ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೇವಲ ಸಾಹಿತ್ಯಕ ಸಂವಾದ ಮಾತ್ರವಾಗಿರದ ಸಮಾವೇಶವು..

ನೆಮ್ಮದಿಯ ನಾಳೆಗಳ ಹುಡುಕುತ್ತಾ… ಕರ್ನಾಟಕ ಜನಸಾಹಿತ್ಯ ಸಮಾವೇಶ

ಡಾ. ಅಪ್ಪಗೆರೆ ಸೋಮಶೇಖರ್

ಕನ್ನಡಿಗರಾದ ನಾವು ಇಂದು ಸಂಕ್ರಮಣಾವಸ್ಥೆಯ ಕಾಲಘಟ್ಟದಲ್ಲಿ ಬದುಕುತ್ತಿದ್ದೇವೆ. ಪ್ರಸ್ತುತ ಕನ್ನಡ ನಾಡು ವಿಘಟನಕಾರಿ ಹಾಗೂ ವಿಚ್ಛಿದ್ರಕಾರಿ ಸನ್ನಿವೇಶದಲ್ಲಿ ಸಿಲುಕಿ ತಲ್ಲಣಿಸುತ್ತಿದೆ. ಮಾನವೀಯ ಮನಸ್ಸು, ಹೃದಯ, ಅಂತಃಕರಣಗಳು ಕಳೆದು ಹೋಗಿವೆ. ಮುಖವಾಡತನವೆ ಮೌಲ್ಯವಾಗಿದೆ. ನಮ್ಮ ಸಂವಾದ, ಚರ್ಚೆಗಳು ಸಾಕ್ಷಿಪ್ರಜ್ಞೆಯನ್ನು ಕಡೆಗಣಿಸುತ್ತಿವೆ. ನೈತಿಕ ವ್ಯಕ್ತಿತ್ವ ಎನ್ನುವುದು ಅಪಹಾಸ್ಯಕ್ಕೆ ಒಳಗಾಗಿದೆ. ಸಾಮಾಜಿಕ ಅಧಃಪತನ, ರಾಜಕೀಯ ದಿವಾಳಿತನ, ಬೌದ್ಧಿಕ ದಾರಿದ್ರ್ಯ, ಸಾಹಿತ್ಯಿಕ-ಸಾಂಸ್ಕೃತಿಕ ದಗಲ್ಬಾಜಿತನ ಇಡೀ ಸಮಾಜವನ್ನು ವಿನಾಶಕಾರಿ ಹಂತಕ್ಕೆ ತಂದು ನಿಲ್ಲಿಸಿವೆ. ಮೌಢ್ಯದ ಮಡೆಸ್ನಾನವನ್ನು ಸಮರ್ಥಿಸುವ ಚಿಂತಕರು, ಸಾಹಿತಿಗಳು ವಿವೇಕಶೂನ್ಯರಾಗಿ ವರ್ತಿಸುತ್ತಿದ್ದಾರೆ. ನರಬಲಿ, ಮರ್ಯಾದ ಹತ್ಯಾ, ಪಂಕ್ತಿಭೇದ ನೀತಿ, ಹೆಣ್ಣು ಮಕ್ಕಳ ಮಾರಾಟ ಮತ್ತು ಅವರ ಮೇಲಿನ ಹಲ್ಲೆ-ಅತ್ಯಾಚಾರ ಯಾವ ಸಂಕೋಚವೂ ಇಲ್ಲದೆ ನಡೆಯುತ್ತಿವೆ.

ಹಳ್ಳಿಗಳು ಬರಿದಾಗುತ್ತ ಕೊಳೆಗೇರಿಗಳು ಬೆಳೆಯುತ್ತಿವೆ. ರೈತ, ಕೃಷಿ ಕೂಲಿ ಕಾರ್ಮಿಕರು, ಪೌರಕಾರ್ಮಿಕರ ಬದುಕುಗಳು ಅಸ್ತಿತ್ವವನ್ನೆ ಕಳೆದುಕೊಳ್ಳುತ್ತಿವೆ. ಅಸ್ಪೃಶ್ಯತೆ, ಜಾತೀಯತೆಗಳು ಭಿನ್ನ ಸ್ವರೂಪದಲ್ಲಿ ವಿಜೃಂಭಿಸುತ್ತಿವೆ. ಹಿಂದುತ್ವವಾದಿ ಮಠಮಾನ್ಯ, ಧರ್ಮಾಂಧತೆಗಳು ಸಂವಿಧಾನಾತ್ಮಕವಾದ ಪ್ರಜಾಪ್ರಭುತ್ವದ ಮೌಲ್ಯವನ್ನೆ ಮಣ್ಣುಪಾಲು ಮಾಡುತ್ತಿವೆ. ಇತ್ತೀಚೆಗೆ ಕೆಲವು ಬುದ್ಧಿಮಾಂದ್ಯ ಜಾತಿವಾದಿ ಬ್ರಾಹ್ಮಣಶಾಹಿ ಮನಸ್ಥಿತಿಗಳು ಕರ್ನಾಟಕದಲ್ಲಿ ೧೨ನೇ ಶತಮಾನದಲ್ಲಿ ವಚನ ಚಳವಳಿಯೇ ನಡೆದಿಲ್ಲ, ಸಮಾಜದಲ್ಲಿ ಜಾತೀಯತೆಯೇ ಇಲ್ಲ ಇತ್ಯಾದಿ ಹುಸಿ ಸುದ್ದಿಗಳನ್ನ ಹಬ್ಬಿಸುವ ಮೂಲಕ ಸಮಾಜವನ್ನ ಗೊಂದಲಕ್ಕೆ ಈಡುಮಾಡುತ್ತಿದ್ದಾರೆ. ಈ ಬಗೆಯ ರೋಗಗಳಿಗೆ ಕನ್ನಡ ನಾಡು ಬಲಿಯಾಗದಂತೆ ಕಾಪಾಡುವುದು, ಪ್ರಜಾಪ್ರಭುತ್ವದ ಬಗೆಗೆ ನಂಬಿಕೆ ಇರುವ ಪ್ರತಿಯೊಬ್ಬರ ಹೊಣೆಗಾರಿಕೆಯಾಗಿದೆ.

ಇಂತಹ ಆತಂಕಕಾರಿ ಸನ್ನಿವೇಶದ ಸಂದರ್ಭದಲ್ಲಿಯೂ ಕರ್ನಾಟಕದ ಉದ್ದಗಲಕ್ಕೆ ಅಲ್ಲಲ್ಲಿ ನಡೆಯುತ್ತಿರುವ ದಲಿತ ಸಂಘರ್ಷ ಸಮಿತಿಗಳು ನಡೆಸುತ್ತಿರುವ ಅರ್ಥಪೂರ್ಣವಾದ ಅಧ್ಯಯನ ಶಿಬಿರಗಳು; ಸಮಾಜಮುಖಿ ಚರ್ಚೆ, ಸಂವಾದ, ವಿಚಾರ ಸಂಕಿರಣಗಳು; ಪೌರಕಾರ್ಮಿಕ ಕೊಳೆಗೇರಿ ವೇಶ್ಯಾ ಮಹಿಳೆಯರ ಸಮಸ್ಯಾಧಾರಿತ ಮಹಿಳಾ ಸಂಘಟನೆಗಳ ಜಾಗೃತ ಸಮಾವೇಶಗಳು ಪರ್ಯಾಯ ಚಿಂತನೆಯ, ಪ್ರತಿರೋಧದ ಸಂಕೇತಗಳಾಗಿದ್ದು ಭರವಸೆಯನ್ನ ಮೂಡಿಸಿವೆ. ೨೩, ೨೪ ಮಾರ್ಚ್ ೨೦೧೩ರಂದು ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ನಡೆದ ಕರ್ನಾಟಕ ಜನಸಾಹಿತ್ಯ ಸಮಾವೇಶವು ಇಂತಹ ಮಹತ್ವದ ಭರವಸೆಗಳಲ್ಲಿ ಒಂದಾಗಿದ್ದು, ಜೀವಪರ ಚಿಂತಕರ ಆಶಾವಾದವನ್ನು ಇಮ್ಮಡಿಗೊಳಿಸಿ; ಪ್ರತಿಗಾಮಿ ಬುದ್ಧಿಜೀವಿಗಳ ನಿದ್ದೆಗೆಡಿಸಿದೆ.

ಧಾರವಾಡವು ಕನ್ನಡ ಸಾಹಿತ್ಯ ಪ್ರಜ್ಞೆಯನ್ನು ವಿಸ್ತರಿಸಿದ ನೆಲ. ಆ ಕಾರಣಕ್ಕಾಗಿ ಪ್ರತಿಯೊಬ್ಬ ಕನ್ನಡತಿ, ಕನ್ನಡಿಗನೂ ಕೂಡ ಧಾರವಾಡದ ಮಣ್ಣಿಗೆ ಋಣಿಗಳು. ಈ ಕನ್ನಡದ ನೆಲದಲ್ಲಿ ಕೆಲವೇ ದಿನಗಳ ಅಂತರದಲ್ಲಿ ನಡೆದ ಧಾರವಾಡ ಸಾಹಿತ್ಯ ಸಂಭ್ರಮ ಹಾಗೂ ಕರ್ನಾಟಕ ಜನಸಾಹಿತ್ಯ ಸಮಾವೇಶ ಕನ್ನಡ ನಾಡಿನ ಸ್ಪಷ್ಟವಾದ ಎರಡು ವೈರುಧ್ಯದ ನೆಲೆಗಳನ್ನ ಸಂಕೇತಿಸುತ್ತವೆ. ಇದು ಕನ್ನಡದ ಎರಡು ಮನಸ್ಥಿತಿಗಳ ಚಿಂತನೆಯ ಸ್ತರಗಳನ್ನು ಪ್ರತಿನಿಧಿಸುತ್ತದೆ. ’ಸಂಭ್ರಮ’ವು ಪ್ರಾಯೋಜಕತ್ವದ, ವ್ಯಾಪಾರೀಕರಣದ, ಹಲವು ನಿರ್ಬಂಧನೆಯ, ಐಷಾರಾಮಿಯ, ಬಹುತೇಕ ಒಂದೇ ಕೋಮು-ಜಾತಿಯ ಸಾಹಿತಿಗಳ ಆಸ್ಥಾನ ಗೋಷ್ಠಿಯಾದರೆ (ಪ್ರಜ್ಞಾವಂತರ ಪ್ರತಿಭಟನೆಯಿಂದಾಗಿ ಸಂಭ್ರಮಕಾರರು ತಮ್ಮ ಪೂರ್ವಗ್ರಹ ಮನಸ್ಥಿತಿಯನ್ನು ಬದಲಾಯಿಸಿಕೊಂಡದ್ದು ಸ್ವಾಗತಾರ್ಹ. ಧಿಕ್ಕಾರಕ್ಕೆ ದಿಕ್ಕೆಡುತ್ತಾರೆ ಎಂಬುದಕ್ಕೆ ಇದು ಸಾಕ್ಷಿ.);

ಕಾಶ, ಚರ್ಚೆ, ಚಿಂತನೆಯ; ಯಾವುದೇ ಕಂಪನಿ, ಮಾಧ್ಯಮ, ಅಕಾಡೆಮಿಗಳ ಪ್ರಾಯೋಜಕತ್ವದ ಹಂಗಿಲ್ಲದ; ನಿರ್ಬಂಧನೆಗಳಿಲ್ಲ‘ಜನಸಾಹಿತ್ಯ ಸಮಾವೇಶ’ವು ಎಲ್ಲಾ ಜಾತಿ ಸಮುದಾಯದ ಜನಸಾಮಾನ್ಯರ, ಪ್ರಜಾಸತ್ತಾತ್ಮಕ ಮೌಲ್ಯಾಧಾರಿತ ಮುಕ್ತ ಅವದ ವಿಚಾರ ಪೂರ್ಣ ಚರ್ಚಾ ಗೋಷ್ಠಿ. ಈ ಬಗೆಯ ಎರಡು ವೈರುಧ್ಯದ ನೆಲೆಗಳ ಮುಖಾಮುಖಿ, ಸಂಘರ್ಷಾತ್ಮಕ ಚರ್ಚೆ, ವಾಗ್ವಾದಗಳಿಗೆ ಐತಿಹಾಸಿಕ ಹಿನ್ನೆಲೆ ಇದೆ. ’ಸಂಭ್ರಮ’ ಹಾಗೂ ’ಸಮಾವೇಶ’ದ ಮುಖಾಮುಖಿ ಚರ್ಚೆ ಚರಿತ್ರೆಯ ಪುನರಾವರ್ತನೆ, ಮುಂದುವರಿಕೆಯ ಪಾಠವೇ ಆಗಿದೆ.

ಎಪ್ಪತ್ತರ ದಶಕದಲ್ಲಿ ಬಿ. ಬಸವಲಿಂಗಪ್ಪನವರು ಮೈಸೂರಿನ ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಪ್ರಾಸಂಗಿಕವಾಗಿ ಮಾತನಾಡುತ್ತ ’ಕನ್ನಡ ಸಾಹಿತ್ಯದಲ್ಲಿ ಬಹುತೇಕ ಬೂಸಾ ಸಾಹಿತ್ಯವಿದೆ’ ಎಂದು ಹೇಳಿದರು. ಈ ಅವಕಾಶವನ್ನು ದುರುಪಯೋಗ ಪಡಿಸಿಕೊಂಡ ಜಾತಿವಾದಿಗಳು ದಲಿತ ವಿರೋಧಿ ಜಾತಿ ಗಲಭೆಯನ್ನಾಗಿ ಮಾರ್ಪಡಿಸಿ, ಬಸವಲಿಂಗಪ್ಪನವರು ತಮ್ಮ ಮಂತ್ರಿ ಪದವಿಗೆ ರಾಜೀನಾಮೆ ಕೊಡುವಂತೆ ಮಾಡಿದರು. ಆ ಮೂಲಕ ಚಾರಿತ್ರಿಕವಾದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಹುಟ್ಟಿಗೆ ಕಾರಣರಾದರು. ೧೯೭೯ರಲ್ಲಿ ಚನ್ನಣ್ಣವಾಲೀಕಾರರು ಹಂಪನಾ ಅವರಿಗೆ ಪತ್ರ ಬರೆದು ಧರ್ಮಸ್ಥಳದಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರತ್ಯೇಕ ದಲಿತ ಗೋಷ್ಠಿಯೊಂದನ್ನು ಏರ್ಪಡಿಸಬೇಕೆಂದು ಕೇಳಿದರು.

ಅದಕ್ಕೆ ಪ್ರತಿಯುತ್ತರವಾಗಿ ಹಂಪನಾ ಅವರು ’ಕನ್ನಡದಲ್ಲಿ ದಲಿತ, ಬಲಿತ, ಕಲಿತ ಎಂಬುದಿಲ್ಲ’ ಎಂದು ಹೇಳುವ ಮೂಲಕ ಪರ್ಯಾಯವಾದ ಬಂಡಾಯ ಸಾಹಿತ್ಯ ಸಮ್ಮೇಳನ, ಸಂಘಟನೆ, ಚಳವಳಿಯ ಹುಟ್ಟಿಗೆ ಕಾರಣರಾದರು. ಹಾಗೆಯೇ ಧಾರವಾಡದ ಸಂಭ್ರಮಕಾರರು ತಮ್ಮ ಅಜ್ಞಾನದ ಅತಿರೇಕದ ಕಾರಣದಿಂದಾಗಿ ’ಕರ್ನಾಟಕ ಜನಸಾಹಿತ್ಯ ಸಮಾವೇಶ’ದ ಹುಟ್ಟಿಗೆ ಕಾರಣರಾದದ್ದು ಚಾರಿತ್ರಿಕ ಸಂಗತಿಯಾಗಿದೆ. ಹಲವು ಕಾರಣಗಳಿಗಾಗಿ ಕರ್ನಾಟಕ ಜನಸಾಹಿತ್ಯ ಸಮಾವೇಶವು ಮುಖ್ಯವೆನಿಸುತ್ತದೆ. ’ಹಳೆ ಬೇರು ಹೊಸ ಚಿಗುರು’ ಪರಿಕಲ್ಪನೆಯಲ್ಲಿ ಹುಟ್ಟಿಕೊಂಡಿರುವ ಸಮಾವೇಶವು, ಹಿರಿಯರ ಅನುಭವ ಹಾಗೂ ಕಿರಿಯರ ಚಿಂತನೆಗಳನ್ನು ಒಗ್ಗೂಡಿಸುವ ಹಿನ್ನೆಲೆಯಲ್ಲಿ ಯಶಸ್ವಿಯಾಗಿದೆ.

ದೇವನೂರ ಮಹಾದೇವ ಅವರು ಹೇಳಿದ ಯುವಕರು ನಾಯಕತ್ವವನ್ನು ವಹಿಸಿಕೊಂಡರೆ, ನಾವು ಅವರನ್ನು ಹಿಂಬಾಲಿಸುತ್ತೇವೆ ಎಂಬ ಮಾತುಗಳನ್ನು ಸಮಾವೇಶದುದ್ದಕ್ಕೂ ಬಹುತೇಕರು ನೆನಪು ಮಾಡಿಕೊಳ್ಳುತ್ತಾ, ’ಹಿರಿಯರನ್ನು ಗೊಬ್ಬರ ಮಾಡಿಕೊಂಡು ಕಿರಿಯರು ಬೆಳೆಯಬೇಕಿದೆ’ ಎಂಬ ತಾತ್ವಿಕತೆಯನ್ನು ಪ್ರತಿಪಾದಿಸಿದರು. ಎಚ್. ಜನಾರ್ಧನ್(ಜನ್ನಿ) ಅವರ ಬಿದುರಿನ ತತ್ವಪದ, ಹೋರಾಟದ ಹಾಡಿನೊಂದಿಗೆ ಆರಂಭವಾದ ಸಮಾವೇಶವು, ಸತೀಶ್ ಕುಲಕರ್ಣಿ ಅವರ ’ಕಟ್ಟುತ್ತೇವ ನಾವು ಕಟ್ಟುತ್ತೇವ…’ ಹಾಗೂ ಕುವೆಂಪು ಅವರ ’ಓ ನನ್ನ ಚೇತನ…’ ಎಂಬ ಅನಿಕೇತನ ಗೀತೆಯನ್ನು ಜನ್ನಿ ಹಾಡುವಾಗ ಇಡೀ ಸಭೆ ಅವರ ಹಾಡಿಗೆ ದನಿಯಾಯಿತು.

ಈ ಎಲ್ಲಾ ಹಾಡುಗಳು ಎಪ್ಪತ್ತರ ದಶಕದ ದಲಿತ ಚಳವಳಿಯ ಹೋರಾಟದ ಹಾಡುಗಳನ್ನ ನೆನಪಿಸುತ್ತಾ ಸಮಾವೇಶದ ಆಶಯವನ್ನು ಪ್ರತಿಪಾದಿಸಿದವು. ಡಾ. ಎಂ. ಡಿ. ಒಕ್ಕುಂದ ಅವರ ಪ್ರಸ್ತಾವನೆಯ ಮಾತುಗಳು ಸಮಾವೇಶದ ರೂಪುರೇಷೆ, ಪರಿಕಲ್ಪನೆ, ದೃಷ್ಟಿಕೋನದ ಚೌಕಟ್ಟನ್ನು ನಿರ್ಮಿಸಿಕೊಟ್ಟರೆ; ಆಶಯದ ಮಾತುಗಳನ್ನಾಡಿದ ಮರಾಠಿ ದಲಿತ ಲೇಖಕರಾದ ಲಕ್ಷ್ಮಣ ಗಾಯಕವಾಡ, ಬಾನು ಮುಷ್ತಾಕ್, ಡಾ. ಜಿ. ರಾಮಕೃಷ್ಣ ಅವರು ಹೋರಾಟದ ಚರಿತ್ರೆಯನ್ನ, ಸಾಹಿತ್ಯದ ತಾತ್ವಿಕತೆಯನ್ನ, ಸಾಹಿತ್ಯ-ಸಮಾಜ-ಲೇಖಕರ ನಡುವಿನ ಸಂಬಂಧದ ಜಿಜ್ಞಾಸೆಯನ್ನ ತರ್ಕಕ್ಕೆ ಒಡ್ಡಿದರು. ಈ ಎಲ್ಲಾ ಹಿರಿಯರ ಮಾತುಗಳನ್ನ ಪ್ರಜ್ಞೆಯಾಗಿಸಿಕೊಂಡ ಇಡೀ ಸಮಾವೇಶವು ತನ್ನೆಲ್ಲಾ ಚಿಂತನೆ, ಚರ್ಚೆಯ ಮೂಲಕ ಪರಂಪರೆಯನ್ನು ಪುನರ್ ಅವಲೋಕಿಸುತ್ತಾ, ಪ್ರಸ್ತುತಕ್ಕೆ ಮುಖಾಮುಖಿಯಾಗಿಸುತ್ತಾ ಸಂವಾದಿಸತೊಡಗಿದ್ದು ವಿಶೇಷ.

ವರ್ತಮಾನದ ಬಿಕ್ಕಟ್ಟು; ಸಮಾಜ ಮತ್ತು ನನ್ನ ಬರಹ; ಕವಿಗೋಷ್ಠಿ; ಹೊಸತಲೆಮಾರಿನ ಸಾಹಿತ್ಯ; ಸಮಾಜ ವಿಜ್ಞಾನ ಬರೆಹ ಮತ್ತು ಸಂಸ್ಕೃತಿ ಚಿಂತನೆ; ಹೊಸತಲೆಮಾರು ನಮ್ಮ ಗ್ರಹಿಕೆ; ಹೊಸ ಸಾಹಿತ್ಯ ಚಳವಳಿಯ ಸಾಧ್ಯತೆ ಎಂಬ ಪರಿಕಲ್ಪನೆಯಲ್ಲಿ ರೂಪಿತಗೊಂಡ ಸಮಾವೇಶವು ಕರ್ನಾಟಕದ ಸಾಮಾಜಿಕ, ರಾಜಕೀಯ, ಸಾಹಿತ್ಯಕ ಹಾಗೂ ಸಾಂಸ್ಕೃತಿಕ ನೆಲೆಗಳನ್ನು ವಿಮರ್ಶಾತ್ಮಕ ವಿಶ್ಲೇಷಣೆಗೆ ಒಳಪಡಿಸಿತು. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಸಂಶೋಧಕರು, ಹೋರಾಟಗಾರರು, ಚಿಂತಕರನ್ನೊಳಗೊಂಡಿದ್ದ ಈ ಸಮಾವೇಶದಲ್ಲಿ ಕರ್ನಾಟಕದ ದಲಿತ, ಬಂಡಾಯ, ರೈತ, ಮಹಿಳಾ ಚಳವಳಿಗಳನ್ನ ಮೆಲುಕು ಹಾಕುತ್ತಲೇ, ಅವುಗಳ ಇತಿಮಿತಿ-ಮೌಲ್ಯಗಳನ್ನ ವಿಮರ್ಶಾತ್ಮಕವಾಗಿ ಚರ್ಚಿಸುತ್ತ ಪ್ರಸ್ತುತದ ಸಾಮಾಜಿಕ ಚಳವಳಿಗಳ ಸಾಧ್ಯತೆಗಳೇನು ಎಂಬುದನ್ನು ಕುರಿತು ಗಂಭೀರವಾಗಿ ವಿವೇಚಿಸಲಾಯಿತು.

ಕೇವಲ ಸಾಹಿತ್ಯಕ ಸಂವಾದ ಮಾತ್ರವಾಗಿರದ ಸಮಾವೇಶವು: ’ಅಂತರ್‌ಜಲ ಬರಿದಾಗಿ ಭೂಮಿ ಬಿಸಿಯಾಗುತ್ತಿರುವ ದುರಂತ, ಪ್ರಕೃತಿಯ ವಿನಾಶ, ಪ್ರಸ್ತುತ ರಾಜಕಾರಣದ ಸೋಗಲಾಡಿತನ, ಪ್ರಜಾಸತ್ತಾತ್ಮಕ ರಾಜಕಾರಣದ ಅಗತ್ಯ, ಕೊಳಗೇರಿ ಆದಿವಾಸಿ ದಲಿತ ವೇಶ್ಯಾ ಧಾರ್ಮಿಕ ಅಲ್ಪಸಂಖ್ಯಾತ ಹೆಣ್ಣು ಮಕ್ಕಳ ತಲ್ಲಣಗಳು, ಶೋಷಿತ ಅಸ್ಪೃಶ್ಯ ಸಮುದಾಯದ ಲೇಖಕ-ಲೇಖಕಿಯರ ತೊಳಲಾಟ, ವಚನ ಸಾಹಿತ್ಯ ಚಳವಳಿಯ ಮರು ನೆನಪು, ಹಿರಿಯರ ಅರಿವಿನಲ್ಲಿ ಕಿರಿಯರು ಮತ್ತು ಅವರ ಬರಹ, ಕಿರಿಯರ ಪ್ರಜ್ಞೆಯಲ್ಲಿ ಪ್ರಸ್ತುತ ಸಮಾಜಿಕ ಸಂಗತಿಗಳು’ ಇತ್ಯಾದಿ ಮೌಲಿಕ ವಿಚಾರಗಳು ಸಮಾವೇಶದ ಉದ್ದಕ್ಕೂ ಮಂಥನಕ್ಕೆ ಒಳಗಾದವು.ಕೇಸರಿ ಹರವೂ ನಿರ್ದೇಶನದ ನಗರ ಮತ್ತು ನದೀ ಕಣಿವೆ ಎಂಬ ಸಾಕ್ಷ್ಯಚಿತ್ರ ಪ್ರದರ್ಶನವು ನಮ್ಮೊಳಗಿರಬಹುದಾದ ನಿಸರ್ಗ ಕುರಿತ ಕಾಳಜಿಗಳೇನು ಎಂಬುದನ್ನು ಪ್ರಶ್ನಿಸುತ್ತಲೇ ಪ್ರತಿಯೊಬ್ಬರನ್ನು ಆತ್ಮಾವಲೋಕನಕ್ಕೆ ಹಚ್ಚಿತು.

ದು. ಸರಸ್ವತಿ, ನಾಗೇಶ ಹೆಗಡೆ, ಬಂಜಗೆರೆ ಜಯಪ್ರಕಾಶ, ಎಸ್. ಬಿ. ಜೋಗುರ, ಮುಜಾಫರ್ ಅಸ್ಸಾದಿ, ಕುಂ. ವೀರಭದ್ರಪ್ಪ, ಎಸ್. ಜಿ. ಸಿದ್ಧರಾಮಯ್ಯ, ಎಚ್. ಎಸ್. ಅನುಪಮಾ, ಎಸ್. ಗಂಗಾಧರಯ್ಯ, ಕೆ. ಫಣಿರಾಜ್, ರಂಗನಾಥ್ ಕಂಟನಕುಂಟೆ, ಜಿ.ಪಿ. ಬಸವರಾಜು, ನಟರಾಜ್ ಬೂದಾಳು, ಸಿದ್ಧನಗೌಡ ಪಾಟೀಲ್, ಬಿ. ಎಂ. ಪುಟ್ಟಯ್ಯ, ರಹಮತ್ ತರೀಕೆರೆ ಅವರುಗಳು ಮಂಡಿಸಿದ ಚಿಂತನೆಗಳು ಹಾಗೂ ಬರಹಗಾರರಾದ ಸರ್ಜಾಶಂಕರ್ ಹರಳಿಮಠ, ಪೀರ್‌ಬಾಷಾ, ವೀರಣ್ಣ ಮಡಿವಾಳರ, ಅನಸೂಯ ಕಾಂಬಳೆ, ವಸಂತ ಬನ್ನಾಡಿ, ಟಿ.ಕೆ. ದಯಾನಂದ, ಬಾಲ ಗುರುಮೂರ್ತಿ, ರಮೇಶ ಅರೋಲಿ ಅವರ ಅಸಲಿ ಅನುಭವದ ಮಾತುಗಳು ಇಡೀ ಸಮಾವೇಶಕ್ಕೆ ಜೀವಂತಿಕೆಯನ್ನ ತಂದುಕೊಟ್ಟವು.

ತಮ್ಮಷ್ಟಕ್ಕೆ ತಾವೇ ತಮ್ಮ ಇತಿಮಿತಿಯೊಳಗೆ ಕೆಲಸ ಮಾಡುತ್ತಿರುವ ದಲಿತ, ರೈತ, ಮಹಿಳಾ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಹೋರಾಟಗಾರರನ್ನ; ಎಲ್ಲಾ ಜಾತಿ, ಮತ, ಧರ್ಮದ ಪ್ರಜ್ಞಾವಂತರನ್ನ; ಸೂಕ್ಷ್ಮ ಚಿಂತನೆಯ ಯುವ ಲೇಖಕ-ಲೇಖಕಿಯರನ್ನ; ಅಲೆಮಾರಿ ಆದಿವಾಸಿ ಸಮುದಾಯಗಳನ್ನ; ಮನುಷ್ಯತ್ವ ಮತ್ತು ಪ್ರಜಾಪ್ರಭುತ್ವದ ಬಗೆಗೆ ನಂಬಿಕೆ ಇರುವವರನ್ನು ಜನಸಾಹಿತ್ಯ ಸಂಘಟನೆಯ ವೇದಿಕೆ ಅಡಿಯಲ್ಲಿ ಸಂಘಟಿಸಿ ಮುಂದಿನ ದಿನಗಳಲ್ಲಿ ಹೊಸ ಬಗೆಯ ಹೋರಾಟ, ಚಿಂತನೆಯನ್ನ ರೂಪಿಸುವ ಆಶಾವಾದವನ್ನು ಬಿಂಬಿಸಿದ್ದು ಸಮಾವೇಶದ ಮೌಲಿಕ ನಿರ್ಣಯದ ಹೊಸ ಹೆಜ್ಜೆಯಾಗಿದೆ. ಆ ನಿಟ್ಟಿನಲ್ಲಿ ಕರ್ನಾಟಕದ ಪ್ರಜ್ಞಾವಂತ ಮನಸ್ಸುಗಳು ಕ್ರೀಯಾಶೀಲವಾಗುವ ಮೂಲಕ ನೆಮ್ಮದಿಯ ನಾಳೆಗಳನ್ನ ಕಂಡುಕೊಳ್ಳಬೇಕಿದೆ.

 

‍ಲೇಖಕರು avadhi

28 March, 2013

1 Comment

  1. ಉದಯಕುಮಾರ್ ಹಬ್ಬು

    ಮೊನ್ನೆ ಧಾರವಾದದಲ್ಲಿ ನಡೆದ ಕರ್ನಾಟಕ ಜನ ಸಾಹಿತ್ಯ ಸಮ್ಮೇಳನವು 70ರ ದಶಕದ ‘ಬಂಡಾಯ ಸಾಹಿತ್ಯ’ದ ಪುನರುತ್ಥಾನ ಎಂದು ವ್ಯಾಖ್ಯಾನಿಸಬೇಕಿದೆ. ಹಿಂದಿನ ಬಂಡಾಯ ಎಡಪಂಥೀಯ ಒಲವು, ನಿಲುವುಗಳನ್ನೇ ಪುನಹ ಎತ್ತಿಹಿಡಿದಿದ್ದು, ತುಂಬಾ ಪ್ರಶಂಸನೀಯವಾದರೂ ಇದು ಹೊಸಬಾಟ್ಲಿಯಲ್ಲಿಯ ಹಳೆ ಮದ್ಯವೇ ಆಗಿದೆ. ಹೊಸತೇನು ಇದೆಯೇ? ಉದಯಕುಮಾರ ಹಬ್ಬು ಕಿನ್ನಿಗೋಳಿ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading