ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೇಂದ್ರ ಸರ್ಕಾರಕ್ಕೆ ಇದೇ 'ಭೇಟಿ ಬಚಾವೊ!'

 

ಜ್ಯೋತಿ ಅನಂತಸುಬ್ಬರಾವ್ 

ಮುಟ್ಟಿಲ್ಲದೆ ಹುಟ್ಟಿಲ್ಲ ಎಂಬುದು ವೈಜ್ಞಾನಿಕ ಸತ್ಯ.
ಕೇಂದ್ರ ಸರ್ಕಾರ ಜಿಎಸ್‍ಟಿ ನಿರ್ಧರಿಸುವಾಗ ಮಹಿಳೆಯರಿಗೆ ಅತ್ಯಗತ್ಯವಾದ ಸ್ಯಾನಿಟರಿ ನ್ಯಾಪ್ಕಿನ್ ಮೇಲೆ ಶೆ. 12ರಷ್ಟು ತೆರಿಗೆ ವಿಧಿಸಿದ್ದನ್ನು ಮಹಿಳೆಯರು ಒಕ್ಕೊರಲಿನಿಂದ ವಿರೋಧಿಸಿದ್ದು ನಿಜ.
ಚಿನ್ನದ ಮೇಲೆ ಶೇ. 3 ಮತ್ತು ಚಿನ್ನದ ಒಡವೆಗಳ ಮಜೂರಿಯ ಮೇಲೆ ಶೇ. 5 ರಷ್ಟು ತೆರಿಗೆ ಹೇರಿ ಗ್ರಾಹಕರಿಗೆ “ಅನುಕೂಲ” ಮಾಡಿಕೊಟ್ಟಿರುವ ಕೇಂದ್ರ ಸರ್ಕಾರ ಮಹಿಳೆಯರ ಆರೋಗ್ಯದ ಕಡೆ ಗಮನ ನೀಡಿದ್ದಿಷ್ಟೇ. ಆರೋಗ್ಯಕ್ಕಿಂತ ಬಂಗಾರ ಮುಖ್ಯವಾಗಿರುವ ಕೇಂದ್ರ ಸರ್ಕಾರಕ್ಕೆ ಇದೇ “ಭೇಟಿ ಬಚಾವೊ”!
ಹೌದು, ಮುಟ್ಟಿನ ಸಂದರ್ಭದಲ್ಲಿ ಮೊದಲೆಲ್ಲಾ ಹತ್ತಿಯ ಬಟ್ಟೆಗಳನ್ನು ಬಳಸಲಾಗುತ್ತಿತ್ತು. ನನಗೂ ನೆನಪಿದೆ. ಮುಟ್ಟಿನ ಸಮಯದಲ್ಲಿ ಹೆಣ್ಣಿನ ವೈಯಕ್ತಿಕ ಶುಚಿತ್ವ ಬಹಳ ಮುಖ್ಯ. (ಅದಕ್ಕೇ “ಸ್ಯಾನಿಟರಿ” ನ್ಯಾಪ್ಕಿನ್ ಎನ್ನುವುದು.) ಅನೇಕ ಪ್ರದೇಶಗಳಲ್ಲಿ ಬಟ್ಟೆಗಳನ್ನು ತೊಳೆಯಲು ಈಗಲೂ ಸಮರ್ಪಕ ನೀರಿನ ವ್ಯವಸ್ಥೆ ಇರುವುದಿಲ್ಲ. ತೊಳೆದರೆ ಮುಕ್ತವಾಗಿ ಬಿಸಿಲಿನಲ್ಲಿ ಒಣಗಿ ಹಾಕುವುದಕ್ಕೂ ಈ ದೇಶದ ಸಾಂಪ್ರದಾಯಿಕ ಮನಸ್ಸುಗಳು ಬಿಡುವುದಿಲ್ಲ. ಇದರಿಂದ ಮಹಿಳೆಯರಿಗೆ ಕಾಯಿಲೆಗಳೇ ಹೆಚ್ಚೆಂದರೂ ತಪ್ಪಿಲ್ಲ.
ಇನ್ನು ದಶಕಗಳ ಹಿಂದೆ ಮಹಿಳೆಯರು ಕೆಲಸಕ್ಕೆಂದು ಹೊರ ಹೋಗುತ್ತಿರಲಿಲ್ಲ. ಆದರೀಗ ಹೆಣ್ಣುಮಕ್ಕಳ ಅಗತ್ಯತೆ ಬದಲಾಗಿದೆ. ಅವರು ಎಲ್ಲೆಡೆ ಎಲ್ಕಾ ಬಗೆಗಳ ಕೆಲಸ ಮಾಡುತ್ತಾರೆ, ಶಾಲಾ ಕಾಲೇಜುಗಳಿಗೆ ದೂರದೂರ ಪಯಣಿಸುತ್ತಾರೆ. ಈಗ ಯಾರೂ ಐದು ದಿನಗಳ ಕಾಲ ಒಳಬಟ್ಟೆಗಳನ್ನು ದಿನಕ್ಕೆರಡು ಬಾರಿ ಒಗೆಯುತ್ತಾ ಕೂರಲು ಸಾಧ್ಯವಿಲ್ಲ. ಮನುಷ್ಯ ತನ್ನ ಕೆಲಸಗಳನ್ನು ಹೆಚ್ಚೆಚ್ಚು ಸರಳೀಕರಣಗೊಳಿಸುವ ಯತ್ನದಲ್ಲಿದ್ದಾನೆ. ವಿಜ್ಞಾನದ ಆವಿಷ್ಕಾರಗಳು ಹೆಚ್ಚು ಅನುಕೂಲತೆಗಳನ್ನು ಒದಗಿಸಿದೆ. ಅವುಗಳಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ಕೂಡ ಒಂದು. (ಇದರಿಂದ ಇನ್ನೂ ಸಾಕಷ್ಟು ಮುಂದೆ ಹೋಗಲಾಗಿದೆ ಎಂಬುದು ಬೇರೆ ವಿಚಾರ)
ಈ ಸೌಕರ್ಯಗಳು ಎಲ್ಲಾ ಸ್ಥರಗಳ ಹೆಣ್ಣುಮಕ್ಕಳಿಗೂ ದೊರೆತು ಅವರ ಆರೋಗ್ಯ ಸುರಕ್ಷಿತವಾಗಿರುವಂತೆ ಎಚ್ಚರ ವಹಿಸಬೇಕಾದುದು ಸರ್ಕಾರಗಳ ಜವಾಬ್ದಾರಿ. ಇದರಲ್ಲಿ ಅಸಹ್ಯ ಎಂಬುದೇನೂ ಇಲ್ಲ. ಪ್ರತಿ ತಿಂಗಳೂ ಬೇಕೇ ಬೇಕಾದಂತಹ ಈ ಸ್ಯಾನಿಟರಿ ನ್ಯಾಪ್ಕಿನ್‍ ತೆರಿಗೆರಹಿತವಾಗಿರಬೇಕು. ಅವುಗಳನ್ನು ಸರ್ಕಾರವೇ ಉಚಿತವಾಗಿ ಇಲ್ಲವೇ ಕಡಿಮೆ ದರದಲ್ಲಿ ಸರಬರಾಜು ಮಾಡಬೇಕು. ಅದನ್ನು ಬಿಟ್ಟು ತೆರಿಗೆ ಹೇರಿ ಹೆಣ್ಣುಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಕಾರ್ಯಕ್ಕೆ ಕೈಹಾಕುವುದು ಸರಿಯಲ್ಲ.

‍ಲೇಖಕರು avadhi

11 July, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading