
‘ಮೀಡಿಯಾ ಮಿರ್ಚಿ’ಯನ್ನು ಆರಂಭದಿಂದಲೂ ಓದುತ್ತಿದ್ದೇನೆ, ಮೆಚ್ಚಿದ್ದೇನೆ.
‘…ಮಿರ್ಚಿ’ಯಲ್ಲಿ ’ಏಕೆ ಹೀಗಾಯ್ತೋ, ನಾನು ಕಾಣೆನು…’ ಲೇಖನವನ್ನೂ, ’ಅವಧಿ’ಯಲ್ಲಿ ಅದೇ ಲೇಖನಕ್ಕೆ ಬಂದ ಪ್ರತಿಕ್ರಿಯೆಗಳ ಮಹಾಪೂರವನ್ನೂ, ಮತ್ತೆ ’…ಮಿರ್ಚಿ’ಯಲ್ಲಿ ನೀವು ಆ ಪ್ರತಿಕ್ರಿಯೆಗಳಲ್ಲಿ ಕೆಲವನ್ನು ಆಯ್ದು ಕ್ರೋಡೀಕರಿಸಿ ಬರೆದ ಬರಹವನ್ನೂ ಓದಿದ್ದೇನೆ.
…ನೀವು ಅತ್ಯವಶ್ಯ ಚರ್ಚೆಯೊಂದಕ್ಕೆ ನಾಂದಿ ಹಾಡಿ ಅತ್ಯುತ್ತಮ ಕೆಲಸ ಮಾಡಿದ್ದೀರಿ.
ಅಂದಹಾಗೆ, ಕೆಲವು ತಿಂಗಳುಗಳ ಕೆಳಗೆ, ಒಂದೆರಡು ಪೋರ್ಟಲ್‌ಗಳಲ್ಲಿ ನನ್ನ ಕೆಲವು ಖಡಕ್ ಬರಹಗಳನ್ನು ಸಹಿಸಲಾರದೆ ಕೆಲವು ಅನಾಮಿಕರು ವೃಥಾ ದೂಷಣೆ ಮತ್ತು ಸುಳ್ಳು ಆರೋಪಗಳ ಮೂಲಕ ನನ್ನನ್ನು ಧೃತಿಗೆಡಿಸಲು ಪ್ರಯತ್ನಿಸಿದರು. ಆರಂಭದಲ್ಲಿ ನನಗೆ ಬೇಸರವಾಯಿತಾದರೂ ಅವುಗಳಿಗೆಲ್ಲ ತಕ್ಕ ಉತ್ತರ ನೀಡುತ್ತಬಂದಾಗ ಅವರೆಲ್ಲ ಕರಗಿಹೋದರು.
ಕಳೆದ ನಲವತ್ತೆರಡು ವರ್ಷಗಳಿಂದ ನಾಡಿನ ಬಹುತೇಕ ಎಲ್ಲ ಪತ್ರಿಕೆಗಳಲ್ಲಿ ಬರೆಯುತ್ತ, ನುಡಿದಂತೆ ನಡೆಯುತ್ತ, ನಡೆದುದನ್ನೇ (ಶ್ಲೇಷೆ ಉದ್ದೇಶಿತ) ನುಡಿಯುತ್ತ ಬಂದಿರುವ ನಾನಿಂದು ಅಂತರ್ಜಾಲದಲ್ಲಿ ಬರೆಯುತ್ತಿರುವುದು ಯಾವ ಪ್ರಚಾರ-ಪ್ರಸಿದ್ಧಿಯ ಬಯಕೆಯಿಂದಲೂ ಅಲ್ಲ; ಕನ್ನಡ ಪತ್ರಿಕೆ ತಲುಪದ, ಎಲ್ಲ ಪತ್ರಿಕೆ ಓದದ, ವಿಶೇಷವಾಗಿ ಯುವಪೀಳಿಗೆಯ ಗಮನಕ್ಕೆ ವಿಚಾರಗಳು ಬರಲಿ, ಅದರಿಂದಾಗಿ ಸಮಾಜಕ್ಕೆ ಒಳ್ಳಿತಾಗಲಿ ಎಂಬ ಉದ್ದೇಶದಿಂದ ಬರೆಯುತ್ತಿದ್ದೇನೆ. ಸದುದ್ದೇಶಪೂರ್ಣ ಪ್ರಾಮಾಣಿಕ ಬರಹಗಾರರು ಅಂತರ್ಜಾಲ (ಕು)ವಿಹಾರಿ ಕೆಲವರ ಕುಚೋದ್ಯದಿಂದಾಗಿ ತೆರೆಮರೆಗೆ ಸರಿದರೆ ಅದರಿಂದ ಸಮಾಜಕ್ಕೆ ನಷ್ಟ. ಹೀಗಿರುವಾಗ ನೀವು ಬುಡಹಾಕಿದ ಚರ್ಚೆ ಇಂದು ಅತ್ಯಂತ ಜರೂರಾದುದಾಗಿದೆ.
ನನ್ನ ಧನ್ಯವಾದವನ್ನು ಸ್ವೀಕರಿಸಿ..
ವಂದನೆಗಳು.
ಎಚ್. ಆನಂದರಾಮ ಶಾಸ್ತ್ರೀ


0 Comments