‘ಕೆಯುಡಬ್ಲ್ಯೂಜೆ’ ಅಧ್ಯಕ್ಷರಾಗಿ ಶಿವಾನಂದ ತಗಡೂರು ಆಯ್ಕೆ…
ಮಾಧ್ಯಮ ಕ್ಷೇತ್ರದ ಪ್ರಮುಖ ಸಂಘಟನೆಯಾದ ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ’ದ ಅಧ್ಯಕ್ಷರಾಗಿ ಶಿವಾನಂದ ತಗಡೂರು ಅವರು ಹಾಗೂ ಅವರ ಬಳಗದ ಬಹುತೇಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಳಿದಂತೆ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣಾ ನಡೆದಿದ್ದು ಅವರದ್ದೇ ಬಳಗದ ಭವಾನಿ ಸಿಂಗ್ ಠಾಕೂರ್, ಅಜ್ಜಿಮಾಡ ರಮೇಶ್ ಕುಟ್ಟಪ್ಪ, ಪುಂಡಲೀಕ ಭಾಳೋಜಿ ಅವರು ಹೆಚ್ಚಿನ ಮತ ಗಳಿಸಿದ್ದಾರೆ. ಈ ಸಂಬಂಧ ಅಧಿಕೃತ ಪ್ರಕಟಣೆಯಷ್ಟೇ ಹೊರಬೀಳಬೇಕಾಗಿದೆ.
ರವಿಕುಮಾರ್ ಟೆಲೆಕ್ಸ್ ಅವರು ಸಹ ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ್ದರು.
ಪತ್ರಕರ್ತರ ಬೆನ್ನಿಗೆ ನಿಂತರು..
ಕೋವಿಡ್ ಪಿಡುಗಿನ ಸಂದರ್ಭದಲ್ಲಿ ಪತ್ರಕರ್ತರ ಬೆನ್ನಿಗೆ ನಿಂತದ್ದು, ಅಂತಃಕರಣದಿಂದ ಸುದ್ದಿಮನೆಯ ಎಲ್ಲರನ್ನೂ ಸಂತೈಸಿದ್ದು ಶಿವಾನಂದ ತಗಡೂರು ಅವರ ವರ್ಚಸ್ಸು ಹೆಚ್ಚಲು ಕಾರಣವಾಯಿತು. ಮುಖ್ಯಮಂತ್ರಿಗಳು, ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ನಿರಂತರ ಮಾತುಕತೆ ನಡೆಸಿ ಸುಮಾರು ೪೫ ಪತ್ರಕರ್ತ ಕುಟುಂಬಕ್ಕೆ ತಲಾ ಐದು ಲಕ್ಷದಂತೆ ನೆರವು ಕೊಡಿಸಿದ್ದು ಪತ್ರಕರ್ತರ ಮನದಲ್ಲಿ ನೆಲೆಯೂರಿದೆ.

ಬಹುರೂಪಿ ಪ್ರಕಾಶನ ಈ ೪೫ ಪತ್ರಕರ್ತ ಕುಟುಂಬಗಳ ಸ್ಥಿತಿಗತಿ ಹಾಗೂ ಆವರಿಗೆ ನೆರವು ಕೊಡಿಸುವ ಹಿಂದೆ ಇದ್ದ ಛಲದ ಬಗ್ಗೆ ‘ಶಿವಾನಂದ ತಗಡೂರು ಹೇಳಿದ ಕೋವಿಡ್ ಕಥೆಗಳು’ ಕೃತಿಯನ್ನು ಪ್ರಕಟಿಸಿತ್ತು.
‘ಶಿವಾನಂದ ತಗಡೂರು ಹೇಳಿದ ಕೋವಿಡ್ ಕಥೆಗಳು’ ಪುಸ್ತಕದ ಬೆಲೆ : 175 ರೂ
ಕೊಳ್ಳಲು ಇಲ್ಲಿ ಕ್ಲಿಕ್ಕಿಸಿ – https://bit.ly/3t8AEDK
ಅಥವಾ- 70191 82729ಗೆ ಸಂಪರ್ಕಿಸಿ.
ಮುಖ್ಯಮಂತ್ರಿಗಳಿಂದ ಬಿಡುಗಡೆ
ಈ ಕೃತಿಯನ್ನು ಕಲಬುರ್ಗಿ ಜಿಲ್ಲೆಯಲ್ಲಿ ಜರುಗಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮ್ಮೇಳನದಲ್ಲಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಬಿಡುಗಡೆಗೊಳಿಸಿದ್ದರು.
ತದನಂತರ ಬೆಂಗಳೂರಿನಲ್ಲಿ ಎಲ್ಲಾ ಪತ್ರಿಕಾ ಸಂಪಾದಕರುಗಳ ಉಪಸ್ಥಿತಿಯಲ್ಲಿ ಪತ್ರಕರ್ತರಿಗೆ ನೆರವು ಒದಗಿಸುವಲ್ಲಿ ಕಾರಣೀಭೂತರಾಗಿದ್ದ ಅಂದಿನ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಈ ಕೃತಿಯ ಬಗೆಗಿನ ಸಂವಾದಕ್ಕೆ ಚಾಲನೆ ನೀಡಿದ್ದರು.
ಶಿವಾನಂದ ತಗಡೂರು ಅವರು ‘ಅವಧಿ’ಯೊಂದಿಗೆ ಮಾತನಾಡುತ್ತಾ ‘ಮಾಧ್ಯಮ ಕ್ಷೇತ್ರದ ಮತ್ತು ಪತ್ರಕರ್ತರ ಹಕ್ಕೊತ್ತಾಯಗಳನ್ನು ಆಳುವ ಸರ್ಕಾರದ ಗಮನಕ್ಕೆ ತಂದು ಬೇಡಿಕೆ ಈಡೇರಿಸಿಕೊಳ್ಳಲು ನಮ್ಮ ಸಂಘಟಿತ ಪ್ರಯತ್ನ ಮುಂದುವರಿಸಬೇಕಿದೆ. ವೃತ್ತಿ ಬದುಕಿನ ನೈಪುಣ್ಯತೆ ಮತ್ತು ಘನತೆ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ನಾವುಗಳು ಆತ್ಮ ವಿಮರ್ಶೆ ಮಾಡಿಕೊಂಡು ಹೆಜ್ಜೆ ಇಡಬೇಕಿದೆ. ಇದಕ್ಕೆಲ್ಲ ಧೃಡ ನಿರ್ಧಾರ ಅಗತ್ಯ.’ ಎಂದು ತಿಳಿಸಿದ್ದಾರೆ.

ನಂತರದಲ್ಲಿ ಪತ್ರಕರ್ತರ ಸಂಘ ಮುಂದೆ ಹೆಜ್ಜೆ ಹಾಕಬೇಕಾದ ರೀತಿಯ ಬಗ್ಗೆಯೂ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.
ಆ ಹೇಳಿಕೆಯ ಪೂರ್ಣಪಾಠ ಇಲ್ಲಿದೆ-
ನಿಮ್ಮಲ್ಲೊಂದು
ಕಳಕಳಿಯ ಮನವಿ,
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (KUWJ) ಚುನಾವಣೆ ಮುಗಿದಿದೆ. ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ ನಿಮ್ಮೆಲ್ಲರಿಗೆ ಅಭಿನಂದನೆಗಳು.
ಏಳು ಸಾವಿರಕ್ಕೂ ಹೆಚ್ಚು ಸದಸ್ಯರಿರುವ 31 ಜಿಲ್ಲೆಯಲ್ಲಿ ಘಟಕಗಳನ್ನು ಹೊಂದಿರುವ ಬೃಹತ್ ಸಂಸ್ಥೆಗೆ ಚುನಾವಣೆ ನಡೆಸುವುದು ಬಹು ದೊಡ್ಡ ಸಾಹಸ. ಏಕ ಕಾಲಕ್ಕೆ ಜಿಲ್ಲಾ ಮತ್ತು ರಾಜ್ಯ ಘಟಕಕ್ಕೆ ಚುನಾವಣೆ ನಡೆಯುವ ಕಾರಣ ಸಿದ್ಧತೆಗಳನ್ನು ಮಾಡಿಕೊಳ್ಳುವುದು ನಿಜಕ್ಕೂ ಸವಾಲಿನ ಕೆಲಸ.
ಕಾರ್ಮಿಕ ಇಲಾಖೆಯ ಮೇಲುಸ್ತುವಾರಿಯಲ್ಲಿ ನಡೆದ ಈ ಚುನಾವಣೆಯಲ್ಲಿ ಎಲ್ಲಿಯೂ ಲೋಪ ಬಾರದಂತೆ ಪಾರದರ್ಶಕವಾಗಿ ಚುನಾವಣೆ ಯಶಸ್ವಿಯಾಗಿ ನಡೆಯಲು ನಿಮ್ಮೆಲ್ಲರ ಸಹಕಾರ ಕಾರಣ.
ಪ್ರಜಾಪ್ರಭುತ್ವದಲ್ಲಿ ಚುನಾವಣೆ ಪ್ರಕ್ರಿಯೆ ಒಂದು ಭಾಗ. ಆಯಾ ಕಾಲಾನುಕಾಲಕ್ಕೆ ಕೆಯುಡಬ್ಲ್ಯೂಜೆ ಚುನಾವಣಾ ಪ್ರಕ್ರಿಯೆ ಎದುರಿಸುತ್ತಲೇ ಇನ್ನಷ್ಟು ಸಕ್ರಿಯವಾಗಿ, ಸಧೃಡವಾಗಿ ಬೆಳೆಯುತ್ತಲೇ ಬಂದಿದೆ.
ಚುನಾವಣೆ ಎಂದ ಮೇಲೆ ಆರೋಪ, ಪ್ರತ್ಯಾರೋಪ, ಟೀಕೆ ಟಿಪ್ಪಣಿ ಸಹಜ. ಇದೆಲ್ಲವನ್ನೂ ಚುನಾವಣೆಗೆ ಸೀಮಿತಗೊಳಿಸಿ, ಇನ್ನೂ ವೃತ್ತಿ ಬದುಕಿನತ್ತ ಗಮನಹರಿಸೋಣ. ಯಾಕೆಂದರೆ ನಿಜವಾದ ಸವಾಲುಗಳು ಬೇರೆಯೇ ಇವೆ. ಕೋವಿಡ್ ಕಾಲಘಟ್ಟದಲ್ಲಿ ಜಿಲ್ಲಾ, ಪ್ರಾದೇಶಿಕ ಪತ್ರಿಕೆಗಳಿಂದ ಹಿಡಿದು ರಾಜ್ಯ ಮಟ್ಟದ ಪತ್ರಿಕೆಗಳ ತನಕ, ಎಲೆಕ್ಟ್ರಾನಿಕ್ ಮೀಡಿಯಾ ಸೇರಿದಂತೆ ಎಲ್ಲಾ ಕಡೆಯಲ್ಲೂ ಸುದ್ದಿ ಮನೆ ಪತ್ರಕರ್ತರ ಬದುಕು ಎಷ್ಟು ಸಂಕಷ್ಟಕ್ಕೆ ಸಿಲುಕಿತು ಎನ್ನುವುದು ನಿಮಗೆ ಗೊತ್ತು.
ಇಂತಹ ಸಂದರ್ಭದಲ್ಲಿಯೂ ಕೆಯುಡಬ್ಲ್ಯೂಜೆ ಪತ್ರಕರ್ತರ ಸಾಂಘಿಕ ಶಕ್ತಿಯಾಗಿ ಕೆಲಸ ಮಾಡಿದ್ದು ನಿಮ್ಮ ಗಮನಕ್ಕಿದೆ.
ಮಾಧ್ಯಮ ಕ್ಷೇತ್ರದ ಮತ್ತು ಪತ್ರಕರ್ತರ ಹಕ್ಕೊತ್ತಾಯಗಳನ್ನು ಆಳುವ ಸರ್ಕಾರದ ಗಮನಕ್ಕೆ ತಂದು ಬೇಡಿಕೆ ಈಡೇರಿಸಿಕೊಳ್ಳಲು ನಮ್ಮ ಸಂಘಟಿತ ಪ್ರಯತ್ನ ಮುಂದುವರಿಸಬೇಕಿದೆ. ವೃತ್ತಿ ಬದುಕಿನ ನೈಪುಣ್ಯತೆ ಮತ್ತು ಘನತೆ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ನಾವುಗಳು ಆತ್ಮ ವಿಮರ್ಶೆ ಮಾಡಿಕೊಂಡು ಹೆಜ್ಜೆ ಇಡಬೇಕಿದೆ. ಇದಕ್ಕೆಲ್ಲ ಧೃಡ ನಿರ್ಧಾರ ಅಗತ್ಯ.
ಸಂಘಟನೆ ದೃಷ್ಟಿಯಿಂದ ತೀರ್ಮಾನ ತೆಗೆದುಕೊಂಡಾಗ ಕೆಲವರಿಗೆ ನೋವಾಗಿರಬಹುದು. ಆದರೆ, ಅದು ವೈಯಕ್ತಿಕ ಅಲ್ಲ. ಒಂದು ಸಂಸ್ಥೆ ಹಿತದೃಷ್ಟಿಯಿಂದ ಆದ ನಿರ್ಣಯಗಳು ಎನ್ನುವುದು ನಿಮಗೆ ಗೊತ್ತಿದೆ ಎಂದು ಭಾವಿಸುವೆ. ಏನೇ ಲೋಪದೋಷಗಳಿದ್ದರೂ, ಸಂಕ್ರಮಣ ಕಾಲಘಟ್ಟದಲ್ಲಿ ಕೆಯುಡಬ್ಲ್ಯೂಜೆ ಇನ್ನಷ್ಟು ಗಟ್ಟಿಯಾಗಿ, ಸದೃಢವಾಗಿ ಬೆಳೆದಿದೆ ಎನ್ನುವ ಸಮಾಧಾನವೂ ಇದೆ.
ಗೆಲುವಿಗೆ ಹಿಗ್ಗಬಾರದು, ಸೋಲಿಗೆ ಕುಗ್ಗಬಾರದು. ಇಂದಿನ ಸೋಲು ನಾಳಿನ ಗೆಲುವಾಗಬಹುದು ಎನ್ನುವುದು ಹಿರಿಯರು ಹೇಳಿದ ಮಾತು ಎದೆಯಲ್ಲಿ ಪ್ರತಿಧ್ವನಿಸುತ್ತಿರಲಿ. ಆಗ ಮಾತ್ರ ನಾವು ಎಲ್ಲರ ವಿಶ್ವಾಸದೊಳಗೆ ಬೆರೆತು ಇನ್ನಷ್ಟು ಕ್ರಿಯಾಶೀಲವಾಗಿ ಮುನ್ನೆಡೆಯಲು ಸಾಧ್ಯ.
ಇಲ್ಲಿ ಯಾವುದೂ ಶಾಶ್ವತವಲ್ಲ. ಹಗಲಾದ ಮೇಲೆ ರಾತ್ರಿ ಬರಲೇಬೇಕಲ್ವಾ? ಕತ್ತಲು ಇದ್ದ ಕಾರಣಕ್ಕೆ ಬೆಳಕಿನ ಮಹತ್ವ ತಿಳಿದಿದ್ದಲ್ಲವೇ? ದ್ವೇಷ ಶಾಶ್ವತವಲ್ಲ, ಪ್ರೀತಿ ಶಾಶ್ವತ ಮತ್ತು ನಿರಂತರ ಎನ್ನುವುದು ವಾಸ್ತವ.
ಚುನಾವಣೆ ಲೆಕ್ಕಾಚಾರಗಳನ್ನು ಬದಿಗಿರಿಸಿ, ಇನ್ನು ವೃತ್ತಿ ಬದುಕು ಮತ್ತು ಸಂಘದ ಸಂಘಟನೆ ಕಡೆಗೆ ಗಮನಹರಿಸೋಣ. ಕೇಡಿನಿಂದ ಏನೂ ಸಾಧಿಸಲಾಗದು. ಅದನ್ನು ಪ್ರೀತಿ, ವಿಶ್ವಾಸದಿಂದ ಸಾಧಿಸಲು ಸಾಧ್ಯ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ಹೀಗೆಯೇ ಇರಲಿ.
ಕಾರ್ಯನಿರತ ಪತ್ರಕರ್ತ ಸಂಘದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ, ನ್ಯಾಯಾಲಯದಿಂದ ಪ್ರಕಟಣೆ ಬಾಕಿ ಇರುವ ಪದಾಧಿಕಾರಿಗಳ ಪಟ್ಟಿ ಇಂತಿದೆ-
ಶಿವಾನಂದ ತಗಡೂರು
ಅಧ್ಯಕ್ಷರು
ಅಜ್ಜಮಾಡ ರಮೇಶ್ ಕುಟ್ಟಪ್ಪ
ಪುಂಡಲೀಕ ಭೀ ಬಾಳೋಜಿ
ಭವಾನಿಸಿಂಗ್ ಠಾಕೂರ್
ಉಪಾಧ್ಯಕ್ಷರು
ಜಿ.ಸಿ.ಲೋಕೇಶ್
ಪ್ರಧಾನ ಕಾರ್ಯದರ್ಶಿ
ಮತ್ತೀಕೆರೆ ಜಯರಾಂ
ನಿಂಗಪ್ಪ ಚಾವಡಿ
ಸೋಮಶೇಖರ ಕೆರಗೋಡು
ಕಾರ್ಯದರ್ಶಿ






0 Comments