ಆಣೆಕಟ್ಟೆ ವಿಶ್ವನಾಥ್
——
ಸತ್ಯ ಘಟನೆ!!! ಆ ಮಾಯಾವಿಯು ತಲೆಯಿಂದ ಭುಜದವರೆಗೆ ಕೂದಲು ಹರಡಿಕೊಂಡು ವೃತ್ತಾಕಾರದ ಚಶ್ಮ ಧರಿಸಿದ್ದರು. ಮುಖದ ಮೇಲೆ ಸದಾ ನಗುವು ನಲಿದಾಡುತ್ತಿತ್ತು. ಕೈಯಲ್ಲೊಂದು ಸಣ್ಣ ನೋಟ್ ಬುಕ್ ಹಿಡಿದು ಕಛೇರಿಯ ಕೆಳ ಕೊಠಡಿಯಲ್ಲಿ ನನಗಾಗಿ ಕಾದು ಕುಳಿತಿದ್ದಳು. ನಾನು ಹೋದ ಕೂಡಲೆ ಮುಗುಳ್ನಕ್ಕಳು, ನಾನು ಮುಗುಳು ನಕ್ಕೆ. ‘ನಿನ್ನ ಹೆಸರೇನು’? ಎಂದಳು. ವಿಶ್ವನಾಥ ಎಂದೆ. ವಿಶ್ವನಾಥ ಎಂದರೆ ವಿಶ್ವದ ಒಡೆಯ ಎಂದರ್ಥ. ನನ್ನ ಲೋಕದಲ್ಲಿ ಅನೇಕ ಸಮಸ್ಯೆಗಳಿವೆ. ಒಡೆಯ ಹೆಸರಿಗಷ್ಟೆ ನಿಜವಾಗಿ ಬೇವಾರ್ಸಿಯಂತಿದೆ ಬದುಕು. ನನಗೆ ಎಲ್ಲರೂ ಖಾರದ ಕಿತ್ತಲೆಯನ್ನು ಕೊಡುತ್ತಾರೆ. ನಾನು ತಿನ್ನುತ್ತೇನೆ. ತಿಂದ ಮೇಲೆ ತಿಕಮಕವೆಲ್ಲಾ ಉರಿಯುತ್ತದೆ. ಏನಾದರೂ ಪರಿಹಾರ ಬೇಕು ಮಾಯಾವಿ ಎಂದು ಅಂಗಲಾಚಿದೆ.
ಅರೆ, ಏನೋ ಕಥೆ ಹೇಳ್ತಾ ಇದಿನಿ ಅಂದುಕೊಳ್ಳಬೇಡಿ. ನಡೆದ ಘಟನೆಯನ್ನೇ ಹೇಳುತ್ತಿದ್ದೇನೆ. ಈ ಖಾರದ ಕಿತ್ತಲೆ ಎಂದರೆ ಮತ್ತಿನ್ನೇನು ಅಲ್ಲ. ಎಲ್ಲರೂ ನನಗೆ “ನೀನು ಸರಿ ಹೋಗಬೇಕು, ನೀನು ಮಾಡುತ್ತಿರುವುದು ಸರಿ ಇಲ್ಲ, ಪದೇ ಪದೇ ಈತರ ಯಾಕೆ ಮಾಡುತ್ತೀಯ? ಅರ್ಥ ಮಾಡಿಕೊ” ಎಂದೆಲ್ಲಾ ಹೇಳುವ ಮಾತುಗಳು.
ಉದಾಹರಣೆಗೆ ನನ್ನ ಹೆಂಡತಿ, ಅವಳು “ಯಾವಾಗಲೂ ಈ ತೆಂಗಿನ ಕಾಯಿ ತುರಿದಾದ ಮೇಲೆ ಉಳಿದ ಕಾಯಿ ಹೋಳನ್ನು ಫ್ರಿಡ್ಜಿನಲ್ಲಿಡದೆ ಹೊರಗಡೆ ಇಟ್ಟು ಹೋಗುತ್ತೀರ, ಆಮೇಲೆ ಅದು ಕೆಟ್ಟು ಹೋಗುತ್ತೆ. ಮನೆಯಲ್ಲಿ ತಿನ್ನೊ ವಸ್ತು ಕೊಳೆಯಬಾರದು ಅಂತ ನನ್ನ ಮನೆಯಲ್ಲಿ ಹೇಳ್ತಿದ್ರು. ಇದರಿಂದ ಮನೆಗೆ ಶ್ರೇಯಸ್ಸಲ್ಲ…” ಈ ಮಾತನ್ನು ಕೇಳಿದ ಕೂಡಲೆ ನನ್ನ ತಿಕಮಕವೆಲ್ಲಾ ಉರಿಯಲು ಪ್ರಾರಂಭಿಸುತ್ತಿತ್ತು. ಅಲ್ಲಾ, ಗಂಡಸಾಗಿ ನಾನು ಅಡುಗೆ ಮಾಡುವುದೇ ದೊಡ್ಡಸ್ಥಿಕೆ. ಅದರಿಂದ ನನ್ನ ಬಗ್ಗೆ ಗೌರವಪಟ್ಟುಕೊಳ್ಳಬೇಕಿತ್ತು ಅವಳು. ನಾನು ಅಡುಗೆ ಮಾಡಿದ್ದನ್ನು ಊಟ ಮಾಡುತ್ತಾಳೆ. ಏನೋ ಅಲ್ಲಿ ತೆಂಗಿನ ಹೋಳು ಮರೆತು ಬಿಟ್ಟಿದ್ದೆನಪ್ಪ, ಎತ್ತಿ ಇಡೋದ ಬಿಟ್ಟು ಈತರ ಭಾಷಣ ಬಿಗಿತಾಳೆ” ಎಂದೆಲ್ಲಾ ಯೋಚಿಸುತ್ತಿದ್ದೆನು. ಅವಳು ಬಿಗಿಯುತ್ತಿದ್ದ ಇಂತಹ ಭಾಷಣಗಳನ್ನೇ ಖಾರದ ಕಿತ್ತಲೆ ಎಂದಿದ್ದು.
ನಾನು ಸರಿಪಡಿಸಿಕೊಳ್ಳಬೇಕಾದ ವರ್ತನೆಗಳ ಕುರಿತು ದಿನನಿತ್ಯದ ಭಾಷಣಗಳು ಅಷ್ಟಿಷ್ಟಲ್ಲ. ಕಛೇರಿಯಲ್ಲಿ ಬಾಸ್ ಗಳು ಇಂತಹ ಕಿತ್ತಲೆ ಕೊಡುತ್ತಾರೆ. “ವಿಶ್ವನಾಥ್ ಇಷ್ಟುವರ್ಷ ಕೆಲಸ ಮಾಡಿದ್ದೀಯ, ಈತರ ಅಕೌಂಟ್ ಕಳಿಸಿದ್ದೀಯ, ನೀನು ಸರಿಹೋಗುವುದು ಯಾವಾಗ” ಹೀಗೆ.. ಇಂತಹ ಖಾರದ ಕಿತ್ತಲೆಗಳ ತಿಂದು ತಿಂದು ಮೈಕೈಯೆಲ್ಲಾ ಉರಿಹತ್ತಿ ಮುಖ, ಕಣ್ಣುಗಳಲ್ಲಿಯೂ ಕಾರದ ಕಿತ್ತಲೆಯ ಬೆಂಕಿಯಾಗಿ ಚಿಮ್ಮುತ್ತಿತ್ತು. ಖಾರದ ಕಿತ್ತಲೆಯನ್ನು ನುಂಗಿದ ಕೂಡಲೆ ಒಳಗಿನ ಅಹಂಕಾರದ ಗಾಯಕ್ಕೆ ಲೇಪನವಾಗುತ್ತಿತ್ತು. ಇದರಿಂದ ಕೆಲವೊಮ್ಮೆ ರಿಟರ್ನ್ ಫೈರ್ ಮಾಡುತ್ತಿದ್ದುದು ಇತ್ತು. ನನ್ನ ಈ ಸಮಸ್ಯೆಯನ್ನು ಆ ಮಾಯಾವಿಯ ಜೊತೆಗೆ ಹಂಚಿಕೊಂಡೆನು. ಸೋಮವಾರ ನಿಗಧಿಪಡಿಸಿದ ಜಾಗಕ್ಕೆ ಬಾ, ನಾ ನಿನಗೆ ಒಂದು ಮಾಯದ ಕಿತ್ತಲೆ ಹಣ್ಣು ತೋರಿಸುತ್ತೇನೆ. ಖಾರದ ಕಿತ್ತಲೆಯನ್ನು ನೀನು ಸಿಹಿಯಾಗಿಸಿಕೊಳ್ಳುವ ಮಾಯದಂಡ ಕೊಡುತ್ತೇನೆ ಎಂದಳು.

ಮಾಯಾವಿ ಹೇಳಿದ ಜಾಗಕ್ಕೆ ಸಮಯಕ್ಕೆ ಸರಿಯಾಗಿ ಹೋದೆನು. ಆಟ ಆಡಿಸಿದಳು, ಕುಣಿಸಿದಳು. ಸಂಗೀತ ಹಾಕಿ ತಲೆದೂಗಿಸಿದಳು. ಕವನ ಹೇಳಿದಳು. ಮೈಮನ ಅರಳಿತು. ಬಿಟ್ಟ ಗಣ್ಣಿನಿಂದ ಅವಳನ್ನೇ ದಿಟ್ಟಿಸುತ್ತಾ ಇದ್ದೆ. ಅವಳು ಕಿತ್ತಲೆ ಹಣ್ಣಿನ ಚಿತ್ರವನ್ನೊಂದು ಬರೆದಳು. ಆ ಚಿತ್ರವನ್ನು ಖಾರದ ಕಿತ್ತಲೆ ಎಂದು ವಿವರಿಸುತ್ತಾ ಅದನ್ನು ಸಿಹಿಯಾಗಿಸುವ ಜಾದು ಹೇಳಿಕೊಟ್ಟಳು.
ಮೊದಲು ನಿನಗೆ ಯಾರಾದರೂ ಕಿತ್ತಲೆಯನ್ನು ಕೊಟ್ಟಾಗ ಒಂದೇ ಸಮನೆ ಗಬಕ್ಕನೆ ನುಂಗಬೇಡ. ನುಂಗಿದರೆ ಖಾರದ ಕಿತ್ತಲೆಯಾಗಿ ನಿನ್ನ ಒಳಗಿರುವ ಅಹಂಕಾರಕ್ಕೆ ಲೇಪನವಾಗಿ ಎಲ್ಲಾ ಕಡೆ ಉರಿಯಾಗಿ ಕೆಲವು ಸಲ ಬ್ಯಾಕ್ ಫೈರ್ ಕೂಡ ಆಗುತ್ತದೆ. ಮೊದಲು catch the orange!! ಕಿತ್ತಲೆಯನ್ನು ಹಿಡಿದುಕೊ. ಅನೇಕ ಬಾರಿ ನಾವು ಸೀದಾ ನುಂಗಿ ಬಿಡುತ್ತೇವೆ. ಹಾಗೆ ಮಾಡಲೇ ಬಾರದು. ಕಿತ್ತಲೆ ಕೊಟ್ಟವರಿಗೂ ಏನೂ ಹೇಳಲೇಬಾರದು. Catch the orange and take deep breath. ಕಿತ್ತಲೆಯನ್ನು ಹಿಡಿದ ಮೇಲೆ ಒಮ್ಮೆ ಆಳವಾದ ಉಸಿರು ತೆಗೆದುಕೊ. (ಕ್ಷಮಿಸಿ, ಮಾಯಾವಿಯು ಇಂಗ್ಲೀಷ್ ನಲ್ಲೇ ಮಾತನಾಡಿದ್ದರಿಂದ ಈ ಪಂಚಿಂಗ್ ಡೈಲಾಗ್ ತರ ಇವು ಇಂಗ್ಲೀಷ್ ನಲ್ಲೇ ನನ್ನೊಳಗೆ ಉಳಿದುಹೋಗಿವೆ.) ಈಗ ನಿಧಾನವಾಗಿ ಕಿತ್ತಲೆಯನ್ನು ನೋಡು ನಿಧಾನವಾಗಿ ಬಿಡಿಸು open the orange. ಅದರೊಳಗೆ ಆರು ತೊಳೆಗಳಿರುತ್ತವೆ. ಆರು ತೊಳೆಗಳು ಯಾವೆಂದರೆ
- ನಿನ್ನ ಬಗ್ಗೆ ನಿನಗೆ ಯಾವುದೋ ಒಂದು ಮಾಹಿತಿ ಇರುತ್ತದೆ. ( ಈ ತೊಳೆಯನ್ನು ತಿನ್ನು ಸಿಹಿಯಾಗಿರುತ್ತದೆ)
- ಕಿತ್ತಲೆ ನೀಡಿದವರ ಬಗ್ಗೆ ಯಾವುದೋ ಮಾಹಿತಿಯ ಇರುತ್ತದೆ. ( ಈ ತೊಳೆಯನ್ನೂ ತಿಂದು ಬಿಡು)
- ನಿನಗೆ ಬೇಕಾದ ಹೆಚ್ಚಿನ ಮಾಹಿತಿಯ ಭಾಗ ( ಅಂದರೆ ಇದನ್ನು ಕಿತ್ತಲೆ ಕೊಟ್ಟವರಿಗೆ ಕೇಳು)
- ಕಿತ್ತಲೆ ಕೊಟ್ಟವರಿಗೆ ಇನ್ನೂ ಹೆಚ್ಚಿನ ಮಾಹಿತಿಯ ಅಗತ್ಯ ಇದೆ ( ಅದನ್ನು ಅವರಿಗೆ ಕೊಟ್ಟು ಬಿಡು)
- ಘಟನೆ – ಸಾಂದರ್ಭಿಕವಾಗಿರಬಹುದು.
- ಕೊಳೆತ ಭಾಗ – ಕಿತ್ತಲೆ ನೀಡಿದವರು ತಪ್ಪಾಗಿ ಅರ್ಥ ಮಾಡಿಕೊಂಡಿರುವುದು. ಅವರ ಉದ್ದೇಶ ಸರಿ ಇಲ್ಲದೆ ಇರಬಹುದು. ನಿಮ್ಮ ಏಳಿಗೆ ಸಹಿಸದೆ ನಿಮ್ಮನ್ನು ಹಿಂದೆ ತಳ್ಳಲು ಈ ರೀತಿ ಹೇಳಿರಬಹುದು ಇತ್ಯಾದಿ.
ಈ ಮೇಲೆ ಹೇಳಿದ್ದು ಬಹುಷಃ ಅರ್ಥವಾಗಿರಲಿಕ್ಕಿಲ್ಲ. ಇದನ್ನು ಉದಾಹರಣೆ ಸಮೇತ ವಿವರಿಸುತ್ತೇನೆ. ಈ ಮೇಲಿನ ಉದಾಹರಣೆಯನ್ನು ತೆಗೆದುಕೊಳ್ಳೋಣ. ನನ್ನ ಹೆಂಡತಿ ಹೇಳುತ್ತಾಳೆ “ನೀನು ಯಾವಾಗಲೂ ತೆಂಗಿನಕಾಯಿ ತುರಿದಾಗ ಉಳಿದ ತೆಂಗಿನಕಾಯಿ ಅದನ್ನು ಫ್ರಿಡ್ಜ್ ನಲ್ಲಿ ಇಡದೆ ಹೊರಗಿಡುತ್ತೀಯ….. ಇತ್ಯಾದಿ” ಇದನ್ನು ಒಮ್ಮೆಲೆ ತಿನ್ನುವ ಬದಲು ಹಿಡಿದು ದೀರ್ಘವಾಗಿ ಉಸಿರು ತೆಗೆದುಕೊಂಡು ಒಂದು ಕ್ಷಣ ನಿರಾಳರಾಗೋಣ. ಈಗ ಈ ಕಿತ್ತಲೆ ಬಿಡಿಸಿದಾಗ ಮೊದಲನೆ ಭಾಗದಲ್ಲಿ ನನಗೊಂದು ಮಾಹಿತಿ ಇದೆ. ಮಾಹಿತಿ ಏನೆಂದರೆ ನಾನು ಫ್ರಿಡ್ಜ್ ನಲ್ಲಿ ತೆಂಗಿನಕಾಯಿ ಇಡುತ್ತಿಲ್ಲ. ಇಡಬೇಕು. ನನ್ನ ವರ್ತನೆಯ ಬಗ್ಗೆ ಒಂದು ಮಾಹಿತಿ ಇದೆ.
ಎರಡನೆ ಭಾಗದಲ್ಲಿ ಇದನ್ನು ಹೇಳುತ್ತಿರುವ ಹೆಂಡತಿಯ ಬಗ್ಗೆ ಒಂದು ಮಾಹಿತಿ ಇದೆ. ಅವಳ ಮಾತಿನಲ್ಲಿ ಅವಳು ‘ಜವಾಬ್ದಾರಳು’ ಎಂಬುದನ್ನು ಹೇಳುತ್ತಿದೆ. ಆಹಾರ ಕೊಳೆಯುವ ಬಗ್ಗೆ ಕಾಳಜಿ ಇದೆ. ಇದೆಲ್ಲಾ ಅವಳ ಬಗ್ಗೆ ಇರುವ ಮಾಹಿತಿ. ಮೂರನೆ ಭಾಗದಲ್ಲಿ ನನಗೆ ಹೆಚ್ಚಿನ ಮಾಹಿತಿ ಅಗತ್ಯ ಇದೆ. ಅಂದರೆ ನಾನು ತೆಂಗಿನಕಾಯಿಯನ್ನು ಹೊರಗೆ ಇಟ್ಟದ್ದು ನಿಜವಾಗಿಯೂ ಕೆಡುತ್ತಿದೆಯಾ? ಮರುದಿನವೇ ಅದನ್ನು ಬಳಸುತ್ತಿದ್ದೆವಲ್ಲಾ, ನಿಜಕ್ಕೂ ಹಾಳಾಗುತ್ತಿದೆಯಾ? ( ಅರ್ಥ ಮಾಡಿಸಲಷ್ಟೆ ಇಂತಹ ಉದಾಹರಣೆಗಳ ಕೊಡುತ್ತಿದ್ದೇನೆ) ಅಥವಾ ನಿಮಗೆ ಇನ್ನಾವುದೊ ಹೆಚ್ಚಿನ ಮಾಹಿತಿಯ ಅಗತ್ಯ ಇದ್ದರೆ ಕಿತ್ತಲೆ ನೀಡಿದವರಿಗೆ ಕೇಳಿರಿ.
ನಾಲ್ಕನೆ ಭಾಗದಲ್ಲಿ ಕಿತ್ತಲೆ ಕೊಟ್ಟವರಿಗೆ ಅಗತ್ಯವಾದ ಹೆಚ್ಚಿನ ಮಾಹಿತಿ. ಉದಾಹರಣೆಗೆ, ತೆಂಗಿನಕಾಯಿಯನ್ನು ನಾನು ಹೊರಗಿಡುತ್ತಿರುವುದು ಮರೆತಲ್ಲ ಬದಲಾಗಿ ತೆಂಗಿನಕಾಯಿಯನ್ನು ಫ್ರಿಡ್ಜ್ ನಲ್ಲಿ ಇಡುವುದರಿಂದ ಫ್ರಿಡ್ಜ್ ಹೊರಸೂಸುವ ರಾಸಾಯನಿಕಗಳಿಂದ ತೆಂಗಿನಕಾಯಿ ವಿಷಯಮಯವಾಗುತ್ತದೆ. ಆದ್ದರಿಂದ ನಾನು ಪ್ರಜ್ಞಾಪೂರ್ವಕವಾಗಿಯೇ ತೆಂಗಿನಕಾಯಿ ಹೊರಗಡೆ ಇಡುತ್ತಿದ್ದೇನೆ. ಇಂತಹ ಅಗತ್ಯ ಹೆಚ್ಚುವರಿ ಮಾಹಿತಿ ಅವರಿಗೆ ಕೊಟ್ಟುಬಿಡಿ.
ಐದನೆ ಭಾಗದಲ್ಲಿ ಬರುವುದು ಕಿತ್ತಲೆ ನೀಡಿದ್ದು ಸಾಂಧರ್ಭಿಕವಾಗಿರಬಹುದು. ಉದಾಹರಣೆಗೆ, ನಾನು ನಿತ್ಯವೂ ತೆಂಗಿನಕಾಯಿ ಹೊರಗಡೆ ಇಡುವುದಿಲ್ಲ. ಬದಲಾಗಿ ನೆನ್ನೆ ಕೆಲಸಕ್ಕೆ ತುರ್ತಾಗಿ ಹೊರಗಡೆ ಹೋಗಬೇಕಾಗಿದ್ದ ಕಾರಣ ಅಲ್ಲಿ ಇಟ್ಟು ದಿಢೀರನೆ ಹೊರನಡೆದೆ. ಆರನೆಯಭಾಗದಲ್ಲಿ ನಿಜಕ್ಕೂ ಕೊಳೆತ ತೊಳೆ ಇರಬಹುದು. ಅವಳ ಮಾತು ನೋಡಿದರೆ, ನಾನು ಅಡುಗೆಮಾಡಿ ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡಿದಾಗ ಬರುವ ಲೈಕುಗಳಿಗೆ ಹೊಟ್ಟೆ ಉರಿದುಕೊಂಡು ಈ ರೀತಿ ಕಿರಿಕ್ ಮಾಡ್ತಾ ಇರಬಹುದು. ನನ್ನ ಹಿಂದೆ ಜಗ್ಗಲು ನನ್ನ ಕೆಲಸದಲ್ಲಿ ಇಂತಹ ಮಾತುಗಳನ್ನಾಡುತ್ತಿರಬಹುದು. ( ಉದಾಹರಣೆಗೆಷ್ಟೆ, ನನ್ನ ಹೆಂಡತಿ ನನ್ನ ಫೇಸ್ ಬುಕ್ ಗೆ ಬಗ್ಗಿ ನೋಡುವುದಿಲ್ಲ.) ಇದನ್ನು ಕೊಳೆತ ಭಾಗ ಎನ್ನುತ್ತೇವೆ. ಒಂದು ಹಣ್ಣಿನಲ್ಲಿ ಒಂದು ತೊಳೆ ಭಾಗ ಮಾತ್ರ ಕೊಳೆತಿರುತ್ತದೆ. ಉಳಿದೆಲ್ಲವೂ ಸಿಹಿಯ ತೊಳೆಯಾಗಿ ಬಳಸಿಕೊಳ್ಳಬಹುದು.
ಹೀಗೆ ಕಿತ್ತಲೆಯನ್ನು ಬಿಡಿಸಿ ನೋಡಿದಾಗ 5 ತೊಳೆಯಲ್ಲಿ ಉಪಯುಕ್ತ ಮಾಹಿತಿ ಇರುತ್ತದೆ. 1 ತೊಳೆ ಕೊಳೆತಿರುವುದು ಇರುತ್ತದೆ. 5 ತೊಳೆಗಳ ಮಾಹಿತಿಯು ಸಿಹಿಯಾಗಿ ನಮಗೆ ಉಪಯೋಗಕ್ಕೆ ಬರುತ್ತದೆ. ಕೊಳೆತಿರುವುದನ್ನು ಬಿಟ್ಟುಬಿಡಿ. ಈ ರೀತಿ ಬೇರೆಯವರು ಎಸೆದ ಕಿತ್ತಲೆಯನ್ನು ಹಿಡಿದು ಬಿಡಿಸಿ ನೋಡಿದಾಗ ಸಿಹಿಯ ಕಿತ್ತಲೆ ಸಿಗುತ್ತದೆ ಎಂದು ಮಾಯಾವಿ ವಿವರಿಸಿದಳು.
ಈ ಮಾಯಾವಿಯು ಕೊಟ್ಟ ಈ ಮಾಯದಂಡವನ್ನು ಹಿಡಿದು ಮನೆಗೆ ಬಂದೆನು. ಹೆಂಡತಿಯು ಕಿತ್ತಲೆಯನ್ನು ಎಸೆದಾಗಲೆಲ್ಲಾ ತಿನ್ನುವ ಬದಲು ಬಿಡಿಸಿನೋಡುವುದ ಕಲಿತುಕೊಂಡೆನು. ಇದರಿಂದ ನಾನೆಷ್ಟು ನಿರಾಳನಾದೆ ಎಂದರೆ, ಮನೆಯೊಳಗೆ ಆಗುತ್ತಿದ್ದ ಜಗಳಗಳನ್ನು 50 % ಕಡಿಮೆ ಮಾಡಿಬಿಟ್ಟೆನು. ಈ ಮಾಯದಂಡವನ್ನು ಫೇಸ್ ಬುಕ್ ಕಾಮೆಂಟುಗಳಿಗೂ ವಿಸ್ತರಿಸಿಕೊಂಡೆನು. ಅನೇಕರ ಕಾಮೆಂಟುಗಳನ್ನು ನಾನು ಈ ಕಿತ್ತಲೆ ಬಿಡಿಸಿದಂತೆಯೇ ನೋಡುತ್ತೇನೆ. ಕಛೇರಿಯಲ್ಲಿ ಬಾಸ್ ಕೂಗಾಡಿದಾಗಲೂ ಒಮ್ಮೆ ನಿಟ್ಟುಸಿರು ಬಿಟ್ಟು ಕಿತ್ತಲೆ ಬಿಡಿಸುತ್ತೇನೆ.
ಈ ಮಾಯಾವಿಯನ್ನು ನಾನು ನನ್ನ ಜೀವನದಲ್ಲೆ ಎಂದೆಂದಿಗೂ ಮರೆಯಲಾರೆ. ಈ ಮಾಯಾವಿ ಖಾರದ ಕಿತ್ತಲೆಯನ್ನು ಸಿಹಿಯಾಗಿಸಿದ ಕಥೆಯನ್ನು ನಿಮಗೆ ಹೇಳಿದ್ದೇನೆ. ನೀವು ಮಾಯದಂಡವನ್ನು ಬಳಸಿ ಆರಾಮಾಗಿರಿ. ನಮಸ್ಕಾರ






0 Comments