ಖೂನೂರಿನ ಖೂನಿಗಳಿಗೆ ಕಾರಣವೇ ಬೇಕಿಲ್ಲ..
ಡಾ ಎಸ್ ಬಿ ಜೋಗೂರ
ಇಡೀ ಊರಿಗೂರೇ ಖಾಲಿ0ಾಗಿತ್ತು. ಊರಾಗ ಇದ್ದಿದ್ದು ಬರೀ ವ0ುಸ್ಸಾದ ಮುದುಕರು ಮತ್ತ ಮೈ -ಮನಸು ಮುಕ್ಕಾದವರು. ಇರೋ ಎರಡು ನೂರು ಮನಿಗಳ ಪೈಕಿ ಎಪ್ಪತ್ತು ಮನಿಗೋಳ ಬಾಗಿಲಕ ಚಿಲಕ ಜಡದಂಗಿತ್ತು. ಗೌಡರ ಕೇರಿಯೊಳಗಿನ ಐದಾರು ಮನಿ ಬಿಟ್ಟರ, ಮಲಕಣ್ಣ ದೇವರ ಗುಡಿ ಬಾಜೂ ಇರೋ ಸಂಗಯ್ಯ ಪೂಜಾರಿ ಮನಿ ಒಂದು ಬಿಟ್ಟರ ಬ್ಯಾರೆ ಯಾರ ಮನಿಯೋಳಗೂ ಮನಿ ತುಂಬಾ ಮಂದಿ ಇದ್ದಿರಲಿಲ್ಲ. ಊರ ಹೊರಗಿರೋ ಪ್ರಾಥಮಿಕ ಸಾಲಿ ಮುಂದ ಬಿಸಿ ಊಟದ ಸಲಾಗಿ ಹಣ್ಣ ಹಣ್ಣ ಮುದಕರು ಕಾಯ್ಕೊಂತ ಕೂತಿರತಿದ್ದರು. ಕೂಸು-ಕುನ್ನಿ ಕಟಗೊಂಡು ದುಡಿಯಾಕ ಹೋದವರ ಮಕ್ಕಳ ಬದಲೀ ಈ ಮುದುಕರಿಗೆ ಬಿಸಿ ಊಟ ಬಾಳ ಆಸರಾಗಿತ್ತು. ಬಸ್ ಸ್ಟಾಂಡಿನ ಚಾದ ಅಂಗಡಿ ಗುರಬಸು ಸೈತ ಅಂಗಡಿಗಿ ಬೀಗಾ ಜಡದು, ಹೆಂಡತಿ ಮಕ್ಕಳನ್ನ ಕರಕೊಂಡು ದುಡಿಯಾಕ ಗೋವಾಕ ಜಿಗದಿದ್ದ. ಊರ ಏರಿ ಮ್ಯಾಲಿರೋ ಲಂಬಾಣಿ ತಾಂಡಾದೊಳಗಂತೂ ಈಗಲೋ ಆಗಲೋ ಅನ್ನೋ ಮುದುಕ..ಮುದುಕಿ ಸೇರಿ ಒಂದತ್ತು ಜೀವ ಬಿಟ್ಟರೆ ಮಿಕ್ಕವರೆಲ್ಲಾ ಗುಳೆ ಹೋಗಿದ್ದರು. ಖೂನೂರಿನ ಬಂಗಾರದಂತ ಭೂಮಿ ಬರದ ಹೊಡತಕ್ಕ ಕಲರ್ ಆಗಿದ್ವು. ಬೆಳದರ ನೂರಾರು ಚೀಲ ಅನಾಮತ್ತಾಗಿ ಬರೋ ಈ ಕರಿ ಮಸಾರಿ ಜಮೀನಗೋಳೇ ಬೀಳು ಬಿದ್ದ ಪಡಾ ಆದಾಗ ಇನ್ನ ಮಡ್ಡಿ ಜಮೀನಿನ ಕತಿ ಬ್ಯಾಡ. ಬಿಜಾಪೂರ-ಸೋಲಾಪುರ ಹೈವೇದೊಳಗಿನ ಖೈನೂರು ಖೂನುರು ಆಗಿದ್ದೇ ಒಂದು ಕತೆಯಿದೆ. ಒಂದು ಕಾಲದೊಳಗ ಈ ಊರಾಗಿರೋ ಕಬ್ಬಲಗೇರಿ ಜನ ಮತ್ತು ಮತ್ತು ಗೌಡರ ನಡುವ ಹೆಣ್ಣಿನ ವಿಷಯದಾಗ ದೊಡ್ಡ ಜಗಳಾಗಿ ಹತ್ತು ಹದಿನೈದು ಹೆಣಾ ಅನಾಮತ್ತಾಗಿ ಬಿದ್ದಿದ್ದೈತಿ. ಇಡೀ ಊರಿಗೂರೇ ಆ ಖೂನಿಗಳಿಗೆ ಸಾಕ್ಷಿಯಾಗೈತಿ. ಖೂನೂರಾಗ ಪ್ರತಿಯೊಬ್ಬನ ಮನ್ಯಾಗೂ ನಾಡ ಪಿಸ್ತೂಲ ಇದ್ದಿದ್ದೇ.. ಪಾಳಿ ಪ್ರಕಾರ ಹೆಣಾ ಬಿದ್ದ ಊರಿದು. ಹಂಗಾಗೇ ಖೈನೂರು ಅಂತ ಕರಿಯೋ ಹಳ್ಳಿ ಬರ್ತಾ ಬರ್ತಾ ಖೂನೂರು ಆಯ್ತು. ಇಪ್ಪತ್ತು ವರ್ಷದ ಹಿಂದ ಈ ಊರಿಗಿ ಕನ್ಯಾ ಕೊಡಾಕ ಸೈತ ಯಾರೂ ಮುಂದ ಬರ್ತಿರಲಿಲ್ಲ. ಹಜಾಮ ಸಿದ್ದಪ್ಪ ಸತ್ತ ಮ್ಯಾಲ ಬಾಜೂ ಊರಿನ ಯಮನೂರಪ್ಪ ಆಯಗಾರತನಕ್ಕ ಈ ಹಳ್ಳಿಗಿ ಬಂದರ ಇಲ್ಲಿಗಿ ಬಂದು ಕಟಿಂಗ್ ಮುಗಿಸಿ ಹೋಗೂಮಟ ಅಂವಗ ಜೀವದಾಗ ಜೀವ ಇರ್ತಿರಲಿಲ್ಲ. ಒಂದು ಸಾರಿ ದೊಡ್ದಗೌಡ ಬಾಳಾಸಾಹೇಬನ ಮಗನ ತಲಿ ಬೋಳಿಸಿಂದ ಆ ಗೌಡನ ಮಗ ಬಾಬಾಸಾಹೇಬ ಕಲ್ಲ ತಗೊಂಡು ಆ ಯಮನೂರಪ್ಪನ ತಲಿಗಿ ಕಟ್..! ಅಂತ ಕೊಟ್ಟಿದ್ದ. ಅವಾಗಿನಿಂದ ಯುಮನೂರಪ್ಪ ಆ ಬಾಬಾಸಾಹೇಬನ ಕಟಿಂಗ್ ಮಾಡೂ ಮುಂದ ಗೌಡರರೇ ಇಲ್ಲಾ ಗೌಡಶಾನಿ ಅರೆ ಮುಂದ ಇರಬೇಕು ಅಂತ ಬೇಡಿಕೆ ಇಟ್ಟಿದ್ದ. ಈ ಖೂನುರಲ್ಲಿ ನಾಕೈದು ಗೌಡಕಿ ಮನೆತನಗಳಿದ್ವು. ಈಗಲೂ ಖೂನೂರನ್ನು ಅವರೇ ಆಳೂದು. ಒಂದು ಕಾಲಕ್ಕ ಗೌಡರ ಕೇರಿಯೊಳಗ ಬ್ಯಾರೆಯವರು ಹೋಗೂದಂದ್ರ ಬಾಳ ಹೆದರಕೊಂತ ಹೋಗಬೇಕಿತ್ತು. ಗೌಡರ ಮನಿಮಟ ಹೋಗಿ ಬರ್ತೀನಿ ಅಂತ ಯಾರರೇ ಗಂಡದೇರು ತಮ್ಮ ಹೆಂಗಸರಗಿ ಹೇಳದರ ‘ಹುಷಾರಿ..ಆ ಗೌಡನ ಬಾಯಿಗಿ ಬೀಳಬ್ಯಾಡ್ರಿ. ನಿಮ್ಮ ಕೆಲಸಾ ಮುಗಸಿ ಬೇಗ ಬರ್ರಿ’ ಅಂತಿದ್ದರು. ಅಟ್ಟೇ ಅಲ್ಲ ಅವರು ಬಂದು ಮನಿ ಮುಟ್ಟೂಮಟ ಅವರ ಹೆಂಡಂದಿರ ಎದಿ ಟುಕು ಟುಕು ಅಂತಿತ್ತು. ಯಾಕಂದರ ಈಗಿರೋ ಬಾಳಾಸಾಹೇಬನ ಅಪ್ಪ ಕಲ್ಲನಗೌಡ ಅನ್ನವನಿದ್ದ. ಅವನು ಬಾಳ ತಿಕ್ಕಲು. ಅವನಿಗಿ ಬೇಕು ಅನಿಸಿದ್ದು ಬೇಕೇ ಬೇಕು. ಯಾವದಾದರೂ ಹೆಂಗಸನ್ನ ಓರೆನೋಟದಿಂದ ನೋಡಿ ಮೀಸಿ ಮ್ಯಾಲ ಕೈ ಸವರದರ ಬಿತ್ತು ಬಡತ ಅಂದಂಗೇ.. ಅವನ ಕಾಲಾಗೇ ಹತ್ತು ಹದಿನೈದು ಹೆಣಾ ಬಿದ್ದಿದ್ವು. ಒಂದ್ಸಾರಿ ಕುರುಬರ ಮಾದೇವ ದೇವರ ಹಿಪ್ಪರಗಿ ಜಾತ್ರಿಯೊಳಗ ಖಿಲಾರಿ ಥಳಿ ಎರಡು ಎತ್ತು ತಂದಿದ್ದ. ಅವುಗಳ ಮ್ಯಾಲ ಕಲ್ಲನಗೌಡಗ ಕಣ್ಣು ಬಿತ್ತು. ‘ಮಾದ್ಯಾ ಅವುಕ್ಕ ಎಟ್ಟು ರೊಕ್ಕಾ ಕೊಟ್ಟಿ ಅದಕ್ಕಿಂತ ಸಾವಿರ ರೂಪಾಯಿ ಹೆಚ್ಚಿಗಿ ಕೊಡ್ತೀನಿ ಸಂಜೀಮುಂದ ನನ್ನ ಕೊಟಿಗೀಗಿ ತಂದು ಕಟ್ಟು’ ಅಂತ ಫರ್ಮಾನ್ ಮಾಡಿದ್ದೇ ಆ ಮಾದೇವ ಒಂದೂ ಮಾತಾಡದೇ ಆ ಎತ್ತುಗಳನ್ನ ಗೌಡನ ಕೊಟಗಿಗಿ ತಂದು ಬಿಟ್ಟಿದ್ದ. ಈ ಕಲ್ಲನಗೌಡಗ ಅಪ್ಪಾಸಾಹೇಬಗೌಡ ಅನ್ನೋ ಒಬ್ಬ ತಮ್ಮ ಇದ್ದ. ಅವನೂ ಗೌಡಕಿ ಮಾಡದವನೇ.. ಇರೋ ಐದಾರು ಗೌಡರ ಮನಿತನದೊಳಗ ಈ ಕಲ್ಲನಗೌಡ ಮತ್ತ ಅಪ್ಪಾಸಾಹೇಬನ ಮನಿತನಗಳೇ ಮೆರೆದ ಮನಿತನಗಳು. ಅಪ್ಪಾಸಾಹೇಬನಂತೂ ಕಚ್ಚೆಹರುಕ ಮನುಷ್ಯಾ ಬರೀ ನಾಟಕದಾಗಿನ ನಟಿಯರ ಹಿಂದ ಬಿದ್ದು ವಾರಗಟ್ಟಲೇ ಮಾಯ ಆಗಿ ಬಿಡತಿದ್ದ. ಊರ ನ್ಯಾಯಾ ಪಂಚಾಯತಕಿ ಕಲ್ಲನಗೌಡನೇ ಮಾಡಂವ. ಅಂವಾ ಹೇಳಿದ್ದನ್ನ ಬಾಯಿ ಮುಚ್ಕೊಂಡು ಒಪ್ಕೊಬೇಕು. ಹಂಗಾಯ್ತು.. ಹಿಂಗಾಯ್ತು ಅಂತ ರಾಗಾ ತಗದರ ರಾತ್ರೋರಾತ್ರಿನೇ ಅವನ್ನ ಮಣ್ಣಗಾಣಸೋ ಈ ಕಲ್ಲನಗೌಡಗ ಮೂರು ಜನ ಗಂಡು ಮಕ್ಕಳು. ಹಿರಿಯವನು ಬಾಳಾಸಾಹೇಬ ನಡುವಿನವನು ಶಂಕರಗೌಡ ಕಡೀಯವನು ಶಾಂತಗೌಡ. ಈ ಶಾಂತಗೌಡ ಬಿ.ಕಾಂ ಮಟ ಓದಿ ಬಿಜಾಪೂರದ ಖಾಸಗಿ ಬ್ಯಾಂಕಿನೊಳಗ ನೌಕರಿ ಮಾಡತಿದ್ದ. ಶಂಕರಗೌಡ ಒಂದೆರಡು ರಾಶಿ ಮಶೀನ್ ಇಟಗೊಂಡು ಒಂದು ಕಲ್ಲ ಕ್ವಾರಿ ಹಾಕೊಂಡು ವ್ಯಾಪಾರ ಮಾಡ್ತಿದ್ದ. ಹಿರಿಯವ ಬಾಳಾಸಾಹೇಬ ಪಂಚಾಯತಿ ಅಧ್ಯಕ್ಷ ಆಗಿ ಊರ ಉಸಾಬರಿನ್ನ ಬೆನ್ನಿಗಿ ಹಚಗೊಂಡಿದ್ದ.
ಅಪ್ಪಾಸಾಹೇಬಗ ಒಂದು ಗಂಡು ಎರಡು ಹೆಣ್ಣು ಮಕ್ಕಳು. ಅಪ್ಪಾಸಾಹೇಬನ ನಂತರ ಗೌಡಕಿಗಿ ನಿಂತವನೇ ಅವನ ಏಕೈಕ ಸುಪುತ್ರ ಸೋಮಣ್ಣಗೌಡ. ಈಗ ಸೋಮಣ್ಣಗೌಡನ ಹೊಟ್ಟೀಲೇ ಎರಡು ಗಂಡು ಹುಡುಗರು. ಖೂನೂರಿನ ಗೌಡರ ಕೇರಿ ಅನ್ನೂದು ಸುತ್ತ ಇಪ್ಪತ್ತ ಮೂವತ್ತು ಹಳ್ಳಿಗೇ ಗೊತ್ತು. ಇಪ್ಪತ್ತು ವರ್ಷದ ಹಿಂದ ಊರ ಪಂಚಾಯ್ತಿಕಿ ಮಾಡೊ ಕಲ್ಲನಗೌಡ ಮತ್ತು ಅವನ ತಮ್ಮ ಅಪ್ಪಾಸಾಹೇಬ ಬಾಳ ಸಣ್ಣ ಕಾರಣಕ್ಕ ಗೌಡರ ಓಣಿಯೊಳಗ ನೆಲಕ್ಕ ರಕ್ತ ಕುಡಿಸಿದೈತಿ ಅನ್ನೂದು ಚರಿತ್ರೆ ಆಗಿತ್ತು. ಯಾವತ್ತೂ ಹೆಣ್ಣು..ಮಣ್ಣಿಗಾಗಿ ಹೆಣಾ ಬೀಳಸೋ ಈ ಗೌಡರು ಅವತ್ತು ತಮ್ಮ ಹೆಂಗಸರ ಮಾತ ಕೇಳಿ ತೀರಾ ಸಣ್ಣ ಕಾರಣಕ್ಕ ದೊಡ್ಡ ಅನಾಹುತನ್ನೇ ಮಾಡಕೊಂಡಿದ್ದಿತ್ತು. ಅದು ಹೋಳಿ ಹುಣ್ಣವಿ ದಿವಸ. ದೊಡಗೌಡನ ಮಗ ಬಾಳಾಸಾಹೇಬ, ಸಣ್ಣ ಗೌಡ ಅಪ್ಪಾಸಾಹೇಬನ ಮಗ ಸೋಮಣ್ಣಗೌಡನ ಕಣ್ಣಾಗ ಬಣ್ಣಾ ಹಾಕದ ಅಂತ ಗದ್ದಲಾಗಿ, ಸೋಮಣ್ಣ ಕೆಳಗ ಬಿದ್ದು ‘ಯಪ್ಪೋ ನನ್ನ ಕಣ್ಣ ಹೋಯ್ತು ..ನನ್ನ ಕಣ್ಣ ಹೊಯ್ತು..’ ಅಂತ ಹೊಯ್ಕೊಂಡಿದ್ದೇ ಅಪ್ಪಾಸಾಬ ಬಾಳ ರಾವ ಆಗಿ ಬಿಟ್ಟ. ಕಣ್ಣಾಗ ಬಣ್ಣ ಹಾಕಿದ್ದರಿಂದ ಸುರು ಆಗಿ, ಮಾತಿಗೆ ಮಾತು ಬೆಳದು ಇಬ್ಬರೂ ಗೌಡರ ಹೆಂಗಸರು ಒಬ್ಬರಿಗೊಬ್ಬರು ಬೈಯ್ದಾಡಿದರು. ತನಗ ಇರೋದೇ ಒಬ್ಬ ಮಗ ಅವನ ಕಣ್ಣ ಕಳದ ನಿನ್ನ ಮಗ ಅಂತ ಅಪ್ಪಾಸಾಹೇಬ ಸಿಟ್ಟಿನಿಂದ ಮನಿಯೊಳಗಿನ ಜೋಡ ನಳಕಿ ಬಂದೂಕ ತಂದು ಹಿಂದಾ ಮುಂದ ಯೋಚನೆ ಮಾಡದೇ ತನ್ನ ಅಣ್ಣ ಅನ್ನೂ ಖಬರಿಲ್ಲದೇ ಕಲ್ಲನಗೌಡನ ಮ್ಯಾಲ ಎರಡು ಗುಂಡ ಹಾರಸೇ ಬಿಟ್ಟ. ಕಲ್ಲನಗೌಡ ಅಲ್ಲೇ ಕುಸದು ಬಿದ್ದ. ಅವನಪ್ಪ ಹಿಂಗ ಕಣ್ಣ ಮುಂದೇ ಹೆಣಾ ಆಗಿದ್ದು ನೋಡಿ ಕಲ್ಲನಗೌಡನ ಹಿರಿ ಮಗ ಬಾಳಾಸಾಹೇಬ ಓಡಿ ಹೋಗಿ ಮನಿಯೊಳಗಿನ ನಾಡ ಪಿಸ್ತೂಲ ತಂದು ‘ನಮ್ಮಪ್ಪನ್ನ ಸಾಯಿಸುತೇನೋ ಬೋಳಿಮಗನೇ’ ಅಂತ ತನ್ನ ಚಿಕ್ಕಪ್ಪ ಅಪ್ಪಾಸಾಹೇಬನ ಮ್ಯಾಲೇ ಗುಂಡ ಹಾರಿಸಿ ಸಾಯಿಸಿಬಿಟ್ಟ. ಆವಾಗಿನ್ನೂ ಬಾಳಾಸಾಹೇಬಗ ಹದಿನೈದು ವರ್ಷ. ಬಣ್ಣ ಆಡೂ ದಿನ ಗೌಡರಕೇರಿಯೊಳಗ ಸಣ್ಣ ಗೌಡ, ದೊಡ್ಡ ಗೌಡ ಇಬ್ಬರೂ ಮಣ್ಣಾದರು. ಆ ದಿನದಿಂದ ಇವತ್ತಿನಮಟ ಆ ಗೌಡರಕೇರಿಯೊಳಗ ಬಣ್ಣ ಆಡಿದ್ದಿಲ್ಲ. ಇದು ಅಟ್ಟಕ್ಕೇ ಮುಗೀಲಿಲ್ಲ. ಸಣ್ಣ ಕಾರಣಕ್ಕ ಎರಡು ಹೆಣಾ ಬಿದ್ದಿದ್ದು ಊರ ಮರಿಯೂದರೊಳಗಿತ್ತು ಅಷ್ಟ್ತರೊಳಗ ಸೋಮಣ್ಣಗೌಡ ಬಾಳಾಸಾಹೇಬನ ತಮ್ಮ ಶಂಕರಗೌಡನ್ನ ತೋಟದ ಮನಿಯೊಳಗ ಇಸ್ಪೀಟ್ ಆಡೂಮುಂದ ಹಿಂದಿನಿಂದ ಬಂದು ಚಾಪ್ ಕೊಡಲಿಯಿಂದ ಕುತ್ತಗಿನೇ ಹಾರಸಿದ್ದ. ಅದೇ ದಿನ ತುಸು ಹೊತ್ತಿನ ಮ್ಯಾಲ ಸೋಮಣ್ಣ ತನ್ನ ರಂಡಿ ರುಕುಮಿ ರುಂಡಾನೂ ಹಾರಸಿದ್ದ. ಹಿಂಗಾಗಿ ಊರ ಜನ ಸೋಮಣ್ಣನ ರಂಡಿ ಜೋಡಿ ಶಂಕರಗೌಡ ಚಕ್ಕಂದ ಆಡಿದ್ದೇ ಆ ಕೊಲೆಗೆ ಕಾರಣ ಅಂತ ಮಾತಾಡತಿತ್ತು. ಜೋಡಿ ಕೊಲೆ ಮಾಡಿ ಜೈಲಿಗಿ ಹೋಗಿ ಬಂದ ಮ್ಯಾಲೂ ಅಣ್ಣ-ತಮ್ಮರ ನಡುವಿನ ವೈರ ಮೆತ್ತಗ ಆಗಲಾರದೇ ಮತ್ತಷ್ಟು ಬಲ್ತಂಗ ಆಗಿತ್ತು. ಪೋಲಿಸರು ಸೋಮಣ್ಣಗೌಡನನ್ನ ಹಿಡಿಲಿಕ್ಕ ಬಂದಾಗ ಅವನ್ನ ಮನಿನ್ನ ತಲಾಷ ಮಾಡಿದ್ದರು. ಆವಾಗ ಹತ್ತು ನಾಡ ಪಿಸ್ತೂಲು, ಐದಾರು ಜಂಬೆ ಸಿಕ್ಕಿದ್ವು. ಹಂಗೇ ಬಾಳಾಸಾಹೇಬನ ಮನಿಯೊಳಗೂ ನಾಕೈದು ನಾಡ ಪಿಸ್ತೂಲು ಮತ್ತ ಒಂದಷ್ಟು ತಲವಾರ ಸಿಕ್ಕಿದ್ವು ಅವನ್ನೆಲ್ಲಾ ಜಪ್ತ ಮಾಡಿ ತಗೊಂಡು ಹೋಗಿದ್ದರು. ಅಣ್ಣ ತಮ್ಮದೇರ ಮನಿತನಗಳು ಬದ್ದ ವೈರಿಗಳ ಮನಿ ಅನ್ನೂವಂಗ ಆಗಿ ಬಿಟ್ಟವು. ಓಣಿಯೊಳಗ ಬಾಳಾಸಾಹೇಬನ ಮನಿ ದಾಟೇ ಸೋಮಣ್ಣಗೌಡನ ಮನಿ. ಒಂದೇ ಒಂದಿನ ಆ ಮನಿ ಕಡೆ ಹೊರಳಿ ಸೈತ ನೋಡಿದ್ದಿಲ್ಲ. ಅವರು ಮಾತ್ರ ಅಲ್ಲ ಅವನ ಮಕ್ಕಳು, ಇವನ ಮಕ್ಕಳು ಸೈತ ಮಾತಾಡುವಂಗಿರಲಿಲ್ಲ. ಹಿಂದ ಇವರ ಜಗಳ.. ಗೌಡಕಿ ನೋಡಾಕ ಊರಾಗ ಮಂದಿ ಇದ್ದರು ಈಗ ಊರಾನ ಅರ್ಧ ಮಂದಿ ಬರಗಾಲದ ಹೊಡತಕ್ಕ ಹೆದರಿ ರತ್ನಾಗಿರಿ, ಗೋವಾಗ ಅಂತ ದುಡಿಲಿಕ್ಕ ಹೋಗಿದೈತಿ. ಕೆಳಗಿನ ಕೇರಿಯಂತೂ ಪೂರ್ತಿ ಕಸ ಹುಡುಗದಂಗ ಆಗಿತ್ತು. ಕಟಬರ ಲಚ್ಯಾ.. ಸಮಗಾರ ತುಳಜಪ್ಪ.. ಮರಗಮ್ಮ ನ ಗುಡಿ ಪೂಜಾರಿ ಭೀಮಶ್ಯಾ ಇಂಥವರೇ ಒಂದಿಷ್ಟು ಮಂದಿ ಇದ್ದರು. ಜಡ್ದ ಹತ್ತಿರೋ ಒಂದೆರಡು ಮುದುಕರು ಬೇವಿನ ಗಿಡದ ಕೆಳಗ ಹೊರಸಿನ ಮ್ಯಾಲ ಅಂಗಾತ ಬಿದ್ದಿದ್ದು ಬಿಟ್ಟರ ಮತ್ತಲ್ಲಿ ಎದ್ದು ಓಡಾಡವರು ಯಾರೂ ಕಾಣ್ತಿರಲಿಲ್ಲ. ಖೂನೂರು ಅನ್ನೂದು ಜನರಿಲ್ಲದಿರೋ ಊರಾಗಿತ್ತು. ಊರ ತುಂಬಾ ಬರೀ ರೊಯ್… ಅಂತ ಗಾಳಿ ಬೀಸತಿತ್ತು. ಯಾವ ಹೊಲದಾಗೂ ಹಚ್ಚಗನ ಬೆಳಿ ಇರಲಿಲ್ಲ. ದನಕರುಗಳ ಪಾಡು ಕೇಳುವಂಗಿಲ್ಲ. ಹೊಲ್ದಾಗಿರೋ ಬಣವಿ, ಹೊಟ್ಟಿನ ಗುಂಪಿ ಕದಿಯುವರು ಹೆಚ್ಚಾಗಿದ್ದರು. ಯಾರ ಬಣವಿ ಕದ್ದರೂ ಈ ಗೌಡರ ಹೊಲದೊಳಗಿನ ಬಣವಿಗಿ ಮಾತ್ರ ಕೈ ಹಚ್ಚುವಂಗಿಲ್ಲ. ಬಾಳಾಸಾಹೇಬನ ಹೊಲದೊಳಗಿರೋ ಕಬ್ಬಿನ ಪಡದಿಂದ ನಾಕು ಕಬ್ಬ ಕದ್ದ ಅಂತ ಹೇಳಿ ಬಡದಳ್ಳಿ ಕರೆಪ್ಪನ್ನ ಗಿಡಕ್ಕ ಕಟ್ಟಿ ದನಕ್ಕ ಹೊಡದಂಗ ಹೊಡದಿದ್ದು ಇನ್ನೂ ಊರಮಂದಿ ಮರತಿರಲಿಲ್ಲ. ಆ ಕರೆಪ್ಪ ಎಂದೂ ಕಳ್ಳತನ ಮಾಡದಂವ ಅಲ್ಲ. ನಾಕು ಕಬ್ಬಿಗಿ ಜನರ ಮುಂದ ತನ್ನ ಮಾನಾ ಹೊಯ್ತು ಅಂತ ಹೇಳಿ ತನ್ನ ಹೊಲ್ದಾಗಿರೋ ಗುಡಸಲದೊಳಗ ಮೆಣಸಿನ ಗಿಡಕ್ಕ ಹೊಡಿಯೋ ಎಣ್ಣಿ ಕುಡದು ಖಲಾಸ್ ಆಗಿದ್ದ.
ಕಲ್ಲನಗೌಡ ಮತ್ತ ಅಪ್ಪಾಸಾಹೇಬ ಊರಿಗಿ ಉಪಕಾರ ಮಾಡಬೇಕು ಅನ್ನೋ ಮನಸಿದ್ದವರು. ಹಂಗಾಗೇ ಅವರು ಸರಪಂಚರು ಇದ್ದ ವ್ಯಾಳೆದೊಳಗ ಊರಾಗ ಸಾಲಿ, ಠಾರ್ ರಸ್ತೆ ಎಲ್ಲಾ ಆಗಿದ್ವು. ಅವರೇ ಮುಂದ ನಿಂತು ಈಗಿರೋ ಮಲಕಣ್ಣದೇವರ ಗುಡಿ ಕಟ್ಟಿಸಿದ್ರು. ಊರಾಗ ಇರೋ ಬಾವಿಗಳೆಲ್ಲಾ ಸವಳು ನೀರಿನ ಬಾವಿ ಅಂತ ಹೇಳಿ ಬೋರವೆಲ್ ಹಾಕಿಸಿದ್ದರು. ಇಡೀ ಊರಿಗೂರೇ ಸಿಹಿ ನೀರ ಕುಡಿಸಿ ಹೆಸರಾಗಿದ್ದರು. ಬಾಳ ಚೆಂದಾಗಿದ್ದ ಕುಟುಂಬಗಳ ಮ್ಯಾಲ ಅದ್ಯಾರ ಕಣ್ಣ ಬಿತ್ತೋ ಗೊತ್ತಿಲ್ಲ ಒಂದೇ ದಿನ ಎರಡು ಜೀವ ಅನಾಮತ್ತಾಗಿ ಬಲಿಯಾದ್ವು. ಆ ವೈರ ಅಷ್ಟಕ್ಕೇ ಮುಗೀಲಿಲ್ಲ. ಬೂದಿ ಮುಚ್ಚಿದ ಕೆಂಡದಂಗ ಹಂಗೇ ಉಳಕೊಂಡಿತ್ತು. ಊರಾಗಿನ ಪಂಚಾಯತಿ ಇಲೆಕ್ಷನ ದಿನಕ್ಕೊಂದು ಹೊಸ ತಿರುವು ಪಡಕೋತಿತ್ತು. ಅಲ್ಲೀಮಟ ಸುದ್ದಿಯಲ್ಲಿರದೇ ಇದ್ದ ಸೋಮಣ್ಣಗೌಡ ಈ ಬಾರಿ ತನ್ನ ಅಣ್ಣ ಬಾಳಾಸಾಹೇಬನ ವಿರುದ್ದವೇ ನಿಲ್ಲೋದು ಅಂತ ಸುದ್ದಿ ಹರಡತು. ಬಾಳಾಸಾಹೇಬ ತಕ್ಕ ಮಟ್ಟಿಗೆ ಊರ ಕೆಲಸಾ ಮಾಡಿದ್ದ. ಅದೂ ಅಲ್ಲದೇ ಒಂದೇ ಕುಟುಂಬದ ಇಬ್ಬರಲ್ಲಿ ಯಾರಾದರೂ ಒಬ್ಬರನ್ನು ಆರಿಸೋದೇ ಆಗಿದ್ದರೆ ಬಾಳಾಸಾಹೇಬ ಸೋಮಣ್ಣಗೌಡನಿಗಿಂತಲೂ ದೊಡ್ಡವನು ಅವನನ್ನೇ ಆರಿಸೋದು ಚುಲೊ ಅನ್ನೋ ಮಾತು ಸೋಮಣ್ಣನ ಕಿವಿಗೆ ಬಿದ್ದಿದ್ದೂ ಇತ್ತು. ಚುನಾವಣೆಯೊಳಗ ಮತ್ತ ಗೆಲ್ಲೂದು ಬಾಳಾಸಾಹೇಬನೇ ಅನ್ನೂದು ಅಂವಗ ಖಾತ್ರಿ ಇತ್ತು. ತನ್ನ ಅಪ್ಪನ್ನ ಕೊಂದ ಅವನ್ನ ತಗದುಬಿಟ್ಟರ ತನ್ನ ದಾರಿ ಬಾಳ ಸರಳ ಆಗತೈತಿ ಅಂತ ಲೆಕ್ಕಾ ಹಾಕಿ ತನ್ನ ಮನ್ಯಾಗ ಕೆಲಸಾ ಮಾಡೊ ಚಂದಪ್ಪನ್ನ ಈ ಕೆಲಸಕ್ಕ ಬಳಸಕೋಬೇಕು ಅಂತ ಹೊಂಚ ಹಾಕಿದ. ಹೆಂಗೂ ಜನರಿಗಿ ಈ ಚಂದಪ್ಪನ ಹೆಂಡತಿ ಜೋಡಿ ಬಾಳಾಸಾಹೇಬನ ಸಂಬಂಧ ಇದ್ದದ್ದು ಗೊತೈತಿ. ತನ್ನ ಲೆಕ್ಕಾಚಾರ ಕರೆಕ್ಟ್ ಆಗಿ ಕೆಲಸಕ್ಕ ಬರತೈತಿ ಅಂತ ಯೋಚನೆ ಮಾಡಿದ್ದೇ ಊರ ಹೊರಗಿನ ಹನಮಂತ ದೇವರ ಗುಡಿ ಕಟ್ಟಿ ಮ್ಯಾಲ ನಡಿಯೋ ಚುನಾವಣಾ ಪ್ರಚಾರದ ವ್ಯಾಳೆದೊಳಗ ಅವನನ್ನ ಮುಗಿಸೋ ಮಸಲತ್ತು ಮಾಡಿದ್ದ. ಚಂದಪ್ಪ ತನ್ನ ಹೊಟ್ಟಿಯೊಳಗ ನಾಡ ಪಿಸ್ತೂಲ ಇಟಗೊಂಡು ಮುಂದಿನ ಸಾಲಿನೊಳಗೇ ಕುಂತಿದ್ದ. ಬಾಳಾಸಾಹೇಬಗೌಡ ಎದ್ದು ಮೈಕ್ ಮುಂದ ನಿಂತು ಹೆಂಗಸರ ಕಡಿ ನೋಡಿ ಮೀಸೆ ಮ್ಯಾಲ ಕೈ ಸವರ್ತಾ ಇದ್ದಂಗೆ, ಚಂದಪ್ಪ ಢಮಾರ್..ಢಮಾರ್ ಅಂತ ಎರಡು ಗುಂಡ ಹಾರಸಿ ಬಿಟ್ಟ. ಬಾಳಾಸಾಹೇಬ ಅಲ್ಲೇ ಕೆಳಗ ಬಿದ್ದ. ಅಲ್ಲಿ ಸೇರಿರೋ ಜನಾ ಚಂದಪ್ಪನನ್ನು ಹಿಡದು ಹಿಗ್ಗಾ ಮುಗ್ಗಾ ಥಳಿಸಿ ಪೋಲಿಸರ ಕೈಗೆ ಒಪ್ಪಿಸಿದರು. ಇಲ್ಲೀಮಟ ತೆರೆ ಮರೆಗಿದ್ದ ಸೋಮಣ್ಣಗೌಡ ಈಗ ಬಯಲಾಗಿದ್ದ. ತನ್ನ ಅಣ್ಣನ್ನ ಕೊಂದಿದ್ದು ಬ್ಯಾರೆ ಯಾರೂ ಅಲ್ಲ ಸೋಮಪ್ಪನೇ ಅಂತ ಬಿಜಾಪೂರದ ಸಹಕಾರಿ ಬ್ಯಾಂಕಿನೊಳಗ ನೌಕರಿ ಮಾಡೊ ಶಾಂತಗೌಡಗ ಗೊತ್ತಾಗಿ ಸೀದಾ ಊರಿಗಿ ಬಂದ. ಹಂಗ ನೋಡದರ ಅವನಿಗೆ ನೌಕರಿ ಮಾಡೊ ಹರಕತ್ತಿರಲಿಲ್ಲ. ಅವರಪ್ಪ ಮಾತ್ರ ಅವರ ಮನಿತನದೊಳಗೆ ಅಂವಾ ಒಬ್ಬರೆ ನೌಕರಿ ಮಾಡಲಿ ಅಂತ ಅಲ್ಲಿಗೆ ಕಳಿಸಿದ್ದಿತ್ತು. ತಮ್ಮ ಮನಿತನಕ್ಕ ಈಗ ಉಳಿದವರಲ್ಲಿ ತಾನೇ ದೊಡ್ಡವನು ಬಾಳಾಸಾಹೇಬನ ಮಕ್ಕಳಾಗಲೀ..ಶಂಕರಗೌಡನ ಮಕ್ಕಳಾಗಲೀ ಯಾರೂ ದೊಡ್ಡವರಲ್ಲ. ತನಗಿರೋ ಆಸ್ತಿ ಮುಂದೆ ಆ ನೌಕರಿ ಯಾವ ಲೆಕ್ಕಕ್ಕೂ ಅಲ್ಲ ಅಂತೆಲ್ಲಾ ಯೋಚನೆ ಮಾಡಿ, ಇರೋ ಕೆಲಸಕ್ಕೆ ರಾಜೀನಾಮೆ ಕೊಟ್ಟು ಊರಿಗೆ ಬಂದಿದ್ದ. ಅದೂ ಅಲ್ಲದೇ ಇದು ಜಿದ್ದಿನ ಪ್ರಶ್ನೆ. ಇಬ್ಬರೂ ಅಣ್ಣದೇರನ್ನ ಖೂನಿ ಮಾಡಿರೋ ಆ ಸೋಮಪ್ಪನ ಎದುರು ತಾನೇ ಎಲೆಕ್ಷನಗೆ ನಿಲ್ಲೋದು.. ಅದೇನಾಗತೈತೋ ನೋಡೇ ಬಿಡೂದು ಅಂತ ತೀರ್ಮಾನ ಮಾಡಿನೇ ಊರಿಗಿ ಬಂದಿದ್ದ. ಆದರೆ ಶಾಂತಗೌಡಗ ರಾಜಕೀ0ುದೊಳಗ ಬಿಲ್ಕುಲ್ ಆಸಕ್ತಿ ಇರಲಿಲ್ಲ. ಒಲ್ಲದ ಮನಸಿನಿಂದಲೇ ‘ತಾನೇ ನಿಲ್ಲೂದು’ ಅಂತ ಹೇಳೂದು ಮಾತ್ರ ಬಿಟ್ಟಿರಲಿಲ್ಲ. ಅಟೊತ್ತಿಗಾಗಲೇ ಸೋಮಣ್ಣಗೌಡ ಒಂದು ಸುತ್ತು ಪ್ರಚಾರ ಮುಗಸಿದ್ದ. ಈ ಬಾರಿ ಪಂಚಾಯತದ ಅಧ್ಯಕ್ಷ ತಾನೇ ಅನ್ನೂವಂಗ ಘೋಷಿಸಿಕೊಂಡಿದ್ದ.
ಶಾಂತಗೌಡ ಎಟ್ಟೇ ಆಗಲಿ ಡಿಗ್ರೀ ಮಟ ಓದಿದಂವ. ದೇಶದ ರಾಜಕೀಯ ಹ್ಯಾಂಗ ಐತಿ ಅನ್ನೂದನ್ನ ತಕ್ಕ ಮಟ್ಟಿಗೆ ತಿಳಕೊಂಡಂವ. ಅವತ್ತೊಂದಿನ ತೋಟದ ಕಡಿ ತಿರುಗಾಡ್ತಾ ಹೋದಾಗ ಬಾವಿ ಮ್ಯಾಲಿನ ಗಿಡದ ಕಟ್ಟಿ ಮ್ಯಾಲ ಕುತಗೊಂಡು ಅಣ್ಣ ಬಾಳಾಸಾಹೇಬ ಬಳಗಾನೂರಿನ ಪಾಟೀಲರ ತೋಟದ ಕಬ್ಬಿನ ಬೀಜಾ ತಂದು ಹಚ್ಚಿದ್ದಿತ್ತು. ಬರಗಾಲದೊಳಗೂ ಬಾವ್ಯಾಗಿರೋ ನೀರನ್ನ ಶಾಣೆತನದಿಂದ ಬಳಸಿಕೊಂಡು ಕಬ್ಬಿನ ಪಡಾ ಕಾದಿದ್ದ. ಅಂವಾ ಹೋದ ಮ್ಯಾಲ ಯಾರದೂ ದೇಖರೇಕಿ ಇರಲಾರದಕ್ಕ ಒಣಗ್ತಾ ಇರೋ ಕಬ್ಬಿನ ಪಡಾ ನೋಡಿ ಹಳಾಳಿ ಮಾಡೊ ವ್ಯಾಳೆದೊಳಗ ಕಟಬರ ಲಚ್ಚಪ್ಪ ‘ನಮಸ್ಕಾರಿ ಸಣ್ಣ ಗೌಡರ’ ಅಂತ ಕೂಗಿದ್ದು ಕೇಳಿ ಶಾಂತಗೌಡ ಹೊರಳಿ ನೋಡಿ ‘ಬಾರೋ ಲಚ್ಯಾ’ ಅಂದ. ಈ ಲಚ್ಚಪ್ಪ ಮತ್ತ ಶಾಂತಗೌಡ, ತುಳಜಪ್ಪನ ಮಗ ರುಕುಮ್ಯಾ, ಇಂಗಳಗಿ ಶಿವ್ಯಾ ಇವರೆಲ್ಲಾ ಚಡ್ಡಿ ದೋಸ್ತರು. ಕೂಡಿ ಬುಗರಿ..ಚಿಣಿದಾಂಡು..ಲಗೋರಿ..ದಪ್ಪಾದುಪ್ಪೆ ಆಡದವರು. ಲಚ್ಚಪ್ಪ ಮತ್ತ ಜೈಲಿಗಿ ಹೋಗಿರೋ ಚಂದಪ್ಪ ಇಬ್ಬರೂ ಖಾಸಾ ಅಣ್ಣತಮ್ಮದೇರು. ಆದರ ಇಬ್ಬರ ನಡುವ ಬಾಂದಾ ಮ್ಯಾಲಿರೋ ಬೇವಿನ ಗಿಡದ ವಿಷಯದೊಳಗ ಜಗಳ ಆಗಿ, ಒಬ್ಬರಿಗೊಬ್ಬರು ಸೇರಕಿ ಇರಲಿಲ್ಲ. ಹಿಂಗಾಗಿ ಶಾಂತಗೌಡ ಏನೂ ಕೇಳದಿದ್ದರೂ ಅವನೇ ಮುಂದಾಗಿ ‘ದೊಡ್ಡಗೌಡರು ಎಂಥಾ ಮನುಷಾರಿ.. ದೇವರಂಥಾ ಮನಷ್ಯಾ ಬಾಳ ಧಾಡಸಿ ಥೇಟ್ ನಿಮ್ಮ ಅಪ್ಪನಂಗೇ ಇದ್ದರು. ಸೋಮಣ್ಣಗೌಡ ಹಂಗ ಮಾಡಸ್ಬಾರದಿತ್ತು. ಎಟ್ಟೇ ಆಗಲಿ ಒಂದೇ ಬಡ್ಡಿ.. ನಮ್ಮಣ್ಣ ಚಂದ್ಯಾನ ಮುಂದ ಮಾಡ್ಕೊಂಡು ಖೂನಿ ಮಾಡಸದರು. ಮಳ್ಳ ಚಂದ್ಯಾ ಈಗ ಹೋಗಿ ಜೈಲಲ್ಲಿ ಕುಂತತು.’ ಅಂತ ಕತಿ ಮಾಡಿ ಹೇಳಿದ್ದೇ ಶಾಂತಗೌಡನ ಕಣ್ಣು ಕೆಂಪಾಗಿದ್ವು. ಲಚ್ಚಪ್ಪ ಇನ್ನೂ ಏನೇನೋ ಕತಿ ಹೇಳತಿದ್ದ ಅಷ್ಟರೊಳಗ ಶಂತಗೌಡ ಎದ್ದು ಮನಿಕಡಿ ನಡದು ಬಿಟ್ಟ. ಸೀದಾ ಮಲಕಣ್ಣ ದೇವರ ಗುಡಿ ಪೂಜಾರಿ ಸಂಗಯ್ಯನ ಮನಿಗಿ ಬಂದ. ಈ ಸಂಗಯ್ಯ ಬರೀ ಮಲಕಣ್ಣದೇವರ ಗುಡಿ ಪೂಜಾರಿ ಮಾತ್ರ ಅಲ್ಲ, ಅವರ ಮನಿ ಗುರುಗೋಳೂ ಹೌದು. ಗೌಡರ ಮನಿತನದೊಳಗ ಅವರ ಮುತ್ಯಾನ ಕಾಲದಿಂದಲೂ ಗುರುಸೇವೆ ನೀಡಕೊಂತ ಬಂದವರು. ಅವರನ್ನ ಕೇಳದರ ಈ ಸೋಮಪ್ಪನ ಹುಳುಕು ಏನಾರೆ ಸಿಕ್ಕರ ಸಿಗಬಹುದು ಅಂತ ಲೆಕ್ಕಾ ಹಾಕಿ ಪೂಜಾರಪ್ಪನ ಮನಿ ಕಡಿ ನಡದ. ಸಂಗಯ್ಯಗ ಈಗ ಹೆಚ್ಚೂ ಕಮ್ಮಿ ತೊಂಬತ್ತು ವರ್ಷ. ಕಣ್ಣಂತೂ ಮಂಜಾಗಿದ್ವು. ತನ್ನ ಮನಿ ಒಳಗ ಯಾರೋ ಬರಾಕತ್ತಿದ್ದು ನೋಡಿ. ಅಲ್ಲೇ ಮಾಡಿನೊಳಗಿರೋ ಚಾಳೀಸ್ ತಗದು ಮೂಗಿನ ಮ್ಯಾಲಿಟ್ಟ ಸಂಗಯ್ಯ ಬರಾಕತ್ತಿದ್ದು ಕಲ್ಲನಗೌಡನ ಮಗ ಶಾಂತಗೌಡ ಅಂತ ಗೊತ್ತಾಗಿದ್ದೇ ‘ಬಾರಪಾ ಶಾಂತೂ.. ನಿಮ್ಮಪ್ಪ ನೀ ಒಬ್ಬನರೇ ನೌಕರಿ ಮಾಡಲಿ ಅಂತ ನಿನಗ ಓದಿಸಿದ್ದ. ನೀ ನೋಡದರ ನೌಕರಿಗಿ ರಾಜೀನಾಮೆ ಕೊಟ್ಟೀಯಂತಲ್ಲ..! ಬಾ ಇಲ್ಲಿ ಕೂಡು..ಏನು ಇಕಾಡಿ ಬಂದಿದಿ..?’
‘ನಮ್ಮ ಮನಿತನದ ಕತಿ ನಿಮಗ ಎಲ್ಲಾ ಗೊತೈತಿ’
‘ಹೌದು..ನಾ ನಿಮ್ಮ ಮನಿ ಗುರುಗೋಳು ಆದಾಗ ನನಗ ಹದಿನೆಂಟು ವರ್ಷ. ನಿಮ್ಮ ಅವ್ವ ನನ್ನನ್ನ ಸ್ವಂತ ಮಗನ್ನ ನೋಡಕೊಂಡಂಗ ನೋಡಕೊಂತಿದ್ದರು. ನಿಮ್ಮಪ್ಪ ನನ್ನ ಸಲಾಗೇ ಈ ಗುಡಿ ಕಟ್ಟಿಸಿ ಅದರ ಪೂಜಾರಿಕಿ ಒಪ್ಪಿಸಿದ್ದರು. ಆ ಮಡಸ ಬಣ್ಣದ ಕಾರಣ..ಬಾಳ ಸಣ್ಣ ನೆಪಕ್ಕ ಹೆಂಗಸರ ಮಾತ ಕೇಳಿ ನಡೀಬಾರದ್ದು ನಡದಂಗ ಆಯ್ತು. ಈಗ ನಿಮ್ಮ ಮನಿತನದೊಳಗ ಉಳಿದದ್ದು ನೀನು ಮತ್ತ ನಿಮ್ಮ ಚಿಕ್ಕಪ್ಪನ ಮಗ ಸೋಮಣ್ಣ ನೀವೂ ಹಾವಾ ಮುಂಗಸಿ ಇದ್ದಂಗ. ಪಂಚಾ0ುತಿ ಇಲೆಕ್ಷನಕ್ಕ ಅವನ ವಿರುದ್ದ ನೀನೇ ನಿಲ್ಲಬೇಕಂತ ಮಾಡಿ ಅಂತ ಕೇಳದೆ. ರಾಜಕೀಯ ಅನ್ನೂದು ಬಾಳ ಕೆಟ್ಟ ಅದು ನಿಮ್ಮಂತವರಿಗಲ್ಲ ಯೋಚನೆ ಮಾಡು’
‘ಅಪ್ಪಂದು ಹಾಂಗಾಯ್ತು. ಇಬ್ಬರೂ ಅಣ್ಣದೇರನ್ನ ಖೂನಿ ಮಾಡಸದ..ಅದೆಲ್ಲಾ ಗೊತ್ತಿದ್ದೂ ನಾ ಸುಮ್ಮ ಕುಂತರ ನಾ ಕಲ್ಲನಗೌಡನ ಮಗಾ ಹೌದೋ.. ಅಲ್ಲೋ ಅಂತ ಊರವರು ಆಡಕೊಳ್ಳುವಂಗ ಆಗತೈತಿ’
‘ ಎಟ್ಟೇ ಆಗಲಿ ನೀವು ಅವರು ಅಣ್ಣ ತಮ್ಮದೇರು ಇಂದಲ್ಲಾ ನಾಳೆ ಒಬ್ಬರಿಗೊಬ್ಬರು ಬೇಕು’
‘ ಅದೆಲ್ಲಾ ಇರಲಿ ಈಗ ನನಗ ಒಂದು ಮಾಹಿತಿ ಬೇಕಿತ್ತು’
‘ ಏನು ಹೇಳು.. ನನಗ ಗೊತ್ತಿದ್ದರ ಹೇಳೇ ಹೇಳ್ತೀನಿ’
‘ ಸೋಮಪ್ಪನ ಹೊಂಡದ ತೋಟ ಐತೆಲ್ಲಾ ಅದರ ಕತಿ ಬೇಕಿತ್ತು’
‘ಅದು ಇಡೀ ಊರಿಗೇ ಗೊತೈತಿ’
‘ನನಗ ಗೊತ್ತಿಲ್ಲ..’
‘ ಸೋಮಪ್ಪನ ಅಪ್ಪ ಅಪ್ಪಾಸಾಹೇಬ ಸರಪಂಚ ಆಗಿರೋ ವ್ಯಾಳೆದೊಳಗ ಈಗ ಹ್ಯಾಂಗ ಬರಗಾಲ ಬಿದೈತಿ ಹಂಗೇ ಬರಗಾಲ ಬಿದ್ದಿತ್ತು. ಊರ ಹೊರಗಿರೋ ಆ ದೊಡ್ಡ ಹೊಂಡ ಇರೋ ಜಾಗ ಪಂಚಾಯತಿ ಜಮೀನದೊಳಗಿತ್ತು. ಅದನ್ನ ನಿಮ್ಮಪ್ಪ ದೇವಸ್ಥಾನಕ್ಕ ದಾನಾ ಬರದು ಕೊಟ್ಟಿದ್ದ. ಅಲ್ಲಿ ಕಲ್ಯಾಣ ಮಂಟಪ ಥರಾ ಕಟ್ಟಿಸಿ ಮದುವಿ..ಮುಂಜವಿ ನಡಿಯಾಕ ಜನರಿಗಿ ಅನುಕೂಲ ಆಗೂವಂಗ ಮಾಡೊ ಇರಾದೆ ನಿಮ್ಮಪ್ಪಗ ಇತ್ತು. ಅಪ್ಪಾಸಾಹೇಬ ಸರಪಂಚ ಆದಾಗ ಹೇಳದೇ ಕೇಳದೇ ಆ ಹೊಂಡದ ಜಾಗಾನ್ನ ಪರಭಾರೆ ಮಾಡಕೊಂಡು ಹತ್ತಿಪ್ಪತ್ತು ಟ್ರ್ಯಾಕ್ಟರ್ ಗೊಬ್ಬರ .. ಮಣ್ಣ ಹೊಡದು ಹದ ಮಾಡಿ ಅದಕ್ಕ ಹೊಂಡದ ತೋಟ ಅಂತ ಹೆಸರಿಟ್ಟ. ನಾ ಅಪ್ಪಾಸಾಹೇಬಗ ಅವಾಗ ಗಿಣಿಗಿ ಹೇಳದಂಗ ಹೇಳದೆ ಊರಿಗೆ ಉಪಕಾರ ಮಾಡಲಿಕ್ಕ ಆಗದಿದ್ದರೂ ಅಪಕಾರ ಮಾತ್ರ ಮಾಡಬಾರದು ಅಂತ. ನನ್ನ ಮಾತ ಕೇಳಲಿಲ್ಲ ಆಮ್ಯಾಲ ಆಗಬಾರದ್ದು ಆಗಿ ದೊಡ್ದ ಮನಿತನ ಅನ್ನೂದು ಕೂಡಿ ಬದುಕಲಾರದಂಗ ಆಯ್ತು.’
‘ಆ ಹೊಂಡದ ತೋಟದ ಜಾಗ ಎಷ್ಟೈತಿ..?’
‘ಕಮ್ಮೀತ ಕಮ್ಮಿ ಅಂದರೂ ಐದು ಎಕರೆ’
‘ಅದರ ಕಾಗದ ಪತ್ರ..?’
‘ಎಲ್ಲಾ ನನ್ನ ಹತ್ರನೇ ಜೋಪಾನ ಆಗಿ ಅದಾವ’
‘ ಸ್ವಲ್ಪ ನೋಡಬೇಕಿತ್ತಲ್ಲ..?’
‘ಅದರಾಗೇನೈತಿ ಮುಚ್ಚು ಮರೆ’ ಅಂತ ಎಲ್ಲಾ ತಗದು ತೋರಸದ. ಅದರಾಗ ಸಾಪ ಸಾಪ ಆ ಹೊಂಡದ ಜಾಗ ದೇವಸ್ಥಾನಕ್ಕೆ ದಾನವಾಗಿ ಕೊಡಲಾಗಿದೆ ಅದನ್ನು ಯಾರೂ ಕಬ್ಜಾ ಮಾಡಬಾರದು ಹಾಗೆ ಮಾಡಿದರೆ ಅದು ಕಾನೂನಿನ ಉಲ್ಲಂಘನೆಯಾಗುತ್ತದೆ’ ಅನ್ನೋ ವಿವರಗಳಿರುವ ಕಾಗದ ಪತ್ರಗಳನ್ನು ಶಾಂತಗೌಡ ನೋಡಿದ್ದೇ ಪಂಚಾ0ುತ ಇಲೆಕ್ಷನದೊಳಗ ಇದನ್ನೇ ಬಳಸ್ಕೊಂಡು ಊರವರ ನೆನಪನ್ನ ಮತ್ತ ಹಸಿ ಮಾಡ್ಬೇಕು ಅಂತ ಯೋಚನೆ ಮಾಡಿದ.
‘ನೀವು ಆವಾಗ ವಿರೋಧಿಸಲಿಲ್ಲನೂ..?’
‘ ನಿಮ್ಮ ಚಿಕ್ಕಪ್ಪ ಕೇಳೂ ಸ್ಥಿತಿಯೊಳಗ ಇರಲಿಲ್ಲ.. ಹೆಚ್ಚೂ ಕಮ್ಮಿ ಆದರ ನನ್ನೂ ಮುಗಸತಿದ್ದ.’
‘ಆಯ್ತು ಈಗ ಫೊಲಿಸರು ಇಲ್ಲಾ ವಕೀಲರು ಯಾರಾದರೂ ಬಂದು ಈ ಜಮೀನ ಯಾರದ್ದು..? ಅಂತ ಕೇಳಿದರೆ ನೀವು ಇದ್ದಕ್ಕಿದ್ದಂಗ ಹೇಳಾಕ ತಯಾರ ಇದ್ದೀರಿಲ್ಲೋ..?’
‘ನನಗ್ಯಾಕೋ ಓಣಾ ಉಸಾಬರಿ ಹನ್ನೊಂದು ತಾಸ್ ಹೋಗಿ ಇನ್ನೊಂದು ತಾಸ್ ಸುಮನೇ ಒಣ ಲಿಗಾಡು’
‘ಆಯ್ತು ಆ ಕಾಗದ ಆದ್ರೂ ನನಗ ಕೊಡ್ರಿ ನಿಮಗ ಆಮ್ಯಾಗ ತಂದು ಕೊಡ್ತೀನಿ’
‘ತಗೊಂಡು ಹೋಗು. ಆದರ ಒಣಾ ಗದ್ದಲ ಮಾಡ್ಕೊಬ್ಯಾಡ್ರಿ’ ಅಂತ ಸಂಗಯ್ಯ ಅವನಿಗೆ ಬುದ್ದಿ ಹೇಳಿ ಕಳಿಸಿದ್ದ.
******************
ಮರಗಮ್ಮನ ಗುಡಿ ಮುಂದ ಬೇವಿನ ಗಿಡದ ಕಟ್ಟಿ ಮ್ಯಾಲ ಕೆಳಗಿನ ಕೇರಿ.. ಕುರಬರ ಕೇರಿ.. ಮುಸಲರ ಓಣಿ ಎಲ್ಲಾ ಸೇರಿ ಒಂದೈವತ್ತು ಮಂದಿ ಜಮಾಯಿಸಿದ್ದರು. ಲಚ್ಚಪ್ಪ ಬಾಳ ಹುರುಪಿಂದ ಅಕಾಡಿದಿಕಾಡಿ ಓಡಾಡತಿದ್ದ. ಸಣ್ಣ ಗೌಡ ಶಾಂತಣ್ಣ ಕೊಟ್ಟ ಬಿಳಿಜುಬ್ಬಾ ಹಾಕೊಂಡು ಹಣಿ ಮ್ಯಾಲ ಕುಂಕುಮದ ಬೊಟ್ಟ ಇಟಗೊಂಡು ತನ್ನ ಕೇರಿ ಜನರಿಗೆಲ್ಲಾ ಕಾಕಾ ಬಾ..ಮಾವಾ ಬಾ.. ಅಂತ ಕರದು ಕರದು ಕೂಡಸತಿದ್ದ. ಒಂದು ಗಂಗಾಳದೊಳಗ ಎಲಿ..ಅಡಕಿ..ಸುಣ್ಣ ಬೀಡಿ ಇಟ್ಟಿದ್ದ. ಗುಡಿ ಪೂಜಾರಿ ಭೀಮಪ್ಪ ‘ಈ ಎಲೆಕ್ಷನ್.ಗಿಲೆಕ್ಷನ್ ಎಲ್ಲಾ ನಮಗಲ್ಲ..ಆ ಗೌಡ್ರ ಅದಾರಲ್ಲ ಅವರಿಗೇ ಚುಲೊ. ಇವತ್ತಂತೂ ರೊಕ್ಕ..ದಾರೂ.. ಮಟನ್ ಕೊಡದಿದ್ರ ಯಾರೂ ವೋಟೇ ಹಾಕಲ್ಲ ಅಂತದರೊಳಗ ಈ ಲಚ್ಯಾ ಆ ಗೌಡ ಹುರುಪ ಹಾಕ್ಯಾನ ಅಂತ ಒಂದು ಸವನ ಕುಣಿಯಾಕತ್ತಾನ ಅಟ್ಟಿದ್ದರ ಅವನೇ ನಿಲ್ಲಬೇಕು’ ಅಂದಾಗ ಲಚ್ಚಪ್ಪ ಹಲ್ಲುಗಿಂಜುತ್ತಾ
‘ಇಲ್ಲಣ್ಣಾ ನಾನೂ ಹಂಗೇ ಅಂದೆ. ಆದರೆ ಗೌಡ ಕೇಳಲಿಲ್ಲ. ನೀವೆಲ್ಲಾ ನಿಮ್ಮ ಕೇರಿ ಜನರೆಲ್ಲಾ ಎಲ್ಲೀಮಟ ಹಿಂಗೇ ಬೇರೆ0ುವರ ಹೊಲದೊಳಗ ಜೀತಾ ಮಾಡಕೊಂಡು ಇರತೀರಿ ಅದೂ ಅಲ್ಲದೇ ಪಕ್ಕದೂರಲ್ಲಿ ನಿಮ್ಮ ಜಾತಿಯವನೇ ಎರಡು ಅವಧಿಗೆ ಅಧ್ಯಕ್ಷ ಅಗ್ಯಾನ ನಿಮಗೇನು ಧಾಡಿ..? ಅಂತೆಲ್ಲಾ ಕೇಳದರು’ ಅಂದಾಗ ತುಳಜಪ್ಪ ಬೀಡಿ ಸೇದಿ ಬುಸ್ ಅಂತ ಹೊಗಿ ಬಿಟ್ಟು
‘ಇದ್ಯಾಕೋ ನನಗಂತೂ ಸರಿ ಅನಸಾಕತ್ತಿಲ್ಲ.. ದಿನ್ನಾ ಹೊತ್ತು ಹೊಂಟರ ಅವರ ಮನಿ ಮುಂದ ಕೈ ಕಟಗೊಂಡು ನಿಲ್ಲೋ ನಾವು ಸೋಮಣ್ಣಗೌಡನ ಎದುರು..ಛೇ..ಛೇ.. ಇದು ಆಗಲಾರದ ಮಾತು’ ಅನ್ನೂದರೊಳಗ ಶಾಂತಗೌಡ ಅಲ್ಲಿಗೆ ಬಂದ. ಎಲ್ಲರೂ ಎದ್ದು ನಿಂತರು. ಒಂದು ಹೊಸಾ ಜಮಖಾನಿ ಹಾಸಿ ಲಚ್ಚಪ್ಪ ‘ಗೌಡ್ರ ಅಲ್ಲಿ ಕುತಗೋರಿ’ ಅಂದ. ‘ಇರಲಿ ಇರಲಿ ಇಲ್ಲೀ ಮಟ ಈ ಊರೊಳಗ ಗೌಡರ ಮನಿತನದವರೇ ಪಂಚಾಯತಕಿ ಮಾಡಕೊಂಡು ಬಂದಾರ. ಹಂಗ ನೋಡದರ ನಮಗಿಂತ ಹೆಚ್ಚಿನ ಮನಿಗೋಳು ನಿಮ್ಮ ಜನರದು ಅದಾವ. ನೀವು ಎಲ್ಲೀಮಟ ಹಿಂಗೇ ಬರೀ ಊರ ಕಸ ಹೊಡಕೊಂತ, ಭಂಗೀ ಕೆಲ್ಸಾ ಮಾಡಕೊಂತ.. ನಮ್ಮಂಥವರ ಮನಿಯೊಳಗ ಜೀತಾ ಮಾಡಕೊಂತ ಇರ್ತರಿ ನಿಮ್ಮ ಮಕ್ಕಳೂ ಓದಬೇಕು.. ನೌಕರಿ ಮಾಡಬೇಕು ..’ಎಂದೆಲ್ಲಾ ಮಾತಾಡೂದು ಕೇಳಿ ಮರಗಮ್ಮ ದೇವಿ ಗುಡಿ ಪೂಜಾರಿ ಭೀಮಪ್ಪಗ ಮತ್ತ ಸಮಗಾರ ತುಳಜಪ್ಪಗ ಕನಸಿನೊಳಗ ಊರ ಗೌಡ ತಮ್ನನ್ನ ಉದ್ದರಿಸಲಿಕ್ಕ ತಮ್ಮ ಮನೀ ಮಟ ಬಂದಂಗ ಅನಸತಿತ್ತು. ಇಲ್ಲೀಮಟ ಗೌಡರ ಮನಿತನದೊಳಗ ತಮ್ಮನ್ನ ಯಾರೂ ಇಟ್ಟು ಸಮೀಪದಿಂದ ಮಾತಾಡಿಸಿರಲಿಲ್ಲ. ಈ ಶಾಂತಗೌಡಗ ನಮ್ಮ ಬಗ್ಗೆ..ನಮ್ಮ ಮಕ್ಕಳ ಬಗ್ಗೆ ಖರೆ ಖರೆ ಖಾಳಜಿ ಇದ್ದಂಗೈತಿ ಅವರು ಹ್ಯಾಂಗ ಹೇಳ್ತಾರ ಹಂಗ ಕೇಳೂದು ಚುಲೊ ಅಂತ ತೀರ್ಮಾನ ಮಾಡಿ ತುಳಜಪ್ಪ ‘ಯಪ್ಪಾ ಗೌಡಪ್ಪ, ನೀವು ಹೆಂಗ ಹೇಳ್ತಿರಿ ಹಂಗ. ನಿಮ್ಮಿಂದ ನಮ್ಮ ಲಚ್ಯಾನ ನಸೀಬರೇ ಹಿಂಗಲಿ’ ಅಂತ ಎದ್ದು ನಿಂತು ಕೈ ಮುಗಿದ. ‘ಏನೂ ಆಗಲ್ಲ ಹೆದರಬ್ಯಾಡ್ರಿ ಗೆಲ್ಲೂದು ಲಚ್ಚಪ್ಪನೇ..’ ಅಂದಾಗ ತುಳಜಪ್ಪ ‘ಯಪ್ಪಾ ಗೌಡ, ನಿಮ್ಮ ಅಣ್ಣನ ವಿರುದ್ಧ ಲಚ್ಯಾನ ಯಾಕ ನಿಲ್ಲಸಾಕತ್ತೀರಿ..? ನೋಡ್ರಿ ಮತ್ತ, ಲಚ್ಯಾ ಹುಚ್ಪ್ಯಾಲಿ ಆದೀತು..?’ ‘ಹಂಗೇನೂ ಆಗೋದಿಲ್ಲ ನೀವೆಲ್ಲಾ ಒಂದಾಗರಿ ಅಂವಾ ಏನರೆ ಕೊಡ್ತೀನಿ ಅಂದ್ರ ಆಸೆಗ ಬೀಳಬ್ಯಾಡ್ರಿ ಬರೂ ಹದಿಮೂರನೇ ತಾರೀಖು ನಾಮಿನೇಶನ್ ಕೊಡೂದೈತಿ ಅವತ್ತ ನಿಮ್ಮ ಎಲ್ಲಾ ಜನರನ್ನ ಸೇರಸಕೊಂಡು ರೆಡಿಯಾಗರಿ.’ ಅಂದವನೇ ಅಲ್ಲಿಂದ ಬರಬರ ನಡದ. ಲಚ್ಚಪ್ಪನ್ನ ತನ್ನ ವಿರುದ್ಧ ಚುನಾವಣಿಗೆ ನಿಲ್ಲಿಸೋ ಪ್ಲ್ಯಾನ್ ಸೋಮಣ್ಣಗೌಡಗ ಗೊತ್ತಾಗಿ ನನ್ನ ವಿರುದ್ಧ ಈ ಹುಚಬಾರಗಿ ಲಚ್ಯಾ ಆರಿಸಿ ಬರೂದಾ..? ಅಂತ ಸೋಮಣ್ಣಗೌಡ ನಖರಾ ಮಾಡಿದ್ದಿತ್ತು. ತನ್ನ ದೊಡ್ಡಪ್ಪನ ಮಗಾನೇ ತನ್ನ ವಿರುದ್ಧ ಕತ್ತಿ ಮಸೀಯೋದನ್ನ ಸೋಮಣ್ಣಗೌಡ ಸಹಿಸಲಿಲ್ಲ. ಅವರ ಮನಿಯೊಳಗಿನ ಯಾರ ಮುಖ ಕಂಡರೂ ತನ್ನ ಮೈ ಉರೀತೈತಿ ಅಂತ ಹೇಳಿ ರಾತ್ರೋ ರಾತ್ರಿ ಉಪ್ಪಾರ ಸೈಬಣ್ಣನ ಕರಸಿ ಎರಡೂ ಮನಿ ನಡುವ ಲಟ್ಟಾ ಗೋಡೆ ಎಬ್ಬಿಸಿದ್ದ. ಆ ಗೋಡೆ ಅನ್ನೂದು ಮೊದಲೇ ಎದ್ದಿತ್ತು ಆದರ ಈಗ ಅದರ ಅಗಲ ..ಆಳ..ಎತ್ತರ ಎಲ್ಲಾ ಇಡೀ ಖೂನೂರಿಗೇ ಕಾಣೂವಂಗ ಆಯ್ತು.
****************
ಅವತ್ತು ನಾಮಿನೇಶನ್ ಮಾಡೋ ದಿನ ಮರಗಮ್ಮ ನ ಗುಡಿಯಿಂದ ಲಚ್ಚಪ್ಪನ ಕಡಿ ಮಂದಿ ಶಾಂತಗೌಡನ ಮುಂದ ಮಾಡಕೊಂಡು ಲಚ್ಯಾನ ಹೆಗಲ ಮ್ಯಾಲ ಕೂಡಿಸಿಕೊಂಡು ಊದಸಕೊಂತ.. ಬಾರಸಕೋಂತ ಅಗಸೀಕಡಿ ಬಂದರು. ಇನ್ನೊಂದು ಕಡಿ ಸೋಮಣ್ಣಗೌಡನ ಮೆರವಣಿಗೆ. ಇಡೀ ಖೂನೂರು ಅನ್ನೂದು ಇಲೆಕ್ಷನದೊಳಗ ಯಾರು ಗೆಲ್ತಾರ ಅಂತ ಒಂದು ಸವನ ಕಾಯ್ತಿತ್ತು. ಲಚ್ಚಪ್ಪ ನೆಪಕ್ಕ ಮಾತ್ರ. ಅವನ ಹಿಂದ ಶಾಂತಗೌಡ ಅದಾನ ಅನ್ನೂದು ಇಡೀ ಊರಿಗೂರೇ ಗೊತ್ತಿತ್ತು. ಇನ್ನೇನು ನಾಮಿನೇಶನ್ ಕೊಡಾಕ ಪಂಚಾಯತ ಆಫೀಸಿನೊಳಗ ಹೋಗಬೇಕು ಅನ್ನೂದರೊಳಗ ಚುನಾವಣಾ ಆಯೋಗದ ಜೀಪೊಂದು ಬರ್ರ್ ಎಂದು ಧೂಳ ಎಬ್ಬಿಸ್ತಾ ಬಂದು ನಿಂತತು. ಇಲ್ಲೀಮಟ ಊರ ತುಂಬಾ ಕುಣಕೊಂತ ಬಂದ ಮಂದಿ ಈಗ ಸರಕಾರಿ ಜೀಪ್ ನೋಡಿದ್ದೇ ಹೆಜ್ಜಿ ಸೋತಂಗ ಆಗಿ ತಣ್ಣಗ ನಿಂತರು. ಬಾಯಿ ಬೆಳ್ಳಗ ಮಾಡ್ಕೊಂಡು ನಿಂತು ನೋಡಾಕತ್ತರು. ಲಚ್ಚಪ್ಪ ಒಳಗೊಳಗ ನಡಗಾಕ ಸುರು ಮಾಡಿದ್ದ. ಇಬ್ಬರೂ ಗೌಡರು ಸೇರಿ ನನ್ನನ್ನೂ ತನ್ನ ಅಣ್ಣನಂಗ ಜೈಲಿಗಿ ಕಳಿಸೂ ಪ್ಲ್ಯಾನ್ ಮಾಡ್ಯಾರೋ ಏನೋ.. ಎಂದೆಲ್ಲಾ ಯೋಚನೆ ಮಾಡುವ ವ್ಯಾಳೆದೊಳಗ ಜೀಪಿನಿಂದ ಇಳಿದ ಅಧಿಕಾರಿ ‘ಇಲ್ಲಿ ಸೋಮಣ್ಣಗೌಡ ಯಾರು.?’ ಅಂದಾಗ ಅಲ್ಲಿರೋ ಜನ ಕೈ ಮಾಡಿ ತೋರಿಸಿದರು. ಸೋಮಣ್ಣ ಕೊರಳಾಗ ಹೂವಿನ ಹಾರ, ಹಣಿ ಮ್ಯಾಲ ಕುಂಕುಮ ಹಚ್ಕೊಂಡು ಹರಕೆಯ ಕುರಿ ಕಂಡಂಗ ಕಾಣ್ತಿದ್ದ. ಆ ಅಧಿಕಾರಿ ಕೈಯಲ್ಲಿ ಒಂದು ಕಾಗದ ಪತ್ರವನ್ನು ಹಿಡಿದಿರುವದಿತ್ತು. ಸೋಮಣ್ಣಗೌಡಗೂ ಅದಾಗಲೇ ಟುಕು ಟುಕು ಶುರುವಾಗಿತ್ತು. ಧೈರ್ಯ ತಂದುಕೊಂಡು ‘ಹೌದು ನಾನೇ ಸೋಮಣ್ಣ ..ಏನಾಗಬೇಕು.?’ ಅಂದಾಗ ಆ ಅಧಿಕಾರಿ ‘ನೀವು ಚುನಾವಣೆಗೆ ನಿಲ್ಲುವಂಗಿಲ್ಲ ನಿಮ್ಮ ಮೇಲೆ ಕಂಪ್ಲೇಂಟ್ ಇದೆ.’
‘ಏನು ಕಂಪ್ಲೇಂಟ್..? ಯಾವ ಬೋಳಿ ಮಗ ಮಾಡಿದ್ದು..?’
‘ಸರಿ ಮಾತಾಡ್ರಿ ಹಂಗೆಲ್ಲಾ ಭಾಷೆ ಬಳಸಬೇಡಿ’
‘ಮೊದಲು ಕಂಪ್ಲೇಂಟ್ ಏನು ಹೇಳ್ರಿ’
‘ಊರ ಹೊರಗಿರೋ ಹೊಂಡದ ತೋಟ ದೇವಸ್ಥಾನದ ಜಾಗ. ಅದನ್ನ ನೀವು ಪರಭಾರೆ ಮಾಡಿಕೊಂಡಿದ್ದೀರಿ..’ ಅಂತ ಅನ್ನುತ್ತಿರುವಂತೆ ಸೋಮಣ್ಣಗೌಡಗ ಗಲಿಬಿಲಿ ಸುರು ಆಯ್ತು. ಮುಖ ಕಪ್ಪಾಯ್ತು.. ಹಂಗಂತ ಸುಮ್ಮಿದ್ದರ ಮಾನ ಮೂರ್ಕಾಸಿಗೂ ಇರಲ್ಲ ಅಂತ ಯೋಚನೆ ಮಾಡಿ ‘ಯಾವ ಹೊಂಡ.. ಯಾವ ದೇವಸ್ಥಾನ..?’ ಅಂತಾ ಇದ್ದಂಗೆ ಆ ಅಧಿಕಾರಿ ಆ ಜಾಗದ ಕಾಗದ ಪತ್ರಗಳನ್ನು ಅವನಿಗೆ ತೋರಿಸಿದ. ‘ಇದು ಯಾವ ಸೂಳೇ ಮಕ್ಕಳು ಕಿತಾಪತಿ ಮಾಡ್ಯಾರ ಅಂತ ನನಗ ಗೊತೈತಿ.. ಅವರನ್ನ ನಾ ಬಿಡೂದಿಲ್ಲ’ ಅಂತ ಹೊಳ್ಳಿ ಶಾಂತಗೌಡನ ಕಡಿ ನೋಡದ. ಅಂವಾ ಮುಖಾ ಕೆಳಗ ಹಾಕಿ ಮುಗುಳ್ನಗುತ್ತಿದ್ದ. ‘ಮೊದಲು ಜೀಪ ಹತ್ತರಿ ಅದೆಲ್ಲಾ ಅಮೇಲೆ’ ಅಂದಾಗ ಒಂದೂ ಮಾತಾಡದೇ ಶಾಂತಗೌಡನ ಕಡೆ ಕೆಕ್ಕರಿಸಿ ನೋಡುತ್ತಲೇ ಜೀಪ ಹತ್ತಿದ್ದ. ಸಮಗಾರ ಕೆಂಚ.. ರುಕುಮ್ಯಾ ಇಲ್ಲೀಮಟ ಹಲಗೀ ಕಾ0ುಸತಿದ್ದರು. ಈಗ ಕಣಣಣ..ಕಣಣಣ..ಜೆಡ್ಡೇಡ್ಡಿ ಜಡ್ದನಂಗ… ಬುಕ್ಕನಂಗ ಅಂತ ಹುರುಪಲೇ ಕುಣಕುಣದು ಹಲಗೀ ಹೊಡಿ0ಾಕತ್ತರು. ಲಚ್ಚಪ್ಪನ ಸುತ್ತ ಮುತ್ತ ನೆರದವರೆಲ್ಲಾ ಒಂದು ಸವನ ಕುಣೀತಿದ್ದರು. ಕೆಳಗಿನ ಕೇರಿ ಮಂದಿ ಶಾಂತಗೌಡನ್ನ ಹೊತಗೊಂಡು ಕೂಗು ಹಾಕದರು. ಲಚ್ಚಪ್ಪ ನಾಮಿನೇಶನ್ ಫéೈಲ್ ಮಾಡದ. ಇಪ್ಪತ್ತನೇ ತಾರಿಕಿನ ಮಟ ಯಾರೂ ಮತ್ತ ಅವನ ಎದುರು ನಾಮಿನೇಷನ್ ಮಾಡಲೇ ಇಲ್ಲ.. ಹಂಗಾಗಿ ಲಚ್ಚಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದ. ಇಡೀ ಊರು ಖುಷಿ ಆಚರಿಸೋ ಗಳಿಗೆ0ೊಳಗ ಹೆಣಾ ಹೂಳೋ ಯಮನ್ಯಾ ಕೆಟ್ಟ ಸುದ್ಧಿ ಹೊತ್ಗೊಂಡು ಓಡ್ಕೋಂತ ಬಂದ. ‘ಮಲಕಣ್ಣ ದೇವರ ಗುಡಿ ಪೂಜಾರಿನ್ನ ಅದ್ಯಾರೋ ಖೂನಿ ಮಾಡ್ಯಾರಂತ. ಅದೂ ಮಟ ಮಟ ಮಧ್ಯಾಹ್ನದೊಳಗ ಹೆಣಾ ಅಲ್ಲೇ ಗುಡಿ ಹಿಂದೇ ಬಿದೈತಿ.’ ಅಂತ ಉಸಿರು ಕತ್ತರಿಸಿ ಕತ್ತರಿಸಿ ಹೇಳ್ತಾ ಇದ್ದಂಗೆ ಎಲ್ಲರ ಹುರುಪು ಜರ್ರನೆ ಇಳದು ಹೋಯ್ತು. ಶಾಂತಗೌಡಗೆ ತಟ್ಟನೇ ಸೋಮಪ್ಪನ ತೋಟದೊಳಗ ಜೀತಕ್ಕಿರೋ ಮೀಸಿ ಜಟ್ಟೆಪ್ಪ ನೆನಪಾದ.








0 Comments