ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೆ ಆರ್ ಉಮಾದೇವಿ ಉರಾಳ ಓದಿದ ‘ಕಡಲ್ಗಳ್ಳರ ಸರಹದ್ದಿನಲ್ಲಿ’


ಕೆ ಆರ್ ಉಮಾದೇವಿ ಉರಾಳ

ಕತೆಗಾರ್ತಿ ಪ್ರಬಂಧಕಾರರಾಗಿ ಗೀತಾ ಕುಂದಾಪುರರವರ ಹೆಸರು ಕನ್ನಡದ ಓದುಗರಿಗೆ ಈಗ ಸುಪರಿಚಿತ. ಕನ್ನಡದ ಎಲ್ಲಾ ಪತ್ರಿಕೆ ಸಂಚಿಕೆಗಳಲ್ಲೂ ಇವರ ವೈವಿಧ್ಯಮಯವಾದ ವಿಷಯಗಳ ಕತೆಗಳು, ಪ್ರಬಂಧಗಳು, ಲೇಖನಗಳು, ಪ್ರವಾಸಕಥನಗಳು ಮೇಲಿಂದಮೇಲೆ ಪ್ರಕಟವಾಗುತ್ತಾ ಓದುಗರ ಮೆಚ್ಚುಗೆಗೆ ಪಾತ್ರವಾಗಿವೆ. ಇವರ ಕಥಾ ಸಂಕಲನಗಳೂ ಪ್ರಕಟವಾಗಿವೆ.

ಬರಹದ ಲೋಕವನ್ನು ಸ್ವಲ್ಪ ತಡವಾಗಿ ಪ್ರವೇಶಿಸಿದರೂ ತಮ್ಮ ಸೃಜನಶೀಲತೆಯ ರಚನೆಗಳಿಂದ ಓದುಗರನ್ನು ವಿಸ್ಮಯಗೊಳಿಸಿದ್ದಾರೆಂದರೂ ಅತಿಶಯೋಕ್ತಿಯಲ್ಲ. ಇವರ ಎರಡನೆಯ ಪ್ರವಾಸ ಕಥನ “ಕಡಲ್ಗಳ್ಳರ ಸರಹದ್ದಿನಲ್ಲಿ”. ಇದು ರಷ್ಯಾ ಮತ್ತು ಸ್ಕಾಂಡಿನೇವಿಯಾ ದೇಶಗಳ (ಫಿನ್ಲ್ಯಾಂಡ್, ಸ್ವೀಡನ್, ನಾರ್ವೆ, ಡೆನ್ಮಾರ್ಕ್) ಕುರಿತ ಪ್ರವಾಸ ಕಥನ.

ಸ್ವಲ್ಪ ವಿಚಿತ್ರವೆನ್ನಿಸುವ ಶೀರ್ಷಿಕೆ ಕುರಿತು ಲೇಖಕಿ ಈ ಐದೂ ದೇಶಗಳ ಇತಿಹಾಸ ರೂಪಿಸಿದವರು ಕಡಲ್ಗಳ್ಳರು ಎಂಬ ತಮ್ಮ ಸಮರ್ಥನೆಯನ್ನು ಪ್ರಾರಂಭದ ಲೇಖಕಿಯ ‘ಮನದಾಳದ ಮಾತಿ’ನಲ್ಲೇ ನೀಡಿದ್ದಾರೆ. ಲೇಖಕಿ ರಷ್ಯಾ ದೇಶದ ಪ್ರವಾಸದಲ್ಲಿ ರಾಜಧಾನಿ ಮಾಸ್ಕೋ ಮತ್ತು ಮಹಾನಗರ ಸೈಂಟ್ ಪೀಟರ್ಸ್ ಬರ್ಗ್ ನ ಐತಿಹಾಸಿಕ ಮಹತ್ವ, ವೈಶಿಷ್ಟ್ಯಮಯ ವಾಸ್ತುಶಿಲ್ಪದ ಭವ್ಯ ನಿರ್ಮಾಣಗಳು, ಸ್ಮಾರಕಗಳು, ಇವು ಐತಿಹಾಸಿಕ ಕಾಲದಿಂದ ಆಧುನಿಕ ಕಾಲದವರೆಗೂ ದೇಶದ ಆಡಳಿತ ವ್ಯವಸ್ಥೆಯಲ್ಲಿ ಹಾದು ಬಂದ ದಾರಿ, ಕೆಥೆಡ್ರಲ್ ಚರ್ಚ್ ಗಳು, ಕಮ್ಯುನಿಸ್ಟ್ ಸರ್ಕಾರ ಅಧಿಕಾರಕ್ಕೆ ಬರುವುದರ ಮುನ್ನಿನ ಸ್ಥಿತಿ, ನಂತರದ ಸ್ಥಿತಿ, ಸೋವಿಯತ್ ಒಕ್ಕೂಟದ ವಿಕೇಂದ್ರೀಕರಣದ ನಂತರದ ಸ್ಥಿತಿಯನ್ನೂ ದಾಖಲಿಸುತ್ತಾ ಹೋಗಿದ್ದಾರೆ.

ಪ್ರತಿಯೊಂದು ನೋಡುವ ವೈಶಿಷ್ಟ್ಯಗಳಿಗನುಗುಣವಾದ ಅಧ್ಯಾಯದ ಶೀರ್ಷಿಕೆಗಳಿವೆ. ಐದನೇ ಸಂಖ್ಯೆಯ ” ಮಾಸ್ಕೋ ಸುತ್ತಾಟ” ಶೀರ್ಷಿಕೆಯ ಅಡಿಯಲ್ಲಿ ಮಾಸ್ಕೋದ ಕ್ರೆಮ್ಲಿನ್ ನಲ್ಲಿರುವ ತ್ಸಾರ್ ಬೆಲ್, ಫಿರಂಗಿ, ಕೆಥೆಡ್ರಲ್ ಸ್ಕ್ವೇರ್, ಕ್ರೆಮ್ಲಿನ್ ಪ್ಯಾಲೇಸ್ ಇವುಗಳ ಕುರಿತ ಮಾಹಿತಿಯುಕ್ತ ವಿವರಣೆ ನೀಡುತ್ತಾರೆ. ಈ ಅಧ್ಯಾಯದ ಉಪ ವಿಭಾಗಗಳು 5.2, 5.3, 5.4 ಈ ಅಧ್ಯಾಯಗಳಲ್ಲಿ ಕ್ರೆಮ್ಲಿನ್ ಆರ್ಮರಿ ಮ್ಯೂಸಿಯಂ, ಮಾಸ್ಕೋದ ಮೆಟ್ರೋ‌ಸ್ಟೇಷನ್, ರಷ್ಯನ್ ಸರ್ಕಸ್ ಕುರಿತು ಸವಿವರವಾಗಿ ದಾಖಲಿಸಿದ್ದಾರೆ. ರೆಡ್ ಸ್ಕ್ವೇರ್, ಲೆನಿನನ ಸಮಾಧಿ ಮುಂತಾದವುಗಳ ಕುರಿತು ಪ್ರತ್ಯೇಕ ಅಧ್ಯಾಯಗಳಲ್ಲಿ ಮಾಹಿತಿಯುಕ್ತ ವಿವರಣೆ ಇದೆ.

ಮುಂದೆ ರಷ್ಯಾದ ಮಹಾನಗರ ಸೈಂಟ್ ಪೀಟರ್ಸ್ಬರ್ಗ್  ಕುರಿತ ಅಧ್ಯಾಯಗಳಲ್ಲಿ ನೋವಾ ನದಿಯ ದಂಡೆಯಲ್ಲಿ ಆಕಾಶಕ್ಕೆ ತಲೆ ಎತ್ತಿ ನಿಂತ ಪೀಟರ್ ದಿ ಗ್ರೇಟನ ಪ್ರತಿಮೆಯನ್ನು ಮೊತ್ತ ಮೊದಲು ಕಂಡದ್ದರಿಂದ ಮೊದಲ್ಗೊಂಡು, ಪ್ರಾಚೀನ ಸ್ಫಿಂಕ್ಸ್ ವಿಗ್ರಹಗಳು, ಪುಷ್ಕಿನ್ ನ ಕ್ಯಾಥರೀನಳ ಅರಮನೆ, ಅಲ್ಲಿನ ವಿಸ್ಮಯಕಾರಿ ಅಂಬರ್ ರೂಂ, ನಿಕೊಲೆವೆಸ್ಕಿ ಅರಮನೆಯ ಜಾನಪದ ನೃತ್ಯ ನಾಟಕ ಇವನ್ನೆಲ್ಲಾ ಓದುಗರನ್ನೂ ತಮ್ಮೊಂದಿಗೆ ಕೈಹಿಡಿದು ಕರೆದೊಯ್ದು ತೋರಿಸುತ್ತಿರುವಂತಹ ಆಪ್ತತೆಯಲ್ಲಿ ನಿಖರವಾದ ವಿವರಗಳೊಂದಿಗೆ ಪರಿಚಯಿಸುತ್ತಾರೆ, ಗೀತಾ.

ರಷ್ಯನ್ ಬ್ಯಾಲೆಯ ಮನೋಜ್ಞ ವಿವರಣೆ ಇದೆ. “ರಷ್ಯಾದ ಕೆಲವು ತೆರೆದ ಪುಟಗಳು”  ಎಂಬ ಅಧ್ಯಾಯದಲ್ಲಿ ದೇಶದ ಭೌಗೋಳಿಕತೆ, ಆರ್ಥಿಕತೆ, ಭಾಷೆ, ಕರೆನ್ಸಿ, ಕೈಗಾರಿಕೆ ಹೀಗೆ ದೇಶದ ವೈಶಿಷ್ಟ್ಯಗಳನ್ನು ಮುಂದಿಡುತ್ತಾ ಮತ್ತೆಯೂ ಮಾಸ್ಕೋ ಮತ್ತು ಸೈಂಟ್ ಪೀಟರ್ಸ್ ಬರ್ಗ್ ಕುರಿತ ವಿವರಗಳನ್ನು ಅನಾವರಣಗೊಳಿಸುತ್ತಾರೆ.

ಪುಸ್ತಕದ ಪ್ರಾರಂಭದಲ್ಲೇ ಪಕ್ಷಿನೋಟದಲ್ಲಿ ಸ್ಕಾಂಡಿನೇವಿಯಾ ದೇಶಗಳ  ಪ್ರತ್ಯೇಕ ಗುರುತು, ಸ್ಕಾಂಡಿನೇವಿಯಾ ಶಬ್ದ ಬಂದ ಬಗೆ,  ಈ ದೇಶಗಳ ವೈಶಿಷ್ಟ್ಯತೆ ಏನು ಎಂಬುದನ್ನೆಲ್ಲ ಓದುಗರ ಮುಂದಿಟ್ಟಿದ್ದಾರೆ, ಲೇಖಕಿ. ಫಿನ್ಲೆಂಡಿನ ರಾಜಧಾನಿ ಹೆಲ್ಸಿಂಕಿಯ ನೋಡುವ ತಾಣಗಳು, ಕೆಲವೊಂದು ಪ್ರಸಿದ್ಧ ಕಟ್ಟಡಗಳ ವಾಸ್ತು ಶೈಲಿ, ಇತಿಹಾಸ ಎಲ್ಲವನ್ನೂ ಮುಂದಿಡುತ್ತಾ ವಿಶ್ವದ ಹ್ಯಾಪಿ‌ದೇಶವೆಂದು ಪರಿಗಣಿತವಾಗಿರುವ ಈ ದೇಶದ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಼ಎಂಬಂತಹ ಮಹತ್ವವನ್ನು ಓದುಗರಿಗೆ ಮನಗಾಣಿಸಿದ್ದಾರೆ.

ನೊಬೆಲ್ ಪ್ರಶಸ್ತಿಯಿಂದ ಮನುಕುಲದ ಮಹೋನ್ನತರನ್ನು  ಮನ್ನಿಸುವ ಸ್ವೀಡನ್ನಿನ ಕುರಿತ ಅಧ್ಯಾಯದಲ್ಲಿ ಸ್ಚಾಕ್ ಹೋಮ್ ನ ಸಿಟಿಹಾಲ್, ಇಲ್ಲಿ ನೊಬೆಲ್ ಪ್ರಶಸ್ತಿ ವಿಜೇತರಿಗೆ ಏರ್ಪಡಿಸುವ ಔತಣಕೂಟ, ಸ್ಮಾರಕ ಗೋಪುರ, ವಾಸಾ ಮ್ಯೂಸಿಯಂ, ಐಸ್ ಬಾರ್ ಮುಂತಾದವುಗಳನ್ನು ಆಪ್ಯಾಯಮಾನತೆಯಿಂದ ವರ್ಣಿಸಿದ್ದಾರೆ. ಮುಂದೆ ನಾರ್ವೆಯ ಸ್ವಿಡ್ಜರ್ಲೆಂಡಿಗೆ ಸರಿಸಾಟಿಯಾದ ಪ್ರಕೃತಿ ಸೌಂದರ್ಯ, ಓಸ್ಲೋದ ಫ್ರಾಗ್ನರ್ ಪಾರ್ಕ್ ಎಂಬ ಶಿಲ್ಪಕಲೋದ್ಯಾನ ಮುಂತಾದವುಗಳನ್ನು ಮನ

ಮುಟ್ಟುವಂತೆ ವರ್ಣಿಸಿದ್ದಾರೆ. ಡೆನ್ಮಾರ್ಕ್ ನ ರಾಜಧಾನಿ ಕೋಪನ್ ಹೇಗನ್, ಇಲ್ಲಿನ ಹೆಗ್ಗುರುತು ಲಿಟ್ಲ್ ಮರ್ಮೆಯ್ಡ್ ಶಿಲ್ಪ, ಕ್ರಿಶ್ಚಿಯಾನ್ ಬರ್ಗ್ ಅರಮನೆ, ಇವೆಲ್ಲವುಗಳ ಸ್ವಾರಸ್ಯಕರವಾದ ಸವಿವರಣೆ ಇದೆ.  ಡೇನಿಷರ ಸೈಕಲ್ ಪ್ರೇಮದ ಬಗ್ಗೆ ಪ್ರತ್ಯೇಕವಾದ ಅಧ್ಯಾಯದಲ್ಲಿ ಆಮೂಲಾಗ್ರವಾಗಿ ವಿವರಿಸಿದ್ದಾರೆ, ಲೇಖಕಿ. ಕೊನೆಯಲ್ಲಿ “ಸ್ಕ್ಯಾಂಡಿನೇವಿಯಾ ದೇಶಗಳತ್ತ ಹೊರಳು ನೋಟ” ಎಂಬ ಅಧ್ಯಾಯ ಮತ್ತು ನಂತರದ ಮೂರು ಅಧ್ಯಾಯಗಳಲ್ಲಿ ಈ ಒಂದೊಂದೂ ದೇಶಗಳ ಇತಿಹಾಸ, ರಾಜಕೀಯ, ಭೌಗೋಳಿಕತೆ, ಆರ್ಥಿಕತೆ, ಎಲ್ಲವನ್ನೂ ವಿಶ್ಲೇಷಿಸುತ್ತಾರೆ.

ತಾವು ಪ್ರವಾಸ ಮಾಡಿದ ದೇಶಗಳಲ್ಲಿ ಕ್ಷಣಕ್ಷಣವನ್ನೂ ಕೌತುಕದಿಂದ ವೀಕ್ಷಿಸುತ್ತಾ ಕಂಡ ವಿಶಿಷ್ಟ ನೋಟಗಳನ್ನು, ಗ್ರಹಿಸಿದ್ದನ್ನು ಬೆರಗಾಗಿದ್ದನ್ನು ಮೆಚ್ಚಿದ್ದನ್ನು ಕಣಕಣವನ್ನೂ ದಾಖಲಿಸಿ ಓದುಗರ ಮುಂದಿಡಬೇಕೆಂಬ ಲೇಖಕಿಯ ತಹತಹ ಓದುಗರ ಮನ ಮುಟ್ಟುತ್ತದೆ. ಈ ಕೃತಿಗೆ ಮುನ್ನುಡಿ ಬರೆದಿರುವವರು ಸ್ವತಃ ಜಗತ್ತಿನಾದ್ಯಂತ ಸುತ್ತಾಡಿ ಪ್ರವಾಸ ಕಥನಗಳನ್ನು ಬರೆಯುತ್ತಲೇ ಇರುವ ಹಿರಿಯ ಲೇಖಕಿ ಜಯಶ್ರೀ ದೇಶಪಾಂಡೆಯವರು. “ಹದಿನೈದು ದಿನಗಳ ಪ್ರವಾಸದಲ್ಲಿ ಹದಿನೈದು ವರ್ಷಗಳ ಓಡಾಟದಷ್ಟು ಬೆರಗನ್ನು ಕಂಡು ಅದನ್ನು  ಮನಸ್ಸು ಎದೆಗಳಲ್ಲಿ ಗ್ರಹಿಸಿ ಕಾಪಿಟ್ಟುಕೊಂಡು ಬಂದ ಬರಹ” ಎಂದು ಶ್ಲಾಘಿಸಿರುವುದು ಅತ್ಯಂತ  ಸೂಕ್ತವಾಗಿದೆ. ಲೇಖಕಿ ಗೀತಾ ಕುಂದಾಪುರರವರು ಮತ್ತಷ್ಟು ಪ್ರವಾಸಗಳನ್ನು ಮಾಡಿ ಇನ್ನಷ್ಟು ಪ್ರವಾಸ ಕಥನಗಳನ್ನು ಓದುಗರಿಗೆ ನೀಡಲಿ.

‍ಲೇಖಕರು Admin

25 December, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading