ಸಿದ್ಧರಾಮ ಕೂಡ್ಲಿಗಿ
ಚಿತ್ರ ಕ್ಲಿಕ್ಕಿಸುವಾಗ ನಾವು ಯಾವಾಗಲೂ ವಿಷಯ (Subject) ಕಡೆ ಹೆಚ್ಚು ಒತ್ತು ಕೊಡುತ್ತೇವೆ. ಯಾವುದರ ಬಗ್ಗೆ ಹಾಗೂ ನಮಗೆ ಏನನ್ನು ಹೇಳಬೇಕಾಗಿದೆ ಹಾಗೂ ಯಾವ ಸಂದೇಶವನ್ನು ನೀಡಬೇಕಿದೆ ಎಂಬುದು ನಮ್ಮ ಚಿತ್ರದ ವಿಷಯವಾಗಿರಬೇಕು.
ಹಲವಾರು ಜನ ಅತ್ಯುತ್ತಮ ಫೋಟೊಗ್ರಾಫರ್ ಗಳಿಗೆ ಈ ತಂತ್ರ ಗೊತ್ತು. ಹೀಗಾಗಿ ಅವರು ಅತ್ಯಂತ ತಾಳ್ಮೆಯಿಂದ ಸಮಯವನ್ನು ಕಾಯುತ್ತಾರೆ. ಆಗಲೇ ಅವರಿಂದ ಅತ್ಯುತ್ತಮವಾದ ಸಂದೇಶವುಳ್ಳ ಅರ್ಥಗರ್ಭಿತ ಫೋಟೊ ಸಿಗಲು ಸಾಧ್ಯ. ಇದನ್ನೇ ನಾವು ಬಂಗಾರದ ಸಮಯ (Golden Time) ಎಂದು ಕರೆಯುತ್ತೇವೆ. ಈ ಸಮಯವು ನಮ್ಮ ಅಂಕೆಯಲ್ಲಿರುವುದಿಲ್ಲ ಎಂಬುದನ್ನು ಮರೆಯಬಾರದು. ಹಾಗೂ ಇದನ್ನು ನಾವೇ ಸೃಷ್ಟಿಸಲಾಗದು. ಸಮಯ ಅದನ್ನು ಸೃಷ್ಟಿಸುತ್ತದೆ. ಅದನ್ನು ಸೆರೆಹಿಡಿವ ತಾಳ್ಮೆ, ಕಾಯುವಿಕೆ ನಮ್ಮಲ್ಲಿರಬೇಕಷ್ಟೆ. ಕಾಲನ ಗರ್ಭದಲ್ಲಿ ಅಡಗಿರುವ ಅಂಥ ಅತ್ಯುತ್ತಮ ಸಂದರ್ಭದ ಚಿತ್ರ ಸಿಗುವುದು ಅಪರೂಪವೇ ಸರಿ.
ಬಣ್ಣದ ಚಿತ್ರಗಳು ಹೇಗೆಂದರೆ ವಿಷಯಕ್ಕಿಂತ ಬಣ್ಣಕ್ಕೆ ಹೆಚ್ಚು ಒತ್ತುಕೊಟ್ಟುಬಿಟ್ಟರೆ ಉಳಿದೆಲ್ಲ ಮುಚ್ಚಿಕೊಂಡು ಹೋಗುತ್ತದೆ ಎಂಬಂತೆ. ಹಾಡಿನ ಸಾಹಿತ್ಯಕ್ಕಿಂತ ಸಂಗೀತವೇ ಹೆಚ್ಚಿದ್ದಂತೆ. ಹೀಗಾಗಿ ಒಬ್ಬ ಸಮರ್ಥ ಫೋಟೊಗ್ರಾಫರ್ ಕಪ್ಪು ಬಿಳುಪಿನಲ್ಲೂ ತನ್ನ ಸಾಮರ್ಥ್ಯವನ್ನು ತೋರಿಸಬಲ್ಲ. ಇಲ್ಲಿ ಬಣ್ಣಗಳು ಮುಚ್ಚಿಹಾಕುವಂತಿರುವುದಿಲ್ಲ. ಕೇವಲ ವಿಷಯವಷ್ಟೇ ಪ್ರಾಧಾನ್ಯ. ಅದು ಹೇಗೆಂದರೆ ಸಂಗೀತ ಉಪಕರಣಗಳನ್ನು ಬಿಟ್ಟು ಬರಿದೇ ಹಾಡನ್ನು ಹಾಡು ಅಂದಂತೆ. ಇಲ್ಲಿ ಗಾಯಕನ ಸಾಮರ್ಥ್ಯ ಏನು ಎಂಬುದು ತಕ್ಷಣ ಗೊತ್ತಾಗಿಬಿಡುತ್ತದೆ. ಆದರೆ ರಂಗುರಂಗಿನ ದುನಿಯಾವನ್ನೇ ಈಗ ಜನ ಬಹಳ ಮೆಚ್ಚಿಕೊಳ್ಳುವುದು ಇರಲಿ.
ಇಲ್ಲಿ ನೋಡಿ ಒಂದು ಮಗು ಒಂದು ಪುಟ್ಟ ಪ್ಲಾಸ್ಟಿಕ್ ಪುಟ್ಟಿಯಲ್ಲಿ ಕುಳಿತು ಸ್ನಾನ ಮಾಡುತ್ತ ಖುಷಿಪಡುತ್ತಿರುವ ಚಿತ್ರವಿದೆ. ಮಗುವಿನ ಕೈಯಲ್ಲಿ ನೀರಿನ ಪೈಪ್ ಇದೆ. ಸುತ್ತಲೂ ನೀರು ಚೆಲ್ಲಾಡಿದೆ. ಬಹಳ ಮುಖ್ಯವಾಗಿ ಮಗುವಿನ ಮುಖದಲ್ಲಿರುವ ಆನಂದ. ಮಕ್ಕಳಿಗೆ ನೀರಾಟವೆಂದರೆ ಸಹಜವಾಗಿಯೇ ಖುಷಿ. ಆ ಖುಷಿಯನ್ನು ಸೆರೆಹಿಡಿಯುವುದೇ ಇಲ್ಲಿನ ವಿಷಯ. ಮಕ್ಕಳ ಮುಖದಲ್ಲಿ ಸ್ಪಷ್ಟವಾಗಿ ಭಾವ ಬಂದಷ್ಟು ಹಿರಿಯರಲ್ಲಿ ಸಿಗದು. ಫೋಟೊ ಕ್ಲಿಕ್ಕಿಸುತ್ತಾರೆ ಎಂದ ತಕ್ಷಣ ಹಿರಿಯರ ಮುಖದಲ್ಲಿ ಬಿಗಿತ ಬಂದುಬಿಡುತ್ತದೆ. ಇದು ಸಹಜ ಭಾವಕ್ಕೆ ಅಡ್ಡಿ. ಆದರೆ ಮಕ್ಕಳಲ್ಲಿ ಇದಾವುದೂ ಇರುವುದಿಲ್ಲ. ಅವರ ಲೋಕದಲ್ಲಿ ಅವರಿರುತ್ತಾರೆ. ಹೀಗಾಗಿ ಪುಟ್ಟ ಮಕ್ಕಳ ಫೋಟೊ ಅದ್ವಿತೀಯವಾಗಿರುತ್ತವೆ.

ಇದನ್ನು ಕ್ಲಿಕ್ಕಿಸಿದ ಫೋಟೊಗ್ರಾಫರ್ ಹೆಸರು ಬಾನಕೊಟಿ (Bonkoti). ಆಫ್ರಿಕಾದ ಜಾಂಬಿಯಾ ದೇಶದ ಈ ಫೋಟೊಗ್ರಾಫರ್ ಹೇಳುವಂತೆ… ಅಲ್ಲಿ ಅಕ್ಟೋಬರ್ ನಲ್ಲಿ ತುಂಬಾ ಬಿಸಿಲು. ಅಂತಹ ಒಂದು ದಿನದಲ್ಲಿ ಮಧ್ಯಾಹ್ನ ತನ್ನ ಮಗನೊಂದಿಗೆ ಕಾರನ್ನು ತೊಳೆಯುತ್ತಿದ್ದಾಗ, ತನ್ನ ಮಗನೂ ಸ್ನಾನ ಮಾಡಿ ನೀರಿನ ತಣ್ಣನೆಯ ಅನುಭವವನ್ನು ಪಡೆಯಲಿ ಎಂದು ಆಲೋಚಿಸಿದ. ಈ ಪ್ರದೇಶದಲ್ಲಿ ನೀರಿನ ಅಭಾವ ಹೆಚ್ಚು. ನೀರಿನ ಬೆಲೆ ಏನೆಂಬುದೂ ಗೊತ್ತು. ನೀರನ್ನು ಹೇಗೆ ಬಳಸಬೇಕೆಂದೂ ಗೊತ್ತು. ಆದರೆ ಆ ದಿನ ಮಾತ್ರ ಅದೆಲ್ಲವನ್ನೂ ಬದಿಗೊತ್ತಿ ಮಗ ನೀರಿನಲ್ಲಿ ಆಟವಾಡಿ ಖುಷಿಪಡಲಿ ಎಂದು ಬಾನಕೊಟಿ ನಿರ್ಧರಿಸಿದ. ಅಂತೆಯೇ ಮಗನನ್ನು ಟಬ್ಬಿನಲ್ಲಿ ಕೂಡಿಸಿ ಆಟವಾಡಲು ಬಿಟ್ಟ. ಆಗ ಸಿಕ್ಕದ್ದೇ ಈ ಸೆರೆ. ಮಗನ ಮುಖದಲ್ಲಿ ಉಂಟಾದ ಸಂತೋಷ, ಆನಂದ ಅದೆಲ್ಲವೂ ಕಪ್ಪು ಬಿಳುಪಿನಲ್ಲಿ ಸಮರ್ಥವಾಗಿ ಇಲ್ಲಿ ಸೆರೆಯಾಗಿದೆ.
ಅಂದಹಾಗೆ ಈ ಚಿತ್ರ 2020ರ ಅಗೋರ (Agora) ಏರ್ಪಡಿಸಿದ್ದ ಅಂತರ್ ರಾಷ್ಟ್ರೀಯ ಮಟ್ಟದ ಫೋಟೊಗಳ ಸ್ಪರ್ಧೆಯಲ್ಲಿ ಅತ್ಯುತ್ತಮವಾದ ಫೋಟೊಗಳಲ್ಲಿ ಒಂದೆಂದು ಪರಿಗಣಿತವಾಗಿದೆ.
ವಿಷಯಗಳು ನಮ್ಮ ಸುತ್ತಲೇ ಇರುತ್ತವೇ. ನೋಡುವ ಕಣ್ಣಿರಬೇಕಷ್ಟೇ…






0 Comments