ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕ್ಲಿಕ್ ಆಯ್ತು ಕವಿತೆ: ಬೂದಿಯಾಗುವ ಮೊದಲು

renukha_ramanandರೇಣುಕಾ ರಮಾನಂದ

ಬೂದಿಯಾಗುವ ಮೊದಲು
ಒಂದಷ್ಟು ಬೆಳಕಾಗು
ಎನ್ನುತ್ತ ಮೊನ್ನೆಯ ಬೆಳದಿಂಗಳ ಬಗ್ಗೆ
ಈ ಮೊದಲು ಬಣ್ಣಿಸಿದವರೆಲ್ಲ
ಬೆಂಕಿ ಇಟ್ಟಿದ್ದಾರೆ ಒಡಲಿಗೆ
ತೇಲುತ್ತಲಿದ್ದೇನೆ
ಮುಳುಗುವ ಅನಿವಾಯ೯ತೆಯೊಂದಿಗೆ
ಜೊತೆಗೆ ಉರಿಯುತ್ತಲೂ.

ಅಗಣಿತ ನೀರ ನೀಲಿಯನ್ನೂ
ಬೆಳ್ಳನೆಯ ಮುಗಿಲಂಚನ್ನೂ
ಕೆಂಪಾಗಿಸಲು
ಇಷ್ಟೇ ಇಷ್ಟು ಜ್ಜಾಲೆ ಸಾಕು
ಗೊತ್ತಿರಲಿಕ್ಕಿಲ್ಲ ಹುಚ್ಚುಖೋಡಿಗಳಿಗೆ
ಅರಿವಾದ ಮೇಲೆ ವಣಿ೯ಸುತ್ತಿದ್ದಾರೆ
ಬೆಳದಿಂಗಳಂತೆ ಜ್ವಾಲೆಯನ್ನೂ
ಕುದಿವ ಲಾವಾರಸವೂ
ಸೌಂದಯ೯ದ ಖನಿ
ದೂರದಲ್ಲಿ ನಿಂತು ನೋಡುವವರಿಗೆ.

ಪರಿಪರಿಯಾಗಿ ತಿಳಿಸಿ ಹೇಳಬೇಕೆಂದುಕೊಂಡಿದ್ದೆ
ಹೊತ್ತಿಸಬೇಡಿ ಕಿಚ್ಚು
ನನ್ನದೇನಿದ್ದರೂ ತೇಲುತ್ತ ಮುಳುಗುತ್ತ
ಒದ್ದೆಯಾಗುವ ಚಿಣ್ಣರ ಆಟ
ಅಷ್ಟರಲ್ಲಾಗಲೇ ಹಚ್ಚಿಯಾಗಿತ್ತು
ಇನ್ನು ಎಷ್ಟೊತ್ತು…?
ಕರ್ರಗಾಗುತ್ತೇನೆ…ಬೂದಿಯಾಗಿ
ನೀರಗಭ೯ದಲ್ಲಿ ಕದಡಿಹೋಗುತ್ತೇನೆ.

ಈ ಹೊಂತಗಾರರಿಗೆ
ಯಾರಾದರೂ ವಿವರಿಸಿ-
‘ತೈಲ ಬಾವಿಗಾದರೆ ಇಷ್ಟೇ ಬೆಂಕಿ ಸಾಕಿತ್ತು’
ನಿಮಗೂ ಬೋಧಿಸಲು ಬಂದಾರು
‘ಇದು ಬರಿಯ ನೀರು
ಹೋದರೆ ಹೋದೀತು
ಒಂದು ಪುಟ್ಟ ಕಾಗದದ ದೋಣಿ’
ಅಥವಾ ಇನ್ನೇನನ್ನೋ.

ಇನ್ನಷ್ಟು ದೋಣಿಗಳಿಟ್ಟುಕೊಂಡು
ಬೆಂಕಿ ಹುಡುಕುತ್ತಿರುವ
ಅವರ ತಮಾಷೆಯ ಆಟದ ಬಗ್ಗೆ ಅಲೆಗಳಿಗೂ ಖೇದವಿದೆ
ಆದರೇನು ಅವು ತಡೆಯಲಾರವು
ಯಾವುದನ್ನೂ ಏನನ್ನೂ
ಹೊಯ್ದಾಡುತ್ತ ಅಸಮ್ಮತಿ
ಸೂಚಿಸುತ್ತಿವೆ
ಮೌನವಾಗಿ
ನನ್ನ ಹಾಗೆ…

‍ಲೇಖಕರು Admin

31 October, 2016

1 Comment

  1. ಬಸವರಾಜ ಹೊಸಮನಿ

    ಬೂದಿಯಾದರೂ ಕವಿತೆ
    ಗಾಳಿಯಲಿ ತೂರಿ ಹೋಗಿ
    ಅಡವಿ ಬೆಳಗಳಿಗೆ ಗೊಬ್ಬರಾಗ
    ಕಾಳಿನ ಮೂಲಕ ನಾಡ ಸೇರುತ್ತದೆ..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading