ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕುವೆಂಪು ದರ್ಶನ ಮಾಡಿಸಿದ್ದ ಕೋಚೆ…

ಲಕ್ಷ್ಮಣ ಕೊಡಸೆ

1970ರಲ್ಲಿ ಮಲೆನಾಡಿನ ಯಾವುದೇ ಸೌಲಭ್ಯಗಳಿಲ್ಲದ ಹಳ್ಳಿಯಿಂದ ಬಂದ ನಾನು ಸೆಂಟ್ರಲ್ ಕಾಲೇಜಿನಲ್ಲಿ ಆನರ್ಸ್ ಪದವಿಗೆ ಸೇರಿಕೊಂಡಿದ್ದು ಒಂದು ಪವಾಡ ಸದೃಶ ಘಟನೆ. ಆನರ್ಸ್ ತರಗತಿಯಲ್ಲಿದ್ದ ಹೆಣ್ಣುಮಕ್ಕಳಲ್ಲಿ ಕೋ.ಚೆನ್ನಬಸಪ್ಪನವರ ಮಗಳು ಕೆ.ಸಿ.ಮಂಜುಳಾ ಇದ್ದಾರೆ ಎಂಬುದು ನನಗೆ ಗೊತ್ತಾಗುವುದಕ್ಕೆ ಆರು ತಿಂಗಳು ಕಳೆದಿತ್ತು. ಆಗ ಕೋಚೆ ಬೆಂಗಳೂರು ಜಿಲ್ಲಾ ಸೆಷನ್ಸ್ ನ್ಯಾಯಾಧೀಶರಾಗಿದ್ದರು. ವಸಂತನಗರದಲ್ಲಿ ಅವರ ಸರ್ಕಾರಿ ವಸತಿಗೃಹ.

ನಮ್ಮದು ಸಾಹಿತ್ಯದ ಅಧ್ಯಯನವಾದ್ದರಿಂದ ಚರ್ಚೆ, ಸಂವಾದ, ಸೆಮಿನಾರು ಇತ್ಯಾದಿ ಚಟುವಟಿಕೆಗಳು. ಅದರಲ್ಲಿ ತೊಡಗಿದ್ದ ನಮ್ಮ ಮಿತ ಸಂಖ್ಯೆಯ ವಿದ್ಯಾರ್ಥಿಗೆಳೆಯರ ಗುಂಪಿಗೆ ಕೋಚೆ ಅವರ ಮನೆಗೆ ಪ್ರವೇಶ ದೊರೆಯಿತು. ಅನೇಕ ಸಲ ಕಾಲೇಜು ಮುಗಿಸಿದ ನಂತರ ಸೆಂಟ್ರಲ್ ಕಾಲೇಜಿನಿಂದ ವಸಂತನಗರದ ಅವರ ಮನೆಗೆ ನಡೆದುಕೊಂಡು ಹೋಗಿ ಅಲ್ಲಿ ಮಂಜುಳಾ ಅವರನ್ನು ಬಿಟ್ಟು ನಂತರ ನಾವಿದ್ದ ಶೇಷಾದ್ರಿಪುರದ ಹಾಸ್ಟಲು ಕಡೆ ಬರುತ್ತಿದ್ದೆವು. ಬಿಡುವಿದ್ದಾಗ ಕೋಚೆ ಅವರು ನಮ್ಮ ಸಾಹಿತ್ಯದ ಚರ್ಚೆಯಲ್ಲಿ ಭಾಗವಹಿಸುತ್ತಿದ್ದರು. ತಮ್ಮ ಮಕ್ಕಳ ಗೆಳೆಯರನ್ನು ಮಕ್ಕಳಂತೆಯೇ ವಾತ್ಸಲ್ಯದಿಂದ ನೋಡುತ್ತಿದ್ದ ಸಜ್ಜನಿಕೆಯನ್ನು ಕೋಚೆ ಅವರ ಕುಟುಂಬದಲ್ಲಿ ನಾನು ಆ ದಿನಗಳಲ್ಲಿ ಅನುಭವಿಸಿದೆ.

ನಾನು ಶಿವಮೊಗ್ಗ ಜಿಲ್ಲೆಯ ಹಳ್ಳಿಯೊಂದರಿಂದ ಬಂದು ಉಚಿತ ವಿದ್ಯಾಥರ್ಿನಿಲಯದ ಆಸರೆ ಪಡೆದವನೆಂದು ತಿಳಿದಾಗ ಹೆಚ್ಚಿನ ಪ್ರೀತಿಯನ್ನು ತೋರಿದರು. `ವೆಂಕಟಸ್ವಾಮಿ ತಾತಾ’ ಅವರು ಪ್ರಾರಂಭಿಸಿದ್ದ ವಿದ್ಯಾರ್ಥಿನಿಲಯದ ಬಗ್ಗೆ ಅವರಿಗೆ ಭಾವನಾತ್ಮಕ ನಂಟು ಇದ್ದುದನ್ನು ಒಂದು ಸಂದರ್ಭದಲ್ಲಿ ನೆನಪು ಮಾಡಿಕೊಂಡಿದ್ದರು. `ನಿಮ್ಮ ಹಾಸ್ಟಲಿಗೆ ಹಣ ಕೂಡಿಸಲು ಟೌನ್ಹಾಲ್ನಲ್ಲಿ ರಾಜ್ಕುಮಾರ್ ತಂಡದಿಂದ ಬೇಡರ ಕಣ್ಣಪ್ಪ ನಾಟಕ ಆಡಿಸಿದಾಗ ನಾನು ಅದಕ್ಕೆ ಬಂದಿದ್ದೆ’ ಎಂದು ಆ ಸ್ವಾರಸ್ಯಕರ ಘಟನೆಯನ್ನು ಹೇಳಿ ನನ್ನಲ್ಲಿ ಬೆರಗು ಮೂಡಿಸಿದ್ದರು.

ಆ ಸಂಗತಿಯನ್ನು ಅದೇ ಮೊದಲ ಸಲಕ್ಕೆ ಕೇಳಿದ್ದೆ. ನಾನು ಹಾಸ್ಟಲಿಗೆ ಬಂದು ಆ ವೇಳೆಗೆ ಪರಿಚಯಕ್ಕೆ ಬಂದಿದ್ದ ಪ್ರಜಾವಾಣಿಯ ಹಿರಿಯ ಪತ್ರಕರ್ತ ಹೇಮದಳ ರಾಮದಾಸ್ ಅವರನ್ನು ಈ ಬಗ್ಗೆ ವಿಚಾರಿಸಿದ್ದೆ. ಅದಕ್ಕೆ ಅವರು `ಶೇಷಾದ್ರಿಪುರದಲ್ಲಿನ ಹಾಸ್ಟಲ್ ಎದುರಿಗೆ ಇರುವ ಅಂಗಡಿಗಳ ಕಟ್ಟಡಕ್ಕಾಗಿ ಹಣ ಸಂಗ್ರಹಿಸಲು ಕೆ.ಎ.ನೆಟ್ಟಕಲ್ಲಪ್ಪ ನೇತೃತ್ವದಲ್ಲಿ ಯುವಕ ಸಂಘವು ಮುಂದಾದಾಗ ಅದಕ್ಕೆ ರಾಜ್ಕುಮಾರ್ ಅವರು ಜೊತೆಗೂಡಿದ್ದರು. ಅವರಿಗೆ ಸಿನಿಮಾರಂಗದಲ್ಲಿ ನೆಲೆಯೂರಲು ಕಾರಣವಾಗಿದ್ದ ಬೇಡರಕಣ್ಣಪ್ಪ ನಾಟಕವನ್ನು ಹಣ ಸಂಗ್ರಹಕ್ಕಾಗಿ ಆಡಲು ರಾಜ್ಕುಮಾರ್ ಬಂದಿದ್ದರು. ಆಗ ಸಂಗ್ರಹವಾಗಿದ್ದ ಎಂಬತ್ತು ಸಾವಿರ ರೂಪಾಯಿಯಿಂದ ಅಲ್ಲಿ ವಾಣಿಜ್ಯ ಉದ್ದೇಶದ ಕಟ್ಟಡಗಳನ್ನು ಕಟ್ಟಲಾಗಿದ್ದು, ಅದರಿಂದ ಬರುವ ಬಾಡಿಗೆ ಹಣದಿಂದ ಉಚಿತ ವಿದ್ಯಾರ್ಥಿನಿಲಯ ನಡೆಸುವುದಕ್ಕೆ ಸಾಧ್ಯವಾಗುತ್ತಿದೆ’ ಎಂದು ತಿಳಿಸಿದ್ದರು.

ಆ ದಿನಗಳಲ್ಲಿಯೇ ಕೋ.ಚೆನ್ನಬಸಪ್ಪ ಅವರು ರಾಜಾಜಿನಗರದ ಮೊದಲ ಬ್ಲಾಕ್ನಲ್ಲಿ ಸ್ವಂತ ಮನೆಯನ್ನು ನಿರ್ಮಿಸಲು ಆರಂಭಿಸಿದ್ದರು. ನಾವು ವಸಂತನಗರದ ಮನೆಗೆ ಹೋಗಿ ಬರುತ್ತಿದ್ದಾಗ ಶುರುವಾಗಿದ್ದ ಮನೆ ನಿರ್ಮಾಣ ಕಾಮಗಾರಿ ಕೆಲವೇ ತಿಂಗಳಲ್ಲಿ ಮುಗಿದಿತ್ತು. ಮನೆಯ ಗೃಹಪ್ರವೇಶ ಸಮಾರಂಭದಲ್ಲಿ ನಾವು ಭಾಗವಹಿಸಿ ಅತಿಥಿಗಳ ಸತ್ಕಾರದಲ್ಲಿ ನೆರವಾಗುತ್ತಿದ್ದಾಗ ಮನೆಗೆ ಬಂದ ಗಣ್ಯ ಅತಿಥಿಗಳಿಗೆ `ನಮ್ಮ ಮಂಜು ಸಹಪಾಠಿಗಳು, ರ್ಯಾಂಕ್ ವಿದ್ಯಾರ್ಥಿಗಳು’ ಎಂದು ಪರಿಚಯಿಸಿ ನಾವು ಹೆಮ್ಮೆಪಟ್ಟುಕೊಳ್ಳುವಂತೆ ಮಾಡಿದ್ದರು.

ಹಳ್ಳಿಗಾಡಿನಿಂದ ಬಂದಿದ್ದು, ಬೆಂಗಳೂರಿನ ವರಿಷ್ಠ ಸಾಮಾಜಿಕ ಪರಿಸರದಲ್ಲಿ ಓಡಾಡುವ ಅಂಥ ಸಂದರ್ಭಗಳು ನನ್ನ ಸಾಮಾಜಿಕ ದೃಷ್ಟಿಕೋನವನ್ನು ಬದಲಾಯಿಸಿದ್ದನ್ನು ಮರೆಯಲಾಗದು. ರಾಜಾಜಿನಗರದಲ್ಲಿ ಮನೆ ಕಟ್ಟಿದ ನಂತರ ಅವರ ವಾಸ್ತವ್ಯ ಹೊಸಮನೆಗೆ ಬದಲಾಯಿತು. ವಸಂತನಗರದ ಮನೆಗೆ ಹೋಗುತ್ತಾ ಇದ್ದಂತೆಯೇ ರಾಜಾಜಿನಗರದ ಮನೆಗೂ ಹೋಗಿ ಬರುತ್ತಾ ನಮ್ಮ ಅಧ್ಯಯನದಲ್ಲಿ ತೊಡಗಿದೆವು. ಅದೊಂದು ದಿನ ಕೋಚೆಯವರು (ಅವರನ್ನು ನಾವು ಮಂಜುಳಾ ಕರೆಯುತ್ತಿದ್ದಂತೆಯೇ ಅಪ್ಪಾಜಿ ಎಂದು ಕರೆಯಲು ಆರಂಭಿಸಿದ್ದೆವು) `ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಅರವಿಂದರ ಕುರಿತು ಭಾಷಣಕ್ಕೆ ಕರೆದಿದ್ದಾರೆ.

ನಾಳೆ ಮಧ್ಯಾಹ್ನ ಇಲ್ಲಿಂದ ಹೋಗುವುದು. ಸಂಜೆಯ ಹೊತ್ತಿಗೆ ಕಾರ್ಯಕ್ರಮ. ರಾತ್ರಿ ಅಲ್ಲಿಯೇ ಉಳಿದು ನಾಡಿದ್ದು ವಾಪಸು ಬರುವುದು. ಬರುತ್ತೀರಾ?’ ಎಂದರು. ಒಂದು ದಿನದ ಮಟ್ಟಿಗೆ ಹಾಸ್ಟಲಿನಿಂದ ಅನುಮತಿ ಪಡೆಯುವುದು ಸುಲಭವಾದ್ದರಿಂದ ತಕ್ಷಣಕ್ಕೆ ಒಪ್ಪಿಕೊಂಡೆವು. ಮರುದಿನ ಮಧ್ಯಾಹ್ನ ಅವರೊಂದಿಗೆ ಮೈಸೂರಿಗೆ ಹೊರಟೆವು. ಅದು ಖಾಸಗಿ ಕಾರ್ಯಕ್ರಮವಾಗಿದ್ದರಿಂದ ಕೋಚೆಯವರೇ ಕಾರನ್ನು ನಡೆಸಿದರು. ಮಂಜುಳಾ ಅವರೂ ಜೊತೆ ಇದ್ದರು. ನಾನು ಕಾರಿನಲ್ಲಿ ಪ್ರಯಾಣ ಮಾಡುತ್ತಾ ಇದ್ದುದು ಅದೇ ಮೊದಲು. ಬೆಂಗಳೂರಿನಿಂದ ಮೈಸೂರಿಗೆ ಕಾರಿನಲ್ಲಿ ಪ್ರಯಾಣ ನನ್ನ ಪಾಲಿಗಂತೂ ಮರೆಯಲಾರದ್ದಾಗಿತ್ತು.

ಕಳೆದ ಶತಮಾನದ ಎಪ್ಪತ್ತರ ದಶಕದಲ್ಲಿ ಬೆಂಗಳೂರು ಮೈಸೂರು ಮಧ್ಯೆ ವಾಹನಗಳ ಓಡಾಟವೂ ಕಡಿಮೆ ಇತ್ತು. ರಸ್ತೆಯ ಅಗಲವೂ ಹೆಚ್ಚಿರಲಿಲ್ಲ. ಎದುರುಗಡೆಯಿಂದ ಬರುವ ವಾಹನಗಳನ್ನು ನೋಡಿಕೊಂಡು ಎಚ್ಚರಿಕೆಯಿಂದ ಕಾರನ್ನು ನಡೆಸುತ್ತಿದ್ದರೂ ಕೋಚೆ ಮಧ್ಯೆ ಮಧ್ಯೆ ಮಾತನ್ನೂ ಆಡುತ್ತಿದ್ದರು. ರಸ್ತೆಯ ಎರಡೂ ಬದಿ ಹೊಲಗಳು. ನನಗೆ ಅದೇ ಮೊದಲ ಸಲವಾಗಿದ್ದರಿಂದ ಕಿಟಕಿ ಬದಿಯಲ್ಲಿ ಕುಳಿತು ಬಿಡದಿ, ರಾಮನಗರ, ಚೆನ್ನಪಟ್ಟಣ, ಮದ್ದೂರು, ಮಂಡ್ಯ ಎಂದೆಲ್ಲ ಪ್ರಯಾಣ ಮಾರ್ಗದಲ್ಲಿ ಎದುರಾಗುತ್ತಿದ್ದ ಪಟ್ಟಣಗಳ ಹೆಸರುಗಳನ್ನು ಹಳ್ಳಿಗನ ಅಮಾಯಕತೆಯಿಂದ ಗಟ್ಟಿಯಾಗಿ ಹೇಳಿಕೊಳ್ಳುತ್ತಿದ್ದೆ.

ಮದ್ದೂರನ್ನು ದಾಟುತ್ತಿದ್ದಾಗ ಬೆಂಗಳೂರಿನಲ್ಲಿ ಹೋಟಲಿನಲ್ಲಿ ಕೇಳಿದ್ದ ಮದ್ದೂರು ವಡೆಯ ಹೆಸರನ್ನು ಗಟ್ಟಿಯಾಗಿ ಹೇಳಿಕೊಂಡೆ. ಅದನ್ನು ಕೋಚೆ ಕೇಳಿಸಿಕೊಂಡು, `ನಾಳೆ ಬೆಳಗ್ಗೆ ಬರುವಾಗ ನೋಡಬಹುದು’ ಎಂದರು. ಮೈಸೂರು ಸೇರಿದಾಗ ಸಂಜೆ ಸಮಾರಂಭ ಆರಂಭವಾಗುವುದಕ್ಕೆ ಕಾಲು ಗಂಟೆ ಇತ್ತು. ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಅರವಿಂದರ ಕುರಿತಾದ ಭಾಷಣ. ಬೆಂಗಳೂರಿನಿಂದ ಮೈಸೂರುವರೆಗಿನ ರಸ್ತೆ ಪ್ರಯಾಣದಲ್ಲಿ ರಸ್ತೆಯ ಎರಡೂ ಬದಿ ಕಣ್ಣು ತುಂಬುವಂತಿದ್ದ ಬತ್ತ ಕಬ್ಬಿನ ಪೈರನ್ನು ನೋಡುತ್ತಾ ಸಾಗಿದ ನಮಗೆ ಪ್ರಯಾಣದ ಬಳಲಿಕೆ ಇರಲಿಲ್ಲ.

ಕೋಚೆಯವರ ಜತೆ ಬಂದಿದ್ದ ನಮ್ಮನ್ನು ಕೂಡ ಅವರ ಪರಿವಾರದವರಂತೆ ಗಣ್ಯರ ಸಾಲಿನಲ್ಲಿ ಕೂಡಿಸಿ ಉಪಚರಿಸಿದ್ದರು ಸಮಾರಂಭವನ್ನು ಸಂಘಟಿಸಿದ್ದವರು ಉ.ಕಾ. ಸುಬ್ಬರಾಯಾಚಾರ್. ಸುಬ್ಬರಾಯಾಚಾರ್ ಹೆಸರನ್ನು ಕೇಳಿಯಷ್ಟೆ ಗೊತ್ತಿದ್ದ ನಮಗೆ ಅವರನ್ನೇ ಪ್ರತ್ಯಕ್ಷ ನೋಡಿದಾಗ ಹೇಳಿಕೊಳ್ಳಲಾಗದ ಸಂಭ್ರಮ. ಕೋಚೆಯವರ ಭಾಷಣ ಮುಗಿದು ಸಭೆಯ ನಂತರ ನಮ್ಮನ್ನು ಆಗಿನ ಪ್ರಖ್ಯಾತ ಹೋಟಲು ಇಂದ್ರಭವನದಲ್ಲಿ ಕರೆದೊಯ್ದು ಊಟ ಹಾಕಿಸಿದರು. ಊಟ ಮಾಡುವಾಗ ಸುಬ್ಬರಾಯಾಚಾರ್ ಅವರೇ ಮುಂದೆ ನಿಂತು ಊಟದಲ್ಲಿ ಸಂಕೋಚಪಡದಂತೆ ಉಪಚರಿಸಿದರು.

ಕೋಚೆಯವರು ಲಘುವಾದದ್ದೇನನ್ನೋ ಸ್ವೀಕರಿಸಿ ಹಾಲು ಕುಡಿದರು. ನಾವು ಊಟ ಮಾಡಿದೆವು. ಆ ವೇಳೆಗೆ ರಾತ್ರಿ ಎಂಟೋ, ಎಂಟು ಕಾಲೋ ಆಗಿತ್ತು. ಊಟದ ನಂತರ ವಿಶ್ವವಿದ್ಯಾನಿಲಯದ ಅತಿಥಿಗೃಹಕ್ಕೆ ಹೋಗಲು ಸಜ್ಜಾಗಿದ್ದ ಕೋಚೆಯವರು ಕೈಗಡಿಯಾರ ನೋಡಿ `ಪುಟ್ಟಪ್ಪನವರನ್ನು ನೋಡಿ ಬರೋಣ’ ಎಂದರು. ಅಲ್ಲಿಯವರೆಗೆ ಏನೋ ಹುಡುಗಾಟದ ಲಹರಿಯಲ್ಲಿದ್ದು ಪಿಸುಮಾತಿನಲ್ಲಿ ನಮ್ಮಲ್ಲೇ ಗಳಹುತ್ತಿದ್ದ ನಮಗೆ ಹೇಳಿಕೊಳ್ಳಲಾಗದ ಸಡಗರ. ಕುವೆಂಪು ಅವರನ್ನು ಹತ್ತಿರದಿಂದ ನೋಡುವ ಅವಕಾಶ ಅಪರೂಪದ್ದು. ಜೀವಮಾನದಲ್ಲಿ ಸಿಗುವಂಥ ಕ್ಷಣ ಎಂದು ನನಗೆ ರೋಮಾಂಚನವಾಯಿತು. ಇಂದ್ರಭವನ ಹೋಟೆಲಿನಿಂದ ಹೊರಟ ಹತ್ತು ಹದಿನೈದು ನಿಮಿಷಗಳಲ್ಲಿ ನಾವು ಒಂಟಿಕೊಪ್ಪಲಿನಲ್ಲಿದ್ದೆವು.

ಮೈಸೂರಿನಲ್ಲಿ ಸಂಚಾರದಟ್ಟಣೆ ಈಗಿನಂತಿರಲಿಲ್ಲ. ರಸ್ತೆಗಳಲ್ಲಿ ವಾಹನ ಸಂಚಾರವೂ ವಿರಳವಾಗಿತ್ತು. ಉದಯರವಿಯಲ್ಲಿ ಹೊರಗಿನ ದೀಪ ಹಾಕಿದ್ದರು. ಕಾಂಪೌಂಡಿನ ಗೇಟನ್ನು ತೆರೆದು ಮನೆಯ ಆವರಣ ಪ್ರವೇಶಿಸಿದೆವು. ಕೋಚೆಯವರೇ ಮುಂದೆ ನಿಧಾನವಾಗಿ ಸಾಗಿ ಒಂದು ರೀತಿಯ ಭಕ್ತಿಯಿಂದಲೇ ಕರೆಗಂಟೆ ಒತ್ತಿದರು. ಕೆಲವೇ ಕ್ಷಣ, ಬಾಗಿಲು ತೆರೆಯಿತು. ಬಾಗಿಲು ತೆರೆದವರು ಸಾಕ್ಷಾತ್ ಕುವೆಂಪು. ಕೋಚೆಯವರನ್ನು ಪರಿಚಯದ ನಗೆಯೊಂದಿಗೆ ಬರಮಾಡಿಕೊಂಡ ಕುವೆಂಪು ತಮ್ಮ ಆಸನದಲ್ಲಿ ಕುಳಿತರು. ಅದರ ಸನಿಹದಲ್ಲಿದ್ದ ಇನ್ನೊಂದು ಆಸನದಲ್ಲಿ ಹೇಮಾವತಿ ಅವರು ಕುಳಿತಿದ್ದರು. ಕೋಚೆ ಮೊದಲು ತಮ್ಮ ಪುತ್ರಿಯನ್ನು ಪರಿಚಯಿಸಿದರು.

ನಂತರ ನಮ್ಮನ್ನು ಆನರ್ಸ್ ವಿದ್ಯಾರ್ಥಿಗಳೆಂದು ತೋರಿಸಿದರು. ಕುವೆಂಪು ನಮ್ಮತ್ತ ನೋಡಿದರಷ್ಟೆ. ಅವರಿಬ್ಬರೂ ಸ್ವಲ್ಪ ಕಾಲ ಔಪಚಾರಿಕವಾಗಿ ಮಾತಾಡಿದರು. ಇಬ್ಬರಿಗೂ ಪರಿಚಿತರಾಗಿದ್ದ ಬಸವರಾಜ ಕಟ್ಟೀಮನಿ ಅವರು ಮೇಲ್ಮನೆ ಸದಸ್ಯತ್ವದ ಕಾರಣ ಮುಖ್ಯಮಂತ್ರಿ ದೇವರಾಜ ಅರಸು ಅವರನ್ನು ಬೆಂಬಲಿಸುತ್ತಿದ್ದಾರೆ ಎಂಬ ಅರ್ಥ ಬರುವಂತೆ ಕೋಚೆಯವರು ಏನನ್ನೋ ಪ್ರಸ್ತಾಪಿಸಿದರು. ಅಂದಿನ ರಾಜಕೀಯ ವಿದ್ಯಮಾನಗಳ ಬಗ್ಗೆ ಕೋಚೆಯವರು ವ್ಯಕ್ತಪಡಿಸುತ್ತಿದ್ದ ಅಭಿಪ್ರಾಯಗಳಿಗೂ ಅವರು ನಿರಾಸಕ್ತರಾಗಿದ್ದಂತೆ ತೋರಿತು. ಅವರಿಬ್ಬರ ಮಾತನ್ನು ನಸುನಗೆಯೊಂದಿಗೆ ಕೇಳಿಸಿಕೊಳ್ಳುತ್ತಿದ್ದ ಹೇಮಾವತಿ ಅವರು ಮಂಜುಳಾ ಅವರನ್ನು ಪಕ್ಕದಲ್ಲಿ ಕುಳ್ಳಿರಿಸಿಕೊಂಡು ಮೆಲುದನಿಯಲ್ಲಿ ಮಾತಾಡಿಸುತ್ತಿದ್ದರು.

ಕುವೆಂಪು ಅವರು ಅರವಿಂದರ ಕುರಿತಾಗಿ ಏನನ್ನೋ ಹೇಳಿದ್ದನ್ನು ಕೋಚೆಯವರು ಅಂಜಲಿಬದ್ಧವಾಗಿ ಕೇಳಿಸಿಕೊಂಡರು. ಅವರಿಬ್ಬರ ಮಾತುಕತೆಯ ವಿವರಗಳತ್ತ ನನ್ನ ಗಮನ ಹೋಗಲಿಲ್ಲ. ಕುವೆಂಪು ಮತ್ತು ಹೇಮಾವತಿಯವರನ್ನೂ, ಅವರ ಕೊಠಡಿಯ ವಿನ್ಯಾಸ, ಅಲಂಕಾರವನ್ನು ಗಮನಿಸುತ್ತಿದ್ದೆ. ಸ್ವಲ್ಪ ಹೊತ್ತಿಗೆ ಕೋಚೆಯವರು ಮಾತಿಗೆ ವಿರಾಮ ಹಾಕಿ ಹೊರಡುವ ಸೂಚನೆಯಾಗಿ ಎದ್ದರು. ಅದನ್ನು ಅನುಸರಿಸಿ ನಾವೂ ಎದ್ದೆವು.

ಹೇಮಾವತಿ ಅವರು ಅಲ್ಲಿಯೇ ಟೀಪಾಯ್ ಮೇಲೆ ಇಟ್ಟಿದ್ದ ಬಾಳೆಹಣ್ಣಿನ ಚಿಪ್ಪಿನಲ್ಲಿ ನಮಗೆ ಒಂದೊಂದು ಬಾಳೆಹಣ್ಣನ್ನು ನಗುಮುಖದಿಂದ ನೀಡಿದರು. ಹೊರಡುವ ಮೊದಲು ಕುವೆಂಪು ಅವರ ಕಾಲಿಗೆ ಬೀಳಬೇಕಿತ್ತೆಂದು ನನಗೆ ಅನ್ನಿಸಿತ್ತು. ಮಂಜುಳಾ ಅವರೂ ಅದಕ್ಕೆ ಅಣಿಯಾದಂತೆ ತೋರಿತು. ಅವರು ಮೊದಲು ಬಿದ್ದಿದ್ದರೆ ನಾನೂ ಬೀಳುತ್ತಿದ್ದೆನೆನಿಸುತ್ತದೆ. ಆದರೆ ಅವರು ಬೀಳಲಿಲ್ಲ. ನಾವು ನಾಲ್ವರೂ ಹೊರಟು ನಿಂತಾಗ ಕುವೆಂಪು ದಂಪತಿ ಬಾಗಿಲವರೆಗೂ ಬಂದು ಬೀಳ್ಕೊಟ್ಟರು. ಉದಯರವಿಯಿಂದ ಹೊರಟು ವಿಶ್ವವಿದ್ಯಾನಿಲಯದ ಅತಿಥಿಗೃಹದ ಕಡೆಗೆ ಬರುತ್ತಿದ್ದಾಗ ಕುವೆಂಪು ಕಾಲಿಗೆ ಬೀಳುವ ಮನಸ್ಸಾಗಿತ್ತು ಎಂದು ಮೆತ್ತಗೆ ಹೇಳಿಕೊಂಡೆ.

`ನನಗೂ ಹಾಗೇ ಅನ್ನಿಸಿತ್ತು..’ ಎಂದು ಮಂಜುಳಾ ಹೇಳಿದಾಗ, `ಅದನ್ನು ಕುವೆಂಪು ಇಷ್ಟಪಡುವುದಿಲ್ಲ, ಆದರೆ, ಯಾರಾದರೂ ಬಲವಂತವಾಗಿ ಕಾಲಿಗೆ ಬಿದ್ದರೆ ಅದನ್ನು ಗುರುದೇವನಿಗೆ ಅರ್ಪಿಸುತ್ತಿದ್ದರು’ ಎಂದು ನಮ್ಮ ಅಂದಿನ ಉತ್ಸಾಹಕ್ಕೆ ಕೋಚೆ ಪ್ರತಿಕ್ರಿಯಿಸಿದರು. ಮಾನಸಗಂಗೋತ್ರಿಯ ಅತಿಥಿಗೃಹದಲ್ಲಿ ಅಂದು ರಾತ್ರಿ ಕಳೆದು ಮರುದಿನ ಬೆಳಗ್ಗೆ ವಾಪಸು ಬರುವಾಗ ಕೋಚೆ ಮದ್ದೂರು ದಾಟುವಾಗ ರಸ್ತೆ ಬದಿಯ ಹೋಟಲಿನಲ್ಲಿ ನಿಲ್ಲಿಸಿ ನಿನ್ನೆ ಹೇಳಿಕೊಂಡಿದ್ದ ಮದ್ದೂರು ವಡೆಯ ಜೊತೆಗೆ ಇಡ್ಲಿಯನ್ನೂ ಕೊಡಿಸಿ ಬೆಂಗಳೂರಿಗೆ ಕರೆತಂದಿದ್ದುದು ಇಂದಿಗೂ ಮರೆಯಲಾಗದ ನೆನಪು.

(ಚಿತ್ರ ವಿವರ: ನನಗೂ ಪತ್ನಿ ಸ್ವರ್ಣಾಂಬ ಅವರಿಗೂ ಕೋಚೆ ಆಶೀರ್ವಾದ ಸದಾ ಇತ್ತು)

‍ಲೇಖಕರು Admin

28 February, 2022

1 Comment

  1. T S SHRAVANA KUMARI

    ಉತ್ತಮ ಲೇಖನ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading