ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದೇವರಗೆಣ್ಣೂರರ 'ಸ್ವಪ್ನ ನೌಕೆ'ಯಲ್ಲಿ..


 
 
 
ಗಿರಿಜಾ ಶಾಸ್ತ್ರಿ
 
 
 
ದಾಂಪತ್ಯದ ಹೊಸ್ತಿಲಿನಲ್ಲಿ “ಸ್ವಪ್ನ ನೌಕೆ”
“ಸ್ವಪ್ನ ನೌಕೆ” ಆಗತಾನೇ ಮೀಸೆ ಚಿಗುರೊಡೆಯುತ್ತಿದ್ದ ಯುವಕನೊಬ್ಬ ಬರೆದ ಹಲವು ಕವಿತೆಗಳ ಒಂದು ಸಂಕಲನ. ಇಲ್ಲಿರುವುದು ಹದಿಹರೆಯದ ಸುಂದರ ಸ್ವಪ್ನಗಳು.
ಈ “ಸ್ವಪ್ನ ನೌಕೆ” 1947-48 ರಲ್ಲೇ ಪ್ರಾರಂಭವಾದರೂ ಪ್ರಕಾಶನದ ದಡ ತಲುಪಿದ್ದು 1954 ರಲ್ಲಿ. ಆದರೆ ಇದು ಇಂದಿಗೂ ಬೆಚ್ಚನೆಯ ಅನುಭವ ಮೂಡಿಸುವ ತಾಜಾ ಮಲ್ಲಿಗೆಯ ಪ್ರೇಮಲೋಕವಾಗಿದೆ.
ಕೆ.ಎಸ್.ನ ಅವರ “ಮೈಸೂರು ಮಲ್ಲಿಗೆ”ಯ ಪರಿಮಳವನ್ನು ಆಸ್ವಾದಿಸದ ಕನ್ನಡ ಸಾಹಿತ್ಯದ ವಿದ್ಯಾರ್ಥಿಯೇ ಇಲ್ಲ. ಆದರೆ ಕುಸುಮಾಕರ ದೇವರಗೆಣ್ಣೂರರ ಈ “ಸ್ವಪ್ನ ನೌಕೆ”ಯಲ್ಲಿ ಹೊರಹೊಮ್ಮುವ ಅದೇ ಮಲ್ಲಿಗೆಯ ಪರಿಮಳದ ಪರಿಚಯ ಹೆಚ್ಚು ಜನಕ್ಕಿಲ್ಲ.
ಸ್ವಭಾವತಃ ಸಂಕೋಚ ಪ್ರವೃತ್ತಿಯವರಾದ ಅವರು ಸಾಹಿತ್ಯ ಲೋಕದಲ್ಲಿ ಬೆಳಕಿಗೆ ಬಂದದ್ದೇ ಬಹಳ ತಡವಾಗಿ, ಅವರ ಬದುಕಿನ ಹೆಚ್ಚಿನ ಕಾಲವನ್ನು ಸೊಲ್ಲಾಪುರದಲ್ಲಿ ಕಳೆದುದೇ ಇದಕ್ಕೆ ಕಾರಣವಿರಬಹುದು. ಅಲ್ಲದೇ ಪ್ರಚಾರ, ಪ್ರಕಟಣೆ ಇವುಗಳ ಬಗ್ಗೆ ದಿವ್ಯನಿರ್ಲಕ್ಷ್ಯವನ್ನು ಬೆಳೆಸಿಕೊಂಡ ಒಬ್ಬ ಸಂತನಂತೆ ಇದ್ದವರು ಅವರು. ಅವರ ಈ ಕವಿತಾ ಸಂಕಲನ ಬೆಳಕಿಗೆ ಬಾರದೇ ಇರುವುದಕ್ಕೂ ಬಹುಶಃ ಅವರ ಈ ಸ್ವಭಾವವೇ ಕಾರಣವಿದ್ದಿರಬಹುದು.

ಎಪ್ಪತ್ತು ವರುಷಗಳ ಅನಂತರ ಕುಸುಮಾಕರರ ತಮ್ಮ ಪ್ರಹ್ಲಾದ್ ದಿವಾಣಜಿಯವರು ಈ “ಸ್ವಪ್ನ ನೌಕೆ” ಯನ್ನು ನನ್ನ ಗಮನಕ್ಕೆ ತಂದಾಗ ಈ ಕವಿತೆಗಳಲ್ಲಿರುವ ಮೃದು ಮಧುರ ಬಂಧುರ ಅಚ್ಚರಿಗೊಳಿಸಿತು. ಹೀಗಾಗಿ ಹೆಚ್ಚು ಜನರಿಗೆ ಪರಿಚಯವಿಲ್ಲದ ಇಂತಹ ಒಬ್ಬ ಕವಿಯನ್ನು ಪರಿಚಯಿಸಬೇಕೆಂಬ ಪ್ರಯತ್ನವನ್ನು ಈ ಲೇಖನದ ಮುಲಕ ಮಾಡುತ್ತಿದ್ದೇನೆ.
ಕುಸುಮಾಕರರು ದೇವರಗೆಣ್ಣೂರ (1930-2012) ಕನ್ನಡ ಸಾಹಿತ್ಯ ಕಂಡ ಅಪರೂಪದ ಲೇಖಕ. ಕಾದಂಬರಿ ಮತ್ತು ವಿಮರ್ಶಾ ಕ್ಷೇತ್ರದಲ್ಲಿ ಅವರದು ಬಹಳ ದೊಡ್ಡ ಹೆಸರು. ತಮ್ಮ ಹದಿನೇಳು ಹದಿನೆಂಟನೇ ವಯಸ್ಸಿನಲ್ಲಿ ಕವಿತೆಯನ್ನು ಬರೆಯಲು ಆರಂಭಿಸಿದರು. ಆದರೆ ಏಕೋ ಏನೋ ಒಂದೇ ಒಂದು ಕವಿತಾ ಸಂಕಲನವನ್ನು ತಮ್ಮ 24ನೇ ವರುಷದಲ್ಲಿ ಪ್ರಕಟಿಸಿ ಆನಂತರ ಕವಿತಾ ಪ್ರಕಾರವನ್ನು ಬದಿಗಿಟ್ಟು ಕಾದಂಬರಿ ಮತ್ತು ವಿಮರ್ಶಾ ಬರಹಗಳೆಡೆಗೆ ತಿರುಗಿಬಿಟ್ಟರು.
ಅವರು ಕವಿತಾ ರಚನೆಯನ್ನು ಮುಂದುವರೆಸಿದ್ದಿದ್ದರೆ ಎಂತಹ ಅದ್ಭುತ ಕವಿಯಾಗಬಹುದಿತ್ತು ಎಂಬುದನ್ನು ಅವರ “ಸ್ವಪ್ನನೌಕೆ” ಯ ಕವಿತೆಗಳು ತಿಳಿಸುತ್ತವೆ.
ಮೊದಲೇ ಹೇಳಿದಂತೆ ಇದು ಹದಿಹರೆಯದ ಯುವಕನೊಬ್ಬನ ಕನಸುಗಳು. ಆದುದರಿಂದಲೇ ಇಲ್ಲಿ, ಗಂಡು ಹೆಣ್ಣಿನ ಸಂಬಂಧ, ಪ್ರೇಮ, ಕುಟುಂಬ, ಮಕ್ಕಳು ಮುಂತಾದ ಸಂಗತಿಗಳಿಗೆ ‘ಬಾಳುವೆಯೆಂಬ ಒಲೆಯ ಝಳ’ ತಾಗಿಲ್ಲ. ಆ ಒಲೆಯ ಮೇಲೆ ‘ಸುಟ್ಟುಹಪ್ಪಳ’ವಾಗುವುದೆಂದರೆ ಏನು ಎಂಬುದು ತಿಳಿದಿಲ್ಲ. ಮುಗ್ಧವಾದ, ಪ್ರೇಮಮಯ ಮನಸ್ಸೊಂದು ಕಾಣುವ ರಮ್ಯ ಕನಸುಗಳಿವು.
ಎಲ್ಲಿಯೂ ‘ಕಟು’ ವಿಲ್ಲದ ಮೃದು ಮಧುರ ಕೌಟುಂಬಿಕ ಗೀತೆಗಳಿವು. ಕುಸುಮಾಕರರು ಬರೆಯಲು ತೊಡಗಿದ ಕಾಲದ ಮನಸ್ಸೇ ಹಾಗಿದ್ದಿತು. ಇಡೀ ದೇಶಕ್ಕೆ ದೇಶವೇ ಐಕ್ಯತೆಯ ರಮ್ಯವಾದ ಆದರ್ಶಗಳಿಗೆ ತುಡಿಯುತ್ತಿದ್ದಿತು. ಈ ಕವಿತೆಗಳಲ್ಲಿನ ಲಯಗಾರಿಕೆ, ಗೇಯತೆ ಭಾವಸ್ಫುರಣೆ ಹಾಡಲು ಸೊಗಸಾಗಿವೆ. ಆದುದರಿಂದ ಭಾವಗೀತೆಗಳಿಗೇ ಇವು ಹತ್ತಿರವಾಗಿವೆ.

ಈ ಸಂಕಲನದ ಮುಖಪುಟದಲ್ಲಿ “ಸ್ವಪ್ನ ನೌಕೆ” ತೇಲಿಸಿದವರು: ಕುಸುಮಾಕರ ಗೆಣ್ಣೂರ. ಎಂದು ಬರೆದಿರುವುದು ‘ಮಧುರಸ್ವಪ್ನ’ ದ ಕಲ್ಪನಾ ವಿಲಾಸವನ್ನು ಹೇಳುವುದು ಮಾತ್ರವಲ್ಲ, ಆ ಕಾಲದ ಹೊಸ ಪ್ರಯೋಗಗಳ ಹುಮ್ಮಸ್ಸನ್ನೂ ಪರಿಚಯಿಸುತ್ತದೆ.
ಈ ಕವಿತಾಸಂಕಲನಕ್ಕೆ ಮುನ್ನಡಿ ಬರೆದ ರಂ.ಶ್ರೀ. ಮುಗಳಿಯವರು “ಲೋಕಜೀವನದಲ್ಲಿ ವಿಸಂಗತಿ ಪ್ರಚುರ, ಸುಸಂಗತಿ ವಿರಳ. ದಾಂಪತ್ಯದಲ್ಲಿಯಂತೂ ಇಜ್ಜೋಡು ಎದ್ದು ಕಾಣುತ್ತದೆ…
ಎರಡು ಜೀವಿಗಳು ಕೂಡಿ ಸವಿಜೋಡಿಯಾಗಿ ಬಾಳುವುದೆಂದರೆ ಒಂದು ಪವಾಡವೇ ಸರಿ. ಸಫಲವಾದ ಪ್ರೇಮವು ಮಧುರವಾಗುತ್ತದೆ, ಅನೇಕ ರೀತಿಯಲ್ಲಿ ತನ್ನ ಮಾಧುರ್ಯವನ್ನು ಅನುಭವಿಸುತ್ತದೆ. ಎಲ್ಲ ದಿವ್ಯದೊಳಗೆ ಹಾಯ್ದು ಅದು ಪುನೀತವಾಗುತ್ತದೆ. ಉದಾತ್ತವಾಗುತ್ತದೆ” ಎನ್ನುತ್ತಾರೆ.
ಅವರು ಹೇಳಿದ ಹಾಗೆ ಇಲ್ಲಿಯ ಕವಿತೆಗಳು ಅಂತಹ ಸವಿಜೋಡಿಯ ಉದಾತ್ತ ಕವಿತೆಗಳು. ಪ್ರೇಮದಿಂದ ಪುನೀತವಾದವುಗಳು. ಆದುದರಿಂದಲೇ ಇದು “ಸ್ವಪ್ನ ನೌಕೆ”. ಆದರೆ ರಂ.ಶ್ರೀ ಮುಗಳಿಯವರು “ಸ್ವಪ್ನ ಸೃಷ್ಟಿ ಎಂಬುದು ಇದಕ್ಕೆ ಸಹಜವಾದರೂ ಸ್ವಾನುಭವದ ಸತ್ಯಸೃಷ್ಟಿ ಇದರ ತಳಹದಿಯಾಗಿದೆ” (ಸ್ವಾನುಭವ ಎಂದರೆ ಅಂದರೆ ಕವಿ ತನ್ನ ಸುತ್ತಲ ಬದುಕನ್ನು ತನ್ನ ಕಲ್ಪನಾ ವಿಲಾಸದಿಂದ ವಿಸ್ತರಿಸಿರುವುದು) “ಈ ತಳಹದಿ ಇಲ್ಲದಿದ್ದರೆ ‘ಸ್ವಪ್ನನೌಕೆ’ ಗಾಳಿಹಡಗವಾಗಿ ಹಾರಿ ಹೋಗಬಹುದಾಗಿತ್ತು, ಒಡೆದು ಚೂರಾಗಬಹುದಿತ್ತು” ಎನ್ನುತ್ತಾರೆ.
ಕುಸುಮಾಕರರು ಈ ಕವಿತೆಗಳ ಮೂಲಕ ಮಾಡಿಸಿರುವ ಪ್ರೇಮದರ್ಶನ ಒಂದುಕಡೆ ಕೆ.ಎಸ್.ನ. ಅವರ ಮೈಸೂರು ಮಲ್ಲಿಗೆಯ ಕವಿತೆಗಳನ್ನು ನೆನಪಿಸಿದರೆ
“ಬನ್ನಿ ಸೌಖ್ಯದಲಿಹಳು ಸರ್ವದಮನನ ತಾಯಿ”
ಎಂಥ ಬಿಸಲು ದಣಿದು ಬಂದಿರಲ್ಲ
ಎಷ್ಟು ಮುದ್ದಿದೆ ಕೂಸು! ಕೊಳ್ಳಿಕಾಲಿಗೆ ನೀರು!/
ಅತ್ತಕಡೆ ಮನೆಯಲ್ಲಿ ಸೌಖ್ಯವೆಲ್ಲ! (ಮೊದಲ ಮಗು)
ಇನ್ನೊಂದು ಕಡೆ ಬಡತನವನ್ನೇ ಬಲುಚೆಂದದ ಆಭರಣಮಾಡಿಕೊಳ್ಳುವ ಬೇಂದ್ರೆಯವರ ಪ್ರೇಮ ಗೀತೆಗಳನ್ನೂ ನೆನಪಿಗೆ ತರುತ್ತವೆ-
ಪಾರಿಜಾತಕೆ ಮತ್ತೆ ಬೇರೆ ಬಣ್ಣವು ಬೇಕೆ?
ಸಂಪಗೆಗೆ ಸೌರಭದ ಸಾಲಬೇಕೆ?
ಒಲವು ಮಲ್ಲಿಗೆ ಮುಡಿದ ಬಾಳ ಹೆಣ್ಣಿನ ಮುಡಿಗೆ
ಇನ್ನುಳಿದ ಹೂಗಳ ಆಸೆಯೇಕೆ? (ಬೇರೆ ಸಿಂಗಾರಗಳು),
 
“ನಾಲಗೆಯಲ್ಲಿಲ್ಲ ರುಚಿ ಊಟ ಸೊಗಸೀತೆಂತು?
ಗಂಡೆಂಬ ಬಿಂಕವನು ಬಿಟ್ಟುಬಂದೆ” (ಮನ್ನಿಸುವುದಿಲ್ಲವೇ).
ಸ್ವತಃ ಬೇಂದ್ರೆಯವರ ಪರಮ ಶಿಷ್ಯರು ಕುಸುಮಾಕರರು. ಅವರ ಸಾಹಿತ್ಯ ತನ್ನ ದಿಕ್ಕನ್ನು ಕಂಡುಕೊಂಡಿದ್ದೇ ಬೇಂದ್ರೆಯವರ ಒಡನಾಟದಿಂದ. ಅದಕ್ಕೆಂದೇ ಹಾರೈಕೆಯ ರೂಪದಲ್ಲಿ ಈ ಸಂಕಲನದಲ್ಲಿ ತಮ್ಮ ಶಿಷ್ಯನ ಬೆನ್ನುತಟ್ಟಿದ್ದಾರೆ ಬೇಂದ್ರೆಯವರು :
ಗುರುಕೊಟ್ಟ ಹರಕೆ:
‘ಜೀವನವು ನೆಲದತ್ತ ಎಳೆಯುವುದು,
ಕಾವ್ಯವು ಆಕಾಶದತ್ತ ಹಾರುವುದು,
ಈ ಎಳೆದಾಟ ಹಾರಾಟದಲ್ಲಿ ಕವನದ
ಎಳೆಗಳು ಹೆಣೆದುಕೊಳ್ಳುವವು.
ಕಾವ್ಯದ ಕೆಚ್ಚು ಜೀವನದಲ್ಲಿ, ಜೀವನದ
ಎತ್ತರ ಕಾವ್ಯದಲ್ಲಿ- ಈ ಎರಡು
ಧ್ರುವಬಿಂದುಗಳ ಚುಂಬಕ ಗಾಳಿ
ಯಲ್ಲಿ ‘ಸ್ವಪ್ನ ನೌಕೆ’ ತೇಲಾಡುತ್ತಿದೆ
ಹೊಯ್ದಾಡುತ್ತಿದೆ.

ಎರಡು ಕಣ್ಣು
ಗಳಿಗೆ ಒಂದೇ ನೋಟ ಇರುವಂತೆ
ಈ ಕಾವ್ಯ ಜೀವನವು ಜೀವನ ಕಾವ್ಯ
ವಾದಾಗ್ಗೆ ಕವಿಯು ಕಲ್ಪನೆಯ
ಬಂಧಗಳಿಂದ ಮುಕ್ತನಾಗಿ ಸಂಕಲ್ಪ
ಸಿದ್ಧಿಗೆ ತಪಿಸಬೇಕಾಗುವುದು.
ಕವಿಗೆ ಆ ಕೆಚ್ಚು ಬರಲಿ’ (ದ.ರಾ. ಬೇಂದ್ರೆ, ಸೊಲ್ಲಾಪುರ, 22-10-54)
ಸಂಕಲ್ಪಸಿದ್ಧಿಯ ಕೆಚ್ಚು ಬರುವ ಮುನ್ನವೇ ಕುಸುಮಾಕರರು ತಮ್ಮ ಕವಿತಾ ರಚನೆಗೆ ವಿದಾಯ ಹಾಡಿಬಿಟ್ಟರು.
ರಂಶ್ರೀ. ಮುಗಳಿಯವರು ಪ್ರೇಮ ಸರೋವರದ ಮೇಲೆ ತೇಲಿಬಂದ ‘ಸ್ವಪ್ನ ನೌಕೆ’ ಎಂದು ಈ ಕವಿತೆಗಳನ್ನು ಕರೆದಿದ್ದಾರೆ. ಓದುಗರ ಪರಿಚಯಕ್ಕಾಗಿ ಅವರ ಕೆಲವು ಕವಿತೆಗಳನ್ನು ಇಲ್ಲಿ ಕೊಡಲಾಗಿದೆ.
 
“ಏಳಿರಲ್ಲ ಹೊತ್ತಾಯ್ತು”
“ಏಳಿರಲ ಹೊತ್ತಾಯ್ತು” ಎಂದೆನ್ನ ಮೈ ತಟ್ಟಿ
ದಿನದಿನವು ಎಬ್ಬಿಸುವಳೆನ್ನ ಚೆನ್ನೆ
ಆದರೇಕೋ ಇಂದು ಅವಳು ಎಬ್ಬಿಸಲಿಲ್ಲ
ಕೆಂಪು ಕೆಂಪಾಗಿತ್ತು ಮೂಡಕೆನ್ನೆ
ಹಾಸಿನಲಿ ಒರಗಿದೆನು ಈಗ ಬರಬಹುದವಳು
ಎಚ್ಚರಿಸಲೆಂದುದಯರಾಗದಿಂದ
“ಏಳಿ ನೀರಾರುವುದು-ಹಲ್ಲನುಜ್ಜಿರಿ ಬೇಗ”
ಎನ್ನುವಳು ಮನೆಯೊಡತಿ ಬಿಂಕದಿಂದ.
ಗಡಿಯಾರದಲಿ ಮುಳ್ಳು ತಿರುಗುತಿದೆ ಒಂದೆ ಸಮ
ಟಕಟಕನೆ ಹೊಡೆಯುತ್ತ ಬಿಟ್ಟು ಬಿಡದೆ.
“ಏನು ಮಾಡುತಲಿಹಳು?” ಕಿವಿಗೊಟ್ಟು ಆಲಿಸಿದೆ
ಯಾವ ಸದ್ದೂ ಇಲ್ಲ- ಉಸಿರು ತಡೆದೆ.
ಕೈ ಬಳೆಯ ತಾಳದಲಿ ಅವಳ ಇನಿದನಿ ಇಲ್ಲ
ಒಳಗೆ ನಡೆದೆನು ನಡೆದುದೇನು ಎಂದು.
ದೇವರೆದುರಿನ ಹಣತೆಯಲ್ಲಿ ಎಣ್ಣೆಯೆ ಇಲ್ಲ
ಮೂಗಿನಲಿ ಬೆರಳಿಟ್ಟೆ “ಏಕೆ” ಎಂದು
ಹಿತ್ತ್ತಿಲದಿ ಏನಿಹುದು! ತುಲಸಿಯಲಿ ನೀರಿಲ್ಲ
ಎದುರಿನಲಿ ಶ್ರೀ ಪದ್ಮ ರಂಗವಲ್ಲಿ.
ಕಣ್ಣ ಸೆಳೆಯಲು ಇಲ್ಲ! ಕಸವಡಿಗೆ ಮೆತ್ತುತಿದೆ
ಹಳದಿ ಕುಂಕುಮ ಇಲ್ಲ ಹೊಸ್ತಿಲಲ್ಲಿ.

ಕೆಂಜಾಜಿ, ಮಲ್ಲಿಗೆಯು, ಚೆಂಗುಲಾಬಿಯ ಹೂವು
ಅರಳಿದಂತೆಯೆ ಇಹವು ಬಳ್ಳಿಯಲ್ಲಿ.
ಹಿಮ್ಮಡವ ಮುತ್ತಿಡುವ ನಿಡುಜಡೆಯ ಶ್ರೀಗೌರಿ
ಬರಲಿಲ್ಲವೇಕೆಂಬ ಚಿಂತೆಯಲ್ಲಿ.
ಕಳಹೀನವಾಗಿರುವ ಕೊಡ –ತಾಲಿ-ತಂಬಿಗೆಯ
ದುರ್ಗತಿಯ ನೆನೆಸುತ್ತ ಚಳಿಗೆ ಮುದುರಿ.
ಹೊರಬಾಗಿಲಿಗೆ ಬಂದೆ! ಎನ್ನ ಗಬರಿ ಕಂಡು
ಅವಳ ಬಯಲಿ ಬಂತು ಮಾತು ಕುದುರಿ.
ಈ ದಿನವು ಮೊದಲಾಗಿ ನಾಲ್ಕು ದಿನಗಳವರೆಗೆ
ನಿಮ್ಮ ಕೈಇಂದಡುಗೆ-ಹೋಗಿ ಏಳಿ.
ನಿಮಗೆ ಹೊತ್ತಾದೀತು ಕಾಡಬೇಡಿರಿ ನನ್ನ
ಅದು ಎಲ್ಲಿ ಇದು ಎಲ್ಲಿ ಕೇಳಿ ಕೇಳಿ.
ತಾಲಿ : ತಟ್ಟೆ
 
 
ಸಂಕ್ರಾಂತಿಯ ದಿನ
“ಕೊಂಡು ಸಿಹಿಕುಸುರೆಳ್ಳು
ಸವಿಯಾಗಿ ಬಾಳೋಣ”
ಎಂದು ಗೆಳೆಯರನಪ್ಪಿ ಎಳ್ಳು ಬೆಲ್ಲ
ತಿಂದು ಹಿರಿಯರಿಗೆಲ್ಲ
ಮಣಿಯುತ್ತ ಸುತ್ತಿದೆನು
ಮರೆತು ಮನೆಯವಳನ್ನು ಊರನೆಲ್ಲ.
ಹಬ್ಬ ಜಾತ್ರೆಯ ಉಬ್ಬು
ಅಲ್ಲ್ಲಿ ಕವಿತೆಯ ಓದಿ
ಇಲ್ಲಿ ಹಬ್ಬದ ಹಿರಿಮೆ ಹೇಳಿ ಹೇಳಿ
ಮನೆಗೆ ಬಂದೆನು ಇಳೆಯು
ಸಿಂಗಾರವಾಗುತಿರೆ
ಎದುರುಗೊಳ್ಳಲು ಉಷೆಯ ಮೋದತಾಳಿ
ಹಬ್ಬಕ್ಕೆ ಊರಿಂದ
ಬಂದ ತಮ್ಮನು ತೆಗೆದ
ಬಾಗಿಲವ! ಒಳಹೊಕ್ಕೆ ಮೌನದಲ್ಲಿ.
“ಎಷ್ಟು ಹೊತ್ತಾಯ್ತಲ್ಲ”
ಎಂದ ತುಟಿಯಲಿ ತಮ್ಮ
ದೀಪ ಮಂಕಾಗಿತ್ತು ಮೂಲೆಯಲ್ಲಿ
ಅಡುಗೆ ಮನೆಯಲಿ ಹೊಕ್ಕೆ!
ದೇವರೆದುರಲಿ ದೀಪ
ರಾಮನಾಗಮನವನು ಕಾಯ್ವ ಹಕ್ಕಿ
ತೊಳುಲುವಂದದಿ ಹೇಗೋ
ತೆವಳುತ್ತಲುಳಿದಿತ್ತು
ಜೀವವನು ಹಿಡಿದು ನೊಂದು ಬಿಕ್ಕಿ.

ಅವಳು ಉಂಡಿರಲಿಲ್ಲ!
ಬಿಸಿಯಡುಗೆ ಆರಿತ್ತು.
ಬೆಳ್ಳಿವಾಟಗದಲ್ಲಿ ತೆಂಗು ನೀರು
ಉಳಿದಿತ್ತು-ಅವಳದನು
ಕೊಂಡಿಲ್ಲ ಕುಸಿರೆಳ್ಳು
ತಿಂದಿಲ್ಲ! ನೊಂದಿತ್ತು ಹಾಲು ಕೀರು.
ಹಾಸಿನಲಿ ಒರಗಿಹಳು!
ದಣಿವು ಕಂಗಳ ಮುಗಿಸಿ
ದುಗಡವನು ಮರೆಸಿತ್ತು ನಿದ್ದೆ ಹೊಚ್ಚಿ
ಮಲಗಿತ್ತು ಹಸುಗೂಸು-
ಅವಳ ಸೋಗಿಲ ಹೊನ್ನು
ತಾಯ ತೋಳಾಸರವನೊಂದೆ ನೆಚ್ಚಿ.
ಕೆನ್ನೆಗಳನ್ನಪ್ಪಿತ್ತು
ಕಣ್ಣ ಕಜ್ಜಳವೆಲ್ಲ
ಕಂಬನಿಯ ತುಂಬು ಹೊಳೆಯಲ್ಲಿ ಕರಗಿ,
ನನ್ನ ದಾರಿಯ ಕಾದು
ಅರಳು ಮಲ್ಲಿಗೆ ಮಾಲೆ
ಬಾಡಿತ್ತು ಅವಳಗತಿ ನೋಡಿ ಮರುಗಿ.
ಮಲಗಿದೆನು ಹಾಗೆಯೇ
ಜೊಂಪು ಕವಿಯುತಲಿತ್ತು
ಅವಳು ಎಚ್ಚೆತ್ತವಳು ನನ್ನ ಕಂಡು
ಕುಸಿರೆಳ್ಳು ಕೊಡಲೆಂದು
ಹತ್ತಿರಕೆ ಬಂದವಳು
ನಿಟ್ಟಿಸಿದಳೆನ್ನನ್ನು ನಿಂತುಕೊಂಡು
“ಎಬ್ಬಿಸುವುದೇತಕ್ಕೆ
ದಣಿದಿಹರು” ಎಂದಾಕೆ
ಮೆಲ್ಲಮೆಲ್ಲನೆ ಕಾಲು ಹೊದಿಕೆ ತೆಗೆದು
ಹಣೆಯನಿಟ್ಟಳು ಹೂವ
ಇಟ್ಟಂತೆ- ಚರಣದಲಿ
ಕಂಬನಿಗಳುರುಳಿದವು ಎವೆಯ ಬಗೆದು.

ಒಲವು ತಾ ಮೈ ತಳೆದು
ಚೆಲುವಿಕೆಗೆ ಕಣ್ಣಾಗಿ
ನಿಂತಿಹುದು ಎದುರಿನಲಿ ಮುದವನುಟ್ಟು
ನನ್ನ ನಿದ್ರೆಯು ಕೆಟ್ಟ್ಟಿ-
ತೆಂಬ ತಳಮಳದಲ್ಲಿ
ಕ್ಷಮೆಯ ಕೇಳುತಲಿತ್ತು ಮೂಗುಬಟ್ಟು.
ಕೈ ಹಿಡಿದು ಒಲವಿಂದ
ಕೂಡಿಸಿದೆ- ಮಂಚದಲಿ
“ಕ್ಷಮಿಸುವೆಯ ಹೊತ್ತಾದುದೆನ್ನ ರಾಣಿ?”
ಎಂದೆ! ಕಣ್ಣುಗಳಲ್ಲಿ
ಮಿಂಚಾಯ್ತು, ಕಂಠದಲಿ
ತೇವಿತ್ತು-ಸಿಲುಕಿತ್ತು ಅವಳ ವಾಣಿ.
ಚಂದ್ರಮನು ಚಂದ್ರಿಕೆಯು
ಬಾನಿನಲಿ ಚುಕ್ಕೆಗಳ
ಕುಸುರೆಳ್ಳು ಕೊಡುಕೊಳುವ ಆಟ ಮೆಚ್ಚಿ
ನಲಿಯುತಿರೆ! ಹಾಸಿನಲಿ
ಹಸುಗೂಸು ಮಲಗಿತ್ತು
ತಾಯ ತೋಳಾಸರವನೊಂದೆ ನೆಚ್ಚಿ.
ಒಂದು ಓಲೆ
“ಹೆಣ್ಣು ಹುಟ್ಟಿದುದೆಂದು ಮನಸಿನಲಿ ಕೊರಗುವಿರ?”
ಈ ಕೊಂಕು ಮಾತಾಡಿ ನನ್ನ ನೋಯಿಸುತಿರುವೆ
ಹೆಣ್ಣೇನು ? ಗಂಡೇನು? ಕಬ್ಬ ಮೇಲಿನ ಜೇನು
ಬಾಳ ಮರ ಬೇಕಾಗಿ ಹಾರೈಸಿ ಬಿಟ್ಟ ಫಲ

ಎರಡನ್ನು ಸೇರಿಸುತ ಬೆಸೆಯುವದು ಬಲ್ಲೊಲವು
ಮನೆಯ ನಿಲ್ಲಿಸಬಲ್ಲ ಮಾಟ ಹೆಣ್ಣಿನಲಿಹುದು
ಮರಳುಗಾಡಿನ ಬಾಳು ಹೆಣ್ಣಿಂದ ಸವಿಯಾಗಿ
ಕಂಪು ಬೀರುವವೆಂದು ಗೊತ್ತಿಲ್ಲವೇ ನಿನಗೆ?
ಒಂದು ಮನೆ ಸಂಸ್ಕøತಿಯ ಹೊತ್ತು ಇನ್ನೊಂದನ್ನು
ಹಿಗ್ಗಲಿಸಿ ಹಿಗ್ಗುವಳು ಹಿಗ್ಗು ಜಕ್ಕಲಿಸುವಳು.
“ಹೆಣ್ಣು ಮೋಸದ ಎರಕ” ಎಂಬ ಕವಿ ಉದ್ಗಾರ
ಬುಡಮುಟ್ಟ ಸುಳ್ಳಿಹುದು. ಹೆಣ್ಣು ಹುಟ್ಟಿತು ಎಂದು
ಕೊರಗದಿರು ಹಸಿಮೈಯ ಬಾಣಂತಿ. ಏರುವುದು
ಪಾಲ್ಗಡಲಿಗೇರಿದೊಲು ನಮ್ಮ ಮನೆಯಲಿ ಬಣ್ಣ.

‍ಲೇಖಕರು Avadhi GK

24 January, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading