ಪಳೆಯುಳಿಕೆಯಲ್ಲ ಜೀವ್ಯವಶೇಷವೂ ಅಲ್ಲ !!!

ನಾ ದಿವಾಕರ
ಏಕೆ ಹಾಗೆ ದಿಟ್ಟಿಸುವಿರಿ
ನೆನಪಾಯಿತೇ ಲಂಕೇಶರ
ಸಾಲುಗಳು –
‘ಎಲ್ಲಿದ್ದೆ ಇಲ್ಲೀತನಕ
ಎಲ್ಲಿಂದ ಬಂದ್ಯವ್ವಾ’
ನಾನೇನೂ ಭೂಗತನಾಗಿರಲಿಲ್ಲ
ನನ್ನ ಕಾಣ್ಮೆಯಿನ್ನೂ
ಹಸಿರಾಗಿದೆ !
ಏಕೆ
ಆಧುನಿಕತೆಯ ಪೊರೆ
ಇನ್ನೂ ಕಳಚಿಲ್ಲವೇ ;
ನನ್ನ ಅಕ್ಷಿಪಟಲದಲಿ
ಎಲ್ಲವೂ ಸೆರೆಯಾಗಿದೆ ;
ಏಣಿಯ ಮೆಟ್ಟಿಲುಗಳನ್ನೇರುತ್ತಲೇ
ಇರುವಿರಲ್ಲಾ
ದಿಂಗತದಲ್ಲೂ ಒಂದು
ತಡೆಗೋಡೆ ಇದೆಬಲ್ಲಿರಾ ? ನಾ ಬಲ್ಲೆ !
ಮಂಗಳನಲಿ ಕಾಲೂರಿದರೂ
ಸುತ್ತಲ ತಂಗಳು
ಕಾಣದಾಯಿತೇ ?
ರೆಪ್ಪೆಗಳ ತೆಗೆಯಿರಿ
ಹುಬ್ಬುಗಳ ತೀಡಿ ತಿದ್ದಿ
ಕಣ್ಣಿನಂದವ ಹೆಚ್ಚಿಸುವ
ನಿಮಗೆ
ಕಣ್ಗುಡ್ಡೆ
ಮಸುಕಾಗಿರುವ
ಪರಿವೆಯೇ ಇಲ್ಲವೇ ?
ಸಂಜಯ ನಾನು
ಧೃತರಾಷ್ಟರು ನೀವು
ದ್ರೌಪತಿಯರ ವೇದನೆಗಳಿಗೆ
ಗಾಂಧಾರಿಯಾಗಿರುವಿರಲ್ಲಾ
ಸವೆದು ಬಸವಳಿದಿದ್ದರೂ
ಸರಿಯೇ
ಗಮನಿಸುತ್ತಿರುವೆ
ಭುವಿಯ ಮೇಲಿನ
ಚಿತೆಗಳನ್ನು !
ಸೆರೆ ಹಿಡಿಯಲಾರೆ
ಮುಪ್ಪು ಆವರಿಸಿದೆ
ಸೆಲೆಯನರಸುತಿರುವೆ
ನೆಲೆಯನರಸುತಿರುವೆ ;
ಅದೋ
ಅತ್ತಲಿಂದೊಂದು ಆಕೃತಿ
ಧಾವಿಸುತ್ತಿದೆ
ಧೂಮಕೇತುವಿನಂತೆ
ಅದೇನೋ ಸೆಲ್ಫಿಯಂತೆ !
ಸೆಲ್ಫಿಯಾದರೇನು
ಸ್ಮಾರ್ಟ್ ಆದರೇನು
ಕಾಣ್ಮೆಯಲಿ
ಎನ್ನ ಮೀರಲುಂಟೇ ?
ಸುಕ್ಕುಗಟ್ಟಿದೆ
ಮುಖಾರವಿಂದದ ಹಿಂದೆ
ಇತಿಹಾಸ ಇದೆ
ಮಿಥ್ಯೆಯಲ್ಲ
ವಾಸ್ತವ
ನಾನೇ ಅಂತಿಮ ಸತ್ಯ !





0 Comments