ಸರೋಜಿನಿ ಪಡಸಲಗಿ
ಕಡಲ ಮೇಲೆ ತೇಲುತಿಹ ಕಾಗದದ ದೋಣಿಯಲಿ
ಹಚ್ಚಿಟ್ಟ ಕಿಚ್ಚಂತೆ ಈ ಬಾಳು ಅಲ್ಲವೇ.
ದೋಣಿಯ ಕಾಗದಕೆ ನೀರು ತಾಗದಂತೆ
ಹಚ್ಚಿಟ್ಟ ಕಿಚ್ಚು ದೋಣಿಯ ಕಾಗದವ ಸುಡದಂತೆ
ಮಾಡುವ ದೊಂಬರಾಟ ಹುಚ್ಚು ಹೋರಾಟ
ಹೊಯ್ದಾಡೋ ಈ ಬಾಳು ತಾನಲ್ಲವೇ.
ತೇಲುವ ದೋಣಿಯ ಕಾಗದಕೆ ನೀರು ತಾಗಿದರೆ
ಅದರಾಕಾರ ಕೆಟ್ಟು ಮುಳುಗೀತು ಜೋಕೆ
ಒಡಲು ಕಿಚ್ಚು ಕಾರಿದರೆ ಕಿಡಿಯು ಹಾರಾಡಿ
ಕಾಗದದ ದೋಣಿಯದು ಸುಟ್ಟೀತು ಜೋಕೆ.
ಕರುಳುರಿಯುವ ಸಂಕಟ ತಾಳದಾಗಿ ತಳಮಳಿಸಿ ಬೆಂದು ಹೋಗಿ
ಮುಗಿಲಿಗೆ ಬಾಯ್ದೆರೆದು ಒರಲಿ ನರಳಿದರೂ
ತೋಳು ಊಳಿಡುವ ಥರ ಗೋಳಿಟ್ಟರೂ
ಕೇಳುವರಾರು ತಂಪೆರೆವರಾರು ಆ ಕಿಚ್ಚಿಗೆ.
ಆ ಕಾಗದದ ದೋಣಿ ತೇಲುತಿಹ ನೀರೇ
ಒಡಲ ಸುಡುವ ಬೆಂಕಿಗೆ ತಂಪೆರೆದೀತು ಎಂಬಾಸೆ
ಕಿಚ್ಚು ಹೆಚ್ಚಾಗಿ ತನ್ನ ವಿಕಾರ ಬಿಂಬ ಕಂಡು
ಹೆದರಿ ತಂಪಾದೀತು ಒಂದು ಬಾರಿ ಎಂಬಾಸೆ.
ಹುಚ್ಚು ಬಾಳು ಅರ್ಥವಿಲ್ಲದ ಗೋಳು
ಕಾಗದದ ದೋಣಿಯ ನೀರ ಮೇಲ್ನಡಿಸುವದ್ಹೇಗೆ ಹೇಳು
ಕಿಚ್ಚು ಹುಚ್ಚಾಗದಂತೆ ಕಾಯುವದ್ಹೇಗೇಹೇಳು
ಕೊನೆಯಿಲ್ಲದ ಹೋರಾಟ ದೊಂಬರಾಟ ಇದು ನೀ ಕೇಳು.





Bahala ishtavaayithu kavithe….