ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಖರ್ಗೆ, ಆರೀಫ್ ರಾಜಾರನ್ನು ಮೆಚ್ಚದಿರಲಿ ಹೇಗೆ..??

Caste identity ಮತ್ತು ಎರಡು ಬಂಡಾಯದ ದನಿಗಳು ಕುರಿತು..

*ರಾಜಕೀಯ ಮತ್ತು ಸಾಂಸ್ಕೃತಿಕ ವಲಯದ ಎರಡು ಸಂದರ್ಭಗಳಿಂದಾಗಿ ನನ್ನ ಎದೆಗೂಡಲ್ಲಿ ತತ್ತಿ ತಳೆದಿದ್ದ ಮಾತುಗಳು ರೆಕ್ಕೆ ಬಂದು ಹಾರುವಂತಾಗಿದೆ.

1- ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮಾಧ್ಯಮದ ಮಂದಿ ದಲಿತ ಮುಖ್ಯಮಂತ್ರಿ ಸ್ಥಾನದ ಪ್ರಸ್ತಾಪವನ್ನು ಕಾಂಗ್ರೆಸ್ ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಮುಂದಿಟ್ಟಾಗ ‘ನಾನು ದಲಿತ ಎನ್ನುವ ಕಾರಣಕ್ಕೆ ಕಾಂಗ್ರೆಸ್ ಪಕ್ಷ ನನ್ನನ್ನು ಮುಖ್ಯಮಂತ್ರಿ ಮಾಡುವುದು ಬೇಡ. ಕೊಡುವುದಾದರೆ ಕಾಂಗ್ರೆಸ್ ಗೆ ನಿಷ್ಠೆಯಿಂದ ದುಡಿದ್ದೇನೆ ಎನ್ನುವುದನ್ನು ಗುರುತಿಸಿ ಸ್ಥಾನ-ಮಾನ ಕೊಡಲಿ’ ಎಂದಿದ್ದರು.

2- ಇತ್ತೀಚೆಗೆ ನಾಡಿನ ಪ್ರತಿಷ್ಠಿತ ಕರ್ನಾಟಕ ಸಂಘ (ಶಿವಮೊಗ್ಗ) ಈ ಬಾರಿ ಮುಸ್ಲಿಂ ಲೇಖಕರಿಗೆ ನೀಡಲಾಗುವ ‘ಪಿ.ಲಂಕೇಶ್ ಪ್ರಶಸ್ತಿ’ ಯನ್ನು ಕನ್ನಡದ ಸೃಜನಶೀಲ ಕವಿಗಳಲ್ಲಿ ಒಬ್ಬರಾದ ಆರೀಫ್‍ ರಾಜಾ ಅವರು ನಿರಾಕರಿಸಿದ್ದಾರೆ.

ಖರ್ಗೆ ಮತ್ತು ಆರೀಫ್‍ರಾಜಾ ಅವರು ಬೇರೆ ಬೇರೆ ಕ್ಷೇತ್ರದವರು. ಆದರೆ ಈ ಇಬ್ಬರ ನಿಲುವಿನಲ್ಲಿ ಒಂದು ಸ್ಪಷ್ಟ ಸಾಮ್ಯತೆ ಮತ್ತು ದೃಢತೆ ಎದ್ದು ಕಾಣುತ್ತಿದೆ.

ಖರ್ಗೆ ಮತ್ತು ಆರೀಫ್‍ ರಾಜಾ ಇಬ್ಬರೂ ದಮನಿತ ಸಮುದಾಯಗಳಿಂದ ಬಂದವರು. ಈ ಕಾಲಕ್ಕೂ ಈ ಇಬ್ಬರೂ ಹೊರಗಿಟ್ಟಲ್ಪಟ್ಟ ಸಮುದಾಯಗಳ ಪ್ರತಿನಿಧಿಗಳಂತೆ ಕಾಣಲ್ಪಡುವವರೇ. ರಾಜಕೀಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಹಂಚಿ ಹೋಗಿರುವ ಈ ಇಬ್ಬರಿಗೂ ತಮ್ಮ ಹಾದಿ, ಸ್ವಾಭಿಮಾನದ ಎಚ್ಚರವಿದೆ ಎಂಬುದು ಅವರಾಡಿರುವ ಮಾತುಗಳಿಂದ ಸ್ಪಷ್ಟವಾಗುತ್ತದೆ.

ಲಂಕೇಶ್ ಮೇಷ್ಟು ಮುಸ್ಲಿಂ ಸಮುದಾಯದ ಸಾಹಿತಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕರ್ನಾಟಕ ಸಂಘದಲ್ಲಿ ತಮ್ಮ ಹೆಸರಿನಲ್ಲಿ ಪ್ರಶಸ್ತಿಯನ್ನು ಇಟ್ಟಿದ್ದಾರೆ. ಅದನ್ನು ಪ್ರತಿವರ್ಷ ಕೊಡ ಮಾಡಲಾಗುತ್ತಿದೆ. ಈ ಬಾರಿ ಪ್ರಶಸ್ತಿ ಆರೀಫ್‍ರಾಜಾ ಅವರಿಗೆ ಸಂದಿದೆ. ಆದರೆ Caste identity ಯಿಂದ ಪ್ರಶಸ್ತಿ ಕೊಡುವುದಾದರೆ ಅದು ಬೇಡವೆಂದು ಆರೀಫ್‍ರಾಜಾ ನಿರಾಕರಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ -ವಿರೋಧಗಳ ಚರ್ಚೆ ನಡೆಯಿತು. ಮುಸ್ಲಿಂ ಸಮುದಾಯದ ಅನೇಕ ಹಿರಿಯ ಬರಹಗಾರರು ಆರೀಫ್‍ ರಾಜಾ ಅವರ ನಿರ್ಧಾರವನ್ನು ಸ್ವಾಗತಿಸಿದ್ದಾರೆ ಕೂಡ. ಲಂಕೇಶ್ ಮೇಷ್ಟ್ರು ಮುಸ್ಲಿಂ ಸಮುದಾಯದ ಸೃಜನಶೀಲ ಬರಹಗಾರರು/ಲೇಖಕರು/ ಸಾಹಿತಿಗಳನ್ನು ಸಾಂಸ್ಕೃತಿಕ ವಲಯದ ಮುಖ್ಯಧಾರೆಯಲ್ಲಿ ಗುರುತಿಸಲು, ಪ್ರೋತ್ಸಾಹಿಸಲು ಈ ಪ್ರಶಸ್ತಿಯನ್ನು ಇಟ್ಟಿದ್ದರು. ಅವತ್ತಿನ ಕಾಲಕ್ಕೆ ಅಗತ್ಯವೂ ಆಗಿತ್ತು.

ಅದೇನೆ ಇರಲಿ, ಈಗ ಆರೀಫ್‍ರಾಜಾ ಅವರು ಪ್ರಶಸ್ತಿಯನ್ನು ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿ ಸ್ಥಾನದ ಗಳಿಕೆ ಯನ್ನು ಜಾತಿ- ಧರ್ಮದ ಚೌಕಟ್ಟನ್ನು ಒಡೆದು ಸಾಮರ್ಥ್ಯ, ಶ್ರಮ , ಪ್ರತಿಭೆ ಮತ್ತು ಸರ್ವಸಮ್ಮತ ಒಪ್ಪಿಗೆಯ ಮೌಲೀಕರಣದ ಘನತೆಯಿಂದ ಕೂಡಿದ ಹಕ್ಕಿನಂತೆ ಪ್ರತಿಪಾದಿಸಿದ್ದಾರೆ. ಇದರೊಂದಿಗೆ ಈ ಇಬ್ಬರೂ ಸ್ವಾಭಿಮಾನದ ಪ್ರಶ್ನೆಗಳನ್ನು ರಾಜಕೀಯ ಮತ್ತು ಸಾಂಸ್ಕೃತಿಕ ವಲಯಗಳಿಗೆ ಎಸೆದು ಕುಂತಿದ್ದಾರೆ. ಈ ಇಬ್ಬರ ದನಿಯಲ್ಲೂ ಬಂಡಾಯ ಮೊಳಗುತ್ತಿದೆ.

ಕಾಂಗ್ರೆಸ್ ಎಂಬ ‘ಮಂದಮತೀಯ ಪಕ್ಷ’ ದ ಅಗ್ರಹಾರದಲ್ಲಿ ನಿಂತು ದಲಿತ ಖೋಟಾದಡಿ ನನಗೆ ಮುಖ್ಯಮಂತ್ರಿ ಸ್ಥಾನ ಬೇಡ ಎಂಬ ಗಟ್ಟಿ ದನಿಯ ಮಾತುಗಳನ್ನು ಆಡುವುದು ಬಹುಶಃ ಮಲ್ಲಿಕಾರ್ಜುನ ಖರ್ಗೆಯಂತಹ ಗಟ್ಟಿ ನಾಯಕನಿಗೆ ಮಾತ್ರ ಸಾಧ್ಯ . ಹಾಗೆಯೇ ಪ್ರಶಸ್ತಿಯೊಂದನ್ನು ಅದರ ಆಶಯದ ನೆಲೆಯನ್ನೇ ಪ್ರಶ್ನಿಸುವ ಮೂಲಕ ನಿರಾಕರಿಸುವುದು ಆರೀಫ್‍ ರಾಜಾರಂತಹ ಸೂಕ್ಷ್ಮ ಸಂವೇದನೆಯ ಕವಿಗೆ ಮಾತ್ರ ಸಾಧ್ಯವಾಗುತ್ತದೆ.

ಜೆಡಿಎಸ್ – ಕಾಂಗ್ರೆಸ್ ನ ಸಮ್ಮಿಶ್ರ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿರುವ ಡಾ. ಜಿ ಪರಮೇಶ್ವರ್ ಅವರು ಕಳೆದ ವಾರ ಎಸ್ಸಿ/ಎಸ್ಟಿ ನೌಕರರ ಸಮನ್ವಯ ಸಮಿತಿಯ ಸಮಾರಂಭವೊಂದರಲ್ಲಿ ಮಾತನಾಡುತ್ತಾ ನಾನೂ ದಲಿತ ನೌಕರನಂತೆ, ನನಗಿನ್ನೂ ಪ್ರಮೋಷನ್ ಆಗಿಲ್ಲ. ನನ್ನನ್ನು ದಲಿತ ಉಪ ಮುಖ್ಯಮಂತ್ರಿ ಅಂತಾರೆ ಎಂದು ಅಳಲು ತೋಡಿಕೊಂಡಿದ್ದಾರೆ.

ಹಿಂದೊಮ್ಮೆ ಪಕ್ಷದ ಬೃಹತ್ ಸಮಾರಂಭದಲ್ಲಿ ಇದೇ ಪರಮೇಶ್ವರ್ ಅವರು ದಲಿತರು ಇನ್ನೆಷ್ಟು ದಿನ ಈ ನೋವು ,ಶೋಷಣೆ ಅನುಭವಿಸಬೇಕು ಎಂದು ಅಕ್ಷರಶಃ ಕಣ್ಣೀರಿಟ್ಟಿದ್ದರು. ಹೌದು, ದಲಿತನೋರ್ವ ಈ ರಾಜ್ಯದ ಮುಖ್ಯಮಂತ್ರಿಯಾದರೆ, ಉಪಮುಖ್ಯಮಂತ್ರಿಯಾದರೆ, ರಾಜ್ಯಪಾಲರಾದರೆ, ರಾಷ್ಟ್ರಪತಿಯಾದರೆ ಅವರನ್ನು Dalith identity ಯಿಂದ ಕರೆಯಲ್ಪಡುತ್ತಾರೆ. ಇದು ಪಾರಂಪರಿಕವಾಗಿ ಪ್ರಜ್ಞಾಪೂರ್ವಕವಾಗಿ ಜಾತಿ ವ್ಯವಸ್ಥೆಯೊಂದು ರೂಢಿಸಿಕೊಂಡ ಸಂಪ್ರದಾಯ.

ಖ್ಯಾತ ಸಂಗೀತ ನಿರ್ದೇಶಕ ಇಳಿಯರಾಜಾ ಅವರಿಗೆ ನರೇಂದ್ರ ಮೋದಿ ಸರ್ಕಾರ ಪದ್ಮಭೂಷಣ ಪ್ರಶಸ್ತಿ ಘೋಷಿಸಿದಾಗ ಭಾರತದ ಅಂಗ್ಲ ದಿನಪತ್ರಿಕೆಯೊಂದು ದಲಿತರಾದ ಇಳಿಯರಾಜಾ ಅವರಿಗೆ ಪದ್ಮಭೂಷಣ ಗೌರವ ನೀಡುವ ಮೂಲಕ ಕೇಂದ್ರ ಸರ್ಕಾರ ಊನಾ ಪ್ರಕರಣ ಸೇರಿದಂತೆ ತನ್ನ ವಿರುದ್ದ ಎದ್ದಿರುವ ದಲಿತ ವಿರೋಧಿ ಭಾವನೆಯನ್ನು ತಣಿಸಲು ಮುಂದಾಗಿದೆ ಎಂಬರ್ಥದಲ್ಲಿ ಮುಖಪುಟದ ಸುದ್ದಿ ಮಾಡಿತ್ತು.

ಜಾತಿಯ ಹಂಗಿಲ್ಲದೆ ಜಗತ್ತಿನಾದ್ಯಂತ ಸಂಗೀತದ ರಸವುಣಿಸಿದ ಸಂಗೀತ ಸಾಮ್ರಾಜ್ಯದ ದಿಗ್ಗಜ ಇಳಯರಾಜಾ ಅವರ ಪ್ರತಿಭೆಯನ್ನು ಮರೆಮಾಚಿ ಜಾತಿಯನ್ನು ಪ್ರಚುರಪಡಿಸುವುದರ ಉದ್ದೇಶವೇನಿತ್ತು? (ವ್ಯಾಪಕ ಟೀಕೆಯ ಹಿನ್ನೆಲೆಯಲ್ಲಿ ಮರುದಿನ ಪತ್ರಿಕೆ ಕ್ಷಮೆ ಕೋರಿತ್ತು. ಆದರೆ ಅಷ್ಟರಲ್ಲಾಗಲೇ ಇಳಿಯರಾಜ ಅವರ ಜಾತಿ ಯಾವುದೆಂದು ಜಗಜ್ಜಾಹೀರಾಗಿತ್ತು)

ಈ ಹಿಂದೆಯೇ ಡಾ.ಸಿದ್ದಲಿಂಗಯ್ಯ ಅವರು ತಮ್ಮನ್ನು ದಲಿತ ಕವಿ ಎಂದು ಕರೆಯಬೇಡಿ ಎಂದಿದ್ದರು. ಅವರು ಇಂದಿಗೂ ‘ದಕಸಿ’ (ದಲಿತ ಕವಿ ಸಿದ್ದಲಿಂಗಯ್ಯ) ಎಂದೇ ಕರೆಯಲ್ಪಡುತ್ತಾರೆ. ಅದೇ ರೀತಿ ಆಧುನಿಕ ಕನ್ನಡದ ಕಥೆಗಾರರಲ್ಲಿ ಮೇರು ಹಿರಿಮೆಯನ್ನೇ ಹೊಂದಿರುವ ದೇವನೂರು ಮಹಾದೇವ ಅವರನ್ನು ಇಂದಿಗೂ ದಲಿತ ಕಥೆಗಾರ/ಲೇಖಕ ಎಂದೇ ಬೆರಳು ತೋರಲಾಗುತ್ತದೆ.

ದಲಿತ ಸಮುದಾಯದಲ್ಲಿ ಹುಟ್ಟಿದ ಈ ನಾಡಿನ ಯಾವುದೇ ತಲೆಮಾರುಗಳ ಸತ್ವಭರಿತ ಕವಿ, ಸಾಹಿತಿ, ಲೇಖಕರು ಸಾಂಸ್ಕೃತಿಕ ವಲಯದ ಇಂತಹ Caste identity ರಾಜಕಾರಣಕ್ಕೆ ಬಲಿಯಾಗುತ್ತಾ ದಲಿತ ಕವಿ/ ಲೇಖಕ/ ಸಾಹಿತಿ/ ದಲಿತ ಕಲಾಮಂಡಳಿ/ ದಲಿತ ಕಲಾವಿದ/ ದಲಿತ ಹೋರಾಟಗಾರ/ ದಲಿತ ಚಿತ್ರಕಾರ…ವಗೈರೆ ವಗೈರೆ ಯಾಗಿ ತುಳಿಯಲ್ಪಡುತ್ತಲೇ ಇದ್ದಾರೆ.

Caste identity ಎಂಬುದು ಬಲಾಢ್ಯ ಜಾತಿಗಳಿಗೆ ವರದಾನವಾಗಿದ್ದರೆ ದುರ್ಬಲ. ಶೋಷಿತ ಜಾತಿಗಳಿಗೆ ಅದೊಂದು ಶಾಪ. ಅದೇ ರೀತಿ ರಾಜಕೀಯದಲ್ಲೂ ದಲಿತ –ದಮನಿತ ಜಾತಿಗಳ ಹೆಗ್ಗುರುತು ಸಂದರ್ಭನುಸಾರ ಬಳಕೆಯಾಗುತ್ತ ದಲಿತ ರಾಷ್ಟ್ರಪತಿ, ರಾಜ್ಯಪಾಲ, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ , ದಲಿತ ನಾಯಕ, ಮುಸ್ಲಿಂ ನಾಯಕ, ಅಲ್ಪಸಂಖ್ಯಾತ ಸಚಿವ ಎಂದೆಲ್ಲಾ ಲೇಬಲ್ ಹಚ್ಚಿ ಅವರುಗಳು ಸಮುದಾಯಿಕ ಒಳಗೊಳ್ಳುವಿಕೆಯಿಂದ (universal inclusion) ದೂರವಿಡುವ ಮತ್ತು ಅವರ ಪದವಿ. ಪ್ರತಿಭೆ, ಪರಿಶ್ರಮವನ್ನು ಜಾತಿ-ಧರ್ಮದ ಬೇಲಿಯ ಗೂಟಕ್ಕೆ ಬಿಗಿಯುವ ಮೂಲಕ ದಲಿತರು -ದಮನಿತರಲ್ಲಿನ ಆತ್ಮವಿಶ್ವಾಸವನ್ನು ಕಟ್ಟಿಹಾಕುವ ಕೆಲಸ ಜೀವಂತವಾಗಿದೆ.

ಕಳೆದ ಸರ್ಕಾರದಲ್ಲಿ ಮತ್ತು ಆನಂತರದ ಚುನಾವಣೆಯ ಬೆನ್ನಲ್ಲೆ ದಲಿತ ಮುಖ್ಯಮಂತ್ರಿಯ ಬಗ್ಗೆ ಪ್ರಾಯೋಜಿತ ಚರ್ಚೆಗಳನ್ನು ಹುಟ್ಟು ಹಾಕಲಾಯಿತು. ಅಹಿಂದ ವರ್ಗದ ಆತ್ಮವಿಶ್ವಾಸದಂತೆ ಕೆಲಸ ಮಾಡುತ್ತಿದ್ದ ಸಿದ್ದರಾಮಯ್ಯ ಅವರನ್ನು ಪದಚ್ಯುತಿಗೊಳಿಸಲು ದಲಿತ ಅಸ್ತ್ರವನ್ನು ಬಳಸಲಾಯಿತೇ ವಿನಃ, ದಲಿತರಿಗಾಗಿ ರಾಜಕೀಯ ನ್ಯಾಯ ಒದಗಿಸುವ ಕರುಳ ಕಾಳಜಿಯಿಂದಲ್ಲ ಎಂಬುದು ಬಹಿರಂಗ ರಹಸ್ಯ.

ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಬಹುಮತ ಪಡೆದಲ್ಲಿ ಮತ್ತೆ ಹಿಂದುಳಿದ ವರ್ಗದ ಸಿದ್ದರಾಮಯ್ಯ ಅವರಿಗೆ ಸಂಭಾವ್ಯ ಮುಖ್ಯಮಂತ್ರಿ ಸ್ಥಾನವನ್ನು ತಪ್ಪಿಸಲು ಅಲ್ಲೂ ಕೂಡ ದಲಿತ ಅಸ್ತ್ರವನ್ನು ಪ್ರಯೋಗಿಸಲಾಯಿತು. ಬಿಜೆಪಿಯ ಘೋಷಿತ ಮುಖ್ಯಮಂತ್ರಿ ಅಭ್ಯರ್ಥಿ ಯಡಿಯೂರಪ್ಪ ಅವರು ಕಾಂಗ್ರೆಸ್ ದಲಿತರೊಬ್ಬರನ್ನು ಮುಖ್ಯಮಂತ್ರಿ ಅಭ್ಯೆರ್ಥಿಯನ್ನಾಗಿ ಘೋಷಿಸಲಿ ಎಂದು ಸವಾಲು ಹಾಕಿದರು.

ಆದರೆ ತಮ್ಮ ಪಕ್ಷದಲ್ಲೇ ಇರುವ ಗೋವಿಂದ ಕಾರಜೋಳ, ರಮೇಶ್ ಜಿಗಜಿಣಗಿ , ಅರವಿಂದ ಲಿಂಬಾವಳಿ, ಆನೇಕಲ್ ನಾರಾಯಣಸ್ವಾಮಿ ಅವರುಗಳಲ್ಲಿ ಒಬ್ಬರನ್ನಾದರೂ ತಮ್ಮ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯನ್ನಾಗಿಯಾದರೂ ಮಾಡುತ್ತೇನೆ ಎಂದು ಹೇಳುವಷ್ಟು ನೈತಿಕ ಹೊಣೆಗಾರಿಕೆ ಅವರಲ್ಲಿ ಸತ್ತುಹೋಗಿತ್ತು. ಇಂತಹ ಅಪಹಾಸ್ಯಗಳು ನಡೆಯುತ್ತಲೆ ಇರುತ್ತವೆ.

ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷರಾಗಿದ್ದರಿಂದ ದಲಿತ ಸಮುದಾಯಕ್ಕೆ ರಾಜಕೀಯ ನ್ಯಾಯ ಒದಗಿಸಿದ ಹೆಗ್ಗಳಿಕೆ ಕಾಂಗ್ರೆಸ್ ಮೂಗಿಗೆ ಹಚ್ಚಿದ ತುಪ್ಪವಷ್ಟೆ. ಈ ಹಿಂದೆ ಕೆ. ಹೆಚ್ ರಂಗನಾಥ್, ಬಸವಲಿಂಗಪ್ಪ, ರಾಚಯ್ಯ, ಮಲ್ಲಿಕಾರ್ಜುನ ಖರ್ಗೆ ಯವರಂತಹ ಘಟಾನುಘಟಿ ದಲಿತ ಸಮುದಾಯದ ನಾಯಕರುಗಳು ಪಕ್ಷದ ಮುಂಚೂಣಿಯಲ್ಲಿದ್ದರೂ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಕೈ ಹಿಡಿದು ಕರೆತರುವಲ್ಲಿ ಕಾಂಗ್ರೆಸ್ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾದರೂ ಎಂದು?

ಈ ಬಾರಿಯೂ ಕಾಂಗ್ರೆಸ್ ದಲಿತರೋರ್ವರನ್ನು ಮುಖ್ಯಮಂತ್ರಿ ಮಾಡುವ ಅವಕಾಶವಿದ್ದಾಗ್ಯೂ ಏಕೆ ಮಾಡಲಿಲ್ಲ.? ದುರಂತ ನೋಡಿ, ತಾವು ಪ್ರತಿನಿಧಿಸುತ್ತಿರುವ ಪಕ್ಷದ ಅರ್ಧದಷ್ಟು ಶಾಸಕರಿಲ್ಲದ ಜೆಡಿಎಸ್ ಗೆ ಮುಖ್ಯಮಂತ್ರಿ ಪದವಿಯನ್ನು ಬಿಟ್ಟುಕೊಟ್ಟು (ಬೇಷರತ್ ಬೆಂಬಲ!) ತನ್ನ ಕುಲಸ್ಥರ ಮುಂದೆ ತನ್ನ ಅಸಹಾಯಕತೆಯನ್ನು ತೋಡಿಕೊಳ್ಳುತ್ತಿರುವ ಪರಮೇಶ್ವರ್ ನನಗಂತೂ ಕಾಂಗ್ರೆಸ್ ನ ಉಳಿಗಮಾನ್ಯ ಪದ್ದತಿಯ ಆಳುಮಗನಂತೆ ಕಾಣುತ್ತಿದ್ದಾರೆ. ಹಾಗೆಂದ ಮಾತ್ರಕ್ಕೆ ಬಿಜೆಪಿ. ಜೆಡಿಎಸ್ ನಲ್ಲಿನ ದಲಿತರು ಜನನಾಯಕರಾಗಿದ್ದಾರೆಂದೆಲ್ಲ. ಅಲ್ಲಿರುವವರ ಸ್ಥಿತಿಯೂ ಪರಮೇಶ್ವರ್ ಅವರಿಗಿಂತ ಭಿನ್ನವಾಗಿಲ್ಲ. ಅಲ್ಲೂ ಉಳಿಗಮಾನ್ಯ ನಡೆದಿದೆ.

Caste identity  ಯ ಪ್ರೇತ ಜಗತ್ತಿನ ಜ್ಞಾನ ಶ್ರೇಷ್ಠ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಬಿಟ್ಟಿಲ್ಲ. ಅವರು ಇಂದಿಗೂ ಭಾರತದಲ್ಲಿ ದಲಿತ ಸೂರ್ಯ, ದಲಿತ ನಾಯಕನಾಗಿಯೇ ಉಳಿದಿದ್ದಾರೆ. ಅಪಾರ ಜ್ಞಾನ, ತಾಯ್ತನದ ನಾಯಕತ್ವ ಗುಣ ಉಳ್ಳ, ಜಗತ್ತೇ ಕೊಂಡಾಡುವ ಈ ನಾಯಕನನ್ನು ನಾವಿನ್ನೂ ಕೇವಲ ದಲಿತ ನಾಯಕ, ದಲಿತ ಸೂರ್ಯ ಹೆಚ್ಚೆಂದರೆ ಸಂವಿಧಾನ ಶಿಲ್ಪಿ ಎಂಬ ಹೊಗಳಿಕೆಗೆ ಮಾತ್ರ ಸೀಮಿತ ಗೊಳಿಸಬಿಡಲಾಗಿದೆ.

ಇನ್ನು ಪರಮೇಶ್ವರ್, ಖರ್ಗೆ, ಜಿಗಜಿಣಗಿ, ಕಾರಜೋಳ ಯಾವ ಲೆಕ್ಕ? ಇಲ್ಲಿ ದಲಿತೇತರರು ಮಾತ್ರ ಸಮುದಾಯಿಕ ಒಳಗೊಳ್ಳುವಿಕೆ ಇರುತ್ತದೆ ಅವರು ಮಾಸ್ ಲೀಡರ್ ಆಗಿ ಮೆರೆಯಬಲ್ಲರು. ಲೋಕಸಭೆಯಂತದ ಸಂವಿಧಾನ ಶ್ರೇಷ್ಠ ಮನೆಯ ವಿಪಕ್ಷ ನಾಯಕರಾದ ಖರ್ಗೆಯಂತವರು ಇನ್ನೂ ದಲಿತ ನಾಯಕರಾಗಿಯೇ ಉಳಿದುಕೊಳ್ಳುತ್ತಾರೆ.

ರಮೇಶ್ ಜಿಗಜಿಣಗಿ, ಕಾರಜೋಳರಂತಹ ನಾಯಕರು ದಲಿತ್ ಓಟ್‍ಬ್ಯಾಂಕ್ ನ ಪೋಸ್ಟರ್ ಗಳಾಗಿಯೇ ಬಳಕೆಯಾಗುತ್ತಾರೆ. ಅವರೆಂದು ಜನ ನಾಯಕರ ಸಾಲಿನಲ್ಲಿ ನಿಲ್ಲಲಾಗುವುದೇ ಇಲ್ಲ. ಏಕೆಂದರೆ ‘ನಾವು ಸದಾ ಬೇಟೆಯ ಜೊತೆಗಿದ್ದೇವೆ ಬೇಟೆಗಾರನ ಜೊತೆಗಲ್ಲ’ ಇಲ್ಲಿ ‘ನಾವು’ ಎಂದರೆ ದಲಿತರು, ‘ನೀವು’ ಎಂದರೆ ರಾಜಕೀಯವಾಗಿ ಮತ್ತು ಸಾಂಸ್ಕೃತಿಕವಾಗಿ ಆಳುವವವರು.

ಎಲ್ .ಹನುಮಂತಯ್ಯ ಅವರ ಈ ‘ನಾವು ನಿಮ್ಮೊಳಗೆ’ ಕವಿತೆಯಂತೆ

ಎಳೆವ ಎತ್ತಾಗಿ ಹೊರುವ ನೊಗವಾಗಿ
ಸಿಗಿವ ಗುಳವಾಗಿ ಬೆಳೆದ ಮರವಾಗಿ
ಬದುಕಿದೆನು ಹಟ್ಟಿಯಲಿ ಕೊಟ್ಟಿಗೆಯಲ್ಲಿ ಕರುವಾಗಿ..

ದಲಿತರ ಸಮುದಾಯದ ವೇದಿಕೆಗಳಲ್ಲಿ ತಮ್ಮನ್ನು ದಲಿತ ಉಪಮುಖ್ಯಮಂತ್ರಿ ಎಂದು ಕರೆಯುತ್ತಾರೆ ಎಂದು ಕಣ್ಣೀರಿಡುವವರು ಈ ಮೇಲಿನ ಕವಿತೆಯಂತೆ ಪಶುವಾಗಿ ಬದುಕಿದ್ದೊಂದೇ ಸಾರ್ಥಕ.

ರಾಜಕೀಯ ಮತ್ತು ಸಾಂಸ್ಕೃತಿಕ ವಲಯದಲ್ಲಿ ತನ್ನತನದ ಅಸ್ಮಿತೆಯನ್ನು ಕಳಚಿಕೊಂಡು ನೋವುಂಡು, ಬೆಂದು-ಬಸವಳಿದು ಬೆಳೆದ ಹಾದಿಯನ್ನು ತೊರೆದು ಸಾಂಸ್ಕೃತಿಕ ರೂಪಾಂತರಗೊಂಡು ವೈದಿಕ ಪರಿಚಾರಿಕೆಯಲ್ಲಿ ಆಧುನಿಕ ಮನು ಸಂತತಿಯಂತಿರುವ, ರಾಜಕೀಯ ಸ್ಥಾನ-ಮಾನಕ್ಕೆ. ಸಾಂಸ್ಕೃತಿಕ ವಲಯದ ಪ್ರಶಸ್ತಿ ಪುರಸ್ಕಾರಕ್ಕೆ ಮಾತ್ರ ಸಮುದಾಯದ ಗುರುತು ಹಚ್ಚಿಕೊಂಡು ಕಣ್ಣೀರಿಡುತ್ತಿರುವ ಇವತ್ತಿನ ಸೋ ಕಾಲ್ಡ್ ದಲಿತ-ದಮನಿತ ನಾಯಕರ ನಡುವೆ ಮಲ್ಲಿಕಾರ್ಜುನ ಖರ್ಗೆ ಮತ್ತು ಆರೀಫ್‍ ರಾಜಾ ಭಿನ್ನವಾಗಿ ಕಾಣುತ್ತಾರೆ.

‘ದಲಿತರು ಬಂದರು ದಾರಿ ಬಿಡಿ ದಲಿತರ ಕೈಗೆ ಅಧಿಕಾರ ಕೊಡಿ ……’.ಘೋಷಣೆ ಮೊಳಗುತ್ತಿದೆ.

ಸದ್ಯಕ್ಕೆ ಕೆಲಸ ಖಾಲಿ ಇಲ್ಲ.

‍ಲೇಖಕರು avadhi

16 July, 2018

ನಿಮಗೆ ಇವೂ ಇಷ್ಟವಾಗಬಹುದು…

8 Comments

  1. Dr. Prabhakar Nimbargi

    ಕಾಂಗ್ರೆಸ್ಸಿನಲ್ಲಿ ಎಂದಾದರೂ ಹಿಂದುಳಿದ ಪಂಗಡ/ಜಾತಿಯವರು ಪ್ರಧಾನಿಯಾಗುವುದು ಸಾಧ್ಯವಿತ್ತೇ/ದೆಯೇ? ತನ್ನ ಪ್ರತಿಭೆಯೊಂದರಿಂದಲೇ ಮುಂಚೂಣಿಗೆ ಬರಲು ಯಾವುದಾದರೂ ಕ್ಷೇತ್ರದಲ್ಲಿ ಸಾಧ್ಯವಾಗುತ್ತದೆಯೇ? ಎಷ್ಟೋ ಪ್ರತಿಭೆಗಳು ಜಾತಿ ಕಾರಣದಿಂದ ಹಿಂದುಳಿಯಲೇಬೇಕಾದ ಪರಿಸ್ಥಿತಿ ಯಾವಾಗಲೂ ನಡೆಯುತ್ತಲೇ ಬಂದಿದೆ. ಸ್ವಜನಪಕ್ಷಪಾತ ನಡೆಯುತ್ತಲೇ ಇದೆ.

  2. Bhuvaneshwari H.C

    Excellent ರವಿಯವರೇ. ಹೇಳಬೇಕಾದುದನ್ನು ಅಡಕವಾಗಿಸಿ ಪರಿಣಾಮಕಾರಿಯಾಗಿ ಹೇಳಿದ್ದೀರಿ!
    ರಾಜಕೀಯ, ಸಾಹಿತ್ಯ , ಸಾಮಾಜಿಕ ನೆಲೆಗಳಲ್ಲಿ ಒಡಮೂಡುವ ತಣ್ಣನೆಯ ಕೂರಂಬಿನ ನೋವನ್ನು ಅಷ್ಟೇ ಸಮಚಿತ್ತದಿಂದ ಕೆಲವೇ ನಿದರ್ಶನಗಳ ಮೂಲಕ ಕಣ್ಮುಂದೆ ಬಿಡಿಸಿಟ್ಟಿದ್ದೀರಿ.
    ಅದರ ಎಳೆ ಎಳೆಯನ್ನೂ ನೋಡುವ ಕಣ್ಣಿದ್ದವರಿಗೆ ‘ ಸ್ವಾಭಿಮಾನದ ಬಿಗುದುಂಬಿದ , ಶತಮಾನಗಳ ದುಮ್ಮಾನವನ್ನು ತುಟಿಕಚ್ಚಿ ಸಹಿಸುತ್ತಾ ಇಂಚಿಂಚೇ ಮೇಲೆದ್ದು ಬರುತ್ತಾ ಸತ್ವಪೂರ್ಣ ವರ್ಚಸ್ಸು ಸೂಸುವ
    ಅಖಂಡ ಗಾಥೆಯೇ ಈ ಬರಹದಲ್ಲಿರುವುದು ಗೋಚರವಾಗುತ್ತದೆ.

  3. Shyamala Madhav

    ಅತ್ಯುತ್ತಮ ಲೆಖನ. ದಾಖಲೆಗಳಲ್ಲಿ ಜಾತಿ ನಮೂದಿಸುವುದಕ್ಕೆ ಅಂತ್ಯ ಎಂದು?

  4. ಶ್ರೀರಂಗ ಯಲಹಂಕ

    Caste identity‌ ಎಂಬುದು ಭಾರತದಂತಹ ಬಹು ಸಂಸ್ಕೃತಿಯ ದೇಶಕ್ಕೆ ಸಹಜ. ಇದು ದುರಂತವೇನಲ್ಲ.ಬಹುಸಂಸ್ಕೃತಿಯನ್ನು ಬಿಜೆಪಿಯನ್ನು ಹಣಿಯಲು ಮಾತ್ರ ಬುದ್ಧಿಜೀವಿಗಳು ತಮಗೆ ಬೇಕಾದಾಗ ಆರಾಧಿಸುವುದು; ಬೇಡವಾದಾಗ ತಿರಸ್ಕರಿಸುವುದನ್ನು ಅರಿಯದಷ್ಟು ಜನಸಾಮಾನ್ಯರು ದಡ್ಡರೇನಲ್ಲ. ಜತೆಗೆ ಈ caste identity ಲೇಖಕರು ಹೇಳುವಂತೆ ಮುಂದುವರೆದ ಜಾತಿಗಳಿಗೆ ವರವೇನಲ್ಲ. ಅದು ಅವರಿಗೆ ಶಾಪ. ಖರ್ಗೆ ಅವರು ಮುಖ್ಯಮಂತ್ರಿಯಾಗುವುದನ್ನು ತಪ್ಪಿಸುತ್ತಿರುವುದು ಕಾಂಗ್ರೆಸ್ ನ ‘ಅಳಿವು ಉಳಿವಿನ’ ಲೆಕ್ಕಾಚಾರ. ಇದು ಬಹಿರಂಗವಾಗಿರುವ ಗುಟ್ಟು!.

  5. ಶ್ರೀರಂಗ ಯಲಹಂಕ

    ‘ನನಗೆ ಜಾತಿ ಬೇಡ’ ಎಂದು ಬೆಂಗಳೂರಿನ ಟೌನ್ ಹಾಲ್, ಫ್ರೀಡಂ ಪಾರ್ಕಿನಲ್ಲಿ , ಪೋಸ್ಟರ್ ಹಿಡಿದು ನಿಂತು ಸರ್ಕಾರದ ಮೇಲೆ ಒತ್ತಡ ತರಬೇಕು. ಇದನ್ನು ಕೇವಲ ಕೆಲವು ಬುದ್ದಿಜೀವಿಗಳು, ಪತ್ರಕರ್ತರು ಮಾಡಿದರೆ ಸಾಲದು. ಅದಕ್ಕೂ ಮೊದಲು ‘ಜಾತಿ ನಮೂದಿಸುವುದರಿಂದ’ ಸಿಗುವ ಎಲ್ಲಾ ಸವಲತ್ತುಗಳನ್ನು , ರಾಜಕೀಯದ ವೋಟ್ ಬ್ಯಾಂಕ್ ಸಹ, ಬಿಟ್ಟುಕೊಡಲು ಸಿದ್ಧರಾದವರು ಒಪ್ಪಬೇಕು. ಆಗ ಮಾತ್ರ ದಾಖಲೆಗಳಲ್ಲಿ ಜಾತಿ ನಮೂದಿಸುವುದಕ್ಕೆ ಕೊನೆಯಾಗಬಹುದೇನೋ?!

  6. ಹಜರತಅಲಿ ದೇಗಿನಾಳ

    ಕರ್ನಾಟಕ ಸಂಘ ಎರಡು ಕಾವ್ಯ ಪ್ರಶಸ್ತಿಗಳನ್ನು ಕೊಡುತ್ತದೆ.ಒಂದು ಮುಸ್ಲಿಂ ಲೇಖಕರಿಗೆ.ಮತ್ತೊಂದು ಎಲ್ಲ ಸಮುದಾಯಗಳ ಕವಿಗಳಿಗೆ.ಆರೀಪ್ ರಾಜಾ ಅವರು ತನಗೆ ಮುಸ್ಲಿಂ ಲೇಖಕ ವಿಭಾಗದಲ್ಲಿ ಪ್ರಶಸ್ತಿ ಬೇಡವೆಂದು ಸ್ಪರ್ಧೆಗೆ ಪುಸ್ತಕ ಕಳಿಸುವಾಗಲೇ ಹೇಳಬೇಕಿತ್ತು.ಆಗ ಮುಸ್ಲಿಂ ವಿಭಾಗದಲ್ಲಿ ಪರಿಗಣಿಸುತ್ತಿರಲಿಲ್ಲ.ಆಗ ಕವಿಗಳ ತೂಕ ಹೆಚ್ಚುತ್ತಿತ್ತು. ಮಾಧ್ಯಮಗಳಲ್ಲಿ ಘೋಷಣೆಯಾದ ನಂತರ ಪ್ರಶಸ್ತಿ ನಿರಾಕರಿಸುವುದನ್ನು ನೋಡಿದರೆ ಇದು ಕವಿಗಳು ಪ್ರಚಾರ ಪಡೆಯುವ ಅದ್ಭುತ ತಂತ್ರ ಎನಿಸುತ್ತದೆ.

  7. N.Ravikumar

    ಆರೀಫ್ ರಾಜ ಅವರ ಪುಸ್ತಕವನ್ನು ಪ್ರಕಾಶಕರು ಕಳುಹಿಸಿದ್ದರು

  8. ಹಜರತಅಲಿ ದೇಗಿನಾಳ

    ಭಲೇ! ಒಂದಕ್ಕಿಂತ ಒಂದು ತಂತ್ರಗಳು! ಒಬ್ಬರು ಕಳಿಸುವುದು ಒಬ್ಬರು ನಿರಾಕರಿಸುವುದು!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading