ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೇರಳದಲ್ಲಿ ಕಿರಣ್ ಭಟ್: ಆಕೆ ಲೂಸಿಯಾ ಜೋಯ್ಸ್..

Lucia Joyce
A Play from Karlic Dance Theatre, Spain
Dir: Cristina D. Sliveyira

ಆಕೆ ಲೂಸಿಯಾ ಜೋಯ್ಸ್.‌ ಆಕೆಗೀಗ ಎಪ್ಪತೈದು. 12 ಡಿಸೆಂಬರ್‌ 1982 ರಂದು ಕತ್ತಲ ಕೋಣೆಯೊಳಗೆ ಕೂತು ಆಕೆಯ ಕೊನೆಯ ವಿದಾಯ ಪತ್ರ ಬರೆಯುತ್ತಿದ್ದಾಳೆ. ಯಾರಿಗೆಂದು ಆಕೆಗೂ ತಿಳಿಯದು. ಆದರೆ ಆ ಪತ್ರ ಆಕೆ ಎದೆಯಲ್ಲಿ ಹೊತ್ತ ಆಸೆಗಳ, ತಿವಿದು ನೋಯಿಸಿದ ನಿರಾಸೆಗಳ, ಮುರಿದು ಬಿದ್ದ ಸಂಬಂಧಗಳ ಅಕ್ಷರ ರೂಪ.

ಪುಟ್ಟ ಪ್ರಾಯದಲ್ಲೇ ನರ್ತಕಿಯಾಗುವ ಆಸೆ ಹೊತ್ತ ಆಕೆ ಖ್ಯಾತ ಸಾಹಿತಿ ಜೇಮ್ಸ ಜೋಯ್ಸ್‌ ರ ಮಗಳು. ಆಕೆಯ ಉತ್ಕಟ ಆಸೆಗೆ ತಂದೆ ಎಂದೂ ನೀರೆರೆಯಲಿಲ್ಲ. ಬದಲಿಗೆ ಆಕೆಗೆ ಸಿಕ್ಕಿದ್ದು ತಿರಸ್ಕಾರ. ಮುಂದೆ ಆಕೆಯ ಭಾವುಕ ಪ್ರೀತಿಯನ್ನು ಅರ್ಥ ಮಾಡಿಕೊಳ್ಳದೇ ತಣ್ಣಗೆ , “ನಾನು ನಿನ್ನನ್ನು ಪ್ರೇತಿಸಲಾರೆ” ಎಂದು ಹೊರನಡೆದ ಸ್ಯಾಮುಯೆಲ್‌ ಬೆಕೆಟ್.‌ ಇವುಗಳ ಫಲವಾಗಿಯೇ ಆವಳನ್ನು ಅಪ್ಪಿಕೊಂಡ ಹಿಸ್ಟೀರಿಯಾ. ಕತ್ತಲ ಕೋಣೆಯ ಬದುಕು.

ಇಡಿಯ ನಾಟಕವೂ ನೋವು ಹೊತ್ತ ಹೆಜ್ಜೆಯ ಲಯದಂತೆ. ಉದ್ದಕ್ಕೂ ಚಲಿಸುವ ಪಾದಗಳು. ಲೂಸಿಯಾಳ ನೃತ್ಯ. ಅದರೆ ಇಲ್ಲಿ ಪಾದಗಳು ನರ್ತಿಸುತ್ತಿರಲಿಲ್ಲ ಬದಲಿಗೆ ಆಕೆಯ ಹೆಜ್ಜೆಗಳು ಅತ್ಮದ ನೋವನ್ನು ಹೊರಹಾಕುತ್ತಿವೆಯೇನೋ ಎನಿಸುತ್ತಿತ್ತು. ಒಂದು ರೀತಿಯ ಭಾವೋನ್ಮಾದವದು.

ತಾಂತ್ರಿಕವಾಗಿ ಸಿನಿಮಾ ಮಾಧ್ಯಮವನ್ನೂ ಜೊತೆ ಜೊತೆಗೇ ಬಳಸಿಕೊಂಡ ಅಪೂರ್ವ ನೃತ್ಯ ನಾಟಕವಿದು. ಆ ಸಿನಿಮಾ ಕೂಡ ಅದ್ಭುತ ಕಲಾತ್ಮಕತೆಯದ್ದು. ರಂಗದ ಮೇಲೆ ಚಲಿಸುತ್ತಿರುವ ಪಾತ್ರಗಳ ನಡೆಗಳೂ ಹಿಂದೆ ನಡೆಯುತ್ತಿರುವ ಲೂಸಿಯಾಳ ಬಯೋಗ್ರಫಿಯಂಥ ಸಿನಿಮಾವೂ ಅದೆಷ್ಟು ಚಂದವಾಗಿ ಮಿಳಿತಗೊಂಡಿದ್ದವೆಂದರೆ ಅದೊಂದು ಬೇರೆ ಮಾಧ್ಯಮ ಎನಿಸುತ್ತಿರಲಿಲ್ಲ. ಎರಡೂ ನೋವಿನ ಪಾಕದಂತಿದ್ದವು.

ಇಬ್ಬರೇ ನಟರು. ಅವರ ನಟನೆಗೋ ದೊಡ್ಡ ಸಲಾಮ್
ನಾಟಕೋತ್ಸವದಲ್ಲಿ ತುಂಬ ಕಾಡಿದ ನಾಟಕವಿದು.
ಶಬ್ದಗಳು ಬೇಡವೇನೋ ಜೊತೆಗಿರುವ ಚಿತ್ರಗಳೇ ಎಲ್ಲ ಹೇಳಿಯಾವು.

‍ಲೇಖಕರು avadhi

5 February, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading