ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೃಪಾಕರ ಸೇನಾನಿ ಅವರ ಹೊಸ ಕೃತಿ – ಲೋಕೇಶ್ ಮೊಸಳೆ ಕಂಡಂತೆ..

ಕನ್ನಡಕ್ಕೊಂದು ಹೊಸತನದ ದೃಶ್ಯ ಕಲಾಕೃತಿ..

ಡಾ ಲೋಕೇಶ್ ಮೊಸಳೆ

ಇತ್ತೀಚೆಗೆ ಯಾವೊತ್ತೋ ಒಂದು ದಿನ ಮೈಸೂರಿನ ರಸ್ತೆಯಲ್ಲಿ ಒಬ್ಬನೆ ಕಾಫಿ ಕುಡಿಯುತ್ತ ನಿಂತಿದ್ದೆ.

ಅದೆಲ್ಲಿಗೋ ಹೋಗುತ್ತಿದ್ದ ಕೃಪಾಕರ-ಸೇನಾನಿ ಎದಿರು ನಾನು ಅನಾಮಿಕನಂತೆ ಸಿಕ್ಕಿಕೊಂಡೆ. ಏನೋ ಇಲ್ಲಿ ಹೇಗಿದ್ದೀಯಾ? ಎಂದು ನಿಂತರು. ಅಷ್ಟರಲ್ಲಿ ಅವರಿಗೂ ಕಾಫಿ ಹೇಳಿದ್ದೆ. ಒಂದೈದು ನಿಮಿಷದಲ್ಲೇ ಎಲ್ಲಿಂದಲೋ ಬಂದ ಅವರ ಅಭಿಮಾನಿಗಳನ್ನು ಕೃಪಾಕರ ಸಂಭಾಳಿಸುತ್ತಿದ್ದರು. ಸೇನಾನಿ ನನ್ನೊಂದಿಗೆ ‘ಕುವೆಂಪು ಪುಸ್ತಕ’ ಮುಗಿಸಿದೆವು; ಮುಂದಿನ ವಾರದಲ್ಲಿ ಕೈಗೆ ಸಿಗುತ್ತದೆ. ಇಷ್ಟು ವರ್ಷ ಸತಾಯಿಸಿತು. ಸಖತ್ತಾಗಿ ಬಂತು ಕಣೋ. ನಾಲ್ಕು ತಿಂಗಳಿ೦ದ ಬರೇ ಅದೇ ಕೆಲಸ… ಪುಸ್ತಕ ಬಂದಾಗ ಫೋನ್ ಮಾಡುವೆ ಮನೆಗೆ ಬಾ ಎಂದರು. ಮೊದಲ ಪ್ರತಿ ನನಗೆ ಕೊಡಬೇಕೆಂದೆ; ಆಯ್ತು ಬಾರೋ ಎಂದು ಹೋದರವರು ….

ಮರುದಿನ ಬೆಳಗ್ಗೆ ಕೃಪಾಕರ್‌ಗೆ ಫೋನ್ ಮಾಡಿ ಎಲ್ಲಿದ್ದೀರಾ…? ಎಂದೆ ‘ಮನೆ’ ಎಂದರು; ಬಂದೆ ಐದೇ ನಿಮಿಷ… ಎಂದು ಹೋಗಿ ಪುಸ್ತಕದ ಪ್ರೂಫ್ ತೋರಿಸಿರೆಂದು ಹಠ ಹಿಡಿದೆ. ನೋಡಿ ಖುಷಿಗೊಂಡು ಬಂದಿದ್ದೆ.

ಪುಸ್ತಕ ಬಂದಾಗ ಸಹಿಯೊಂದಿಗೆ ಒಂದು ಡಜನ್ ಪುಸ್ತಕ ಖರೀದಿಸಿ ಅವರಿವರಿಗೆ ತೋರಿಸುತ್ತ; ಹಂಚುತ್ತ ಸಂಭ್ರಮಿಸುತ್ತಿದ್ದೆ. ಸಂಭ್ರಮಿಸುತ್ತಿದ್ದ ಈ ದಿನಗಳಲ್ಲೇ…. ಮತ್ತೆ ಕೃಪಾ-ಸೇನಿ ಮೊನ್ನೆ ಪ್ರೆಸ್ ಕ್ಲಬ್‌ನಲ್ಲಿ ಸಿಕ್ಕರು….

ಸೇನಾನಿ ಮಾತನಾಡುತ್ತ ತಾರಿಣಿ ಅವರಿಗೆ ಪುಸ್ತಕ ಕೊಟ್ಟೆ, ಓಹೋ…! ಕೊನೆಗೂ ಪುಸ್ತಕ ಬಂದು ಬಿಟ್ಟಿತಾ…? ಎಂದು ಪುಟಗಳನ್ನು ಅವಸರದಲ್ಲಿ ತಿರುಗಿಸುತ್ತಿದ್ದರು. ಮೂರ‍್ನಾಲ್ಕು ಪುಟಗಳಿಂದ ಮುಂದೆ ಹೋಗಬೇಕಿದ್ದ ತಾರಿಣಿ ಅವರು ಮತ್ತೆ ಹಿಂದಿರುಗಿ ಮೊದಲ ಪುಟ ನೋಡುತ್ತ ಮೌನವಾದರು. ನೋಡ ನೋಡುತ್ತಲ್ಲಿದ್ದ ತಾರಿಣಿ ಅವರ ಬೆರಳುಗಳು ಚಿತ್ರದ ಮೇಲೆ ನಿಧಾನವಾಗಿ ಕೈ ಸವರುತ್ತಿರುವಾಗ…
ಮೌನವೊಂದೇ ಭಾಷೆಯಾಗಿತ್ತು!

ಆಗ ನನ್ನಲ್ಲೊಂದು ಹೇಳಲಾಗದ ಬರೆಯಲಾಗದ ಮನಸ್ಥಿತಿಯಲ್ಲಿದ್ದೆ. ತಾರಿಣಿಯವರ ಬೆರಳು ಚಿತ್ರದ ಮೇಲೆ ಹೊರಳಿದಾಗಲೇ ‘ಇಲ್ಲಿ ಅವಸರವೂ ಸಾವಧಾನದ ಬೆನ್ನೇರಿದೆ …!’ ಎಂಬ ಸಾಲುಗಳನ್ನು ನೆನಪಿಸಿತು. ಗೆದ್ದಭಾವ ನನ್ನಾವರಿಸಿತ್ತು.

ತಾರಿಣಿ ಅವರು ಮೌನದಿಂದ ನಿಧಾನವಾಗಿ ನನ್ನತ್ತ ದೃಷ್ಟಿಯಿಟ್ಟು ‘ಅಯ್ಯೋ ಅಣ್ಣನ ಕೈ ಮುಟ್ಟಿದಂತಾಯಿತು’ ಅನ್ನುವ ತೃಪ್ತಭಾವ ಹೊರಬಿತ್ತು. ಆಗ ‘ನಿಜಕ್ಕೂ ನಾವು ಗೆದ್ದೆವು ‘ ಎಂದು ಹೇಳುತ್ತಿರಬೇಕಾದರೆ…. ಆ … ಆಹಾ! ಅದು… ಅದು… ಹೀಗೆಯೋ ಅದು… ಎಲ್ಲರಿಗೂ ಆಗುತ್ತದೆ ನೋಡಿ, ನೋಡಿ… ಎಂದೆ. ಅಷ್ಟರಲ್ಲಿ….

ಗೆಳೆಯ ನೇತ್ರ ರಾಜುವಿನ ನೆನಪಿನ ಕಾರ್ಯಕ್ರಮ. ಇವರಿಬ್ಬರೂ ಮಾತನಾಡುವುದಿತ್ತು. ವೇದಿಕೆಗೆ ಹೊರಟರು. ನೇತ್ರನ ಬಗ್ಗೆ ದೇವನೂರ ಮಹದೇವ ಅವರು ‘ನೇತ್ರ’ ನನಗೆ ನಿಜ ‘ದಿಗಂಬರ’ ನಂತೆ ಕಾಣುತ್ತಾನೆ ಎಂದಿದ್ದ ಮಾತನ್ನು ಸೇನಿ ಹೇಳುತ್ತ ನೇತ್ರನ ವ್ಯಕ್ತಿತ್ವವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದರು.

ಕಳೆದ ಮೂರು ದಶಕಗಳ ಹಿಂದೆ ಇವರಿಬ್ಬರು ಕುವೆಂಪು ಅವರ ಸಾಕ್ಷ್ಯಚಿತ್ರ ನಿರ್ಮಿಸುವ ಬಯಕೆಯೊಂದಿಗೆ ಹೋಗಿ ಹಲವಾರು ತಿಂಗಳು ಕುವೆಂಪು ವ್ಯಕ್ತಿತ್ವದ ಲೋಕವನ್ನು ಅರಿಯುತ್ತ ಸಾಕ್ಷ್ಯಚಿತ್ರಕ್ಕಿಂತ ‘ಚಿತ್ರ ಸಂಪುಟ’ ಮಾಡಬಹುದೆಂಬ ದೃಷ್ಟಿಯಲ್ಲಿ ವರ್ಷಾನುಕಾಲ ಚಿತ್ರಿಸಿದ ಪರಿಣಾಮ ಈಗ ‘ಕ್ಯಾಮರಾ v/s ಕುವೆಂಪು’ ಅನ್ನೋ ಕೃತಿಯೊಂದು ರೂಪುಗೊಂಡಿದೆ.

ಇದು ಕಥಾಚಿತ್ರ ಸಂಪುಟವೋ – ನುಡಿಚಿತ್ರ ಸಂಪುಟವೋ ಗೊತ್ತಾಗುತ್ತಿಲ್ಲ. ಕನ್ನಡ ಭಾಷೆಗೆ ಹೊಸದೊಂದು ‘ಕಲಾಕೃತಿ’ ಅಂತೂ ಸಿಕ್ಕಿದೆ.
ಭಾಷೆ ಮೀರಿದ – ಚಿತ್ರ ಮೀರಿದ – ಸಮಯ ಮೀರಿದ-ಪುಟಸಂಖ್ಯೆಯ ಹಂಗು ತೊರೆದ ಚಿತ್ರ ಕಥನ. ಇಲ್ಲಿ ಇತಿಹಾಸ ದಾಖಲು ಮಾತ್ರವಲ್ಲ. ವ್ಯಕ್ತಿಯೊಬ್ಬರ ದಿನಚರಿಯಂತೂ ಮೊದಲೇ ಅಲ್ಲ. ‘ಚಲನೆಯಲ್ಲಿನ ಸ್ಥಿರ ಚಿತ್ರಗಳ ಕಲಾತ್ಮಕ ಸಂಯೋಜನೆ’. ಈ ಸಂಯೋಜನೆಗಳಿ೦ದಲೇ ಚಿತ್ರಕಥೆಯನ್ನು ಸಹ್ಯವಾಗಿಸಿ ‘ಆಪ್ತಭಾವದ ಕಲಾಕೃತಿ’ ಅನ್ನಿಸಿದೆ.

ಇಂಗ್ಲೆ೦ಡ್ ಚರಿತ್ರೆಯಲ್ಲಿನ ‘ನೆಲ್ಸನ್’ -ಏಡ್ವರ್ಡ್ ಬರ‍್ರಿ’ ಕತೆಯೊಂದಿಗೆ ಪ್ರಾರಂಭವಾಗುವ ಕಥಾನಕ ಕೊನೆಗೆ ‘ಅರಬ್ಬಿ ಕತೆಯೊಂದಿಗೆ ಮುಕ್ತಾಯವಾಗುತ್ತ ತಮ್ಮ ಕ್ಯಾಮರಾ ಚಲಿಸಿದ, ಸಿಕ್ಕ ಸಿಕ್ಕ ಅವಕಾಶಗಳನ್ನೆಲ್ಲ ನುಂಗಿಕೊ೦ಡ ಕ್ಯಾಮೆರಾದ ಇತಿಹಾಸಕ್ಕೆ ಕೂಡ ಈ ಕಲಾಕೃತಿ ಸಾಕ್ಷಿಯಾಗಿದೆ.

ಈ ಕೃತಿ ಕುವೆಂಪು ಚಿತ್ರಗಳ ದಾಖಲೆ ಮಾತ್ರವಲ್ಲ. ಚಿತ್ರ ಸಂಪುಟ (ಅಲ್ಬಂ) ಮೊದಲೇ ಅಲ್ಲ. ಇದೊಂದು ಕನ್ನಡ ಲೋಕಕ್ಕೆ ಸಿಕ್ಕ ಮೊದಲ ಕಲಾಕೃತಿ ಯಾಕೆಂದರೆ…

‘ಇಲ್ಲಿ ತೀರ್ಥವೂ ಕೂಡ ನೀರೇ….’ ಎಂದು ಪ್ರಾರಂಭವಾಗುವ ಅಧ್ಯಾಯ ಇಡೀ ಕೃತಿಯಲ್ಲಿ ಒಂದೇ ಅಧ್ಯಾಯ !. ಸುಮಾರು ಒಂದು ಸಾವಿರ ಪದಗಳಲ್ಲಿ ಕ್ಯಾಮರಾದ ಅಂದಿನ ಸ್ಥಿತಿಗತಿ ಕುವೆಂಪು ಸುತ್ತ ಬೆಳೆದಿದ್ದ ಜನಸಾಮಾನ್ಯರ ಮನಸ್ಥಿತಿ; ಸಾಮಾನ್ಯರಲ್ಲಿ ಸಾಮಾನ್ಯರಾದ ಹಣ್ಣು ಮಾರುವ ಪುಟ್ಟಮ್ಮ ಎಂಬ ಹಣ್ಣಮ್ಮ, ಹಣ್ಣಮ್ಮನಿಗೆ ನೆರವಾಗುತ್ತಿದ್ದ ಸಾಬಣ್ಣ, ಹಣ್ಣಮ್ಮನ ಮಗಳು ಮಾದೇವಿ, ಪೋಸ್ಟ್ಮನ್ ರಂಗಪ್ಪ, ಕ್ಷೌರಿಕ ಅಶ್ವತ್, ಕಿಂದರಿ ಜೋಗಿ’ ರಂಗ ರೂಪಕದ ಬಿ.ವಿ. ಕಾರಂತರು, ಕುವೆಂಪು ಅವರನ್ನು ಮೈದಡವಿ ಸಲಹುತ್ತಿದ್ದ ಮಗಳು ತಾರಿಣಿ ಅಲ್ಲದೆ ಕುವೆಂಪು ಮನೆ ‘ಉದಯರವಿ’ ಸುತ್ತಲಿನ ಸನ್ ಬರ್ಡ್, ಬಾರ್ಬೆಟ್ ಪಿಕಳಾರ, ಓರಿಯಲ್, ಪ್ಯಾರಡೈಸ್ ಫ್ಲೈಕ್ಯಾಚರ್, ಚಂದ್ರಮುಕುಟ, ಬ್ಯಾಬ್ಲರ್ ಮತ್ತು ಕಾಮನ್ ಹಾಕ್ ಕಕೂ ಮುಂತಾದ ಜೀವ ಜಾಲದೊಳಗಿನ ಸೂಜಿಗಗಳನ್ನು ಪರಿಚಯಿಸುವ, ಪರಸ್ಪರ ನಡೆಯುವ ಸರಳ ಅನುಸಂಧಾನಗಳ ಇತಿಹಾಸವನ್ನು ಈ ಕೃತಿ ನೆನಪಿಸುತ್ತದೆ.

ಕಾಜಾಣ ಹಕ್ಕಿಯನ್ನು ಕುವೆಂಪು ತಮ್ಮ ಕೃತಿಗಳಲ್ಲಿ ವಿಶೇಷವಾಗಿ ಅಲಂಕರಿಸಿಕೊ೦ಡಿದ್ದರು. ಈ ಪಕ್ಷಿಯನ್ನು ತಮ್ಮ ಪ್ರತಿನಿಧಿಯಾಗಿ ನೇಮಿಸಿಕೊಂಡಿದ್ದರೆ….? ಅದರ ರಹಸ್ಯವನ್ನರಿಯಲು ವಿಫಲರಾದ ಕೃಪಾಕರ ಸೇನಾನಿ ಬೊಮ್ಮ-ಚೆನ್ನರ ಒಡನಾಟದಲ್ಲಿ ಕುವೆಂಪು ಕಾಜಾಣದ ತಾತ್ವಿಕ ಪ್ರೀತಿಯನ್ನರಿಯದೆ ಪರಿತಪಿಸುವ ಪರಿ ಇಲ್ಲಿ ದಾಖಲಾಗಿದೆ.

ಟಿಕಲ್‌ಪ್ಲವರ್ ಪೆಕರ್ ಪಕ್ಷ್ಷಿ ಮತ್ತದರ ವಿವರಣೆ ಆ ಪಕ್ಷಿಗೆ ಕುವೆಂಪು ಬಂದಳಿಕೆ ಹಕ್ಕಿ ಎಂದು ಕರೆಯುವ ಹಿನ್ನೆಲೆ ಯಾಕೆಂದು ವಿವರಿಸಿದ್ದಾರೆ.
ಕುವೆಂಪು ಅವರ ಮನೆಯ ವಿದೇಶಿ ಗಡಿಯಾರ ಮತ್ತು ಸುಸ್ಮಿತ – ಈಶಾನ್ಯೆಯರ ಗಡಿಯಾರದ ಒಡನಾಟದ ಬರಹ ಆಪ್ತವಾಗಿದೆ.
ಕುವೆಂಪು ಝೆನ್ ತತ್ತ್ವದೆದುರು ಕ್ಯಾಮರಾ – ಅಜಯ್ ದೇಸಾಯಿ ಮತ್ತಿವರೆಲ್ಲರ ಮೂರ್ಖತನವನ್ನು ವಿವರಿಸಿಕೊಳ್ಳುತ್ತ ಜೀವನ – ವಯಸ್ಸು ಎಷ್ಟು ಪಾಠ ಕಲಿಸುತ್ತದೆಂಬ ಸ್ವವಿಮರ್ಶಾ ಸಾಂತ್ವನದ ಬರಹದಲ್ಲಿ ಅರಿವು ಮೂಡಿ ಚಿಂತಿಸಬೇಕಾದರೆ ಬೌದ್ಧಿಕ ಮನಸ್ಸು ಮಾಗಬೇಕು ಎನ್ನುತ್ತಾರೆ.

ಹಾಗಾಗಿಯೇ ಈ ಕೃತಿ ಮಾಗಿದ ಕಲಾಕೃತಿಯನ್ನಾಗಿಸಲು ಚಿತ್ರ ನಿರ್ಮಾಣದ ಅನುಭವದಿಂದ ಕಲಿತ ಎಡಿಟಿಂಗ್ – ಸ್ಕ್ರಿಪ್ಟ್ ಬರಹದಂತೆ; ಸಿನೆಮಾದ ಪ್ರತಿ ಶಾಟ್‌ನಲ್ಲಿನ ಪ್ರತಿ ಸೆಕೆಂಡ್‌ನ ೨೪ ಫ್ರೇಂಗಳಲ್ಲಿನ ಒಂದೊ೦ದೇ ಫ್ರೇಂ ಅನ್ನು ಕತ್ತರಿಸಿದಂತೆ ಐದಾರು ಸಾವಿರಕ್ಕೂ ಮಿಗಿಲಾಗಿ ತೆಗೆದ ಚಿತ್ರಗಳಲ್ಲಿ ಕೇವಲ ೮೭ ಚಿತ್ರಗಳನ್ನು ಬಳಸಿ ಬಂದು ಉತ್ತಮ ಚಲನ ಚಿತ್ರದ ಅನುಭವವಾಗುವಂತೆ ಈ ಕೃತಿಯನ್ನು ರೂಪಿಸಿದ್ದಾರೆ.
ಇದಷ್ಟೇ ಅಲ್ಲ.. ಇದಕ್ಕಿಂತ ಇನ್ನೂ ಇದೆ. ಈ ಕಲಾಕೃತಿಯಲ್ಲಿ !

ಮುಖಪುಟ ತೆರೆದರೆ ಗಾಢ‌ ಕಪ್ಪು ಪುಟದಿಂದ ಪ್ರವೇಶ ಪಡೆದು ಕೃತಿಯುದ್ದಕ್ಕೂ ಬಿಳಿ ಪುಟಗಳು ನಮ್ಮನ್ನಾವರಿಸುತ್ತದೆ. ಯಾಕೆ ಹೀಗೆ…?
ಈ ಕಲಾಕೃತಿ ರೂಪುಗೊಂಡಿರುವುದೇ…. ಗಾಢ ಕಪ್ಪುವಿನಿಂದ ಹೊರಟು ಅಚ್ಚ ಬಿಳುಪಿಗೆ ತಲುಪಿ ಇವೆರಡರ ಮಿಶ್ರಣದೊಂದಿಗೆ ರೂಪುಗೊಂಡಿರುವ ಗ್ರೆಟೋನ್ ಕರ‍್ಸ್ನ ಕುವೆಂಪು ಅವರ ಚಿತ್ರದ ಮುಖಭಾವ ನಮ್ಮ ಕಣ್ಣೊಳಗೆ ತುಂಬಿಕೊಳ್ಳುವ ಬಗೆಯೇ ವಿಚಿತ್ರ. ಈ ಕೃತಿಯ ಮೊದಲ ಚಿತ್ರದಲ್ಲಿಯೇ ಅವರ ಕಣ್ಣೋಟವನ್ನು ಎದುರಿಸಲಾಗುವುದಿಲ್ಲ. ಕಾರಣ…? ನನಗೆ ಗೊತ್ತಾಗುತ್ತಿಲ್ಲ. ಇದರಿಂದಲೇ ಕೃಪಾಕರ ಸೇನಾನಿ ಅವರಿಗೂ ಸಾಕ್ಷ್ಯಚಿತ್ರ ಮಾಡಲಾಗಿಲ್ಲವೇನೋ… ಅಥವಾ ಈ ಕೃತಿಯನ್ನು ರೂಪಿಸಲು ಮೂವತ್ತೈದಕ್ಕೂ ಹೆಚ್ಚು ವರ್ಷ ಒದ್ದಾಡಿದ್ದಾರೆನೋ…!!! ಇಂಥಾ ಒದ್ದಾಟ ನಿಜವಾದ ಕಲಾವಿದನಿಗೆ ಮಾತ್ರ ಸಾಧ್ಯ ಎಂಬುದು ನನ್ನ ನಂಬಿಕೆ. ಕವಿಕುವೆಂಪು ವ್ಯಕ್ತಿತ್ವವೇ ಹಾಗೇನೋ.. ಅದನ್ನು ಈ ಕೃತಿಯ ಮೊದಲ ಚಿತ್ರವೊಂದರಿ೦ದಲೇ ಕೃಪಾಕರ-ಸೇನಾನಿ ಅವರು ಕುವೆಂಪು ಅವರ ‘ವ್ಯಕ್ತಿತ್ವ – ಸಾಹಿತ್ಯ’ದಂತೆಯೇ ಗಾಢವಾಗಿ ಚಿತ್ರಿಸಿದ್ದಾರೆ. ಇದೇ ಈ ಕೃತಿಯ ವಿಶೇಷ. ಚಿತ್ರವೊಂದು ಬರೇ ಚಿತ್ರವಾಗಿರದೆ; ಇನ್ನೇನೆಲ್ಲ ಆಗುವುದೇ ಆ ಚಿತ್ರದ ಯಶಸ್ಸು ಮತ್ತು ಸತ್ವಯುತ ಅಭಿವ್ಯಕ್ತಿ.

ಕುವೆಂಪು ಮನೆಗೆ ಹಣ್ಣು ಮಾರುತ್ತಿದ್ದ ಪುಟ್ಟಮ್ಮನವರನ್ನು ಹಣ್ಣಮ್ಮನೆಂದು ಕರೆಯುತ್ತಿದ್ದರಂತೆ.. ಹಣ್ಣಮ್ಮನನ್ನು ಮಾತಾಡಿಸಿದರೆ ಕುವೆಂಪು ಸ್ವಲ್ಪ ಅರ್ಥವಾಗಬಹುದೆಂಬ ಆಶಯದಲ್ಲಿ ಹಣ್ಣಮ್ಮನೊಂದಿಗೆ ಸಂವಾದಿಸಿದಾಗ ಹಣ್ಣಮ್ಮನ ಬದುಕಿನ ಫಿಲಾಸಫಿಯೇ ಬೇರೆ.
ಹಣ್ಣಮ್ಮನ ಮಗಳು ಮಾದೇವಿ ಹಣ್ಣು ಮಾರುವ ಕಾಯಕಕ್ಕೆ ಬಂದಾಗ ಪುಟ್ಟಮ್ಮ ‘ಹೋಗ್ಬುಟ್ಟ’ ಸುದ್ದಿ ಕೇಳಿದ ಈ ಚಿತ್ರ ಲೇಖಕರಿಬ್ಬರೂ ಆತಂಕಗೊ೦ಡು ‘ಇಲ್ಲಿ ನಮಗೆ ಪುಟ್ಟಪ್ಪನವರಿರಲಿ ಈ ಪುಟ್ಟಮ್ಮ ಕೂಡ ಕೈಗೆಟುಕಲಿಲ್ಲ ಎಂದು ಆತಂಕಿಸಿದ್ದಾರೆ.

ಹೀಗಿರುವಾಗ ಕುವೆಂಪು ಅವರ ತೀಕ್ಷ್ಣ ಕಣ್ಣೋಟವನ್ನು ನಾವು ಎದುರಿಸುವುದು ಕಷ್ಟವಾಗುತ್ತಿದೆ. ಹಾಗಾಗಿ ಈ ಚಿತ್ರ ಇವೆಲ್ಲಾ ಕಾರಣಕ್ಕಾಗಿ ಕಲಾಕೃತಿ ಎನ್ನಿಸಿಕೊಳ್ಳುತ್ತಿದೆ.

ಮತ್ತೊಂದು ಪುಟ ತಿರುವಿದರೆ ಇಲ್ಲಿ ಅವಸರವು ಸಾವಧಾನದ ಬೆನ್ನೇರಿದೆ….! ಎಂದು ಕುವೆಂಪು ಕುರ್ಚಿಯ ಹಿಡಿಯ ಮೇಲಿನ ಬೆರಳುಗಳ ಚಿತ್ರ ಒಂದು ಕಾವ್ಯದಂತಿದೆ. ಈ ಚಿತ್ರವನ್ನೇ ಬೆರಳಲ್ಲಿ ಸವರಿ ತಾರಿಣಿಯವರು ‘ಅಯ್ಯೋ…. ಅಣ್ಣನ (ಕುವೆಂಪು) ಬೆರಳು ಸ್ಪರ್ಶಿಸಿದ ಹಾಗಾಯಿತು’ ಎಂದು ಪ್ರತಿಕ್ರಿಯಿಸಿರುವುದು. ಕುವೆಂಪು ಅವರ ಕೈಕಾಲು ಮೈದಡವಿದ್ದ ತಾರಿಣಿ ಅವರಿಗೆ ಪುಸ್ತಕದಲ್ಲಿದ್ದ ಚಿತ್ರವನ್ನೇ ಸವರಿದಾಗ ಇಂಥ ಅನುಭವ ಆಯ್ತು ಎನ್ನುವ ಪ್ರತಿಕ್ರಿಯೆಯೇ ಈ ಚಿತ್ರಕೃತಿಗೆ ಬೇರೆ ಮಾತುಗಳೇ ಬೇಕಿಲ್ಲ.

‘ಇಲ್ಲಿ ತೀರ್ಥವೂ ಕೂಡ ನೀರೇ’ ಎನ್ನುವ ಕೃತಿಯ ಪುಟದಲ್ಲಿ ಚಿತ್ರಗಾರರ ಬರಹ ಕಥೆ ರೂಪದಲ್ಲಿ ಪ್ರಾರಂಭವಾಗುವುದು ಕುವೆಂಪು ಬಳಸುತ್ತಿದ್ದ ‘ಊರುಗೋಲು’ ನಮ್ಮನ್ನು ಕೈಹಿಡಿದು ನಡೆಸಿಕೊಂಡು ಹೋಗುತ್ತದೆ.

ಚಿತ್ರ ಅಕ್ಷರಗಳು ಇನ್ನೆಲ್ಲವನ್ನು ಹೇಳುತ್ತ ನಮಗೆ ‘ದೂರ ಉಳಿದಿರುವ…?’ ಕುವೆಂಪು ಅವರ ಮನೆ ‘ಕೈತೋಟ’ ಕುವೆಂಪು ಮನೆ ಕಿಟಕಿಒಳಗಿನಿಂದ ಅವರ ದಾರ್ಶನಿಕತ್ವವನ್ನು ಕತ್ತಲು ಬೆಳಕು, ಕ್ಯಾಮರಾದ ಚೌಕಟ್ಟುಗಳಿಗೆ ಅಕ್ಷರ ರೂಪದ ವಿವರಣೆಗಳೊಂದಿಗೆ ಎಲ್ಲವನ್ನೂ ಕಪ್ಪು-ಬಿಳುಪು ಮಿಶ್ರಣದ ಗ್ರೇಟೋನ್ ಕಲಾಕೃತಿಗಳಾಗಿ ದೂರದಿಂದ ಹತ್ತಿರ-ಹತ್ತಿರಕ್ಕೆ ಕರೆದೊಯುತ್ತ ಮೈಮನ ತುಂಬಿಕೊಳ್ಳುತ್ತದೆ.

ಬಿಳಿ ವಸ್ತ್ರದಾರಿ ಕುವೆಂಪು ಮತ್ತು ಈ ಚಿತ್ರಗಳು ನೆರಳು ಬೆಳಕಿನೊಂದಿಗೆ ಸಾಂಕೇತಿಕವಾಗಿ ಮಿಶ್ರಣಗೊಂಡಿವೆ. ಕೃತಿಯ ಯಶಸ್ಸು ಚಿತ್ರಗಳಲ್ಲಿಯೇ ಇದೆ. ಇದಕ್ಕೆ ಪೂರಕವಾಗಿ ಅಕ್ಷರದ ನಿರೂಪಣೆ ಕೂಡ ಕಥೆ, ತಮಾಷೆ, ಭಾವುಕತೆಗಳನ್ನೊಳಗೊಂಡ೦ತೆ ಸರಳ ಭಾಷೆಯಲ್ಲಿ ಇದೆ. ಒಂದು ಕಾಫಿ ಟೇಬಲ್ ಕೃತಿಯೊಂದು ಹೇಗೆ ಭಿನ್ನವಾಗಿ ಗ್ರಹಿಸಿ ರೂಪಿಸಬಹುದೆಂಬುದಕ್ಕೆ ಕನ್ನಡದಲ್ಲಂತೂ ಪ್ರಪ್ರಥಮ ಮಾದರಿಯಾಗಿದೆ.

ಕುವೆಂಪು ಬಿಳಿವಸ್ತ್ರ – ಬೆತ್ತದ ಕೈಹಿಡಿ, ಬೆತ್ತದ ಕುರ್ಚಿ ನಿಸರ್ಗ ಕವಿಯ ಜೀವನ ದರ್ಶನ ಹೀಗೆ ಕುವೆಂಪು ಅವರನ್ನು ಈ ಕೃತಿಯುದ್ದಕ್ಕೂ ಮತ್ತೆ ಮತ್ತೆ ನೋಡುತ್ತ ವಿಶ್ಲೇಷಿಸಿ ವಿಮರ್ಶಿಸಿ ಕೊಳ್ಳುತ್ತ ಪೈಂಟಿ೦ಗ್ ಕಲಾವಿದನ ಕೃತಿಯಂತೆ ಆಪ್ತವಾಗುತ್ತಿರುತ್ತದೆ.

ಇಲ್ಲಿನ ಚಿತ್ರ ಸಂಯೋಜನೆ, ವಿನ್ಯಾಸ-ಬೆಳಕು, ಕತ್ತಲುಗಳ ಮಿಶ್ರಣ ಚಿತ್ರ ಸಂಯೋಜನೆಯ ಚೌಕಟ್ಟುಗಳ ಆಳ-ಅಗಲ ವಿಸ್ತಾರಗಳ ಅರಿವು ನೋಡುಗ ಓದುಗರಿಗೆ ದಕ್ಕಿದಾಗ ಇದು ಕಲಾಕೃತಿಗಿಂತ ಎಂಥಹಾ ‘ಅದ್ಬುತ ಕವಿದರ್ಶನ’ ಎಂದನ್ನಿಸದೇ ಇರದು. ಹೀಗಾಗಿ ಈ ಕಲಾಕೃತಿಯೊಂದು ಮನದಲ್ಲಿ ಗೂಡು ಕಟ್ಟಬೇಕಾದರೆ ಮನೆಯೊಳಗಿರಬೇಕು ; ಮನದೊಳಗೂ ಇಳಿಯ ಬೇಕು. ಈ ಕೃತಿಯಲ್ಲಿನ ಅರಬ್ ಕತೆಯ ಒಂಟೆಯ೦ತೆ….

‍ಲೇಖಕರು Admin

25 December, 2022

1 Comment

  1. ರಾಘವೇಂದ್ರ ಮಯ್ಯ. ಮದ್ದೂರು

    ಕುತೂಹಲಕಾರಿ ಬರೆಹ. ಕುವೆಂಪು ಅವರ ಕುರಿತಾದ ಈ ಪುಸ್ತಕವನ್ನೂ ಓದುವ ಆಸಕ್ತಿ ಮೂಡಿಸಿದೆ. ಲೋಕೇಶ್ ರಿಗೆ ಧನ್ಯವಾದ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading