ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಖ್ಯಾತ ನಟಿ ರಂಜನಿ ರಾಘವನ್ ಕಥಾ ಅಂಕಣ- ‘ಮಾತುಗಾರರಿದ್ದಾರೆ ಎಚ್ಚರಿಕೆ’

ಕನ್ನಡ ಕಿರು ತೆರೆಯ ಮಹತ್ವದ ಕಲಾವಿದರ ಪಟ್ಟಿಯಲ್ಲಿ ರಂಜನಿ ರಾಘವನ್ ಅವರ ಹೆಸರು ಇದ್ದೇ ಇದೆ. ಕಿರುತೆರೆ ವಲಯದಲ್ಲಿ brainy ಎಂದೇ ಗುರುತಿಸಲ್ಪಡುವ ರಂಜನಿ ಅವರಿಗೆ ಓದು ಮೆಚ್ಚಿನ ಹವ್ಯಾಸ. ಸದ್ಯದ ಅತಿ ಹೆಚ್ಚು ಯಶಸ್ಸು ಕೊಟ್ಟ ಧಾರಾವಾಹಿ ‘ಕನ್ನಡತಿ’.

ಸೆಟ್ ನಲ್ಲಿಯೂ ಒಂದಿಲ್ಲೊಂದು ಪುಸ್ತಕ ಹಿಡಿದು ಹಾಜರಾಗುವ ರಂಜನಿಯವರ ಬಗ್ಗೆ ಉಳಿದವರದ್ದು ಅಚ್ಚರಿಯ ಕಣ್ಣು. ಈಗಾಗಲೇ ಹಲವು ಸಾಹಿತ್ಯ ಸಮಾರಂಭಗಳಲ್ಲಿ ಅತಿಥಿಯಾಗಿ ಓದುಗರ, ಬರಹಗಾರರ ಮನ ಗೆದ್ದಿರುವ ಇವರು ಈಗ ಇನ್ನೊಂದು ಹೊಸತಿಗೆ ತಮ್ಮನ್ನು ಒಡ್ಡಿಕೊಳ್ಳುತ್ತಿದ್ದಾರೆ.

ಸಾರೆ ಜಹಾಸೆ ಅಚ್ಚಾ ಹಿಂದೂಸ್ತಾನ್ ಹಮಾರ.. ತೊಟ್ಟಿಮನೆಯ ಹಜಾರದ ಟಿಪಾಯಿಯ ಮೇಲಿಟ್ಟಿದ್ದ ಬ್ಲೂಟೂತ್ ಸ್ಪೀಕರ್ನಿಂದ ಹಾಡು ಇಂಪಾಗಿ ಕೇಳಿಬರ್ತಿತ್ತು. ‘ನಮ್ ದೇಶದಲ್ಲಿದ್ದು, ನಮ್ಮ ಮನೇಲಿ ಕೂತ್ಕೊಂಡು ಈ  ಹಾಡನ್ನ ಕೇಳೋದೇ ಸ್ವರ್ಗಾ’ ಏಳು ವರ್ಷ ಅಮೆರಿಕಾದಲ್ಲಿದ್ದು ವಾಪಸ್ ಆದ ಸುಸ್ತನ್ನೆಲ್ಲಾ ಒಂದೇ ಸಲಕ್ಕೆ ನೀವಾಳಿಸುವಂತೆ ನಿರಂಜನ್ ಹೇಳಿದ.

ಮಗ ಬಂದ ಸಂಭ್ರಮದಲ್ಲಿ ಅಮ್ಮ ನೊರೆ ನೊರೆಯಾದ ಬಿಸಿ ಕಾಫಿಯನ್ನ ಸೆರಗಲ್ಲಿ ಹಿಡಿದು ತಂದು ಕೈಗಿತ್ತಳು. ‘ಹಾಲ್ ಯಾಕಮ್ಮ ಹಾಕ್ದೆ? ನೀವೆಲ್ಲಾ ಕಾಫಿನ ಮಿಲ್ಕ್ ಶೇಕ್ ಮಾಡ್ಕೊಂಡ್ ಕುಡಿಯೋದನ್ನ ಯಾವಾಗ್ ಬಿಡ್ತೀರ’ ನಿರಂಜನ್ ಅಡುಗೆ ಮನೆಗೆ ಹೋಗಿ ತಾನೇ ಕಾಫ಼ಿ ಮಾಡಿಕೊಳ್ಳೋಕೆ ಶುರು ಮಾಡಿದ. ಅರವಿಂದಮ್ಮ ಮಗನನ್ನ ವಿಚಿತ್ರವಾಗಿ ನೋಡ್ತಾ, ಬರೀ ಡಿಕಾಕ್ಶನ್ ನ ಅದ್ ಹೇಗ್ ಕುಡೀತಾನೋ! ಅವ್ನ್ಗೇ ಪ್ರೀತಿ ಅಂದುಕೊಂಡಳು.

ನಿರಂಜನ್ ಕ್ಯಾಲಿಫ಼ೋರ್ನಿಯಾದ ಬ್ಯಾಂಕ್ ನಲ್ಲಿ ಕೆಲ್ಸ ಮಾಡ್ತಿದ್ದು, ಒಂದು ತಿಂಗಳು ರಜೆ ಮಾಡಿ ತುಮಕೂರಿನ ಹತ್ತಿರದ ಅರೇಹಳ್ಳಿಯಲ್ಲಿ ಮಗನಿಗಾಗಿ ಶಬರಿಯಂತೆ ಕಾಯುತ್ತಿದ್ದ ಅಮ್ಮನನ್ನ ಕಾಣಲು ಹೆಂಡತಿ, ಮಗನ ಜೊತೆ ಬಂದಿದ್ದ. ಕುಟುಂಬದಲ್ಲಿ ಇವನೇ ಹೆಚ್ಚು ಓದಿದವ, ಇವನ ಸರ್ಕಲ್ ನಲ್ಲಿ ಯಾರಾದ್ರೂ ಕೋಟ್ಯಾಧಿಪತಿ ರಸಪ್ರಶ್ನೆ ಕಾರ್ಯಕ್ರಮಕ್ಕೆ ಹೋದರೆ ಫೊನ್ ಎ ಫ಼್ರೆಂಡ್ ಆಪ್ಶನ್ ತಗೊಂಡವರು ನಿರಂಜನನಿಗೇ ಫೋನ್ ಮಾಡುತ್ತಾರೆ. ಅಪರೂಪಕ್ಕೆ ಭಾರತಕ್ಕೆ ಬಂದವರು ಇರೋ ಸಮಯದಲ್ಲಿ ಹತ್ತಿರದವರ ಮದುವೆಯಲ್ಲೊಂದು ಹಾಜರಾತಿ, ತಿಂಗಳುಗಳಿಂದ ಉಳಿದ ಬ್ಯಾಂಕ್ ವ್ಯವಹಾರ, ಕಡಿಮೆ ಖರ್ಚಲ್ಲಿ ಮುಗಿದುಹೋಗುವ ಹಲ್ಲಿನ ಟ್ರೀಟ್ಮೆಂಟ್, ಹೀಗೆ ಹೊರಡುವ ಮುನ್ನ ಮುಗಿಸಬೇಕಾದ ಕೆಲ್ಸಗಳ ಪಟ್ಟಿ ಮಾಡಿಕೊಂಡು ಬರುವವರ ಸಾಲಿನಲ್ಲಿ ಇವನೂ ಸೇರಿದ್ದ.

ಮನೆ ಮುಂದೆ ಸಾರಿಸಿದ್ದ ಸಗಣಿ ನೀರು ಒಣಗಿ ರಟ್ಟಾಗಿತ್ತು. ಸೊಸೆ ಮೊಮ್ಮಗನಿಗೆ ಅಮೇರಿಕಾದ ಸೂರ್ಯ ಬಂದು ಎಬ್ಬಿಸಿರಲಿಲ್ಲವಾದ್ದರಿಂದ ಇನ್ನೂ ಮಲಗೇ ಇದ್ದರು. ‘ಜಿಡ್ಡಿನ್ ಪಾತ್ರೆನೆಲ್ಲಾ ಒಟ್ಟಿಗೆ ಸೇರಿಸ್ಕೊಂಡ್ ತೊಳೀಬೇಡಾ ರೇಣು’. ಅರವಿಂದಮ್ಮ ಕೆಲ್ಸದವಳು ಪಾತ್ರೆ ತೊಳಿಯೋದನ್ನು ಕ್ವಾಲಿಟಿ ಕಂಟ್ರೋಲ್ ಮ್ಯಾನೇಜರ್ ನ ಹಾಗೆ ನೋಡಿಕೊಳ್ಳುತ್ತಿದ್ದರು. ‘ವಾಶಿಂಗ್ ಮೆಶಿನ್, ಡಿಶ್ ವಾಶರ್ ತಂದುಕೊಡ್ತೀನಿ ಅಂತ ಹೇಳಿದ್ರೆ ನೀನ್ ಕೇಳೋದೇ ಇಲ್ಲಮ್ಮ’. ಮಗನ ಮಾತು ಕಿವಿಗೆ ಬಿದ್ದರೂ ಅದು ಬೇಕಿರಲಿಲ್ಲ. ಅರವಿಂದಮ್ಮನಿಗೆ ತಾನೇ ಮುಂದೆ ನಿಂತು ಕೆಲ್ಸ ಮಾಡಿದಾಗ್ಲೇ ಸಮಾಧಾನ. ಯಂತ್ರಗಳು ನಮ್ಮ ಮಾತು ಕೇಳುವುದಿಲ್ಲ, ಅವು ಮಾಡಿಕೊಟ್ಟ ಕೆಲಸವನ್ನು ನಾವು ಒಪ್ಪಬೇಕು. ನಾವೇ ಅವುಗಳ ಗುಲಾಮರು ಅನ್ನೋ ಭಾವನೇ ಮೂಡಿಸುತ್ತವೆ ಅನ್ನೋದು ಅವರ ದೂರು. 

ಮಹೀಂದ್ರಾ ಎಕ್ಸ್ ಯು ವಿ ಕಾರನ್ನ ಒಂದು ಗುಡ್ಡ ಹತ್ತುವಂತೆ ಹತ್ತಿ ತನ್ನ ಎಳೇ ಕೈಯಲ್ಲಿ ಸೋಪ್ ನೀರಲ್ಲಿ ಬಟ್ಟೆ ಅದ್ದಿ ಕಾರನ್ನು ಒರೆಸುತ್ತಿದ್ದ, ಗಿರೀಶ. ಸ್ನಾನ ಮಾಡಿ ಬಂದ ನಿರಂಜನ ಅವನನ್ನು ನೋಡಿ ‘ಇದ್ಯಾರು ಕಾರ್ ತೊಳೀತಿರೋದು? ನಾನ್ ಹೇಳಲಿಲ್ವಲ್ಲ ನಿನಗೆ?’ ಕಾಳಜಿಯಿಂದ ಕೇಳಿದ. ಪಾತ್ರೆತೊಳೆದ ಕೈಯನ್ನ ಸೀರೆಯ ತುದಿಗೆ ಒರೆಸಿಕೊಂಡು ಬಂದ ರೇಣುಕಾ ‘ಸರ್.. ಇವ್ನು ನನ್ ಮಗ, ಕಾರ್ ತೊಳಿಯೋಕೆ ಬಂದವ್ನೆ’ ದೊಡ್ಡ ಕಾರನ್ನು ಒಬ್ಬನೇ ತೊಳೆಯುವಷ್ಟು ಬೆಳೆದಿದ್ದಾನೆ ಅನ್ನೋ ಹೆಮ್ಮೆಯಿಂದ ಹೇಳಿದಳು.

ನಿರಂಜನ ಹುಡುಗನ ಬಯೋಡೇಟ ಕೇಳೋಕೆ ಶುರು ಮಾಡಿದ. ಏನ್ ನಿನ್ ಹೆಸ್ರು? ಎಷ್ಟನೇ ಕ್ಲಾಸು? ಸ್ಕೂಲಿಗ್ ಹೋಗಲ್ವಾ?. ಅವನು ವಿಚಾರಿಸಿದ ದಾಟಿಗೆ ಏನೋ ತಪ್ಪಾಗಿರಬೇಕೆಂದು ಭಯದಿಂದ ಉತ್ತರಿಸಿದಳು. ‘ಗಿರೀಶಂಗೆ ಹತ್ತು, ಹನ್ನೊಂದು ವರ್ಷ ತುಂಬಿರ್ಬೋದು. ಸರ್ಕಾರಿ ಶಾಲೇಲ್ ಓದ್ತಿದ್ದಾನೆ, ಇವಾಗ್  ಶಾಲೆ  ನಡೀತಿಲ್ಲ ಅದಕ್ಕೆ ಕೆಲ್ಸ ಮಾಡ್ತವ್ನೆ’. ‘ನೋಡಮ್ಮ, ಅವ್ನ ಕೈಲಿ ಕೆಲ್ಸ ಮಾಡ್ಸೋದು ಬಾಲಕಾರ್ಮಿಕ ಪದ್ಧತಿ ಆಗುತ್ತೆ, ನಮ್ಮನೇಲಿ ಮಾತ್ರವಲ್ಲ ಎಲ್ಲೂ ನೀನು ಕೆಲ್ಸ ಮಾಡ್ಬೇಡ! ಮಾಡ್ಸಿದೋರ್ನ ಜೈಲಿಗ್ ಹಾಕ್ತಾರೆ. ಇಂಥ ತಪ್ಪುಗಳನ್ನ ನಡೆಯೋಕೆ ನಾನ್ ಬಿಡಲ್ಲ’ ನಿರಂಜನ ಖಡಾಖಂಡಿತವಾಗಿ ನುಡಿದುಬಿಟ್ಟ. ಮಗನ ಕೈಲಿ ಸಣ್ಣಪುಟ್ಟ ಕೆಲ್ಸ ಮಾಡಿಸಿ ಪುಡಿಗಾಸು ಗಳಿಸುತ್ತಿದ್ದ ರೇಣುಕಾ ಊರಿಗೆ ಯಾರೋ ಕ್ರಾಂತಿಕಾರಿ ಬಂದಿದ್ದಾನೆ ಅನ್ನೋ ಹಾಗೆ ಬೆರಗುಗಣ್ಣಿನಲ್ಲಿ ನೋಡಿದಳು.

ಕುಂಬಾರ ತನ್ನ ಕೆಲಸಕ್ಕೆ ಅಂತ ತಯಾರುಮಾಡಿಕೊಂಡಿದ್ದಾನೇನೋ ಅನ್ನೋ ಹಾಗೆ ಕಾಣೋ ಮಣ್ಣಿನ ರಸ್ತೆಗಳಲ್ಲಿ ಗಾಡಿಗಳು ಕುಪ್ಪಳಿಸುತ್ತಾ ಸಾಗುತ್ತಿದ್ದವು, ನೀರು ಸಣ್ಣದಾಗಿ ಬರ್ತಿದ್ದ ನಲ್ಲಿಯ ಮುಂದೆ ದೊಡ್ಡ ಬಾಯಿ ತೆರೆದುಕೊಂಡು ಹತ್ತಾರು ಕೊಡಗಳು ಸಾಲುಗಟ್ಟಿ ಕಾಯುತ್ತಿದ್ದವು, ಯುವಕರು ಅಲ್ಲಲ್ಲಿ ಗುಂಪುಕಟ್ಟಿಕೊಂಡು ಇಸ್ಪಿಟ್ ಆಡೋದಕ್ಕೆ, ಮೊಬೈಲಿಗೆ ತಮ್ಮ ಸಮಯವನ್ನು ಮುಡುಪಾಗಿಟ್ಟಿದ್ದರು. N.R.I ದೇಶಭಕ್ತ ನಿರಂಜನ್, ಹುಟ್ಟೂರನ್ನು ಒಂದು ಸುತ್ತು ಹಾಕಿಬಂದವನು ಊರ ಹಿರಿಯರ ಜೊತೆ ಹರಟೆಗೆ ಕೂತ.

‘ನಾನು ಓದೋಕೆ ಹೋದಾಗ್ಲಿಂದ ನಮ್ ದೇಶ ಜನಸಂಖ್ಯೆಯೊಂದರಲ್ಲಿ ಬಿಟ್ಟು ಎಲ್ಲಾ ವಿಷಯದಲ್ಲೂ ಹಾಗೇ ಉಳಿದಿದೆ. ಬಡತನ, ಅನಕ್ಷರತೆ, ನಿರುದ್ಯೋಗ, ಗಲೀಜು, ಭ್ರ‍ಷ್ಟ ರಾಜಕಾರಣ..’ ಚರ್ಚಾ ಸ್ವರ್ಧೆಯಲ್ಲಿ ತೆಗೆದುಕೊಳ್ಳಬಹುದಾದ ಎಲ್ಲಾ ವಿಷಯಗಳ ಬಗ್ಗೆಯೂ ಮಾತನಾಡುತ್ತಾ ಬೇಜಾರುಮಾಡಿಕೊಂಡ. ‘ನಮ್ಮೂರಲ್ಲಾದ್ರೂ ಇದೆಲ್ಲಾ ಬದಲಾಗ್ಬೇಕು ಗೌಡ್ರೆ, ಮಾದರಿ ಹಳ್ಳಿಯಾಗ್ಬೇಕು’ ಊರಿನ ಬಗ್ಗೆ ನಿರಂಜನನ ಕಾಳಜಿ ಕಂಡು ಎಲ್ಲರೂ ಮೆಚ್ಚಿಕೊಂಡರು.

ವಿದೇಶದಲ್ಲಿದ್ದರೂ ನಿರಂಜನ ಪ್ರಚಲಿತ ವಿದ್ಯಮಾನಗಳ ಬಗ್ಗೆ ಅಪ್ ಡೇಟ್ ಆಗಿದ್ದ. ಯಾವ ಪಕ್ಷ ಸಮರ್ಥವಾದದ್ದು, ಯಾರ ಆಳ್ವಿಕೆಯಿಂದ ದೇಶದ ಪರಿಸ್ಥಿತಿ ಸುಧಾರಿಸಬಹುದು ಅಂತ ವಾದ ಮಾಡೋದ್ರಲ್ಲಿ ನಿಸ್ಸೀಮನಾಗಿದ್ದ. ಆದರೆ ಅರವಿಂದಮ್ಮನಿಗೆ ಅಷ್ಟೆಲ್ಲಾ ದೊಡ್ಡ ಮಾತುಗಳಾಡೋದಕ್ಕೆ ಗೊತ್ತಾಗೋದಿಲ್ಲ. ಅವರೇನಿದ್ರೂ ಹಳ್ಳಿಯಲ್ಲಿ ಕಷ್ಟ ಅಂತ ಬಂದವರಿಗೆ ಅಕ್ಕಿಯೋ, ಬೇಳೇನೋ, ಕೈಗೊಂದಷ್ಟು ಕಾಸನ್ನು ಕೊಟ್ಟು ಕಳಿಸುತ್ತಾರೆ. ಊರಿನ ಹೆಣ್ಣುಮಕ್ಕಳಿಗೆ ಅರವಿಂದಮ್ಮನ ಮನೆಯ ಹಿತ್ತಲ ಬಾಗಿಲು ತವರುಮನೆಯಂತಾಗಿದೆ. ಮುಂದಿನ ಬಾಗಿಲಿಂದ ತಂದರೆ ಗಂಡನಿಗೆ ಗೊತ್ತಾಗಿ ಬಿಡುತ್ತದೆಂದು ಸೆರಗಲ್ಲಿ ಬಚ್ಚಿಟ್ಟುಕೊಂಡು ತಂದ ಅರವಿಂದಮ್ಮನ ದಾನ ಹೆಣ್ಣುಮಕ್ಕಳ ಮನೆಯ ಭವಿಷ್ಯನಿಧಿಯಂತಾಗಿತ್ತು.

‘Mom see that’ ಮೊದಲ ಸಲ ಭಾರತಕ್ಕೆ ಬಂದಿದ್ದ ಒಂಭತ್ತು ವರ್ಷದ ಗಗನ್ ಮರದ ಮೇಲೆ ಬಿಟ್ಟಿದ್ದ ಸೀಬೆಕಾಯಿಯನ್ನು ವಾಸ್ಕೋಡಿಗಾಮ ಭಾರತವನ್ನು ಕಂಡುಹಿಡಿದ ಹಾಗೆ ತೋರಿಸುತ್ತಾ ಖುಷಿಯಲ್ಲಿ ಹೇಳಿದ. Which fruit is that ಅಂತ ಕೇಳಿದಾಗ ಗಿರೀಶ, ಅದಾ.. ಸೀಬೇಕಾಯಿ ಅಂದ. ಅವನಿಗೆ ಅರ್ಥವಾಗದೇ ಇದ್ದದ್ದನ್ನ ಗಮನಿಸಿ ‘That is guava’ ನೆನಪುಮಾಡಿಕೊಂಡು ಹೇಳಿದ. ‘ಪರ್ವಾಗಿಲ್ವೇ ಸರಿಯಾಗಿ ಹೇಳ್ದೆ. ಇಂಗ್ಲಿಶ್ ಮೀಡಿಯಮ್ಮಾ?’ ನಿರಂಜನ್ ಆಶ್ಚರ್ಯದಿಂದ ಕೇಳಿದ. ‘ಇಲ್ಲ ಸರ್ ಕನ್ನಡ ಮೀಡಿಯಮ್, ಆದ್ರೆ ಇಂಗ್ಲಿಶ್ ಮಾತಾಡೋಕೆ ಇಷ್ಟ’ ಗಿರೀಶ ಉತ್ಸಾಹದಲ್ಲಿ ಹೇಳಿ ಓಡಿ ಹೋಗಿ ಛಂಗನೆ ಮರ ಹತ್ತಿ ಮೂರು ಸೀಬೇಕಾಯಿ ಕಿತ್ತು ತಂದ. ಅಮ್ಮನ ಮುದ್ದಿನಿಂದ ಬೆಣ್ಣೆಯಂತ ಮೈ ಬೆಳೆಸಿಕೊಂಡಿದ್ದ ಗಗನ್ ಗೆ ಈಗ, ಮರದ ಮೇಲೆ ಬಿಟ್ಟಿದ್ದ ಸೀಬೇಕಾಯಿಗಿಂತ ಅಷ್ಟು ಚುರುಕಾಗಿ ಅದನ್ನು ಕಿತ್ತು ತಂದ ಹುಡುಗನೇ ಸೋಜಿಗವೆನಿಸಿದ.

‘ಗಿರಿ, ನಾಳೆ ಚಪ್ಪರದೋರನ್ನ ಕರ್ಕೊಂಡ್ ಬಾ , ತೆಂಗಿನ್ ಗರಿ ಹಸಿಹಸಿರಾಗಿರ್ಬೇಕು, ಆಗ್ಲೇ ನೋಡೋಕೆ ಚಂದ,’ ಹಣಕಾಸಿನ ಸಮಸ್ಯೆಯ ಕಾರಣ, ಅರವಿಂದಮ್ಮ ತಂಗಿ ಮಗಳ ಮದುವೆಯ ಜವಾಬ್ದಾರಿಯನ್ನು ತಾವೇ ವಹಿಸಿಕೊಂಡಿದ್ದರು. ‘ಅಮ್ಮ, ಅವ್ನಿಗ್ ಯಾಕೆ ಕೆಲ್ಸ ಹೇಳ್ತ್ಯಾ? ನಿಂಗೆ ಆನ್ಲೈನ್ ತರಗತಿ ಇಲ್ವೇನೋ?’ ನಿರಂಜನ್ ಕೇಳಿದ ‘ನಡಿಯುತ್ತೆ ಸರ್, ನನ್ ಹತ್ರ ಸ್ಮಾರ್ಟ್ ಫೋನ್ ಇಲ್ಲ. ಪುಸ್ತಕದಿಂದಲೇ ನಂಗೇನ್ ಗೊತ್ತಾಗುತ್ತೋ ಅಷ್ಟ್ ಓದ್ಕೋತೀನಿ’ ಅಂದ.

ನಿರಂಜನ ಹುಡುಗನನ್ನು ಪ್ರೋತ್ಸಾಹಿಸುವ ದಾಟಿಯಲ್ಲಿ, ಗೌರ್ಮೆಂಟ್ ಸ್ಕೂಲ್ ನಲ್ಲಿ ಓದಿ ಸಾಧನೆ ಮಾಡಿರೋರು ಎಷ್ಟ್ ಜನ ಇಲ್ಲ? ಇವತ್ತಿನ್ ಎಜುಕೇಶನ್ ಸಿಸ್ಟಮ್ ಕೆಟ್ಟುಹೋಗಿದೆ ಅಷ್ಟೆ. ನಿಂಗೇನಾದ್ರು ಬೇಕಿದ್ರೆ ಕೇಳು ನಾನ್ ಸಹಾಯ ಮಾಡ್ತೀನಿ ಅಂದ. ಮಗನ ಓದಿಗೆ ಮೊಬೈಲ್ ಕೊಡಿಸಲಾಗದ ರೇಣುಕಾಗೆ ನಿರಂಜನನ ಮಾತುಗಳು ಆಶಾಭಾವನೆ ಮೂಡಿಸಿತ್ತು.

ಹಿಂದಿನ ಬಾಗಿಲಲ್ಲಿ ಅರವಿಂದಮ್ಮ ಹಸಿವೆಯೆಂದು ಬಂದವಳಿಗೆ ಮೂರು ಸೇರು ಅಕ್ಕಿಯನ್ನ ಕೊಡುತ್ತಿದ್ದಳು. ‘ಇನ್ನೂ ನಿನ್ನ ಬ್ಯಾಕ್ ಡೋರ್ ಸರ್ವೀಸ್ ಬಿಟ್ಟಿಲ್ವಾ? ಚಿಕ್ಕವಯಸ್ಸಿನಿಂದ ನೋಡ್ತಿದ್ದೀನಿ ಅವರಿವರಿಗೆ ದಾನ ಮಾಡೋದೇ ಆಯ್ತು, ಸಣ್ಣ ಪುಟ್ಟ ದಾನದಿಂದ ಏನು ಪ್ರಯೋಜನ ಆಗುತ್ತಮ್ಮ?’ ಮೊಬೈಲ್ ನಲ್ಲಿ ಫೋಟೋ ತೋರಿಸುತ್ತಾ ‘ಇವ್ನು ಯಾರು ಗೊತ್ತಾ? ಲೆನಿನ್ ಅಂತ. ಎಲ್ಲರೂ ಕಷ್ಟ ಪಟ್ಟು ದುಡೀಬೇಕು, ಎಲ್ರೂ ಸಂಪತ್ತನ್ನ ಹಂಚಿಕೊಳ್ಬೇಕು ಅನ್ನೋದು ಇವನ ವಾದ. ನಾನೂ ಅದನ್ನೇ ಹೇಳೋದು ಗಂಡು ಹೆಣ್ಣು ಸಮಾನರಾಗಿ ಓದ್ಬೇಕು, ದುಡೀಬೇಕು. ಆಗ ಯಾರೂ ಯಾರಿಗೂ ಕೈಚಾಚೋ ಪರಿಸ್ಥಿತಿ ಬರೋದಿಲ್ಲ. ಬಡವರಿಗೆ ಸರ್ಕಾರ ಉಚಿತ ಅಕ್ಕಿ ಕೊಡೋ ತರ ನೀನೂ ಮಾಡಿದ್ರೆ ಅವ್ರಿನ್ನೂ ಸೋಂಬೇರಿಗಳಾಗುತ್ತಾರೆ’. ಮಗನ ಆದರ್ಶದ ಮಾತುಗಳು ಹೊರಗೆ ದೇಹಿ ಅಂತ ಬಂದವರಿಗೆ ಕೇಳಬಾರದೆಂದು ಅರವಿಂದಮ್ಮ ಬಾಗಿಲು ಹಾಕಿದಳು.

ಅಂದು ಬೆಳಗ್ಗೆಯೇ ಗಿರೀಶ ಅರವಿಂದಮ್ಮನ ಮನೆಗೆ ಓಡಿ ಬಂದಿದ್ದ. ‘ಅಂಕಲ್ ಹೈಪೋಕ್ರಿಸಿ ಅಂದ್ರೇನು?’ ನಿರಂಜನನಿಗೆ ಅರ್ಥವಾಗ್ದೇ ಇದ್ದಾಗ ಗಿರೀಶ ‘h y p o c r i s y’  ಅಂತ ಸ್ಪೆಲಿಂಗ್ ನೆನಪು ಮಾಡಿಕೊಂಡು ಹೇಳಿದ. ಪೇಪರ್ ಓದುತ್ತಾ ಇದ್ದಾಗ ಕಂಡ ಈ ಪದ ಅವನಿಗೆ ಅರ್ಥವಾಗಿರಲಿಲ್ಲ. ನಿರಂಜನ ‘ಅದು ಹೈಪೋಕ್ರಿಸಿ ಅಲ್ಲ ಅದು, ಹಿಪಾಕ್ರಿಸಿ.. ಅಂದ್ರೆ.. ಮಾತಾಡೋದೊಂದು ಮಾಡೋದೊಂದು’ ಎಷ್ಟೋ ಜನ ಉದ್ದುದ್ದ ಭಾಷಣ ಬಿಗಿತಾರೆ ಆದ್ರೆ ಜೀವನದಲ್ಲಿ ಅದ್ಯಾವುದನ್ನೂ ಅಳವಡಿಸಿಕೊಳ್ಳೋದಿಲ್ಲ ಅಂತ  ಹೇಳಿದಾಗ ಗಿರೀಶನಿಗೆ ಮೆದುಳಲ್ಲಿ ಬಲ್ಬ್ ಹತ್ತಿದಂತಾಗಿ ‘ಓ ಗೊತ್ತಾಯ್ತು ಸರ್.. ನಮ್ ಶಾಲೆ ನಲ್ಲಿ ಒಬ್ರು ಮೇಷ್ಟ್ರು ನಮ್ ಕ್ಲಾಸ್  ಹುಡ್ಗೀರು ಹಣೇಗೆ ಬೊಟ್ಟು ಇಟ್ಕೊಂಡಿಲ್ಲ ಅಂದ್ರೆ ಬೈತಾರೆ, ಉದ್ದ ಲಂಗ ಹಾಕೋಬೇಕು, ಅದು ನಮ್ ಸಂಸ್ಕೃತಿ ಅಂತ ಭಾಷಣ ಬಿಗೀತಾರೆ, ಆದ್ರೆ ಅವ್ರ್ ಹೆಂಡ್ತಿ, ಮಕ್ಳು ಹಣೆಗೆ ಒಂದು ದಿನಾನೂ ಬೊಟ್ಟು ಇಟ್ಕೊಳ್ಳಲ್ಲ, ಯಾವಾಗ್ಲು ಚಡ್ಡಿ ಪ್ಯಾಂಟ್ ನೇ ಹಾಕೋತಾರೆ’. ಗಿರೀಶನ ಮುಗ್ದ ಉದಾಹರಣೆ ನಿರಂಜನನಿಗೆ ನಗು ತರಿಸಿತ್ತು.

ಮನೆ ಬಾಗಿಲಿಗೆ ತಂದುಹಾಕಿದ್ದ ತಾಂಬೂಲಕ್ಕೆ ಬೇಕಾದ ತೆಂಗಿನ ಕಾಯಿಗಳನ್ನು ಅರವಿಂದಮ್ಮ ಪರೀಕ್ಷಿಸುತ್ತಿದ್ದರು. ನಿರಂಜನ ಏನ್ ರ‍ೇಟು ಅಂತ ಕೇಳಿದಾಗ ಮಾಲಿ ಒಂದು ಕಾಯಿಗೆ ೧೮ ರುಪಾಯಿ, ಒಟ್ಟು ೧೨೦ ಕಾಯಿ ತಂದಿದ್ದೇನೆ ಅಂದ. ಗಗನ್ ಫೋನ್ ನ ಕ್ಯಾಲ್ಕ್ಯುಲೇಟರ್ ನ ತೆಗೆದು ಲೆಕ್ಕ ಮಾಡೋಷ್ಟ್ರಲ್ಲಿ ಗಿರೀಶ ಎರ್ಡು ಸಾವಿರದ ನೂರಾ ಅರವತ್ತು ಅಂತ ಹೇಳಿದ. ಶಾಲೆಯಲ್ಲಿ ಕ್ಯಾಲ್ಕ್ಯುಲೇಟರ್ ಬಳಸುತ್ತಿದ್ದ ಗಗನ್ ಗೆ ಥಟ್ ಅಂತ ಉತ್ತರ ಕೇಳಿ ಇದು ಗೆಸ್ ಮಾಡಿ ಹೇಳಿದ್ದಾನೋ ಇಲ್ಲ ಇವನ ಲೆಕ್ಕ ನಿಜವಾಗಿಯೂ ಇಷ್ಟು ಸ್ಪೀಡ್ ಇದ್ಯೋ ಅಂತ ತಿಳಿದುಕೊಳ್ಳೋ ಕುತೂಹಲ ಮೂಡಿತು.

ತನ್ನ ಕ್ಯಾಲ್ಕ್ಯುಲೇಟರ್ ನಲ್ಲಿ ನಂಬರ್ ಗಳನ್ನು ಗುಣಿಸಿ ಇದು ಎಷ್ಟು? ಅದು ಎಷ್ಟು? ಅಂತ ಪ್ರಶ್ನೆ ಕೇಳಿದಾಗ ಗಿರೀಶ ಪಟ ಪಟ ಅಂತ ಸರಿಯಾದ ಉತ್ತರ ಕೊಟ್ಟ. ಅಪ್ಪ ಮಗ ದಂಗಾಗಿದ್ದನ್ನು ಕಂಡು ಗಿರೀಶ ‘ನಾನು ಟೌನ್ ಸಿಗ್ನಲ್ ಅಲ್ಲಿ ಹೂ ಮಾರೋಕೆ ಹೋಗ್ತೀನಲ್ಲಾ ಚಿಲ್ಲರೆಗೆ ತಡ ಮಾಡಿದ್ರೆ ಗಿರಾಕಿ ಹೊರಟು ಬಿಡ್ತಾರೆ ಅದಕ್ಕೆ ಬೇಗ ಲೆಕ್ಕ ಮಾಡೋದನ್ನ ಕಲಿತಿದ್ದೀನಿ’ ಅಂದ. ನಿರಂಜನ ರೇಣುಕಾಗೆ ನೀವು ನಿಮ್ಮ ಮಗನ ಪ್ರತಿಭೆಯನ್ನ ಗುರುತಿಸುತ್ತಿಲ್ಲ, ಗಿರಿ ತುಂಬಾ ಬುದ್ಧಿವಂತ, ಅವನಿಗೆ ಪ್ರೋತ್ಸಾಹ ಸಿಕ್ರೇ ಏನಾದ್ರು ಸಾಧನೆ ಮಾಡ್ತಾನೆ ಅಂದಾಗ ದೊಡ್ಡ ಮನುಷ್ಯರ ಬಾಯಲ್ಲಿ ಬಂದ ಹೊಗಳಿಕೆ ಕೇಳಿ ರೇಣುಕಾ ಉಬ್ಬಿಹೋದಳು.

‘ಸರ್ ನನ್ ಮಗನ್ನ ದೊಡ್ ಶಾಲೆಗೆ ಸೇರಿಸ್ಬೇಕು ಅಂತಿದ್ದೆ ಆದ್ರೆ ಅಲ್ಲೆಲ್ಲಾ ತಂದೆ ತಾಯಿಗಳೂ ಓದಿರ್ಬೇಕು ಅಂತಾರೆ, ನಮ್ಮನೇಲಿ ನಾನು ನನ್ಗಂಡ ಇಬ್ರೂ ಹೆಬ್ಬೆಟ್ಟುಗಳು, ನೀವು ಬಂದು ಒಂದ್ ಸಲ ಮಾತಾಡಿದ್ರೆ ಅವ್ನ್ಗೆ ಅಲ್ಲಿ ಸೀಟ್ ಸಿಗ್ಬೋದು’ ಕೈಬೆರಳನ್ನು ಒಂದಕ್ಕೊಂದು ಒತ್ತಿಕೊಳ್ಳುತ್ತಾ ಹಿಂಜರಿಕೆಯಿಂದ ಕೇಳಿದಳು. ದೇವತೆಗಳು ಶ್ರೀವಿಷ್ಣುವಿನ ಹತ್ತಿರ ತಮ್ಮ ಕಷ್ಟಗಳನ್ನು ಹೇಳಿಕೊಂಡಾಗ ಅವತಾರವೆತ್ತಿ ಅವರಿಗೆ ನೆರವಾಗುವೆ ಅಂತ ಅಭಯಹಸ್ತ ತೋರುವಂತೆ, ಗಿರೀಶ ಒಳ್ಳೇ ಶಾಲೆ ಸೇರುವುದಕ್ಕೆ ತಾನು ಗಾರ್ಡಿಯನ್ ಆಗಿ ಬಂದು ಸಹಿ ಹಾಕಿ ಅಡ್ಮಿಶನ್ ಮಾಡಿಸಿಕೊಡುವುದಾಗಿ ನಿರಂಜನ ಆಶ್ವಾಸನೆ ಕೊಟ್ಟ.

ಅಂದು ರಾತ್ರಿ ರೇಣುಕಾಗೆ ನಿದ್ರೆ ಬರದೆ ಆಕಾಶ ನೋಡುತ್ತಾ ನಿಂತಳು. ನಿಷ್ಪ್ರಯೋಜಕ ಗಂಡನ ಜೊತೆ ಕಟ್ಟಿಕೊಂಡ ಕತ್ತಲೆಯ ಸಂಸಾರದಲ್ಲಿ ಮಗನೇ ಆಶಾಕಿರಣವಾಗಿದ್ದ. ಒಂದು ದಿನ ನಿರಂಜನನ ಹಾಗೆ ಮಗನೂ ದೊಡ್ಡ ಮನುಷ್ಯನಾಗಿ ಅರವಿಂದಮ್ಮನವರು ಹೆಮ್ಮೆ ಪಡುವಂತೆ ನಾನೂ ಹೆಮ್ಮೆಪಡುತ್ತೇನೆ ಅನ್ನೋ ವಿಶ್ವಾಸ ಮೂಡಿ ಕಣ್ಣಂಚಲ್ಲಿ ನೀರು ಜಿನುಗಿತು. ನೀಲಾಕಾಶದಲ್ಲಿ ವಿಮಾನವೊಂದು ದೂರದ ನಕ್ಷತ್ರಗಳನ್ನು ಮಾತನಾಡಿಸಲು ಹೋದಂತೆ ಕಾಣ್ತಿತ್ತು. ಅದನ್ನು ನೋಡ್ತಿದ್ದ ಗಿರೀಶ ‘ನಂಗೂ ಒಂದ್ ದಿನ ಏರೋಪ್ಲೇನ್ ನಲ್ಲಿ ಹೋಗ್ಬೇಕು ಅಂತ ಆಸೆ ಅಮ್ಮ’ ಅಂದ. ‘ನೀನು ಸರ್ ತರಾನೇ ಚೆನ್ನಾಗಿ ಓದಿ ಬೇರೆ ದೇಶದಲ್ಲಿ ಕೆಲ್ಸ ತೊಗೋ ಆಗ ಹೋಗ್ಬೋದು’ ಅಂದಳು. ‘ನಾವು ಓದಿ ಬೇರೆ ದೇಶದಲ್ಲಿ ಯಾಕೆ ಕೆಲ್ಸಕ್ಕೆ ಸೇರ್ಬೇಕು? ನಮ್ ದೇಶದಲ್ಲೇ ದುಡಿದು, ವಿಮಾನದಲ್ಲಿ ಪ್ರವಾಸಕ್ಕೆ ಅಂತ ನೀನು ನಾನು  ಹೋಗ್ಬೋದಲ್ವಾ? ಗಿರೀಶ ಅರಿವಿಲ್ಲದೇ ಆಳವಾದ ಪ್ರಶ್ನೆ ಕೇಳಿದ್ದ. ನಮ್ಮ ದೇಶದಲ್ಲಿ ದೊಡ್ಡ ಸಾಧನೆಯೆಂದರೆ, ನಮ್ಮ ದೇಶ ಬಿಟ್ಟು ಹೋಗಿ ಹೊರದೇಶದಲ್ಲಿ ನೆಲೆಸೋದು ಅಂತ ಲಕ್ಷಾಂತರ ವಿದ್ಯಾವಂತರು ನಂಬಿದ್ದನ್ನೇ ಏನೂ ಓದದೇ ಇರ‍ೋ ರೇಣುಕಾ ಕೂಡ ನಂಬಿದ್ದಳು.

ಯಾರ ಮನೆಯ ಮದುವೆಯಾದರೇನು.. ತಮ್ಮ ಮನೆಯ ಮದುವೆಯಂತೆ ಅಕ್ಕ ಪಕ್ಕದ ಮನೆಯ ಹೆಂಗಸರು ಸಿಂಗಾರ ಮಾಡಿಕೊಂಡಿದ್ದರು. ಚಿಕ್ಕಮ್ಮನ ಮಗಳ ಮದುವೆಗೆ ವಿಮಾನದಲ್ಲಿ ಬಂದಿದ್ದ ನಿರಂಜನನ ಕುಟುಂಬವೇ ಮದುಮಕ್ಕಳಿಗಿಂತ ಮುಖ್ಯ ಆಕರ್ಷಣೆಯಾಗಿತ್ತು, ಅದರಲ್ಲೂ ಗಗನ್ ಮಾತಾಡುತ್ತಿದ್ದ ಅಮೆರಿಕನ್ ಆಕ್ಸೆಂಟ್ ನ ಇಂಗ್ಲಿಷ್ ಗೆ ಎಲ್ಲರೂ ಮೂಕವಿಸ್ಮಿತರಾಗಿದ್ದರು.

ಭಾಷೆ ಬರದೇ ಇದ್ರೂ ಅವನ ಮಾತನ್ನ ಕೇಳೋಕೆ ‘ವಾಟ್ಸ್ ಯುವರ್ ನೇಮ್’ ಅಂತ ಪದೇ ಪದೇ ಶುರು ಮಾಡುತ್ತಿದ್ದರು. ‘ಅಂಕಲ್ ಅಮೆರಿಕಾ ಹೇಗಿರುತ್ತೆ?’ ಗಿರೀಶ ಸ್ವರ್ಗದ ವರ್ಣನೆ ಕೇಳುವಷ್ಟು ಕುತೂಹಲದಿಂದ ಕೇಳಿದ. ‘ಅದು ದೊಡ್ಡ ದೇಶ, ಮೂಲಭೂತ ಸೌಕರ್ಯಗಳು ಚೆನ್ನಾಗಿವೆ, ಜನರ ಕೈಲಿ ದುಡ್ಡಿದೆ,  ತುಂಬಾ ಸ್ವಚ್ಚವಾದ ದೇಶ, ಯಾರೂ ರಸ್ತೆಯಲ್ಲಿ ಕಸ ಹಾಕಲ್ಲ, ಟ್ರಾಫ಼ಿಕ್ ನಿಯಮಗಳನ್ನ ಪಾಲನೆ ಮಾಡ್ತಾರೆ’ ಅಂತ ನಿರಂಜನ್ ವಿವರಿಸಿದ. ಭೂರಿ ಭೋಜನ ಸವಿದು ಗಿಫ಼್ಟ್ ಪೇಪರ್ ಗಳು, ಬಾಳೆ ಹಣ್ಣಿನ ಸಿಪ್ಪೆಗಳನ್ನು ಎಲ್ಲೆಂದರಲ್ಲಿ ಎಸೆದು ಗಲೀಜು ಮಾಡುತ್ತಾ, ಅವರಿವರ ಬಗ್ಗೆ ಮಾತನಾಡುತ್ತಾ ಹೋಗುವ ಜನರನ್ನ ಗಿರೀಶ ನೋಡುತ್ತಾ ನಿಂತ.

‘ಇದೊಂದು ಕೆಲ್ಸ ಆದ್ರೆ ತುಂಬಾ ಜನಕ್ಕೆ ಉಪಕಾರ ಆಗುತ್ತೆ’ ಅರವಿಂದಮ್ಮನಿಗೆ ಪರಿಚಯವಿದ್ದ ವೃದ್ಧಾಶ್ರಮದವರು ರಿನೋವೇಶನ್ ಕೆಲ್ಸಕ್ಕೆ ದೇಣಿಗೆ ಕೇಳುತ್ತಿದ್ದರು. ತನ್ನ ಮಗ ಸಮಾಜಸೇವೆಯಲ್ಲಿ ಬಹಳ ಆಸಕ್ತಿ ಇಟ್ಟುಕೊಂಡಿದ್ದಾನೆ, ಆದರ್ಶವಾದಿ ಅಂತ ಹೆಮ್ಮೆಯಿಂದ ಹೇಳಿಕೊಂಡಾಗ ಅವರು ಸಹಾಯಹಸ್ತ ಕೋರಿದ್ದರು. ನಿರಂಜನನಿಗೆ ವಿಷಯ ತಿಳಿಸಿದಾಗ, ಅದಕ್ಕೇನಂತೆ ಒಂದು ಸಲ ನನ್ನ ಆಡಿಟರ್ ಹತ್ರ ಮಾತಾಡ್ತೀನಿ, ನಾನೂ ಆದಾಯ ತೆರಿಗೆ ಕಮ್ಮಿ ಆಗೋ ಹಾಗೆ ಯಾವುದರಲ್ಲಾದ್ರೂ ಹೂಡಿಕೆ ಮಾಡ್ಬೇಕು ಅಂತಿದ್ದೆ, ತಿಳಿಸುತ್ತೇನೆ ಅಂದು ಹೋದ. ಮಗನ ಹತ್ತಿರ ಮೊದಲ ಬಾರಿ ಏನನ್ನೋ ಕೇಳಿಕೊಂಡ ಅರವಿಂದಮ್ಮನಿಗೆ ಅವನು ಅಡ್ಡ ಗೋಡೆಯ ಮೇಲೆ ದೀಪ ಇಟ್ಟಹಾಗೆ ಆಡಿದ ಮಾತಿನಿಂದ ಪರಿಚಯಸ್ಥರ ಮುಂದೆ ಇರುಸುಮುರುಸಾಯಿತು.

ಮನೆಮುಂದಿನ ಚಪ್ಪರ ಮದ್ಯಾನ್ಹದ ಬಿಸಿಲನ್ನು ತಡೆದು ತಂಗುದಾಣವಾಗಿಸಿತ್ತು. ಅದರಡಿ ತಾಂಬೂಲ ಜಗಿಯುತ್ತಾ ಕೂತಿದ್ದ ಜನರ ಮಧ್ಯೆ ನಿರಂಜನನ ಅಧ್ಯಕ್ಷತೆಯಲ್ಲಿ ಊರಿನ ಅಭಿವೃದ್ಧಿಯ ಚರ್ಚೆ ಶುರುವಾಗಿತ್ತು. ನಮ್ಮ ಹಳ್ಳಿಯ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರದ ಮಾಡಿರೋ ಯೋಜನೆಗಳಿಂದ ನೀವು ಉಪಯೋಗ ಪಡೆದುಕೊಳ್ಬೇಕು. ಇಲ್ಲ ಅಂದ್ರೆ ಯೋಜನೆಗಳಿಗೆ ಮೀಸಲಾದ ಹಣ  ಸರಿಯಾಗಿ ವಿನಿಯೋಗ ಆಗೋದಿಲ್ಲ. ಯೋಜನೆಗಳನ್ನು ಸರಿಯಾಗಿ ಕಾರ್ಯರೂಪಕ್ಕೆ ಬರುತ್ತಿಲ್ಲದ ಕಾರಣ ನಮ್ಮ ದೇಶ ಇನ್ನೂ ಅಭಿವೃದ್ಧಿ ಆಗಿಲ್ಲ.

ಮೊದಲು ನೀವು ಸರಿಯಾದ ಜನರಿಗೆ ವೋಟ್ ಹಾಕ್ಬೇಕು ಅಂತ ಪಾಟ ಮಾಡಿದ. ಊರವರಿಗೆ ಅವನ ಮಾತುಗಳು ಕಬ್ಬಿಣದ ಕಡಲೆಯಂತನಿಸಿ ಕೋಲೆ ಬಸವನ ಹಾಗೆ ತಲೆಯಾಡಿಸಿದರು. ಗಿರೀಶ – ನೀವು ಭಾರತದೋರಲ್ವಾ? ನಿಮ್ಗೂ ವೋಟ್ ಮಾಡೋಕೆ ಅವಕಾಶ ಇರುತ್ತಾ?  ಅಂತ ಕೇಳಿದಾಗ ನಿರಂಜನ ಹೇಗೆ ನಾವು ಆನ್ ಲೈನ್ ನಲ್ಲಿ ವೋಟ್ ಮಾಡ್ತೀವಿ, ಎನ್ ಆರ್ ಐ ವೋಟಿಂಗ್ ೩೦% ಇರುತ್ತೆ ಆನ್ನೋದನ್ನ ವಿವರಿಸಿದ. ‘ಹಾಗಾದ್ರೆ ನೀವೆಲ್ಲಾ ಒಳ್ಳೇ ಜನಗಳಿಗೆ ವೋಟ್ ಮಾಡಿರ್ತೀರಲ್ಲ’ ಗಿರೀಶ ವಿಶ್ವಾಸದಿಂದ ಕೇಳಿದಾಗ ತಾನು ವೋಟಿಂಗ್ ದಿನ ಆಫ಼ಿಸ್ ನಲ್ಲಿ ಪ್ರೆಸೆಂಟೇಶನ್ ಗೆ ತಯಾರು ಮಾಡಿಕೊಳ್ತಿದ್ದು ನೆನಪಾಯಿತು.

ಗಿರೀಶನನ್ನು ನಿರಂಜನ್ ದೊಡ್ಡ ಶಾಲೆಗೆ ಸೇರಿಸುತ್ತಾನಂತೆ ಅನ್ನೋ ಮಾತು ವೈರಸ್ ನಂತೆ ಹರಡಿತು. ಊರಿನವರು ಅರವಿಂದಮ್ಮನ ಮಗ ಬಹಳ ಒಳ್ಳೆಯವರು, ಅವರ ಮುಂದಾಳತ್ವದಲ್ಲಿ ಸ್ವಚ್ಚತಾ ಆಂದೋಲನ ಕಾರ್ಯಕ್ರಮವನ್ನು ಮಾಡ್ಬೋದು, ಇಂತಹ ತಿಳಿದವರ ಮೂಲಕ ರಸ್ತೆಗೆ ಡಾಂಬರು ಹಾಕಿಸಲು ತಹಶೀಲ್ದಾರರನ್ನು ಕೇಳಿಕೊಂಡರೇ ಆ ಸಮಸ್ಯೆನೂ ಬಗೆಹರಿಯುತ್ತೆ ಅಂತ ಮಾತನಾಡಿಕೊಂಡು ಅರವಿಂದಮ್ಮನ ಮನೆ ಮುಂದೆ ಸಭೆ ಸೇರಿದರು. ನಿರಂಜನ ‘ನಮ್ಮೂರಿಗೆ ಒಳ್ಳೇದಾಗುತ್ತೆ ಅಂದ್ರೆ ಅಷ್ಟೂ ಮಾಡೋಕಾಗ್ದೇ ಏನು? ನಾನ್ ಬರ್ತೀನಿ ನೀವು ಯಾವತ್ತು ಅಂತ ತಿಳಿಸಿ’ ಅಶ್ವಾಸನೆ ಕೊಟ್ಟ.

ರೇಣುಕಾ ಗಿರೀಶನ ಹಳೇ ಶಾಲೆ ಬಿಡಿಸಿ ಹೊಸಾ ಶಾಲೆಯ ಅಪ್ಲಿಕೇಶನ್ ಫ಼ಾರ್ಮ್ ತಂದಳು. ಸಮವಸ್ತ್ರದ ಬಟ್ಟೆ ತಂದು ಹೊಲಿಯೋಕೆ ಕೊಟ್ಟಳು, ಗಿರೀಶ ದೂರದ ಶಾಲೆಗೆ ಸೈಕಲ್ ನಲ್ಲಿ ಹೋಗುವ ಕನಸು ಕಂಡ. ಮಗ ಸುತ್ತ ಮುತ್ತ ಹಳ್ಳಿಯಲ್ಲೇ ದೊಡ್ಡ ಶಾಲೆಗೆ ಹೋಗ್ತಾನೆ ಅನ್ನೋ ಖುಷಿ ತಾಯಿಯ ಮುಖದಲ್ಲಿ ಎದ್ದು ಕಾಣುತ್ತಿತ್ತು.

ಅಡ್ಮಿಶನ್ ನ ದಿನ ಗಂಟೆ ಹನ್ನೊಂದರೂ ನಿರಂಜನ ಬಂದಿರಲಿಲ್ಲ. ಹಿಂದಿನ ದಿನವಷ್ಟೇ ರೇಣುಕ ನೆನಪು ಮಾಡಿಬಂದಿದ್ದಳು. ಸ್ವತಃ ಪ್ರಯತ್ನ ಮಾಡೋಕೆ ಹೋದಾಗ ಶಾಲೆಯ ಕಛೇರಿಯಲ್ಲಿ ಗಿರೀಶನ ವಿವರ ಕೇಳಿ, ನಿರಂಜನ್ ಅವರ ಕಡೆಯವರು ಅಂದಮಾತ್ರಕ್ಕೆ ಶಾಲೆಗೆ ಸೇರಿಸಿಕೊಳ್ಳಲಾಗೋದಿಲ್ಲ. ನಾವು ನಮ್ಮ ಶಾಲೆಯಲ್ಲಿ ಅಂತರಾಷ್ಟ್ರ‍ೀಯ ಮಟ್ಟದ ಶಿಕ್ಷಣ ಕೊಡ್ತೀವಿ, ಹೋಮ್ ವರ್ಕ್, ಪ್ರಾಜೆಕ್ಟ್ ವರ್ಕ್ ಎಲ್ಲಾ ಇಂಗ್ಲಿಷ್ ನಲ್ಲಿರುತ್ತೆ, ನಿಮಗೆ ಅದನ್ನೆಲ್ಲಾ ಮಾಡಿಸೋಕೆ ಆಗುತ್ತಾ? ಅದಕ್ಕೆ ನಾವು ಪಾಲಕರ, ಪೋಷಕರ ವಿದ್ಯಾಭ್ಯಾಸವನ್ನು ಪರಿಗಣಿಸೋದು ಅಂದಾಗ ರೇಣುಕಾ ಜವಾಬ್ ಹೇಳಲಾಗದೇ ಹೋದಳು.

ಆ ದಿನ ಹಳ್ಳಿಯವರೂ ಸಹ ನಿರಂಜನ ತಮ್ಮ ಪರವಾಗಿ ತಹಶೀಲ್ದಾರ ಜೊತೆ ಮಾತನಾಡಲು ಬರ್ತಾರೆ ಅಂತಾರೆ ಅಂತ ಕಾಯ್ತಾ ನಿಂತಿದ್ದರು. ಸಮಯ ಕಳೆಯಿತು ಆದ್ರೆ ನಿರಂಜನನ ಕಾರು ಆ ಕಡೆ ಕಾಣಿಸಲಿಲ್ಲ. ಕಾದು ಕಾದು ಸಾಕಾಗಿ ಎಲ್ಲರೂ ಅರವಿಂದಮ್ಮನ ಮನೆಗೆ ಹೊರಟರು.

‘ಅರ್ಜೆಂಟ್ ಆಗಿ ಕೆಲ್ಸ ಇತ್ತಂತ ಟಿಕೆಟ್ ಬುಕ್ ಮಾಡಿ ನನ್ ಹತ್ರವೂ ಸರಿಯಾಗಿ ಹೇಳ್ದೆ ಹೊರಟುಬಿಟ್ಟ ಕಣಮ್ಮ’ ಅರವಿಂದಮ್ಮ ಬೇಜಾರಿನಲ್ಲಿ ಹೇಳಿದಳು. ನಿರಂಜನ ಕುಟುಂಬಸಮೇತ ಬೆಳಗ್ಗಿನ ಫ಼್ಲೈಟ್ ಗೆ ಮಧ್ಯ ರಾತ್ರೀನೇ ಮನೆಬಿಟ್ಟಿದ್ದ. ಮಧ್ಯರಾತ್ರಿ ಬ್ರಿಟಿಷರು ಬಿಟ್ಟುಹೋದ ಭಾರತದಲ್ಲೇ ತನ್ನ ಆದರ್ಶದ ಮಾತುಗಳನ್ನೂ ಬಿಟ್ಟು ಹೋಗಿದ್ದ. ಒಂದು ಸಮಾಜದ ವಿಭಜನೆಗೆ ಕಾರಣ ಎಡಪಂಥೀಯರು-ಬಲಪಂಥೀಯರಲ್ಲ, ಮಹಿಳಾವಾದ- ಪಿತೃಪ್ರಭುತ್ವವಾದವಲ್ಲ, ಇಂತಹ ಹಿಪಾಕ್ರಸಿ ಅನ್ನೋದನ್ನ ಸಾಬೀತುಪಡಿಸಿ ಹೋಗಿದ್ದ.

ಗಿರೀಶನನ್ನು ಹೊಸ ಶಾಲೆಗೆ ಸೇರಿಸೋದಕ್ಕೆ, ಊರ ಅಭಿವೃದ್ಧಿ ಕಾರ್ಯಗಳಿಗೆ ಕೊಟ್ಟ ಮಾತನ್ನು ಗಾಳಿಗೆ ತೂರಿ ಹೋದ ಮಗನ ವರ್ತನೆಗೆ ಅರವಿಂದಮ್ಮ ಕಣ್ಣೀರು ಹಾಕಿದರು. ‘ನಿನ್ನ ಮಗನನ್ನ ಆ ಶಾಲೆಗೆ ಸೇರಿಸೋಕಾಗುತ್ತೋ ಇಲ್ವೋ ಗೊತ್ತಿಲ್ಲ ಆದ್ರೆ ಅವನ ತರಗತಿಗೆ ಅನುಕೂಲ ಆಗೋಹಾಗೆ ಒಂದು ಮೊಬೈಲ್ ತೆಗೆದುಕೊಳ್ಳೋಣ. ಅಷ್ಟಾದ್ರೂ ಮಾಡ್ತೀನಿ’ ತಪ್ಪಿತಸ್ಥೆಯ ಭಾವದಿಂದ ಹೇಳಿದರು. ‘ನಿಮ್ಮ ಹಾಗೆ ಎಲೆಮರೆ ಕಾಯಿಯಂತೆ ಹಿಂದಿನ ಬಾಗಿಲಿನಿಂದ ಸಹಾಯ ಮಾಡುವ ಗುಣ ಎಲ್ರಿಗೂ ಇರಲ್ಲಮ್ಮ, ದೇಶದ್ ಬಗ್ಗೆ ದೊಡ್ ದೊಡ್ ಮಾತಾಡೋ ತುಂಬಾ ಜನರನ್ನ ನೋಡಿದ್ವಿ. ಅವರಲ್ಲಿ ಇನ್ನೊಬ್ಬ ಅಷ್ಟೇ!’ ಊರವರು ಸಮಾಧಾನದ ಮಾತನಾಡಿದರು. ಅರೇಹಳ್ಳಿಯಲ್ಲಿ ಎಂದಿನಂತೇ ಕೋಳಿ ಕೂಗಿತು, ಕೆಲ್ಸಕ್ಕೆ ಹೊರಟವರ ಗಾಡಿಯ ಚಕ್ರಗಳು ಮಣ್ಣಿನ ರಸ್ತೆಯ ಮೇಲೆ ಗುರುತುಮಾಡಿದವು, ಆಕಾಶದಲ್ಲಿ ಹಾರಿದ ವಿಮಾನವನ್ನೇ ನೋಡ್ತಾ ನಿಂತ ಗಿರೀಶನಿಗೆ ಅಮ್ಮ ಸಗಣಿ ಸಾರಿಸಲು ನೆನಪಿಸಿದಳು.

‍ಲೇಖಕರು Admin

2 July, 2021

10 Comments

  1. sinchana a

    ನಾನು ಎಂಟನೇ ತರಗತಿಯ ವಿದ್ಯಾರ್ಥಿನಿ. ನಾನು ಆನ್ಲೈನ್ ಶಾಲೆಯ ಮಧ್ಯದಲ್ಲಿ ವಿರಾಮ ನೀಡಿದಾಗ ನಾನು ಪ್ರತಿ ಶುಕ್ರವಾರ ನಿಮ್ಮ ಕಥೆಯನ್ನು ಓದುತ್ತೇನೆ.ಕಥೆ ತುಂಬಾ ಆಸಕ್ತಿದಾಯಕವಾಗಿತ್ತು.ನನ್ನ ದೃಷ್ಟಿಯಲ್ಲಿ ನೀವು ಉತ್ತಮ ಬರಹಗಾರರಾಗಿದ್ದೀರಿ. ನೀವು ಚಲನಚಿತ್ರವನ್ನು ನಿರ್ದೇಶಿಸಬಹುದು ಎಂದು ನಾನು ಭಾವಿಸುತ್ತೇನೆ.ನಿಮ್ಮ ಮುಂದಿನ ಬರಹಗಳಿಗೆ ಒಳ್ಳೆಯದಾಗಲಿ.
    -ಸಿಂಚನ ಎ

  2. Vaishnavi SK

    Nice story ma’am

  3. Kusuma BR

    Hello Ranjani mam,
    Nimma ella kategalannu nanu odiddene, nimma ella kategalu janajeevanakke tumba hattiravagide, e kateyu tumba chennagide

  4. Trupti hangargi

    ನನಗೆ ನಿಮ್ಮಕಥೆ ತುಂಬಾ ಇಷ್ಟ ಆಗೇದೆ ಮಿಸ್! ರಂಜನಿ ರಾಘವನ್. ನಾನು ಮೊದಲ ಬಾರಿಗೆ ಕಥೆ ನ ಓದೋಕೆ ಶುರು ಮಾಡಿದಿನಿ ಅಂದ್ರೆ ಅಡಿ ನಿಮ್ ಕಥೆ ಮಾತ್ರ, ನಿಮ್ಮ ಧಾರಾವಾಹಿ ನೋಡ್ತಾ ನೋಡ್ತಾ ನಂಗೆ ನೀವು ತುಂಬಾ ಇಷ್ಟ ಆಗಿದಿರಿ, ಹಾಗೆ ಅದೇ ಕಾರಣ ದಿಂದ ಆಗಿ ನಿಮ್ ಕಥೆ ಓದಲು ಆಸಕ್ತಿ ಬಂದಂತಾಗೆದೆ! ಅಡಕ್ಕಷ್ಟೇ ತುಂಬಾ ಧನ್ಯವಾದಗಳು! ಮತ್ತೆ ನಾನು ನಿಮ್ಮಿಂದ ಆಗಿ ತುಂಬಾ ಚೆನ್ನಾಗಿ ಕನ್ನಡ ಮಾತಾಡುವುದನ್ನು ಕಲ್ಟಿದೆನಿ ತುಂಬಾ ಧನ್ಯವಾದಗಳು. ….ಮತ್ತೆ ಇನ್ನೊಂದ್ ವಿಷ್ಯ..ನಾನು ಯಾರಿಗೂ ಎಷ್ಟು ಉದ್ದ ಕನ್ನಡ ದಲ್ಲಿ ಟೀಕೆ ಮಾಡಿರಲಿಲ್ಲ …ಧನ್ಯವಾದಗಳು

  5. Ashwini

    ಕಥೆ ತುಂಬಾ ಇಷ್ಟ ಆಯ್ತು, ವಿಷಯ ಸರಳ ಮತ್ತು ವ್ಯಕ್ತಿತ್ವ ರೂಪಿಸಿಕೊಳ್ಳಲು ಸಹಾಯಕ. ಧನ್ಯವಾದಗಳು.

  6. ಶ್ರೀ ರೂಪ

    ನಿಜಕ್ಕೂ ಅದ್ಬುತ ಬರವಣಿಗೆ… ಕಥಾಹಂದರ ತುಂಬ ಚೆನ್ನಾಗಿದೆ

  7. Vinutha N

    Kannanchalli neeru banthu bhuvi avre nim kathe odi….girishana tara thumba makkalu kanasu kantidare ..thumba channagi chitrisiddira… Niranjan antavre thumbidare …nim kathe odi adru jana swalpa badaladare aste saaku…nim kathegalu yellarigu spoorthi nidali…olle kelasagalu bari mathagade karya roopa padeyali…nimge shubhavagali

  8. Asha H.S

    Nice story madam. Nim kathe nanage tumba eshta madam. Every friday story read madtini. All the best madam.

  9. Guruprasad

    Nice Story Bhuvi avre

  10. SUMALATHA K P

    ನಿಮ್ಮ ಕಥೆ ತುಂಬಾ ಚೆನ್ನಾಗಿದೆ. ನಮಗೆ ತುಂಬಾ ವಿಷಯಗಳು ತಿಳಿದಿವೆ ಆದರೆ ಅದನ್ನು ಹೇಗೆ ಬರೆಯಬೇಕೆಂದು ನಮಗೆ ತಿಳಿದಿಲ್ಲ, ನೀವು ಅದನ್ನು ಚೆನ್ನಾಗಿ ನಿಭಾಯಿಸಿದ್ದೀರಿ. ಕನ್ನಡಕ್ಕಾಗಿ ಏನಾದರೂ ಮಾಡಬೇಕು ಆದರೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ಕನ್ನಡದ ಸೇವೆ ಮಾಡಲು ನನಗೆ ಏನಾದರೂ ಅವಕಾಶವಿದ್ದರೆ ದಯವಿಟ್ಟು ತಿಳಿಸಿ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading