ನಮಗ ಅನ್ನ ಕೊಟ್ಟೋರ ಮನಿಯೊಳಗ ಸೂತಕ ಇದ್ದಾಗ
ನಾವೆಂಗ ಉಣ್ಣಾನೋ ಯಜ್ಜಾ ?

ಬನ್ನಿಗೋಳದ ಶ್ರೀಶೈಲಪ್ಪ ತನ್ನ ಎತ್ತುಗುಳು, ಆಕಳಗಳನ್ನ ಕಣದ ಕಡಿಗೆ ಹೊಡಕಂಡು ಹೊಂಟಂತ ಹೊತ್ತಿನಾಗ ಎದಿರಿಗೆ ಬಂದದ್ದು ಬುಡೇನಜ್ಜ. ‘ಹಾಲಿನ ಡೈರಿಯಾಗ ಬಟವಾಡಿ ಮಾಡ್ಕಂಡು ಬಂದೆಂತೆಲ್ಲೋ ಶ್ರೀಶೈಲಿ ?, ಆಕಳಗುಳಿಗೆ ಇಂಡಿ ಇಡಾದು ಬುಟ್ಟು ಕಣದಾಕ ಹೊಯ್ದು ಒಣಗಿದ ಸೊಪ್ಪಿ ತಿನಸ್ತಿಯೇನು ?’ ಅಂತ ಕೇಳಿದ ಬುಡೇನಜ್ಜನ ಮಾತಿಗೆ ಶ್ರೀಶೈಲಪ್ಪ ನಕ್ಕೋತ ‘ಮನ್ನಿನು ನಿನಿಗ್ಯ ತಿಂಗಳ ಪಾಗಾರಾನ ಪೋಸ್ಟ್ ಶರಣಪ್ಪ ತಂದು ಕೊಟ್ನಂತಲ್ಲ, ಮತ್ ನೀನು ಮೊಮ್ಮಕ್ಕಳಿಗೆ ಕೊಡಾದು ಬುಟ್ಟು ಬರೀ ಪಳಾರ ಮಾಡಿಕಂಡು ಉಣ್ಣಾಕಾ ಕಳದಿಯಂತೆ ? ನಿಮಿಗಲೆ ಟೈಂ ಆತು ಹೋಗು ಗಡಿಯಾಗಿನ ಕರಿಯವ್ವ ನಿನಗಾ ಕಾಯಾಕತ್ತಿರ್ತಾಳ’ ಹಿಂಗಂತಾ ಅಂದ್ಕೋತ ತನ್ನ ಪಾಡಿಗೆ ತಾನು ಹೊಂಟ. ಶ್ರೀಶೈಲಪ್ಪನ ಮಾತು ಕೇಳಿ ನಕ್ಕೋತ ಬುಡೇನಜ್ಜ ಕರಿಯವ್ವನ ಗುಡಿಕಡಿಗೆ ಹೆಜ್ಜಿ ಹಾಕ್ದ.
ಕರಿಯವ್ವನ ಗುಡಿತಾವಿರ ಕಟ್ಟಿ ಮುಂದ ಬಂದ ಬುಡೇನಜ್ಜ ತನ್ನ ಕೆರಗಳನ್ನ ಬುಟ್ಟು ಕಟ್ಟಿ ಹತ್ತಿ ಕುಂತ. ಅದಾ ಟೈಂಗೆ ಸಿರಯಾಗಿ ಕಡ್ಲಬಾಳ ಸಾಂತವ್ವ ಕುರ್ಚಿಗಿ ತಗಂಡು ಒಂದು ಗೋಣಿಚೀಲನ ತಲಿಮ್ಯಾಗಿಟಕಂಡು ಹೊಲದ ಕಡಿಗೆ ಹೊಂಟಿದ್ಲು. ಅದನ್ನ ನೋಡಿದ ಬುಡೇನಜ್ಜ ‘ಬೇ ಸಾಂತವ್ವ, ಈಟು ಕಡ್ಡಿಪುಡಿ ಇದ್ರ ಕೊಡಬೇ’ ಅಂದ. ಬುಡೇನಜ್ಜನ ಮಾತು ಕೇಳಿ ತಲಿಮ್ಯಾಲಿನ ಹೊರಿ ಇಳಿಸಿ ನಡದಾಗ ಸಿಗಿಸಿಕಂಡಿದ್ದ ಕುಣಕಿ ಚೀಲ ತಗದು ಅದ್ರಾಗಿನ ಕಡ್ಡಿಪುಡಿನ ಬುಡೇನಜ್ಜಗ ಕೊಟ್ಗೋಂತ ‘ದೇಸದ ತುಂಬೆಲ್ಲಾ ಮಳಿ ಹಕ್ಕೆಂದು ಸುರಿಯಾಕತೈತಿ, ನಮ್ಮಪ್ಪ ಮಳಿರಾಯಗ ನಮ್ಮೂರು ಕಾಣ್ಸಿಲ್ಲೋ ಏನೋ, ಅದ್ಯಾವಾಗ ಕಣ್ ತಗಿತಾನೋ ಏನೋ, ಪೈರು ಮೆಲ್ಲಕ ಬಾಡಾಕತ್ಯಾವು, ಕಳಿ ತೆಗೆಯಕರ ನಮ್ ಜೀವನಾ ಚುರ್ ಅಂತೈತಿ ನೋಡೋ ಬುಡೇನಣ್ಣಾ’ ಅಂದ್ಲು.
ಕಡ್ಡಿಪುಡಿನ ಎಡಗೈ ಅಂಗೈಗೆ ಹಾಕ್ಕಂಡು ತಿಕ್ಕೋತ ಸಾಂತವ್ವನ ಮಾತು ಕೇಳಿದ ಬುಡೇನಜ್ಜ, ಮಳಿ, ನೀರಿನ ಬಗ್ಗೆ ಮಾತಾಡಕ್ಕತ್ತೀಯೇನ್ ನೀ ? ಹುಚ್ಚಿ, ದಿಬ್ಬದಾಗ ಮನಿ ಕಟಿಗಂಡು, ಬೋರ್ ಕೊರಿಸಿದ್ರಂತ ಹಂಗಾತು ನಿನ್ನ ಮಾತು. ನಡಿ ನಡಿ ಹೊತ್ತಾಕೈತಿ ನಿನಗ.’ ಅಂದ. ಬುಡೇನಜ್ಜನ ಮಾತು ಕೇಳಿ ತನ್ನ ಹೊರಿ ತಾನಾ ಹೊತ್ಗಂತ ಸಾಂತವ್ವ, ‘ನಿಮ್ಮ ಅಸಾಮಿ ಮೈಲವ್ವ ಬಂತು ನೋಡಪ್ಪಾ ದೊರಿಯಾ. ಸುರು ಹಚ್ಚಿಗಳ್ರಿನ್ನು’ ಅಂದ್ಕೋತ ತನ್ನ ಪಾಡಿಗೆ ತಾನು ಹೊಂಟ್ಲು. ಮೈಲವ್ವ ಕಟ್ಟಿ ಹತ್ರ ಬಂದು ಕುಂತ್ಲು.
‘ಕ್ಯಾ ಜೀ ಬುಡೇನ್ ಜೀ, ಕುಚ್ ಕುಚ್ ಹೋತಾ ಹೈಕ್ಯಾ ಇದರ್ ? ಕಡ್ಡಿಪುಡಿಪೇ ಕ್ಯಾ ಚರ್ಚಾ ಜಾ ರಹೀ ಹೈ ?’ ಅಂತ ಬುಡೇನಜ್ಜನ ಕೆಣಕಿದ ಮೈಲವ್ವನ ಕಡಿ ತಿರುಗಿ ‘ನಿನ್ ಚಾಳೀನಾ ನೀ ಬುಡಾದಿಲ್ಲ ಬುಡಬೇ ಮೈಲವ್ವ. ಮಾರಾಷ್ಟ್ರದಾಗ ಕಂಡೆಬಟ್ಟೆ ಮಳೀ ಹೋಡದೈತಲ್ಲಾ, ನಮ್ಮೂರಿಗೆ ಯಾವಾಗ ಮಳಿ ಅಕೈತೋ ಏನೋ ಅಂತ ಕೇಳಿದ್ಲು, ಇಂಥಾ ಟೈಂಗೇ ಅಕೈತಿ ಅಂತ ಹೇಳಾಕ ಮಳಿ ಏನ್ ನಮ್ ಕೈಯಂದೇನು ? ಅನ್ನಾಕತ್ತಿದ್ದೆ ನೀನೂ ಬಂದಿ ನೋಡು.’ ಅಂದ.
ಬುಡೇನಜ್ಜನ ಮಾತು ಕೇಳಿದ ಮೈಲವ್ವ ‘ಅಯ್ಯಾ ನಮ್ಮಪ್ನಾ, ಈ ನೀರಿನ ಇಚಾರ ತಗದ್ರ ಸಾಕು ನನ್ ಹೊಟ್ಟಿ ಉರಿತೈತಿ ಬುಡೋ ಮಾರಾಯ. ಒಂದು ವರ್ಸಲಿಂದ ಹೋರಾಡಕತ್ತಿ ನಮ್ ಹೊಟ್ಯಾನ ಸಿಟ್ಟು ರೆಟ್ಯಾನ ಸಿಟ್ಟು, ಎಲ್ಲಾ ತೋರಿಸಿದ್ರೂ ನಮಿಗ್ಯ ಕುಡಿಯಾಕ ನೀರು ಕೊಡದಾ ಆಟ ಆಡಸೋರನ್ನೂ ಒಂದು ಕೈ ನೋಡ್ಕಣ ಟೈಂ ನಮಿಗೂ ಬರತೈತಿ ಬುಡು,’ ಅಂದ್ಲು. ಮೈಲವ್ವನ ಮಾತಿಗೆ ಬುಡೇನಜ್ಜ ‘ಅಲ್ಲಬೇ ಮೈಲವ್ವಾ, ಗಂಗಾನದಿನ ತೊಳದು ಮತ್ಯ ಸುದ್ದು ಮಾಡಿಬಿಡ್ತೀವಿ ಅಂತಂದು ಕೋಟಿಗಟ್ಲಿ ನುಂಗಿ ನೀರು ಕುಡ್ದಾರ ಕೆಲ್ಸ ಚೂರೂ ಬೇಸಾಗಿಲ್ಲ ಅಂತ ಸುದ್ದಿ ಬಂದಿತ್ತು ಗೊತ್ತೇನವಾ ನಿನಿಗ್ಯ ?’ ಅಂದ. ಅದಕ್ಕ ಖರ್ಚು ಮಾಡಿದ ರ್ವಕ್ಕಾನಾ ನಮ್ ರೈತ್ರ ಸಾಲಕ್ಕ ಹಾಕಿದ್ರ ಎಷ್ಟು ರೈತ್ರ ಆತ್ಮಗಳು ಎಷ್ಟು ಖುಷಿ ಪಡ್ತಿದ್ವೋ ಏನೋ. ಅದಿರ್ಲಿ ಸಾಬಣ್ಣಾ, ಈ ಬೋಸುಡಿಕೆ ರಾಮ ಎಲ್ಲಿ ? ಯಾಕ ಇನ್ನೂ ಬಂದಿಲಲ್ಲ ?’ ಅಂತ ಕೇಳಿದ್ಲು.
ಮೈಲವ್ವನ ಮಾತು ಮುಗಿತಿದ್ದಂಗನಾ ‘ಮುಂಜಾಲೆ ಮಕಾ ತೊಳಕಣಾಕರ ಅಂಗಳದಾಗ ನೋಡಿದ್ದೆ, ಇನ್ನೇನು ಬರಬಹುದು ಇರು’ ಅಂದ ಬುಡೇನಜ್ಜ. ರಾಮಣ್ಣನ ಮನಿ ಹಾದಿ ಕಡೆ ತಿರುಗಿದ ಮೈಲವ್ವ ‘ಅಗೋ ಬಂದ ನೋಡಲ್ಲಿ ಕರಿಯವ್ವನ ಕುಲಪುತ್ರ’ ಅಂತಿದ್ದಂಗನಾ ‘ನನಿಗಿಂತ್ಲೂ ಮುಂದಾ ಬಂದು ಇಬ್ರು ಎಷ್ಟೊತ್ತು ಆತ್ರಿಪಾ ದೈವಾ ? ಎಲ್ಲಿವರಿಗೂ ನಡಿಸಿರಿ ಕಥಿನಾ ?’ ಅಂತ ಅಂದ್ಕೋತ ರಾಮಜ್ಜ ಕಟ್ಟಿಗೆ ಕುಂತ್ಗಂಡ. ರಾಮಣ್ಣನ ಕಡಿ ತಿರುಗಿದ ಬುಡೇನಜ್ಜ ‘ಹಿಂಗಾ ಬರಿ ಖಾಲಿ ಪೀಲಿ ನಡದೈತಿ ಬಾರೋ ಮರಾಯ. ಅವಾಗಿಂದ ನಮ್ ಮೈಲವ್ವ ಬರೆ ನಿನ್ನಾ ಗಗ್ಗರಸ್ತಿದ್ಲು, ಅದೇನ್ ಕೇಳು’ ಅಂದ
‘ಅಲೇಲೆಲೆ ಹಿಂಗೈತೇನು ಇಚಾರ ?’ ಅಂತ ನಕ್ಕೋತ ಮೈಲವ್ವನ ಕಡಿಗೆ ತಿರುಗಿ ಏನಾ ಹೇಳಾಕ ವಂಟಿದ್ದ ಅದಾ ಟೈಂಗೆ ಗದ್ದಿಕೇರಿ ಗೋವಿಂದ ಕಟ್ಟಿ ಮುಂದ ಕೇರಿ ಕಡಿಗೆ ಓಡಿ ಹೊಂಟಿದ್ದ. ಆ ಹುಡ್ಗನ್ನ ನೋಡಿದ ಕೂಡ್ಲ ರಾಮಣ್ಣ ‘ಲೇ ಗೋವಿಂದಾ ಯಾಕಲೇ ಹಂಗ ಓಡಾಕತ್ತಿ ಯಾರರಾ ಹಿಂಬಾಲತ್ಯಾರೇನು ?’ ಅಂತ ಕೇಳಿದ. ರಾಮಣ್ಣನ ಮಾತು ಕೇಳಿದ ಗೋವಿಂದ ‘ನಮ್ ದೊಡಪ್ಪಾರ ಎಮ್ಮಿ ಸತೈತಜ್ಜ, ತಗಂಡೋಗಾಕ ಕೇರಿ ಕೊಟ್ರಣ್ಣಗ ಹೇಳಿ ಬರಾಕ ಹೊಂಟೀನಿ.’ ಅಂತ ಹೇಳ್ಕಂತನಾ ಓಡಿ ಹೋದ.
ಹಿಂದೆಲೆ ಮೈಲವ್ವನ ಕಡಿಗೆ ನೋಡಿದ ರಾಮಣ್ಣ ‘ಈಗ ನೆಪ್ಪಾತು ನೋಡ್ಬೇ ಮೈಲವ್ವ, ಇದಾ ದನಗಳ ಕಾಲಾಗ ಗುಜರಾತ್ನಾಗ ‘ದೊಡ್ಡೋರು’, ‘ದೇವ್ರ ಮಕ್ಕಳು’ ಅನ್ನಿಸ್ಕಂಡೋರು ದನಕ್ಕಿಂತ ಕೀಳಾಗಿ ನಡಕಂಡಿದ್ದು ದೊಡ್ಡ ಸುದ್ದಿ ಆಗಿ ಈ ನಮ್ ಕೇರಿ ಕೊಟ್ರಪ್ಪನ ಮಂದೆಲ್ಲಾ ರೊಚ್ಚಿಗೆದ್ದು ತಮ್ಮ ತಾಕತ್ತೇನು ಅನ್ನಾದನ್ನ ತೋರಿಸಿದ್ಕ ಒಂದು ವಿಕೆಟ್ಟಾ ಬಿದೈತಿ. ಗೊತ್ತೈತಿಲ್ಲು ?’ ಅಂತ ಕೇಳಿದ.
ರಾಮಣ್ಣನ ಮಾತು ಕೇಳಿದ ಮೈಲವ್ವ ‘ಬಡವನ್ ಕೋಪ ದವಡಿಗೆ ಮೂಲ ಅನ್ನೋ ಗಾದಿನ ಏನ್ ಸುಮ್ನಾ ಮಾಡ್ಯಾರೇನ್ ಮತ್ಯ ?’. ಅಯ್ಯೋ ನೋಡ್ಬೇಕಿತ್ತಲೋ ನೀನು, ಇಡೀ ದೇಸದಾಗ ಗುಜರಾತೇ ಸ್ವರ್ಗ ಅಂತ ಮೂಗಿಗೆ ತುಪ್ಪ ಸೌರಿದ್ರು. ಸತ್ಯ ಯಾವತ್ತಿದ್ರೂ ಜಗತ್ತಿಗೆ ಗೊತ್ತಾಗೇ ಅಕೈತಿ ಅನ್ನೋದು ಸುಳ್ಳಲ್ಲ ಬುಡು ತಮ್ಮಾ.’ ಅಂದಳು.
ಅದಾ ಹೊತ್ತಿನಾಗ ಮಣ್ಣಮ್ಮನವರ ಗೌರವ್ವ ಆಸ್ಪತ್ರಿ ಕಡೆಗಿಂದ ಬರಾಕತ್ತಿದ್ಲು, ಅಕಿನ ನೋಡಿದ ಬುಡೇನಜ್ಜಾ ‘ಅರಾಮಾದೇನಬೇ ಗೌರವ್ವಾ ಕಮ್ಮಿ ಆಗ್ಯಾವೇನು ಜ್ವರ ?’ ಅಂತ ಕೇಳಿದ. ಬುಡೇನಜ್ಜನ ದನಿ ಕೇಳಿದ ಗೌರಮ್ಮ ‘ಊನಜ್ಜೋ ಜರ ಇಳದಾವು’ ಅಂತಂದು ತನ್ನ ಮನಿಕಡಿಗೆ ಹೊಂಟ್ಲು.
ಆಮ್ಯಕಿದ್ದು ನಮ್ ಮೈಲವ್ವ ‘ಯಾಕ ಸಾಬಣ್ಣ ? ಜ್ವರ ಬಂದಿದ್ವಂತೇನು ಅಕಿಗ್ಯ ?’ ಅಂತ ಕೇಳಿದ್ಲು. ಮೈಲವ್ವನ ಮಾತು ಕೇಳಿದ ಬುಡೇನಜ್ಜ ‘ಊನಬೇ ಮನ್ನೆ ಭರ್ಜರಿ ಜ್ವರ ಬಂದಿದ್ವು ಅದ್ರಾಗ ಇಡೀ ಮನ್ಯಾರು ಉಪಾಸ ಇದ್ರು ನೋಡು.’ ಅಂದ. ‘ಇಡೀ ಮನ್ಯರ್ಯಾಕ ಉಪಾಸ ಇದ್ರಂತ ?’ ಅಂತ ಮೈಲವ್ವ ಕೇಳಿದ್ಕ ‘ಅವತ್ತು ಮುಖ್ಯಮಂತ್ರಿಗಳ ಮಗ ಅಗಲಿದ್ನಲ್ಲಾ, ಅದಕ್ಕಾ, ‘ನಮಗ ಅನ್ನ ಕೊಟ್ಟೋರ ಮನಿಯೊಳಗ ಸೂತಕ ಇದ್ದಾಗ ನಾವೆಂಗ ಉಣ್ಣಾನೋ ಯಜ್ಜಾ ?, ಒಂದಿನ ಉಪಾಸ ಇದ್ರ ಏನ್ ಲೋಕಾನಾ ನಿಂತ್ ಬುಡಾದಿಲ್ಲ ಬುಡು. ಇವೇನು ಸಣ್ಣ ಜ್ವರ ಅಷ್ಟಾ ಹೌದಿಲ್ಲು ? ನಾಳೀಕ ದವಾಖಾನಿಗೆ ಹೋದ್ರಾತು ‘ ಅಂತ ಅಂದಿದ್ಲಬೇ. ನಮ್ಮ ಕೈಲೆ ಅಲ್ಲಿಗೆ ಹೋಗಿ ಬರಾಕ ಆಗಲಿಲ್ಲಾಂದ್ರೂ ನಮ್ ಕೈಲಾದೋಟು ಕೃತಜ್ಞತಿ ತೋರಸಾದು ನಮ್ ಮಣ್ಣಿನ ಗುಣ ಐತಿ ಹೌದಿಲ್ಲು ? ಅಂದ.
ಬುಡೇನಜ್ಜನ ಮಾತಿಗೆ ಮೈಲವ್ವ ‘ನೀನೇಳಾದು ಖರೆ ಐತಿ ಬುಡು ಸಾಬಣ್ಣ, ಆದ್ರ ಇಂಥಾ ಮಣ್ಣಿನಾಗೂ ಬೆರಿಕಿ ಮಂದಿ ಹುಟೈತಲ್ಲಾ ಅನ್ನಾದಾ ನನಗೊಂದು ಚಿಂತಿ ಆಗೈತಿ ನೋಡಪಾ’ ಅಂದ್ಲು. ‘ಮನುಷ್ಯತ್ವ ಇದ್ದೋರಿಗೆ ಮಾತ್ರ ಗೊತ್ತಿರತೈತಿ ಬುಡಬೇ ಮಕ್ಳ ಮರಣ ಅಂದ್ರ ಎಂಥಾ ಕೆಂಡದ ಮ್ಯಾಗ ನಾವಾ ನಿಂತಂಗ ಅನ್ನೋದು. ಅವತ್ತು ನಮ್ ಮನಿಯಾಗ ಟಿಬಿ ಮುಂದ ಕುಂತಾರು ಕಾರ್ಯ ಮುಗಿಯವರಿಗೂ ಒಂದನಿ ನೀರೂ ಕುಡಿದಂಗ ಕುಂತಿದ್ದಿಲ್ಲೇನು ನಾವೆಲ್ಲ ?’ ಅಂತಂದ ಬುಡೇನಜ್ಜ. ‘ಅವತ್ತಿಂದು ಮಾತ್ರ ನೆಪ್ಪು ಮಾಡಬ್ಯಾಡ ಬುಡು ಸಾಬಣ್ಣ ಕಳ್ಳು ಚುರ್ ಅಂತೈತಿ’ ಅಂತೇಳಿ ಮೈಲವ್ವ ತನ್ನ ಸೀರಿ ಸೆರಗೀಲೆ ಕಣ್ಣು ಒರಸಿಕಂಡ್ಳು. ಯಾಕ ಮೂರೂ ಮಂದಿ ಸ್ವಲ್ಪ ಹೊತ್ತು ಸುಮ್ಮನ ಕುಂತ್ರು. ಏನೂ ಮಾತಾಡದಂಗನಾ ಬುಡೇನಜ್ಜ ರಾಮಣ್ಣನ ಮನಿ ಕಡಿ ನೋಡಿದ. ಮೈಲವ್ವ ತಲಿ ತಗ್ಗಿಸಿಕೊಂಡಾ ಕುಂತ್ಲು. ರಾಮಣ್ಣ ತಲಿ ಎತ್ತಿ ಮುಗುಲು ನೋಡಾಕತ್ತಿದ.





0 Comments