-ಮಾಲಾ ಮ ಅಕ್ಕಿಶೆಟ್ಟಿ
ಹಂಗಿನರಮನೆಯ ತಮಾಷೆ
ನನಗೂ ಇಷ್ಟವೇ
ಆ ಮನೆಯಲ್ಲಿರಬಾರದೆಂದು
ತಪ್ಪು ಮಾಡದೆಯೂ
ಸೆರೆಮನೆಯಲ್ಲಿರುತ್ತಾನಲ್ಲ…… ಕೈದಿ
ಆಚೆ ಈಚೆ ಹೊರಳಾಡುವ
ವಿಲವಿಲ ನರಳುವ
ನಿದ್ದೆ ಬಾರದೇ ತಿರುಗುವ
ಯೋಚಿಸಿದಷ್ಟು ಪರಿಹಾರ ಸಿಗದ
ಹಂಗಿನಲ್ಲಿ ಸಿಲುಕಿದವ
ರೊಕ್ಕ ಇಲ್ಲದೇ ತಿನ್ನುವ
ಬೇರೆಯವರ ಅನ್ನ, ವಶೀಲಿಯಿಂದ
ಪಡೆದ ನೌಕರಿ,
ಕೈಲಾಗದಾಗ ಪಡೆದ ಸಹಾಯ
ರೋಗ ಬಿದ್ದಾಗ ಅನಿವಾರ್ಯವಾಗಿ
ಸ್ವೀಕರಿಸುವ ಸೇವೆ
ಹಂಗಿನರಮನೆಯ ಗಟ್ಟಿಯಾದ
ಕಂಬಗಳ ನಿರ್ಮಾಣ
ಸಿಟ್ಟಾಗದ, ವಿರೋಧಿಸಲಾಗದ
ಪರಿಹಾರ ಸೂಚಿಸಲಾಗದ
ಎದೆಯಾಳದಿಂದ ಸಮ್ಮತಿಸಲಾಗದ
ಎಲ್ಲವನ್ನೂ ಹುಃ ಎನ್ನುವ
ಕೋಲೆ ಬಸವ
ಪ್ರತಿ ಪೋಸ್ಟ್ ಗೆ ಲೈಕ್
ಕಮೆಂಟ್ ಹಾಕುವ ಧೀರರು
ಉದ್ದ ಉದ್ದ ಹೊಗಳುವ
ಪರಕೀಯತೆ, ಮೊಲ
ಸಿಂಹದ ಬಾಯಲ್ಲಿ ಬಂಧ
ನೀರಿಂದ ತೆಗೆದ ಮೀನು,
ದೀಪಕ್ಕೆ ಸುಡುವ ಪತಂಗ
ರೆಕ್ಕೆ ಉದುರಿದ ಪಕ್ಷಿ
ಕಾಲು ಮುರಿದುಕೊಂಡ ಇರುವೆ
ಶೋಕಿಸುವ ಭಾವ ಹಂಗಿನವನದು
ನೀರು ಮುಳುಗಿಸಲು
ದೀಪದ ಬೆಂಕಿ ಸುಡಲು
ಗಾಳಿ ನುಂಗಲು
ಪ್ರಯತ್ನಿಸುವ ನೋವು
ಯಾರಿಗೂ ಗೊತ್ತಾಗಲ್ಲ
ಅಂಗಾತ ಮಲಗಿ
ಮೀನು
ಪತಂಗ
ಪಕ್ಷಿ
ಭಸ್ಮವಾಗುತ್ತವಷ್ಟೇ
ಯಾರ ಕಣ್ಣಿಗೂ ಬೀಳದೇ
ಆ ಶಿವನೂ ನೋಡದೇ
ಸಹಾಯವೊಂದು
ಹಂಗಿನ ಬಾವಿಯಾಗುವ
ವಿಷಾದ ಭವಿಷ್ಯ
ತಿಳಿದಿರಲಿಲ್ಲ ಸಿಕ್ಕಿಕೊಂಡಾಗ
ಸರಿಯೋ ತಪ್ಪೋ!
ಹಿಂಬಾಲಿಸುವಿಕೆ
ತಪ್ಪಿದ್ದರೂ ಹೊರ
ಬರಲಾರದ ಮರಿಪಕ್ಷಿ
ಗೂಡಿನಲ್ಲಿ ಬೀಜ ಹೆಕ್ಕುತ್ತ
ಕೆಲವರಿಗೆ ಹಂಗು ಹಂಗೇ ಅಲ್ಲ
ಅದು ಸಹಾಯ ಸಹಕಾರ
ಗುರು, ದೇವರು, ಆಪತ್ಭಾಂಧವ ಹಣೆ ಪಟ್ಟಿ,
ಸೆರೆಸಿಕ್ಕ ಚಿಕ್ಕ ಅನುಮಾನವೂ ಇಲ್ಲ
ಹಲ್ಲು ಗಿಂಜುತ್ತ ಸಾಗುವ






0 Comments