ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೇರಳದಲ್ಲಿ ಕಿರಣ್ ಭಟ್: ಮಾಡನ್‌ ಮೋಕ್ಷಂ

ಕಿರಣ್ ಭಟ್

*

ಮಾಡನ್‌ ಮೋಕ್ಷಂ
ಸ್ಕೇಲ್‌ ಮೀಡಿಯಾ, ಪಟ್ಟನಂತಿಟ್ಟಾ

ಕೇರಳ ಸಂಗೀತ ನಾಟಕ ಅಕಾಡಮಿ ಪ್ರತಿ ವರ್ಷ ನಡೆಸುವ ಸಮಕಾಲೀನ ನಾಟಕ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದು ನಾಟಕೋತ್ಸವದಲ್ಲಿ ಅವಕಾಶ ಗಿಟ್ಟಿಸಿಕೊಂಡ ನಾಟಕವಿದು. ಹಾಗೆಯೇ ಎಲ್ಲರಿಗೂ ಈ ನಾಟಕದ ಕುರಿತು ತುಂಬ ಕುತೂಹಲವಿತ್ತು. ಈ ನಾಟಕ ನೋಡೋದಕ್ಕೆ ಜನ ಕಿಕ್ಕಿರಿದಿದ್ದರು.

ಹಲವಾರು ಗ್ರಾಮ ದೇವತೆಗಳು ಬ್ರಾಹ್ಮಣೀಕರಣಗೊಳ್ಳುತ್ತಿರುವ ಈ ದಿನಗಳಲ್ಲಿ ತುಂಬ ಮಹತ್ವದ್ದೆನಿಸುವ ನಾಟಕವಿದು. ಇಂಥ ತೀಕ್ಷ್ಣವಾದ ವಸ್ತುವಿನ ಜೊತೆ ಜೊತೆಯಲ್ಲೇ ಈ ನಾಟಕ ಧರ್ಮ ಸಂಘರ್ಷಗಳ ಮೇಲೂ ಬೆಳಕು ಚೆಲ್ಲುತ್ತದೆ.

ಮಾಡನ್‌ ಒಂದು ಗ್ರಾಮದೇವತೆ. ತನ್ನ ಜನರ ಜೊತೆಗೇ ಇರುವವನು. ಕಾಯುವವನು. ಆದರೆ ಇತ್ತೀಚೆಗೆ ಜನ ಅವನಲ್ಲಿಗೆ ಬರುವದು ಕಡಿಮೆಯಾಗಿದೆ. ಕಳ್ಳು, ಕಪ್ಪು ಕೋಳಿ ಸಿಗುತ್ತಿಲ್ಲ. ಹೀಗಿರುವಾಗ ಅವನ ಪೂಜಾರಿ ಕುಂಜನ್‌ ʼಜನರನ್ನು ಆಕರ್ಷಿಸುವʼ ಉಪಾಯ ಹೂಡುತ್ತಾನೆ. ಇದ್ದಕ್ಕಿದ್ದಂತೆ ಒಂದು ರಾತ್ರಿ ಮಾಡನ್‌ ತನ್ನ ಜಾಗದಿಂದ ಕೆಳಗೆ ಬಿದ್ದಿದ್ದಾನೆ. ಬೆಳ ಬೆಳಿಗ್ಗೆ ಜನಕ್ಕೆ ಸುದ್ದಿಯಾಗಿದೆ. ಊರವರು ಗುಂಪುಗೂಡುತ್ತಾರೆ. ಈ ಮಧ್ಯೆ ಮಾಡನ್‌ ನ ತಲೆಯಾಸರೆಗೆ ಕುಂಜನ್‌ ಕೊಟ್ಟ ಕೋಲು ಅದು ಹೇಗೋ ʼಕ್ರಾಸ್‌ʼ ನ ರೂಪ ಪಡೆದಿಬಿಟ್ಟಿರುತ್ತದೆ.. ಧರ್ಮ ಸಂಘರ್ಷ ಶುರುವಾಗಿಬಿಡುತ್ತದೆ. ಶಕ್ತಿವಂತರ ಕೈ ಮೇಲಾಗುತ್ತದೆ. ಈಗ ಹೊಸ ದೇವಸ್ಥಾನ ಕಟ್ಟುವ ಕೆಲಸ ಪ್ರಾರಂಭವಾಗಿದೆ. ಆ ದೊಡ್ಡ ದೇವಸ್ಥಾನದಲ್ಲಿ ಮಾಡನ್‌ ಪ್ರತಿಷ್ಠಾಪಿತಗೊಂಡಿದಾನೆ. ಜಾಗಟೆಗಳು, ಮಂತ್ರಗಳು, ಆರತಿ, ಧೂಪಗಳ ನಡುವೆ ದಿಗ್ಭ್ರಾಂತನಾಗಿದ್ದಾನೆ. ಭಕ್ತ ಸಾಗರದಲ್ಲಿ ಆತನ ಜನಗಳೇ ಕಾಣುತ್ತಿಲ್ಲ. ತನ್ನ ಅಸ್ಮಿತೆಯನ್ನೇ ಕಳೆದುಕೊಂಡ ಮಾಡನ್‌ ಮತ್ತು ಆತನನ್ನು ಕಳಕೊಂಡ ಆತನ ಮಣ್ಣ ಮಕ್ಕಳು ಹತಾಶೆಯಿಂದ ನರಳುತ್ತಿದ್ದಾರೆ. ನಾಟಕ ಮುಗಿಯುತ್ತಿದ್ದಂತೆ ತುಂಬ ನೋವು ಕಾಡುತ್ತದೆ.

ತುಂಬ ವಿಸ್ತಾರವಾದ ರಿಯಲಿಸ್ಟಿಕ್‌ ರಂಗ ಸಜ್ಜಿಕೆಯಲ್ಲಿ ಪ್ರಯೋಗವಾಗುವ ಈ ನಾಟಕ ತೀವ್ರವಾದ ವ್ಯಂಗ್ಯ ಹೊತ್ತಿದ್ದು. ಮಾಡನ್‌ ಮತ್ತು ಕುಂಜನ್‌ ನ ನಿರಂತರವಾದ ಚರ್ಚೆಗಳಲ್ಲೇ ನಾಟಕದ ಬೀಜವಿದೆ. ಇದು ಸಾಮಾಜಿಕ, ರಾಜಕೀಯದ ಪ್ರಸ್ತುತ ವಿದ್ಯಮಾನವನ್ನುವಿಮರ್ಶಿಸುತ್ತದೆ. ಧರ್ಮಕ್ಷೇತ್ರದ ಸುತ್ತ ನಡೆಯುವ ರಾಜಕೀಯವನ್ನು, ವ್ಯಾಪಾರೀ ಮನೋಭಾವವನ್ನೂ ಎತ್ತಿ ಹಿಡಿಯುತ್ತದೆ. ಅವರಿಬ್ಬರ ಶರೀರ ಭಾಷೆಗಳೂ, ಒಂದು ರೀತಿಯ ಆಶು ಮಾತಿನ ವಿನ್ಯಾಸವೂ ನಮ್ಮ ಯಕ್ಷಗಾನದ ರಾಜ, ಹಾಸ್ಯಗಾರ ಪಾತ್ರಗಳನ್ನು ನೆನಪಿಸುವಂತಿದೆ. ನಾಟಕದುದ್ದಕ್ಕೂ ನೆಲಮೂಲದ ಆಚರಣೆಗಳನ್ನು ಅಥೆಂಟಿಕ್‌ ಆಗಿ ನಿರ್ವಹಿಸಲಾಗಿದೆ.

ಅದ್ಭುತವಾದ ರಿಯಲಿಸ್ಟಿಕ್‌ ಅಭಿನಯ, ಅಷ್ಟೇ ವಿವರವಾದ ಗುಂಪು ದೃಶ್ಯಗಳು ನಾಟಕದ ಯಶಸ್ಸಿಗೆ ಕಾರಣ.

‍ಲೇಖಕರು Admin R

5 March, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading