ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೋತಿ ಬಿಟ್ಟು ಕೋಟಿ ಕಡೆಗೆ..

 

 

 

 

 

 

 

 

 

 

 

 

ವಿನತೆ ಶರ್ಮ /ಇಂಗ್ಲೆಂಡ್ ನಿಂದ 

ಅಂದು ಜೂನ್ ೩೦, ೧೯೯೦. ನಾನು ‘ಆಂದೋಲನ’ ಪತ್ರಿಕೆ ಕಚೇರಿಗೆ ಕಾಲಿಟ್ಟ ದಿನ.

ರಾಮಾನುಜ ರಸ್ತೆಯ ಪಕ್ಕದ ಸಂದು ಬೀದಿಯಲ್ಲಿ ಇದ್ದ ಬಾಗಿಲ ಹೊಸ್ತಿಲಲ್ಲಿ ನಿಂತಾಗ ಕಂಡದ್ದು ಎಡಗಡೆ ಮೇಜು, ಖುರ್ಚಿ. ಬಲ ಬದಿ ಇದ್ದ ಮೇಜು, ಅದರ ಮೇಲೆ ಹಾಳೆಗಳು, ಕೈಯಲ್ಲಿ ಪೆನ್ನು ಹಿಡಿದು ಖುರ್ಚಿಯಲ್ಲಿ ಕೂತ ವ್ಯಕ್ತಿ.

ಅವರು ರಾಜಶೇಖರ ಕೋಟಿ. ಆಂದೋಲನ ಪತ್ರಿಕೆಯ ಒಡೆಯ, ಸಂಪಾದಕ, ಸಂಸ್ಥಾಪಕ.

ಅಂದು ಆ ಬಾಗಿಲಲ್ಲಿ ನಿಂತಿದ್ದ ನನ್ನ ನಡವಳಿಕೆ ಅವರಿಗೆ ಸ್ವಲ್ಪ ವಿಚಿತ್ರವಾಗಿ ಕಂಡಿತ್ತು ಮತ್ತು ಕೋಪ ಕೂಡ ತರಿಸಿತ್ತು ಎಂದು ಎಷ್ಟೋ ದಿನಗಳ ನಂತರ ನನಗೆ ತಿಳಿಯಿತು.

ಅದರ ಹಿನ್ನೆಲೆ ಹೀಗಿತ್ತು. ಆ ದಿನಗಳಲ್ಲಿ ನಾನು ಕೋತಿಗಳ (Bonnet Macaque) ಸಂವಹನ ವ್ಯವಸ್ಥೆಯ ಕುರಿತು ಮೈಸೂರು ವಿಶ್ವವಿದ್ಯಾನಿಲಯದ ಸೈಕಾಲಜಿ ವಿಭಾಗದಲ್ಲಿ ಪಿಎಚ್ ಡಿ ಮಾಡುತ್ತಿದ್ದೆ. ನಾನು ಅಧ್ಯಯನ ಮಾಡುತ್ತಿದ್ದ ಕೋತಿಗಳ ಗುಂಪು ಮೈಸೂರು-ಬೆಂಗಳೂರು ರಸ್ತೆಯಲ್ಲಿ ಸಿಕ್ಕುವ ಸಿದ್ಧಲಿಂಗಪುರದ ಬಳಿಯ ತೋಪಿನಲ್ಲಿ ವಾಸವಾಗಿತ್ತು.

ಹಳ್ಳಿಯ ಅಕ್ಕಪಕ್ಕದ ರೈತರುಗಳು ನಿರ್ಧರಿಸಿ ಆ ಜೂನ್ ೩೦ ರಂದು ಬೆಳಗ್ಗೆ ೪೨ ಮಂದಿ ಇದ್ದ ಆ ಕೋತಿಗಳ ಕುಟುಂಬವನ್ನು ಸೆರೆ ಹಿಡಿದು ಟ್ರಕ್ ಒಂದರ ಹಿಂದೆ ಇದ್ದ ಪಂಜರದಲ್ಲಿ ಕೂಡಿ ಹಾಕಿದ್ದರು. ಆ ದೃಶ್ಯವನ್ನು ನೋಡಿ ನನ್ನ ಎದೆ ಒಡೆದುಹೋಗಿತ್ತು.

ನನ್ನ ಅಧ್ಯಯನಕ್ಕೆ ದೊಡ್ಡ ಪೆಟ್ಟಾಗಿತ್ತು. ಭವಿಷ್ಯವೇನು ಎಂಬ ಪ್ರಶ್ನೆಯ ಜೊತೆಗೆ “ಕೋತಿ ಸಹವಾಸ ಬಿಟ್ಟು, ಕೆಲಸ ಹುಡುಕು, ನಿನ್ನ ಜೀವನ ಭದ್ರ ಮಾಡಿಕೋ” ಅನ್ನುವ ಹೆತ್ತವರ ನಿರೀಕ್ಷೆಯನ್ನು ನಿಜವಾಗಿಸುವ ಕ್ಷಣವೊಂದು ಬಂದೇ ಬಿಟ್ಟಿತ್ತು. ನಾನೆಣಿಸದ ರೀತಿಯಲ್ಲಿ.

ನೂರಾರು ಚಿಂತೆಗಳನ್ನು ಹೊತ್ತು, ನನ್ನ TVS ಮೊಪೆಡ್ ಹತ್ತಿ ನಾನು ದಾರಿಯುದ್ದಕ್ಕೂ ಅತ್ತುಕೊಂಡು, ನನ್ನ ಪಾಲಿಗೆ ಈ ಪ್ರಪಂಚ ಮುಗಿಯಿತು ಅನ್ನುವ ರೀತಿಯಲ್ಲಿ ಮೈಸೂರಿಗೆ ವಾಪಸ್ ಬಂದಿದ್ದೆ. ಬಸ್ ಸ್ಟಾಂಡ್, ಅರಮನೆ ಸಂಕೀರ್ಣವನ್ನು ದಾಟಿ ಸರಸ್ವತಿಪುರಂ ಕಡೆ ಹೊರಳುವ ಬದಲು ನನ್ನ ಗಾಡಿ ಎಡಗಡೆ ತಿರುಗಿ ರಾಮಾನುಜ ರಸ್ತೆಯನ್ನು ಹಿಡಿಯಿತು. ನಿಂತದ್ದು ‘ಆಂದೋಲನ’ ಕಚೇರಿ ಮುಂದೆ. ಅನಿವಾರ್ಯವಾಗಿ ಕೆಲಸ ಹುಡುಕಬೇಕಿತ್ತು.

“ಆಂದೋಲನ ಪತ್ರಿಕೆಯ ಇಂಗ್ಲಿಷ್ ಆವೃತ್ತಿ ಆರಂಭವಾಗಲಿದೆ ಅಂತ ಯಾರೋ ಹೇಳಿದರು. ನಿಮ್ಮಲ್ಲಿ ಕೆಲಸ ಕೇಳಲು ಹೇಳಿದರು. ಅದಕ್ಕೆ ಬಂದಿದ್ದೀನಿ”, ಅಂದೆ ನಾನು.

ರಾಜಶೇಖರ ಕೋಟಿಯವರು ತೀಕ್ಷ್ಣವಾಗೇ ನನ್ನ ಕಡೆ ದಿಟ್ಟಿಸಿದರು. ಮಾಸಿ ಹೋದ ಜೀನ್ಸ್ ಪ್ಯಾಂಟ್, ಹಸಿರುನೀಲಿ ಶರ್ಟ್, ಕಾಲಿಗೆ ಮಿಲಿಟರಿ ಶೈಲಿಯ ಬೂಟುಗಳು, ಬಗಲಲ್ಲಿ ಬೈನಾಕ್ಯುಲರ್, ಉದ್ದವಾದ ಚೀಲ, ಜೀವವೇ ಇಲ್ಲದ ಮುಖ – ಅವತ್ತು ಹಾಗೆ ಕಾಣುತ್ತಿದ್ದೆ. ಹೆಚ್ಚು ಕಡಿಮೆ homeless ಹುಡುಗಿ ಥರ ಕಂಡಿದ್ದೆ ಎಂದು ಈಗ ಅನ್ನಿಸತ್ತೆ.

ಯಾರು ನೀವು, ಏನನ್ನ ಮಾಡ್ಕೊಂಡಿದ್ದೀರಾ, ನಿಮಗೆ ಹಾಗಂತ ಹೇಳಿದವರು ಯಾರು ಎಂದೆಲ್ಲಾ ಸ್ವಲ್ಪ ಕಟುವಾಗಿ (ನಾನೇ ತರಿಸಿದ್ದ ಕೋಪ!) ಕೋಟಿಯವರು ವಿಚಾರಿಸಿದರು.

ಸ್ವಲ್ಪ ಜಟಾಪಟಿ ತರಹ ನಾನು ಅವರು ಮಾತನಾಡಿದೆವು. ನಾಳೆ ಬನ್ನಿ ಅಂದರು. ಮರುದಿನ ಹೋದರೆ ಕಚೇರಿಯಲ್ಲಿ ಭೇಟಿಯಾದ ಹರೀಶ್ ಬಂದಗದ್ದೆ ಆಗ ಕಾಡುಗಳ್ಳ ಎಂದು ಮೈಸೂರಿನಲ್ಲಿ ಮನೆಮಾತಾಗಿದ್ದ ವೀರಪ್ಪನ್ ಬಗ್ಗೆ ಕನ್ನಡದಲ್ಲಿ ಮತ್ತು ಇಂಗ್ಲಿಷ್ ನಲ್ಲಿ ಪತ್ರಿಕಾ ವರದಿ ಮತ್ತು ಲೇಖನ ಬರೆಯಲು ಹೇಳಿದರು. ಬರೆದಾದ ನಂತರ ಅವನ್ನು ಕೋಟಿಯವರಿಗೆ ಕೊಟ್ಟರು. ಹರೀಶ್ ಸ್ವಲ್ಪ ಸಮಯದ ನಂತರ ವಾಪಸ್ ಬಂದು “ನಾಳೆಯಿಂದ ಕೆಲಸಕ್ಕೆ ಬನ್ನಿ” ಅಂದರು. ಹರೀಶ್ ಮತ್ತು ಅಂಶಿ ಪ್ರಸನ್ನರ ಮಾರ್ಗದರ್ಶನದಲ್ಲಿ ಪತ್ರಿಕಾ ವರದಿಗಳನ್ನು ತಯಾರು ಮಾಡುವ ಕೆಲಸ. ಆಗಾಗ ನೇರ ವರದಿಯನ್ನೂ ಮಾಡುತ್ತಿದ್ದೆ.

ನಿಧಾನವಾಗಿ ಪತ್ರಿಕೆಯ ಪ್ರಪಂಚ ನನ್ನ ಮುಂದೆ ಬಿಚ್ಚಿಕೊಂಡಿತ್ತು. “ರೀ ನೀವು ಹೋಗಿ ಸ್ವಲ್ಪ ಮಲಕ್ಕೊಳ್ರಿ” ಎಂದು ಕೋಟಿಯವರಿಗೆ ಗದರಿ ಹೇಳುತ್ತಿದ್ದ ಅವರ ಪತ್ನಿ ನಿರ್ಮಲಾರ ಅನವರತ ಬೆಂಬಲ ಪತ್ರಿಕೆಗೆ ಎಷ್ಟು ಮುಖ್ಯ ಎನ್ನುವುದನ್ನ ದಿನಾಗಲೂ ನೋಡುತ್ತಿದ್ದೆ. ಕಚೇರಿ ಮತ್ತು ಮನೆ ಎರಡೂ ಒಂದೇ ಕಟ್ಟಡದಲ್ಲಿದ್ದರಿಂದ ಅವರ ಕುಟುಂಬ ಜೀವನ, ಅವರ ಮೂವರು ಮಕ್ಕಳ ಬಾಲ್ಯ ಮತ್ತು ಬೆಳವಣಿಗೆ ಎಲ್ಲವೂ ಪತ್ರಿಕೆಯೊಂದಿಗೆ ತಳಕು ಹಾಕಿಕೊಂಡದ್ದು ಕಂಡಿತ್ತು.

ಕಚೇರಿಗೆ ಬಂದು ನನ್ನೆದಿರು ಇದ್ದ ಖುರ್ಚಿಯಲ್ಲಿ ಕೂತು ಬರೆಯುತ್ತಿದ್ದ ದೇವನೂರ ಮಹಾದೇವರ ಪರಿಚಯವಾಯ್ತು. ಮೈಸೂರಿನ ಅನೇಕರ – ಚಿಕ್ಕವರು, ದೊಡ್ಡವರು – ಮುಖಪರಿಚಯವಾಯ್ತು. ಆಂದೋಲನ ಪತ್ರಿಕೆಯ ಸಂಪಾದಕ ಕೋಟಿ ‘ಯವರು’, ನಿರ್ಮಲಾರ ಪತಿ, ಮಗಳು ರಶ್ಮಿಯ ಅಚ್ಚುಮೆಚ್ಚಿನ ಅಪ್ಪಾಜಿ, ಮೈಸೂರಿನಲ್ಲಿ ಹೆಸರುವಾಸಿಯಾದ ರಾಜಶೇಖರ ಕೋಟಿ – ಆ ವ್ಯಕ್ತಿತ್ವದ ಬಹು ಮುಖಗಳು ಬಿಚ್ಚಿಕೊಂಡವು.

ಕೋಟಿಯವರು ಆಂದೋಲನ ಪತ್ರಿಕೆಯ ಸಂಚಿಕೆಗಳನ್ನು ದಿನದಿನವೂ ಹೊರತರಲು ಪಟ್ಟ ಕಷ್ಟ ಮತ್ತು ಕುಟುಂಬ ನಿರ್ವಹಿಸಲು ನಿರ್ಮಲಾರವರು ಜಾವಾ ಫ್ಯಾಕ್ಟರಿಗೆ ನಡೆದುಕೊಂಡು ಹೋಗಿ ಕೆಲಸ ಮಾಡುತ್ತಿದ್ದ ದಿನಗಳ ಬಗ್ಗೆ ನಿರ್ಮಲಾ ಆಗಾಗ ಹೇಳುವರು. ಆ ಕ್ಷಣಕ್ಕೆ ನನಗೆ ಕೋಟಿಯವರ ಸಣ್ಣ ಸಿಡುಕು, “ಏ ಏನ್ರೀಪಾ ನೀವು”, “ಆ ಕಡೆ ಹೋಗ್ ಸ್ವಲ್ಪ ಏನಾಯ್ತು ನೊಡ್ರಿಪಾ” ಎಂಬ ಕೂಗಾಟ ಅರ್ಥವಾಗಿಬಿಡುವ ನೆಲೆ ಸಿಕ್ಕುತ್ತಿತ್ತು.

ಗಂಡಹೆಂಡತಿ ಜೊತೆಯಾಗಿ ಅವರ ಸಣ್ಣ ತಂಡದೊಡನೆ ಪತ್ರಿಕೆಯನ್ನು ಮೈಸೂರು ಮತ್ತು ತಾಲ್ಲೂಕಿನ ಹಳ್ಳಿಗಳಿಗೆ ಮುಟ್ಟಿಸುವ ಪ್ರಯತ್ನದ ಹಿಂದೆ ಇದ್ದ ಬೆವರು, ನಿದ್ದೆಯಿಲ್ಲದೇ, ಸಮಯಕ್ಕೆ ಸರಿಯಾಗಿ ಆಹಾರ ಸೇವಿಸದೇ ಪಡುತ್ತಿದ್ದ ಪಾಡು, ಪ್ರತಿದಿನವೂ ಕಷ್ಟಪಟ್ಟು ಮಾಡುತ್ತಿದ್ದ ದುಡಿಮೆ ನನಗೆ ಬಹಳ ಮೆಚ್ಚುಗೆಯಾಗುತ್ತಿತ್ತು. ಹೆಚ್ಚಿನ ಬಾರಿ ಅವರ ನಗು ಮುಖವೇ ಕಾಣುತಿತ್ತು. ಆಗಾಗ ಪತ್ರಿಕೋದ್ಯಮ ವಿದ್ಯಾರ್ಥಿಗಳು ಆಂದೋಲನ ಪತ್ರಿಕೆಗೆ ಬಂದು ಕೆಲಸ ಮಾಡುವರು. ಕೋಟಿಯವರ ಹತ್ತಿರ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೋತ್ಸಾಹ ಸಿಗುತಿತ್ತು.

ಹೆಣ್ಣುಮಕ್ಕಳು ಮತ್ತು ಮಹಿಳೆಯರ ಬಗ್ಗೆ, ಅವರ ಜೊತೆ ಕೋಟಿಯವರು ಬಲು ಗೌರವದಿಂದ ನಡೆದುಕೊಳ್ಳುತ್ತಿದ್ದರು. ನನ್ನನ್ನು ಮೇಡಂ ಎಂದು ಕರೆಯುತ್ತಿದ್ದರು. ಎಷ್ಟೋ ಬಾರಿ ಅವರೊಡನೆ ಸ್ವಲ್ಪ ಹೆಚ್ಚು ಸಮಯ ಮಾತನಾಡೋಣ ಎಂದುಕೊಂಡರೆ ನನಗೂ ಮತ್ತು ಅವರಿಗೂ ಸಮಯವಿದ್ದಿಲ್ಲ. ನನಗೆ ಯಾಕೋ ಧೈರ್ಯವೂ ಬಂದಿರಲಿಲ್ಲ.

ನಾನು ನನ್ನ ಬಿಎ ಡಿಗ್ರಿಯಲ್ಲಿ ಜರ್ನಲಿಸಂ ಓದಿದ್ದೆ. ಆಂದೋಲನ ಪತ್ರಿಕೆಗೆ ನಾನು ಕೆಲಸ ಮಾಡಿದ ಆ ದಿನಗಳಲ್ಲಿ ನನಗೆ ಮಾದರಿಯಾಗಿ ಕಂಡದ್ದು ಕೋಟಿಯವರ work ethics, ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಇದ್ದ ನಿಲುವು, ನಿಚ್ಚಳವಾದ ಮೌಲ್ಯಗಳು ಮತ್ತು ತಮ್ಮ ಪತ್ರಿಕಾಧರ್ಮವನ್ನು ಬಿಟ್ಟುಕೊಟ್ಟು ರಾಜಿಮಾಡಿಕೊಳ್ಳದ ಸ್ಪಷ್ಟತೆ. ಯಾರೇ ಆಗಲಿ ಪತ್ರಿಕೆಯ ಕಚೇರಿಗೆ ಬಂದು ಸುದ್ದಿಯನ್ನು ತಲುಪಿಸಿ, ಪ್ರಕಟಿಸಿ ಎಂದು ಕೇಳಬಹುದಿತ್ತು. ಸುಮಾರು ಎಲ್ಲವೂ ಪ್ರಕಟವಾಗುತ್ತಿದ್ದವು. “ಆದರೆ ನನಗೆ order ಮಾಡಬಾರದು”, ಎಂದು ಕೋಟಿಯವರು ಹೇಳುತ್ತಿದ್ದದ್ದು ನೆನಪಿದೆ. ಅಷ್ಟರ ಮಟ್ಟಿಗೆ ಪತ್ರಿಕೆಯ ಮಾಲೀಕರಾದರೂ ಅವರು ಕಚೇರಿಗೆ ಬರುತ್ತಿದ್ದ ಎಲ್ಲರಿಗೂ ತಮ್ಮ ವಿಶ್ವಾಸದ ಮಾತು, ಮುಗುಳ್ನಗೆಯ ಜೊತೆಗೆ “ಆಯ್ತು ಸಾರ್, ಹಾಕೋಣವಂತೆ” ಎನ್ನುವ ಮಾತನ್ನೂ ಹೇಳುತ್ತಿದ್ದರು.

ಪತ್ರಿಕೆ ಇರುವುದು ಸಮಾಜಕ್ಕಾಗಿ; ಸಮುದಾಯದಲ್ಲಿ ಏನಾಗುತ್ತಿದೆ ಎನ್ನುವುದನ್ನು ಪತ್ರಿಕೆ ಹೇಳಬೇಕು, ಧೈರ್ಯದಿಂದ ಆಗುಹೋಗುಗಳ ವಿಶ್ಲೇಷಣೆ ಮಾಡಿ ಅವನ್ನು ಸಾಮಾನ್ಯ ಜನರಿಗೆ ಮುಟ್ಟಿಸಬೇಕು; ಅವರ ದನಿಯನ್ನ ಗಟ್ಟಿಮಾಡಬೇಕು, ಎನ್ನುತ್ತಿದ್ದರು.

ಅವರ ಮಾತಿನಂತೆ ಸುದ್ದಿ ಸಮಾಚಾರ, ವಿಶ್ಲೇಷಣೆ ಹಳ್ಳಿಹಳ್ಳಿಗೂ ತಲುಪುತ್ತಿತ್ತು. “ಏ, ಆಂದೋಲನ ಪತ್ರಿಕೆಯಲ್ಲಿ ಇವತ್ ಏನ್ ಸುದ್ದಿ ಆಕವ್ರೆ, ಸೊಲ್ಪ ಓದ್ ಏಳ ಲಾ” ಎಂದು ಓದುಬರಹ ಬಾರದ ಹಿರಿಯರು ತಮ್ಮ ಮನೆಮಕ್ಕಳಿಗೆ ಹೇಳುತ್ತಿದ್ದನ್ನ ನಾನೇ ನನ್ನ ಹಳ್ಳಿ ಓಡಾಟದಲ್ಲಿ ಕಣ್ಣಾರೆ ನೋಡಿ, ಕೇಳಿದ್ದೆ. ಆಂದೋಲನ ಪತ್ರಿಕೆಯ ಪ್ರಭಾವ ಬಹಳ ಇತ್ತು.

ನಾನು ಆಂದೋಲನ ಪತ್ರಿಕೆಯ ಕೆಲಸ ಬಿಟ್ಟು ಪೂರ್ತಿ ಸಮಯ ಸೈಕಾಲಜಿ ಅಧ್ಯಾಪಕಿ ಆದ ಮೇಲೆ ಕೂಡ ಪತ್ರಿಕೆಯ ಬೆಳವಣಿಗೆಯನ್ನ ಮತ್ತು ಕೋಟಿಯವರ ವ್ಯಕ್ತಿತ್ವ ಮತ್ತಷ್ಟು ದೊಡ್ಡದಾದನ್ನ ಗಮನಿಸಿದ್ದೆ. ಮೈಸೂರು ಬಿಟ್ಟು ಬೆಂಗಳೂರಿಗೆ ಮರಳಿದ ನಂತರದ ವರ್ಷಗಳಲ್ಲಿ ಪ್ರತಿ ಬಾರಿ ಮೈಸೂರಿಗೆ ಹೋದಾಗಲೂ ಆಂದೋಲನ ಪತ್ರಿಕೆಯ ಹೆಸರಿನಲ್ಲಿ ಮಹತ್ತರವಾಗಿ ಸಮಾಜಕ್ಕೆ ಒಳ್ಳೆಯದಾಗುತ್ತಿದ್ದನ್ನ ನೋಡುತ್ತಿದ್ದೆ.

ಪತ್ರಿಕೆ ಹುಟ್ಟುಹಾಕಿದ ಧನಸಂಪತ್ತಿನ ಪಾಲನ್ನು ಮರಳಿ ಸಮುದಾಯಕ್ಕೇ ಸಲ್ಲಿಸಿದ ದೊಡ್ಡ ಮನಸ್ಸು ಕೋಟಿಯವರದ್ದು. ಅನೇಕರು ಅನೇಕ ಒಳ್ಳೆ ಕಾರಣಗಳಿಗಾಗಿ ಇಂದು ರಾಜಶೇಖರ ಕೋಟಿಯವರನ್ನ ನೆನಪಿಸಿಕೊಳ್ಳಬೇಕಿದೆ. ನೆನಪಿಸಿಕೊಳ್ಳುತ್ತಿದ್ದಾರೆ ಕೊಡ. ಆಂದೋಲನ ಪತ್ರಿಕೆ ಮತ್ತು ಕೋಟಿಯವರು ಮೈಸೂರು ನಗರ ಮತ್ತು ಆ ವಲಯದ ಜಿಲ್ಲೆಗಳ ಜನಸಮುದಾಯ ಜೀವನದ ಜೊತೆ ಬೆರೆತು ಬಾಳುತ್ತಿರುವ ಒಂದು ಜೊತೆ ದೀಪ.

‍ಲೇಖಕರು avadhi

25 November, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading