ಕುಶ್ವಂತ್ ಕೋಳಿಬೈಲು
ಕೊಡಗು ಆಫಿಶೀಯಲ್ ಕ್ಲಬ್ ಹೌಸಿನಲ್ಲಿ ಪ್ರಾದೇಶಿಕ ಸಾಹಿತ್ಯ ಸಂಭ್ರಮವೆಂಬ ಕಾರ್ಯಕ್ರಮದಲ್ಲಿ ಅರೆಭಾಷೆ, ಕೊಡವ ಮತ್ತು ತುಳು ಕವನಗಳ ವಾಚನ ನಿನ್ನೆ ಸಂಜೆ ಬಹಳ ಸಂಭ್ರಮ ಮತ್ತು ಸಡಗರದಿಂದ ನಡೆಯಿತು..
೧. ಕೊಡವ ಭಾಷೆಯಲ್ಲಿ ಮಾಡರೇಟ್ ಮಾಡಲು ಹಿರಿಯರೂ ಮತ್ತು ಆತ್ಮೀಯರು ಆಗಿರುವ ಮಡಿಕೇರಿ ಆಕಾಶವಾಣಿಯ ಶಾರದಾ ನಂಜಪ್ಪನವರು ನನ್ನ ಮೊದಲ ಆಯ್ಕೆಯಾಗಿದ್ದರು. ಕಾರಣಾಂತರದಿಂದ ಅವರು ಬರಲಾಗದ ಕಾರಣ ಖ್ಯಾತ ಸಾಹಿತಿ ಮತ್ತು ಮೈಸೂರಿನಲ್ಲಿ ಕನ್ನಡ ಪ್ರಾಧ್ಯಾಪಕಿಯಾದ ಡಾ ರೇಖಾ ವಸಂತ್ ಅವರ ಹೆಸರನ್ನು ಸೂಚಿಸಿದರು. ಡಾ ರೇಖಾ ವಸಂತರ ನಿರೂಪಣೆ ಮತ್ತು ಭಾಷಾ ಶೈಲಿ ನಿನ್ನೆಬಹಳ ಸೊಗಸಾಗಿ ಮೂಡಿಬಂತು.
ದಕ್ಷಿಣ ಕೊಡಗಿನಿಂದ ಭಾಗವಹಿಸಿದ ಅನೇಕ ಕವಿಗಳಿಗೆ ಅವರು ಗುರುಗಳಾಗಿದ್ದ ಕಾರಣ ಅವರೆಲ್ಲರೂ ಕವಿತೆ ವಾಚಿಸುವ ಮೊದಲು ಗುರುವಂದನೆ ಸಲ್ಲಿಸುತ್ತಿದ್ದರು. ಅಸಲಿಗೆ ರೇಖಾ ಮೇಡಂ ಕ್ಲಾಸ್ ಯ್ಯೂನಿಯನ್ ಕವಿತಾವಾಚನದ ನೆಪದಲ್ಲಿ ನಡೆದಂತ್ತಿತ್ತು!! ರೇಖಾ ಮೇಡಂರವರ ಹಕ್ಕಿ ಗೂಡು ಕಟ್ಟುವಂತೆ ಹೆಣ್ಣು ಮನೆಯೊಂದನ್ನು ಕಟ್ಟುತ್ತಾಳೆ ಎಂಬ ಅರ್ಥದ ಕೊಡವ ಕವಿತೆ ಕೂಡ ಬಹಳ ಮನಗಳನ್ನು ತಟ್ಟಿತು.

ನಾನು ಹೆಣ್ಣು ಮನೆ ಕಟ್ಟಿದರೂ ಗಂಡ ಹೋಮ್ ಲೋನ್ ಕಟ್ಟುತ್ತಾನಲ್ಲವೆಂದು ಬಾರಿಸಿದ ಪಂಚ್ ರೀಬೌಂಡಾಗಿ ಕೊನೆಗೆ ನನಗೇ ಬಂದು ತಟ್ಟುವ ಮೊದಲು ತಪ್ಪಿಸಿಕೊಂಡೆ! ಕಾರ್ಯಕ್ರಮವನ್ನು ತಾಂತ್ರಿಕವಾಗಿ ನಾನು ನಿಯಂತ್ರಿಸುತ್ತಿದ್ದ ಕಾರಣ ಕವಿತೆಗಳನ್ನು ನಾನು ಕೇಳುತ್ತಿದ್ದರೂ ನನ್ನ ಗಮನ ಮುಂದೆ ಯಾರನ್ನು ಕರೆಯಬೇಕೆಂಬುದರ ಕಡೆ ಇದ್ದುದರಿಂದ ಡಾ ರೇಖಾ ವಸಂತ್, ಕಾಂಚನ ಕೆದಂಬಾಡಿ, ರಿತೇಶ್ ನೂಜಿಬೈಲು ಅವರು ಕವಿತೆಗಳ ವಿಮರ್ಶಗಳನ್ನು ಸೊಗಸಾಗಿ ಹ್ಯಾಂಡಲ್ ಮಾಡಿದರು.
೨. ಲೋಕೇಶ್ ಊರುಬೈಲು ಅವರ ಅರೆಭಾಷೆ ಕವಿತೆ ಬಹಳ ಸೊಗಸಾಗಿತ್ತು. ಲಾಕ್ಡೌನ್ ಸಮಯದಲ್ಲಿ ಮದುವೆ ಮಾಡುವ ಬಗ್ಗೆ ಅವರ ಕವಿತೆ ಪ್ರಸ್ತುತ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿತ್ತು. ಎಣ್ಣೆಯಂಗಡಿ ಮಾತ್ರ ತೆರದಿದ್ದು ಬಟ್ಟೆಯಂಗಡಿ, ಜುವಲರಿಗಳು ಮುಚ್ಚಿದ್ದಂತಹ ಇದೇ ಲಾಕ್ಡೌನಿನಲ್ಲಿ ಅವರು ತಮ್ಮ ತಂಗಿಯ ಮದುವೆ ಮಾಡಿದ ಅನುಭವದ ಜಲಕ್ ಈ ಕವಿತೆಯಲ್ಲಿ ಕಾಣುತ್ತಿತ್ತು. ಮಿಲನಾ ಭರತ್, ಜೀವನ್ ಪುರ, ವಿನೋದ್ ಮೂಡಗದ್ದೆ, ಲತನ್ ಐಯೇಟಿ ಮತ್ತು ಮನೋಜ್ ಕೊಡೆಕಲ್ಲುರವರು ತಮ್ಮ ಅಭಿಮಾನಿಗಳನ್ನು ಅರೆಭಾಷೆಯ ಕವಿತೆಯ ಮೂಲಕ ರಂಜಿಸಿದರು.
೩. ಜೆಫ್ರಿ ಅಯ್ಯಪ್ಪನವರ ಕೊಡವ ಹಾಡುಗಳೆಂದರೆ ಎಲ್ಲರಿಗೂ ಇಷ್ಟ.. ಅವರ ‘ಕುಂದುಲುಂಡು ಕ್ಯಾಮ.. ಬೋಂಟೆಗಾರ ಚೋಮʼ ಕೇಳದವರು ಯಾರಿದ್ದಾರೆ.. ಅವರು ತಮ್ಮ ಕಚೇರಿಯಲ್ಲಿ ವ್ಯಸ್ತರಾಗಿದ್ದರೂ ನಮ್ಮ ಕ್ಲಬ್ ಹೌಸಿಗೆ ಬಂದು ಅತ್ತೆ ಮಗಳ ಕುರಿತಾದ ಹಾಡಿನ ಮೂಲಕ ನಮ್ಮನ್ನೆಲ್ಲ ರಂಜಿಸಿದರು. ಭಾಷೆ ಅರ್ಥವಾಗದವರಿಗೂ ಭಾವವನ್ನು ಅರ್ಥಮಾಡಿಸುವ ಶಕ್ತಿ ಅವರ ಹಾಡುಗಳಿಗೆ ಇದೆ. ಖ್ಯಾತ ಲೇಖಕಿ ಉಳುವಂಗಡ ಕಾವೇರಿ ಉದಯ, ಶಿಲ್ಪಾ ಸುಳ್ಳಿಮಾಡ, ಭವಾನಿ ನಾಣಯ್ಯ, ಶ್ರುತಿಯ ಕರವಟ್ಟಿರ, ಡ್ಯಾನಿ ನಾಣಯ್ಯನವರ ಕೊಡವ ಕವಿತೆಗಳು ಸೊಗಸಾಗಿ ಮೂಡಿಬಂದವು. ಈ ಕವಿತಾವಾಚನದ ವಾತಾವರಣದ ಸಂಭ್ರಮದಲ್ಲಿ ಕೇಳುಗರಾಗಿ ಭಾಗವಹಿಸಿದ್ದ ಬೊಳಿಯಂಗಡ ಬೋಪಣ್ಣನವರೂ ಕವಿಯಾಗಿ ಕವನವೊಂದನ್ನು ವಾಚಿಸಿದರು.
೪. ಒಂದು ಗಂಟೆಯಲ್ಲಿ ಮುಗಿಸಬೇಕೆಂದು ಯೋಚಿಸಿದ್ದ ಕಾರ್ಯಕ್ರಮ ಸುಮಾರು ಎರಡು ಕಾಲು ಗಂಟೆ ನಡೆದದ್ದು ಭಾಗವಹಿಸಿದವರ ಉತ್ಸಾಹಕ್ಕೆ ಸಾಕ್ಷಿ. ತುಳು ಕವನ ವಾಚಿಸಲು ತಯಾರಾಗಿದ್ದ ಅಕ್ಷತಾ ಪೆರ್ಲಾ ಮತ್ತು ಗಣೇಶ್ ಅಡ್ಯಪಾಡಿಯವರಿಗೆ ನೆಟ್ವರ್ಕ್ ಸಮಸ್ಯೆಗಳಾದ ಕಾರಣ ಮುಂಬೈಯಿಂದ ಸೇರಿಕೊಂಡ ಅನಿತಾ ಪೂಜಾರಿ ಮತ್ತು ನಮ್ಮ ಕಿಶೋರ್ ರೈ ಕತ್ತಲೆಕಾಡು ತುಳು ಕವಿತೆಗಳ ಮೂಲಕ ರಂಜಿಸಿದರು.

೫. ಪ್ರಾದೇಶಿಕ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಕೊನೆಯಲ್ಲಿ ಕವಿತೆಗಳಿಗೆ ಮನಸ್ಸುಗಳನ್ನು ಬೆಸೆಯುವ ಗುಣವಿರುವ ಕಾರಣ ಇಂತಹ ಕಾರ್ಯಕ್ರಮಗಳು ಅರ್ಥಪೂರ್ಣವೆಂದು ಖ್ಯಾತ ಅಂಕಣಕಾರರು, ಕನ್ನಡ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿರುವ ಸಂತೋಷ ತಮ್ಮಯ್ಯನವರು ಅಭಿಪ್ರಾಯಪಟ್ಟರು. ಅರೆಭಾಷೆ ಅಕಾಡಮಿಯ ಅಧ್ಯಕ್ಷರಾಗಿರುವ ಲಕ್ಷೀನಾರಾಯಣ ಕಜೆಗದ್ದೆಯವರು ಮಾತನಾಡುತ್ತಾ ಹಿಂದೆ ತಮ್ಮ ಊರಿನಲ್ಲಿ ನಡೆದ ಚಿತ್ರರಚನಾ ಕಾರ್ಯಕ್ರಮ ಊರಿನ ಜನರಲ್ಲಿ ಸಾಮರಸ್ಯ ಮೂಡಿಸಿದಂತೆ ಬಹು ಭಾಷಾ ಕವಿಗೋಷ್ಠಿಗಳು ಸಮಾಜದ ಸಾಮರಸ್ಯವನ್ನು ಹೆಚ್ಚಿಸಬೇಕೆಂಬ ಆಶಯವನ್ನು ವ್ಯಕ್ತ ಪಡಿಸಿದರು. ಖ್ಯಾತ ಕವಯತ್ರಿ ಸ್ಮಿತಾ ಅಮೃತರಾಜ್ ಕೂಡ ತಮ್ಮ ಕವಿತೆಯ ಮೂಲಕ ಮಾತನಾಡಿದರು.ಹೊಸದಿಗಂತದ ರಾಷ್ಟ್ರ ಪ್ರಶಸ್ತಿ ವಿಜೇತ ಪತ್ರಕರ್ತರಾದ ಗುರುವಪ್ಪ ಬಾಳೆಪುಣಿ, ಸುನಿಲ್ ಪೊನ್ನೇಟಿ ಮತ್ತು ಜಗದೀಶ್ ಜೋಡುಬೆಟ್ಟಿ ಕೂಡ ಕಾರ್ಯಕ್ರಮವನ್ನು ಅಸ್ವಾಧಿಸಿದರು.
೬. ಕಾರ್ಯಕ್ರಮವನ್ನು ಒಂದು ಗಂಟೆಯ ಅವಧಿಯಲ್ಲಿ ಮುಗಿಸಬೇಕೆಂಬ ಆಶಯವಿದ್ದುದರಿಂದ ಪ್ರಾದೇಶಿಕ ಭಾಷೆಗಳ ಅನೇಕ ಪ್ರತಿಭಾವಂತ ಕವಿಗಳನ್ನು ಅಹ್ವಾನಿಸಲು ಆಗಲಿಲ್ಲ. ಅನೇಕ ಹಿರಿಯ ಸಾಹಿತಿಗಳು ಇನ್ನೂ ಕ್ಲಬ್ ಹೌಸಿನಲ್ಲಿ ಇಲ್ಲದ ಕಾರಣ ಅವರನ್ನು ಮುಂದಿನ ದಿನಗಳಲ್ಲಿ ಕರೆಯುವ ಆಲೋಚನೆಯಿದೆ. ಹಾರ, ಶಾಲು, ಶಾಮಿಯಾನ, ಊಟ, ಸ್ಮರಣಿಕೆ, ಧ್ವನಿವರ್ಧಕ ಮತ್ತು ಸ್ಥಳ ಬಾಡಿಗೆ ಇತ್ಯಾದಿಗಳ ಖರ್ಚನ್ನು ನಮಗೆ ಕ್ಲಬ್ ಹೌಸ್ ನಿನ್ನೆಯ ದಿನ ಉಳಿಸಿದೆ. ಇನ್ನು ಅನೇಕ ಕವಿಗಳ ಮತ್ತು ಕೇಳುಗರ ಪೆಟ್ರೋಲ್ ಮತ್ತು ಪಾರ್ಲರ್ ಖರ್ಚನ್ನು ಉಳಿಸಿರುವ ಕ್ಲಬ್ ಹೌಸಿಗೆ ನಮೋನಮಃ






ಉತ್ತಮ ನಿರೂಪಣೆ!