ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೋಡ್ಸರ ಮತ್ತು ಅಕ್ಷರ ವಿಹಾರ

 

 

ಅಂತಿಮ  ಕ್ಷಣದವರೆಗಿನ ಕುತೂಹಲಗಳು ಯಾವತ್ತೂ ಚೆಂದ. ಇಲ್ಲವಾದರೆ ಅದೊಂಥರ ಒನ್ ಸೈಡ್  ಮ್ಯಾಚ್‌ನಂತಾಗುತ್ತದೆ. ನನ್ನ ಪಾಲಿಗೆ ಮೊದಲ ಪುಸ್ತಕದ ಹೆರಿಗೆ ಅಕ್ಷರಶಃ ರೋಮಾಂಚನ ಪಂದ್ಯವಾಗಿತ್ತು. ಕಾರ್ಯಕ್ರಮದ ಹಿಂದಿನ ದಿನದ ಸಂಜೆವರೆಗೂ ಪುಸ್ತಕ ಬಿಡುಗಡೆಯಾಗತ್ತೊ, ಇಲ್ಲವೊ ಎಂಬ ಅನುಮಾನವಿತ್ತು! ಪುಸ್ತಕ ಬಿಡುಗಡೆಯಾಗುವುದು ನಿಕ್ಕಿ ಎಂದು ಶನಿವಾರ ಸಂಜೆ ೭ ಗಂಟೆಗೆ ತೀರ್ಮಾನವಾಗಿ, ಭಾನುವಾರ ಬೆಳಿಗ್ಗೆ ೧೧.೧೫ಕ್ಕೆ ಪುಸ್ತಕವೂ ಹೊರಬಂತು. ಒಂದೆಡೆ ಕಾರ್ಯಕ್ರಮಕ್ಕೆ ಬಂದವರನ್ನು ಕಂಡು ಖುಷಿಯಾದರೆ, ಇನ್ನೊಂದೆಡೆ ಕಾರ್ಯಕ್ರಮಕ್ಕೆ ಬಂದೇ ಬರ್ತೀವಿ ಅಂದವರೆಲ್ಲ ಕಾಣುತ್ತಿಲ್ಲವಲ್ಲ ಎಂಬ ಬೇಸರ.

‘ನನ್ನ ಕಾರ್ಯಕ್ರಮಕ್ಕೆ ಪ್ರೇಕ್ಷಕರಿಗಿಂತ ಅತಿಥಿಗಳೇ ಬೇಗ ಬರ್ತಾರೆ’ ಎಂಬ ಪ್ರಕಾಶಕರಾದ ಗೌರಿ ಸುಂದರ್ ಮಾತು ನಿಜವಾಗಿತ್ತು. ಜಿ.ವೆಂಕಟಸುಬ್ಬಯ್ಯ, ಎನ್.ಎಸ್ ಲಕ್ಷಿನಾರಾಯಣ ಭಟ್ಟರು, ಎಚ್.ಎಸ್ ದೊರೆಸ್ವಾಮಿ ಎಲ್ಲರಿಗಿಂತ ಮೊದಲು ಬಂದವರು. ಹಾಗಾಗಿ ಅವರೊಂದಿಗೆ ಸುಮಾರಷ್ಟು ಸಮಯ ಕಳೆಯುವ ಅವಕಾಶ ಸಿಕ್ಕಿತು. ಇವರೆಲ್ಲರ ಕುರಿತು ಕೇಳಿದ್ದೆ ಹೊರತು, ಹತ್ತಿರದಿಂದ ಮಾತನಾಡಿರಲಿಲ್ಲ. ವೆಂಕಟಸುಬ್ಬಯ್ಯನವರಂತೂ ತೀರಾ ಆಪ್ತರಂತೆ ಹೆಗಲ ಮೇಲೆ ಕೈಯಿಟ್ಟು ಮಾತಾಡಿಸಿದರು ವಯಸ್ಸು, ಪಾಂಡಿತ್ಯಗಳ ಅರಿವಿಲ್ಲದೆ. ನಿಂಘಟು ತಜ್ಞ, ಹಿರಿಯ ಸಾಹಿತಿಯೊಬ್ಬರೊಂದಿಗೆ ಮಾತಾಡುತ್ತಿದ್ದೇನೆ ಎಂಬ ಪರಿವೂ ನನಗೂ ಇರಲಿಲ್ಲ. ನನ್ನ ಪಾಲಿಗೆ ಇದೊಂದು ವಿಸ್ಮಯ ಕ್ಷಣ.

ಕಾರ್ಯಕ್ರಮದ ಕುರಿತು ತೀರಾ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ . ವಸುಧೇಂದ್ರ, ಲಕ್ಷ್ಮಿನಾರಾಯಣ್ ಭಟ್, ಸಿ.ಎನ್ ರಾಮಚಂದ್ರನ್, ವಿಜಯಾ ಸುಬ್ಬುರಾಜ್ ವೇದಿಕೆಯಲ್ಲಿದ್ದರು ಮತ್ತು ಮಾತನಾಡಿದರು. ಪುಸ್ತಕಕ್ಕೆ ಚೆಂದದ ಮುಖಪುಟ ರಚಿಸಿ ಕೊಟ್ಟ ಎಂ.ಡಿ ಮಂಜುನಾಥ್, ಚಿತ್ರ ಬಿಡಿಸಿಕೊಟ್ಟ ರಾಜೇಶ್ ಪುಜಾರ್ ಇಬ್ಬರೂ ಅನಿವಾರ್ಯ ಕಾರಣದಿಂದ ಕಾರ್ಯಕ್ರಮಕ್ಕೆ ಬರಲಿಲ್ಲ. ಮುನ್ನುಡಿ ಬರೆದುಕೊಟ್ಟ ನಾಗೇಶ್ ಹೆಗಡೆ ಬಿಡುಗಡೆಗೆ ಬರಲಾರೆ ಎಂದು ಮೊದಲೇ ಹೇಳಿದ್ದರು. ಪುಸ್ತಕ ಬರೆಯುವದರಲ್ಲಿ ನನ್ನ ಶ್ರಮವಿದೆ ನಿಜ. ಆದರೆ ಪುಸ್ತಕ ಮುದ್ರಣಗೊಳ್ಳುವುದರ ಹಿಂದೆ ಈ ಗೆಳೆಯರ ಶ್ರಮವೂ ಇದೆ. ಹಾಗಾಗಿ ಇವರಿಗೆ ಧನ್ಯವಾದ ಹೇಳಲೇ ಬೇಕು.

ಯಾರಿಗೂ ವೈಯಕ್ತಿಕವಾಗಿ ಸಂಪರ್ಕಿಸಿ, ಕರೆ ಮಾಡಿ ಆಹ್ವಾನ ನೀಡಲು ಸಾಧ್ಯವಾಗಿರಲಿಲ್ಲ. ಆದಾಗ್ಯೂ ಬ್ಲಾಗ್, ಮೇಲ್‌ಗಳನ್ನು ನೋಡಿ ಅನೇಕ ಗೆಳೆಯರು ಕಾರ್ಯಕ್ರಮಕ್ಕೆ ಬಂದಿದ್ದಾರೆ. ಎಲ್ಲರಿಗೂ ಥ್ಯಾಂಕ್ಸು. ಇನ್ನು ಅನೇಕರು ಕುಳಿತ ಜಾಗದಿಂದಲೇ ಶುಭ ಹಾರೈಸಿದ್ದಾರೆ. ಖಂಡಿತ ಅವರ ಶುಭ ಹಾರೈಕೆಗಳಿಗೂ ಕೃತಜ್ಞ. ನನಗೆ ಯಾವ ಜವಬ್ದಾರಿಯನ್ನೂ ನೀಡದೆ, ಎಲ್ಲವನ್ನೂ ನಿರ್ವಹಿಸಿದ ಸುಂದರ ಹಾಗೂ ಕಣ್ವ ಪ್ರಕಾಶನದ ಎಲ್ಲ ಗೆಳೆಯರಿಗೂ ಥ್ಯಾಂಕ್ ಹೇಳಬೇಕು. ಕಾರ್ಯಕ್ರಮದ ಕುರಿತು ಎಲ್ಲ ಕಡೆ ಪ್ರಚಾರ ನೀಡಿದ ಗೆಳೆಯ ಸುಶ್ರುತ, ವಿಕಾಸ್, ನಿಧಿ, ಅವಧಿ ಎಲ್ಲರಿಗೂ ಧನ್ಯವಾದಗಳು. ಅಂದಹಾಗೆ ಅನೇಕರು ಪುಸ್ತಕ ಎಲ್ಲಿ ಸಿಗುತ್ತದೆ ಎಂದು ಕೇಳಿದ್ದಾರೆ. ನವ ಕರ್ನಾಟಕ ಮತ್ತು ಅಂಕಿತದಲ್ಲಿ ಲಭ್ಯವಿದೆಯಂತೆ.

 

‍ಲೇಖಕರು G

5 May, 2011

1 Comment

  1. vinayaka kodsara

    olle talebarha. tx avadhi

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading