುದು. ನಮ್ಮಲ್ಲಿ ಬಹುತೇಕ ಗಜಲ್ಗಳಲ್ಲಿ ಬೇರೆ ಬೇರೆ ರದೀಫ್ಗಳನ್ನು ಬಳಸುವ ವಿಫುಲ ಅವಕಾಶಗಳಿದ್ದರೂ ಸಹ ಗಜಲ್ಕಾರರು ಕೇವರ ಸಖಿ, ಸಾಕಿ ಮತ್ತು ಗಾಲಿಬ್ ಗೆ ಮಾತ್ರ ಜೋತುಬೀಳುವುದು, ಬಳಸಿದ ರದೀಫ್ ಗಳನ್ನೆ ಮತ್ತೆ ಮತ್ತೆ ಬಳಸಿ ಕ್ಲಿಷೆಯಾಗಿಸುತ್ತಿರುವುದು,  ಅದರಲ್ಲೂ ಹಲವರಂತೂ  ಗಝಲ್ ಗಳಲ್ಲಿ ಗಾಲಿಬ್ ಮತ್ತು ಸಾಕಿಯನ್ನು ವಿನಾಕಾರಣ, ಪ್ರಯತ್ನಪೂರ್ವಕವಾಗಿ ಎಳೆದು ತಂದಂತೆ ಭಾಸವಾಗುತ್ತದೆ. ರದೀಫನ್ನು ಗಜಲ್ ಗಳಲ್ಲಿ ಅವಶ್ಯಕತೆಗೆ ತಕ್ಕಂತೆ ಮಾತ್ರ ಬಳಸಬೇಕಾಗುತ್ತದೆ ಎಂದು ಗಜಲ್ ಧರ್ಮ ಹೇಳುತ್ತದೆ. ಇಲ್ಲದಿದ್ದರೆ ಅದಕ್ಕೆ ಯಾವ ಅರ್ಥವೂ, ವಿಶೇಷತೆಯೂ, ಮೌಲ್ಯವೂ ದಕ್ಕದೆ ಕೇವಲ ಅನಾಥ ಪದವಾಗಿ ಮಿಗಿಲುವ ಸಾಧ್ಯತೆಗಳೇ ಹೆಚ್ಚು ಎನ್ನಬಹುದು.

ಗಜಲ್ ನಲ್ಲಿ ಕಾವ್ಯನಾಮವಾಗಿ ಬಳಸಲ್ಪಡುವ ‘ತಕಲ್ಲೂಸ್ ನಾಮ’ಕ್ಕೆ ಅದರದೇ ಆದಂತಹ ಮಹತ್ವವಿದೆ. ತಕಲ್ಲೂಸ್ ನಾಮಕ್ಕೆ ನಿರೂಪಕನ, ನಿರ್ದೇಶಕನ ಕಾರ್ಯಕ್ಷಮತೆ ಇದೆ. ಅಷ್ಟೇ ಅಲ್ಲದೆ ಅದರಿಂದ ಲಿಪಿಕಾರ ಕವಿ ಯಾರೆಂದು ತಿಳಿಯುತ್ತಲ್ಲದೆ, ಗಜಲಿಗೊಂದು ಅಸ್ತಿತ್ವ ಸಿದ್ಧಿಸುತ್ತದೆ.

ಗಜಲ್ ಕಾವ್ಯದಲ್ಲಿ ಮಿಸ್ರಗಳು ಸ್ವಾತಂತ್ರವಾಗಿರಬೇಕೆಂಬ ಕಾರಣಕ್ಕೆ ಸಾಲುಗಳು, ಕೆಲವೆಡೆ ಕೇವಲ ಹೇಳಿಕೆಗಳಾಗಿ ರೂಪುಗೊಳ್ಳುತ್ತಿವೆ. ಆದರೆ ಹೇಳಿಕೆಗಳು ಎಂದಿಗೂ  ಗಜಲ್ಗಳಾಗುವುದಿಲ್ಲ ಎಂಬುದು ಅನುಭವಿ ಗಜಲ್ ಕಾರರ ಕಾಳಜಿಯಾಗಿದೆ. ಕಾವ್ಯದ ಭಾಷೆ ವಾಚ್ಯತೆಯನ್ನು ಪಡೆದುಕೊಳ್ಳುತ್ತಿದೆ.  ಅಲ್ಲಲ್ಲಿ ನಿಯಮಗಳ ಬಳಕೆ ಮಾಡದಿರುವುದು ಮತ್ತು ಗಜಲ್ ಚೌಕಟ್ಟಿನ ಎಲ್ಲೆ ಮೀರಿ  ಸೀಮೋಲ್ಲಂಘನೆ ಆಗುವುದು ಸಹ ಗೋಚರಿಸುತ್ತದೆ. 

ಜಗತ್ತಿನ ಮಹಾನ್ ಚಿತ್ರಕಲಾವಿದನಾದ ‘ಲಿಯೋನಾರ್ಡೊ ಡ ವಿಂಚಿ’, ತನ್ನ ಪ್ರಸಿದ್ಧ ಕಲಾಕೃತಿಯಾದ ‘ಮೊನಾಲಿಸ’ ಚಿತ್ರವನ್ನು ಮತ್ತಷ್ಟು ಸುಂದರಗೊಳಿಸಲು ತನ್ನ ಜೀವಿತ ಅವಧಿಯ ಕೊನೆಯ ಕ್ಷಣದವರೆಗೂ ಪ್ರಯತ್ನಿಸುತ್ತಲೇ ಇದ್ದನಂತೆ. ಹಾಗಾಗಿಯೇ ಇಂದಿಗೂ ಅದಕ್ಕೆ ಸರಿಸಾಟಿಯಾಗಿ ನಿಲ್ಲಬಹುದಾದ ಮತ್ತೊಂದು ಕಲಾಕೃತಿ ಜಗತ್ತಿನಲ್ಲಿಲ್ಲ. ಅಂಥದ್ದೊಂದು ತಾಳ್ಮೆಯನ್ನು ಪ್ರತಿಯೊಬ್ಬ ಲೇಖಕನೂ ಸಿದ್ಧಿಸಿಕೊಳ್ಳಬೇಕಾದ ಅವಶ್ಯಕತೆ ಮತ್ತು ಅನಿವಾರ್ಯತೆ ಇದೆ.

ಇತ್ತಿಚಿನ ದಿನಗಳಲ್ಲಿ ಗಜಲ್‌ ಗಳು ತಂತ್ರಗಾರಿಕೆಯಿಂದ ಕಟ್ಟಲ್ಪಡುತ್ತಿವೆ! ಸಹಜ ಅಭಿವ್ಯಕ್ತಿಗಳಾಗಿ, ಅನಾಯಾಸವಾಗಿ ಅನುಭಾವ ಗಜಲ್ ಗಳಾಗಿ ಹುಟ್ಟುತ್ತಿಲ್ಲ. ಹುಟ್ಟಿದ ಸಾಹಿತ್ಯಕ್ಕೆ ಅಸ್ತಿತ್ವ ಸಿಗದಿರುವ ಈ ಕಾಲಮಾನದಲ್ಲಿ ಕಟ್ಟಿದ ಸಾಹಿತ್ಯ ಎಷ್ಟು ದಿನ ತಾನೇ ನಿಲ್ಲಬಲ್ಲದು? ಒಂದಿಲ್ಲ ಒಂದು ದಿನ ಸವಕಲು, ಬಲವಿಲ್ಲದ ಗೋಡೆಯಂತೆ ಬಿದ್ದು ನೆಲಕಚ್ಚುವುದು ಖಚಿತ! ಹಾಗಾಗಿಯೇ ಗಜಲ್ ರಚನೆ ತಂತ್ರಜ್ಞಾನವಲ್ಲ. ಅದು ತಂತ್ರ ಮತ್ತು ಜ್ಞಾನ ಒಂದಾಗದ ಸ್ಥಿತಿ. ಅದಕ್ಕೆ ಧ್ಯಾನಸ್ಥ ಮನಸ್ಥಿತಿ ಬೇಕಾಗುತ್ತದೆ. ಸಂತೆಯಲ್ಲಿದ್ದರೂ ಸರಿ, ಏಕಾಂತದಲ್ಲಾದರೂ ಸರಿಯೇ….

ಗಜಲ್ ಕಾವ್ಯದ ಈ ಸುದೀರ್ಘ ಪಯಣದಲ್ಲಿ ಗಜಲ್ ರಚನಾ ವಿಧಾನ, ಭಾವಗಳ ಆಯ್ಕೆ ಮತ್ತು ಪ್ರಕಾರಗಳಲ್ಲಿ(ನಿಯಮಗಳನ್ನು ಹೊರತುಪಡಿಸಿ) ಹಲವು ಬದಲಾವಣೆಗಳಾಗಿರುವುದನ್ನು ಕಾಣಬಹುದಾಗಿದೆ. ಮೊದಮೊದಲು ಕೇವಲ ಪ್ರೇಮ, ಶೃಂಗಾರ, ವಿರಹ, ವೈರಾಗ್ಯ ಮತ್ತು ಆಧ್ಯಾತ್ಮಿಕ ಅನುಸಂಧಾನಕ್ಕಾಗಿ ಮೃದು – ಮಧುರ, ನಯ – ನಾಜೂಕಿನ  ಪದ ಸಂಯೋಗ, ನವಿಲುಗರಿಯ ಸ್ಪರ್ಶದ ಅನುಭೂತಿಯ ಆಸ್ವಾದನೆಗೆ ಮೀಸಲಿದ್ದ ಗಜಲ್ ಪ್ರಕಾರ, ಕಾಲಾಂತರದಲ್ಲಿ… ಅದರಲ್ಲೂ ಗಂಡು ಭಾಷೆಯಾದ ನಮ್ಮ ಕನ್ನಡದಲ್ಲಿ ಹೆಚ್ಚಿನ ಮಟ್ಟಿಗೆ ಬಂಡಾಯ ಸ್ವರೂಪಕ್ಕೆ ಒಗ್ಗಿಕೊಳ್ಳುತ್ತಿರುವುದರ ಜೊತೆಗೆ ಜನಪ್ರಿಯತೆಯನ್ನು ಸಹ ಪಡೆಯುತ್ತಿರುವುದು ಸಂತಸದ ವಿಷಯವೆಯಾದರೂ, ಅಂತಹ ರಚನೆಗಳನ್ನು ಗೇಯತೆಗೆ ಒಳಪಡಿಸುವುದು ಕಷ್ಟಸಾಧ್ಯವಾದರೂ, ವಾಚ್ಯವೆನಿಸಿದರೂ ಸಹ, ಪ್ರೇಮ ಗಜಲ್ ಗಳಿಗಿಂತ ಹೆಚ್ಚು ಸದ್ದು ಮಾಡುತ್ತಿದ್ದು, ಅದರಲ್ಲೂ ಯುವ ಸಮೂಹವೇ ಹೆಚ್ಚಿನ ಮಟ್ಟದಲ್ಲಿ ಅಂತಹ ಗಜಲ್ಗಳನ್ನು ರಚಿಸುತ್ತಿರುವುದು ಬೆರಗಿನ ವಿಚಾರವಾಗಿದೆ. 

ಕಾವ್ಯ ಅನ್ನುವುದು ಮಧುರ ಅನುಭೂತಿ ನೀಡುವುದಷ್ಟೇ ಅಲ್ಲ, ಜೊತೆಗೆ ಪ್ರಶ್ನೆಗಳನ್ನು ಬಿತ್ತಬೇಕು, ಚಿಂತನೆಗಳನ್ನು ಹುಟ್ಟು ಹಾಕಬೇಕು. ಸಮಷ್ಟಿಯನ್ನೆ ತನ್ನೊಳಗೆ ಕವಿ ಬಿಂಬಿಸಬೇಕು. ಹಲವು ದಾರಿಗಳಲ್ಲಿ, ದಶ ದಿಕ್ಕುಗಳಲ್ಲಿ ಲಹರಿ ಹರಿಯಬೇಕು. ಬಾಹ್ಯಕ್ಕೆ ಜಿಗಿಯುವ, ಅಂತರ್ಧ್ಯಾನಿ ಆಗುವ, ಇದ್ದಲ್ಲೇ ಕರಗಿ ನೀರಾಗಿ ಹರಿದು ಕಲ್ಲಿಗೆ ತಾಕಿ, ಕಠೋರತೆಯನ್ನು ಪ್ರೇಮದಿಂದ  ಮೃದುವಾಗಿಸುವ ಅನುಭಾವಿ ಆಗಬೇಕು.

‍ಲೇಖಕರು Admin

October 31, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನೀನು…

ನೀನು…

ದೊರೆ..

ದೊರೆ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: