ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೋವಿಡ್ ಕಥೆ – ಪಾಸಿಟಿವಿಟಿ

ಸುಧಾ ಚಿದಾನಂದಗೌಡ

‘ಅಪ್ಪಾ ಇಳಿಸಪ್ಪಾ ಇಳ್ಸೂ ಇಳ್ಸೂ.. ನಾ ನಡ್ಕೊಂಬರ‍್ತೀನಿ ಇಳ್ಸೂ ಇಳ್ಸೂ..’

ಹುಡುಗಿ ಕೂಗಿಕೊಳ್ಳತೊಡಗಿ ಆಗಲೇ ಕಾಲುಘಂಟೆಯಾಗಿ ಹೋಗಿತ್ತು. ಹೇಗೆ ಇಳಿಸಿಯಾನು ಅಪ್ಪ..? ಮೇಲೆ ಸುರಿವ ಬಿಸಿಲು, ಕೆಳಗೆ ಸುಡುವ ಡಾಂಬರು, ನಡುವೆ ಹಾಯುವ ಬಿಸಿಬಿಸಿಗಾಳಿ.. ಹತ್ತರ ವಯಸಿನ ಬಾಲೆಯನ್ನು ತಲೆಯ ಮೇಲಿರಿಸಿಕೊಂಡು ಆ ಕಡೊಂದು ಈ ಕಡೊಂದು ಕಾಲು ಹಾಕಿಸಿಕೊಂಡು, ಅವಳ ಕೈಗೇನೇ ಒಂದು ಚೀಲ ಹಿಡಿದುಕೊಳ್ಳಲು ಕೊಟ್ಟು, ಅವಳ ತಮ್ಮನನ್ನು ಸೊಂಟದ ಮ್ಯಾಲ ಕೂರಿಸಿಕೊಂಡು ಸರಸರಾ ಹೆಜ್ಜೆ ಹಾಕ್ಕೋತ ಹೊಂಟಿದ್ದಕ್ಕ ಇಷ್ಟಾದರೂ ದಾರಿ ಸಾಗತು. ಈ ಹುಡುಗಿ ಕೊಸರಾಟವಂತೂ ಹಿಡಿತಕ್ಕೆ ಸಿಗಲೊಲ್ಲದು.

‘ಹೋಗತ್ಲಾಗ ಏನಾರ ಮಾಡದ್ಕ್ಯ..’ ಎಂದು ಸೋಲುತ್ತಿದ್ದ ಕೈಗಳು ಮಗಳನ್ನು ಕೆಳಗಿಳಿಸಿಬಿಟ್ಟಿದ್ದವು. ಹುಡುಗಿ ಸರ್ರನೆ ಇಳಿದು, ‘ಒಲ್ಲೇ ಒಲ್ಲೇ ನಾ ಇಳಿಯಾಂಗಿಲ್ಲ’ ಎನ್ನುತ್ತಿದ್ದ ತಮ್ಮನನ್ನೂ ಜಗ್ಗಿಸಿ ಇಳಿಸಿಕೊಂಡವಳೇ.. ‘ಅಲ್ನೋಡ್ಲೇ ತಮಾ.. ಆ ಮರಾ ಕಾಣ್ತೈತಲಾ ಮೈ ತುಂಬಾ ಹೂ ಬಿಟ್ಕಂಡೈತಲಾ.. ಅದನ್ನ ಯಾರು ಫಸ್ಟು ಮುಟ್ಟತಾರೋ ನೋಡಾಣಾ ಬರ‍್ಲೇ..’ ಎಂದು ಸವಾಲೆಸೆದು ಓಡತೊಡಗಿದಳು.

ಅವಳ ಹಿಂದ್ಹಿಂದೆ ಓಡಿದ ತಮ್ಮನಿಗೆ ಅಕ್ಕನನ್ನು ಸೋಲಿಸುವ ಹುಮ್ಮಸ್ಸು. ಇಬ್ಬರೂ ಒಂದೇ ಸಲಕ್ಕೆ ಆ ಮರವನ್ನು ಇನ್ನೇನು ಮುಟ್ಟಬೇಕು.. ಅಷ್ಟರಲ್ಲಿ, ಹುಡುಗಿ ಹಿಂದೆ ತಿರುಗಿ ಅದೇನು ಕಂಡಳೋ.. ನೋಡುತ್ತಾ ಆನಂದದಿಂದ ನಿಂತೇ ಬಿಟ್ಟಳು. ತಮ್ಮ ಮುಂದೆ ಓಡಿದ್ದೂ ಆಯ್ತು, ಮರ ಮುಟ್ಟಿ ಗೆದ್ದದ್ದೂ ಆಯ್ತು.

‘ಬೇ ಯಕ್ಕಾ.. ಒಂಚೂರು ಮುಂದಕ್ಕ ನೋಡಿಕ್ಯಂಡು ನಾಕ್ಹೆಜ್ಜಿ ಓಡಿಬಿಟ್ಟಿದ್ರ ನೀನಾ ಗೆಲ್ತಿದ್ದಿ..’
‘ಏ, ಹೋಗ್ಗಾ ನಿನ್ನ.. ನೀನೇ ಗೆದ್ಕಾ ಹೋಗಾ ಯಪ್ಪಾ… ಅಲ್ನೋಡಲ್ಲಿ, ನಾ ಕೆಳಗಿಳಿದಿದ್ದಕ್ಕ ಅಪ್ಪ ಅವ್ವನ ಸೊಂಟದಾಗಿನ ಎರಡೆರಡು ದೊಡ್ಡದೊಡ್ಡ್ ಚೀಲ, ಕೈಯಾಗಿದ್ದ ಬಟ್ಟೀ ಗಂಟು ಇಸ್ಕೊಂಡು ತಲಿ ಮ್ಯಾಲಿಟ್ಕೊಂಡಾನ. ಅವ್ವ ಅಪ್ಪ ಉಸುರುಸಿರು ಬಿಡ್ತಿದ್ರು ಇಬ್ರೂ ಅಷ್ಟಕೊಂದಾ ಚೀಲಗೋಳು ಹಿಡ್ಕಂಡು.. ನಮ್ಮನ್ನ ಬ್ಯಾರೆ ಹೊತ್ಗಂಡು.. ನೋಡು ಈಗ ಒಂದಾ ಕೈಯಾಗ ಒಂದಾ ಚೀಲ ಹಿಡ್ಕೊಂಡು ಅರಾಮಾಗಿ ನಡ್ಕೊಂಡು ಬರಾಕ್ಹತ್ಯಾಳ.

ನಾವಿಬ್ರೂ ಇಳಿದು ಓಡಿದ್ಕ ಸಾರ್ಥಕ ಆತಿಲ್ಲೋ.. ನೀನಿನ್ನೂ ಸಣ್ಣಾಂವದೀ. ಅವೆಲ್ಲಾ ತಿಳಿಯಂಗಿಲ್ಲ. ನಡೀ ಇನ್ನೊಂದ್ಸಲ ಓಡಿಬಿಡಾಣ. ನೀನೇ ಗೆಲ್ಲುವಂತಿ. ಊರೂ ಜಲ್ದಿ ಸಿಗ್ತೈತಿ.. ನಡಿ ನಡಿ..’ ಏನೂ ಅರ್ಥವಾಗದೆ ಬಾಯ್ಬಿಟ್ಟುಕೊಂಡು ನೋಡುತ್ತಿದ್ದ ತಮ್ಮನನ್ನು ದಬ್ಬಿಕೊಂಡು ಜಲ್ದಿ ತಮ್ಮೂರು ಸರ‍್ಕಂಬಿಡಾಣ ಅಂತ ಓಡತೊಡಗಿದಳು ಹುಡುಗಿ.

‍ಲೇಖಕರು Avadhi

3 June, 2021

1 Comment

  1. ಅಮರದೀಪ್ ಪಿ.ಎಸ್.

    ಕತೆ ಚೆನ್ನಾಗಿದೆ ಸುಧಕ್ಕ‌‌……. ಮಕ್ಕಳು‌ ಸೂಕ್ಷ್ಮವನ್ನು ಕಲಿಯಬೇಕಾದ್ದೇ ಇಂಥಾ ಸಂಧರ್ಭದಲ್ಲಿ…..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading