ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಖ್ಯಾತ ನಟಿ ರಂಜನಿ ರಾಘವನ್ ಕಥಾ ಅಂಕಣ- ವೀಕೆಂಡ್ ಸ್ವಯಂವರ

ಕನ್ನಡ ಕಿರು ತೆರೆಯ ಮಹತ್ವದ ಕಲಾವಿದರ ಪಟ್ಟಿಯಲ್ಲಿ ರಂಜನಿ ರಾಘವನ್ ಅವರ ಹೆಸರು ಇದ್ದೇ ಇದೆ. ಕಿರುತೆರೆ ವಲಯದಲ್ಲಿ brainy ಎಂದೇ ಗುರುತಿಸಲ್ಪಡುವ ರಂಜನಿ ಅವರಿಗೆ ಓದು ಮೆಚ್ಚಿನ ಹವ್ಯಾಸ. ಸದ್ಯದ ಅತಿ ಹೆಚ್ಚು ಯಶಸ್ಸು ಕೊಟ್ಟ ಧಾರಾವಾಹಿ ‘ಕನ್ನಡತಿ’.

ಸೆಟ್ ನಲ್ಲಿಯೂ ಒಂದಿಲ್ಲೊಂದು ಪುಸ್ತಕ ಹಿಡಿದು ಹಾಜರಾಗುವ ರಂಜನಿಯವರ ಬಗ್ಗೆ ಉಳಿದವರದ್ದು ಅಚ್ಚರಿಯ ಕಣ್ಣು. ಈಗಾಗಲೇ ಹಲವು ಸಾಹಿತ್ಯ ಸಮಾರಂಭಗಳಲ್ಲಿ ಅತಿಥಿಯಾಗಿ ಓದುಗರ, ಬರಹಗಾರರ ಮನ ಗೆದ್ದಿರುವ ಇವರು ಈಗ ಇನ್ನೊಂದು ಹೊಸತಿಗೆ ತಮ್ಮನ್ನು ಒಡ್ಡಿಕೊಳ್ಳುತ್ತಿದ್ದಾರೆ.

ಒರಾಯನ್ ಮಾಲ್ ಮುಂದೆ ಆಟೋದಿಂದಿಳಿದ ಪ್ರಾರ್ಥನಾ, ಮ್ಯಾಟ್ರಿಮೋನಿಯಲ್ಲಿ ಅಮ್ಮ ನೋಡಿ ಆರಿಸಿದ ಸರ್ವಗುಣಸಂಪನ್ನ ವರನನ್ನ ಭೇಟಿಯಾಗೋಕೆ ಬಂದಿದ್ದಳು. ಆಟೋದವನಿಗೆ ದುಡ್ಡು ಕೊಡುತ್ತಿದ್ದಂತೆ ಫೋನ್ ನ ಮೆಸೇಜ್ ಟೋನ್ ಟಣ್ ಅಂತು ‘ರೀಚ್ ಆದ್ಯಾ?’ ಅಂತಿತ್ತು. ‘ಯಾಕೆ ಅಷ್ಟೊಂದ್ ಟೆನ್ಶನ್ ಮುದ್ದು? ಮೀಟ್ ಆಗಿಲ್ಲ ಅಂದ್ರೆ ಅಮ್ಮನ ಬೈಗುಳ ನಿಲ್ಲಲ್ಲ ಅಂತ ಬಂದಿದ್ದೀನಿ, ಹೋಮ್ ವರ್ಕ್ ಅಷ್ಟೇ. ಲವ್ ಯು! ಬಾಯ್’. ಮುಗುಳ್ನಗುತ್ತಾ ಮೆಸೇಜ್ ಟೈಪ್ ಮಾಡಿಕಳಿಸಿದಳು. ‘ಏನಾದ್ರು ಇದ್ರೆ ಅಪ್ಡೇಟ್ ಮಾಡು, ನಾನ್ ಇಲ್ಲೇ ಇಸ್ಕಾನ್ ಹತ್ರ ಬಂದಿರ್ತೀನಿ’. ಶರತ್ ಮತ್ತೆ ಮತ್ತೆ ಮೆಸೇಜ್ ಕಳಿಸ್ತಿದ್ದರಲ್ಲಿ ತನ್ನ ಪ್ರೇಯಸಿ ಎಲ್ಲಿ ಕೈ ತಪ್ಪಿಹೋಗ್ತಾಳೋ ಅನ್ನೋ ಭಯ ಎದ್ದುಕಾಣುತ್ತಿತ್ತು.

ರಸ್ತೆಯುದ್ದಕ್ಕೂ ದೊಡ್ಡ ಕೋಟೆಯಂತೆ ನಿಂತಿರೋ ಮಾಲ್ ಒಳಗೆ ಹೋಗುವ ಮುನ್ನ ಆಕಾಶ್ ಗೆ ಫೋನ್ ಮಾಡಿದಳು. ‘ನಾನು ಒರಾಯಿನ್ ಎಂಟ್ರೆನ್ಸ್ ಅಲ್ಲಿದ್ದೀನಿ, ನೀವೆಲ್ಲಿದೀರ?’ ‘ಓ ಬಂದೆ ಜಸ್ಟ್ ಫ಼ೈವ್ ಮಿನಿಟ್ಸ್’ ಫೋನ್ ಕಟ್ ಆಯಿತು. ಆಚೆ ಕಾಯೋದು ಸೂಕ್ತವಲ್ಲ ಅನ್ನಿಸಿ ಮಾಲ್ ಒಳಗೆ ಹೋದಳು. ಶನಿವಾರವಾದ್ದರಿಂದ ತುಂಬಾ ಜನರಿದ್ದರು. ಸುತ್ತ ಕೈಕೈ ಹಿಡಿದು ನಡೆಯೋ ಪ್ರೇಮಿಗಳು, ನವ ದಂಪತಿಗಳು, ಜೋರಾಗಿ ಮಾತಾಡ್ತಾ ಹೋಗೋ ಸ್ನೇಹಿತರ ಗುಂಪು, ಮಕ್ಕಳು ಎಲ್ಲಿ ತಪ್ಪಿಸಿಕೊಂಡುಬಿಡ್ತಾರೋ ಅಂತ ಕೈಬಿಡಿಸಿಕೊಳ್ಳದಂತೆ ನೋಡ್ಕೊಂಡು ಓಡಾಡೋ ತಂದೆ ತಾಯಿಯರ ಮಧ್ಯೆ ಪ್ರಾರ್ಥನಾ ವಿಭಿನ್ನವಾಗಿದ್ದಳು. ಅಮ್ಮ ಹುಡುಕಿದ ಹುಡುಗನ್ನನ್ನೊಮ್ಮೆ ಭೇಟಿಯಾಗಿ, ಆಮೇಲೆ ಏನಾದರೊಂದು ನೆಪ ಒಡ್ಡಿ ಕ್ಯಾನ್ಸಲ್ ಮಾಡಿ, ಶರತ್ ಗೆ ಒಳ್ಳೇ ಕೆಲ್ಸ ಸಿಕ್ಕ ಮೇಲೆ ಮದುವೆ ಪ್ರಸ್ತಾಪ ಮಾಡೋದು ಅವಳ ಯೋಚನೆಯಾಗಿತ್ತು.

ಮಾಲ್ ನ ವಾತಾವರಣ ಯುವಪೀಳಿಗೆಯ ಜೀವನಶೈಲಿಯ ಕನ್ನಡಿ ಹಿಡಿದಂತೆ. ಹಳ್ಳಿಗರ ಮನೆ, ಕೆಲಸಗಳನ್ನು ಕಿತ್ತುಕೊಂಡು ಕಟ್ಟಿದ ಮಾಲ್ ನಲ್ಲೇ ಹಳ್ಳಿ ಸೊಗಡನ್ನ ಸೂಸೋ ಖಾನಾವಳಿಗಳನ್ನ ಜನ ಹುಡುಕಿ ಬಂದಿದ್ದರು. ಇನ್ನೊಂದೆಡೆ ಫ಼ಾಸ್ಟ್ ಫ಼ುಡ್ ರೆಸ್ಟೋರೆಂಟ್ ನಲ್ಲಿ ತಮ್ಮ ಸರದಿಗಾಗಿ ಹದ್ದಿನಕಣ್ಣಿಟ್ಟು ಕಾಯುತ್ತಾ ನಿಂತಿದ್ದರು, ವಾರವೆಲ್ಲಾ ಬೇರೆ ದೇಶಕ್ಕೆ ದುಡಿದವರು ವಾರಾಂತ್ಯದಲ್ಲಿ ಬೇರೆ ದೇಶದ ವಸ್ತುಗಳಿಗೇ ತಮ್ಮ ಸಂಪಾದನೆಯನ್ನ ಮುಡಿಪಾಗಿಡಲು ಪಣ ತೊಟ್ಟಂತೆ ಖರೀದಿ ಮಾಡುತ್ತಿದ್ದರು. ಪ್ರಾರ್ಥನಾ ಸುತ್ತ ಮುತ್ತ ಇರೋರು ಸನ್ ಗ್ಲಾನ್ ಹಾಕಿರೋದನ್ನ ನೋಡಿ ತಾನೂ ಬ್ಯಾಗ್ನಿಂದ ಕಪ್ಪು ಕೂಲಿಂಗ್ ಗ್ಲಾಸ್ ಹಾಕಿಕೊಂಡಳು.

ಮಾಲ್ ನಲ್ಲಿ ಕಾಯೋದು ಅಂದ್ರೆ ಪಾರ್ಕಿನಲ್ಲಿ ಒಂದು ಕಡೆ ಕೂರೋಹಾಗಲ್ವಲ್ಲ, ಕಣ್ಸೆಳೆಯೋ ಎಷ್ಟೋ ಅಂಗಡಿಗಳಿರುತ್ತವೆ, ದೊಡ್ಡ ದೊಡ್ಡ ಬೊಂಬೆಗಳಿಗೆ ನಮ್ಮನ್ನೇ ನಾಚಿಸುವಂತೆ ಬೆಲೆಬಾಳೋ ಬಟ್ಟೆಗಳನ್ನ, ಶೂಗಳನ್ನ ಹಾಕಿರುತ್ತಾರೆ. ಇನ್ನು ಪರ್ಸ್ ದಪ್ಪವಿಲ್ಲದೋರು ಅಂಗಡಿಯೊಳಗೆ ಹೋಗೋದಕ್ಕಿಂಗಿಂತ ಗಾಜಿನಿಂದ ಅವುಗಳನ್ನು ನೋಡಿ ಕಣ್ತುಂಬಿಕೊಳ್ಳೋದೇ ಜಾಸ್ತಿ. ಸಿಗದ ವಸ್ತುವನ್ನು ನೋಡುತ್ತಾ ನಿಂತವರಿಗೆ ಅವಮಾನವಾಗಬಾರದೆಂದೋ ಏನೋ ಅದಕ್ಕೆ ‘ವಿಂಡೋ ಶಾಪಿಂಗ್’ ಅಂತ ಹೆಸರಿಟ್ಟು ಅದೂ ಒಂದು ವಿಧದ ಖರೀದಿ ಅನ್ನುವಂತೆ ಸಾಮಾನ್ಯಗೊಳಿಸಿದ್ದಾರೆ.

ಹಾಗೆ ಸ್ವಾಭಿಮಾನಕ್ಕೆ ಪೆಟ್ಟುಬೀಳುವಂತಿದ್ದರೆ ಮಧ್ಯಮ ವರ್ಗವರೇ ಹೆಚ್ಚಾಗಿರೋ ಭಾರತದಲ್ಲಿ ಯಾರೂ ಮಾಲ್ ಗೆ ಹೋಗುತ್ತಲೇ ಇರಲಿಲ್ಲವೇನೋ. ಪ್ರಾರ್ಥನಾ ಕೂಡ ಇದಕ್ಕೆ ಹೊರತಲ್ಲ. ಸ್ನೇಹಿತರ ಜೊತೆ, ಬಂದಾಗಲಾಗಲೆಲ್ಲಾ ಸಂಭ್ರಮದಿಂದ ವಿಂಡೋ ಶಾಪಿಂಗ್ ಮಾಡಿದ್ದಳು. ಹೆಚ್ಚೆಂದರೆ ಶರತ್ ಜೊತೆ ಬರ್ಗರ್ ಅಥವಾ ಕಾಫ಼ಿ ಕೊಂಡಿದ್ದಳು. ಎಷ್ಟೋ ಸರ್ತಿ ಮಾಲ್ ಸುತ್ತಿ ಅಲ್ಲಿ ಫೋಟೋ ತೆಗೆದುಕೊಂಡು ನಂತರ ರಸ್ತೆ ಬದಿಯಲ್ಲಿ ಮಾರುವ ಪಾನಿಪುರಿ ತಿಂದು ಔಟಿಂಗ್ ಮುಗಿಸಿದ್ದುಂಟು.

‘ಏನ್ ಇಷ್ಟೊತ್ತಾದ್ರೂ ಬರ್ಲಿಲ್ಲ, ನಾನ್ ಕಾಯ್ತಿದ್ದೀನಿ ಅನ್ನೋ ಕಾಮನ್ ಸೆನ್ಸ್ ಇಲ್ವಾ’ ಟೈಮ್ ನೋಡಿ ಬೈಕೊಳ್ಳೋಹೊತ್ತಿಗೆ ಮತ್ತೆ ಫೋನ್ ರಿಂಗಣಿಸಿತು. ‘ಹೇ! ಸಾರಿ.. ನಾನ್ ಬಂದೆ, ಕಾರ್ ಪಾರ್ಕ್ ಮಾಡ್ತಿದ್ದೀನಿ, ನೀವು ಸ್ಟಾರ್ ಬಗ್ಸ್ ಅಲ್ಲಿರ್ತೀರಾ? ಅಲ್ಲೇ ಸಿಗೋಣ?’. ಪ್ರಾರ್ಥನಾ ಅಸಮಧಾನವನ್ನು ತೋರಿಸಿಕೊಳ್ಳದೆ ಸರಿ ಅಂದಳು.

ಅಮೆರಿಕಾ ಮೂಲದ ಕಾಫಿ ಶಾಪ್ ಸ್ಟಾರ್ ಬಗ್ಸ್ ಗೆ ಪ್ರಾರ್ಥನಾ ಮೊದಲ ಸಲ ಬಂದಿದ್ದಳು. ಮೆನು ನೋಡಿ, ಕಾಫ಼ಿ ಡೇ ಅಲ್ಲೇ ಜಾಸ್ತಿ ರೇಟು ಅಂದುಕೊಂಡ್ರೆ ಇಲ್ಲಿನ್ನೂ ಜಾಸ್ತಿ ಇದ್ಯಲ್ಲ ಅನ್ನಿಸಿತು. ತಲೆಯೆತ್ತಿ ನೋಡಿದರೆ ವೈಟರ್ ನಿಂತಿದ್ದಳು. ‘ಹಾ.. ನಾನು ಒಬ್ರಿಗೆ ಕಾಯ್ತಿದ್ದೀನಿ, ಬಂದ್ಮೇಲೆ ಆರ್ಡರ್ ಮಾಡ್ತೀವಿ’. ವೈಟರ್ ಮುಗುಳ್ನಕ್ಕು ಹೋದಳು. ಈ ಸರ್ವೀಸ್ ಕ್ಷೇತ್ರದಲ್ಲಿರೋರು ಏನು ಓದಿರ್ತಾರೋ ಬಿಟ್ಟಿರ್ತಾರೋ ಗೊತ್ತಿಲ್ಲ, ಜಗತ್ತಿನ ಅತೀ ಸಂತೋಷದ ಜೀವಿಗಳು ಅನ್ನೋ ಹಾಗೆ ನಗೋದು ಮಾತ್ರ ಅವರ ಕೆಲಸದ ಮುಖ್ಯ ಕ್ರೈಟೀರಿಯಾ ಆಗಿರುತ್ತೆ. ಅಕಸ್ಮಾತ್ ಅವರಿಗೆ ಅಂದು ಮೂಡ್ ಆಫ಼್ ಆಗಿದ್ರೂ, ಮನೇಲಿ ಯಾರಾದ್ರು ತೀರಿಕೊಂಡಿದ್ರೂ ಅವರ ನಗು ಮಾಸೋ ಹಾಗಿಲ್ಲ.

‘ಐಟಿಯಲ್ಲಿ ಕೆಲ್ಸ ಮಾಡೋರೇ ವಾಸಿ, ಟಿಎಲ್ ನ ಡಿಸೈನ್ ಡಿಸೈನ್ ಆಗಿ ಬೈದುಕೊಂಡ್ರೂ ಕಂಪ್ಯೂಟರ್ ಅದನ್ನ ಅರ್ಥಮಾಡಿಕೊಳ್ಳೋದಿಲ್ಲ’ ತನ್ನ ಲಾ ಗೆ ನಸುನಕ್ಕಳು.

‘ಇನ್ನೂ ಮೀಟ್ ಆಗಿಲ್ಲ, ಲೇಟ್ ಆಗಿ ಬಂದ್ರು’ ಮೆಸೇಜ್ ಟೈಪ್ ಮಾಡಿ ಶರತ್ ಗೆ ಕಳಿಸಿ ತಲೆ ಎತ್ತಿದಾಗ ಗಾಜಿನ ಬಾಗಿಲನ್ನು ತಳ್ಳಿಕೊಂಡು ಒಬ್ಬ ಯುವಕ ಒಳ ಬಂದ. ಎತ್ತರದ ನಿಲುವು, ತಿಳಿನೀಲಿ ಬಣ್ಣದ ಟಿ ಶರ್ಟ್ ಮೇಲೆ ಕರೀ ಲೆದರ್ ಜಾಕೆಟ್ ಹಾಕಿದ್ದಾನೆ. ಫೋಟೋದಲ್ಲಿ ಫ಼ಾರ್ಮಲ್ ಶರ್ಟ್ ಹಾಕಿದ್ದರಿಂದ ಗುರುತಿಸೋದಕ್ಕೆ ಕೊಂಚ ಸಮಯ ಹಿಡೀತು. ಹತ್ತಿರ ಬಂದವನು ಮುಗುಳ್ನಗುತ್ತಾ ‘ಹಾಯ್!.. ಆಕಾಶ್’ ಅಂದು ಶೇಕ್ ಹ್ಯಾಂಡ್ ಮಾಡೋದಕ್ಕೆ ಕೈ ಮುಂದೆ ಚಾಚಿದ. ಅವನ ಮೈಯ್ಯ ಪರ್ಫ಼್ಯೂಮ್ ನ ಘಮ ಹಿತವೆನಿಸಿತು.

ಕಂದು ಬಣ್ಣದ ಕನ್ನಡಕದಲ್ಲಿ ಪ್ರಾರ್ಥನಾಗೆ ತನ್ನ ಮುಖವೇ ಕಾಣಿಸುತ್ತಿತ್ತು. ಬ್ರಾಂಡೆಡ್ ಕೂಲಿಂಗ್ ಗ್ಲಾಸ್ ಮುಂದೆ ತನ್ನದು ಯಾವುದೋ ಲೋಕಲ್ ಅಂತ ಗೊತ್ತಾಗಿಬಿಡುತ್ತೆ ಅಂತ ಬ್ಯಾಗ್ ಒಳಗೆ ಮುಚ್ಚಿಟ್ಟಳು. ‘ಮತ್ತೆ ಸಾರಿ, ನಮ್ಮ ಕ್ಲೈಂಟ್ ಒಬ್ರು ಹೊರಡೋಷ್ಟರಲ್ಲಿ ಬಂದ್ಬಿಟ್ರು, ಸ್ವಲ್ಪ ಇಂಪಾರ್ಟೆಂಟ್ ಡೀಲ್ ಅದಕ್ಕೆ ಕಾಯಿಸ್ಬಿಟ್ಟೆ, ಸಾರಿ!’. ಅವನು ಈ ಸಲ ಸಾರಿ ಕೇಳಿದ್ದಕ್ಕೆ ನಿಜವಾಗಿಯೂ ಅಸಮಧಾನ  ಕಳೆದುಹೋಗಿತ್ತು. ‘ಪರ್ವಾಗಿಲ್ಲ ನಾನೂ ಒರಾಯಿನ್ ಗೆ ಜಾಸ್ತಿ ಬಂದಿರ್ಲಿಲ್ಲ ನೋಡಿದ್ ಹಾಗಾಯ್ತು’ ಮುಗುಳ್ನಗುತ್ತಾ ಹೇಳಿದಳು. ಆಕಾಶ್ ಇಬ್ಬರಿಗೂ ಕೋಲ್ಡ್ ಕಾಫ಼ಿ ಮತ್ತು ಸ್ಯಾಂಡ್ ವಿಚ್ ಹೇಳಿದ.

ಆಕಾಶ್ ಕನ್ಸ್ ಸ್ಟ್ರಕ್ಷನ್ ಕಂಪನಿಯ ಸಿಇಓ ಆಗಿದ್ದ. ಯುವ ಆರ್ಕಿಟೆಕ್ಟ್ ಗಳನ್ನ ಕೆಲಸಕ್ಕೆ ಇಟ್ಟುಕೊಂಡು ಮನೆಗಳನ್ನು, ಮಳಿಗೆಗಳನ್ನು ಕಟ್ಟಿಕೊಡೋ ಕಂಪನಿ ಅದು. ಅರ್ಧ ಕೆಲ್ಸ ಮಾಡಿ ಓಡಿ ಹೋಗೋ ಮೇಸ್ತ್ರಿಗಳ ಮಧ್ಯ ಕಾರ್ಪೊರೇಟ್ ಫ಼ರ್ಮ್ ಗಳಂತೆ ಕೆಲ್ಸ ಮಾಡೋ ಇವನ ಕಂಪನಿ ಮಾರುಕಟ್ಟೆಯಲ್ಲಿ ಒಳ್ಳೆ ಹೆಸರು ಮಾಡಿತ್ತು. ಪ್ರಾರ್ಥನ ಪ್ರೈವೇಟ್ ಶಾಲೆಯಲ್ಲಿ ಡಾನ್ಸ್ ಟೀಚರ್ ಆಗಿ ಕೆಲ್ಸ ಮಾಡ್ತಿದ್ಲು. ಬಿ.ಕಾಂ ಓದಿದ್ರು ಆ ದಾರಿಯಲ್ಲಿ ಸಿಗೋ ಕೆಲ್ಸದಲ್ಲಿ ಅವಳಿಗೆ ಆಸಕ್ತಿಯಿರಲಿಲ್ಲ.

ಸಣ್ಣ ವಯಸ್ಸಿನಿಂದ ಕಲಿತ ಶಾಸ್ತ್ರೀಯ ನೃತ್ಯ ಇಂದು ಅವಳ ವೃತ್ತಿಯಾಗಿ ಕೈಹಿಡಿದಿತ್ತು.  ಇಬ್ಬರೂ ತಮ್ಮ ತಮ್ಮ ಕೆಲ್ಸಗಳ ಬಗ್ಗೆ ಮಾತನಾಡಿಕೊಂಡರು. ಟೇಬಲ್ ಮೇಲೆ ವೈಟರ್ ತಂದಿಟ್ಟ ಬಿಲ್ ಅನ್ನು ಪ್ರಾರ್ಥನಾ ತೆಗೆದುಕೊಂಡಾಗ ಆಕಾಶ್ ಅದನ್ನ ಕಸಿದುಕೊಳ್ಳೋಕೆ ಬಂದ. ಇಬ್ರೂ ತಾವು ಬಿಲ್ ಕೊಡ್ತೀವಿ ಅಂತ ವಾದ ಆಗಿ ಕೊನೆಗೆ ಪ್ರಾರ್ಥನಾ ‘ಗಂಡು ಹೆಣ್ಣು ಸಮಾನರು, ನೀವೇ ಯಾಕೆ ಬಿಲ್ ಕೊಡಬೇಕು ಈ ಸಲ ನಾನು ಕೊಡ್ತೀನಿ’ ಅಂತ ಹೇಳಿದ್ದಕ್ಕೆ ಆಕಾಶ್ ಒಪ್ಪಿದನು.

‘ಸೋ.. ಮುಂದಿನ ಹತ್ತು ವರ್ಷದಲ್ಲಿ ನಿಮ್ಮನ್ನ ನೀವು ಎಲ್ಲಿ ನೋಡ್ಕೊಳ್ಳೋಕೆ ಇಷ್ಟ ಪಡ್ತೀರಿ?’ ಆಕಾಶ್ ಕೇಳಿದ ಪ್ರಶ್ನೆಗೆ ಪ್ರಾರ್ಥನ ಉತ್ತರ ಯೋಚಿಸತೊಡಗಿದಳು. ಶರತ್ ಸಿಎ ಮುಗಿಸೋಕೆ ಇನ್ನೊಂದ್ ನಾಲ್ಕು ವರ್ಷ, ಅದು ಆಗ್ಲಿಲ್ಲ ಅಂದ್ರೆ ಈಗ ಇರೋ ಕೆಲ್ಸವೇ ಗತಿ. ಹೇಗೋ ಮನೆಯವ್ರನ್ನ ಒಪ್ಪಿಸಿ, ಮದ್ವೆ ಆಗ್ಬೇಕು. ನನ್ನ ಸ್ವಂತ ಡಾನ್ಸ್ ಕ್ಲಾಸ್ ತೆರೀಬೇಕು, ಶರತ್ ನ ತಂದೆ ತಗೊಂಡಿರೋ ಹೌಸಿಂಗ್ ಲೋನ್ ಇಎಮ್ಐ ಕಟ್ಟಿ, ಮನೆ ನಡೆಸೋಕೆ ಅವನ ಸಂಬಳ ಸಾಕಾಗಿರುತ್ತದೆ, ಇನ್ನು ನನ್ನ ಸಂಬಳದಲ್ಲಿ ಡಾನ್ಸ್ ಕ್ಲಾಸ್ ಗೆ ಹಣ ಜೋಡಿಸೋದು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯ ಹಾಗೆ, ಹತ್ತು ವರ್ಷದಲ್ಲಿ ಮದುವೆ, ಮಗು ಮಾಡಿಕೊಂಡು ಈಗ ಇರೋಕಿಂತ ಹೆಚ್ಚಿನ ಜವಾಬ್ದಾರಿ ಇರೋ ಪರಿಸ್ಥಿತಿಯಲ್ಲಿ ಸಿಲುಕಿರುತ್ತೇನೆ! ಆಗಷ್ಟೇ ಸಿಕ್ಕ ಉತ್ತರ ಇನ್ನೊಬ್ಬರಿಗೆ ಹೇಳಿಕೊಳ್ಳುವಂಥ ದೊಡ್ಡ ಕನಸಲ್ಲ ಅನ್ನಿಸಿತು.

‘ಏನ್ ಇವ್ನು ಇಂಟರ್ವ್ಯೂ ನಲ್ಲಿ ಎಚ್ಆರ್ ತರ ಪ್ರಶ್ನೆ ಕೇಳ್ತಿದ್ದಾನೆ ಅಂತ ಬೈಕೋಬೇಡಿ, ನೀವು ಉತ್ರ ಕೊಡ್ಲೇಬೇಕು ಅಂತಿಲ್ಲ’. ಯೋಚನಾ ಲಹರಿಯಲ್ಲಿ ಕಳೆದುಹೋಗಿದ್ದ ಪ್ರಾರ್ಥನಾಳನ್ನ ಆಕಾಶ್ ಎಚ್ಚರಿಸಿದ. ‘ನನ್ ಬಗ್ಗೆ ಹೇಳೋದಾದ್ರೆ, ನಂಗೆ ಇನ್ನು ಹತ್ತು ವರ್ಷದಲ್ಲಿ ರಿಟೈರ್ ಆಗ್ಬೇಕು ಅಂತಿದೆ’. ಪ್ರಾರ್ಥನ ಆಶ್ಚರ್ಯದಿಂದ ನೋಡಿದಳು. ‘ಅಂದ್ರೆ ಜೀವನಕ್ಕಾಗೋಷ್ಟು ಸಂಪಾದನೆ ಮಾಡಿಕೊಂಡು ನನ್ ಲೈಫ಼್ ಪಾರ್ಟ್ನರ್ ಜೊತೆ ಬೇರೆ ಬೇರೆ ದೇಶ ಸುತ್ತುತ್ತಾ ಕಳೀಬೇಕು ಅಂತಿದ್ದೀನಿ.

ಅರವತ್ತರ ತನಕ ಕತ್ತೆ ಹಾಗೆ ದುಡಿದು, ಆಮೇಲೆ ಆರೋಗ್ಯ ಕೆಟ್ಟು ದಿನಗಳನ್ನ ಎಣಿಸೋಕೆ ಇಷ್ಟ ಇಲ್ಲ’. ಆಕಾಶ್ ತುಂಬಾ ಸಲೀಸಾಗಿ ಹೇಳಿದಾಗ ಅವನ ಹಾಗೆ ದೊಡ್ಡ ಕನಸನ್ನ ಕಾಣೋಕೆ ನನಗೆ ಸಾಧ್ಯವಿದೆಯಾ ಅಂತ ಪ್ರಶ್ನಿಸಿಕೊಳ್ಳುತ್ತಾ ಕಾಫಿಯ ಕೊನೇ ಸಿಪ್ ಹೀರಿದಳು. ಆಕಾಶ್ – ‘ಅಮ್ಮ, ನಿಮ್ಮ ಪ್ರೊಫ಼ೈಲ್ ನೋಡಿದ್ದು, ಅವ್ರು ಜಾತಕಾನ ತುಂಬ ನಂಬ್ತಾರೆ, ನಮ್ಮಿಬ್ರು ಜಾತಕ ಮ್ಯಾಚ್ ಆಗಿದೆ ಅಂತ ತುಂಬಾ ಖುಶಿಯಾಗಿದ್ದಾರೆ, ನಾಳೆ ಅವ್ರ್ ಹುಟ್ಟಿದ್ ಹಬ್ಬಕ್ಕೆ ಏನಾದ್ರು ತಗೊಳ್ಳೋಣ ಅಂದ್ಕೊಂಡೆ. ನಿಮ್ಗೆ ಸಮಯ ಇದ್ರೆ ಬರ್ತೀರ ಮಾತಾಡ್ತಾ ಹೋಗೋಣ? ಹೆಂಗಸರ ಟೇಸ್ಟ್ ನಿಮ್ಗೆ ಗೊತ್ತಿರುತ್ತೆ?’. ಪ್ರಾರ್ಥನ ಒಪ್ಪಿಕೊಂಡಳು.

ಅವಿರತವಾಗಿ ಚಲಿಸೋ ಎಸ್ಕಲೇಟರ್ ನ ಯಾವ ಮೆಟ್ಟಿಲ ಮೇಲೆ ಕಾಲಿಡಲಿ ಅಂತ ಗೊತ್ತಾಗದೇ ಪ್ರಾರ್ಥನಾ ಗೊಂದಲದಲ್ಲಿ ನಿಂತಿದ್ದನ್ನ ನೋಡಿ ಆಕಾಶ್ ‘ಈಗ ಕಾಲಿಡಿ’ ಎಂದು ಅವಳ ಕೈ ಹಿಡಿದು ಜಾಗರೂಕನಾಗಿ ಮೆಟ್ಟಿಲು ಹತ್ತಿಸಿದ. ‘ಅದೆಷ್ಟೇ ಸಲ ಮಾಲ್ ಗೆ ಬಂದಿದ್ರೂ ಅದೇನೋ ಒಂಥರಾ ಭಯ’ ಅವನ ಮುಂದೆ ನಗೆಪಾಟಲಾದೆನೇನೋ ಅನ್ನೋ ಸಂಕೋಚದಲ್ಲಿ ಹೇಳಿದಳು. ‘ಅದು ಕಾಮನ್ ಬಿಡಿ ತುಂಬಾ ಜನಕ್ಕೆ ಹಾಗಾಗುತ್ತೆ’ ಆಕಾಶ್ ಮುಗುಳ್ನಕ್ಕ. 

ಸೀರೆ ಶೋರೂಮ್ ನಲ್ಲಿ ಪಾಶ್ಚಿಮಾತ್ಯ ಸಂಗೀತ ಸಣ್ಣದಾಗಿ ಕೇಳಿಸುತ್ತಿತ್ತು, ಅಲ್ಲಿನ ಕೆಲ್ಸಗಾರರು ಕಷ್ಟ ಪಟ್ಟು ಇಂಗ್ಲಿಷ್ ನಲ್ಲಿ ಮಾತನಾಡುತ್ತಾ ತಮ್ಮ ಗಿರಾಕಿಗಳನ್ನು ಓಲೈಸಿ ಜೇಬಿಗೆ ಕತ್ತರಿ ಹಾಕುತ್ತಿದ್ದರು. ಚಿಕ್ಕಪುಟ್ಟ ಅಂಗಡಿಗಳಲ್ಲಿ, ತರಕಾರಿ ಮಾರೋರ್ ಹತ್ರ ಐದ್ ಐದ್ ರುಪಾಯಿಗೂ ನಮ್ಮ ವಾಗ್ಚಾತುರ್ಯವನ್ನೆಲ್ಲಾ ಬಳಸಿ ಚೌಕಾಶಿ ಮಾಡೋರು ಮಾಲ್ ನಲ್ಲಿ ಹಾಕಿದ್ದಷ್ಟು ಬಿಲ್ಲಿಗೆ ನಿರಾಲೋಚನೆಯಿಂದ ಕಾರ್ಡ್ ಕೊಟ್ಟು ಹಣ ಪಾವತಿಸಿ ತಮ್ಮಶ್ರ‍ೀಮಂತಿಕೆಯ ಬಗ್ಗೆ ಹೆಮ್ಮೆಪಟ್ಟುಕೊಂಡಂತಿತ್ತು. ಶೋರೂಂಗಳನ್ನು ಸುತ್ತಿ ಪ್ರಾರ್ಥನಾ ಆಯ್ಕೆಯ ಅನುಸಾರವಾಗಿ ಅಮ್ಮನಿಗೆ ಒಂದು ರೇಶ್ಮೆ ಸೀರೆಯನ್ನು, ಅದಕ್ಕೆ ಹೊಂದುವಂಥ ಚಿನ್ನದ ನೆಕ್ಲೇಸ್ ಸೆಟ್ ಅನ್ನು ಆಕಾಶ್ ಖರೀದಿಸಿದ.

ಒಂದೇ ದಿನದಲ್ಲಿ ಒಂದೂವರೆ ಲಕ್ಷ ಹಣವನ್ನ ಗಿಫ಼್ಟ್ ಗಾಗಿ ಖರ್ಚ್ ಮಾಡಿದ್ದು ಪ್ರಾರ್ಥನಾಗೆ ದಂಗುಬಡಿಸಿತ್ತು. ‘ನಿಮ್ಗೂ ಏನಾದ್ರು ತಗೊಳ್ಳಿ’. ಆಕಾಶ್ ಹೇಳಿದಾಗ ಪ್ರಾರ್ಥನಾ ನಿರಾಕರಿಸಿದಳು. ‘ಏನ್ ಇಷ್ಟ ನಿಮ್ಗೆ ಹೇಳಿ, ಸಂಕೋಚಪಟ್ಟುಕೊಳ್ಳಬೇಡಿ’ ಬಲವಂತ ಮಾಡಿ ೧೪ ಸಾವಿರ ಮೌಲ್ಯದ ಎಂ.ಕೆ ಬ್ರಾಂಡಿನ ವಾಚ್ ಕೊಡಿಸಿದ. ಮಾಲ್ ನಲ್ಲಿ ವಿಂಡೋಶಾಪಿಂಗ್ ಅಲ್ಲದೇ ಒಂದು ದಿನ ನಿಜವಾಗಿಯೂ ಏನನ್ನಾದರೂ ಖರೀದಿ ಮಾಡ್ಬೇಕು ಅನ್ನೋ ಕನಸನ್ನ ಅವಳು ಕಾಣೋ ಮೊದಲೇ ಅದು ಸಾಕಾರಗೊಂಡಿತ್ತು.

‘ಎಷ್ಟೋ ಜನ ಫೋಟೋಗೆ ಅದ್ಯಾವ ಫಿಲ್ಟರ್ ಹಾಕ್ತಾರೋ ಗೊತ್ತಿಲ್ಲ ಸಿನಿಮಾ ಹೀರೋಯಿನ್ ಗಳಿಗಿಂತ ಚೆನ್ನಾಗಿ ಕಾಣ್ತಿರುತ್ತಾರೆ, ಎದ್ರಿಗೆ ನೋಡಿದ್ರೆ ಮಾತ್ರ ಗುರುತೇ ಹಿಡಿಯೋಕಾಗಲ್ಲ ನೀವ್ ಹಾಗಲ್ಲ ನೇರವಾಗಿ ನೋಡೋಕೆ ಇನ್ನೂ ಚೆನ್ನಾಗಿದ್ದೀರ. ಅದಕ್ಕಿಂತ ಹೆಚ್ಚಾಗಿ ನೀವು ಡಾನ್ಸರ್, ಪ್ರತಿಭಾವಂತೆ, ಮನ್ಸುಮಾಡಿದ್ರೆ ನಿಮ್ದೇ ಆದ ಡಾನ್ಸ್ ಕ್ಲಾಸ್ ಶುರುಮಾಡ್ಬೋದು. ನೀವು ಯೂಟ್ಯೂಬ್ ನಲ್ಲಿ ಹಾಕಿದ್ದ ಡಾನ್ಸ್ ವಿಡಿಯೋ ನೋಡಿದೆ. ಯು ಆರ್ ಟೂ ಗುಡ್’ ಆಕಾಶ್ ಮನಸಾರೆ ಅವಳನ್ನ ಮೆಚ್ಚಿಕೊಂಡಿದ್ದಕ್ಕೆ ಒಂದು ಕಡೆ ಖುಷಿಯಾಗುತ್ತಿದ್ದರೆ, ಇನ್ನೊಂದೆಡೆ ಆಕಾಶ್ ನ ಭೇಟಿಗಿಂತ ಮುನ್ನ ಪ್ರಾರ್ಥನಾ ತೆಗೆದುಕೊಂಡಿದ್ದ ನಿರ್ಧಾರ ದುರ್ಬಲವಾಗುತ್ತಿತ್ತು.

‘ಇವತ್ತಿನ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ತುಂಬಾ ಡಿಮ್ಯಾಂಡ್ ಕಣೇ, ಒಂದು ಡಿಗ್ರೀ, ರೂಪ ಇದ್ರೆ ಸಾಕು ಒಳ್ಳೇ ಮನೆತನ, ಹಣವಂತ ಹುಡುಗ ಸಿಗ್ತಾನೆ’ ಪ್ರಾರ್ಥನಾ ತಾಯಿ ಹೆಣ್ಣು ಹೆತ್ತ ಹಮ್ಮೆಯಲ್ಲಿ ಆಗಾಗ ಹೇಳುತ್ತಿದಳು. ಆದರೆ ಆಗ ಪ್ರಾರ್ಥನಾಳ ಸಮರ್ಥನೆಯೇ ಬೇರೆಯಾಗಿತ್ತು. ‘ಶರತ್ ನನ್ನ ತುಂಬಾ ಪ್ರೀತಿಸುತ್ತಾನೆ, ಅರ್ಥ ಮಾಡ್ಕೊಳ್ತಾನೆ, ನಾಲ್ಕು ವರ್ಷದಲ್ಲಿ ಒಂದು ದಿನವೂ ನನಗೆ ಬೇಜಾರು ಮಾಡಿಸಿಲ್ಲ, ಬದುಕಿಗೆ ಎಷ್ಟು ದುಡ್ಡು ಬೇಕು? ಅವನ ಜೊತೆ ಸಂತೋಷವಾಗಿರ್ತೀನಿ ಅಂತ ಅಮ್ಮನ ಮಾತನ್ನ ಮನಸ್ಸಿನಲ್ಲೇ ತೆಗೆದುಹಾಕಿದ್ದಳು. ಆದರೆ ಇಂದು, ಶರತ್ ಗಿಂತ ಎಲ್ಲ ವಿಷಯದಲ್ಲೂ ಉತ್ತಮನಾದ ಹುಡುಗ ನನ್ನನ್ನೊಪ್ಪಿ ಬಂದಿದ್ದಾನೆ ಅನ್ನೋದು ಎದುರಿಗಿದ್ದ ಸತ್ಯವಾದಾಗ ಮನಸ್ಸು ಎರಡು ನಿರ್ಧಾರಗಳ ನಡುವೆ ಉಯ್ಯಾಲೆಯಾಡಲು ಶುರುಮಾಡಿತು.

ಅಮ್ಮ ಹೇಳ್ತಿದ್ದು ಸತ್ಯ! ಆಕಾಶ್ ಒಂದು ಕಂಪನಿಯ ಒಡೆಯ, ಹೆಂಡತಿಯ ಜೊತೆ ಜಗತ್ತನ್ನೇ ನೋಡುವ ಕನಸು ಕಾಣ್ತಿದ್ದಾನೆ, ತಾಯಿಯನ್ನು ಪ್ರೀತಿಸ್ತಾನೆ, ಮೊದಲ ಉಡುಗೊರೆಯೇ ನನ್ನ ಒಂದು ತಿಂಗಳ ಸಂಬಳದಷ್ಟಿದೆ, ಎತ್ತರ, ರೂಪ ಎಲ್ಲಾ ಹೊಂದುತ್ತಿದೆ. ಕೇವಲ ನಾಲ್ಕು ವರ್ಷದ ಪ್ರೀತಿಗಾಗಿ ನನ್ನ ಜೀವನ ಉತ್ತಮವಾಗೋ ಅವಕಾಶವನ್ನ ಯಾಕೆ ತೊರೀಬೇಕು? ಬೆಳವಣಿಗೆಗೆ ಅಡ್ಡಿಯಾಗೋ ಪ್ರೀತಿ, ಪ್ರೀತೀನೇ ಅಲ್ಲ, ಅದು ನನ್ನ ತಪ್ಪು ಅನ್ನಿಸೋಕೆ ಶುರುವಾಯ್ತು. 

ಸಮರ್ಥನೆಗಳೇ ಹೀಗೆ ಅನುಕೂಲಕ್ಕೆ ತಕ್ಕಂತೆ ಒಗ್ಗಿಕೊಳ್ಳೋ ಉಭಯವಾಸಿಗಳ ಹಾಗೆ. ಮನುಷ್ಯ ಸಮರ್ಥನೆಗಳನ್ನು ಕೊಟ್ಟುಕೊಳ್ಳದೇ ಬದುಕಲಾರ. ಕಳ್ಳನೂ, ಕೊಲೆಗಾರನೂ ತನ್ನ ತಪ್ಪಿಗೆ ಬಲವಾದ ಕಾರಣವಿದೆ ಅಂದುಕೊಂಡಾಗಲೇ ನಿದ್ರೆ ಮಾಡಲು ಸಾಧ್ಯ.

‘ಎಲ್ಲಿದ್ದೀಯ ಮುದ್ದು? ಇಷ್ಟೊತ್ತಾಯ್ತು ಏನೂ ಮೆಸ್ಸೇಜ್ ಇಲ್ಲ? ನಂಗೆ ಟೆನ್ಶನ್ ಆಗ್ತಿದೆ..’ ಒಂದರ ಮೇಲೊಂದು ಬರುತ್ತಿದ್ದ ಶರತ್ ನ ಮೆಸ್ಸೇಜ್ ನೋಟ್ಟಿಫ಼ಿಕೇಶನ್ ನೋಡಿ ಸುಮ್ಮನಾದಳು. ಇನ್ನೊಂದು ಸ್ವಲ್ಪ ಹೊತ್ತಿನಲ್ಲಿ ಅವನು ಕಾಲ್ ಮಾಡಿದ, ಪ್ರಾರ್ಥನಾ ಫೋನ್ ಸೈಲೆಂಟ್ ಗೆ ಹಾಕಿದಳು.

‘ಜೀವನದಲ್ಲಿ ಹಣ ಮುಖ್ಯಾನಾ ಪ್ರೀತಿ ಮುಖ್ಯಾನಾ? ಆಕಾಶ್ ನ ಮದ್ವೆ ಆದ್ರೂ ಪ್ರೀತೀನ ಕಳ್ಕೊಳಲ್ವಲ್ಲ? ಶರತ್ ಸ್ವಲ್ಪ ದಿನ ಬೇಜಾರಾಗ್ತಾನೆ ಆಮೇಲ್ ಸರಿ ಹೋಗ್ತಾನೆ, ಜೀವ್ನ ಎಂಥಾ ನೋವನ್ನಾದ್ರೂ ಮರೆಸುತ್ತಲ್ವಾ? ಆಮೇಲೆ ನಾವು ಸ್ನೇಹಿತರಾಗಿರ್ಬೋದು, ಸಿನಿಮಾದಲ್ಲಾಗೋ ತರ ಭಗ್ನ ಪ್ರೇಮಿ ಯಾಕ್ ಆಗ್ಭೇಕು ಅವ್ನು? ನಾನು ಪ್ರಾಕ್ಟಿಕಲಾಲಿಟಿ ನ ಅರ್ಥ ಮಾಡಿಸ್ತೀನಿ ಅಂದುಕೊಂಡು ಹೋಗ್ತಿದ್ದವಳಿಗೆ ಮಾಲ್ ನ ಮೈಕ್ ಸದ್ದು ಗದ್ದಲ ಎಚ್ಚರಿಸಿತು. ಎಂಟ್ರೆನ್ಸ್ ನಲ್ಲಿ ಮಹಿಳಾ ದಿನಚರಣೆಯ ಪ್ರಯುಕ್ತ ಖಾಸಗಿ ಎಫ಼್ ಎಮ್ ಚಾನೆಲ್ ಅವ್ರು ಒಂದು ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಅದನ್ನು ನೋಡಲು ಹಲವರು ಸುತ್ತುಗಟ್ಟಿ ನಿಂತಿದ್ದರು.

‘ಮಹಿಳೆಯರು ಇಂದು ಆಟೋ ರಿಕ್ಷಾ ಓಡಿಸೋದ್ರಿಂದ ಹಿಡಿದು ಅಂತರಿಕ್ಷಕ್ಕೆ ಹೋಗೋದರ ತನಕ ಎಲ್ಲಾ ಕ್ಷೇತ್ರದಲ್ಲೂ ಕಾಲಿಟ್ಟಿದ್ದೇವೆ. ಆದರೆ ನಮ್ಗೆ ಸಮನಾದ ಹಕ್ಕು, ಅವಕಾಶ ಮತ್ತು ಸಂಬಳ ಸಿಗುತ್ತಿಲ್ಲ’ ಅನ್ನೋದು ಅಲ್ಲಿ ಮಾತಾಡಿದ ಮಹಿಳೆಯರ ವಾದವಾಗಿತ್ತು.  ಗುಂಪಲ್ಲಿ ನಿಂತಿದ್ದ ಆಕಾಶ್ ಮತ್ತು ಪ್ರಾರ್ಥನಾ ಹತ್ತಿರ ಬಂದ ಆಂಕರ್ ಮೈಕ್ ಹಿಡಿದು ಅವರನ್ನು ಪರಿಚಯ ಮಾಡಿಕೊಂಡು ‘ನೀವು ಫ಼ೆಮಿನಿಸ್ಟಾ?’ ಎಂದು ಕೇಳಿದಾಗ ಪ್ರಾರ್ಥನಾ ತಬ್ಬಿಬ್ಬಾದಳು. ಮಹಿಳೆಯರು ಮೇಲ್ಗೈ ಸಾಧಿಸಬೇಕು ಅನ್ನೋದರ ಬಗ್ಗೆ ಕಾಲೇಜಿನಲ್ಲಿ ಅವಳು ತುಂಬಾ ಸಲ ಮಾತನಾಡಿದ್ದಳು. ನೃತ್ಯ ಕಲಿಸುವ ಶಾಲೆಯಲ್ಲೂ ತನ್ನಷ್ಟೇ ಅನುಭವರಿರೋ ಶಿಕ್ಷಕರಿಗೆ ತನಗಿಂತಾ ಹೆಚ್ಚಿನ ಸಂಬಳ ಕೊಟ್ಟಿದ್ದಕ್ಕೆ ಮ್ಯಾನೇಜ್ಮೆಂಟ್ ನ ಪ್ರಶ್ನೆ ಮಾಡಿದ್ದಳು. ಆದರೆ ಇವತ್ತೇಕೋ ಮೌನಮುರಿಯಲು ಕಷ್ಟವಾಯಿತು.

‘ಇವ್ರು ಫ಼ೆಮಿನಿಸ್ಟ್ ಹೌದೋ ಇಲ್ವೋ ಗೊತ್ತಿಲ್ಲ ಆದ್ರೆ ಸಮಾನತೆಯ ಬಗ್ಗೆ ಖಂಡಿತ ನಂಬಿಕೆ ಇರೋರು. ಒಂದು ಕಾಫಿ ಬಿಲ್ ನ ಕೊಡೋಕೆ ಬಿಡ್ಲಿಲ್ಲ’ ಆಕಾಶ್ ಅಭಿಮಾನದಿಂದ ಹೇಳಿದ. ಕಾಫಿ ಬಿಲ್ ನಾನೇ ಕೊಡ್ಬೇಕು ಅಂತಿದ್ದವಳು ಅವನಿಂದ ಉಡುಗೊರೆ ಪಡೆದ ನಂತರ ಅವನ ಅಂತಸ್ತಿನ ಮೇಲೆ ಅವಲಂಬಿತಳಾಗಿ, ಬದುಕಿನ ದಾರಿಯನ್ನ ಬದಲಾಯಿಸಿಕೊಳ್ಳೋ ನಿರ್ಧಾರ ಮಾಡಿದ್ದು ಅವನಿಗಿನ್ನೂ ತಿಳಿದಿರಲಿಲ್ಲ.

ಆಕಾಶ್ ನ ಮಾತಿನಿಂದ ಪ್ರೇರಿತಳಾಗಿ ಆಂಕರ್ ಪ್ರಶ್ನೆಯನ್ನು ಮುಂದುವರೆಸಿದಳು ‘ಎಲ್ಲದರಲ್ಲೂ ಸಮಾನತೆಯನ್ನ ಹುಡುಕೋ ಹೆಣ್ಣುಮಕ್ಕಳು ತಮ್ಮ ಸಂಗಾತಿ ಮಾತ್ರ ನನಗಿಂತಾ ಹೆಚ್ಚು ಓದಿರ್ಬೇಕು, ನನಗಿಂತಾ ಹೆಚ್ಚು ಸಂಬಳ ಪಡೀಬೇಕು ಅಂತ ಬಯಸೋದು ಮಹಿಳಾವಾದ ಆಗುತ್ತಾ? ಅದು ಬೂಟಾಟಿಕೆ ಆಗಲ್ಲವೇ’? ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು?. ಆ ಪ್ರಶ್ನೆಗಳು ಒಂದು ಸಲ ಅವಳನ್ನ ಸ್ಥಬ್ದ ಮಾಡಿತು. ಇಡೀ ಕಾರ್ಯಕ್ರಮ ನನ್ನನ್ನು ಛೇಡಿಸಲು ಹಮ್ಮಿಕೊಂಡಂತಿದೆ ಅನ್ನಿಸಿ ಅವಮಾನವಾಯಿತು. ಸ್ವಂತ ಡಾನ್ಸ್ ಕ್ಲಾಸ್ ಶುರುಮಾಡ್ಬೇಕು ಅನ್ನೋ ಸ್ವಾವಲಂಬಿ, ತನ್ನ ಪ್ರೀತಿಯನ್ನು ಬಿಟ್ಟುಕೊಟ್ಟು ಇನ್ನೊಬ್ಬರ ಸಂಪಾದನೆಯಲ್ಲಿ ಸಂತೋಷವನ್ನ ಹುಡುಕಬೇಕೇ ಅನ್ನೋ ಜಿಜ್ಞಾಸೆಯಲ್ಲಿ ಬಿದ್ದಳು.

‘ಹೆಣ್ಣಾಗಲೀ ಗಂಡಾಗಲೀ, ಸ್ವಪ್ರಯತ್ನದ ಮೇಲೆ ವಿಶ್ವಾಸವುಳ್ಳವರು ತಮ್ಮ ಸಂಗಾತಿಯ ಸ್ಥಾನಮಾನಗಳ ಮೇಲೆ ಅವಲಂಬಿತರಾಗಿರೋದಿಲ್ಲ’ ಪ್ರಾರ್ಥನಾ ಎಲ್ಲರ ಮುಂದೆ ತನಗೆ ತಾನೇ ಹೇಳಿಕೊಂಡಿದ್ದು ಜನರ ಚಪ್ಪಾಳೆಯನ್ನೂ ಗಿಟ್ಟಿಸಿಕೊಟ್ಟಿತ್ತು. ಸರಿಯಾದ ಆಯ್ಕೆ ಎಂದಿಗೂ ಸುಲಭವಾಗಿರೋದಿಲ್ಲ. ಮಾಲ್ ನ ವೈಭವವನ್ನ ನೋಡಿ ಮರುಳಾದಂತೆ ಆಕಾಶನನ್ನ ಭೇಟಿ ಮಾಡಿ ನನ್ನ ಯೋಚನೆಯೂ ಕುರುಡಾದದ್ದು ಅರಿವಾಯಿತು.

‘ನೀವು ನಂಗೆ ಇಷ್ಟ ಆದ್ರಿ, ನನ್ ಬಗ್ಗೆ ಏನನಿಸುತ್ತೆ ಅಂತ ನೀವು ಆಮೇಲೆ ತಿಳಿಸ್ಬೋದು.’ ಆಕಾಶ್ ತನ್ನ ಅಭಿಪ್ರಾಯವನ್ನು ಹೇಳಿ ಅವಳನ್ನು ಮನೆಗೆ ಡ್ರಾಪ್ ಮಾಡುತ್ತೇನೆಂದ. ಕಳೆದ ಕೆಲವು ಗಂಟೆಗಳಲ್ಲಿ ತನ್ನ ಜೀವನದ ಎಷ್ಟೋ ಪ್ರಶ್ನೆಗಳಿಗೆ ಉತ್ತರ ಹುಡುಕಿಕೊಟ್ಟವನಿಗೆ  ಸತ್ಯ ಹೇಳದೇ ಇರೋದು ಪ್ರಾರ್ಥನಾಗೆ ಸರಿಕಾಣಲಿಲ್ಲ. ‘ನಾನೀಗ ಮನೆಗೆ ಹೋಗುತ್ತಿಲ್ಲ. ನಾನು ಪ್ರೀತಿಸುತ್ತಿರೋನನ್ನ ಭೇಟಿ ಆಗ್ತಿದ್ದೀನಿ. ಕ್ಷಮಿಸಿ ಅವರ ಬಗ್ಗೆ ಹೇಳಲಿಲ್ಲ. ಅಮ್ಮನ ಒತ್ತಾಯ್ತಕ್ಕೆ ನಿಮ್ಮನ್ನ ಭೇಟಿ ಆಗೋಕೆ ಬಂದೆ. ಉತ್ತರಕ್ಕಾಗಿ ನಿಮ್ಮನ್ನ ಕಾಯಿಸೋಕೆ ಇಷ್ಟ ಇಲ್ಲ’ ಪ್ರಾರ್ಥನಾ ತಪ್ಪಿತಸ್ಥೆಯ ದನಿಯಲ್ಲಿ ಹೇಳಿ ವಾಚ್ ಅನ್ನು ಹಿಂದಿರುಗಿಸಿದಳು.

ಒಂದು ಕ್ಷಣ ಅವಳನ್ನೇ ದಿಟ್ಟಿಸಿದ ಆಕಾಶ್ ‘ಇಷ್ಟುಹೊತ್ತು ನಿಮ್ಮ ಸ್ವಾಭಿಮಾನ ಮಾತ್ರ ನಂಗೆ ಇಷ್ಟ ಆಗಿತ್ತು, ಈಗ ನಿಮ್ಮ ಪ್ರಾಮಾಣಿಕತೆಯೂ ಇಷ್ಟವಾಯಿತು. ನಿಮ್ಮ ಡಾನ್ಸ್ ನ ಅಭಿಮಾನಿ ಕೊಟ್ಟಿದ್ದು ಅಂತ ಇಟ್ಟುಕೊಳ್ರೀ’ ನಗುತ್ತಾ ವಾಚ್ ಅನ್ನು ಅವಳ ಕೈಗಿತ್ತನು.

‍ಲೇಖಕರು Avadhi

18 June, 2021

25 Comments

  1. Usha

    ನಮಸ್ಕಾರ ನಮ್ಮ ಉದಯೋನ್ಮಖ ಕಥೆಗಾರ್ತಿಗೆ,
    ರಂಜನಿ ರಾಘವನ್ ಬರಿ ಒಂದು ಹೆಸರಲ್ಲ ನನಗೆ, ನೀವು ಒಪ್ಪುತ್ತೀರಾ ಎಂದೂ ಭಾವಿಸಿ ನಿಮ್ಮ ಬಗ್ಗೆ ನನಗಿರುವ ಅಭಿಮಾನ ಪ್ರೀತಿ ಅನ್ನು ಹೀಗೆ ತಲುಪಿಸುವ ನಿಟ್ಟಿನಲ್ಲಿ ಈ ಸಂದೇಶವನ್ನು ಕಳುಹಿಸುತ್ತಿದ್ದೇನೆ, ನಾನು ನಿಮ್ಮನ್ನು ನೋಡಿದ ಮೊದಲ ಧಾರಾವಾಹಿ ಆಕಾಶದೀಪ, ಆ ತಂಗಿಯ ಪಾತ್ರ ನನಗೆ ಮೆಚ್ಚುಗೆ ಆಗಿತ್ತು,
    ತದನತರದಲ್ಲಿ ಪುಟ್ಟು ಗೌರಿ ಮದುವೆ ಧಾರಾವಾಹಿ ನಿಮ್ಮ ಅಭಿನಯ ನಿಮ್ಮ ಕನ್ನಡ ಪದಗಳ ಉಚ್ಚಾರಣೆ ನನ್ನನ್ನ ನಿಮ್ಮ ಅಭಿಮಾನಿಯನ್ನಗಿಸಿದೆ, ನಂತರ ನಿಮ್ಮ ರಾಜಹಂಸ ಸಿನಿಮಾದಲ್ಲಿನ ಪರಿಪೂರ್ಣ ಅಭಿನಯಕ್ಕೆ ನನ್ನ ಕೋಟಿ ಮೆಚ್ಚುಗೆ ಇದೆ, ನಿಮ್ಮ ಇಷ್ಟ ದೇವತೆ ಧಾರಾವಾಹಿ ಅದ್ಯಾವ ಕಾರಣದಿಂದ ಪ್ರಸಾರವಾಗಲಿಲ್ಲ ಎಂಬುದು ನನ್ನ ಯಕ್ಷ ಪ್ರಶ್ನೆ, ನಂತರ ಕನ್ನಡತಿಯಾಗಿ ನಿಮ್ಮ ಅಭಿಮಾನಿಗಳಿಗಾಗಿ ಹಾಗೂ ಕೋಟ್ಯಂತರ ಕನ್ನಡಿಗರಿಗೆ ಹೆಮ್ಮೆಯ ಕನ್ನಡತಿ ಆದ್ರಿ, ಈಗ ನಿಮ್ಮೊಳಗಿನ ಲೇಖಕಿಯನ್ನು ಪರಿಚಯ ಮಾಡಿಸಿದ್ದಿರಿ ಇದಕ್ಕಾಗಿ ಅವದಿಗೆ ನಮ್ಮದೊಂದು ಚಪ್ಪಾಳೆ , ನಿಮ್ಮ ಎರಡು ಕಥೆಗಳು ನಂಗೆ ತುಂಬಾ ಮೆಚ್ಚುಗೆಯಾದವು, ಸಂದ್ಯ ಕಾರ್ತಿಕ ಹಾಗೂ ತಿಮ್ಮೇಶ್ ಸ್ಪಂದನ ಪಾತ್ರಗಳು ಕಣ್ಣಮುಂದೆ ಬಂದಂತ್ತಾಗಿದೆ ಅಷ್ಟ್ಟು ಅಚ್ಚುಕಟ್ಟಾಗಿ ಕತೆಯನ್ನು ಕಟ್ಟುಕೊಟ್ಟಿದ್ದಿರಿ ಹೀಗೆ ಮುಂದುವರಿಸಿ ನಿಮ್ಮ ಹೆಸರು ಭವ್ಯವಾಗಿ ಈಡೀ ಪ್ರಪಂಚದಲ್ಲಿ ಬೆಳಗಲಿ ನಿಮ್ಮ ಭವಿಷ್ಯಕೆ ಶುಭವಾಗಲಿ.

    (ಪದಗಳಲ್ಲಿ ತಪ್ಪಿದ್ದಲ್ಲಿ ಕ್ಷಮಿಸಿ)(ಒಮ್ಮೆ ನಿಮ್ಮೊಂದಿಗೆ ಮಾತನಾಡುವ ಬಯಕೆ ಇದೆ ನೋಡೋಣ ಋಣ ವಿದ್ದರೆ ಮುಂದೆ)

    ನಿಮ್ಮ ಪ್ರೀತಿಯ ಅಭಿಮಾನಿ.
    ಉಷಾ ವೆಂಕಟರಾಮ್,

    • ಸವಿತಾ ಎಸ್ ಪಿ

      ಅಬ್ಬಾ…! ಏನೆಲ್ಲಾ ಅಡಗಿದೆ ಈ ಕತೆಯಲ್ಲಿ. ಸ್ವಾಭಿಮಾನ, ಸ್ವಾವಲಂಬನೆ,ಪ್ರಾಮಾಣಿಕತೆ, ಪ್ರೀತಿ, ಮದುವೆ ಎಲ್ಲಾ….!! ತುಂಬಾ ಇಷ್ಟವಾಯಿತು. ಹೀಗೇ ಬರೆಯುತ್ತಿರಿ.

      • ಸುಶೀಲ

        ತುಂಬಾ ಚೆನ್ನಾಗಿದೆ ಮದ್ಯಮ ವರ್ಗದ ಜನರ ವಾಸ್ತವ ಸ್ಥಿತಿ ಅರಿತು ಮುಂದುವರಿದರೆ ಒಳ್ಳೆಯದು ಎಂಬ ಭಾವನೆ ಬರುತ್ತದೆ
        ದೇವರು ಒಳ್ಳೆಯದು ಮಾಡಲಿ ಶುಭ ಹಾರೈಕೆ ಶುಭವಾಗಲಿ

        • Muragesh

          Beautiful story bhuvi akka

  2. km vasundhara

    ತುಂಬಾ ಚೆನ್ನಾಗಿದೆ

    • ಮಂಜುನಾಥ.ಡಿ

      ಭುವಿ…. ತುಂಬಾ ಚೆನ್ನಾಗಿದೆ ನಿಮ್ಮ ಬರಹ
      ಪ್ರಸ್ತುತ ದಿನಗಳಲ್ಲಿ ಯುವ ಜನತೆಯ ಪರಿಸ್ಥಿತಿ. ಅವರು ಎದುರಿಸುವ ಮನೆಯವರ ಒತ್ತಾಯ.. ನಿರ್ಧಾರ ಗಳು. ಈ ಸಂದರ್ಭದಲ್ಲಿ ಪ್ರಾಮಾಣಿಕತೆಯಿಂದ ಇರಬೇಕೇ.. ಪರಿಸ್ಥಿತಿ ನಿಭಾಯಿಸ ಬೇಕೇ.. ಎಂಬ ಎಲ್ಲಾ ಪ್ರಶ್ನೆಗಳಿಗೂ ಉತ್ತರದಂತಿದೆ ನಿಮ್ಮ ಬರಹ… ಮನುಷ್ಯನಿಗೆ ಬದುಕಿನಲ್ಲಿ ಸ್ವಾಭಿಮಾನ ಸ್ವಪ್ರಯತ್ನ ಬಹಳ ಮುಖ್ಯ ಎಂಬ ಸಾಲುಗಳು ಎಲ್ಲರಿಗೂ ಸ್ಪೂರ್ತಿ ನೀಡುವಂತಿವೆ…
      ಕಳ್ಳನೂ. ಕೊಲೆಗಾರನೂ ತನ್ನ ತಪ್ಪಿಗೆ ಬಲವಾದ ಕಾರಣಇದೆ ಅಂದುಕೊಂಡಾಗಲೇ ಮಾತ್ರ ನಿದ್ರೆ ಮಾಡಲು ಸಾಧ್ಯ ಈ ಸಾಲು ಏಕೋ ತುಂಬಾ ಹಿಡಿಸಿತು..
      ಧನ್ಯವಾದಗಳು ನಿಮ್ಮ ಈ ಬರಹಕ್ಕೆ ❤

      • ಅಂಬಾದೇವಿ

        ಮಧ್ಯಮ ವರ್ಗದ ನಮಂತ ಹುಡುಗಿಯರ ಜೀವನಕೆ ನಿಮ್ಮ ಕತೆ ಕನ್ನಡಿಯಾಗಿದೆ ತುಂಬಾ ಸುಂದರವಾದ ಕತೆ.ಬಹಹಳಟು ಹುಡುಗಿಯರ ಜೀವನದಲಿ ಬಂದ ಸಂದರ್ಭಗಳು, ಓದುತಾ ಓದುತಾ ನಮ್ಮ ಆ ಕತೆಯೇ ನಮ್ಮ ಜೀವನವೇನೋ ಅನುವರೀತಿ ನಿಮ್ಮ ಕತೆ ಇದೆ

        • RiyazAemhad

          ನಿಮ್ಮ ಬರಹಗಳು ಮುಂದೆ ನಾನು ಚಿರಋಣಿ
          ಮೇಡಂ ನೀವು ಅಂದರೆ ನಮ್ಮ ಮನೆಯವರಿಗೆ ತುಂಬಾ ಇಷ್ಟ ನಿಮ್ಮ ಕನ್ನಡತಿ ಧಾರಾವಾಹಿ ಯಲ್ಲಿ ಕನ್ನಡದ ಬಗ್ಗೆ ಇರುವ ಗೌರವ ಮತ್ತು ಅಭಿಮಾನ ನಿಜಕ್ಕೂ ಸೂಪರ್ ಮೇಡಂ ನಿಮ್ಮ ಪ್ರತಿ ಒಂದು ಮಾತುಗಳಲ್ಲಿ ಸತ್ಯ ಇದೇ ಮೇಡಂ ಸೂಪರ್ ಮೇಡಂ

  3. Jyothi Dhananjay

    Nice

  4. Shwetha S P

    ಹಿಂದಿನ ಕಾಲಕ್ಕು ಈಗಿನ ಕಾಲಕ್ಕೂ ಪ್ರೀತಿಸಿ ಮದ್ವೇ ಆಗ್ಬೇಕು ಅನ್ನೋ ಪ್ರೇಮಿಗಳ ಪರಿಸ್ಥಿತಿ ನಿಮ್ಮ ಕಥೆಯಲ್ಲಿ ಅನಾವರಣ ಮಾಡಿದ್ದೀರ. ಹುಡುಗ ಅಥವಾ ಹುಡುಗಿ ಆಗ್ಲಿ ತನ್ನ ಸಂಗಾತಿಯ ಕೆಲಸ, ಆಸ್ತಿ ಹಾಗೂ ಅಂತಸ್ತು ನೋಡಿ ಮದ್ವೇ ಆಗೋ ಮುಂಚೆ ಮುಂದೆ ಒಂದು ದಿನ ಅದೇನು ಇಲ್ಲ ಅಂದ್ರೂ ಅವರ ಜೊತೆ ಸಂತೋಷವಾಗಿ ಜೀವನ ನೆಡಿಸ್ತಿನ ಅನ್ನೋ ಪ್ರಶ್ನೆ ಉತ್ತರ ಹುಡುಕೋದು ಒಳ್ಳೆದು.

  5. Jyoti

    Hi madam, ನನಗೆ ಈ ಕಥೆ ತುಂಬಾ ಇಷ್ಟ ಆಯ್ತು. ಸ್ವಾಭಿಮಾನದಿಂದ ಬದುಕಬೇಕು ಅಂತಾ ಅನ್ನೋಕೊಂಡಿರೋ ಹೆಣ್ಣುಮಕ್ಕಳು ಯಾವುದು ಒಂದು ಸಮಯದಲ್ಲಿ, secure life ಹುಡುಕುತ್ತ ತಮ್ಮ ನಿರ್ಧಾರ ಬದಲಿಸಿಕೊಳ್ಳುವ ಅಂತಾ ಸಂದರ್ಭದಲ್ಲಿ, ಸ್ವಾಭಿಮಾನ ಬಿಡಬಾರದು ಅಂತಾ ಈ ಕಥೆ ಒತ್ತಿ ಹೇಳತಾ ಇದೆ. ಈ ಕಥೆಗೂ ನನ್ನ ಜೀವನಕ್ಕೂ ತುಂಬಾ ಸಾಮ್ಯತೆ ಇದೆ. ಧನ್ಯವಾದಗಳು mam. ಹೀಗೆ ಬರೀತಾ ಇರಿ, ಎತ್ತರಕ್ಕೆ ಬೆಳೆಯಿರಿ.

  6. Rishika

    Hiii tumba chanagide hige munduvaresi,akash prarthana naduvin sambashne super agitu, prathanage ada jivanada arivu tumba olleyadu, sharat ge ada tension nanage agatide anastitu all the best hige mundu varesi.

  7. Iampriyapriyaa

    ಅಕ್ಕ ನೀವು ಬರೆದಿರುವ ಕತೆಯು ತುಂಬ ಸೊಗಸಾಗಿದೆ ನಂಗೆ ಇಷ್ಟ ಆಯ್ತು ಯಾವಾಗಲೂ ಕತೆ ಬರಿದು ಕನ್ನಡ ಎಂಬ ಅಭಿಮಾನವನ್ನು ಇನ್ನು ಹೆಚ್ಚಿಸುವಿರ ತುಂಬಾ ಧನ್ಯವಾದಗಳು ❤️❤️

    • Aparna

      Nice storyline

  8. Niveditha H K

    This is best story for youth… actually ನಾನು ನಿಮ್ಮ ಹಾಗೇನೆ ಇದೀನಿ ನೋಡೋದಕ್ಕೆ ಅಂತ ನಮ್ಮ ಊರಲ್ಲಿ ಮತ್ತೆ ನಮ್ಮ relations ತುಂಬಾ ಜನ ಹೇಳ್ತಾರೆ.. ನಿಜ ಹೇಳ್ಬೇಕು ಅಂದ್ರೆ ನೀವು ಬರೆದಿರೋ ಕಥೆ ನನ್ನ ಜೀವನ ಕಥೆ ಆಗಿದೆ.. 3 yrs back I’m in final degree of b.com ೫th semester same situation me also facing finally I chose my happiness(love) bt still I’m not marry waiting for my lover getting a job reach his destiny.. ಎಲ್ಲರೂ ಶ್ರೀಮಂತಿಕೆ ದುಡ್ಡು ಸಂಪಾದನೆ ನೋಡಿ ಮದುವೆ ಆಗೋದಕ್ಕೆ or ತಮ್ಮ ಮಕ್ಕಳ ಮದುವೆ ಮಾಡಿಸುವ ಆಲೋಚನೆಯಲ್ಲಿ ಇರ್ತಾರೆ… Infact ಪ್ರೀತಿನು ಸಹ ಶ್ರೀಮಂತಿಕೆ ನೋಡಿನೆ ಮಾಡ್ತಾರೆ…. ನಿಜ ಕಣ್ಣಲಿ ನೀರು ತರ್ಸುದ್ರಿ ಒಂದ್ ಕ್ಷಣ 3 ವರ್ಷದ ಹಿಂದೆ ಆಗಿದೆಲ್ಲಾ ನೆನಪಾಯ್ತು… Bt ನಮ್ದು 4 ವರ್ಷ ಅಲ್ಲಾ next Feburary 22ಗೆ 10yrs complete ಆಗುತ್ತೆ.. So now I’m also completed my m.com and he is also prepared well for police exam’s hopefully next year we are marry with a get a parents permission…. ನಿಮ್ಮ ಕಥೆಗಳು ಹಿಂಗೆ ಒಳ್ಳೆ ಒಳ್ಳೆ ನೈಜತೆಯನ್ನು ಹೊಂದಿರಲ್ಲಿ wish you good luck to ur story writing journey…

    • Mamatha

      ನಿಮ್ಮ ಕಥೆ ತುಂಬಾ ಚೆನ್ನಾಗಿದೆ. ಹೆಣ್ಣುಮಕ್ಕಳ ಸ್ವಾಭಿ ಮಾನದ ಬಗ್ಗೆ. ಹೀಗೆ ಒಳ್ಳೆ ಕಥೆ ಬರಿತಾ ಇರಿ .

  9. Vijay kamble

    ನಮಸ್ಕಾರ ಮೇಡಮ್ ಕಥೆ ಚೆನ್ನಾಗಿದೆ ಹಾಗೂ ಕೂತುಹಲ ಕಾರಿ ಆಗಿದೆ ಪ್ರಾರ್ಥನಾ ಆಕಾಶನ ಸುಖ ವೈಭವಕ್ಕೆ ಮರುಳಾಗದೆ ಕಳೆದ ನಾಲ್ಕು ವರ್ಷಗಳಿಂದ ತನ್ನ ನು
    ಪ್ರೀತಿಸುವ ಶರತನ ಬಗ್ಗೆ ಒಲವು ವ್ಯಕ್ತಪಡಿಸಿದ್ದು ಇಷ್ಟ ವಾಯಿತು.

  10. Preethi

    Interesting story

  11. Ashwini Baragali

    ನಿಜವಾಗಿಯೂ ಕತರೆಯ. ಕೊನೆಯವರೆಗೂ ಆಸಕ್ತಿ ಕೆರಳಿಸಿದ ಕಥೆ…‌ಯುವ ಪ್ರೇಮಿಗಳ ಮನಮುಟ್ಟುವಂತಿದೆ… ಸದ್ಯದ ಜಗತ್ತಿನಲ್ಲಿ ಇಂಥ ಪ್ರೇಮಿಗಳ ಹುಡುಕುವದು ಕಷ್ಟ… ತುಂಬಾ ಚೆನ್ನಾಗಿ ಮೂಡಿ ಬಂದಿದೆ ಕಥೆ…

  12. Shivaprasad T.S

    Tumba chennagide. Madam Nimda kannada nanage thumbane ista. Keep writing. Very good hold in writing short stories
    Shivaprasad

    • Srinivas

      Thumba chennagide

    • Tejaswinipraveen

      Madam nimma kathe tumba channagi idde kannadavannu innu hecchu hecchu odo ase ago hage bartira hige nivu Kate baritane iri madam all the best……

  13. Nikhil B

    ನಮಸ್ಕಾರ ರಂಜನಿ ಅಕ್ಕಾ.
    ನಿಮ್ಮ ಕಥೆ ಅಂತೂ ಅದ್ಭುತ. ನೀವು ಬರೆದಿರುವ ಈ ಕಥೆಯಲ್ಲಿ ಬರುವ ಸನ್ನಿವೇಶಗಳು, ತುಂಬಾ ಹೋಲಿಕೆಯಾಗುದೆ. ಮಧ್ಯಮವರ್ಗದ ಜೀವನ, ಬೆಟ್ಟದಷ್ಟು ಆಸೆ ಇದ್ದರು, ಹಾಸಿಗೆ ಇದಷ್ಟು ಕಾಲು ಚಾಚು ಅನ್ನೂ ಗಾದೆಮಾತು ನೆನಪಾಗತ್ತೆ. ಹೀಗಾಗಿ ಎಲ್ಲದರಲ್ಲೂ ಹೊಂದಿಕೊಂಡು ಹೋಗುವುದನ್ನ ಕಲ್ತಿರ್ತೀವಿ. ಆದರೆ ಈ ಕಥೆಯಲ್ಲಿ ಬಂದಹಾಗೆ ಒಂದು ಅವಕಾಶ ಬಂದರೆ, ಅದೇ ರೀತಿ ಲೆಕ್ಕಹಾಕಿ, ನಮ್ಮ ನಿರ್ಧಾರವನ್ನ ಬದಲಾಯಿಸೋದಕ್ಕೂ ಸಿದ್ಧರಾಗಿರ್ತೀವಿ. ಆದರೆ ಈ ಅಂಕಣದಲ್ಲಿ ತುಂಬಾ ಸುಲಭವಾಗಿ ಒಂದು ಪ್ರಶ್ನೆಯಗಂಟಿಗೆ ಉತ್ತರಿಸಿದ್ದೀರಾ.

    ನಮ್ಮ ಮನಸ್ಸಿನಲ್ಲಿ ನಡೆಯುವ ವಾದವಿವಿವಾದಗಳು, ಆ ಸಂಘರ್ಷಣಕ್ಕೆ ಸಿಲುಕಿ ಮಾಡುವ ನಿರ್ಧಾರ, ಅದರ ನಂತರದ ಸನ್ನಿವೇಶವನ್ನ ಹೇಗೇ ನಿಭಾಯಿಸಬಹುದೆಂದು ನಾವು ಹಾಕುವ ನಕ್ಷೆ. ಈ ಎಲ್ಲದರ ಚಿಂತನೆ ಬರುವುದು, ಅದರ ಪ್ರಕ್ರಿಯೆ. ಎಲ್ಲವನ್ನು ತುಂಬಾ ಸೊಗಸಾಗಿ ಬಿಡಿಸಿ ಹೇಳಿದ್ದಿರ. ಅಂಕಣ ಓದುತ್ತಿದ್ದಂತೆ ಆ ಸನ್ನಿವೇಶದ ದೃಷ್ಯಪುಟ ಕಣ್ಮುಂದೆ ಹೋಗತ್ತಿರತ್ತೆ.

    ತುಂಬಾ ಭಾವರ್ತದಿಂದ, ಸೊಗಸಾಗಿ, ಚಿಕ್ಕದಾಗಿ, ಚೊಕ್ಕವಾಗಿ ವರ್ಣಿಸಿದ ಕಥೆಗಾಗಿ ಧನ್ಯವಾದ ಅಕ್ಕಾ.

    ಜೈ ಕನ್ನಡಾಂಬೆ.

  14. ಸೀಮಾ ಬುರ್ಡೆ

    ದುಡ್ಡಿರೋರಿಗೆ ಮಾಲ್
    ದುಡ್ಡಿಲ್ಲದೋರಿಗೆ ಫೂಟ್ ಪಾಥ್ ಅಷ್ಟೇ.

    ದುಡಿಮೆಗೆ ತಕ್ಕಂತೆ ಸ್ಥಳಕ್ಕೆ ತಕ್ಕಂತೆ ಬದಲಾವಣೆ ! ಇಷ್ಟವಿಲ್ಲದಿದ್ದರೂ ಕಷ್ಟಪಟ್ಟು ಇಷ್ಟದಂತೆ ಮಾಡಬೇಕು.

  15. Preethi

    Nice stories

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading