ಕೆ ವಿ ತಿರುಮಲೇಶ್ ಅನುವಾದಿಸಿದ ಮಕ್ಕಳ ಕವಿತೆಗಳು…

ಕೆ ವಿ ತಿರುಮಲೇಶ್

1 ಲಂಡನ್ ಸೇತುವೆ ಬೀಳುತ್ತಾ ಇದೆ

ಲಂಡನ್ ಸೇತುವೆ ಬೀಳುತ್ತಾ ಇದೆ
ಬೀಳುತ್ತಾ ಇದೆ ಬೀಳುತ್ತಾ ಇದೆ
ಲಂಡನ್ ಸೇತುವೆ ಬೀಳುತ್ತಾ ಇದೆ
ಓ ನನ್ನ ರಾಣಿ

ತನ್ನಿರದಕ್ಕೆ ಮರ ಮತ್ತು ಮಣ್ಣು
ಮರ ಮತ್ತು ಮಣ್ಣು ಮರ ಮತ್ತು ಮಣ್ಣು
ತನ್ನಿರದಕ್ಕೆ ಮರ ಮತ್ತು ಮಣ್ಣು
ಓ ನನ್ನ ರಾಣಿ

ಮರ ಮತ್ತು ಮಣ್ಣು ತೊಳೆದೋಗುವುದು
ತೊಳೆದೋಗುವುದು ತೊಳೆದ್ಹೋಗುವುದು
ಮರ ಮತ್ತು ಮಣ್ಣು ತೊಳೆದ್ಹೋಗುವುದು
ಓ ನನ್ನ ರಾಣಿ

ತನ್ನಿರದಕ್ಕೆ ಇಟ್ಟಿಗೆ ಸುಣ್ಣ
ಇಟ್ಟಿಗೆ ಸುಣ್ಣ ಇಟ್ಟಿಗೆ ಸುಣ್ಣ
ತನ್ನಿರದಕ್ಕೆ ಇಟ್ಟಿಗೆ ಸುಣ್ಣ
ಓ ನನ್ನ ರಾಣಿ

ಇಟ್ಟಿಗೆ ಸುಣ್ಣ ನಿಂತ್ಕೊಳ್ಳೊದಿಲ್ಲ
ನಿಂತ್ಕೊಳ್ಳೊದಿಲ್ಲ ನಿಂತ್ಕೊಳ್ಳೊದಿಲ್ಲ
ಇಟ್ಟಿಗೆ ಸುಣ್ಣ ನಿಂತ್ಕೊಳ್ಳೊದಿಲ್ಲ
ಓ ನನ್ನ ರಾಣಿ

ತನ್ನಿರದಕ್ಕೆ ಕಬ್ಬಿಣ ಉಕ್ಕು
ಕಬ್ಬಿಣ ಉಕ್ಕು ಕಬ್ಬಿಣ ಉಕ್ಕು
ತನ್ನಿರದಕ್ಕೆ ಕಬ್ಬಿಣ ಉಕ್ಕು
ಓ ನನ್ನ ರಾಣಿ

ಕಬ್ಬಿಣ ಉಕ್ಕು ಬಾಗುತ್ತೆ ಬಳಲುತ್ತೆ
ಬಾಗುತ್ತೆ ಬಳಲುತ್ತೆ ಬಾಗುತ್ತೆ ಬಳಲುತ್ತೆ
ಕಬ್ಬಿಣ ಉಕ್ಕು ಬಾಗುತ್ತೆ ಬಳಲುತ್ತೆ
ಓ ನನ್ನ ರಾಣಿ

ತನ್ನಿರದಕ್ಕೆ ಬೆಳ್ಳಿ ಚಿನ್ನ
ಬೆಳ್ಳಿ ಚಿನ್ನ ಬೆಳ್ಳಿ ಚಿನ್ನ
ತನ್ನಿರದಕ್ಕೆ ಬೆಳ್ಳಿ ಚಿನ್ನ
ಓ ನನ್ನ ರಾಣಿ

ಬೆಳ್ಳಿ ಚಿನ್ನ ಕದ್ದೋಗುತ್ತೆ
ಕದ್ದೋಗುತ್ತೆ ಕದ್ದೋಗುತ್ತೆ
ಬೆಳ್ಳಿ ಚಿನ್ನ ಕದ್ದೋಗುತ್ತೆ
ಓ ನನ್ನ ರಾಣಿ

ಇರಲೊಬ್ಬ ಕಾವಲು ಇಡೀ ರಾತ್ರಿ
ಇಡೀ ರಾತ್ರಿ ಇಡೀ ರಾತ್ರಿ
ಇರಲೊಬ್ಬ ಕಾವಲು ಇಡೀ ರಾತ್ರಿ
ಓ ನನ್ನ ರಾಣಿ

ಒಂದ್ವೇಳೆ ಅವನಿಗೆ ನಿದ್ದೆಯು ಬಂದರೆ
ನಿದ್ದೆಯು ಬಂದರೆ ನಿದ್ದೆಯು ಬಂದರೆ
ಒಂದ್ವೇಳೆ ಅವನಿಗೆ ನಿದ್ದೆಯು ಬಂದರೆ
ಓ ನನ್ನ ರಾಣಿ

ಸೇದಲಿ ಅವನು ಪೈಪನು ಒಂದನು
ಸೇದಲಿ ಅವನು ಸೇದಲಿ ಅವನು
ಸೇದಲಿ ಅವನು ಪೈಪನು ಒಂದನು
ಓ ನನ್ನ ರಾಣಿ

2 ಬಾ ಬಾ ಕುರಿಮರಿ

ಬಾ ಬಾ ಕುರಿಮರಿ ಬಾ ಬಾ ಕುರಿಮರಿ
ತುಪ್ಪುಳವುಂಟೇ ನಿನ್ನ ಬಳಿ?
ಯಸ್ಸಾರ್, ಯಸ್ಸಾರ್ ಮೂರ್ ಚೀಲ ತುಂಬ
ಒಡೆಯರಿಗೊಂದು ಒಡತಿಗೆ ಒಂದು
ಇನ್ನೊಂದು ನಮ್ಮ ಬೀದಿಯ ಕೊನೆಗೆ
ಇರುವಂಥ ಒಬ್ಬ ಪುಟ್ಟುಡುಗನಿಗೆ!

3 ಹಶ್ಶಾ ಬುಶ್ಶಾ

ಗುಲಾಬಿ ಹೂಗಳ ಉಂಗುರ ಸುತ್ತಿ
ಮಲ್ಲಿಗೆ ಹೂಗಳ ಜೇಬಲಿ ಒತ್ತಿ
ಕುಣಿಯುವ ಕಾಲನು ಮೇಲಕ್ಕೆತ್ತಿ
ಹಶ್ಶಾ ಬುಶ್ಶಾ
ಇದೋ ಬಿದ್ದಿವಿ ನಾವುಗಳೆಲ್ಲಾ

ಎಂಥಾ ಚಂದದ ಎಳೆಹೂಬಿಸಿಲು
ಆಚೆಗೆ ಹೂವು ಈಚೆಗೆ ಹೂವು
ನೆಲದಿಂದಿನಿತು ಮೇಲಕೆ ಜಿಗಿದು
ಹಶ್ಶಾ ಬುಶ್ಶಾ
ಇದೋ ಬಿದ್ದಿವಿ ನಾವುಗಳೆಲ್ಲಾ

4 ಬಿಸಿ ಬಿಸಿ ಬನ್ಸು

ಯಾರಿಗೆ ಬೇಕು ಬಿಸಿ ಬಿಸಿ ಬನ್ಸು
ಯಾರಿಗೆ ಬೇಕು ಹೊಸ ಹೊಸ ಬನ್ಸು
ಮೂಗಿಗೆ ಪರಿಮಳ ಬಾಯಿಗೆ ಸ್ವಾದು
ಯಾರಿಗೆ ಬೇಕು ಸಿಹಿ ಸಿಹಿ ಬನ್ಸು

ರೂಪಾಯಿಗೊಂದು ಬಿಸಿ ಬಿಸಿ ಬನ್ಸು
ಎರಡು ರುಪಾಯಿಗೆ ಎರಡೆರಡು ಬನ್ಸು
ಆರುವ ಮೊದಲೇ ಕೊಳ್ಳಿರಿ ಬನ್ಸು
ಬದಲುವ ಮೊದಲೇ ನಿಮ್ಮಯ ಮನಸು

5 ಮರಿಮಲ್ಲಪ್ಪ ಸಾವ್ಕಾರ

ಮರಿಮಲ್ಲಪ್ಪ ಸಾವ್ಕಾರ
ಹುಟ್ಟಿದ್ನಪ್ಪ ಸೋಮ್ವಾರ

ಮಂಗಳವಾರ ನಾಮ್ಕಕರಣ
ಬುಧವಾರ ಆಯ್ತು ಪಾಣಿಗ್ರಹಣ

ಕಾಯಿಲೆಬಿದ್ದು ಗುರುವಾರ
ಉಲ್ಬಣಿಸಿತ್ತು ಶುಕ್ರವಾರ

ಪ್ರಾಣವ ಬಿಟ್ಟನು ಶನಿವಾರ
ಮಣ್ಣೊಳಗಾದನು ಭಾನ್ವಾರ

6 ಗೆಝಳಿ ಗೆಝಳಿ ಕರಡಿ

ಗೆಝಳಿ ಗೆಝಳಿ ಕರಡಿ
ಭೀಕರ ಹಾಗೂ ಬೃಹದಾಕಾರ
ಪಾಪನ ಹಿಡಿದು ಕುಡಿದಿದೆ ನೀರ
ಆದರೆ ಪಾಪಗೆ ಗೊತ್ತೇ ಇಲ್ಲ
ಕರಡಿ ತನ್ನನು ನುಂಗಿದ ವಿಚಾರ

7 ಪಿಪ್ಪಾ ಹೊಂಟಾಳೆ

ವರ್ಷ ತಲಪಿದೆ ವಸಂತಕಾಲ
ದಿವಸ ತಲಪಿದೆ ಪ್ರಾತಃಕಾಲ
ಮುಂಜಾವಿಗೆ ಇದು ಏಳರ ಹೊತ್ತು
ಬೆಟ್ಟದ ಬದಿಯಲಿ ಇಬ್ಬನಿ ಮುತ್ತು
ಹಕ್ಕಿ ಹಾರುತಿದೆ ಬಾನಿನ ಮೇಲೆ
ಬಸವನ ಹುಳವಿದೆ ಮುಳ್ಳಿನ ಮೇಲೆ
ದೇವನಿರುವನು ಸ್ವರ್ಗದಲಿ
ಎಲ್ಲಾ ಎಲ್ಲಿರಬೇಕೋ ಅಲ್ಲಿ
ಸರಿಯಾಗಿರುವುದು ಲೋಕದಲಿ!

8 ಉಪ್ಪಿನ ಕೊಳ್ಳದಲ್ಲಿ ಕಿವಿಗೆ ಬಿದ್ದದ್ದು

ನಿಂಫ್, ನಿಂಫ್, ಏನಿದು ನಿನ್ನ ಮಣಿಗಳು?

ಪಚ್ಚೆ ಗಾಜು, ಗುಮ್ಮ. ದಿಟ್ಟಿಸ್ತೀ ಯಾಕವನ್ನ?

ಕೊಡು ನನಗವನ್ನ.

ಇಲ್ಲ, ನಾನು ಕೊಡಲ್ಲ.

ಹಾಗಿದ್ರೆ ಇರುಳೆಲ್ಲಾ
ಹುಲ್ಲನೂದಿ ಹುಯ್ಯಲಿಡುವೆ,
ಕೆಸರಲಿ ಬಿದ್ದು ಅತ್ತುಕರೆವೆ
ಆ ನಿನ್ನ ಮಣಿಗಳಿಗೆ

ಗುಮ್ಮ, ನಿನಗೆ ಅವುಗಳೆಂದರೆ
ಯಾಕೆ ಅಷ್ಟೊಂದಿಷ್ಟ?

ಚಿಕ್ಕೆಗಳಿಂತಲು ಚಂದ, ನೀರಿಗಿಂತಲು ಅಂದ,
ಹಾಡುವ ದನಿಗಳಿಗಿಂತಲು ಮಂದ,
ಯಾವನೇ ಮನುಷ್ಯನ ಮಗಳಿಗಿಂತಲು
ಸುಂದರ, ನಿನ್ನ ಉಂಗುರ.

ಶ್ಶ್… ಕದ್ದು ತಂದೆ ನಾನವನ್ನ
ಮುದ್ದು ಚಂದ್ರನಿಂದ.

ಕೊಡು ನನಗೆ ಮಣಿಗಳ, ನಿನ್ನ ಕಣ್‌ಮಣಿಗಳ.

ಇಲ್ಲ, ನಾನು ಕೊಡಲ್ಲ.

ಆಳವಾದ ಹಳ್ಳದಲ್ಲಿ ಗೋಳಾಡುವೆ ನಾನು
ಪಚ್ಚೆ ಗಾಜಿನ ಮಣಿಗಳಿಗಾಗಿ, ಅವುಗಳ ಮೇಲಿನ ಪ್ರೀತಿಗಾಗಿ.
ಕೊಡು ನನಗವನ್ನ. ಕೊಟ್ಟುಬಿಡೇ ಅವನ್ನ.

ಇಲ್ಲ, ನಾನು ಕೊಡಲ್ಲ.

9 ಒಗಟು

ತಲೆಯುಂಟು ಕಣ್ಣಿಲ್ಲ
ಕಣ್ಣುಂಟು ತಲೆಯಿಲ್ಲ
ಯಾರಿಗೆ ತಲೆಯುಂಟು
ಯಾರಿಗೆ ಕಣ್ಣಿಲ್ಲ
ಯಾರಿಗೆ ಕಣ್ಣುಂಟು
ಯಾರಿಗೆ ತಲೆಯಿಲ್ಲ?

ದಾರಕೆ ಜೋತು ಬಿದ್ದವ ಬಲ್ಲ!

10 ಯಾರು?

ನಾನ್ ಯಾರಲ್ಲ ನೀನ್ ಯಾರ್ ಹೇಳು
ನೀ ಕೂಡ ಯಾರೂ ಅಲ್ವಾ?
ಸರಿ ಹಾಗಿದ್ದರೆ ನಾವೊಂದು ಜೋಡಿ!
ಯಾರಿಗು ಹೇಳೋದು ಬ್ಯಾಡ—
ಎಲ್ಲ ಕಡೆ ಟಾಂ ಟಾಂ ಮಾಡ್ಯಾರು

ಯಾರೋ ಒಬ್ಬ ಆಗಿರೊದೆಂದರೆ
ಎಷ್ಟೊಂದು ಬೇಸರ ಅಲ್ವಾ?
ಎಷ್ಟೊಂದು ಪಬ್ಲಿಕ್—ಕಪ್ಪೆಯ ಹಾಗೆ
ಇಡೀ ಮಳೆಗಾಲ ತಾನ್ಯಾರೆಂದು
ಹೆಸರೇಳ್ತ ಇರೋದು ಅಂದ್ರೆ
ಕೇಳುವ ಹಳ್ಳದ ಖುಷಿಗಾಗಿ
ಟ್ರೊಯ್ಯೋಂ ಟ್ರೊಯ್ಯೋಂ ಟ್ರೊಯ್ಯೋಂ

11 ಪುಟ್ಟಿ

ಪುಟ್ಟಿ ಪುಟ್ಟಿ ಎಲ್ಲಿಗೆ ಹೋಗಿದ್ದಿ?
ರಾಣಿಗೆ ಕೊಡಲು ಗುಲಾಬಿ ಆಯಲು ತೋಟಕೆ ಹೋಗಿದ್ದೆ
ಪುಟ್ಟಿ ಪುಟ್ಟಿ ನಿನಗೇನು ಕೊಟ್ಟಳು ಆ ನಿನ್ನ ರಾಣಿ ಎಂಬುವಳು?
ದೊಡ್ಡದೊಂದು ಡಯಮಂಡ್ ಕೊಟ್ಟಳು,
ನಾನಿತ್ತ ಹೂವಿನ ಶೂವಿಗಿಂತ್ಲು ದೊಡ್ಡದು!

12 ಮೂರು ಕುರುಡು ಇಲಿಗಳು

ಮೂರು ಕುರುಡು ಇಲಿಗಳು
ನೋಡಿ ಹೆಂಗೆ ಓಡ್ತವೆ
ಒಂದರ ಹಿಂದೆ ಒಂದರ ಹಾಗೆ
ಒಂದನ್ನೊಂದು ಹಿಡಕೊಂಡಿಗೆ
ನೋಡಿ ಹೆಂಗೆ ಓಡ್ತವೆ

ರೈತನ ಹೆಂಡ್ತಿಯ ಕಾಡ್ತವೆ
ಅವಳ ಹಿಂದೆ ಬೀಳ್ತವೆ
ರೈತನ ಹೆಂಡ್ತಿ ಕತ್ತರಿ ತೆಗೆದು
ಅವುಗಳ ಬಾಲವ ಕತ್ತರಿಸ್ತಾಳೆ
ನೆತ್ತರು ಸುರಿಸಿ ಇಲಿಗಳು
ನೋಡಿ ಹೆಂಗೆ ಓಡ್ತವೆ
ರೈತನ ಹೆಂಡ್ತಿಯ ಕಾಡ್ತವೆ

13 ಮಳೆಯೇ ಮಳೆಯೇ

ಮಳೆಯೇ ಮಳೆಯೇ ಹೋಗೆಲೆ ಮಳೆಯೇ
ನಮ್ಮಯ ಪುಟ್ಟನಿಗಾಡ್ಬೇಕಂತೆ
ನಾಳೆ ಬೇಕಾದರೆ ಬರುವಿಯಂತೆ
ಸಂತೆಯ ವೇಳೆಗೆ ಸುರಿಯುವಿಯಂತೆ

14 ಮೇರಿಯ ಕುರಿಮರಿ

ಮೇರಿಯ ಹತ್ತಿರ ಇತ್ತೊಂದು ಕುರಿಮರಿ
ಹಿಮದಂತೆ ಬಿಳಿಯಾಗಿತ್ತದರ ಮೈ
ಮೇರಿ ಹೋದಲ್ಲೆಲ್ಲಾ ಅದು ಸಹ
ಬೆನ್ನು ಬಿಡದೆ ಹಿಂಬಾಲಿಸುತಿತ್ತು

ಒಂದು ದಿನ ಅದು ಶಾಲೆಗು ಬಂತು
ಅದು ರೂಲಿಗೆ ವಿರುದ್ಧವಾಗಿತ್ತು
ಶಾಲೆಯಲೊಂದು ಕುರಿಮರಿ ಕಂಡು
ಮಕ್ಕಳು ನಕ್ಕು ಕುಣಿದಾಡಿದರು

ಮೇಷ್ಟರು ಅದನು ಹೊರ ಹಾಕಿದರು
ಆದರು ಅದು ಅಲ್ಲೇ ಸುಳಿದಾಡುತ
ಮೇರಿ ಬರುವನಕ
ತಾಳ್ಮೆಯಿಂದ ಕಾಯ್ದಿತು

ಮಕ್ಕಳು ಕೇಳಿದರಾತುರದಿಂದ: ಮೇರಿಯೆಂದ್ರೆಯಾಕದಕೆ
ಅಷ್ಟೊಂದು ಪ್ರೀತಿ?
ಮೇಷ್ಟರು ಅಂದರು: ಯಾಕೆಂದ್ರೆ ಮೇರಿಗೆ ಕುರಿಮರಿಯೆಂದರು
ಅಷ್ಟೊಂದು ಪ್ರೀತಿ

15 ಹಂಪ್ಟಿ ಡಂಪ್ಟಿ

ಹಂಪ್ಟಿ ಡಂಪ್ಟಿ ಗೋಡೆ ಮ್ಯಾಲೆ ಇತ್ರಿ
ಹಂಪ್ಟಿ ಅಲ್ಲಿಂದ ದೊಪ್ಪನೆ ಬಿತ್ರಿ
ಅರಸನ ಎಲ್ಲಾ ರಾವುತರು
ಲರಸನ ಎಲ್ಲಾ ಮಾವುತರು
ಎಷ್ಟೇ ಪ್ರಯತ್ನವ ಮಾಡಿದ್ರೂ
ಹಂಪ್ಟಿಯ ಜೋಡಿಸದಾದ್ರು

‍ಲೇಖಕರು Admin

March 5, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: