ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಓದಿನ ಸುಖ : ಪುಸ್ತಕವೆಂಬ ಸಖ…

ಕೆ ಎನ್ ಅಂಜನಾ

ನನಗೆ ಈ ಪುಸ್ತಕಗಳ ಮೇಲಿನ ಪ್ರೀತಿ ಯಾರಿಂದ ಶುರುವಾಯಿತು ಅಂತ ಯೋಚಿಸುತ್ತಿರುವಾಗ ನನ್ನ ಕಣ್ಣ ಮುಂದೆ ಶಾಲೆಗೆ ಹೋಗದ ನಮ್ಮಜ್ಜಿ, ಪೇಪರ್- ವಾರಪತ್ರಿಕೆಗಳನ್ನು ಓದುತ್ತಿದ್ದುದು, ಅವರ ಮಗಳು ನಮ್ಮಮ್ಮ ಓದುತ್ತಿದ್ದುದು, ಈಗಲೂ ದಿನಕ್ಕೆ ಐದಾರು ಪೇಪರ್ ತರಿಸಿ ಓದುವ ನಮ್ಮಣ್ಣ ಗೋಪಿ ಎಲ್ಲರೂ ಕಣ್ಣ ಮುಂದೆ ಬರುತ್ತಾರೆ. ನಮ್ಮಜ್ಜಿ ಕನ್ನಡಕವನ್ನು ಒರೆಸಿಕೊಂಡು ಯಾವುದಾದರೂ ವಾರಪತ್ರಿಕೆ ಹಿಡಿದು ಕೂತರೆಂದರೆ ಗಂಟಗಟ್ಟಲೆ ಓದುತ್ತಿದ್ದರು. ಬರೀ ಕಥೆ, ಧಾರಾವಾಹಿ ಮಾತ್ರ ಓದುತ್ತಿರಲಿಲ್ಲ. ಅದರಲ್ಲಿ ಬರುವ ಕೃಷಿಗೆ ಸಂಬಂಧಿಸಿದ್ದಾಗಲಿ, ಪ್ರವಾಸ ಕಥನವಾಗಲಿ, ಕಲೆಗಳ ಬಗ್ಗೆಯಾಗಲಿ ಎಲ್ಲವನ್ನೂ ಓದುತ್ತಿದ್ದರು. ನಮ್ಮಮ್ಮನೂ ಹಾಗೆ, ಗ್ಲಾಕೊಮಾದಿಂದ ಒಂದು ಕಣ್ಣಿನ ದೃಷ್ಟಿ ಹೋದರೂ ಇನ್ನೊಂದರಿಂದ ಓದುತ್ತಿದ್ದಳು, ಅಷ್ಟು ಆಸೆ ಓದುವುದಕ್ಕೆ.

ನಾನು ಮೂರನೇ ಕ್ಲಾಸಿನಲ್ಲಿದ್ದಾಗ ನನ್ನ ಓದು ಶುರುವಾಯಿತು. ಮನೆಗೆ ಚಂದಮಾಮ, ಬಾಲಮಿತ್ರ ತರಿಸುತ್ತಿದ್ದರು. ಅದನ್ನು ಓದುವುದೆಂದರೆ ಖುಷಿ. ಬೇಗನೆ ಓದಿ ಮುಗಿಸಿಬಿಡುತ್ತಿದ್ದೆ. ಇಷ್ಟು ಬೇಗ ಮುಗಿದು ಹೋಯಿತಲ್ಲಾ ಅನಿಸಿ ಬೇಸರವಾಗೋದು. ಮತ್ತೆ ಹೊಸದಕ್ಕೆ ಕಾಯಬೇಕಿತ್ತು. ನಾನು ನಾಲ್ಕನೇ ಕ್ಲಾಸಿನಲ್ಲಿದ್ದಾಗ ಚಾಮರಾಜನಗರದ ದೇವಾಂಗ ಬೀದಿಯಲ್ಲಿ ಮಾನಸ ಲೈಬ್ರರಿ ಶುರುವಾಯಿತು. ಆ ಲೈಬ್ರರಿಯನ್ನು ನೋಡಿದಾಗ ನನ್ನ ಸಂತೋಷಕ್ಕೆ ಪಾರವೇ ಇಲ್ಲ. ಆದರೆ ಪುಸ್ತಕ ಬಾಡಿಗೆಗೆ ತರುವುದಕ್ಕೆ ದುಡ್ಡು ಬೇಕಲ್ಲ? ಅಲ್ಲಿರುವ ಕಾಮಿಕ್ಸ್ ಗಳನ್ನೆಲ್ಲಾ ತಂದು ಓದುವುಕ್ಕೆ ದುಡ್ಡು ಕೊಡುತ್ತಿರಲಿಲ್ಲ. ಅದಕ್ಕಾಗಿ ನಮ್ಮ ಬಾಡಿಗೆ ಮನೆಯ ಓನರ್‌ನ ಬಟ್ಟೆಗಳನ್ನು ಇಸ್ತ್ರಿ ಮಾಡಿಸಿ ತಂದುಕೊಡುವುದು, ಅವರು ತಿಂಡಿಗೆ-ಊಟಕ್ಕೆ ಹೋದಾಗ ಅವರ ಅಂಗಡಿ ಕಾದರೆ ನನಗೆ ನಾಲ್ಕಾಣೆ, ಎಂಟಾಣೆ ಕೊಡುತ್ತಿದ್ದರು! ಅದರಿಂದಲೇ ನಾನು ಕಾಮಿಕ್ಸ್ ಗಳನ್ನು ತಂದು ಓದುತ್ತಿದ್ದೆ. ಅಮರ ಚಿತ್ರಕಥಾ, ರಾಮಾಯಣ, ಮಹಾಭಾರತ, ದಿನಕ್ಕೊಂದು ಕಥೆ ಹೀಗೆ. ಫ್ಯಾಂಟಮ್, ಮಾಂಡ್ರೆಕ್ ನನ್ನ ಬಾಲ್ಯದ ಹೀರೊಗಳು. ಆಗ ನಮ್ಮ ಮನೆಯಲ್ಲಿ ಟಿ.ವಿ. ಇರಲಿಲ್ಲ, ಹಾಗಾಗಿ ಇವರೇ ನನ್ನ ಕಲ್ಪನಾ ಲೋಕದ ಹೀರೋಗಳು. ಈಗಿನ ಮಕ್ಕಳಿಗೆ ಚೋಟಾಭೀಮ್ ಇದ್ದ ಹಾಗೆ.

ಒಂದು ಸಲ ನಮ್ಮ ಮನೆ ಓನರ್ ತಮ್ಮ ಚಿಲ್ಲರೆ ಅಂಗಡಿಗೆ ಪೊಟ್ಟಣ ಕಟ್ಟುವುದಕ್ಕೆ ಅಂತ ಹಳೆಯ ಬಾಲಮಿತ್ರ, ಚಂದಮಾಮ ತರಿಸಿದ್ದರು.ಅದರಲ್ಲಿ ಒಂದ್ಹತ್ತು ಪುಸ್ತಕ ಎತ್ತಿ ಇರಿಸಿಕೊಂಡಿದ್ದೆ. ಆದರೆ ಅದೇ ಸಮಯಕ್ಕೆ ನಾನು ಬೇಸಿಗೆ ರಜೆಗೆಂದು ಬೆಂಗಳೂರಿನಲ್ಲಿರುವ ನಮ್ಮ ಚಿಕ್ಕಮ್ಮನ ಮನೆಗೆ ಹೊರಡುವುದಿತ್ತು. ಬೆಂಗಳೂರಿಗೆ ಹೋಗುವ ಆಸೆ, ಚಂದಮಾಮ-ಬಾಲಮಿತ್ರದ ಮೇಲೂ ಆಸೆ. ಇದನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುತ್ತೇನೆ ಅಂದರೆ ಓನರ್‍ ಒಪ್ಪಲಿಲ್ಲ. ಹೀಗಾಗಿ ಪುಸ್ತಕವಿಲ್ಲದೇ ಬೆಂಗಳೂರಿಗೆ ಹೋಗಬೇಕಾಯಿತು. ಬೆಂಗಳೂರಿಗೆ ಹೋದ ನಾನು ರಜೆ ಮುಗಿಸಿ, ವಾಪಸ್‍ ನಗರಕ್ಕೆ ಬಂದಾಗ, ಮೊದಲು ಓಡಿದ್ದೇ ಓನರ್ ಮನೆಗೆ! ಪುಸ್ತಕ ಇದೆಯಾ ಅಂತ ನೋಡುವುದಕ್ಕೆ. ಹೋಗಿ ಹುಡುಕಿದರೆ ಅದೆಲ್ಲಿದೆ? ಹರಿದು ಪೊಟ್ಟಣವಾಗಿಬಿಟ್ಟಿತ್ತು. ಅಳು ಬಂದು ಎಷ್ಟು ಅತ್ತಿದ್ದೀನೋ? ಅಮ್ಮ ಬೈದ ಮೇಲೇ ಸುಮ್ಮನಾಗಿದ್ದು.

ನಮ್ಮ ಮನೆಗೆ ಸುಧಾ ವಾರಪತ್ರಿಕೆ ತರುತ್ತಿದ್ದರು. ನಮ್ಮ ದೊಡ್ಡಮ್ಮನ ಮಗ ಚಕ್ರಪಾಣಿ (ಗುಂಡಣ್ಣ) ತರಂಗ ವಾರಪತ್ರಿಕೆ ತರುತ್ತಿದ್ದ. ನಮ್ಮದು ವಠಾರದ ಮನೆ. ಹಾಗಾಗಿ ಅವರೂ ಪಕ್ಕದ ಮನೆಯಲ್ಲೇ ಇರುತ್ತಿದ್ದರು. ತರಂಗ ಬಂದ ದಿನ ಓಡಿಹೋಗಿ ಎತ್ತಿಕೊಂಡುಬಿಡುತ್ತಿದ್ದೆ. ನಮ್ಮಣ್ಣ, ನಾನಿನ್ನೂ ಓದಿಲ್ಲ ಆಗಲೇ ಬಂದ್ಯಾ ಅಂತ ಗದರುತ್ತಿದ್ದ. ನಮ್ಮಮ್ಮ ಲೈಬ್ರರಿಯಿಂದ ಪ್ರಜಾಮತ, ಮಂಗಳ ತರಿಸುತ್ತಿದ್ದರು. ಅಣ್ಣನಿಗೆ ರಾಜಕೀಯದ ಬಗ್ಗೆ ಆಸಕ್ತಿ ಹಾಗಾಗಿ ವೈಕುಂಠರಾಜು ಅವರ ವಾರಪತ್ರಿಕೆ ತರಿಸುತ್ತಿದ್ದ. ಹೀಗೆ ಎಲ್ಲವನ್ನೂ ಓದುವುದು! ಆಗ ನಾನು ಹೈಸ್ಕೂಲಲ್ಲಿದ್ದೆ. ನಮಗೆ ಧಾರಾವಾಹಿ ಓದುವುದಕ್ಕೆ ಪರ್ಮಿಷನ್ ಇರಲಿಲ್ಲ.

ಕಾಲೇಜಿಗೆ ಬಂದಮೇಲೆ ಓದಬೇಕು ಅನ್ನುತ್ತಿದ್ದರು. ಹಾಗಾಗಿ ಕದ್ದುಮುಚ್ಚಿ ಧಾರಾವಾಹಿ ಓದುತ್ತಿದ್ದೆ. ಈ ರೀತಿ ಕದ್ದು ಓದುವಾಗ ನಮ್ಮ ಗುಂಡಣ್ಣನ ಕೈಲಿ ಸಿಕ್ಕಿಬಿದ್ದೆ. ಗದರಿದ, ನಾನು ಅಮ್ಮನಿಗೆ ಹೇಳಬೇಡ ಎಂದು ಬೇಡಿದೆ, ಸದ್ಯ ಅವನು ಹೇಳಲಿಲ್ಲ. ಹೇಳಿದ್ದರೆ ಸರಿಯಾದ ಪೆಟ್ಟು ಬೀಳುತಿತ್ತು. ಅವನಿಗೆ ಕಾಣಬಾರದಂತೆ ಓದಬೇಕು ಅಂತ ನಮ್ಮ ವಠಾರದ ಹಿತ್ತಲಿನಲ್ಲಿ ಇದ್ದ ಸೀಬೆ ಮರದ ಮೇಲೆ ಕೂತುಕೊಂಡು ಇಲ್ಲವೆ ಮರ ಹತ್ತಿ ಅಲ್ಲಿಂದ ನಮ್ಮ ಮನೆ ಹೆಂಚಿನ ಮೇಲೆ ಹೋಗಿ, ಅಲ್ಲಿ ಸೈಡಲ್ಲಿ ಕಟ್ಟಿದ್ದ ಸಿಮೆಂಟ್ ಕಟ್ಟೆಯ ಮೇಲೆ ಕೂತು ಧಾರಾವಾಹಿ ಓದುತ್ತಿದ್ದೆ! ಈ ಪರಿ ಒದ್ದಾಡುತ್ತಾ ಓದಿದ್ದೇನೆ.

ಮುಂದೆ ಕಾಲೇಜಿಗೆ ಬಂದಮೇಲೆ ಕಾದಂಬರಿ ಓದುವುದಕ್ಕೆ ಅನುಮತಿ ದೊರೆಯಿತು. ರಜೆ ಬಂತೆಂದರೆ ಖುಷಿ, ಲೈಬ್ರರಿಗೆ ಹೋಗಿ ಕಾದಂಬರಿ ತಂದು ಓದಬಹುದಲ್ಲ ಎಂದು. ತಿಂಡಿ ತಿನ್ನುವಾಗಲೂ, ಊಟ ಮಾಡುವಾಗಲೂ ಓದುವುದು. ಮನೆಕೆಲಸ ಮಾತ್ರವಲ್ಲದೇ, ನಮ್ಮ ಕ್ಯಾಂಟೀನ್ಗೆ ಹಿಟ್ಟು ರುಬ್ಬಿಕೊಡುವುದು, ತರಕಾರಿ ಹೆಚ್ಚಿಕೊಡುವುದು ಇತ್ಯಾದಿ ಕೆಲಸ ಮುಗಿಸಿ ಓದಬೇಕಿತ್ತು. ಸಾಯಿಸುತೆ, ಎಚ್.ಜಿ.ರಾಧಾದೇವಿ, ಉಷಾನವರತ್ನರಾಮ್‍ರವರ ಕಾದಂಬರಿಗಳನ್ನು ಹಾಗೂ ಬಿ.ವಿ. ಅನಂತರಾಮ್‍ ಅವರ ಪತ್ತೆದಾರಿ (ಮಹೇಶ್, ಜಿಂಕೆ ಕೆ 7!) ಕಾದಂಬರಿಗಳನ್ನು ಓದುತಿದ್ದೆ. ಆಮೇಲಾಮೇಲೆ ಇವೆಲ್ಲದರ ಕತೆಗಳು ಏಕಾತಾನತೆಯಾಗಿಬಿಟ್ಟಿತು. ಹೊಸದೇನಾದರೂ ಓದಬೇಕು ಅಂತ ಅನಿಸುತ್ತಿತ್ತು. ಆದರೆ ಆ ಲೈಬ್ರರಿಯಲ್ಲಿ ಅಂತಹ ಕಾದಂಬರಿಗಳೇ ಹೆಚ್ಚು ಇದ್ದದ್ದು.

ಆಮೇಲೆ ಗವರ್ನಮೆಂಟ್ ಲೈಬ್ರರಿಗೆ ಮೆಂಬರ್ ಆದೆ. ಅಲ್ಲಿ ನನಗೆ ಸಾಹಿತ್ಯದ ಬೇರೆ ಮಜಲು ಸಿಕ್ಕಿತು. ಮೊದಲು ಪೂರ್ಣಚಂದ್ರ ತೇಜಸ್ವಿಯವರ ‘ಕಿರಗೂರಿನ ಗಯ್ಯಾಳಿಗಳು’ ಪುಸ್ತಕ ಓದಿದೆ. ಅದು ಎಷ್ಟು ಇಷ್ಟ ಆಯಿತೆಂದರೆ ತೇಜಸ್ವಿಯವರ ಫ್ಯಾನ್ ಆಗಿಬಿಟ್ಟೆ. ನಂತರ ಕರ್ವಾಲೊ, ಜುಗಾರಿಕ್ರಾಸ್ ಓದಿದೆ. ಆಗಲೇ ಬನಶಂಕರ ಆರಾಧ್ಯರು ಪರಿಚಯವಾಗಿದ್ದು. ಟೈಪಿಂಗ್ ಇನ್ಸ್ಟಿಟ್ಯೂಟ್ ನಿಂದ ಉತ್ತರ ಕರ್ನಾಟಕಕ್ಕೆ ಐದು ದಿನಗಳ ಟೂರ್ ಏರ್ಪಡಿಸಿದ್ದರು.

ಮ್ಯಾಕ್ಸಿಕ್ಯಾಬ್ ನ ಮುಂದಿನ ಸೀಟಿನಲ್ಲಿ ಕುಳಿತು ನಾನು ಎ.ಎನ್.ಮೂರ್ತಿರಾಯರ ದೇವರು ಕೃತಿ ಓದುತ್ತಿದ್ದೆ. ಅದನ್ನು ನೋಡಿದ ಬನಶಂಕರ ಆರಾಧ್ಯ ನನ್ನನ್ನು ಮಾತನಾಡಿಸುವುದಕ್ಕೆ ಬಂದರು, ಅವರಿಗೂ ಓದುವ ರುಚಿ ಇತ್ತಲ್ಲ. ಓ ನೀವು ಮೂರ್ತಿರಾಯರ ದೇವರು ಪುಸ್ತಕ ಓದ್ತಿದೀರಾ? ಎಂದು ಆಶ್ಚರ್ಯಪಟ್ಟರು. (ಹುಡುಗಿಯರು ಇಂತಹ ಪುಸ್ತಕಗಳನ್ನು ಓದುವುದಿಲ್ಲ ಎಂಬ ಪೂರ್ವಗ್ರಹ ಪೀಡಿತ ಭಾವನೆ ಅವರ ಮುಖದಲ್ಲಿತ್ತು!) ಸೀಟಿನ ಪಕ್ಕ ಬಂದು ಕುಳಿತರು. ಪುಸ್ತಕಗಳ ಬಗ್ಗೆ ಮಾತುಕತೆ ನಡೆಯಿತು. ಯಾವ ಯಾವ ಪುಸ್ತಕ ಓದಿದ್ದೇವೆ ಎಂದು ಚರ್ಚೆಯಾಯಿತು.

ಅನಂತರ ಇದೇ ಪರಿಚಯ ಬೆಳೆದು ಬೇರೆ ಸಾಹಿತಿಗಳ ಕೃತಿಗಳನ್ನು ತಂದು ಕೊಡುತ್ತಿದ್ದರು. ಶಿವರಾಮಕಾರಂತರ ಚೋಮನದುಡಿ, ಬೆಟ್ಟದಜೀವ, ಮೂಕಜ್ಜಿಯ ಕನಸುಗಳು, ಮರಳಿ ಮಣ್ಣಿಗೆ. ತೇಜಸ್ವಿಯವರ ಚಿದಂಬರ ರಹಸ್ಯ, ರುಗ್ರಪ್ರಯಾಗದ ಭಯಾನಕ ನರಭಕ್ಷಕ, ಅನಂತಮೂರ್ತಿಯವರ ಸಂಸ್ಕಾರ, ಭೈರಪ್ಪನವರ ವಂಶವೃಕ್ಷ, ಸಾಕ್ಷಿ, ನಾಯಿನೆರಳು. ಚದುರಂಗರವರ ವೈಶಾಖ, ಹೀಗೆ ಸಾಕಷ್ಟು ಕಾದಂಬರಿ ಓದಿದೆ.

ಭೈರಪ್ಪನವರ ಪರ್ವ ಕಾದಂಬರಿಯನ್ನು ಇಬ್ಬರೂ ಶೇರ್‍ ಮಾಡಿಕೊಂಡು ಓದಿದೆವು. ನಾನೊಂದು ದಿನ ಓದುವುದು ಅವರೊಂದು ದಿನ ಓದುವುದು ಹೀಗೆ. ಇಬ್ಬರೂ ಒಬ್ಬರಿಗೊಬ್ಬರು ಚದುರಂಗರವರ ಹೆಜ್ಜಾಲ ಕಾದಂಬರಿಯನ್ನು ಪರಸ್ಪರ ಗಿಫ್ಟ್ ಆಗಿ ಕೊಟ್ಟುಕೊಂಡಿದ್ದೇವೆ. ಈಗಲೂ ಅವೆರೆಡೂ ಇದೆ. ಅವರು ತಗೊಂಡಿದ್ದು ನನಗೆ ಗೊತ್ತಿಲ್ಲ, ನಾ ತಗೊಂಡಿದ್ದು ಅವರಿಗೆ ಗೊತ್ತಿಲ್ಲ. ನಗುಬರುತ್ತದೆ, ಬೇರೆ ಯಾವುದಾದರೂ ಕೊಟ್ಟಿದ್ದರೆ ಇನ್ನೊಂದು ಬೇರೆ ಪುಸ್ತಕ ಇರುತ್ತಿತ್ತಲ್ಲ ಅಂತ.

ಜೋಗಿಯವರ ರವಿ ಕಾಣದ್ದು ಅಂಕಣವನ್ನು ಪ್ರತಿವಾರ ಇಬ್ಬರೂ ಓದಿ ಚರ್ಚಿಸುತ್ತಿದ್ದೆವು. ಯಾರಿವರು ಇಷ್ಟು ಚೆನ್ನಾಗಿ ಬರೀತಾರಲ್ಲ ಅಂತ ಮಾತನಾಡಿಕೊಳ್ಳುತ್ತಿದ್ದೆವು.

ಮುಂದೆ ನಮ್ಮ ಕಡಿಮೆ ಬಜೆಟ್‍ಗೆ ಅನುಗುಣವಾಗಿ ಪುಸ್ತಕ ಮೇಳ, ಮೈಸೂರಲ್ಲಿ ಪುಸ್ತಕ ಕೊಂಡಿದ್ದಕ್ಕೆ ನಮ್ಮಲ್ಲೂ ಒಂದಷ್ಟು ಪುಸ್ತಕ ಸೇರಿದೆ. ನಾನು ಪ್ರೆಗ್ನಂಟ್ ಇದ್ದಾಗ, ಕುವೆಂಪುರವರ ಮಲೆಗಳಲ್ಲಿ ಮದುಮಗಳು, ಕಾನೂರು ಹೆಗ್ಗಡತಿ ಕಾದಂಬರಿ ಓದಿದ್ದು. ಮೊದಲು, ಮಲೆಗಳಲ್ಲಿ ಮದುಮಗಳು ಓದಿದೆ. ಅದರಲ್ಲಿ ಬರುವ ಮಲೆನಾಡ ವರ್ಣನೆ, ಸನ್ನಿವೇಶಗಳು ಮನಕೆ ಮುದಕೊಟ್ಟಿತು. ಆಮೇಲೆ ಕಾನೂರು ಹೆಗ್ಗಡತಿ ಕಾದಂಬರಿ ಓದಿದ್ದು. ಅದನ್ನು ಓದುತ್ತಾ, ಓದುತ್ತಾ ಅದರ ಕಥಾ ವಿಸ್ತಾರಕ್ಕೆ ಬೆರಗಾಗಿಬಿಟ್ಟೆ. ಸುಬ್ಬಮ್ಮನ ಪಾತ್ರ ನನ್ನನ್ನು ಸುಮಾರು ದಿವಸ ಕಾಡಿಬಿಟ್ಟಿತು, ಕಾದಂಬರಿಯ ಗುಂಗಿನಲ್ಲೇ ಇದ್ದೆ. ಅದೇ ರೀತಿ ಖಾಂಡೇಕರ್ ರವರ ಯಯಾತಿಯೂ ಅಷ್ಟೇ ರೀತಿಯಲ್ಲಿ ನಮ್ಮನ್ನು ಆವರಿಸಿಕೊಳ್ಳುತ್ತದೆ. ಇತ್ತೀಚೆಗೆ ಅಂದರೆ ಒಂದೈದು ವರ್ಷದ ಕೆಳಗೆ ಓದಿದ ಕೆ.ವಿ.ಅಯ್ಯರ್ ರವರ ರೂಪದರ್ಶಿ ಕಾದಂಬರಿ ಮನಮಿಡಿಯುವ ಕಥೆಯಾಗಿದೆ. ನಾನು ಓದುತ್ತಿದ್ದರೆ ನನ್ನ ಮಗಳು ಅದರ ಕಥೆ ಹೇಳು ಅನ್ನುತ್ತಿದ್ದಳು. ಅವಳು ಆಗ ಎಂಟನೆಯ ಕ್ಲಾಸಿನಲ್ಲಿದ್ದಳು. ಅವಳಿಗೆ ಹೋಂವರ್ಕ್, ಪ್ರಾಜೆಕ್ಟ್ ಇರುತ್ತಿದ್ದರಿಂದ ನನ್ನ ಹತ್ತಿರವೆ ಕಥೆ ಕೇಳುತ್ತಿದ್ದಳು. ಆ ಕಥೆ ಹೇಳುವಾಗಲೆಲ್ಲ ಎಷ್ಟು ಸಲ ಅತ್ತಿದ್ದಾಳೋ?! ಕೊನೆ ಭಾಗ ಓದಿ ನನ್ನ ಕಣ್ಣಾಲಿಯೂ ತುಂಬಿತ್ತು.

ಬದುಕಿನ ಜಂಜಾಟದಲ್ಲಿ, ಮನೆ ಕೆಲಸವೆಂಬ ಏಕತಾನತೆಯಲ್ಲಿ ನನಗೆ ರಿಲ್ಯಾಕ್ಸ್ ಕೊಟ್ಟಿದ್ದು ಈ ನನ್ನ ಓದು. ಅಮ್ಮನನ್ನು ಕಳೆದುಕೊಂಡು ನೋವಿನಲ್ಲಿರುವಾಗ ನನಗೆ ಔಷಧಿಯಾಗಿ ಬಂದದ್ದು ಈ ಪುಸ್ತಕಗಳು.
ಈ ರೀತಿ ನನ್ನ ಓದು ಮುಂದುವರೆದಿದೆ. ಈಗ ವಸುಧೇಂದ್ರ ಅವರ ತೇಜೋ-ತುಂಗಭದ್ರಾ ಓದುತ್ತಿದ್ದೇನೆ. ಓದುತ್ತಿದ್ದರೆ ಹಿಡಿದು ಹಾಗೆ ಓದುತ್ತಾ ಕೂತುಬಿಡಬೇಕು ಅನಿಸುತ್ತದೆ. ಏನು ಮಾಡುವುದು ಜವಾಬ್ದಾರಿಗಳಿರುತ್ತದೆಯಲ್ಲಾ, ಅದನ್ನೆಲ್ಲಾ ಮುಗಿಸಿಯೇ ಕೂರಬೇಕು.

ಮೊದಲಿನಂತೆ ರಾತ್ರಿ ಒಂದು ಗಂಟೆಯವರೆಗೆ ಓದುವುದಕ್ಕೆ ಆಗುವುದಿಲ್ಲ, ಹಾಗಾಗಿ ನಿಧಾನವಾಗುತ್ತಿದೆ. ಅದ್ಭುತವಾದ ಕಾದಂಬರಿ. ಐತಿಹಾಸಿಕ ಕಾಲದಲ್ಲಿ, ಎರಡು ದೇಶಗಳಲ್ಲಿ ನಡೆಯುವ ಕಥೆ. ಪುಸ್ತಕ ಹಿಡಿದರೆ ಹಾಗೆ ಓದಿಸಿಕೊಂಡು ಹೋಗುತ್ತದೆ. ನಾ ಇದನ್ನು ಓದುತ್ತಿದ್ದರೆ ನನ್ನ ಮಗಳಿಗೆ ಏನೊ ಒಂಥರಾ ಹೊಟ್ಟೆಕಿಚ್ಚು. ತಾನು ಓದುವುದಕ್ಕೆ ಆಗುತ್ತಿಲ್ಲವಲ್ಲ ಅಂತ. ಅವಳಿಗೆ ಎಕ್ಸಾಮ್ ನಡೆಯುತ್ತಿರುವುದರಿಂದ ಇದನ್ನು ಪಕ್ಕಕಿಟ್ಟಿದ್ದಾಳೆ. ಈಗೀಗ ನಾ ಏನೇ ಓದಿದರೂ ನನ್ನ ಮಗಳ ಜೊತೆ ಆ ವಿಷಯದ ಬಗ್ಗೆ ಮಾತನಾಡುತ್ತೇನೆ. ಅವಳೂ ಕೇಳುತ್ತಾಳೆ, ಓದಿದ್ದರೆ ಅವಳೂ ಅದರ ಬಗ್ಗೆ ಮಾತನಾಡುತ್ತಾಳೆ. ನೆನ್ನೆ ಎಕ್ಸಾಮ್ ಮುಗಿಸಿ ಬಂದವಳ ಜೊತೆ, ಸುಧಾದಲ್ಲಿ ಬಂದ ರಹಮತ್ ತರೀಕೆರೆಯವರ ‘ಶರಾವತಿ ಕೊಳ್ಳದಲ್ಲಿ ಸಂಬಂಜಗಳ ಹುಡುಕಾಟ’ ಲೇಖನ ಓದಿದೆ, ಖುಷಿಪಟ್ಟಳು.

ಈಗ ಬರೆಯುತ್ತಿರುವ ಲೇಖಕರಲ್ಲಿ ಜೋಗಿ, ವಸುಧೇಂದ್ರ, ಎ. ಆರ್. ಮಣಿಕಾಂತ್, ರಹಮತ್ ತರೀಕೆರೆ, ಗಣೇಶಯ್ಯ, ಅವರ ಬರೆಹಗಳು, ಪುಸ್ತಕಗಳು ಇಷ್ಟ. ಇವರು ನಾನು ಓದಿದ ಬರೆಹಗಾರರು. ಇನ್ನೂ ಅನೇಕ ಲೇಖಕರ ಪುಸ್ತಕಗಳನ್ನು ಓದಿಲ್ಲ. ಓದಬೇಕು..

ಬೇಸರದ ವಿಷಯವೆಂದರೆ, ನನ್ನ ಗಂಡ ಇತ್ತೀಚೆಗೆ ಓದುವುದನ್ನು ಕಡಿಮೆ ಮಾಡಿದ್ದಾರೆ. ಆ ಜಾಗವನ್ನು ಈಗ ಮೊಬೈಲ್ ಫೋನ್‍ ಆಕ್ರಮಿಸಿದೆ. ಮೊದಲು ಕೆಲಸ ಮುಗಿದ ಮೇಲೆ ಪೇಪರ್, ಭಾನುವಾರ ಬರುವ ಸಾಪ್ತಾಹಿಕಗಳನ್ನು, ಕಥೆಗಳನ್ನು ಓದುತ್ತಿದ್ದರು. ಈಗ ತುಂಬಾ ಅಂದರೆ ತುಂಬಾ ಕಡಿಮೆ ಆಗಿದೆ. ತೆವಳುತ್ತಾ ಸಾಗಿದೆ ಅಂದರೂ ತಪ್ಪಿಲ್ಲ. ಮನೆಗೆ ತರುವ ವಾರಪತ್ರಿಕೆ, ಮಾಸಪತ್ರಿಕೆಗಳನ್ನು ನಾನು ನನ್ನ ಮಗಳು ಮಾತ್ರ ಓದುವುದು.

ನಾನು ಓದಬೇಕಿರುವುದು ಇನ್ನು ಬೆಟ್ಟದಷ್ಟಿದೆ. ಎಲ್ಲವನ್ನೂ ಓದಬೇಕು ಎಂಬ ಅದಮ್ಯ ಆಸೆ. ನನ್ನ ಗಂಡ ತಮಾಷೆ ಮಾಡುತ್ತಾರೆ, ಬರೀ ಓದುವುದೇ ಆಯ್ತು, ಏನೊಂದೂ ಬರೆದಿಲ್ಲವಲ್ಲ ಅಂತ. ಆದರೆ ಓದುವ ಸುಖ ಬಲ್ಲವನೇ ಬಲ್ಲ.

‍ಲೇಖಕರು Admin

5 June, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading