
-ಕಿರಣ್ ಭಟ್
ನೂರಮ್ಮ ಬಿರಿಯಾನಿ ದರ್ಬಾರ್
(ತಮಿಳು)
ಕಟ್ಟಿಯಕ್ಕರಿ ಥೀಯೇಟರ್ ಗ್ರೂಪ್,ಚೆನ್ನೈ
ನಿರ್ದೇಶಕರು: ಶ್ರೀಜಿತ್ ಸುಂದರಂ
**
ಇದು ತೃತೀಯ ಲಿಂಗಿಗಳ ಬದುಕಿನ ಕಥೆಯೂ ಹೌದು. ಆಹಾರದ ಕಥೆಯೂ ಹೌದು. ನೂರಮ್ಮ ನ ಬಿರಿಯಾನಿಯ ಈ ಕಥೆ ನಿರೂಪಣೆಯ ಶೈಲಿಯಲ್ಲಿ ಬಿಚ್ಚಿಕೊಳ್ಳುತ್ತ ಹೋಗುತ್ತದೆ.
ಬಿರಿಯಾನಿಗೆಂದು ಒಲೆ ಹಚ್ಚುತ್ತಲೇ ನೂರಮ್ಮ ಯಾನೆ ನೂರ್ ಜಹಾನ್ ಬದುಕನ್ನು ತೆರೆದಿಡುತ್ತ ಹೋಗುತ್ತಾಳೆ. ಎಲ್ಲ ತೃತೀಯ ಲಿಂಗಿಗಳಂತೆ ಈಕೆಯದೂ ಅದೇ ವೇದನೆ, ಅವಮಾನ, ಹಿಂಸೆಗಳು ಹರಳುಗಟ್ಟಿದ ಜೀವನವೇ. ತನಗಿಷ್ಟವಾದ ಜೀವನ ಕಟ್ಟಿಕೊಳ್ಳಲು ಮನೆ ಬಿಟ್ಟು ಓಡಿ ಬಂದಂದಿನಿಂದ ಬಿರಿಯಾನಿ ನೂರಮ್ಮಳಾಗುವವರೆಗಿನ ದಿನಗಳು ಯಾತನಾಮಯ ದಿನಗಳೇ. ಆದರೆ ಅಲ್ಲಿಯೂ ಹೃದಯವಂತ ಜೀವಗಳಿವೆ. ‘ಚೇಲಾ’ ಗಳನ್ನಾಗಿಸಿಕೊಂಡು ಮಕ್ಕಳಂತೆ ಬೆಳೆಸುವವರಿದ್ದಾರೆ. ಪ್ರೀತಿಸುವವರಿದ್ದಾರೆ.
ಇವುಗಳ ಮಧ್ಯೆಯೇ ಆಹಾರದ ರಾಜಕೀಯವೂ ಇದೆ.
ಬದುಕನ್ನು ಬಿಚ್ಚಿಡುತ್ತಲೇ ನೂರಮ್ಮ ದೇವರುಗಳೂ ಅವರಿಗೆ ತಳಕು ಹಾಕಿಕೊಂಡಿರುವ ಆಹಾರಗಳು, ನಾವೇ ಕಟ್ಟಿಕೊಂಡ ಪಂಗಡಗಳು, ಆಹಾರ ಪದ್ಧತಿಗಳು ಅವುಗಳ ನಡುವಿನ ತಿಕ್ಕಾಟದ ಕುರಿತೂ ಹೇಳುತ್ತ ಹೋಗುತ್ತಾಳೆ. ಈ ಮಧ್ಯೆ ನಿಮಗೆ ರುಚಿ ರುಚಿಯಾದ ಬಿರಿಯಾನಿ ತಯಾರಿಸುವ ವಿಧಾನವನ್ನೂ ಹೇಳಿಕೊಡುತ್ತಾಳೆ.
ಒಂದು ಬದಿಗೆ ಬಿರಿಯಾನಿ ಅಡುಗೆ ಮನೆ ಇನ್ನೊಂದು ಬದಿಗೆ ಕಥೆಯ ನಿರೂಪಣೆಗೆ ಅನುಕೂಲವಾಗುವಂಥ ಕನ್ನಡಿ, ಫೋಟೋಗಳು ಹೀಗೆ ವಿವರವಾದ ರಿಯಲಿಸ್ಟಿಕ್ ಸೆಟ್. ಇವುಗಳ ಮಧ್ಯೆಯೇ ಮುಖ್ಯ ನಟಿ ರೇವತಿ ಉಡುಪುಗಳನ್ನು ಬದಲಿಸುತ್ತ ಬೇರೆ ಬೇರೆ ಹಂತದಲ್ಲಿನ ನೂರಮ್ಮನನ್ನು ಎದುರು ನಿಲ್ಲಿಸುತ್ತಾರೆ. ನಾಟಕದ ಕೊನೆಯಲ್ಲಿ ನೂರಮ್ಮನ ಗೆಳತಿಯ ಸಾವಿನ ಭಾಗ ಮೆಲೋಡ್ರಾಮಾ ಎನಿಸುತ್ತದೆ.
ಶೋಷಣೆಗೋಳಗಾಗಿ ಮಡಿದ ತೃತೀಯ ಲಿಂಗಿಗಳಿಗೆ ಗೌರವ ಮಂಟಪದಲ್ಲಿ ಗೌರವ ಸಲ್ಲಿಸಲಾಗುತ್ತದೆ.
ಹಾ, ನಾಟಕ ಮುಗಿದಿಲ್ಲ. ಒಂದು ಬದಿ ಬಿರಿಯಾನಿ ಸಿದ್ಧವಾಗ್ತಾ ಇದೆ.
ನಾಟಕ ಮುಗಿಸಿ ಹೊರಬರುತ್ತಿದ್ದಂತೆ ಪ್ರೇಕ್ಷಕರಿಗೆಲ್ಲ ಒಂದೊಂದು ಪ್ಲೇಟ್ ಬಿರಿಯಾನಿ.








0 Comments