-ಮಂಗಳ ಎನ್
ಕನ್ನಡ ರಂಗಭೂಮಿಯ ಸೃಜನಶೀಲ ಚಿಂತಕ, ಕವಿ, ಪ್ರಾದ್ಯಾಪಕ, ನಾಟಕಕಾರ, ವಿಮರ್ಶಕ, ಸಂಶೋಧಕ ಕ.ವೆಂ.ರಾಜಗೋಪಾಲ್ ಅವರ ಜನ್ಮ ಶತಮಾನೋತ್ಸವ ಕಳೆದ ತಿಂಗಳಷ್ಟೆ ರವೀಂದ್ರ ಕಲಾಕ್ಷೇತ್ರದಲ್ಲಿ ಜರುಗಿತು. ಅವರ ನೆನಪಿನಲ್ಲಿ ಹೀಗೊಂದು ನುಡಿನಮನ…
ನಾವಾಗ ರಂಗಾಯಣಕ್ಕೆ ಸೇರಿದ ಹೊಸತು. ಬಹಳ ಮಂದಿ ಮನೆಯವರ ವಿರೋಧ ಕಟ್ಟಿಕೊಂಡೇ ಗಂಟುಮೂಟೆ ಕಟ್ಟಿಕೊಂಡು ರಂಗಾಯಣದ ಅಂಗಳಕ್ಕೆ ಬಂದವರು. ನಮ್ಮ ಜೊತೆ ಪ್ರಾದ್ಯಾಪಕರಾಗಿದ್ದವರೇ ನಮಗಾಗ ನಮ್ಮ ಬದುಕಿನ ಹಿರಿಯರು. ಅವರ ಮಾತುಗಳೇ ಅಂತಿಮ. ಬೆಳಗ್ಗೆ 5.45 ಗಂಟೆಗೆ ಪಕ್ಕದಲ್ಲಿದ್ದ ಮಸೀದಿ, ಅಲ್ಲಾ………ಕೂಗಿತೆಂದರೆ ಅದೇ ನಮ್ಮ ಅಲಾರಾಂ. ಬೇಗನೇ ದಡಬಡಿಸಿ ಎದ್ದವರೇ 6 ಗಂಟೆಯ ಯೋಗ ತರಗತಿಗೆ ಓಡುತ್ತಿದ್ದೆವು. ಇನ್ನು ವಾಪಸಾಗುವುದು ಎಂದರೆ ಹೆಚ್ಚು ಕಡಿಮೆ ಸಂಜೆಯವರೆಗೂ, ಕೆಲವು ಬಾರಿ ರಾತ್ರಿಯವರೆಗೂ.
ಮನೆಗೆ ಹೋಗೋದಂತು ದೂರದ ಮಾತು. ಪೋನು ಗೀನು ಎಲ್ಲ ಆಗ ನಮಗೆ ಸುಲಭದ ಮಾತಲ್ಲ. ಮನೆಯವರೊಡನೆ ಸಂಪರ್ಕವೂ ಅಷ್ಟಕ್ಕಷ್ಟೇ…..
ಇಂತಾ ಹೊತ್ತಲ್ಲಿ, ಕ.ವೆಂ ರಂಗಾಯಣಕ್ಕೆ ಮಗಳು ನಂದಿನಿಯನ್ನು ಭೇಟಿಯಾಗಲು ಬರುತ್ತಿದ್ದರು. ನಮ್ಮೆಲ್ಲರ ಮನೆಗಳ ಕಡೆಯಿಂದ ಬರುತ್ತಿದ್ದವರಲ್ಲಿ ಕಾವೆಂ ಅವರೇ ಹೆಚ್ಚು ಸಲ ಬರುತ್ತಿದ್ದುದು. ಹಾಗಾಗಿ ಹೊರಗಡೆ ಪ್ರಪಂಚದಿಂದ ನಮ್ಮ ಪ್ರಪಂಚಕ್ಕೆ ಬರುತ್ತಿದ್ದ ಅವರನ್ನು ಕಂಡರೆ ನಮಗೆಲ್ಲರಿಗೂ ಅಪಾರವಾದ ಪ್ರೀತಿ ಇತ್ತು. ನಮ್ಮ ಎಲ್ಲ ಪ್ರಯೋಗಗಳಿಗೂ ಚಾಚೂ ತಪ್ಪದೆ ಬೆಂಗಳೂರಿನಿಂದ ಬರುತ್ತಿದ್ದರು. ಯಾವ ಹೊಸ ನಾಟಕವಾದರೂ ಪ್ರದರ್ಶನದ ಹೊತ್ತಿಗೆ ಹಾಜರಾಗುತ್ತಿದ್ದರು. ನಮಗೆ ಅವರು ಬಂದಾಗ ‘ಮನೆ ಭಾವ’ ಸಿಗುತ್ತಿತ್ತು. ಹಾಗೆಯೇ ಅವರು ನಮಗೆ ಪ್ರೀತಿ ತೋರುತ್ತಿದ್ದರು. ನನ್ನ ಮಟ್ಟಿಗೆ ಸ್ವಲ್ಪ ಜಾಸ್ತಿ ಪ್ರೀತಿ ಸಿಗುತ್ತಿತ್ತು. ಆ ವಿಶೇಷ ಪ್ರೀತಿಯಿಂದ ನಾನೂ ಗರ್ವದಿಂದ ಊದಿಕೊಳ್ಳುತ್ತಿದ್ದೆ. ಹೀಗೆ ನನ್ನ ಮತ್ತು ಕಾವೆಂ ಸರ್ ಅವರ ಸಂಬಂಧ ಶಬ್ದಗಳಿಗೆ ಸಿಲುಕದ ಕೇವಲ ಅನುಭವಕ್ಕೆ ದಕ್ಕುತ್ತಿದ್ದ ಭಾವವಾಗಿತ್ತು. ಎಷ್ಟೋ ವರ್ಷಗಳ ಕಾಲ ಮೈಸೂರಿನ ಕೆಲವರು ಕ.ವೆಂ ಮಗಳು ರಂಗಾಯಣದಲ್ಲಿದ್ದಾಳೆ ಎಂತಲೂ ಆ ಮಗಳು ನಾನೇ ಎಂದೂ ತಿಳಿದುಕೊಂಡಿದ್ದರು. ಕೆಲವರು ಹಾಗೆ ತಿಳಿದುಕೊಂಡಿದ್ದಾರೆಂದು ತಿಳಿದಾಗ ನಾನು ಇನ್ನೂ ಸ್ವಲ್ಪ ಜಾಸ್ತಿಯೇ ಬೀಗುತ್ತಿದ್ದೆ. ಕೆಲವು ಬಾರಿ ಗೆಳತಿ ನಂದಿನಿ ಕೂಡ ‘ನೋಡು ನಮ್ಮಪ್ಪ ಬಂದವರೇ ನಿನ್ನನ್ನೇ ಮೊದಲು ಮಾತಾಡಿಸ್ತಾರೆ’ ಎಂದು ಪ್ರೀತಿಯಿಂದಲೇ ಗೊಣಗುತ್ತಿದ್ದಳು. ರಂಗಭೂಮಿಯ ಪ್ರೀತಿಯಿಂದಲೂ, ನಾಟಕ ಪ್ರದರ್ಶನ ನೋಡುವ ಆಸೆಯಿಂದಲೂ, ಜೊತೆಗೆ ಮಗಳ ನೆಪದಲ್ಲಿಯೂ ಬರುತ್ತಿದ್ದವರು, ಮೈಸೂರಿನ ರಂಗಸಂಗದಲ್ಲಿ ಇದ್ದು, ನಾಟಕ ನೋಡಿ, ವಿಮರ್ಶೆ ಮಾಡುತ್ತಾ, ರಂಗಗೆಳೆಯರೊಡನೆ ಚರ್ಚೆ ಮಾಡುತ್ತಾ ಮಾರನೇ ದಿನ ತೆರಳುತ್ತಿದ್ದರು.
ನನಗಂತೂ ಕ.ವೆಂ.ಸರ್ ಎಂದರೆ ನೆನಪಾಗುವುದೇ ಗುಲಾಬಿ,ಬೀಟ್ರೂಟ್ ಬಣ್ಣದ ಜೊಂಪೆ ಜೊಂಪೆ ಡೇರಾ ಹೂಗಳು. ನಾವಾಗ ಗ್ರೀಕ್ ಭಾಷೆಯ ಹಿಪೋಲಿಟಸ್ ನಾಟಕ ಮಾಡುತ್ತಿದ್ದೆವು. ಗ್ರೀಕ್ ನಿರ್ದೇಶಕ ವ್ಯಾಸಿಲಿಯೋಸ್ ಕ್ಯಾಲೀಟ್ಸಿಸ್ ಆ ನಾಟಕವನ್ನು ನಿರ್ದೇಶನ ಮಾಡಿದ್ದರು. ಮತ್ತು ಈ ನಾಟಕ ಆಗ ಕನ್ನಡ ರಂಗಭೂಮಿಯಲ್ಲಿ ಬಹಳ ದೊಡ್ಡ ಸುದ್ದಿಯಾದಂತಹ ವಿಶೇಷ ವಿನ್ಯಾಸದ 3 ಗಂಟೆಯ ನಾಟಕವಾಗಿತ್ತು. ಮೇಲಿಂದ ಮೇಲೆ ಅನೇಕ ಮರುಪ್ರದರ್ಶನಗಳಾದವು. ಆಗ ಬೇರೆ ಊರುಗಳಿಂದಲೂ ಜನರು ಈ ನಾಟಕ ನೋಡಲೆಂದೇ ಮೈಸೂರಿಗೆ ಬರುತ್ತಿದ್ದರು. ಹೆಚ್ಚಾಗಿ ಬೆಂಗಳೂರಿನಿಂದ ಬಹಳ ಜನ ಬರುತ್ತಿದ್ದರು. ಆ ನಾಟಕದಲ್ಲಿ ನಾನು, ರಂಗಾಯಣ ರಘು, ನಂದಿನಿ ಮತ್ತು ಕಟ್ಟೀಮನಿ ಮುಖ್ಯ ಪಾತ್ರದಲ್ಲಿಯೂ ಗೀತಾ, ಸರೋಜ ದೇವತೆಗಳಾಗಿಯೂ, ಪ್ರಮೀಳಾ ಮೇಳದ ನಾಯಕಿಯಾಗಿಯೂ, ಮಂಡ್ಯ ರಮೇಶ ಧೂತನಾಗಿಯೂ,ಉಳಿದವರೆಲ್ಲ ಮೇಳದವರಾಗಿ ಅಭಿನಯಿಸುತ್ತಿದ್ದೆವು. ಹೀಗೆ ಅತ್ಯಂತ ಸುದ್ದಿಯಾದ ಈ ನಾಟಕ, TODAY ಮಾಸ ಪತ್ರಿಕೆಯ ಮುಖಪುಟದಲ್ಲಿ ನಮ್ಮ ಫೋಟೋ ಬರುವಷ್ಟು ಎಲ್ಲರ ಗಮನ ಸೆಳೆದಿತ್ತು. ಈ ನಾಟಕ ತಿಂಗಳಾನುಗಟ್ಟಲೆ ಪ್ರದರ್ಶನಗೊಂಡಿತ್ತು. ಪ್ರದರ್ಶನ ನಡೆಯುವಾಗ ಕ.ವೆಂ ಬಹಳ ಪ್ರದರ್ಶನಗಳಿಗೆ ಬಂದಿದ್ದರು. ಹೀಗೆ ಬರುವಾಗ ಅವರ ಕೆಂಗೇರಿ ಮನೆಯ ಕೈ ತೋಟದಲ್ಲಿ ಅವರೇ ಬೆಳೆಸಿದ ಡೇರಾ ಹೂಗಳನ್ನು ಜೊಂಪೆ ಜೊಂಪೆ ತಂದು, ನಾಟಕ ಪ್ರದರ್ಶನದ ನಂತರ ನನಗೆ ಕೊಡುತ್ತಿದ್ದರು. ಅದರ ನೆನಪು ನನಗೆಂದಿಗೂ ಮಾಸುವುದಿಲ್ಲ. ಆ ಹೂಗಳಷ್ಟೇ ನವಿರಾಗಿದೆ. ಅಂದು ಅವರು ನನ್ನ ಪಾತ್ರಕ್ಕೆ ತೋರಿದ ಮೆಚ್ಚುಗೆಯ ನೋಟ ಮತ್ತು ಅವರ ಮೆಚ್ಚುಗೆಯ ನುಡಿಗಳು ನನ್ನೊಳಗೆ ಅಗಾಧವಾದ ವಿಶ್ವಾಸವನ್ನು ತಂದುಕೊಟ್ಟಿತ್ತು. ಮತ್ತು ನನ್ನೊಳಗಿನ ನಟಿಗೆ ಮುಂದೆ ವಿಶ್ವಾಸದಿಂದ ಹೆಜ್ಜೆಯಿಡುವ ಧೈರ್ಯ ನೀಡಿತ್ತು. ಈ ಹೊತ್ತು ಅವರನ್ನು ತುಂಬು ಹೃದಯದಿಂದ ನೆನೆಯುತ್ತೇನೆ.
ಆಮೇಲೆ ನಾನು ರಂಗಾಯಣದಿಂದ ಹೊರಗೆ ಬಂದಾಗಿತ್ತು. ಬೆಂಗಳೂರಿನಲ್ಲಿ ಹೊಸ ದಾರಿಯ ಅನ್ವೇಷಣೆಯಲ್ಲಿದ್ದೆ. ಒಮ್ಮೆ ಯಾವುದೋ ಸೆಮಿನಾರಿನಲ್ಲಿ ಸಿಕ್ಕವರು ನಾನು, ರಘು ರಂಗಾಯಣವನ್ನು ಬಿಟ್ಟು ಬಂದಿದ್ದಕ್ಕೆ ಅಸಮಾಧಾನ ವ್ಯಕ್ತ ಪಡಿಸಿದ್ದರು. ಅವತ್ತು ಅವರಿಗೆ ನಾನೇನನ್ನು ಹೇಳುವ ಸ್ಥಿತಿಯಲ್ಲಿರಲಿಲ್ಲ. ನಂತರ ಸಿಕ್ಕಾಗ ಮತ್ತೆ ಅದೇ ವಿಷಯ ಪ್ರಸ್ತಾಪಿಸುವರೆಂದು ಗಾಬರಿಯಾಗುತ್ತಿದ್ದೆ. ಗುಂಪಿನಲ್ಲಿಯೇ ಮಾತನಾಡಿಸಿ ಮೆಲ್ಲಗೆ ಜಾಗ ಖಾಲಿ ಮಾಡುತ್ತಿದ್ದೆ.
2009 ಅಥವಾ 10ರ ಆಸುಪಾಸಿನಲ್ಲಿರಬೇಕು. ಒಮ್ಮೆ ನನಗೆ ಫೋನು ಮಾಡಿ ತಾನೊಂದು ಹೊಸ ನಾಟಕ ಬರೆದಿರುವುದಾಗಿ ಹೇಳಿದರು. ಮತ್ತು ಅದನ್ನು ನವಕರ್ನಾಟಕದ ಹೊಸತು ಪತ್ರಿಕೆಯ ಆಫೀಸಿನಲ್ಲಿ ಓದುವ ಕಾರ್ಯಕ್ರಮ ಇಟ್ಟುಕೊಳ್ಳೋಣವೇ ಎಂದು ಕೇಳಿದರು. ನಾನೂ ಸಂತೋಷದಿಂದ ಒಪ್ಪಿ, ಆ ನಾಟಕವನ್ನು ಅವತ್ತು ಅಲ್ಲಿ ನೆರೆದಿದ್ದ ಒಂದು ಸಣ್ಣ ಗುಂಪಿನ ಮುಂದೆ ಓದಿದ್ದೆ. ಚರ್ಚೆ ಆಯಿತು. ಕಾಫಿ, ಟೀ ಕುಡಿದು ಹೊರಟುಬಂದೆ.
ಮತ್ತೆ 2011 ರಲ್ಲಿ ಮತ್ತೊಮ್ಮೆ ಫೋನು ಮಾಡಿದರು. ತಾವು ಭಗತ್ ಸಿಂಗ್ ನಾಟಕ ಬರೆದಿರುವುದಾಗಿ ಹೇಳಿ, ಆ ನಾಟಕವನ್ನೂ ಹಿಂದಿನಂತೆ ಅದೇ ಗುಂಪಿಗೆ ಓದಲು ಹೇಳಿದರು. ಈ ಬಾರಿ ನಾನು ಒಬ್ಬಳೇ ಓದುವುದಕ್ಕಿಂತ ನಾವು ಸಂಚಾರಿ ಥಿಯೇಟರ್ ನ ಕಲಾವಿದರು ಗುಂಪಾಗಿ ಓದುತ್ತೇವೆ ಎಂದೆ. ಸಂತೋಷದಿಂದ ಒಪ್ಪಿಕೊಂಡರು. ನಾವೂ ರಿಹರ್ಸಲ್ ಮಾಡಿಕೊಂಡು ಸಿದ್ದರಾದೆವು. ಅದೊಂದು ಭಾನುವಾರವಾಗಿತ್ತು. ಮದ್ಯಾಹ್ನ ಮೂರು ಗಂಟೆಗೆ ನಮ್ಮ play reading ಕಾರ್ಯಕ್ರಮ ಮತ್ತೆ ಅದೇ ಹೊಸತು ಆಫೀಸಿನಲ್ಲಿ. ನಾವೆಲ್ಲರೂ ಸಿದ್ದರಾಗಿದ್ದೆವು. ಬೆಳಗ್ಗೆ ಒಂಬತ್ತು ಗಂಟೆಗೆ ನನಗೆ ನಮ್ಮ ಮನೆಯಿಂದ ಫೋನು ಬಂತು. ನನ್ನಪ್ಪ ತಮ್ಮ ಪ್ರಯಾಣ ಮುಗಿಸಿದ್ದಾರೆಂದು. ತಕ್ಷಣ ನಾನು ಮದ್ಯಾಹ್ನ ಕಾರ್ಯಕ್ರಮಕ್ಕೆ ನನ್ನ ಬದಲಿಗೆ ಬೇರೊಬ್ಬರನ್ನು ತಯಾರು ಮಾಡಿಸಿದೆ. ಮದ್ಯಾಹ್ನ ಕಾರ್ಯಕ್ರಮ ಯಾವ ಅಡತಡೆಯಿಲ್ಲದೆ ನಡೆಯಿತು. ನಾನು ಹೋಗಲಿಲ್ಲ ಅಷ್ಟೆ.
ಅದಾದ ಒಂದು ತಿಂಗಳಿಗೆ ಮತ್ತೆ ಕ.ವೆಂ ಫೋನು ಮಾಡಿದರು. “ಡಾ.ವಿಜಯಮ್ಮನವರು ಕೇಳ್ತಿದ್ದಾರೆ, ಸುಚಿತ್ರ ದಲ್ಲಿ ಭಗತ್ ಸಿಂಗ್ play reading ಮಾಡಬೇಕಂತೆ. ಈ ಬಾರಿ ನೀನೂ ಇರ್ತೀಯಾ ಅಲ್ಲವಾ?” ಅಂದರು. ಇರ್ತೀನಿ ಸರ್ ಎಂದೆ. ಮತ್ತೆ ನಾವೆಲ್ಲ ಹೋದೆವು. ನಾಟಕ ಓದಿದೆವು. ನಂತರ ಚರ್ಚೆಯಾಯಿತು. ಹೊರಟೆವು. ಆಗ ಕಾವೆಂ ಬಂದವರೇ ಕೈಯಲ್ಲಿ ಸಾವಿರ ರುಪಾಯಿ ಇಟ್ಟು ಎಲ್ಲರಿಗೂ ಕಾಫಿ ತಿಂಡಿ ಕೊಡಿಸು ಅಂದರು.
ಈಗ ಕ.ವೆಂ ಸರ್ ಇಲ್ಲ. ಎಲ್ಲ ನೆನಪಾಗುತ್ತಿದೆ.






0 Comments