ಕೊಟ್ಟ ಕುದುರೆ ಏರಲಾಗದವ ಯಾವ ಸೀಮೆಯ ಧೀರ?



ರಾಘವೇಂದ್ರ ಜೋಶಿ

ಕನಸು-ಕನವರಿಕೆ

“ಆಜಾ,ಆಜಾ..ಅಬ್ ಕೈಸಾ ಶರ್ಮಾನಾ…”

ರೇಡಿಯೋ ಸುಮ್ಮನೇ ತನ್ನ ಪಾಡಿಗೆ ತಾನು ‘ಆಶಿಕಿ’ ಚಿತ್ರದ ಹಾಡನ್ನು ಹಾಡಿಕೊಳ್ಳುತ್ತಿತ್ತು.

ಹಬ್ಬಕ್ಕೆಂದು ಊರಿಗೆ ಹೋಗಿದ್ದ ನಾನು ನೀರುದೋಸೆಯ ಅಮಲಿನಲ್ಲಿದ್ದೆ.

ಅಡುಗೆ ಮನೆಯಲ್ಲಿದ್ದ ಅಕ್ಕ ಇದ್ದಕ್ಕಿದ್ದಂತೆ ಹೊರಬಂದು,

“ಎಲ್ಲಾ ನಿನ್ನ ಗುಣಗಳೇ ಬಂದಾವಲ್ಲೋ ಪುಟ್ಟಿಗೆ..” ಅಂತ ತನ್ನ ಮಗಳನ್ನು ಕುರಿತು ಹೇಳುತ್ತಿದ್ದಳು.

ಶೋಕೇಸ್ ನಲ್ಲಿದ್ದ ಪುಟ್ಟಿಯ ಪ್ರಶಸ್ತಿ,ಫಲಕಗಳನ್ನು ನೋಡುತ್ತ ನಾನು ಪುಟ್ಟಿಯತ್ತ ಒಂದು ಕಣ್ಣು

ಹೊಡೆದು ತುಂಟ ನಗೆ ಬೀರಿ ‘ಹೆಂಗೆ?’ ಅಂತಂದು ನನ್ನ ಕಾಲರ್ ಸರಿಪಡಿಸಿಕೊಳ್ಳತೊಡಗಿದೆ..

“ಥೋ ನಿನ್ನ..ಕಾಲರ್ರು ಆಮೇಲೆ ಎತ್ಕೋ!ನಾಲ್ಕನೇ ಕ್ಲಾಸಿಗೆ ಬಂದರೂ ಪುಟ್ಟಿ ಹಾಸಿಗೆಯಲ್ಲಿ ಉಚ್ಚೆ ಹೊಯ್ತಾಳಲ್ಲೋ…”

ಅಕ್ಕ ಬೇಜಾರಿನಿಂದ ಹೇಳುತ್ತಿದ್ದಳು.ಹೊಗಳಿಕೆಯ ನಿರೀಕ್ಷೆಯಲ್ಲಿದ್ದವನಿಗೆ ಯಾರೋ ಬಂದು ರಪರಪ ಅಂತ

ಬಾರಿಸಿದಂತಾಯಿತು.ಅಷ್ಟೊತ್ತು ನನ್ನ ಮುಖದಲ್ಲಿದ್ದ ತುಂಟನಗೆ ಈಗ ಪುಟ್ಟಿಯ ಮುಖಕ್ಕೆ ವರ್ಗಾವಣೆಯಾಗಿತ್ತು..

***

ಏನಂತ ಹೇಳೋದು ಹೇಳಿ.ನನ್ನ ಪೈಮರಿ ಮತ್ತು ಹೈಸ್ಕೂಲು ದಿನಗಳಲ್ಲಿ ಕೆಲವೊಂದು ಫೋಬಿಯಾ ನನ್ನನ್ನು ಸಿಕ್ಕಾಪಟ್ಟೆ

ಕಾಡಿದ್ದವು.ಮನೆಗೆ ಯಾರಾದರೂ ವಯಸ್ಸಾದ ಗೆಸ್ಟುಗಳು ಬಂದುಬಿಟ್ಟರೆ ಸಣ್ಣಗೆ ನಡುಕ ಶುರುವಾಗುತ್ತಿತ್ತು.Actually,

ಆವಾಗೆಲ್ಲ ಎರಡರಿಂದ ಇಪ್ಪತ್ತರವರೆಗಿನ ಮಗ್ಗಿಯನ್ನು ಬಾಯಿಪಾಠ ಮಾಡುವದು ನಮಗೆಲ್ಲ mandatory ಆಗಿತ್ತಾದರೂ

ಈ ಹದಿನೇಳರ ಮಗ್ಗಿ ಮಾತ್ರ ಯಾವಾಗಲೂ ನನಗೆ ಕೈಕೊಡುತ್ತಿತ್ತು.ಹಾಗಾಗಿ ಬಂದ ಅತಿಥಿಗಳು ಏನೇ ಕೆಲಸ ಹೇಳಲಿ,

ನನ್ನ ವಿದ್ಯಾಭ್ಯಾಸದ ಬಗ್ಗೆ ಏನಾದರೂ ಕೇಳಲಿ,ಆದರೆ ‘ಹದಿನೇಳರ ಮಗ್ಗಿ’ಯೊಂದನ್ನು ಮಾತ್ರ ಕೇಳದಿರಲಿ ದೇವರೇ

ಅಂತ ಕಾಣದ ಭಗವಂತನಲ್ಲಿ ಮೊರೆಯಿಡುತ್ತಿದ್ದೆ.ಆದರೆ ಬಹುತೇಕ ಸಲ ಭಗವಂತನಿಗೆ ನನ್ನ ಭಕ್ತಿ ರುಚಿಸುತ್ತಿರಲಿಲ್ಲ.

ಗುರಿಯಿಟ್ಟು ನೇರವಾಗಿ ತೊಡೆಗೇ ಗದಾಪ್ರಹಾರ ಮಾಡಿದ ಭೀಮನಂತೆ, ಬಂದ ಅತಿಥಿಗಳ ಪೈಕಿ ಅದರಲ್ಲೂ ವಯಸ್ಸಾದ ಅಜ್ಜಂದಿರು,

“ಏನಪ ತಮ್ಮ, ಹದಿನೇಳ ಐದಲೇ ಎಷ್ಟು..?” ಅಂತ ಬಾಣ ಹಿಡಿದು ನನ್ನಂಥ ಪಿಳ್ಳೆಯ ಮೇಲೆ ಪ್ರಯೋಗಿಸಿಯೇ ಬಿಡುತ್ತಿದ್ದರು!

ಆಗೆಲ್ಲ ನಾನು ಚಕ್ರವ್ಯೂಹದಲ್ಲಿ ಸಿಕ್ಕಿಕೊಂಡ ಅಭಿಮನ್ಯುವಿನಂತೆ ಕಣ್ ಕಣ್ ಬಿಟ್ಟು ಧರಾಶಾಯಿಯಾಗುತ್ತಲಿದ್ದೆ.

ಇಷ್ಟಕ್ಕೂ,ಪ್ರಶ್ನಿಸುವದು ಎಷ್ಟು ಸರಳ ಅಲ್ವ?

ಒಂದೆರಡು ವರ್ಷಗಳ ಹಿಂದೆ ಉತ್ತರ ಕರ್ನಾಟಕವೆಲ್ಲ ಅತೀವೃಷ್ಟಿಯಿಂದ ನೀರುಪಾಲಾದಾಗ,ಅಲ್ಲಿನ ಎಂಥದ್ದೋ ಹಳ್ಳಿಯಲ್ಲಿ

ಯುವಕನೊಬ್ಬ ಮೂರು ಹಗಲು,ಮೂರು ರಾತ್ರಿ ಹಸಿವೆ,ಭಯದಿಂದ ಕಂಗೆಟ್ಟು ಮರದ ಮೇಲೆ ಆಶ್ರಯ ಪಡೆದಿದ್ದ.ಆತನ

ಬಂಧುಗಳು ನೀರು ಪಾಲಾಗಿ ಸತ್ತೇ ಹೋಗಿದ್ದರು.ಹೆಲಿಕಾಪ್ಟರ್ ಸಹಾಯದಿಂದ ಮರದ ಮೇಲಿದ್ದ ಆತನನ್ನು ರಕ್ಷಿಸಲಾಯಿತು.

ಆದರೆ ಮೀಡಿಯಾಗೆ ಪ್ರಶ್ನಿಸುವ ಕಾತುರ.ಹೆಲಿಕಾಪ್ಟರ್ ನಲ್ಲಿಯೇ ಮೈಕು ಹಿಡಿದ ವರದಿಗಾರ ಆ ಯುವಕನನ್ನು ಪ್ರಶ್ನಿಸುತ್ತಿದ್ದ:

“ಈಗ ಏನನಿಸುತ್ತಿದೆ?ಹ್ಯಾಗನಿಸುತ್ತಿದೆ..?”

ಅರೆರೇ,ಪ್ರಶ್ನಿಸುವದು ಎಷ್ಟು ಸರಳ ನೋಡಿ.ಉತ್ತರಿಸೋದೇ ಕಷ್ಟ ಕಷ್ಟ..

ಸರಿ,ಹಾಗಂತ ಕೆಲವೊಂದು ಪ್ರಶ್ನೆಗಳಿಗೆ ನನ್ನಲ್ಲಿ ಸಿದ್ಧ ಉತ್ತರಗಳಿದ್ದವು.ಪ್ರೈಮರಿಯಲ್ಲಿ ನಿಬಂಧ ಬರೆಯುವಾಗ ಕೆಲವು

ಸಾಲುಗಳು ಎಲ್ಲ ಕಾಲಕ್ಕೂ,ಎಲ್ಲ ಪ್ರಶ್ನೆಗಳಿಗೂ apply ಆಗುತ್ತಿದ್ದವು.ಸಾಮ್ರಾಟ್ ಅಶೋಕನೂ ಪ್ರಜೆಗಳನ್ನು ಮಕ್ಕಳಂತೆ

ನೋಡಿಕೊಳ್ಳುತ್ತಿದ್ದ.ಅಕ್ಬರನೂ ಪ್ರಜೆಗಳನ್ನು ಮಕ್ಕಳೆಂದೇ ಭಾವಿಸಿದ್ದ.ರಾಣಿ ಚೆನ್ನಮ್ಮಳೂ ಕೂಡ..

ಚಕ್ರವರ್ತಿ ಅಶೋಕ ರಸ್ತೆಯ ಎರಡೂ ಬದಿಯಲ್ಲಿ ಗಿಡಗಳನ್ನು ನಡೆಸಿದರೆ,ಮಿಕ್ಕ ರಾಜರುಗಳು ಮರ ನೆಟ್ಟರು!

ಎಲ್ಲ ಆಡಳಿತಗಾರರ ಆರ್ಥಿಕ ಪರಿಸ್ಥಿತಿ ಸಕತ್ತಾಗಿಯೇ ಇತ್ತು..ಹೀಗೆ ಶುರುವಾಗುತ್ತಿದ್ದ ನಿಬಂಧಗಳಲ್ಲಿ

ಬದಲಾಗುತ್ತಿದ್ದ ಸಾಲುಗಳೆಂದರೆ,ಆಯಾ ರಾಜರುಗಳು ಹುಟ್ಟಿದ ವರ್ಷ ಮತ್ತು ಸತ್ತ ದಿನಾಂಕ ಮಾತ್ರ..

ಆದರೆ ಆವತ್ತಿಗೆ ನನ್ನ ತಲೆ ತಿನ್ನುತ್ತಿದ್ದ ವಿಷಯಗಳ ಪೈಕಿ ಒಂದು ಮುಖ್ಯ ಪ್ರಶ್ನೆ ಯಾವಾಗಲೂ ಕಾಡುತ್ತಿತ್ತು.

ಯಾವ ರಾಜನೂ ಪ್ರಜೆಗಳಿಗಾಗಿ ‘ಸಂಡಾಸ ಮನೆ’ ಕಟ್ಟಿಸಲಿಲ್ಲವೇ? ಬಹಿರ್ದಷೆಗಾಗಿ ನಾನು ಮತ್ತು ನನ್ನ ಗೆಳೆಯರು

ಏನೆಲ್ಲ ಸರ್ಕಸ್ ಮಾಡಬೇಕಾಗಿ ಬರುತ್ತಿತ್ತು.ಟಾಯ್ಲೆಟ್ ರೂಮಿನ ಸೌಭಾಗ್ಯವಿಲ್ಲದ ನಮಗೆಲ್ಲ ಅದೊಂದು ಕ್ರಿಯೆ ಮಾತ್ರ

ದೊಡ್ಡ ತಲೆನೋವಿನ ಕೆಲಸವಾಗಿತ್ತು.ಅದೇನೋ ಮಹಾ ಘನಂದಾರಿ ಕೆಲಸವೆಂಬಂತೆ ಅದಕ್ಕೆ ‘ಲಂಡನ್ ಪ್ರವಾಸ..’

ಅಂತ ಹೆಸರಿಟ್ಟಿದ್ದೆವು.ಹಾಗೆ ಲಂಡನ್ ಗೆ ಹೋದಾಗ ಬೇಗ ಕ್ರಿಯೆ ಮುಗಿಯಲಿ ಎಂಬಂತೆ “ಆಜಾ,ಆಜಾ..

ಅಬ್ ಕೈಸಾ ಶರಮಾನಾ..” ಅಂತ ತಿಣುಕಾಡಿ ಹಾಡುತ್ತಿದ್ದೆವು..

ಹೀಗಿರುವಾಗ, ಪ್ರವಾಸ ಕುರಿತಂತೆ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದ ಅಕ್ಕನಿಗೆವಿಶೇಷ ಸೌಲಭ್ಯವೊಂದು ಸಿಕ್ಕಿತು.

ವರ್ಷಕ್ಕೋ,ಎರಡು ವರ್ಷಕ್ಕೋ ಒಂದುಸಲ ಕುಟುಂಬದ ಜನರೆಲ್ಲ ಬ್ಯಾಂಕಿನ ಹಣದಲ್ಲಿ ಪ್ರವಾಸ ಕೈಗೊಳ್ಳಬಹುದಿತ್ತು.

ಸರಿ,ಬೇಲೂರು-ಹಳೇಬೀಡು-ಶ್ರವಣಬೆಳಗೋಳ ಅಂತೆಲ್ಲ ತಿರುಗಾಡಿದ್ದಾಯ್ತು.ಏಳನೇ ಕ್ಲಾಸಿನಲ್ಲಿದ್ದ ನಾನು

ಶ್ರವಣಬೆಳಗೋಳದ ಲಾಡ್ಜ್ ಒಂದರಲ್ಲಿ ಟಾಯ್ಲೆಟ್ ರೂಮಿಗೆ ಕಾಲಿಟ್ಟಾಗ ಎದೆ ಧಸಕ್ಕೆಂದಿತ್ತು.ಏನಿದೆ ಅಲ್ಲಿ?

ಮಿರಿಮಿರಿ ಮಿಂಚುತ್ತಿರುವ ಕಮೋಡ್!

ಆಗಾಗ ಸಂಬಂಧಿಕರ ಮನೆಗೆ ಹೋದಾಗ ಅವರಲ್ಲಿನ Indian toilet ನೋಡಿದ್ದೆನಾದರೂ,ಇದ್ಯಾವದಪ್ಪ..?

ಇದರಲ್ಲಿ ಹ್ಯಾಗೆ ಕೂತ್ಕೊಬೇಕು ಅನ್ನೋದೇ ಗೊತ್ತಾಗ್ತಿಲ್ವಲ್ಲ? ಯಾರಿಗಾದರೂ ಕೇಳೋಣವೆಂದರೆ ಒಣ ಮರ್ಯಾದೆ ಪ್ರಶ್ನೆ.

ಆದದ್ದಾಗಲಿ ಎಂದುಕೊಂಡು Indian toilet ಥರಾನೇ ಮೇಲಕ್ಕೆ ಹತ್ತಿ ಪವಡಿಸಿದೆ.ಅದ್ಯಾಕೋ ಏನೋ ಈ ಸಲ ಲಂಡನ್

ಪ್ಲೇನು ಹತ್ತಿದಾಗ “ಆಜಾ,ಆಜಾ..” ಹಾಡು ಬರಲೇ ಇಲ್ಲ!

ಕೊಟ್ಟ ಕುದುರೆ ಏರದವ ಅದ್ಯಾವ ಸೀಮೆಯ ಧೀರ?ಎಲ್ಲೋ,ಏನೋ ಎಡವಟ್ಟಾಗಿದೆ ಅಂತ ಗೊತ್ತಾಗುತ್ತಿತ್ತು.ಆದರೆ ಎಲ್ಲಿ,

ಏನು ಅಂತ ತಿಳಿಯುತ್ತಿಲ್ಲ.ಥತ್,ಹಾಳಾಗಿ ಹೋಗಲಿ ಅಂದುಕೊಂಡು ಪ್ಲೇನಿನಿಂದ ಕೆಳಗಿಳಿಯೋಣ ಅಂದುಕೊಂಡರೆ-

ಪ್ಲೇನೇ ಅಲ್ಲಾಡುತ್ತಿದೆ!
ತನ್ನ ಜೀವಮಾನವಿಡಿ ಅದೆಷ್ಟೋ ಪ್ರವಾಸಿಗರನ್ನು ಹತ್ತಿ ಇಳಿಸಿದ್ದ ಈ ‘ಲಂಡನ್ ಫ್ಲೈಟು’ ಮೊದಲೇ ನಿತ್ರಾಣಗೊಂಡoತಿತ್ತು.

ಅದರಲ್ಲೂ ನಾನು ಹತ್ತಿ ಕುಳಿತ ಭಂಗಿಗೆ ಅದರ foundation ಅಲ್ಲಾಡಿದೆ.ಪರಿಣಾಮವಾಗಿ ಇಳಿಯಲೆಂದು ಬಲಗಾಲು ಎತ್ತಿದರೆ,

ಎಡಗಡೆ ವಾಲುತ್ತಿತ್ತು.ಎಡಗಾಲು ಎತ್ತಿದರೆ ಬಲಗಡೆ ವಾಲುತ್ತಿತ್ತು.ನನಗಂತೂ ಗಾಬರಿಯಲ್ಲಿ ಬಂದ ಕೆಲಸ ಮರೆತು ಯಾವಾಗ

ಇಲ್ಲಿಂದ ಎದ್ದು ಹೋದೇನೋ ಅಂತ ಡವಡವ ಶುರುವಾಗಿತ್ತು.ಬರಬರುತ್ತ ನನ್ನ ಎಲ್ಲ ಪ್ರಯತ್ನಗಳೂ ವಿಫಲವಾಗಿ ಕೊನೆಗೆ

at a time ಅಲ್ಲಿಂದ ಜಿಗಿಯುವದರ ಮೂಲಕ ಲಂಡನ್ ಪ್ರವಾಸ ಮುಕ್ತಾಯಗೊಂಡಿತ್ತು..

ಹಾಗಂತ ಎಲ್ಲ ಪ್ರವಾಸಗಳೂ ಇಷ್ಟೇ ಸುಲಲಿತವಾಗಿರಲಿಲ್ಲ.ಎಂಟನೇ ಕ್ಲಾಸಿಗೆ ಬಂದಾಗ ಅಕ್ಕನಿಗೆ ‘ಹೆಣ್ಣು ತೋರಿಸುವ’

ವಿಚಾರ ಬಂತು.ವರನ ಕಡೆಯವರು ತಂದೆಗೆ ಮೊದಲೇ ಪರಿಚಯವಿದ್ದುದರಿಂದ ಅಕ್ಕನ ಜೊತೆ ಗಂಡಿನ ಮನೆಯಿದ್ದ ಬಳ್ಳಾರಿಗೆ

ನಾನು ಹೋಗುವದೆಂದು ಮನೆಯಲ್ಲಿ ನಿರ್ಧಾರವಾಯಿತು.ಯಾವಾಗ ಈ ಸುದ್ದಿ ನನ್ನ ಕಿವಿಗೆ ಬಿತ್ತೋ-

ತಗಳ್ರಪ, ಮೈಯಲ್ಲಿ ಚಳಿಜ್ವರ ಶುರು!

ಎಂಟನೇ ಕ್ಲಾಸಿಗೆ ಬಂದರೂ ರಾತ್ರಿ bed wetting ಮಾಡುವ ಪ್ರಾಣಿಗೆ ಚಳಿಜ್ವರವಲ್ಲದೇ ಇನ್ನೇನು ಆಗಲು ಸಾಧ್ಯ?

ರಾತ್ರಿ ಹಾಸಿಗೆಯಲ್ಲಿ ಉಚ್ಚೆ ಮಾಡುವ ನನ್ನ ಈ routine (?) ತಪ್ಪಿಸುವದಕ್ಕಾಗಿ ಮನೆಯಲ್ಲಿ ಮಧ್ಯರಾತ್ರಿಯಲ್ಲೊಮ್ಮೆ ನನ್ನನ್ನು

ನಿದ್ದೆಯಿಂದ ಎಬ್ಬಿಸಿ ಹೊರಗೆ ಕಳಿಸುತ್ತಿದ್ದರು.ಒಮ್ಮೊಮ್ಮೆ ಹಾಗೆ ಎಬ್ಬಿಸಿದವರ ಮೇಲೆ ಸಿಟ್ಟಾಗಿ ನಿದ್ದೆಗಣ್ಣಲ್ಲಿ ಹೊರಗೆ ಹೋಗದೇ

ಅಡುಗೆ ಮನೆಯಲ್ಲಿನ ಪಾತ್ರೆಗಳನ್ನೇ ಲಕಲಕ ಹೊಳೆಯಿಸಿ ಮರುದಿನ ಮನೆಯವರಿಂದ ಸಮಾ ಬೈಸಿಕೊಂಡಿದ್ದೂ ಉಂಟು!

ವಿಷಯ ಹೀಗಿರುವಾಗ ಬಳ್ಳಾರಿಗೆ ಹೋಗುವದೆಂದರೆ ಸುಮ್ನೇನಾ?

ಏನೇನೋ ನಾಟಕ ಮಾಡಿದ್ದಾಯ್ತು.ಆದರೆ ಮನೆಮಂದಿಗೆ ನನ್ನ ಡ್ರಾಮಾಬಾಜಿ ಗೊತ್ತಿದ್ದ ವಿಷಯವೇ ಆಗಿದ್ದರಿಂದ ನನ್ನೆಲ್ಲ

ನಾಟಕದ ಮೇಕಪ್ಪು ಉದುರಿ ಹೋಗುತ್ತಿತ್ತು.ಕೊನೆಗೂ ಅಂತೂ ಇಂತೂ ಬಳ್ಳಾರಿ ಬಂತು.ವರ ಅಕ್ಕನನ್ನು

ಒಪ್ಪಿಕೊಂಡಿದ್ದೂ ಆಯ್ತು.ರಾತ್ರಿ ಊಟವೂ ಆಯ್ತು.ಸರಿ,ಮಲಗೋದಕ್ಕೆ ನಮಗೆ ಮೇಲಿನ ರೂಮಿನಲ್ಲಿ ವ್ಯವಸ್ಥೆ ಮಾಡಿದ್ದರು.

ಅಕ್ಕ ಖುಷಿಯಿಂದ ಮಲಗಿದ್ದಳು.ಆದರೆ ನಾನು?ನನ್ನ ಚಿಂತೆ ನನಗೆ!

ಪಕ್ಕದಲ್ಲಿದ್ದ ಗೋಡೆ,ತಲೆ ಮೇಲಿದ್ದ ಫ್ಯಾನು,ಗಡಿಯಾರದ ಟಕ್ ಟಕ್.. ಎಷ್ಟೂಂತ ನೋಡೋದು?ಎಷ್ಟೂಂತ ಕೇಳೋದು?

ಯಾವಾಗ ಮಲಗಿದೆನೋ ಗೊತ್ತಿಲ್ಲ.

ಅದ್ಭುತ ಕನಸು.ಯಾವುದೋ ಹೊಸ ಲೋಕಕ್ಕೆ ಬಂದಿದ್ದೇನೆ.ಎಲ್ಲರೂ ನನ್ನ marks card ನೋಡಿ ಬೆನ್ನು ತಟ್ಟುತ್ತಿದ್ದಾರೆ.

ಮನೆಯಲ್ಲಿ ಸಂಭ್ರಮ.ಮನೆಗೆ ಬಂದಿರುವ ಯಾವ ಅತಿಥಿಯೂ ನನಗೆ ಹದಿನೇಳರ ಮಗ್ಗಿ ಕೇಳುತ್ತಿಲ್ಲ.

ನಾನು ಎದೆಯುಬ್ಬಿಸಿಕೊಂಡು ಟೆಬಿರಿನಿಂದ ಕೂತುಕೊಂಡಿದ್ದೇನೆ.ಅಕ್ಕ ನಿಧಾನವಾಗಿ ನನ್ನ ಹೆಸರು ಹಿಡಿದು

ಯಾವುದೋ ಕೆಲಸಕ್ಕೆಂದು ಕರೆಯುತ್ತಿದ್ದಾಳೆ.ನಾನು ಬೇಕಂತಲೇ ಕೇಳಿಸಿಕೊಳ್ಳುತ್ತಿಲ್ಲ.ಎಲ್ಲ ಸುಂದರವಾಗಿ ಕಾಣುತ್ತಿದೆ.

ಮನೆಯಲ್ಲಿ ಓಡಾಡುತ್ತಿರುವ ಅತಿಥಿಗಳ ಧ್ವನಿ.ಅವರ ಓಡಾಟ.ಅಕ್ಕ ಬಿಡುತ್ತಿಲ್ಲ;ನಾನು ಕೇಳಿಸಿಕೊಳ್ಳುತ್ತಿಲ್ಲ.

ತಲೆಕೆಟ್ಟ ಆಕೆ ಸಿಟ್ಟಿನಿಂದ ನನ್ನ ಕೈ ಹಿಡಿದು ಅಲ್ಲಾಡಿಸಿ ಕರೆಯುತ್ತಿದ್ದಾಳೆ..

ಥತ್,ದಿಢೀರಂತ ಎಚ್ಚರಗೊಂಡೆ.ಅಕ್ಕ ನಿಜವಾಗಿಯೂ ಕೈ ಹಿಡಿದು ಪ್ರೀತಿಯಿಂದ ಎಬ್ಬಿಸುತ್ತಿದ್ದಾಳೆ.

ಎದ್ದು ಕುಳಿತು ನೋಡಿದೆ:ಹಾಸಿಗೆಯಲ್ಲಿ ತೇವ ತೇವ!

ಶಿವ ಶಿವಾ..ಹೆಣ್ಣು ತೋರಿಸಲು ಬಂದವರ ಮನೆಯಲ್ಲೂ ಇದು ನಡೆದು ಹೋಯಿತಾ? ನನಗೆ ಅಳುವುದೊಂದೇ

ಬಾಕಿಯಿತ್ತು.ಹ್ಯಾಗಾದರೂ ಮಾಡಿ ನನ್ನ ಮರ್ಯಾದೆ ಉಳಿಸುವೆಯಾ ಅಂತ ಅಕ್ಕನೆಡೆಗೆ ನೀರು ತುಂಬಿದ ಕಣ್ಣುಗಳು

ಬೇಡಿಕೊಳ್ಳುತ್ತಿದ್ದವು.ಅಕ್ಕನಿಗೆ ಸಿಟ್ಟಿರಲಿಲ್ಲ.ಬೇಜಾರಿರಲಿಲ್ಲ.ನನ್ನ ತಲೆಗೂದಲಲ್ಲಿ ಬೆರಳಾಡಿಸಿ,ಇಲ್ಲೇ ಇರು ಅಂತ ಹೇಳಿ

ಕೆಳಗಿಳಿದು ಹೋದಳು.ಕೆಲವೇ ಹೊತ್ತಿನಲ್ಲಿ ಬಂದವಳ ಕೈಯಲ್ಲಿ ಕುಡಿಯುವ ನೀರಿನ ತಂಬಿಗೆಯಿತ್ತು.ಅದರಲ್ಲಿದ್ದ ಅರ್ಧ

ನೀರನ್ನು ಹಾಸಿಗೆಯಲ್ಲಿ ಚೆಲ್ಲಿದಂತೆ ಮಾಡಿ,ಕೆಳಗಿಳಿದು ಹೋದಳು..

ಸ್ವಲ್ಪ ಹೊತ್ತಿನಲ್ಲಿ ಕೆಳಗೆ ಹಾಲ್ ನಲ್ಲಿ ಅಕ್ಕ,ಅಲ್ಲಿದ್ದವರಿಗೆ ಏನೋ ಅನಾಹುತವಾದಂತೆ ಹೇಳುತ್ತಿದ್ದುದು ನಿಧಾನವಾಗಿ

ಕೇಳಿಸುತ್ತಿತ್ತು:

“ನನ್ನ ತಮ್ಮನಿಗೆ ಬೆಳಿಗ್ಗೆ ಎದ್ದ ತಕ್ಷಣ ನೀರು ಕುಡೀಬೇಕು.ಹಾಗಾಗಿ ನೀರು ತಗೊಂಡು ಕೊಟ್ಟೆ.ನಿದ್ದೆಗಣ್ಣಲ್ಲಿ ಕುಡಿಯುವಾಗ

ಕೈತಪ್ಪಿ ಹಾಸಿಗೆಯ ಮೇಲೆ ನೀರು ಬಿದ್ದೋಗಿದೆ..ಬೇಜಾರು ಮಾಡ್ಕೋಬೇಡ್ರಿ…”

ನನಗೆ ಹೋದ ಜೀವ ಬಂದಂತಿತ್ತು.ಕುಣಿದಾಡಿ ಹಾಡುವುದೊಂದೇ ಬಾಕಿಯಿತ್ತು.

ವಾಪಸ್ಸು ಬಂದ ಅಕ್ಕನ ಮುಖದಲ್ಲಿನ ಮುಗುಳ್ನಗೆ ‘ಹೆಂಗೆ?’ ಅಂತ ಕೇಳಿದಂತಿತ್ತು…

————-

 

‍ಲೇಖಕರು sreejavn

December 1, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

  1. malathi S

    🙂 ಬಚಪನ್ ಕೆ ದಿನ್ ಭಿ ಕ್ಯಾ ದಿನ್ ಥೆ??!!
    ಚೆನ್ನಾಗಿತ್ತು. ಎಂಜಾಯ್ ಮಾಡಿದೆ!!

    ಮಾಲತಿ ಎಸ್.

    ಪ್ರತಿಕ್ರಿಯೆ
  2. Rankusa

    LOLz!

    well, it requires courage to make confessions like this one in public. ‘fun’ if it is written out of imagination; and ‘guts’ (hope you know the other synonym which unfortunately, can’t be used here) if it really happens to be a chapter in your autobiography!

    well, the article truncates without saying anything about the “current condition” of your bed—whether it is dry, wet, or it is wet due to the spillage of water from a mug! lol

    good fun! and your honesty is much appreciated!

    regards,
    -r

    ಪ್ರತಿಕ್ರಿಯೆ
  3. D.RAVIVARMA

    wonderful,but nimma lekhanada title bereyagirabekitteno, nanage haagannisitu,balyda baduku,ashayakate, nilakku,manamuttuvantide.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: