ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಕೆಂಡಸಂಪಿಗೆ’ಯಲ್ಲಿ ಸಂಪಾದಕೀಯ

ಹರಿಯುವ ನೀರಿಗೆ ಯಾರು ದೊರೆ?:ಒಂದು ಸಂಪಾದಕೀಯ

-ಅಬ್ದುಲ್ ರಶೀದ್

ಒಂದು ಕಾಲದಲ್ಲಿ ಕನ್ನಡ ಸಾಹಿತ್ಯ ಲೋಕರಂಗದಲ್ಲಿ ಒಬ್ಬರು ದುಂಡುಮುಖದ ಕವಿಗಳು ಮತ್ತು ಇನ್ನೊಬ್ಬರು ಕೋಲುಮುಖದ ವಿಮರ್ಶಕರು ವಾಸಿಸುತ್ತಿದ್ದರು. ಇಬ್ಬರೂ ಅವರವರ ಲೋಕದಲ್ಲಿ ಖ್ಯಾತನಾಮರೇ. ಹಾಗಾಗಿ ಅವರಿಬ್ಬರೂ ತಮ್ಮ ತಮ್ಮ ತಲೆಯ ಮೇಲೆ ತಾವೇ ತಯಾರಿಸಿಕೊಂಡ ಪ್ರಭಾವಳಿಗಳನ್ನು ಇಟ್ಟುಕೊಂಡು ಓಡಾಡುತ್ತಿದ್ದರು. ಆ ಎರಡು ಪ್ರಭಾವಳಿಗಳು ಒಂದಕ್ಕೊಂದು ಡಿಕ್ಕಿ ಹೊಡೆಯದೆ ಒಂದರ ಅಂದವನ್ನು ಇನ್ನೊಂದು ಚಂದಗಾಣಿಸುತ್ತ ಇದ್ದರೆ ಒಬ್ಬರನ್ನೊಬ್ಬರು ಅಪ್ಪಿಕೊಂಡು ಕೊಂಡಾಡುತ್ತಿದ್ದರು. ಅಕಸ್ಮಾತ್ ಎಲ್ಲಿಯಾದರೂ ಆ ಪ್ರಭಾವಳಿಗಳು ಡಿಕ್ಕಿ ಹೊಡೆದು ಬಿಟ್ಟರೆ ಇಬ್ಬರೂ ಪರಸ್ಪರ ಕಾವ್ಯದ ಜಡೆಯನ್ನೂ, ವಿಮರ್ಶೆಯ ಚೌರಿಗೂದಲನ್ನೂ ಹಿಡಿದುಕೊಂಡು ಕೆಟ್ಟ ಸವತಿಯರಂತೆ ಹೊಡೆದಾಟಕ್ಕೆ ಇಳಿದುಬಿಡುತ್ತಿದ್ದರು.

ಒಮ್ಮೆ ಹೀಗೆ ಅವರಿಬ್ಬರ ಪ್ರಭಾವಳಿಗಳು ಡಿಕ್ಕಿ ಹೊಡೆದಾಗ ಅವರಿಬ್ಬರೂ ಜೊತೆಗೆ ಕುಳಿತು ಉಣ್ಣುತ್ತಿದ್ದರು. ಡಿಕ್ಕಿ ಹೊಡೆದದ್ದೇ ತಡ ಉಣ್ಣುವುದನ್ನೂ ಮರೆತು ಊಟದ ತಟ್ಟೆಯನ್ನು ಎತ್ತಿಕೊಂಡು ಹೋರಾಟಕ್ಕಿಳಿದುಬಿಟ್ಟರು. ‘ಕನ್ನಡ ಕಾವ್ಯ ಲೋಕದಲ್ಲಿ ನಿನ್ನ ಹೆಸರನ್ನು ಇಲ್ಲದಂತೆ ಮಾಡಿಬಿಡುತ್ತೇನೆ ಅಧಮಾ’ ಎಂದು ವಿಮರ್ಶಕರು ಕವಿಗಳತ್ತ ಪಾಶುಪತಾಸ್ತ್ರವನ್ನು ಎಸೆದರು. ಕವಿಗಳೇನು ಕಡಿಮೆಯೇ!

‘ನನ್ನ ಮಾಂತ್ರಿಕ ಕಾವ್ಯಶಕ್ತಿಯಿಂದ ನಿನ್ನನ್ನು ಈ ಭುವಿಯಿಂದ ಮಾಯ ಮಾಡಿಬಿಡುವೆ ನೀಚಾ ಹುಷಾರ್’ ಎಂದು ಅನ್ನದ ತಟ್ಟೆಯನ್ನು ವಿಮರ್ಶಕರ ಮುಖಕ್ಕೇ ಎಸೆದು ಬಿಟ್ಟಿದ್ದರು.

ಚಿತ್ರ: ಚರಿತಾ

ಕನ್ನಡ ಸಾಹಿತ್ಯ ಲೋಕದ ಆ ಕಾಲಘಟ್ಟದಲ್ಲಿ ಈ ತಟ್ಟೆ ಹೋರಾಟ ಒಂದು ದೊಡ್ಡ ಸಾಂಸ್ಕೃತಿಕ ಫಟನೆಯಾಗಿತ್ತು. ಒಂಥರಾ ಎರಡನೆಯದೋ, ನಾಲ್ಕನೆಯದೋ ಪಾಣಿಪತ್ ಕದನದ ಹಾಗೆ! ಅದಾಗ ತಾನೇ ಸಾಹಿತ್ಯ ಲೋಕದಲ್ಲಿ ಗಡ್ಡ ಮೀಸೆಗಳನ್ನು ಮೂಡಿಸಿಕೊಳ್ಳಲು ಹೆಣಗುತ್ತಾ, ಕಾವ್ಯದ ಮೊಡವೆಗಳನ್ನು ಚಿವುಟಿಕೊಳ್ಳುತ್ತಿದ್ದ ನಮ್ಮಂತಹ ತರುಣರು ಅಯ್ಯೋ ದೇವರೇ ಇನ್ನೇನಾಗುತ್ತೋ ಎಂದು ಹೆದರಿಕೊಂಡಿದ್ದೆವು.

ಆದರೆ ದೇವರು ದೊಡ್ಡವನು. ಜಗಳಾಡಿಕೊಂಡ ಆ ಇಬ್ಬರೂ ಮಂಕಾಗಿ ಹೋದರು. ಇಬ್ಬರ ಪ್ರಭಾವಳಿಗಳೂ ಹೂ ಬಿಟ್ಟ ಬಿದಿರಿನಂತೆ ಪುಡಿಯಾಗಿ ಸಾಹಿತ್ಯ ಲೋಕದ ಅಟ್ಟವನ್ನು ಸೇರಿ ಕುಳಿತುಕೊಂಡವು. ಕನ್ನಡ ಸಾಹಿತ್ಯ ತಟ್ಟೆ, ಲೋಟ, ಒಗ್ಗರಣೆ, ಮೀಮಾಂಸೆಗಳ ಹೆದರಿಕೆಯಿಲ್ಲದೇ ಅಂಟಾರ್ಟಿಕಾದಿಂದ ಆರ್ಕ್ಟಿಕ್ ಸಮುದ್ರದವರೆಗೆ ಹಬ್ಬಿಕೊಂಡಿತು.

ನಮ್ಮ ತಾರುಣ್ಯದ ದಿನಗಳಲ್ಲಿ ನಾವು ಸಾಹಿತ್ಯ ಲೋಕದ ಇಂತಹ ಶಕ್ತಿ ಕೇಂದ್ರಗಳನ್ನು ಹೆದರಿಕೆಯಿಂದಲೂ, ಕೊಂಚ ಭಕ್ತಿಯಿಂದಲೂ ನೋಡಬೇಕಾಗಿತ್ತು. ಆಗಿನ ಕಾಲದ ಕೆಲವು ವಿಮರ್ಶಕರೂ, ಸಾಹಿತ್ಯ ಪತ್ರಿಕೆಗಳ ಕೆಲವು ಸಂಪಾದಕರುಗಳೂ, ದಿನ ಪತ್ರಿಕೆಗಳ ವಾರದ ಪುರವಣಿಗಳ ಹಲವು ಮೇಲ್ವಿಚಾರಕರುಗಳೂ ಹೊರೆ ಕಾಣಿಕೆ ಒಪ್ಪಿಸುವ ಬರಹಗಾರರನ್ನು ಒಂದೇ ಸಾಲಿನಲ್ಲಿ ಆಕಾಶಕ್ಕೆ ಏರಿಸಿ, ತಪ್ಪಿದವರನ್ನು ಇನ್ನೊಂದು ಸಾಲಿನಲ್ಲಿ ಪಾತಾಳಕ್ಕೆ ಕಳಿಸುವ ಶಕ್ತಿದೇವತೆಗಳಾಗಿದ್ದರು. ಬೆಂಗಳೂರಿನಲ್ಲಿರುವ ಈ ಶಕ್ತಿ ಕೇಂದ್ರಗಳಿಗೆ ಕನ್ನಡ ನಾಡಿನ ದೂರದೂರದ ಅಸಹಾಯಕ ಬರಹಗಾರರು ಆಗಾಗ ಬೇಟಿ ನೀಡುವ ಪರಿಪಾಟವೂ ಜೋರಾಗಿತ್ತು.

ಈಗ ನಾವು ಬಚಾವ್ ಅಂದುಕೊಂಡಿದ್ದೆ. ಕನ್ನಡ ನಾಡಿನಲ್ಲಿ ನೂರಾರು ಪತ್ರಿಕೆಗಳೂ, ಸಾವಿರಾರು ಬ್ಲಾಗುಗಳೂ, ಅಂತರ್ಜಾಲ ತಾಣಗಳೂ ಬಂದು, ಹರಿವ ನೀರಿಗೆ ಯಾವ ದೊಣೆನಾಯಕನ ಹಂಗೂ ಬೇಡವೆಂದುಕೊಂಡು ಕನ್ನಡದ ಸಾವಿರ ಸಾವಿರ ಸಂಖ್ಯೆಯ ತರುಣ ತರುಣಿಯರು ಬರೆಯುತ್ತಿರುವಾಗ ಎಲ್ಲವೂ ಸುಂದರವೂ, ರೋಮಾಂಚಕಾರಿಯಾಗಿಯೂ ಇದೆ ಅಂದುಕೊಂಡಿದ್ದೆ. ಆದರೆ ಈಗಲೂ ಈ ರೀತಿಯ ದೊಣೆನಾಯಕರುಗಳು ಇರುವರು ಎಂದು ಗೊತ್ತಾಗಿ ನಗುಬಂತು.

ಈ ನಗುಬರುವ ಸಂಗತಿಯನ್ನು ಹೇಳಿದವರು ಗೆಳೆಯ ಕಥೆಗಾರರೊಬ್ಬರು. ಮೊದಮೊದಲಿಗೆ ಬಹಳಷ್ಟು ಅಂಜುತ್ತಲೂ, ಸಂಕೋಚದಿಂದಲೂ ಬರೆಯುತ್ತ ಆನಂತರ ಕನ್ನಡದ ಅತ್ಯುತ್ತಮ ಕಥೆಗಾರರಾದ ಇವರಿಗೆ ಇತ್ತೀಚೆಗೆ ಕೆಲವು ಕಾಲದ ಹಿಂದೆ ತಡ ರಾತ್ರಿಯಲ್ಲಿ ದೂರವಾಣಿ ಕರೆಯೊಂದು ಬಂತಂತೆ. ಕರೆಯುತ್ತಿದ್ದವರು ಪತ್ರಿಕೆಯೊಂದರ ವಾರದ ಪುರವಣಿಯ ಸಂಪಾದಕರು. ಅವರು ಅತ್ತ ಕಡೆಯಿಂದ ಬಬ್ರುವಾಹನನ ತರಹ ಬೊಬ್ಬಿರಿಯುತ್ತಿದ್ದರಂತೆ. ‘ಕನ್ನಡ ಸಾಹಿತ್ಯ ಲೋಕದಲ್ಲಿ ನಿನ್ನ ಹೆಸರಿಲ್ಲದ ಹಾಗೆ ಮಾಡಿಬಿಡುವೆ ಹುಷಾರ್’ ಎಂದು ಕಿರಿಚುತ್ತಿದ್ದರಂತೆ.

‘ಇಲ್ಲ ಕಥೆಗಾರರೇ. ನಿಮಗೆ ಅಷ್ಟೂ ಅರಿವಾಗುವುದಿಲ್ಲವೇ. ಅದು ಅಟ್ಟಹಾಸವಲ್ಲ. ಅಳು’ ಅಂದೆ. ದೇವರಾಜ ಅರಸರು ಗೇಣಿ ಕಾಯಿದೆ ತಂದ ಮೇಲೆ ಒಡೆಯರು ಅರಚುತ್ತಿದ್ದುದು ಉಳುವವರಿಗೆ ಅಳುವಂತೆ ಕೇಳಿಸುತ್ತಿತ್ತಂತೆ. ಅದು ಭೂಮಿ ಕಳಕೊಂಡವರ ಅಸಹಾಯಕ ಅಳು. ಅದೇ ತರಹದ ಅಳು ಈಗಿನ ಕಾಲದ ಸಾಹಿತ್ಯ ಲೋಕದ ಯಜಮಾನರದ್ದು. ‘ಅವರು ಅತ್ತು ಅತ್ತು ಕಣ್ಣು ಕೆಂಪು ಮಾಡಿಕೊಂಡು ಸುಸ್ತಾಗಿ ಮಲಗುತ್ತಾರೆ. ನಾವು ಬರೆಯಬೇಕು. ಕವಿ ಉಳಿಯುವುದು ಅವನ ಕಾಲದ ನಂತರ. ಬಹುಶಃ ಇದನ್ನು ಬೇಂದ್ರೆಯವರು ಹೇಳಿರಬೇಕು. ಹಾಗಾಗಿ ಈಗ ನಾವು ಉಳಿಯುವುದರ ಕುರಿತೂ ತಲೆ ಕೆಡಿಸಿಕೊಳ್ಳದೆ ಬರೆಯಬೇಕು. ಬರೆಯದಿದ್ದರೂ ಪರವಾಗಿಲ್ಲ. ಮೈಯೆಲ್ಲಾ ಹುಳಿಹುಳಿ ಮಾಡಿಕೊಂಡು ಬದುಕಬೇಕು’ ಅಂದೆ.

ನನ್ನ ಕಥೆಗಾರ ಗೆಳೆಯ ಒಂದು ಕಾಲನ್ನು ಸಾಹಿತ್ಯ ಚರಿತ್ರೆಯಲ್ಲೂ ಇನ್ನೊಂದು ಕಾಲನ್ನು ಹಂಪಿಯ ಕಲ್ಲುಗಳ ಮೇಲೂ ಇಟ್ಟು ನಡೆಯುತ್ತಿರುವವರು ‘ಹೌದು ಕಣೋ ನಿಜಾ’ ಅಂದು ಮಾಯವಾದರು.

***

ಕಳೆದ ತಿಂಗಳು ‘ಪ್ರಜಾವಾಣಿ’ ಸಾಪ್ತಾಹಿಕ ಪುರವಣಿ ವಿಶ್ವಕನ್ನಡ ಸಮ್ಮೇಳನದ ಹೊತ್ತಲ್ಲಿ ಕನ್ನಡ ಅಂತರ್ಜಾಲದ ಕುರಿತು ಇಡೀ ಸಂಚಿಕೆಯನ್ನು ರೂಪಿಸಿತ್ತು. ಅಲ್ಲಿ ಭೂತಗನ್ನಡಿ ಹಾಕಿ ಹುಡುಕಿದರೂ ‘ಕೆಂಡಸಂಪಿಗೆ’ಯ ಕುರಿತಾಗಲೀ, ‘ಅವಧಿ’ಯ ಕುರಿತಾಗಲೀ, ಪವನಜರ ವಿಶ್ವಕನ್ನಡದ ಕುರಿತಾಗಿಯೂ ಇರಲಿಲ್ಲ. ಅಲ್ಲಿರುವ ಗೆಳೆಯರನ್ನ ಕೇಳಿದರೆ ‘ಇಲ್ಲ ಗುರುಗಳೇ, ಇಲ್ಲಿನ ಒಳ ರಾಜಕೀಯಗಳು ನಿಮಗೆ ಗೊತ್ತಾಗುವುದಿಲ್ಲ’ ಎಂದು ಪಿಸುಗುಟ್ಟಿ ಮಾಯವಾದವರು ಇನ್ನೂ ಕಾಣಿಸಿಕೊಂಡಿಲ್ಲ. ಆಗಲೂ ಹಾಗೆಯೇ ನಗು ಬಂತು. ಕನ್ನಡ ಪತ್ರಿಕೋಧ್ಯಮದ ಕುರಿತು ಒಂದು ಸಂಚಿಕೆ ರೂಪಿಸಬೇಕಾದ ಪತ್ರಕರ್ತ ಮಹಾಶಯನೊಬ್ಬ ಪ್ರಜಾವಾಣಿಯನ್ನು ಬೇಕೆಂತಲೇ ಜಾಣನಾಗಿ ಮರೆತು ಬರೆದರೆ ನಿಮಗೆಷ್ಟು ನಗು ಬರುವುದೋ ಅಂತಹದೇ ನಗು ಅದು. ಅಂತರ್ಜಾಲದಲ್ಲಿ ಹೊಸ ಪುಳಕಗಳನ್ನು ಎಬ್ಬಿಸಿರುವ ‘ಕೆಂಡಸಂಪಿಗೆ’ಯನ್ನುಜಾಣರಾಗಿ ಮರೆತುಬಿಡುವ ಸಾಪ್ತಾಹಿಕದ ಕುರಿತು ಮರುಕವಾಯಿತು.

ಆಮೇಲೆ ಕುತೂಹಲದಿಂದ ‘ಸಾಪ್ತಾಹಿಕ’ವನ್ನು ಗಮನಿಸುತ್ತಾ ಹೋದೆ. ಕೆಂಡಸಂಪಿಗೆಯಲ್ಲಿ ಬರೆಯುತ್ತಿದ್ದ ಅದೇ ಲೇಖಕರು, ಅದೇ ತರಹದ ಅಂಕಣಗಳು. ಅದೇ ಐಡಿಯಾಗಳು. ನಮ್ಮಲ್ಲಿ ಬಂದದ್ದನ್ನೇ ಬೇರೆಯ ತರಹ ಬರೆಸಿರುವುದು! ರಾತ್ರಿಯ ಅನ್ನವನ್ನು ಮಧ್ಯಾಹ್ನದ ಸಂಡಿಗೆ ಮಾಡಿಟ್ಟಿರುವ ಆಲಸಿ ಮನಸ್ಸು!

ಈಗ ಅವರು ‘ಕೆಂಡಸಂಪಿಗೆ’ಯನ್ನು ಬೇಕಂತಲೇ ಯಾಕೆ ಮರೆಯುತ್ತಿದ್ದಾರೆ ಎಂಬುದು ಅರ್ಥವಾಗತೊಡಗಿತು!

ಸುಮಾರು ಕಾಲು ಶತಮಾನದ ಹಿಂದೆ. ಕಾಲೇಜಲ್ಲಿ ಓದುತ್ತಿದ್ದ ನಾನೊಂದು ಕಥೆ ಬರೆದಿದ್ದೆ. ಅದರ ಹೆಸರು ‘ಹಾಲು ಕುಡಿದ ಹುಡುಗಾ’ ಅದನ್ನು ಪ್ರಜಾವಾಣಿ ದೀಪಾವಳಿ ಕಥಾ ಸ್ಪರ್ಧೆಗೆ ಕಳಿಸಿದ್ದೆ. ಅದನ್ನು ಓದಿದ ಅಲ್ಲಿ ಉಪಸಂಪಾದಕಿ ತರುಣಿಯೊಬ್ಬರು ‘ಛಿ! ಪೋಲಿ ಕಥೆ!’ ಎಂದು ಕಾಲು ಪಾಲು ಓದಿ ಕಸದ ಬುಟ್ಟಿಗೆ ಬಿಸಾಕಿದ್ದಳಂತೆ.ಆಗಿನ ಸಾಪ್ತಾಹಿಕ ಸಂಪಾದಕರು, ‘ಅಯ್ಯೋ ಅದು ಪೋಲಿ ಕಥೆಯಲ್ಲಮ್ಮ. ಒಂಥರಾ ಭಾಗವತದ ಥರಾ ಇದೆ. ಎಲ್ಲಿ ಕೊಡು’ ಎಂದು ಅದನ್ನು ಕಸದ ಬುಟ್ಟಿಯಿಂದ ಎತ್ತಿಸಿದ್ದರಂತೆ. ಆಮೇಲೆ ಆ ಕಥೆಗೆ ಮೊದಲ ಬಹುಮಾನವೂ ಬಂದು, ನನ್ನ ಪ್ರೊಫೆಸರಿಗೆ ಸಮಾಧಾನಕರ ಬಹುಮಾನವೂ ಬಂದು ಮೈಯೆಲ್ಲಾ ರೋಮಾಂಚನದ ಮುಳ್ಳುಗಳೆದ್ದು ಕುಣಿದಾಡಿದ್ದು ನೆನಪಾಗುತ್ತಿದೆ.

ಆ ಸಂಪಾದಕರ ಹಾಗೆಯೇ ಯಾಕೆ ಈಗ ಈ ಪುರವಣಿಗಳು ಹೊಸ ಬರಹಗಾರರನ್ನು ಹುಟ್ಟು ಹಾಕುತ್ತಿಲ್ಲ. ಯಾಕೆ ಹೀಗೆ ಜಿದ್ದಿಗೆ ಬಿದ್ದವರಂತೆ ಅನುಕರಿಸುತ್ತಾರೆ ಅಥವಾ ನಿರ್ಲಕ್ಷಿಸುತ್ತಾರೆ ಎಂದು ಬೇಸರವಾಗುತ್ತದೆ.

‘ಯಾಕೆ ಗುರುಗಳೇ ನೀವೂ ಈ ಎಲ್ಲದರ ಕುರಿತು ಬರೆದು ರಾಡಿ ಎಬ್ಬಿಸುತ್ತಿದ್ದೀರಿ’ ಎಂದು ನೀವು ಕೇಳಬಹುದು

ಕನ್ನಡದ ಹೊಸ ತಲೆಮಾರಿನ ಓದುಗರು ಮೊದಲು ಸಾಪ್ತಾಹಿಕಗಳನ್ನು ಓದಿ, ಆಮೇಲೆ ಬಹಳ ಸಮಯದ ನಂತರ ಕೆಂಡಸಂಪಿಗೆಯನ್ನು ಓದಿ ಐಡಿಯಾಗಳನ್ನು ಅವರಿಂದ ನೀವೇ ಕದ್ದಿದ್ದೀರಿ ಎಂದು ನಮಗೇ ಉಲ್ಟಾ ಹೊಡೆಯಬಾರದಲ್ಲ. ಅದಕ್ಕೆ ಮೊದಲೇ ಹೇಳಿಬಿಟ್ಟಿದ್ದೇವೆ!

ಎಲ್ಲರಿಗೂ ಒಳಿತಾಗಲಿ

 

‍ಲೇಖಕರು G

8 April, 2011

6 Comments

  1. kumvee

    kannadada olleya kathegara rasheed saraswatalokada ola charandigalannu kuritu barediruvudu sariyagide,
    mooroo dashakagala badukiulidiruva nammellara anubhava adu, omme eedashakada ketta kaadambari endu khaasagiyaagi tegalida obba mahashaya vedike mele adu sarvootkrusta kruti endu kondadidaru, yake ee mukhavada ednu keliddakke aavyakti kevala kaadambarikara matravalla, vimarshaka saha edu tammannu taavu maremachikondaru,

  2. malathi S

    🙂

  3. ಆಸು ಹೆಗ್ಡೆ

    ಪತ್ರಿಕೋದ್ಯಮ ರಂಗದಲ್ಲಿನ ರಾಜಕೀಯದ ನಾತವನ್ನು ಮೈಗೂಡಿಸಿಕೊಂಡು, ಕೆಂಡಸಂಪಿಗೆ ತನ್ನ ಸುಗಂಧವನ್ನು ಕುಗ್ಗಿಸಿಕೊಳ್ಳದಿರಲಿ, ಎನ್ನುವುದೇ ನನ್ನ ಹಾರೈಕೆ!

  4. sangeetha

    ಹಾಲು ಕುಡಿದ ಕೆಂಡಸಂಪಿಗೆ ಸಂಪಾದಕರು ಬರೆದ ಸಂಪಾದಕೀಯದಲ್ಲಿ ಒಂದೇ ಆರೋಪ,” ಪ್ರಜಾವಾಣಿ ಪ್ರಕಟಿಸಿದ ಸಾಪ್ತಾಹಿಕ ಪುರವಣಿಯಲ್ಲಿ ಕೆಂಡಸಂಪಿಗೆಯ ಪ್ರಸ್ತಾಪವಿಲ್ಲ” ಅಂತ. ಇಷ್ಟಕ್ಕೆ, ಇಷ್ಟೊಂದು ಅತ್ತು ಕರೆಯಬೇಕೇ? ಪ್ರಜಾವಾಣಿಯ ಲೇಖನದಲ್ಲಿ ತಮ್ಮ ವೆಬ್ ಪತ್ರಿಕೆಯ ವಿವರಗಳು ಬರದಿದ್ದರೇನಂತೆ; ‘ಕತ್ತೆಬಾಲ, ಕುದುರೆಜುಟ್ಟು’ ಅಂದ್ಕೊಂಡ್ರಾಯ್ತಪ್ಪ. ಬಿ.ಟಿ.ಜಾಹ್ನವಿಯವರ ಲೇಖನ ಕೆಂಡಸಂಪಿಗೆಯಲ್ಲಿ ಮೊದಲು ಪ್ರಕಟವಾಗಿ, ಈಗ ಇಲ್ಲಿ ಮರುಪ್ರಕಟವಾಗಿದೆ ಅನ್ನೋದು ಇನ್ನೊಂದು ಆರೋಪ, ಲೇಖಕಿಗೇ ಇಲ್ಲದ ಕಳಕಳಿ, ಇದೇ ಲೇಖಕಿ ‘ಪ್ರಜಾವಾಣಿ’ ಬಳಗದ ಮಯೂರ ಎರಡು ವರ್ಷಗಳ ಹಿಂದೆ ರೂಪಿಸಿದ ಲಂಕೇಶ್ ವಿಶೇಷಾಂಕದಲ್ಲಿ ನಿರೂಪಿಸಿದ ವಿಶೇಷ ಅನನ್ಯ ಬಾಂಧವ್ಯವೊಂದು ನೆನಪಾಗುತ್ತಿದೆ. ಲಂಕೇಶರು ತೀರಿಕೊಂಡ ಮೇಲೆ, ಹಳೇ ಕನವರಿಕೆಗಳು ಬಣ್ಣಿತವಾದ ರೀತಿಗೂ, ಈ ಲೇಖನಕ್ಕೂ ಸಂಬಂಧವಿದೆ ಅನಿಸುತ್ತಿದೆ. ಅವರಿವರದು ರಾಜಕೀಯ, ನಮ್ಮದು ಏನು?
    ಸಂಗೀತಾ.

  5. ಅಶೋಕ ಶೆಟ್ಟರ್

    “ಯಾಕೆ ಗುರುಗಳೇ ನೀವೂ ಈ ಎಲ್ಲದರ ಕುರಿತು ಬರೆದು ರಾಡಿ ಎಬ್ಬಿಸುತ್ತಿದ್ದೀರಿ ಎಂದು ನೀವು ಕೇಳಬಹುದು… …”
    “ಇಲ್ಲ, ಇವರೇ,ಹೀಗೇ ರಾಡಿ ಎಬ್ಬಿಸುತ್ತಿರಿ, ರಾಡಿ ನೀರು ಕೊಚ್ಚಿ ಹೋದ ಮೇಲೇ ತಿಳಿನೀರು ಹರಿಯುವದು.” ಎಂದು ನಾವು ಹೇಳುತ್ತೇವೆ.”

  6. nempe devaraj

    ನೀವು ಹೀಗೆಲ್ಲ ರಾಡಿ ಎಬ್ಬಿಸುತ್ತಿರಬೇಕು. ಇಲ್ಲದಿದ್ದರೆ ಹೊಸ ಹೊಳಪು ಹುಡುಗರಿಗೆ ಸಿಗುವುದೇ ಇಲ್ಲ.ಬೆಳೆಸುವ ಮನಸ್ಸುಗಳು ಕಮರಿಹೋಗುತ್ತವೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading