‘ಅವಧಿ’ ಓದುಗರಿಗಾಗಿ ಕುಂ ವೀ ಅವರ ಹೊಸ ಕಾದಂಬರಿಯ ಆಯ್ದ ಭಾಗಗಳನ್ನು ಇಂದಿನಿಂದ ನೀಡಲಾಗುತ್ತಿದೆ. ಓದಿ, ಸಿಂಪ್ಲಿ ಎಂಜಾಯ್ ಮಾಡಿ
ಹೇಮರೆಡ್ಡಿ ಮಲ್ಲಮ್ಮನ ಕಥೆಯು

ಪೀಠಿಕೆ
ಕಥೆಗಾರ ತನಿಕೆಳ್ಳ ಪಾರ್ಥಸಾರಥಿ ಕಾದಂಬರಿ ಬರೆಯಬಹುದೆಂದು ತೆಲುಗಿನ ಸಾರಸ್ವತ ಪ್ರಪಂಚ ಕನಸು ಮನಸಿನಲ್ಲೂ ಊಹಿಸಿರಲಿಲ್ಲ. ಆತ ತನ್ನ ಹೊಸ ಸೃಜನಶೀಲ ಸಾಹಸವನ್ನು ಯಾರೊಬ್ಬರ ಬಳಿ ಹೇಳಿಕೊಂಡಿರದಿದ್ದರೂ ಸುದ್ದಿಯಾಯಿತು. ಅವರಿವರು ಒತ್ತಟ್ಟಿಗಿರಲಿ ಅವರ ಆರಂಭಿಕ ಕಥೆಗಳನ್ನು ಮೆಚ್ಚಿ ವಿಮರ್ಶಿಸಿದ, ಅವುಗಳ ಪೈಕಿ ಕೆಲವನ್ನು ಇನ್ನಿತರ ಪ್ರಾದೇಶಿಕ ಭಾಷೆಗಳ ವಾಚಕರಿಗೆ ಪರಿಚಯಿಸಿದ ಪ್ರೊ. ಕಾಶಿಬೊಟ್ಲ ವೇಣುಗೋಪಾಲ್ ಅವರಂಥ ಬಹುಶ್ರುತ ವಿದ್ವಾಂಸರಿಗೂ ಅದನ್ನು ತೋರಿಸಿರಲಿಲ್ಲ, ಅದಕ್ಕೆ ತನ್ನ ಮೃದ್ವಂಗಿ ಜಾಯಮಾನ ಕಾರಣವಿದ್ದಿರಬಹುದು. ಆದರೆ ಅದನ್ನು ಎಷ್ಟು ದಿವಸ ಗುಟ್ಟಾಗಿರಿಸಲಾದೀತು! ಆ ದಿವಸ ಆತನಿಂದ ನನಗೆ ದೂರವಾಣಿ ಕರೆ ಬಂತು, ಉಭಯಕುಶಲೋಪರಿಯಾದ ಬಳಿಕ ಒಮ್ಮೆ ಕರ್ನೂಲಿಗೆ ಬಂದು ಹೋಗುವಿ ಏನು ಎಂದು ಕೇಳಿದ, ಯಾಕೆಂದು ಕೇಳಿದ್ದಕ್ಕೆ ಕಾದಂಬರಿ ಬರೆದಿರುವುದಾಗಿಯೂ, ಇನ್ನೂ ಅಪೂರ್ಣ ಸ್ಥಿತಿಯಲ್ಲಿರುವ ಅದರ ಮೇಲೆ ಕಣ್ಣಾಡಿಸಿ ಪರಿಶೀಲಿಸಬೇಕೆಂದೂ ಕೇಳಿಕೊಂಡ. ವಿಷಯ ತಿಳಿದಿದ್ದರೂ ನಾನು ಹೌದೇನು ಎಂದು ಆಶ್ಚರ್ಯ ವ್ಯಕ್ತಪಡಿಸಿದೆ, ನನಗಿಂತ ಮೊದಲು ಕಾಶಿಬೊಟ್ಲ ಅವರಿಗೆ ತೋರಿಸಿದರೆ ಒಳ್ಳೆಯದೆಂದು ಹೇಳಿದೆ. ಅಂಥವರು ನೋಡುವ ಮೊದಲು ನಿನ್ನಂಥವರು ನೋಡುವುದು ಮುಖ್ಯವೆಂದು ಹೇಳಿದ. ಅದೇ ಮಾತನ್ನು ಬೇರೆಯವರು ಕೇಳಿದ್ದಲ್ಲಿ ನಾನು ಒಪ್ಪಿಕೊಳ್ಳುತ್ತಿರಲಿಲ್ಲವೇನೋ!
ಆತನ ಕೀಳರಿಮೆ, ಉಂಡು ಉಪವಾಸಿ ಬಳಸಿ ಬ್ರಹ್ಮಚಾರಿಯಂಥ ಸ್ವಭಾವ ನನಗಿಷ್ಟ, ಅದೂ ಅಲ್ಲದೆ ನನ್ನಂಥ ಕೆಲವೇ ಆತ್ಮೀಯರಿಗೆ ಮಾತ್ರ ತಿಳಿದಿರುವಂತೆ ತಾನು ಖಿನ್ನತೆಯಿಂದ ನರಳುತ್ತಿದ್ದ, ಚಿಕ್ಕಪುಟ್ಟ ಅಹಿತಕರ ಸಂಘಟನೆಗಳನ್ನು ಕೇಳಿದೊಡನೆ ನಖಶಿಖಾಂತ ಕಂಪನಕ್ಕೊಳಗಾಗುತ್ತಿದ್ದ, ಪಾರ್ಕಿನ್ಸನ್ ಖಾಯಿಲೆಯ ಪ್ರಾಥಮಿಕ ಲಕ್ಷಣವೆಂದು ವೈದ್ಯಕೀಯ ತಪಾಸಣೆಯಿಂದ ಗ್ರಹಿಸಿದ ಮತ್ತು ಆತನ ಸೂಕ್ಷ್ಮಪ್ರಕೃತಿ ಕಡೆ ನಿಗಾ ಇರಿಸಿದ್ದ ಡಾ. ಸುಧನ್ವ ಸ್ಥಿತಪ್ರಜ್ಞತೆ ಕಡೆ ಗಮನ ಹರಿಸುವಂತೆ ಹೇಳಿದ್ದರು, ಅದಕ್ಕೆ ಪೂರಕವಾಗಿ ಐದು ನಿಮಿಷಗಳ ಕಾಲ ಸರ್ವಾ೦ಗಾಸನವನ್ನೂ, ಹತ್ತು ನಿಮಿಷಗಳ ಕಾಲ ಪ್ರಾಣಾಯಾಮವನ್ನೂ, ಇಪ್ಪತ್ತರಿಂದ ಮುವ್ವತ್ತು ನಿಮಿಷಗಳ ಕಾಲ ಧ್ಯಾನವನ್ನೂ ಮಾಡುವಂತೆ ಸಲಹೆ ನೀಡಿದ್ದರು, ಎರಡು ಗಂಟೆಗಳ ಬಳಿಕ ಮಲಗಿ ಒಂಭತ್ತರ ಬಳಿಕ ಎಚ್ಚರಗೊಳ್ಳುವುದನ್ನು ಹುಟ್ಟಿದಾರಾಭ್ಯ ಅಭ್ಯಾಸ ಮಾಡಿಕೊಂಡಿದ್ದ ತನಗೆ ವೈದ್ಯರ ಸಲಹೆ ರುಚಿಸಲಿಲ್ಲ. ಸಾಹಿತ್ಯ ಲೋಕದ ಆಸ್ತಿಯಾದ ನೀನು ಆರೋಗ್ಯದಿಂದ ಇರುವುದು ಮುಖ್ಯವೆಂದು ಹೇಳಿದ್ದಕ್ಕೆ ವಿಷಣ್ಣ ನಗೆ ನಕ್ಕ, ಅದೆಲ್ಲ ನಾನ್ಸೆನ್ಸ್ ಎಂದ, ಹಲವು ವರ್ಷಗಳ ಮೊದಲೇ ಸಾವನ್ನು ಆಸ್ವಾದಿಸುವುದಕ್ಕೆ ತಾನು ಸಿದ್ದನಿರುವುದಾಗಿ ಹೇಳಿದ, ತನ್ನ ಈ ರೀತಿ ವೈರಾಗ್ಯಕ್ಕೆ ಕಾರಣಗಳು ಇಲ್ಲದಿರಲಿಲ್ಲ,
ತನ್ನ ಶ್ರೀಮಂತ ತಂದೆ ತಾಯಿಗಳಿಬ್ಬರೂ ಗುಣವಾಗದ ಖಾಯಿಲೆಗಳಿಂದ ನರಳಿ ಇಹಲೋಕ ತ್ಯಜಿಸಿದ್ದರು, ಅದರ ಮೇಲೆ ಬರೆ ಎಳೆದಂತೆ ತನ್ನಿಬ್ಬರು ಮಕ್ಕಳು ವಿಚಿತ್ರ ಖಾಯಿಲೆಗಳಿಂದ ನರಳಿ ಸತ್ತಿದ್ದರು, ಹೆತ್ತ ಮಕ್ಕಳಿಗೆ ಸೂಕ್ತ ಚಿಕಿತ್ಸೆ ಕೊಡಿಸದವನೊಂದಿಗೆ, ಮನಸ್ಸು ಬಿಚ್ಚಿ ಮಾತನಾಡದವನ ಸಂಗಡ ತಾನು ಬಾಳುವೆ ಮಾಡಲಾರೆನೆಂದು ಮುಖಕ್ಕೆ ಹೊಡೆದಂತೆ ಹೇಳಿ ತನ್ನ ಪತ್ನಿ ಅಶ್ವಿನಿ ಎರಡು ವರ್ಷಗಳ ಹಿಂದೆಯಷ್ಟೆ ತವರೂರಾದ ಕಡಪಾ ಜಿಲ್ಲೆಯ ಜಮ್ಮಲಮಡುಗಿಗೆ ಹೋಗಿದ್ದಳು, ಪಾಶ್ಚಾತ್ತಾಪದಂಥ ಮೂಲಭೂತ ಸಂವೇದನೆಯೇ ಇರದಿದ್ದ ತಾನು ಆಕೆಯನ್ನು ಕರೆತರುವ ಪ್ರಯತ್ನ ನಡೆಸಿರಲಿಲ್ಲ, ಜನ್ಮತಃ ಬ್ರಾಹ್ಮಣ ಸಂಜಾತರಾಗಿದ್ದರೂ, ಕಾರಣಾಂತರಗಳಿಂದಾಗಿ ಆ ಭಾಗದಲ್ಲಿ ಕುಖ್ಯಾತ ಫ್ಯಾಕ್ಷನಿಷ್ಟ್ ಮುಖಂಡರಾದ ಆಕೆ ತಂದೆ ಕರಣಂ ಶಿವಶಂಕರಸ್ವಾಮಿ ಅವರಿಬ್ಬರ ನಡುವಿನ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಎಲ್ಲಾ ರೀತಿಯಿಂದ ಪ್ರಯತ್ನಿಸಿ ವಿಫಲರಾದರು. ತಮ್ಮ ಸುಪುತ್ರಿ ತಮ್ಮ ಹಾಗೆಯೇ ಮಹಾ ಸ್ವಾಭಿಮಾನಿ! ಆದರೆ ತಮ್ಮ ಅಳಿಯ ವಿರಾಗಿ. ಚತುರೋಪಾಯಗಳನ್ನು ಪ್ರಯೋಗಿಸಿದರೂ ಅವರಿಬ್ಬರನ್ನು ಬೆಸೆಯುವುದು ತಮ್ಮಿಂದಾಗಲೇ ಇಲ್ಲ. ಆದರೆ ಶ್ರೀಮತಿ ಅಶ್ವಿನಿ ತಮ್ಮ ತಂದೆಯ ಇಚ್ಚೆಗೆ ವಿರುದ್ದವಾಗಿ ಕಡಪಾದ ಪ್ರಥಮ ದರ್ಜೆ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವಳು, ಆದರೆ ಅಂತರ್ಮುಖಿ ಪಾರ್ಥ ನ್ಯಾಯಾಲಯಕ್ಕೆ ಹಾಜರಾಗುವುದು ಒತ್ತಟ್ಟಿಗಿರಲಿ, ತಾಡಿಪತ್ರಿ ದಾಟಿ ಕಡಪಾದ ಗಡಿಯನ್ನು ಪ್ರವೇಶ ಮಾಡಲಿಲ್ಲ, ತನ್ನನ್ನು ಆರೆಸ್ಟ್ ಮಾಡುವ ಸಲುವಾಗಿ ಬರಲಿರುವ ಪೋಲಿಸರ ನಿರೀಕ್ಷೆಯಲ್ಲಿರುವನು. ಆ ನಿರೀಕ್ಷೆಯಲ್ಲಿಯೇ ಕಾದಂಬರಿಯನ್ನು ಬರೆದು ಮುಗಿಸಿರಬಹುದು, ಇಂಥ ಕಾರಣಗಳಿಂದಾಗಿ ಆತನ ಮನವಿಯನ್ನು ತಿರಸ್ಕರಿಸುವ ದೈರ್ಯ ನನಗೆ ಬರಲಿಲ್ಲ.
ವೈಶಾಖದ ಬಿಸಿಲನ್ನು ಲೆಕ್ಕಿಸದೆ ಪತ್ತಿಕೊಂಡ ದೇವನಕೊಂಡಗಳನ್ನು ದಾಟಿ ಕರ್ನೂಲನ್ನು ಆ ದಿವಸ ಸೇರಿಕೊಂಡೆ, ದಾರಿಯುದ್ದಕ್ಕೂ ಆತನ ಕಥೆಗಳ ಬಗ್ಗೆ ಪುನರಾವಲೋಕನ ನಡೆಸಿದೆ, ಅವೆಲ್ಲ ವೈದಿಕ ಕೌಟುಂಬಿಕ ಪರಿಸರದಲ್ಲಿ ನಡೆಯುವ ಕಥೆಗಳು, ವಾಚಕರ ಮನಸ್ಸನ್ನು ಗಲಿಬಿಲಿಗೊಳಿಸದ, ಅವರ ಮನಸ್ಸಿಗೆ ನೋವನ್ನುಂಟು ಮಾಡದ, ಸರಳ ಓದಿಗೆ ನಿಲುಕುವ ಸಿಹಿದಿನಿಸಿನಂಥ ಕಥೆಗಳು. ಪ್ರೊ. ಕಾಶಿಬೊಟ್ಲ ಅವರು ಭಾರತಿ ಪತ್ರಿಕೆಯಲ್ಲಿ ವಿಮರ್ಶಿಸುತ್ತ ಅವುಗಳನ್ನು ವಿಶ್ವನಾಥ ಸತ್ಯನಾರಾಯಣ ಅವರ ಕಥೆಗಳಿಗೆ ಹೋಲಿಸಿರುವುದುಂಟು, ಆತನ ತುಳಸಿ ಕಟ್ಟೆ ಕೇಂದ್ರಿತ ಕಥೆಗಳೆಂದರೆ ನನಗೆ ಇಷ್ಟವೂ ಅಲ್ಲ, ಅಇಷ್ಟವೂ ಅಲ್ಲ. ಆದರೆ ಅವುಗಳು ಮೂಡಿಸುವ ಪ್ರಸನ್ನತಾಭಾವ ನನಗೆ ಇಷ್ಟ.
ಜಿಲ್ಲಾಧಿಕಾರಿ ನಿವಾಸದ ಹಿಂಬದಿಯ ರಸ್ತೆಯಲ್ಲಿ ಅಂದರೆ ಪನ್ನಗಶಯನ ದೇವಾಲಯದ ಎದುರು ರಸ್ತೆಯ ಕೊನೆಯಲ್ಲಿನ, ಅಂದರೆ ಒಂದೂವರೆ ಶತಮಾನದ ಹಿಂದೆ ಉಯ್ಯಾಲವಾಡ ನರಸಿಂಹರೆಡ್ಡಿಯವರಿಗೆ ಸಾರ್ವಜನಿಕವಾಗಿ ಮರಣ ದಂಡನೆ ನೀಡಿದ, ಅಂದರೆ ಶತಮಾನದಷ್ಟು ಹಳೆಯದಾದ ಅಶ್ವತ್ಥಾಲದ ನೆರಳಿನ ತುದಿಯಲ್ಲಿದ್ದ ಎರಡು ಅಂತಸ್ತಿನ ಮನೆಗೆ ಮುಚ್ಚಿದ್ದ ಬಾಗಿಲನ್ನು ಎರಡನೆ ಸಲ ಬಡಿದೆ, ಎವರದಿ ಎಂಬ ಕೂಗು ಒಳಗಿನಿಂದ ಕೇಳಿಸಿತು, ಅದರ ಹಿಂದೆಯೇ ವ್ಯಕ್ತಿಯೋರ್ವ ಬಾಗಿಲು ತೆರೆದ, ಆತ ತನ್ನೆದೆಗೆ ಇಳಿಬಿಟ್ಟುಕೊಂಡಿದ್ದ ದಪ್ಪಗಾಜಿನ ಕನ್ನಡವನ್ನು ಕಣ್ಣುಗಳಿಗೇರಿಸಿಕೊಂಡ, ಪರಸ್ಪರ ಅಪಾದಮಸ್ತಕ ದಿಟ್ಟಿಸಿದೆವು, ಅಲ್ಲದೆ ಗುರುತೂ ಹಿಡಿದೆವು, ಓಹ್ ಅಯ್ಯವಾರು ಎಂದು ತಾನೂ, ಪಾರ್ಥಸಾರಥಿಗಾರು ಎಂದು ನಾನೂ ಏಕಕಾಲಕ್ಕೆ ಉದ್ಗರಿಸಿದೆವು, ನನ್ನಷ್ಟೇ ವಯೋಮಾನದವನಾಗಿದ್ದರೂ ತುಂಬ ವಯಸ್ಸಾದವನಂತೆ, ಬಳಲಿಕೆಯಿಂದ ಹಣ್ಣಾಗಿರುವವನಂತೆ ಗೋಚರಿಸಿದ, ತನ್ನ ದೈಹಿಕ ಸೌಂದರ್ಯವನ್ನು ಗಡ್ಡದಾಡಿಗಳಿಂದ ಮರೆಮಾಚಿಕೊಂಡ ಲಿಯೋನರ್ಡೋ ಡಾ ವಿಂಚಿಯೇ ನನ್ನೆದುರಲ್ಲಿರುವಂತೆ ಭಾಸವಾದನು. ಪತ್ನಿ ಅಶ್ವಿನಿ ತನ್ನ ಬಳಿ ಇದ್ದಿದ್ದಲ್ಲಿ ತಾನೀ ರೀತಿ ಇರುತ್ತಿರಲಿಲ್ಲವೇನೊ! ಪುನಃ ಇನ್ನೊಂದು ಮಗುವಿಗೆ ತಂದೆಯಾಗಲು ಪ್ರಯತ್ನಿಸಿದ್ದಲ್ಲಿ ಈ ರೀತಿ ಇರುತ್ತಿರಲಿಲ್ಲವೇನೊ! ನಿಧಾನವಾಗಿ ಆತನ ದುರ್ಬಲ ಕೈಗಳನ್ನು ಲಾಘವದ ನೆಪದಲ್ಲಿ ಸ್ಪರ್ಶಿಸಿದೆನು, ತಣ್ಣಗೆ ಕೊರೆದಂತೆನಿಸಿತು.
ನೆಮ್ಮದಿಗಾ ರಂಡಿ ಎಂದು ಸಂಬೋಧಿಸುತ್ತ ಒಳಗಡೆ ಕರೆದೊಯ್ದ, ಮನೆ ವಿಶಾಲವೇನೋ ನಿಜ, ಅಂದರೆ ಹಳೆಕಾಲದ ಕಟ್ಟಡ, ಅಲಂಪುರಂನ ಜಹಗೀರದಾರರ ಮನೆ, ಆದರೆ ಅಚ್ಚುಕಟ್ಟುತನವಿರಲಿಲ್ಲ, ಹೆಜ್ಜೆ ಇರಿಸಿದೊಡನೆ ಪ್ರಾಚೀನ ಗುಹೆಯನ್ನು ಪ್ರವೇಶಿಸುತ್ತಿರುವ ಅನುಭವವಾಯಿತು, ಅರೆ ಮುಚ್ಚಿದ್ದ ಕಿಟಿಕಿಯಿಂದ ನುಸುಳುತ್ತಿದ್ದ ಬೆಳಕನ್ನು ಹೊರತುಪಡಿಸಿದರೆ ಇನ್ನೊಂದು ಬೆಳಕಿರಲಿಲ್ಲ, ವಿಚಿತ್ರ ವಾಸನೆ ಬೇರೆ, ಕೆಲವು ತಾಸುಗಳ ಹಿಂದೆ ಊಟ ಮಾಡಿದ್ದ ಎಂಜಲು ತಟ್ಟೆ ತುಂಬೆಲ್ಲ ನೊಣಗಳು ಗಿರಕಿ ಹೊಡೆಯುತ್ತಿದ್ದವು, ಅಳಿದುಳಿದ ಆಹಾರವಿದ್ದ ಟಿಫಿನ್ ಕ್ಯಾರಿಯರಿನ ಮೂರೂ ಬಾಕ್ಸುಗಳು ತೆರೆದುಕೊಂಡಿದ್ದವು, ನಮ್ಮಿಬ್ಬರ ಹೆಜ್ಜೆ ಸದ್ದಿಗೆ ವಿಸ್ಕಿ ಶೀಸೆ ಕಂಪಿಸಿತು, ಮುಗುಚಿರಿಸಿದ್ದ ಕಾರಣಕ್ಕೆ ಗ್ಲಾಸು ಕಂಪಿಸಲಿಲ್ಲ, ಅಲ್ಲಲ್ಲಿ ಸಿಗರೇಟಿನ ತುಂಡುಗಳು, ಒಂದೆರಡು ಕಡ್ಡಿಗಳಿದ್ದ ಪೊಟ್ಟಣ, ಅಗೋ ಅಲ್ಲಿ ಟಾಲ್ಸ್ಟಾಯ್ ಮತ್ತು ಭಗವದ್ಗೀತೆ! ಇಗೋ ಇಲ್ಲಿ ದಾಸ್ತೊವಸ್ಕಿ ಮತ್ತು ಇಂಡಿಯನ್ ಪಿನಲ್ ಕೋಡು! ನೆಲದ ಮೇಲೆ ಚೆಲ್ಲಾಪಿಲ್ಲಿಯಾಗಿದ್ದ ವೃತ್ತಪತ್ರಿಕೆಗಳು, ತರಾವರಿ ಪುಸ್ತಕಗಳಿಂದ ಕಿಕ್ಕಿರಿದಿದ್ದ ಕಪಾಟು. ಅದನ್ನೆಲ್ಲ ಚೊಕ್ಕಟಗೊಳಿಸಲು ಪ್ರಯತ್ನಿಸಿದ, ಆದರೆ ಸುಸ್ತಾಗಿ ಕೈಚೆಲ್ಲಿದ, ಹೋಟಲ್ಲಿನಿಂದ ಚಹಾ ತರಿಸುವ ಸಲುವಾಗಿ ಕೈಯಲ್ಲಿ ಪ್ಲಾಸ್ಕನ್ನು ಹಿಡಿದುಕೊಂಡು ಬಾಗಿಲು ದಾಟಿ ತುಳಸಿ ಗಿಡದ ಅವಶೇಷವಿದ್ದ ಅಂಗಳದಲ್ಲಿ ನಿಂತು ಪುನಃ ವಾಪಸ್ಸಾದನು.
ನನ್ನ ಪ್ರಯಾಣದ ಬಗೆಗಾಗಲೀ, ನಾನು ಊಟ ಮಾಡಿರುವೆನೋ ಉಪವಾಸವಿರುವೆನೋ ಎಂಬುದರ ಬಗೆಗಾಗಲೀ ಸೌಜನ್ಯಕ್ಕಾದರೂ ಪರಾಂಬರಿಸುವ ಗೋಜಿಗೆ ಹೋಗಲಿಲ್ಲ. ಏನೆಲ್ಲ ಹೇಳಿಕೊಳ್ಳುವ ಸಲುವಾಗಿ ಹಲವು ಸಲ ಪ್ರಯತ್ನಿಸಿ ಪುನಃ ಮೌನವಹಿಸಿದ, ಪರಸ್ಪರ ಸಮಕ್ಷಮ ಕುಳಿತುಕೊಂಡೆವು, ಕಳೆದ ಎರಡು ಮೂರು ವರ್ಷಗಳಲ್ಲಿ ಎಷ್ಟೊಂದು ಬದಲಾಗಿರುವನು ನನ್ನ ಪ್ರೀತಿಯ ಕಥೆಗಾರ, ಮೆಚ್ಚಿನ ಗೆಳೆಯ ತನಿಕೆಳ್ಳ ಪಾರ್ಥಸಾರಥಿ! ಜೀವನೋತ್ಸಾಹ ಬತ್ತಿರುವ ಬದುಕಿನ ವಾರಸುದಾರ ನನ್ನ ಕಣ್ಣೆದುರಲ್ಲಿ! ಮನುಷ್ಯ ಸಂಬಂಧಗಳು ಕುರಿತಂತೆ ಭ್ರಮನಿರಸನ ತಳೆದಿರುವ ವ್ಯಕ್ತಿ ಕಾದಂಬರಿ ಬರೆದಿರುವುದೆಂದರೆ! ನನಗೆ ಆಶ್ಚರ್ಯವಾಯಿತು. ಆತನ ಹಲವು ಕಥೆಗಳನ್ನು ನೆನಪಿಸಿಕೊಂಡೆ, ಅವೆಲ್ಲ ವಾಚಕನಲ್ಲಿ ಜೈವಿಕ ಚೈತನ್ಯ ಮೂಡಿಸುವ ಚೇತೋಹಾರಿ ಕಥೆಗಳು, ಅವುಗಳನ್ನು ತಾನು ತನ್ನ ವಿವಾಹಪೂರ್ವದಲ್ಲಿ ಅಥವಾ ವಿವಾಹಾನಂತರದ ಅತ್ಯುತ್ಸಾಹದ ದಿನಗಳಲ್ಲಿ ಬರೆದಿರಬಹುದೆಂದು ಊಹಿಸಿದೆ. ಇಷ್ಟು ಒಳ್ಳೆಯ ಕಥೆಗಳನ್ನು ಬರೆದಿರುವ ಲೇಖಕ ಕಾದಂಬರಿ ಬರೆಯುವುದು ಅಸಾಧ್ಯವೆಂದು ಪ್ರೊ. ಕಾಶಿಬೊಟ್ಲ ಅವರ ಲೇಖನದ ಕೊನೆಯ ವಾಕ್ಯವನ್ನೂ ಏಕಕಾಲಕ್ಕೆ ನೆನಪಿಸಿಕೊಂಡೆ.
ಆದರೆ ಬರೆದಿರುವನೆಂಬ ವದಂತಿಗಳು, ಬರೆದಿರುವನೋ! ಬರೆದಿರುವುದಾಗಿ ಹೇಳಿಕೊಂಡಿರುವನೋ! ಅಥವಾ ಬರೆಯುವ ಪ್ರಯತ್ನದಲ್ಲಿರುವನೋ! ನನ್ನನ್ನಿಲ್ಲಿಗೆ ಬರಮಾಡಿಕೊಳ್ಳಲು ತಾನು ಸುಳ್ಳು ಹೇಳಿರಲೂಬಹುದೆಂದು ಭಾವಿಸಿ ಆತನ ಕಡೆ ದೃಷ್ಟಿ ಹಾಯಿಸಿದೆ, ನನ್ನ ಮನಸ್ಸಿನ ತೊಳಲಾಟವನ್ನು ತಾನು ಗ್ರಹಿಸಿದನೇನೋ! ಮೆಲ್ಲಗೆ ಎದ್ದು ಕಿಟಿಕಿ ಎದುರು ಇದ್ದ ಟೇಬಲ್ ತಲುಪಿದ, ಅದರ ಮೇಲಿದ್ದ ಕಡತವನ್ನು ಕೈಗೆತ್ತಿಕೊಂಡು ಬಡಿದು ಸದ್ದು ಮಾಡಿದ, ಧೂಳಿನ ಘಾಟು ಆವರಿಸಿತು, ಅದನ್ನು ನನ್ನ ಕಡೆ ಚಾಚಿ ಇದೇ ನೋಡು ಎಂದು ಹೇಳಿದ, ತೆಗೆದುಕೊಂಡೆ, ಆರಂಭದ ಪುಟದಲ್ಲಿ ಹೇಮರೆಡ್ಡಿ ಮಲ್ಲಮ್ಮನ ಕಥೆ ಎಂದು ಇರುವುದನ್ನು ನೋಡಿ ಒಹೋ ಪೌರಾಣಿಕ ಎಂದು ಉದ್ಗರಿಸಿದೆ, ಅದಕ್ಕೆ ಪ್ರತಿಯಾಗಿ ತಾನು ನಕ್ಕು ಇದು ಆ ಹೇಮರೆಡ್ಡಿಯ ಧರ್ಮಪತ್ನಿ ಶಿವಶರಣೆ ಮಲ್ಲಮ್ಮನವರ ಕಥೆ ಅಲ್ಲ, ಓದು ನಿನಗೇ ತಿಳಿಯುವುದು, ಹ್ಹಾ ಅಂದ ಹಾಗೆ ನಾನು ಆರೋಗ್ಯದಿಂದ ಇರುವುದಕ್ಕೆ ಇದೇ ಕಾರಣ ಎಂದು ಹೇಳುತ್ತ ಕುರ್ಚಿಯಲ್ಲಿ ಕುಳಿತು ನಿಟ್ಟುಸಿರುಬಿಟ್ಟನು. ನಾನು ನಿಧಾನವಾಗಿ ಓದಲಾರಂಭಿಸಿದೆನು.]]>
Like this:
Like Loading...
Related
0 Comments