ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಖಾಸನೀಸ ಎಂಬ ರುದ್ರವೀಣೆ

kiramnag.jpgಕಿ ರಂ ನಾಗರಾಜ

ತೆಗಾರ ರಾಘವೇಂದ್ರ ಖಾಸನೀಸರು ನನಗೆ ೭೦ರ ದಶಕದಲ್ಲಿ ಪರಿಚಿತರಾದರು. ಹೀಗೆ ಪರಿಚಯ ಆದವರು ಅನಂತರದ ದಿನಗಳಲ್ಲಿ ತುಂಬ ಆತ್ಮೀಯರೇ ಆದರು. ಬೆಂಗಳೂರು ವಿಶ್ವವಿದ್ಯಾಲಯದ ಗ್ರಂಥಾಲಯದ ಅಧಿಕಾರಿಗಳಾಗಿದ್ದ ಅವರು ಅಲ್ಲಿನ ತಾಂತ್ರಿಕ ಶಾಖೆಯಲ್ಲಿದ್ದರು. ಪ್ರತಿನಿತ್ಯ ಒಮ್ಮೆಯಾದರೂ ಅವರು ನಮ್ಮೊಂದಿಗೆ, ಅಂದರೆ ಕೆ.ವಿ.ನಾರಾಯಣ, ಬಸವರಾಜ ಕಲ್ಗುಡಿ, ಎಸ್.ಶಿವಣ್ಣ, ಡಿ.ಆರ್.ಬರಗೂರು ರಾಮಚಂದ್ರಪ್ಪ ಅವರೊಂದಿಗೆ ಸೇರಿಕೊಳ್ಳುತ್ತಿದ್ದರು. ಅವರು ತಮ್ಮ ಸಹೋದ್ಯೋಗಿಗಳೊಂದಿಗೆ ಟೀ ಕುಡಿದು ಅಥವಾ ಆ “ಆಚರಣೆ”ಯನ್ನು ಮುಗಿಸಿಕೊಂಡು ಗ್ರಂಥಾಲಯದ ಕಡೆಗೆ ಹೊರಡುತ್ತಿದ್ದರು. ನಮ್ಮ “ಗುಂಪು” ಚಹಾದತ್ತ ಹೋಗುತ್ತಿದ್ದಾಗ ಅವರ ಭೇಟಿ ಅಕಸ್ಮಾತ್ ಎಂಬಂತೆಯೇ ಸಹಜವಾಗಿಯೇ ಆಗುತ್ತಿತ್ತು. ನಾನು ಅವರನ್ನು ಮತ್ತೆ ಒಂದರ್ಧ ಟೀ ಕುಡಿಯಲು ಪ್ರೇರೇಪಿಸುತ್ತಿದ್ದೆ. ಅವರು ಮತ್ತೆ ಟೀ ಕುಡಿಯಲು ಒಲ್ಲೆ ಎಂದದ್ದು ನನಗೆ ಗೊತ್ತೇ ಇಲ್ಲ. ಅಂಥ ಅದಮ್ಯ ಟೀ ಪ್ರೇಮಿಯನ್ನು ನಾನು ನೋಡಿಯೇ ಇಲ್ಲ. ತುಂಬ ಇಷ್ಟಪಟ್ಟು ಟೀ ಕುಡಿಯುವವರೆಂದರೆ ಅವರೇ ಸೈ. ಟೀ ನಿಮಿತ್ತವಾಗಿ ನನ್ನ – ಅವರ ನಡುವೆ, ಗೇಲಿಯಿಂದ ಗಂಭೀರದ ತನಕ ಅಂದಿನ, ಹಿಂದಿನ ಅನೇಕ ಸಂಗತಿಗಳು ಬಂದು ಹೋಗುತ್ತಿದ್ದವು. ಅವರನ್ನು ನಾನು ಪೂನಾವಾಲಾ ಎಂದೇ ಗುರುತಿಸುತ್ತಿದ್ದೆ. ಅದು ಅವರಿಗೆ ಮತ್ತೆ ಹುರುಪನ್ನೇ ಕೊಡುತ್ತಿತ್ತು. ಗೋಕಾಕರು ಕವಿತೆಯನ್ನು ಗಡಗಡಿಸಿ, ದಪ್ಪ ಗಂಟಲಿನಲ್ಲಿ ನಡುಕದ ಶೈಲಿಯಲ್ಲಿ ಓದುತ್ತಿದ್ದುದನ್ನು ಕುರಿತು ನಾನು ಅವರನ್ನು “ಮಾಗಿ” ಕವಿ ಎಂದು ಕರೆದಿದ್ದೆ. ಖಾಸನೀಸರು ಆ ಮಾತನ್ನು ತುಂಬ ಇಷ್ಟಪಟ್ಟರು. ಅಂದಿನಿಂದ ನಮ್ಮಿಬ್ಬರ ಮಾತಿನ ನಡುವೆ ಗೋಕಾಕರು “ಮಾಗಿ”ಯೇ ಆದರು. ಬೇಂದ್ರೆ ಮಾತು ಬಂದಾಗ ಖಾಸನೀಸ ಉತ್ಸಾಹಿತರಾಗುತ್ತಿದ್ದರು. ಲೈಬ್ರರಿಯ ತಾಂತ್ರಿಕ ವಿಭಾಗಕ್ಕೆ ಪರಿಶೀಲನೆಗಾಗಿ ಬಂದ ಹೊಸ ಪುಸ್ತಕಗಳ ಬಗ್ಗೆ ಗಮನ ಸೆಳೆದು “ಬಂದು ನೋಡಿ” ಎಂದು ಹೇಳಿ ನಮಗೆಲ್ಲ ಪುಸ್ತಕ ಪ್ರೀತಿಯನ್ನು ಬೆಳೆಸಿದರು. ಅನೇಕ ಬಾರಿ ಅವರನ್ನು ಬೀರು ಕುಡಿಯಲು ಮೆಜೆಸ್ಟಿಕ್ ಕಡೆಗೆ ಕರೆದುಕೊಂಡು ಬಂದದ್ದಿದೆ. ಒಂದೇ ಒಂದು ಬೀರ್ ಕುಡಿದು ಸಾಕಷ್ಟು ಸಮಯ ಕಳೆದು ಅವರು ರಾಜಾಜಿನಗರದ ಕಡೆಗೆ ಹೊರಡುತ್ತಿದ್ದರು.

ಖಾಸನೀಸರು ಆಗ್ಗೆ ಇನ್ನೂ ತಮ್ಮ ಕತೆಗಳ ಸಂಕಲನವನ್ನು ಪ್ರಕಟಿಸಿರಲಿಲ್ಲ. ಬರೆದ ಮೂರು ನಾಲ್ಕು ಕತೆಗಳ ಮೂಲಕವೇ ಕಥಾಸಕ್ತರನ್ನು ಆವರಿಸಿಕೊಂಡು ಅವರನ್ನು ತುದಿಗಾಲಿನ ಮೇಲೆ ನಿಲ್ಲಿಸಿದ್ದರು. ಆ ಕಾಲಕ್ಕಾಗಲೇ ಕಥಾಸಂಕಲನಗಳನ್ನು ಪ್ರಕಟಿಸಿದ್ದ ಅನೇಕ ಮುಖ್ಯ ಕತೆಗಾರರ ಮಧ್ಯೆ ಖಾಸನೀಸರು ತಮ್ಮದೇ ಆದ ವಿಭಿನ್ನ ಕತೆಗಳ ಮೂಲಕ ತಮ್ಮ ನೆಲೆಯನ್ನು ಸ್ಥಾಪಿಸಿಕೊಂಡವರಾಗಿದ್ದರು. ಅವರು ಎಂದೂ ತಮ್ಮ ಕತೆಗಳ ಬಗ್ಗೆ ಏನನ್ನೂ ಹೇಳಿದವರಲ್ಲ. ಯಾರೇ ಆಗಲಿ, ಅವರ ಕತೆಗಳ ಬಗ್ಗೆ ಅಷ್ಟಿಷ್ಟು ಮಾತನಾಡಲು ಆರಂಭಿಸಿದರೆ ಮೌನವಾಗುತ್ತಿದ್ದರು. ತಮ್ಮ ಕೃತಿಗಳ ಬಗೆಗೆ ಹೀಗೆ ದಿವ್ಯ ನಿರ್ಲಕ್ಷ್ಯ ತೋರುವ ಲೇಖಕರು ಬೆರಳೆಣಿಕೆಯಷ್ಟು ಮಾತ್ರ ಇರಬಹುದು. ಈಗಂತೂ ಇಂಥ ಲೇಖಕರು ಅದೆಷ್ಟು ಮಂದಿ ಇದ್ದಾರು?

ಖಾಸನೀಸರ ಕತೆಗಳು ಸೂಕ್ಷ್ಮವೂ, ಒಳಹೊಕ್ಕು ಪರಿಭಾವಿಸಿದರೆ ಭಯಾನಕವೂ ಆದ ಶ್ರದ್ಧೆಗಳ ದ್ವಂದ್ವಗಳಿಗೆ ಎದುರಾದ ಕತೆಗಳು. ಸಮಾಜದ ನೆಲೆಯನ್ನು ಅದೆಷ್ಟೇ ಐಕ್ಯಕಲ್ಪನೆಯ ದೃಷ್ಟಿಯಿಂದ ನೋಡಿದರೂ ಅಲ್ಲಿ ಐಕ್ಯತೆ ಹಾಗೆ ಇಲ್ಲವೆನ್ನುವುದೇ ಒಂದು ಮಹತ್ವದ ವಿಸಂಗತಿ. ಛಿದ್ರಗೊಂಡಿರುವ ಮನುಷ್ಯ ಸಂಬಂಧಗಳು, ಕೌಟುಂಬಿಕ ಸಂಬಂಧಗಳು ತನ್ನ ಮೇಲು ನೆಲೆಗಳ ಅನುಭೂತಿಗಳು ಅರ್ಥಾತ್ ಫೀಲಿಂಗ್ ಗಳು ಹಾಗೆ ಇಲ್ಲ ಅಥವಾ ನಿರ್ಜೀವಗೊಂಡಿವೆ ಎಂಬ ಭಯಾನಕ ಸತ್ಯಗಳನ್ನು ನಿರ್ಮಮ ಭಾವದಿಂದ ಖಾಸನೀಸರ ಕತೆಗಳು ಸ್ಫೋಟಿಸುತ್ತವೆ. ಸಾಮಾಜಿಕ ಅಪರಾಧದ ಗುಪ್ತ ವಲಯದ ಸಮಾಧಾನ ಸ್ಥಿತಿ ಮತ್ತು ಅದೇ ವಲಯ ಬಹಿರಂಗಗೊಂಡಾಗ ಏರ್ಪಡುವ ಕ್ರಿಯೆ, ಪ್ರಕ್ರಿಯೆಗಳನ್ನು ಅವರು ತೋರುವ ಬಗೆ ಕನ್ನಡ ಸಣ್ಣಕತೆಗಳ ಜಗತ್ತಿನಲ್ಲಿ ತುಂಬ ವಿಭಿನ್ನವಾದದ್ದು. ಮನುಷ್ಯ ಲೋಕ ಒಂದು ಬಂಧನದ ಲೋಕ. ಇದು ಅವನೇ ನಿರ್ಮಿಸಿಕೊಂಡದ್ದೋ? ಹಾಗೆ ಅವನ ಸುತ್ತ ನಿರ್ಮಿತಗೊಂಡದ್ದೊ? ಹೇಳಲು ಬರುವಂತಿಲ್ಲ. ಮನುಷ್ಯನ ಸುತ್ತ ಹೇಗೆ ಗುಪ್ತಶಕ್ತಿಗಳ ಅನೇಕ ಹೆಣಿಗೆಗಳು ವಿವರಿಸಲಾಗದಷ್ಟು ಗಾಢವಾಗಿ ಸಿಲುಕಿದೆ ಎಂಬುದು ಅವರ ಕತೆಗಳಲ್ಲಿ ತನ್ನಿಂದ ತಾನೇ ಸಹಜವಾಗಿ ಹಬ್ಬಿಕೊಂಡಿದೆ. ಒಬ್ಬ ಕತೆಗಾರ ತನ್ನ ನಿಲುವುಗಳನ್ನು, ಧೋರಣೆಗಳನ್ನು ಹೇಳಲು ಅನೇಕ ಬಾರಿ ಉತ್ಸುಕನಾಗುವುದುಂಟು. ಆದರೆ ಖಾಸನೀಸರು ಕತೆಯನ್ನು ಕಟ್ಟುವ ಕೆಲಸಕ್ಕಷ್ಟೇ ನಿಂತು ಓದುಗರು ತಮ್ಮ ತಮ್ಮ ಕಲ್ಪನೆಗಳನ್ನು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸುವ ಕತೆಗಾರರು. ಹೀಗಾಗಿ ಅವರ ಕತೆಗಳು ನನಗೆ ಪ್ರಿಯವಾಗಿವೆ.

ಖಾಸನೀಸರ “ತಬ್ಬಲಿಗಳು”, “ಅಲ್ಲಾವುದ್ದೀನನ ಅದ್ಭುತದೀಪ”ದಂಥ ಕತೆಗಳು ಕನ್ನಡ ಸಣ್ಣ ಕತೆಗಳ ವಲಯದಲ್ಲಿ ಕ್ಲಾಸಿಕ್ ಗಳೇ ಆಗಿವೆ. ಈ ಜಗತ್ತಿನಲ್ಲಿ ಯಾರಾದರೂ ಯಾರನ್ನಾದರೂ ಸಂಧಿಸಲು ಸಾಧ್ಯವೇ? ಹಾಗೆ ಸಂಧಿಸಲು ಯಾರಿಗೂ ಯಾವ ಅವಕಾಶಗಳೂ ಹಾಗೆ ಇಲ್ಲ. ಅದರಲ್ಲೂ ಪಿತೃಗಳ ಅಧಿಕಾರದ ಗಡಿರೇಖೆಗಳನ್ನು ಅತಿಕ್ರಮಿಸಲು ಸಾಧ್ಯವಿಲ್ಲದಂಥ ಕಠೋರ ಅಸಹಾಯಕ ಸ್ಥಿತಿ ತುಂಬ ಗೂಢವೂ, ಅಪಾರ ನೋವಿನಿಂದ ಕೂಡಿದ್ದೂ ಆಗಿದೆ ಎಂಬ ಸೂಕ್ಷ್ಮ ಧ್ವನಿ ಅವರ ಕತೆಗಳ ಆಳದಲ್ಲಿ ಹುದುಗಿದೆ. ಸಂಬಂಧಗಳ ಒಳಸುಳಿಗಳೊಂದಿಗೆ ಆಧ್ಯಾತ್ಮದ ಬಿಗಿತವೂ ಹೆಣೆದುಕೊಂಡಿರುವುದರಿಂದ ಮನುಷ್ಯ ಲೋಕಕ್ಕೆ ಯಾವ ಭರವಸೆಯಾಗಲೀ, ನಿರ್ದಿಷ್ಟತೆಯೂ ಇಲ್ಲ ಎನ್ನುವುದನ್ನು ಖಾಸನೀಸರ ಕತೆಗಳು ಹೇಳುತ್ತಿವೆ.

ನೋವನ್ನು ಮರೆಸುವುದಕ್ಕಿಂತ ನೋವನ್ನು ಲೋಕಕ್ರಮವನ್ನಾಗಿ ರೂಪಿಸಿದ ಖಾಸನೀಸರಿಗೆ ನನ್ನ ನಮಸ್ಕಾರಗಳು.

‍ಲೇಖಕರು avadhi

5 August, 2007

1 Comment

  1. ಅವಿನಾಶ್

    ನಮಸ್ಕಾರ,

    ನಿಮ್ಮ ಬ್ಲಾಗಿನ ವಿಷಯಗಳ ಆಯ್ಕೆ ಸಾರ್ಥಕ…

    ಚೆನ್ನಾಗಿದೆ…
    -ಅವಿನಾಶ್

Trackbacks/Pingbacks

  1. ಮತ್ತೆ ನೆನಪಾದರು ಖಾಸನೀಸ « ಅವಧಿ - [...] ಖಾಸನೀಸ ಎಂಬ ರುದ್ರವೀಣೆ [...]

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading