ಗಿರಿಜಾ ಶಾಸ್ತ್ರೀ
ಸಿಂಹಗಡದಲ್ಲಿ ಕುವೆಂಪು ಮತ್ತು ತಾನಾಜಿ
ಸಿಂಹಗಡವೆಂದರೆ ತಕ್ಷಣ ತಲೆಗೆ ಹೋಗುವುದು ಕುವೆಂಪು ಅವರ ‘ತಾನಾಜಿ’ ಕವಿತೆ. ತಾನಾಜಿ ಕವಿತೆಯೆಂದರೆ ತಕ್ಷಣ ಕಣ್ಣಮುಂದೆ ಬರುವವರು ಅವರ ಶಿಷ್ಯರಾದ ಜಿ.ಎಸ್.ಎಸ್.
“ಕತ್ತಲೂ ಕಗ್ಗತ್ತಲೂ
ಸಿಂಹಗಡದ ಕೋಟೆಯ ಸುತ್ತಲು
ಎತ್ತಲೂ ಎತ್ತೆತ್ತಲೂ”
ಎಂ.ಎ. ತರಗತಿಗಳಲ್ಲಿ ಜಿ.ಎಸ್.ಎಸ್. ತಮ್ಮ ಗಂಭೀರವಾಣಿಯಿಂದ ಕನ್ನಡಕದ ಸಂದಿಯ ತೀಕ್ಷ್ಣ ಕಣ್ಣುಗಳಿಂದ ಭಾವಾಭಿನಯ ಮಾಡುತ್ತಿದ್ದ ಬಗೆ ಮರೆಯಾಗುವುದೇ ಇಲ್ಲ.
ಪುಣೆಯ ಬಳಿ ಇರುವ ಈ ಸಿಂಹಗಡ ಕೋಟೆಗೆ ಸುಮಾರು ೨೦೦೦ ವರ್ಷಗಳ ಇತಿಹಾಸವಿದೆ. ತುಘಲಕ್‍ನಿಂದ ಹಿಡಿದು ಔರಂಗಜೇಬನ ವರೆಗೆ ಈ ಕೋಟೆ ಮೊಘಲ್ ಮತ್ತು ಕೋಳಿ ರಾಜರು (ಮೀನುಗಾರರು), ಮರಾಠಾ ರಾಜರುಗಳ ನಡುವೆ ಕಾಲ್ಚೆಂಡಿನಂತೆ ಅವರ ನಂತರ ಇವರು, ಇವರ ನಂತರ ಅವರು ಎಂದು ಎರಡೂ ಕಡೆಯ ವಶಕ್ಕೆ ಸಿಕ್ಕಿ ಓಡಾಡಿದ್ದಿದೆ. ಶಿವಾಜಿ ಇದನ್ನು ಮೂರು ಬಾರಿ ವಶಕ್ಕೆ ಪಡೆದುಕೊಂಡ ಇತಿಹಾಸವಿದೆ. ಪ್ರಸಿದ್ಧವಾದ ಸಿಂಹಗಡ ಯುದ್ಧದಲ್ಲಿ (೧೬೭೦) ಶಿವಾಜಿಯ ಸೇನಾಪತಿ ಕೋಳಿ ಜನಾಂಗಕ್ಕೆ ಸೇರಿದ ತಾನಾಜಿಯ ಪರಾಕ್ರಮ ಸಿಂಹಗಡದ ಚರಿತ್ರೆಯೊಂದಿಗೆ ಅಜರಾಮರವಾಗಿ ಬೆಸೆದುಕೊಂಡಿದೆ. ಮಹಾರಾಷ್ಟ್ರದ ಚರಿತ್ರೆಯಲ್ಲಿ ತಾನಾಜಿಗೆ ವಿಶೇಷ ಸ್ಥಾನವಿದೆ. ಇವನ ಪರಾಕ್ರಮವನ್ನು ಕುರಿತಾದದ್ದೇ ಕುವೆಂಪು ಅವರ ‘ತಾನಾಜಿ’ ಕವಿತೆ.

ಸಿಂಹಗಡದ ಕೋಟೆಯನ್ನು ಹತ್ತುವಾಗ ಪ್ರತಿಮೆಟ್ಟಿಲಿಗೂ ನಮ್ಮ ಜೊತೆ ಚಾರಣ ಮಾಡಿದವರು ಈ ಇಬ್ಬರು ಮೇರು ಕವಿಗಳು. ಇಂದು ಕಾಣುತ್ತಿರುವ ದುರ್ಗಮ್ಯ ಸಿಂಹಗಡವನ್ನು ನಲವತ್ತು ವರುಷಗಳ ಹಿಂದೆ ಜಿ.ಎಸ್.ಎಸ್. ಅವರ ‘ತಾನಾಜಿ’ ಕವಿತೆಯ ವಾಚನದಲ್ಲಿದ್ದ ಗಾಂಭೀರ್ಯ, ಅಕ್ಷರಶಃ ತಂದು ಕಣ್ಮುಂದೆ ನಿಲ್ಲಿಸಿತ್ತು. ಕುವೆಂಪು ಅವರನ್ನು ನಾನು ಕಂಡಿದಿಲ್ಲ. ಜಿ.ಎಸ್.ಎಸ್ ಹಾಗೂ ಕನ್ನಡ ಅಧ್ಯಯನ ಕೇಂದ್ರದ ಉಳಿದ ಅಧ್ಯಾಪಕರುಗಳ ಮುಖೇನ ಕುವೆಂಪು ಕೃತಿಗಳನ್ನು ಆತ್ಮಸಾತ್ ಮಾಡಿಕೊಂಡ ಆ ಸುವರ್ಣ ದಿನಗಳು ನೆನಪಾಗುತ್ತವೆ.
”ಕುವೆಂಪು ಅವರೇನೋ ಸಿಂಹಗಡ ನೋಡದೆಯೇ ಕವಿತೆ ಬರೆದರು. ನೀನು ನಿಜವಾಗಿ ನೋಡಿದೆಯಲ್ಲಾ? ನೀನೇಕೆ ಒಂದು ಕವಿತೆ ಬರೆಯಬಾರದು?” ಎಂದು ಪಕ್ಕದಲ್ಲಿದ್ದ ರಘು ಹೇಳಿದರು.
ಕವಿತೆಯೆಂದರೆ ಆನೆ, ಕುದುರೆಗಳ ಮೇಲೆ ಪ್ರಬಂಧ ಬರೆಯುವಂತೆಯೇ? ಕವಿತೆ ಬರಬೇಕಲ್ಲ? ಉದ್ಬುದ್ದ ಶುದ್ಧ ಸ್ಪೂರ್ತಿಯ ಕೃಪೆ ಇರಬೇಕಲ್ಲ? ಕವಿತೆ ಬರದಿದ್ದರೇನು? ತಾನಾಜಿ, ಶಿವಾಜಿ, ಕುವೆಂಪು, ಜಿ.ಎಸ್. ಎಸ್. ಕಣ್ಮುಂದೆ ಸುಳಿದರಲ್ಲಾ?






ಚೆನ್ನಾದ ಬರಹ