
ಸುದರ್ಶನ್
‘ಕ್ರಿಕೆಟ್’ನ ಅತೀ ದೊಡ್ಡ ಕಟ್ಟುಕತೆಯನ್ನು ಕುಟ್ಟಿ ಪುಡಿ ಮಾಡಿದ ಸೂಪರ್ ಸ್ಟಾರಿಣಿ..!
ಯಾವುದೇ ಒಂದು ಕ್ರೀಡೆ ಜನಮಾನಸದಲ್ಲಿ ನೆಲೆ ನಿಲ್ಲಬೇಕಾದರೆ ಅಲ್ಲೊಬ್ಬ ಸೂಪರ್ ಸ್ಟಾರ್ ಕ್ರೀಡಾಪಟು ಹುಟ್ಟಬೇಕು.
ಭಾರತದಲ್ಲಿ ಕ್ರಿಕೆಟ್ ಆಡುವ ಹುಡುಗರಿಗೆ ಮೊಟ್ಟ ಮೊದಲ ಪ್ರೇರಣೆ ಲಿಟಲ್ ಮಾಸ್ಟರ್ ಸುನೀಲ್ ಗವಾಸ್ಕರ್..
1983ರಲ್ಲಿ ಕಪಿಲ್ ದೇವ್ ಕ್ರಿಕೆಟ್ ಕಾಶಿ ಲಾರ್ಡ್ಸ್’ನಲ್ಲಿ ವಿಶ್ವಕಪ್ ಎತ್ತಿ ಹಿಡಿದ ಕ್ಷಣ ಭಾರತೀಯ ಕ್ರಿಕೆಟ್’ಗೆ ಸಿಕ್ಕಿದ ಅತೀ ದೊಡ್ಡ ತಿರುವು. ಸಚಿನ್ ತೆಂಡೂಲ್ಕರ್ ಎಂಬ ಹುಡುಗನಲ್ಲಿ ಕ್ರಿಕೆಟ್ ಕನಸು ಬಿತ್ತಿದ್ದೇ ಕಪಿಲ್ ಡೆವಿಲ್ಸ್ ತಂಡದ 42 ವರ್ಷಗಳ ಹಿಂದಿನ ಆ ವಿಶ್ವವಿಕ್ರಮ.
ಮುಂದಿನದ್ದೆಲ್ಲಾ ಚರಿತ್ರೆ.. ಭಾರತೀಯ ಕ್ರಿಕೆಟ್’ನಿಂದ ಎದ್ದು ಬಂದ ದಿಗ್ಗಜರೆಲ್ಲಾ ಒಬ್ಬರಿಗಿಂತ ಒಬ್ಬರು ಘಟಾನುಘಟಿಗಳೇ.
90ರ ದಶಕದ ಕ್ರಿಕೆಟ್ ‘ಜನನಾಯಕ’ ಮೊಹಮ್ಮದ್ ಅಜರುದ್ದೀನ್, ಸಿಡಿಲಮರಿ ಸಚಿನ್ ತೆಂಡೂಲ್ಕರ್, ಬಂಗಾಳದ ಮಹಾರಾಜ ದಾದಾ ಗಂಗೂಲಿ, ಕ್ರಿಕೆಟ್ ಸಂತ ರಾಹುಲ್ ದ್ರಾವಿಡ್.. ನಂತರ ದೇಶದ ಅತೀ ದೊಡ್ಡ ವಿಶ್ವಕಪ್ ಹೀರೋ ಯುವರಾಜ, ರಾಂಚಿಯ ಹಳ್ಳಿ ಹೈದ ಮಹೇಂದ್ರ ಸಿಂಗ್ ಧೋನಿ.. ಖ್ಯಾತಿಯಲ್ಲಿ ಇವರೆಲ್ಲರನ್ನೂ ಮೀರಿಸಿದ ಕಿಂಗ್ ವಿರಾಟ್ ಕೊಹ್ಲಿ.. ಹೀಗೆ ಸೂಪರ್ ಸ್ಟಾರ್’ಗಳ ಕಾರಣದಿಂದ ಭಾರತದಲ್ಲಿ ಪುರುಷರ ಕ್ರಿಕೆಟ್ ಸದಾ ಶ್ರೀಮಂತ..
ಈ ಸೂಪರ್ ಸ್ಟಾರ್’ಗಳು ಆಡಿದರಷ್ಟೇ ಜನ ಮೈದಾನಕ್ಕೆ ಬರುತ್ತಾರೆ, ಕ್ರಿಕೆಟ್ ನೋಡುತ್ತಾರೆ, ಟಿವಿ ಮುಂದೆ ಕುಳಿತು ಪಂದ್ಯ ವೀಕ್ಷಿಸುತ್ತಾರೆ ಎಂಬ myth ಅನ್ನು ಸುಳ್ಳು ಮಾಡಿದ ಸೂಪರ್ ಸ್ಟಾರಿಣಿ ಸ್ಮೃತಿ ಮಂಧನ..
ಭಾರತದಲ್ಲಿ ಮಹಿಳಾ ಕ್ರಿಕೆಟ್ ಯಶಸ್ಸಿನ ಹಾದಿಯಲ್ಲಿ ಹೆಜ್ಜೆ ಹಾಕುತ್ತಿದೆ ಎಂದರೆ ಅದಕ್ಕೆ ಕಾರಣ ಸ್ಮೃತಿ ಮಂಧನ..
ದೇಶದ ಗಲ್ಲಿ ಗಲ್ಲಿಗಳಲ್ಲಿ ಹುಡುಗಿಯರು ಕ್ರಿಕೆಟ್ ಬ್ಯಾಟ್ ಹಿಡಿದಿದ್ದಾರೆ ಎಂದರೆ ಅದಕ್ಕೆ ಕಾರಣ ಸ್ಮೃತಿ ಮಂಧನ..
Of course.. ಮಿಥಾಲಿ ರಾಜ್ ಎಂಬ ಮಹಾನ್ ಆಟಗಾರ್ತಿ ಭಾರತದ ಮಹಿಳಾ ಕ್ರಿಕೆಟ್’ಗೆ ಕೊಟ್ಟ ಕೊಡುಗೆ ತುಂಬಾ ದೊಡ್ಡದು. ಆದರೆ ಆಟದಲ್ಲಿ, ಖ್ಯಾತಿಯಲ್ಲಿ, ಜನರನ್ನು ಸೆಳೆಯುವ ಛಾತಿಯಲ್ಲಿ ಮಿಥಾಲಿಯನ್ನೂ ಮೀರಿಸಿದ ಸೂಪರ್ ಸ್ಟಾರ್ ಸ್ಮೃತಿ ಮಂಧನ.. ಕ್ರಿಕೆಟ್’ನ ಮೂರೂ ಪ್ರಕಾರಗಳಲ್ಲಿ ಶತಕ ಬಾರಿಸಿದ ಭಾರತದ ಮೊದಲ ಮತ್ತು ಏಕೈಕ ಕ್ರಿಕೆಟರ್ ಸ್ಮೃತಿ ಮಂಧನ.
29ನೇ ವಯಸ್ಸಿಗೆ ಸ್ಮೃತಿ ಮಂಧನ ಹೆಸರಲ್ಲಿರುವ ಅಂತರಾಷ್ಟ್ರೀಯ ಶತಕಗಳು 16, ಅರ್ಧಶತಕಗಳು 66. ಇನ್ನು 3 ಶತಕಗಳನ್ನು ಬಾರಿಸಿದರೆ ಮಹಿಳಾ ಏಕದಿನ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅತೀ ಹೆಚ್ಚು ಶತಕಗಳನ್ನು ಗಳಿಸಿವರ ಸಾಲಿನಲ್ಲಿ ಆಕೆಯೇ ಅಗ್ರಗಣ್ಯೆ. ಆ ವಿಶ್ವದಾಖಲೆ ಬರೆಯುವ ದಿನ ದೂರವಿಲ್ಲ.
ಏಕದಿನ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಭಾರತ ಪರ ಅತೀ ವೇಗದ ಶತಕ ದಾಖಲಿಸಿದ ಕ್ರಿಕೆಟರ್ ವಿರಾಟ್ ಕೊಹ್ಲಿಯೂ ಅಲ್ಲ, ರೋಹಿತ್ ಶರ್ಮಾನೂ ಅಲ್ಲ. ಆ ಸಾಧನೆಯ ಶಿಖರವೇರಿರುವ ಹುಡುಗಿಯ ಹೆಸರು ಸ್ಮೃತಿ ಮಂಧನ.. ದೆಹಲಿಯಲ್ಲಿ ನಿನ್ನೆ ನಡೆದ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ಸ್ಮೃತಿ 50 ಎಸೆತಗಳಲ್ಲಿ ಶತಕ ಬಾರಿಸಿ ಚರಿತ್ರೆ ಸೃಷ್ಠಿಸಿದ್ದಾಳೆ.
ಸ್ಮೃತಿ ಮಂಧನ Queen of Cricket. ಎಡಗೈ ಬ್ಯಾಟರ್ ಸ್ಮೃತಿ ಬಾರಿಸುವ ಕೆಲ ಡ್ರೈವ್’ಗಳು, glance, flick.. ಆ ಸ್ಟೈಲ್, ಆ swag ಬಂಗಾಳದ ಹುಲಿ ಸೌರವ್ ಗಂಗೂಲಿ ಮತ್ತು ಶ್ರೀಲಂಕಾ ದಿಗ್ಗಜ ಕುಮಾರ ಸಂಗಕ್ಕಾರ ಅವರ ಆಟವನ್ನು ನೆನಪಿಸುತ್ತವೆ.
ಸ್ಮೃತಿ ಮಂಧನ ಮಹಾರಾಷ್ಟ್ರದ ಸಾಂಗ್ಲಿಯವಳು. ಆರಂಭದ ದಿನಗಳಲ್ಲಿ ಸ್ಮೃತಿ The Great Wall of India ರಾಹುಲ್ ದ್ರಾವಿಡ್ ಅವರ ದೊಡ್ಡ ಅಭಿಮಾನಿ. ಶ್ರವಣ್ ಮಂಧನ ಆಕೆಯ ಸಹೋದರ. ತಂಗಿಯ 16ನೇ ಹುಟ್ಟುಹಬ್ಬಕ್ಕೆ ಅಣ್ಣ ದೊಡ್ಡ ಉಡುಗೊರೆ ಕೊಟ್ಟಿದ್ದ. ಏನದು ಗೊತ್ತಾ..? ರಾಹುಲ್ ದ್ರಾವಿಡ್ ಅವರ ಹಸ್ತಾಕ್ಷರವುಳ್ಳ ಬ್ಯಾಟ್.
2012ರಲ್ಲಿ ಬೆಂಗಳೂರಿಗೆ ಬಂದಿದ್ದ ಸ್ಮೃತಿ ಮಂಧಳನ ಅಣ್ಣ ಶ್ರವಣ್, ದ್ರಾವಿಡ್ ಅವರನ್ನು ಭೇಟಿ ಮಾಡಿ ತಂಗಿಗಾಗಿ ಅವರಿಂದ ಬ್ಯಾಟ್ ಒಂದನ್ನು ಪಡೆದಿದ್ದ. ದಿಗ್ಗಜ ದ್ರಾವಿಡ್ ಅವರಿಂದ ಸಿಕ್ಕಿದ್ದ ಬೆಲೆ ಕಟ್ಟಲಾಗದ ಉಡುಗೊರೆಯದು. ಮನೆಯ showcaseನಲ್ಲಿ ಇಟ್ಟಿದ್ದಳು ಸ್ಮೃತಿ.
ಒಂದು ದಿನ showcaseನಲ್ಲಿದ್ದ ಬ್ಯಾಟ್ ಕೈಗೆತ್ತಿಕೊಂಡ ಸ್ಮೃತಿಗೆ, “ಏನು ಅದ್ಭುತವಾಗಿದೆ ಈ ಬ್ಯಾಟ್, amazing balance” ಅನ್ನಿಸಿಬಿಟ್ಟಿತ್ತು. ಅಷ್ಟೇ.. ಬ್ಯಾಟನ್ನು ಕಿಟ್ ಬ್ಯಾಗ್’ಗೆ ತುಂಬಿಸಿಕೊಂಡಿದ್ದಳು.
2013. ಅಕ್ಟೋಬರ್ 31. ವಡೋದರಲ್ಲಿ ಗುಜರಾತ್ ವಿರುದ್ಧ West Zone Women’s U-19 ಟೂರ್ನಿಯ ಪಂದ್ಯ. ಮಹಾರಾಷ್ಟ್ರ ಪರ ಆರಂಭಿಕ ಆಟಗಾರ್ತಿಯಾಗಿ ಕಣಕ್ಕಿಳಿದ ಸ್ಮೃತಿ ಮಂಧನಳ ಕೈಯಲ್ಲಿದ್ದದ್ದು ದ್ರಾವಿಡ್ ಉಡುಗೊರೆಯಾಗಿ ಕೊಟ್ಟಿದ್ದ ಅದೇ ಬ್ಯಾಟ್.
ದ್ರಾವಿಡ್ ಅವರ ಬ್ಯಾಟ್’ನಲ್ಲಿ ಆಡಿದ್ದ 17 ವರ್ಷದ ಸ್ಮೃತಿ ಮಂಧನ ಆ ದಿನ ದ್ವಿಶತಕ ಬಾರಿಸಿದ್ದಳು. ಅದು ಏಕದಿನ ಕ್ರಿಕೆಟ್’ನಲ್ಲಿ ಭಾರತೀಯ ಮಹಿಳೆಯೊಬ್ಬಳು ಬಾರಿಸಿದ್ದ ಮೊಟ್ಟ ಮೊದಲ ಡಬಲ್ ಸೆಂಚುರಿ. 150 ಎಸೆತಗಳಲ್ಲಿ 224 ರನ್. ಕ್ರಿಕೆಟ್ ಜಗತ್ತಿಗೆ ಸ್ಮೃತಿ ಮಂಧನಳನ್ನು ದೊಡ್ಡದಾಗಿ ಪರಿಚಯಿಸಿದ್ದ ಇನ್ನಿಂಗ್ಸ್ ಅದು. ಅಲ್ಲಿಂದ ಸಾಂಗ್ಲಿ ಹುಡುಗಿ ತಿರುಗಿ ನೋಡಿದ್ದೇ ಇಲ್ಲ. ಇವತ್ತಿಗೆ ಕೇವಲ 29ನೇ ವಯಸ್ಸಿಗೆ ಸ್ಮೃತಿ ಮಂಧನ biggest superstar of women’s cricket.
2017ರ ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿ. ಬಹುಶಃ ಅದು ಸ್ಮೃತಿ ಮಂಧನಳ ಕ್ರಿಕೆಟ್ ಬದುಕಿನ ದುಸ್ವಪ್ನ. ಅವತ್ತೇನಾದರೂ ಅವಳು ತನ್ನ ಸಾಮರ್ಥ್ಯಕ್ಕೆ ತಕ್ಕ ಆಟದಲ್ಲಿ 50% ಆಡಿದರೂ ಸಾಕಿತ್ತು, ಭಾರತ ವಿಶ್ವಕಪ್ ಗೆಲ್ಲುತ್ತಿತ್ತು.
ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 90 ರನ್ ಗಳಿಸಿದ್ದ ಸ್ಮೃತಿ, 2ನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅಜೇಯ ಶತಕ ಗಳಿಸಿದ್ದಳು. ಅದೇ ಕೊನೆ.. ಮುಂದೆ ಟೂರ್ನಿಯಲ್ಲಿ ಸ್ಮೃತಿ ಮಂಧನ ಎದುರಿಸಿದ್ದು ಘೋರ ವೈಫಲ್ಯ. ಸೆಮಿಫೈನಲ್, ಫೈನಲ್ ಸೇರಿ ಮುಂದಿನ ಏಳು ಇನ್ನಿಂಗ್ಸ್’ಗಳಲ್ಲಿ 2, 8, 4, 3, 13, 6, 0.
ಭಾರತ ಮಹಿಳಾ ಕ್ರಿಕೆಟ್ ತಂಡದ ಈಗಿನ ಆಟಗಾರ್ತಿಯರ ಪೈಕಿ ಸ್ಮೃತಿ ಮಂಧನ ನನಗೆ ಅಚ್ಚುಮೆಚ್ಚು. ವೈಯಕ್ತಿಕವಾಗಿ ಪರಿಚಯವಿರುವ ಹುಡುಗಿ. ಬಹುಶಃ 2016 ಇರಬೇಕು. ಬೆಂಗಳೂರಿನ National Cricket Academyಗೆ ಬಂದಿದ್ದಾಗ ಕರ್ನಾಟಕದ ಮಹಿಳಾ ಕ್ರಿಕೆಟರ್ ಒಬ್ಬರು ಸ್ಮೃತಿ ಮಂಧನಳಿಗೆ ನನ್ನನ್ನು ಪರಿಚಯಿಸಿದ್ದರು. ಆಗಿನ್ನೂ ಸ್ಮೃತಿ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅಂಬೆಗಾಲಿಡುತ್ತಿದ್ದ ಸಮಯ. ಆಗ ಪರಿಚಯವಾದವಳು ಈಗಲೂ ಸಂಪರ್ಕದಲ್ಲಿದ್ದಾಳೆ.
2017ರ ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ವಿರುದ್ಧ 13 ರನ್ನಿಗೆ ಔಟಾದ ನಂತರ ಸ್ಮೃತಿ ಮಂಧನಗೆ ಒಂದು ವಾಟ್ಸಾಪ್ ಮೆಸೇಜ್ ಕಳುಹಿಸಿದ್ದೆ. “ನಿನ್ನನ್ನು ಈ ರೀತಿ ನೋಡುವುದಕ್ಕೆ ಬೇಸರವಾಗುತ್ತದೆ. ನೀನು ಚೆನ್ನಾಗಿ ಆಡಿದರೆ ಭಾರತ ಖಂಡಿತಾ ವಿಶ್ವಕಪ್ ಗೆಲ್ಲುತ್ತದೆ. ಸೆಮಿಫೈನಲ್’ನಲ್ಲಿ ದೊಡ್ಡ ಇನ್ನಿಂಗ್ಸ್ ನಿನಗಾಗಿ ಕಾದಿದೆ” ಎಂದು.
‘’ಥ್ಯಾಂಕ್ಯೂ ಭೈಯ್ಯಾ, ನಿಮ್ಮಂಥವರ ಹಾರೈಕೆಯೇ ನನಗೆ ದೊಡ್ಡ ಶಕ್ತಿ. Hope for the best” ಎಂದು reply ಮಾಡಿದ್ದಳು.
ಆದರೆ ನಿರೀಕ್ಷೆ ಸುಳ್ಳಾಗಿತ್ತು. ಸೆಮಿಫೈನಲ್’ನಲ್ಲೂ ಆ ದೊಡ್ಡ ಇನ್ನಿಂಗ್ಸ್ ಬರಲಿಲ್ಲ. ಫೈನಲ್’ನಲ್ಲೂ ಬರಲಿಲ್ಲ. ಅಂದು ಭಾರತ ಯಾಕೆ ವಿಶ್ವಕಪ್ ಗೆಲ್ಲಲಿಲ್ಲ ಎಂಬುದಕ್ಕೆ ಸ್ಮೃತಿ ಮಂಧನಳ ವೈಫಲ್ಯವೇ ಉತ್ತರ.
8 ವರ್ಷಗಳ ಹಿಂದೆ ಹಾಗೆ ದಿಕ್ಕೇ ತೋಚದೆ ಕೂತಿದ್ದ ಸ್ಮೃತಿ ಮಂಧನ ಇವತ್ತು ಭಾರತದ ಸರ್ವಶ್ರೇಷ್ಠ, ಸಾರ್ವಕಾಲಿಕ ಶ್ರೇಷ್ಠ ಮಹಿಳಾ ಕ್ರಿಕೆಟರ್ ಆಗಿ ಬೆಳೆದು ನಿಂತಿದ್ದಾಳೆ.. ದೇಶದಲ್ಲಿ ಮಹಿಳಾ ಕ್ರಿಕೆಟ್ ಬೆಳೆಯಲು ಕಾರಣವಾಗಿದ್ದಾಳೆ.
ಕನ್ನಡಿಗರಿಗೆ ಸ್ಮೃತಿ ಅಚ್ಚುಮೆಚ್ಚಿನ ಆಟಗಾರ್ತಿಯಾಗಲು ಮೊದಲ ಕಾರಣ ಆಕೆಯ ಆಟ.. ಎರಡನೇ ಕಾರಣ, ಆಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ್ತಿ. ಒಂದು ಕಪ್’ಗಾಗಿ ಆರ್.ಸಿ.ಬಿ ಅಭಿಮಾನಿಗಳು ಹತ್ತಾರು ವರ್ಷಗಳಿಂದ ಕಾತರಿಸುತ್ತಿದ್ದಾಗ ಕಪ್ ಗೆಲ್ಲಿಸಿಕೊಟ್ಟಿದ್ದ ನಾಯಕಿ. King of cricket ವಿರಾಟ್ ಕೊಹ್ಲಿಯಂತೆ queen of cricket ಸ್ಮೃತಿ ಮಂಧನ ಕೂಡ ಕರ್ನಾಟಕದ ಮನೆ ಮಗಳೇ ಆಗಿ ಬಿಟ್ಟಿದ್ದಾಳೆ.






0 Comments